Article : ಬಾಲ್ಯದ ಒಡನಾಡಿಗಳನ್ನು ಹುಡುಕಿ ಹೊರಟರೆ

ಹುಟ್ಟಿಬೆಳೆದ ಊರಲ್ಲಿ ಕಹಿಯಾದ ನೆನಪುಳ್ಳವರು ಪಟ್ಟಣಕ್ಕೆ ಬಂದರೆ, ಮರಳಿ ಊರತ್ತ ಮುಖ ಮಾಡುವುದಿಲ್ಲ. ನನ್ನಮ್ಮ ಅವರ ಪೈಕಿ ಒಬ್ಬಳು. ಆಕೆ ಮನೆಗೆ ಅಂಟಿಕೊಂಡಿದ್ದ ಪಾರಂಪೋಕ್ ಜಾಗದಲ್ಲಿ ಸೊಗಸಾದ ಹಿತ್ತಲನ್ನು ಮಾಡಿದ್ದಳು. ಆದರೆ ಐವತ್ತು ವರ್ಷ ಅನುಭೋಗದಲ್ಲಿದ್ದರೂ ಅದನ್ನು ಸಕ್ರಮಗೊಳಿಸಿ ದಾಖಲೆ ಇಟ್ಟುಕೊಳ್ಳಲಿಲ್ಲ. ನಮ್ಮ ಕುಟುಂಬ ಪಟ್ಟಣಕ್ಕೆ ಗುಳೆ ಬಂದೊಡನೆ ಆಜುಬಾಜಿನವರು ಅದನ್ನು ಒತ್ತುವರಿ ಮಾಡಿಕೊಂಡರು. ಅಮ್ಮ ಅವರ ಮನೆಯ ಮುಂದೆ ಹೋಗಿ, ಅಂಗಳದ ಧೂಳನ್ನು ಹಿಡಿದು ತೂರಿ ‘ನಿಮ್ಮ ಹೊಟ್ಟೆಯಲ್ಲೂ ಮಕ್ಕಳಿವೆ. ನಿಮಗೆ ಒಳ್ಳೇದಾಗಲ್ಲ’ ಎಂದು ಶಪಿಸಿ ಬಂದಳು. ಸಾಯುವ ತನಕ ಊರಿಗೆ ಹೋಗಲಿಲ್ಲ.

ಆದರೆ ನಾನು, ಭಾವನಾತ್ಮಕ ಕಾರಣಗಳಿಂದ ಹುಟ್ಟೂರು ಸಮತಳಕ್ಕೆ ಮತ್ತೆಮತ್ತೆ ಹೋಗುತ್ತೇನೆ. ನನ್ನ ಕಿಶೋರಾವಸ್ಥೆಯ ಲೀಲೆಗಳಿಗೆ ಭೂಮಿಕೆಯಾದ ಶಾಲೆ ತೋಟ ಕೆರೆ ಮನೆಗಳಿದ್ದ ಜಾಗಗಳಲ್ಲಿ ತಿರುಗಾಡುತ್ತೇನೆ. ಊರಲ್ಲಿ ಸಂಭವಿಸಿರುವ ಊಹಾತೀತ ಬದಲಾವಣೆಗಳು ಸೋಜಿಗವನ್ನೂ ಸಂತಸವನ್ನೂ ಖಿನ್ನತೆಯನ್ನೂ ತರುತ್ತವೆ. ಊರಲ್ಲಿ ಅಂತಕನ ನೆರೆಯೂರವರಾಗುತ್ತಿರುವ ಸಹಪಾಠಿಗಳಿದ್ದಾರೆ. ಹಿರಿಯ ಬಂಧುಗಳೆಲ್ಲ ಗತಿಸಿ, ಅವರ ಮಕ್ಕಳು ಮೊಮ್ಮಕ್ಕಳು ಇದ್ದಾರೆ. ಪರಿಚಯವೇ ಇಲ್ಲದ ಮೊಬೈಲಲ್ಲಿ ಮುಳುಗಿ ಊರಿಗೆ ಬಂದ ಹೊಸಬರನ್ನು ಕುತೂಹಲದಿಂದಲೂ ತಲೆಯೆತ್ತಿ ನೋಡಲು ಪುರುಸೊತ್ತಿಲ್ಲದ ಹೊಸತಲೆಮಾರು ಇದೆ. ಅದರಲ್ಲಿ ಕನ್ನಡ ಸಾಹಿತ್ಯವನ್ನು ಓದಿಕೊಂಡಿರುವ, ನಾನು ಊರಿಗೆ ಹೋದರೆ ಸಂಭ್ರಮಿಸುವ ಕಿರಣ್ ಕೂಡ ಇದ್ದಾನೆ. ಹೀಗಾಗಿ ಪ್ರತಿಸಲದ ಭೇಟಿಯೂ ಹೊಸತೇ ಅನುಭವ. ಬದಲಾದ ವಾಸ್ತವವನ್ನು ಎದುರಿಸಲು ಎಷ್ಟೇ ಮಾನಸಿಕ ಸಿದ್ಧತೆ ಮಾಡಿಕೊಂಡು ಹೋದರೂ, ಹಳೆಯ ಚಿತ್ರಗಳ ಮೇಲೆ ವಾಸ್ತವದ ಹೊಸತೊಂದು ಬಣ್ಣಬಿದ್ದು, ಆ ಚಿತ್ರವೇ ಬದಲಾಗಿಬಿಡುತ್ತದೆ. ಹೊಯ್ಸಳರ ಕಾಲದಲ್ಲಿ ನಮ್ಮೂರನ್ನು ಅಗ್ರಹಾರವಾಗಿ ಕಟ್ಟಿದವರು ಈಗ ಬಂದರೆ, ಇದು ಅವರಿಗೆ ಹೇಗೆ ಕಾಣಬಹುದೊ ಕಾಣೆ.

ಅರ್ಧಶತಮಾನದ ಬಳಿಕ ಹೋಗುವ ನನಗಂತೂ ಬಗೆ ಕದಡುತ್ತದೆ. ಹಳೆಯ ಗುಡಿಯ ಅವಶೇಷಗಳನ್ನು ಆಯ್ದು ಹೊಸಗುಡಿಯ ಮುಂದೆ ಜೋಡಿಸಿದ್ದಾರೆ. ಅವುಗಳಲ್ಲಿ ಕುಮಾರಸ್ವಾಮಿಯು ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಶಿಲ್ಪವೂ ಇದೆ. ಕಲ್ಲಿನ ನವಿಲು ಹಾರದಂತೆ ಮಣ್ಣೊಳಗೆ ಹೂತಿದೆ. ನಾನು ಈಜಾಡಿದ ಕೆರೆನೋಡಿದೆ. ಹೂಳು ತುಂಬಿ ಗಿಡಬೆಳೆದು ಕಾಣದಂತಾಗಿದೆ. ಬಾಲ್ಯದಲ್ಲಿ ಹಗಲಲ್ಲೆ ಕತ್ತಲು ಕವಿಸುವಂತೆ ಬೆಳೆದಿದ್ದ ಬೃಹದಾಕಾರ ಬೆಳೆದು ಬಿಳಲು ಬಿಟ್ಟಿದ್ದ ಆಲದಮರ ಕಣ್ಮರೆಯಾಗಿ, ಅಲ್ಲಿ ಮನೆಗಳಾಗಿವೆ. ಬಹಳಷ್ಟು ಜನ ಊರುಬಿಟ್ಟು ಪಟ್ಟಣದಲ್ಲಿ ನೆಲೆಸಿದ್ದಾರೆ. ಗಲ್ಲಿಗಳಲ್ಲಿ ಮೊಹರಂ ರಂಜಾನಿನ ಕಲರವ ಕಾಣದು. ಅಮ್ಮ ಶತಮಾನದ ಹಿಂದೆ ಛಲದಿಂದ ಕಟ್ಟಿದ ಮನೆ ನೆಲಸಮವಾಗಿ ಅದಿದ್ದ ಜಾಗದಲ್ಲಿ ಹುಲ್ಲುಬೆಳೆದಿದೆ. ಆದರೆ ನಮ್ಮೂರ ಬರಡು ಹೊಲಗಳ ತುಂಬ ಮಾವಿನ ಮರದ ತೋಪುಗಳು ಬಂದು ಆಮ್ರವನವೇ ಏರ್ಪಟ್ಟಿದೆ. ನಮ್ಮೂರ ಖಬರಸ್ಥಾನ ಕೂಡ ಹಣ್ಣಿನಗಿಡಗಳಿಂದ ಲಾಲ್ಬಾಗ್ ಆಗಿದೆ. ಊರೊಳಗೆ ಚಂದವಾದ ಟಾರು ರಸ್ತೆ ಹಾದಿದೆ. ಕಟ್ಟೆಹೊಳೆ, ಹಳ್ಳ, ಊರಲ್ಲಿದ್ದ ಎರಡೂ ಬಾವಿಗಳು ಬತ್ತಿವೆ. ನಮ್ಮೂರಲ್ಲಿದ್ದ ಎರಡು ತಮಿಳು ದಲಿತ ಕುಟುಂಬಗಳು ನೀರಿಗಾಗಿ ಬಾವಿಯ ಮುಂದೆ ಕಾಯುತ್ತಿದ್ದ ಘೋರ ದೃಶ್ಯವೀಗ ಇಲ್ಲ. ಕೊಳವೆಬಾವಿಗೆ ಲಗತ್ತಾದ ನಲ್ಲಿಗಳು ಮನೆಯ ಮುಂದೆ ನೀರನ್ನು ಚಿಲುಮೆಯಂತೆ ಉಕ್ಕಿಸುತ್ತಿವೆ. ಇಡೀ ಕುಟುಂಬ ವಿಷಪ್ರಾಶನ ಮಾಡಿದ ಘೋರಕ್ಕೆ ಸಾಕ್ಷಿಯಾದ ನಮ್ಮೂರ ಪಟೇಲರ ದೊಡ್ಡಮನೆ ಬಿದ್ದುಹೋಗಿ, ಅದನ್ನು ಕೊಂಡ ನನ್ನ ಸಹಪಾಠಿ, ಅಲ್ಲಿ ಎಮ್ಮೆ ಕಟ್ಟಲು ಕೊಟ್ಟಿಗೆ ಮಾಡಿದ್ದಾನೆ. ಆತ ನನ್ನನ್ನು ತನ್ನ ಮನೆಗೆ ಗೌರವದಿಂದ ಕರೆದೊಯ್ದು ಕೂರಿಸಿ ತೋಟದ ಏಲಕ್ಕಿ ಬಾಳೆ ತಿನ್ನಲು ಇಡುತ್ತಾನೆ. ತನ್ನ ತಂದೆ ತಾಯಿಗೆ ಸಂಭ್ರಮದಿಂದ ಪರಿಚಯಿಸುತ್ತಾನೆ. ತಾಯಿಯವರು ಲೋಟದ ತುಂಬ ಬಿಸಿಯಾದ ಎಮ್ಮೆಹಾಲನ್ನು ನನ್ನ ಕೈಗಿಡುತ್ತ, ‘ಕುಲುಮೆ ದಸ್ತಣ್ಣನ ಮಗನಲ್ಲವೇ? ನೀವೆಲ್ಲ ನಮ್ಮ ಹೊಲಗಳಾಗೆ ಕೆಲಸ ಮಾಡಿ ಮುಂದೆ ಬಂದ್ರಿ’ ಎನ್ನುತ್ತಾರೆ. ಬಿಸಿಹಾಲು ನಾಲಗೆ ಸುಡುತ್ತದೆ. ಸಹಪಾಠಿ ಚಡಪಡಿಸುತ್ತಾನೆ. ಆಗ ನಾನು ‘ಅವ್ವಾ, ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದ್ದು ನಿಜ. ಅದರಿಂದಲೇ ನೀವು ಈ ಅವಸ್ಥೆಗೆ ಬಂದಿದ್ದೀರಿ. ಆದರೆ ನಾವು ಮಾತ್ರ ಈ ಊರನ್ನು ಬಿಟ್ಟು ಶಾಲೆಯಲ್ಲಿ ಓದಿದ್ದರಿಂದ ಮುಂದೆ ಬಂದಿವಿ’ ಎನ್ನುತ್ತೇನೆ.

ಚಿತ್ರಕೃಪೆ- ಮಾರ್ಕೊಸ್ ಸಾಂಚೆಜ್/ಆರ್ಟ್‌ಮೆಜೂರ್

ನನ್ನ ಓದಿಗೆ ಬುನಾದಿ ಹಾಕಿದ ಸರ್ಕಾರಿ ಕನ್ನಡ ಪ್ರಾಥಮಿಕ ಪಾಠಶಾಲೆಗೆ ಹೋಗುತ್ತೇನೆ. ಅದು ಪಾಳುಬಿದ್ದಿರುವುದು ದುಃಖ ತರುತ್ತದೆ. ಖುಶಿಯೆಂದರೆ ತುರುಮಂದೆಯಿದ್ದ ತಾವಿನಲ್ಲಿ, ಸೊಗಸಾದ ಕಾಂಪೌಂಡು ಸಮೇತವಾಗಿರುವ ದೊಡ್ಡ ಮಾಧ್ಯಮಿಕ ಶಾಲೆ ಬಂದಿದೆ. ಅದರ ತುಂಬ ಹೂಗಿಡ. ನಾನು ಓದುವಾಗ, ಶಾಲೆಗೆ ನಾನೊಬ್ಬನೇ ಸಾಬರ ಹುಡುಗ. ಸಹಪಾಠಿಗಳು ಕಣ್ಣಿಗೆ ಕಾಣದಂತೆ ಚದುರಿಹೋಗಿಬಿಡುತ್ತಾರೆ. ಅದರಲ್ಲೂ ಹುಡುಗಿಯರು ಮದುವೆಯಾದ ಬಳಿಕ ಸಂಸಾರದ ಕಡಲಲ್ಲಿ ಮುಳುಗಿ ಎಂದೂ ಭೇಟಿಯಾಗುವುದಿಲ್ಲ. ನನ್ನೊಬ್ಬ ಸಹಪಾಠಿ ಕೋರನಹಳ್ಳಿ ಮಲ್ಲಿಕಾರ್ಜುನ, ತೆಂಗಿನ ವ್ಯಾಪಾರಕ್ಕೆ ಹೋಗಬೇಕಾದವನು, ರಜೆ ಮಾಡಿ ನನ್ನನ್ನು ಸ್ವಾಗತಿಸಲು ಊರಲ್ಲಿ ನಿಂತಿದ್ದಾನೆ. ಅವನ ಮುಖದ ಮುಗುಳುನಗೆ ನನಗೆ ಆಹ್ಲಾದದಾಯಕ. ಮತ್ತೊಬ್ಬ ಸಹಪಾಠಿ ವೀರೇಶ ಅಡಿಕೆ ಒಣಗಿಸುತ್ತಿದ್ದವನು ನನ್ನನ್ನು ನೋಡಿ ಓಡಿಬರುತ್ತಾನೆ. ಸ್ಕೂಲಿನಲ್ಲಿ ಮಾನಿಟರ್ ಆಗಿ ನಮಗೆ ಹೊಡೆಯುತ್ತಿದ್ದ ಈತನಿಗೆ ನಾವು ಹೆದರುತ್ತಿದ್ದೆವು. ಈಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಮಾಗಿದ ಭಾವವಿತ್ತು. ಹಾಲಯ್ಯನವರ ಸ್ವಾಮಿ, ಸೇಬುಹಣ್ಣಿನಂತಿದ್ದವನು, ಹೊಸೆದ ಬತ್ತಿಯಾಗಿದ್ದಾನೆ. ಅವನ ಅಪ್ಪ ಹಾಲಯ್ಯನವರು ಸಂತೆಯಲ್ಲಿ ವಿಭೂತಿ ಉಂಡೆ ಮಾರುತ್ತಿದ್ದವರು. ಬಿಜಾಪುರ ಕಡೆಯಿಂದ ಯಾವಾಗಲೂ ನಮ್ಮೂರಿಗೆ ವಲಸೆ ಬಂದು, ತಮ್ಮ ಮೂಲವನ್ನೇ ಮರೆತುಬಿಟ್ಟವರು. ಸ್ವಾಮಿ, ಉತ್ಸಾಹದಿಂದ ತಾನು ಕಟ್ಟಿಸುತ್ತಿರುವ ಅರಮನೆ ತೋರಿಸಲು ಕರೆದೊಯ್ಯುತ್ತಾನೆ. ಅದು ಸಾಬರಗಲ್ಲಿಯಲ್ಲಿದೆ. ಅವನು ನಮ್ಮಂತೇ ಉರ್ದು ಮಾತಾಡುತ್ತಾನೆ. ಊರೊಳಗೆ ಅಂರ್ತ ಧರ್ಮೀಯ ಪ್ರೇಮಪ್ರಕರಣಗಳು ಒಳಗೆ ಆವಿಗೆಯ ಬೆಂಕಿಯಂತೆ ಸುಳಿಯುತ್ತಿರಬಹುದು. ನನಗದರ ಝಳ ತಾಗಲಿಲ್ಲ.

ನೆರೆಮನೆಯ ಗೆಳೆಯ ಮಹಮೂದನನ್ನು ಭೇಟಿಯಾಗಲೆಂದು ಹೋದೆ. ಬಾಳೆಲ್ಲ ಮಾವಿನ ಮರಗಳ ಮೇಲೆಯೇ ಕಳೆಯಲು ನಿರ್ಧರಿಸಿದಂತೆ ಆಡುತ್ತಿದ್ದ ನಾವು ಅದು ಹೇಗೊ ಕೆಳಗಿಳಿದವು. ಈತ ಸಿರಿವಂತ ಕುಟುಂಬಕ್ಕೆ ಒಬ್ಬನೆ ಮಗ. ಅವನು ಕಲಿತ ಉರ್ದುಶಾಲೆ ಅವನನ್ನು ಊರಲ್ಲೇ ಉಳಿಸಿತು. ಊರಬದಿ ಗದ್ದೆಯಿದ್ದ ಕಾರಣ, ರೈತನಾದ. ನಾನು ಹೋದಾಗ ಆತ ಮಂಡಿಯಲ್ಲಿ ಕೂತು ಮಾವಿನಕಾಯಿ ಪ್ಯಾಕು ಮಾಡುತ್ತಿದ್ದ. ಪ್ಯಾಕು ಮಾಡುವುದೂ ಒಂದು ಕಲೆ ಎಂಬಂತೆ ಅವನ ಕುಶಲತೆಯಿತ್ತು. ಬೈಹುಲ್ಲಿನ ಶಾಖದಿಂದಲೊ, ಗಾಳಿಯಿಲ್ಲದ ಗೋಡೌನಿಂದಲೂ ಬೆವೆತು ನೀರುನೀರಾಗಿದ್ದ. ತಲೆಗೂದಲೂ ಬಿಳಿಚಿ ಹುಲ್ಲಿನಂತಿತ್ತು. ಎಳವೆಯ ಗೆಳೆಯರು ಅಜ್ಜಂದಿರಾಗಿ ರೂಪಾಂತರ ಪಡೆದಿರುವುದನ್ನು ನೋಡುವುದೊಂದು ವಿಚಿತ್ರ ಅನುಭವ. ನನ್ನನ್ನು ಕಂಡವನೇ ‘ರಹಮತಿ! ಕಬ್ ಆಯಾ? ಆಬಾ ಆಆ’ ಎಂದು ಕುರ್ಚಿ ಹಾಕಿದ. ಕೂಡಲೇ ಬಹುವಚನಕ್ಕೆ ನೆಗೆದು ‘ನಿಮ್ಮ ಫೋಟೊ ಪೇಪರಿನಲ್ಲಿ ನೋಡ್ತಾ ಇರ್ತೀನಿ ನಮ್ಮೂರ ಹುಡುಗ ಅಂತ ಖುಶಿಯಾಗುತ್ತೆ’ ಎಂದ. ನಾನು ಆದಷ್ಟೂ ಸಹಜವಾಗಿ ಹಳೆಯ ಸಲಿಗೆಯಲ್ಲೆ ಒಡನಾಡ ಬಯಸಿದೆ. ನಾನು ಓದಿ ಪ್ರೊಫೆಸರ್ ಆಗಿರುವುದು ಅವನಲ್ಲಿ ಗೌರವ ಹುಟ್ಟಿಸಿರಬಹುದು. ಮಹಮೂದ್, ಒಂದು ಹಣ್ಣನ್ನು ಕೊಯ್ದು ಕೊಟ್ಟ. ಮಧುಮೇಹಿಯಾದ ನಾನು ಸಣ್ಣಚೂರನ್ನು ಮಾತ್ರ ಎತ್ತಿಕೊಂಡೆ. ಅವನಿಗೆ ವಿರಾಮದಲ್ಲಿ ಕೂತು ಬಾಲ್ಯದ ಭಾವುಕ ನೆನಪುಗಳನ್ನು ವಾಪಾಸು ಕರೆಯುವ ಆಸೆ. ಆದರೆ ಮಾಲು ಪ್ಯಾಕಾಗಿ ಇವತ್ತೇ ಲಾರಿ ಸಾಂಗಲಿಗೆ ಹೊರಡಬೇಕು. ಬೇಸಾಯ ತೋಟ ವ್ಯಾಪಾರದಲ್ಲಿ ತೊಡಗಿ ದುಡಿಮೆಯಲ್ಲಿ ಮುಳುಗಿರುವ ಇಂತಹವರ ಕಾಯಕ ಮಹತ್ವ ನಾನು ಬಲ್ಲೆ. ಅಡಕೆ ಮಾವು ವ್ಯಾಪಾರಿಗಳಾದ ಇವರು ಒಂದು ಸೀಜನ್ನಿನಲ್ಲಿ ಗಳಿಸುವ ರೊಕ್ಕ, ನನ್ನ ಜೀವಮಾನದ ಸಂಬಳಕ್ಕಿಂತ ಹೆಚ್ಚಿನದು. ಕೆಲವರು ಊರುಬಿಟ್ಟು ಪಟ್ಟಣಕ್ಕೆ ಹೋಗಿದ್ದರೆ. ಕೆಲವರು ಹಳ್ಳಿಯ ಪರಿಸರ ಒಪ್ಪಿಕೊಂಡು ಕೀಳರಿಮೆಯಿಲ್ಲದೆ ಬದುಕಿದ್ದಾರೆ. ನನಗಿಂತಲೂ ನೆಮ್ಮದಿಯಿಂದಿದ್ದಾರೆ. ಪೌರತ್ವ ಕಾಯಿದೆಯಿಂದಾಗುವ ಅನಾಹುತದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ಬಗ್ಗೆ ನನಗೇ ಮರುಕವಾಯಿತು.

ವೃತ್ತಿಯಿಂದ ನಿವೃತ್ತನಾಗಿರುವ ನನಗೆ, ಬಾಲ್ಯದ ಗೆಳೆಯರನ್ನೊ ಸಹಪಾಠಿಗಳನ್ನೊ ನೋಡುವುದಕ್ಕೆ ಪುರುಸೊತ್ತು ಸಿಕ್ಕಿದೆ. ಹುಡುಕು ಹೊರಡುತ್ತೇನೆ. ಆದರೆ ಸಹಪಾಠಿಗಳನ್ನು ಹುಡುಕಿ ಹೋಗಬಾರದು ಅನಿಸುತ್ತದೆ. ಅವರಲ್ಲಿ ಕೆಲವರು ಈಗಾಗಲೇ ಕಾಲನ ಕರೆಗೆ ಓಗೊಟ್ಟು ಹೊರಟುಹೋಗಿದ್ದಾರೆ. ಉಳಿದ ಕೆಲವರು ಕಾಲಮೇಲೆ ಕೈಯ್ಯನೂರಿ ಕೋಲುಹಿಡಿಯುವ ಹಂತಕ್ಕೆ ಮುಟ್ಟಿದ್ದಾರೆ. ಸ್ಫುರದ್ರೂಪಿಯಾಗಿದ್ದ ಗೆಳೆಯನೊಬ್ಬ ಡಯಾಬಿಟೀಸಿನಿಂದ ಸೊರಗಿ, ದೀಪಕ್ಕೆ ಜೋಡಿಸಬಹುದಾದ ಹತ್ತಿಯ ಬತ್ತಿಯಾಗಿದ್ದಾನೆ. ಗತಿಸಿದ ಗೆಳೆಯರ ಜೀವನ ಸಂಗಾತಿಗಳಾಗಿದ್ದವರನ್ನು ಕಾಣುತ್ತೇನೆ. ಅವರ ನಳನಳಿಸುವ ಮಕ್ಕಳೊಡನೆ ಬೆರೆತು ಕೆಲೆಯುತ್ತೇನೆ. ವಿಷಾದಭಾವ ತುಸು ತಗ್ಗುತ್ತದೆ. ಆ ಹುಡುಗರು ಅಪ್ಪನ ಸ್ನೇಹಿತನೆಂದು, ನನ್ನ ಕಾರಿನ ಡಿಕ್ಕಿಗೆ ತೆಂಗಿನಕಾಯಿ, ಬಾಳೆಗೊನೆ, ಹೂವಿನಗಿಡ ಇಡುತ್ತಾರೆ. ಮನೆಗೆ ಬಂದು ಹೂವಿನಗಿಡವನ್ನು ಹಿತ್ತಲಲ್ಲಿ ಹಚ್ಚುತ್ತೇನೆ.

 

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

8 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

9 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago