ಅಂಕಣಗಳು

ಕಾಂತಾರದ ನಿಗೂಢತೆಯೊಂದಿಗೆ ಗಾಢವಾಗುತ್ತಿರುವ ಶುಲ್ಕ, ಸುಂಕಗಳು

ಹೊಂಬಾಳೆಯ ಹೊಸ ಚಿತ್ರ ‘ಕಾಂತಾರ ಒಂದು ದಂತಕಥೆ: ಅಧ್ಯಾಯ ೧’ ನಿನ್ನೆ ತೆರೆಕಂಡಿದೆ. ಹೊಸ ಎತ್ತರಕ್ಕೆ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಒಯ್ಯುವ ಸಾಧ್ಯತೆಯ ಕುರಿತಂತೆ ಚಿತ್ರ ನೋಡಿದ ಪ್ರೇಕ್ಷಕ ಹೇಳುತ್ತಿದ್ದಾನೆ. ವ್ಯವಹಾರದ ದೃಷ್ಟಿಯಲ್ಲಂತೂ ಚಿತ್ರ ಬಿಡುಗಡೆಗೆ ಮೊದಲೇ ದಾಖಲೆಗಳ ವರ್ತಮಾನ ಇತ್ತು.

ವಿಶ್ವದ ಹಲವು ದೇಶಗಳಲ್ಲಿ ಈ ಚಿತ್ರ ತೆರೆಕಂಡಿದೆ. ಅಮೆರಿಕವೂ ಸೇರಿದಂತೆ. ಕನ್ನಡ ಚಿತ್ರಗಳಿಗೂ ಅಲ್ಲಿ ಮಾರುಕಟ್ಟೆ ಇದೆ ಎಂದು ದಶಕದ ಹಿಂದೆ ತೆರೆಕಂಡ ‘ರಂಗಿತರಂಗ’ ಹೇಳಿತ್ತು. ಅಲ್ಲಿಯವರೆಗೆ ಕನ್ನಡ ಚಿತ್ರಗಳ ಪ್ರದರ್ಶನ ವಾರಾಂತ್ಯ ಪ್ರದರ್ಶನಕ್ಕೆ ಸೀಮಿತವಾಗಿತ್ತು. ಅಮೆರಿಕದಲ್ಲಿರುವ ಕನ್ನಡಿಗರನ್ನು ಚಿತ್ರ ನೋಡಲು ಆಹ್ವಾನಿಸಿ, ಪ್ರದರ್ಶನದ ನಂತರ ಭೋಜನ ಏರ್ಪಡಿಸುವುದೇ ಮೊದಲಾಗಿ ಮಾಡಿ ಚಿತ್ರವನ್ನು ಅಲ್ಲಿ ತೋರಿಸುತ್ತಿದ್ದರು.

೨೦೧೫ರ ಆಗಸ್ಟ್ ಎರಡನೇ ವಾರ ‘ರಂಗಿತರಂಗ’ ತೆರೆಕಂಡಿತು. ವಿಶೇಷ ಎಂದರೆ ಅಲ್ಲಿ ಅದರ ಪ್ರದರ್ಶನ ೩೬ ಕಡೆ ಇತ್ತು. ಮೊದಲ ಬಾರಿಗೆ ಇಷ್ಟೊಂದುಸ್ಥಳಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ. ಇನ್ನೂ ವಿಶೇಷ ಎಂದರೆ ಅಮೆರಿಕದಲ್ಲಿ ಆ ವಾರ ತೆರೆಕಂಡ ಚಿತ್ರಗಳಲ್ಲಿ ಅತಿ ಹೆಚ್ಚು ವಾರಾಂತ್ಯ ಗಳಿಕೆ ಮಾಡಿದ ೪೦ ಚಿತ್ರಗಳಲ್ಲಿ ಈ ಚಿತ್ರ ೨೭ನೇ ಸ್ಥಾನದಲ್ಲಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹಯೋಗದ ಹಿಂದಿ ಚಿತ್ರ ‘ಭಜರಂಗಿ ಭಾಯಿಜಾನ್’ ೨೯ನೇ ಸ್ಥಾನದಲ್ಲಿತ್ತು.

ಇದನ್ನು ಓದಿ : ಕರುನಾಡ ವೈಭವ ಹೊತ್ತು ಸಾಗಿದ ಸ್ತಬ್ಧ ಚಿತ್ರಗಳು

ಅಮೆರಿಕದಲ್ಲಿ ಭಾರತೀಯ ಭಾಷಾ ಚಿತ್ರಗಳಲ್ಲಿ ಹಿಂದಿ ಚಿತ್ರಗಳಿಗೆ ಹೆಚ್ಚು ಮಾರುಕಟ್ಟೆ ಇದೆ. ಅದನ್ನು ಹೊರತುಪಡಿಸಿದರೆ ತೆಲುಗು ಚಿತ್ರಗಳಿಗೆ. ಕನ್ನಡದ ‘ಕೆಜಿಎಫ್‘, ‘ಕಾಂತಾರ‘ ‘೭೭೭ ಚಾರ್ಲಿ’ಗಳ ನಂತರ ಕನ್ನಡ ಚಿತ್ರಗಳು ಅಲ್ಲಿ ಕೂಡ ಮಾರುಕಟ್ಟೆ ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ. ‘ಕಾಂತಾರ ಒಂದು ದಂತಕಥೆ : ಅಧ್ಯಾಯ ೧’ ಈ ನಿಟ್ಟಿನಲ್ಲಿ ಗಮನಾರ್ಹ. ೨೦೨೨ರಲ್ಲಿ ‘ ಕಾಂತಾರ’ ಮೊದಲು ತೆರೆಕಂಡದ್ದು ಕನ್ನಡದಲ್ಲಿ. ಎರಡು ವಾರಗಳ ನಂತರ ಇತರ ಭಾರತೀಯ ಭಾಷೆಗಳಿಗೆ ಡಬ್ ಆಗಿ ಎಲ್ಲ ಭಾಷೆಗಳಲ್ಲೂ ತೆರೆಕಂಡಿತೆನ್ನಿ.

ಅಮೆರಿಕದಲ್ಲಿ ಚಿತ್ರ ಬಿಡುಗಡೆಯ ಪ್ರಸ್ತಾಪಕ್ಕೆ ಕಾರಣವಿದೆ. ಅದು ಅಲ್ಲಿನ ಅಧ್ಯಕ್ಷ ಟ್ರಂಪ್ ಅವರ ಹೊಸ ಪ್ರಕಟಣೆ. ಅದು ಸಿನಿಮಾ ಕ್ಷೇತ್ರಕ್ಕೆ ಸಂಬಂಧ ಪಟ್ಟದ್ದು. ಮೊನ್ನೆ ಹಾಲಿವುಡೇತರ ಚಿತ್ರಗಳ ಮೇಲೆ ೧೦೦% ಸುಂಕ ವಿಽಸುವುದಾಗಿ ಅವರು ಪ್ರಕಟಿಸಿದ್ದಾರೆ! ಇದು ಹೊಸದೇನಲ್ಲ ಸ್ವಲ್ಪ ಸಮಯದ ಹಿಂದೆ ಇದೇ ಮಾತನ್ನು ಅವರು ಆಡಿದ್ದರು. ಆಗೊಮ್ಮೆ ಈಗೊಮ್ಮೆ ಅವರು ಹೀಗೆ ಮಾತನಾಡುತ್ತಾರೆ. ಅವರ ವೈದ್ಯರ ಮಾತುಗಳನ್ನು ನಂಬುವುದೇ ಆದರೆ, ಟ್ರಂಪ್ ಅವರಿಗೆ ಇದು ಹೊಸದಲ್ಲ. ವೈಯಕ್ತಿಕವಾದರೆ ಇದರಿಂದ ಯಾರಿಗೂ ತೊಂದರೆ ಇಲ್ಲ. ಆದರೆ ಆಡಳಿತಾತ್ಮಕ ವಿಷಯಗಳಾದಾಗ ಮಾತ್ರ ಕಷ್ಟ. ಪ್ರತಿಶತ ನೂರು ಸುಂಕ ವಿಧಿಸುವ ಮೂಲಕ ಹಾಲಿವುಡ್ ಚಿತ್ರೋದ್ಯಮಕ್ಕೆ ಕಾಯಕಲ್ಪ ನೀಡುವುದು ಅವರ ಉದ್ದೇಶ! ಹಾಲಿವುಡ್‌ನ ಆಚೆ ತಯಾರಾಗುವ ಹಾಲಿವುಡ್ ಚಿತ್ರಗಳಿಗೂ ಇದು ಅನ್ವಯಿಸುತ್ತದಂತೆ. ಸ್ಥಳೀಯ ಚಿತ್ರ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಅವರ ಗುರಿ. ಟ್ರಂಪ್ ಅವರ ಈ ಪ್ರಕಟಣೆ ನಿಯಮವಾಗಿ ಜಾರಿಗೆ ಬಂದರೆ, ಭಾರತವೂ ಸೇರಿದಂತೆ ಇತರ ದೇಶಗಳ ಚಿತ್ರಗಳ ವ್ಯವಹಾರ ಕೊಂಚ ಕಷ್ಟ. ೧೫-೨೦ ಡಾಲರ್ ಪ್ರವೇಶ ಶುಲ್ಕ ದುಪ್ಪಟ್ಟು ಆದಾಗ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಯೋಚನೆ ಮಾಡುವ ಪ್ರಸಂಗ ಬರಬಹುದು.

ಬಾಲಿಶ ಹೇಳಿಕೆಯೊಂದರ ಮೂಲಕ ಟ್ರಂಪ್, ಹಾಲಿವುಡ್ ಪರಿಸ್ಥಿತಿಯನ್ನು ಹೇಳಿದ್ದು ನಿಜಕ್ಕೂ ಅವರ ಕುರಿತಂತೆ ಅನುಮಾನ ಮೂಡಿಸುತ್ತದೆ. ವರದಿಗಳ ಪ್ರಕಾರ ‘ಮಗುವಿನ ಕೈಯಿಂದ ಕ್ಯಾಂಡಿ ಕಸಿದುಕೊಳ್ಳುವಂತೆ, ಸಿನಿಮಾ ಉದ್ಯಮವನ್ನು ಇತರ ದೇಶಗಳು ಅಮೆರಿಕದಿಂದ ಕಸಿದುಕೊಂಡಿವೆ’ ಎನ್ನುವುದಾಗಿತ್ತು ಅವರ ವಿಶ್ಲೇಷಣೆ! ಕ್ಯಾಂಡಿ ಅಂತಲ್ಲ, ಚಿತ್ರ ನಿರ್ಮಾಣ ಹಾಲಿವುಡ್‌ನಲ್ಲಿ ದುಬಾರಿ ಎನ್ನುವ ಕಾರಣ, ಇತರ ದೇಶಗಳಿಗೆ ಹೊರಗುತ್ತಿಗೆ ನೀಡಿ ಚಿತ್ರಗಳ ನಿರ್ಮಾಣ ಆದದ್ದಿದೆ. ವಿಶೇಷವಾಗಿ ಡಿಜಿಟಲ್ ಕೆಲಸಗಳು. ‘ಲಯನ್ ಕಿಂಗ್’ ಚಿತ್ರದ ಬಹುತೇಕ ಕೆಲಸಗಳು ಬೆಂಗಳೂರಿನಲ್ಲಿ ನಡೆದಿತ್ತು. ಅಮೆರಿಕದಲ್ಲಿ ಸಾಕಷ್ಟು ಸೌಲಭ್ಯಗಳು ಇದ್ದರೂ ಅಲ್ಲಿನ ದುಬಾರಿ ವೆಚ್ಚ ಭರಿಸಲಾರದ ಮಂದಿ ಇತರ ಕಡೆ ಕೆಲಸಗಳನ್ನು ಮಾಡಿಸುತ್ತಾರೆ. ಒಂದು ರೀತಿಯಲ್ಲಿ ಟ್ರಂಪ್ ನಿರ್ಧಾರ ಇತರ ದೇಶ, ರಾಜ್ಯಗಳಿಗೆ ಮಾದರಿ ಆಗಲೂ ಬಹುದಲ್ಲ? ಇಲ್ಲೇ ಗಮನಿಸಿ. ಸರ್ಕಾರ ಸಹಾಯಧನ, ತೆರಿಗೆ ವಿನಾಯಿತಿ ಮುಂತಾದ ಉತ್ತೇಜನ ಪಡೆಯುವ ಚಿತ್ರಗಳು ಸಂಪೂರ್ಣವಾಗಿ ಕರ್ನಾಟಕದಲ್ಲಿ ತಯಾರಾಗಿರಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿತ್ತು. ನಂತರ ಉದ್ಯಮದ ಒತ್ತಾಯ, ಸೌಲಭ್ಯಗಳ ಕೊರತೆಯ ನೆಪದಲ್ಲಿ ನಿಯಮಗಳನ್ನು ಸಡಿಲಿಸಲಾಯಿತು. ಇವೆಲ್ಲ ಜಿ.ಎಸ್.ಟಿ. ಜಾರಿಗೆ ಬರುವ ಮೊದಲಿನ ದಿನಗಳ ಮಾತು. ಕನ್ನಡ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿಯ ದಿನಗಳು. ಜಿಎಸ್‌ಟಿ ಜಾರಿಗೆ ಬರುತ್ತಲೇ ಕನ್ನಡ ಚಿತ್ರಗಳೂ ಅದರಿಂದ ಹೊರತಾಗಲಿಲ್ಲ. ಸರ್ಕಾರ ಮನಸ್ಸು ಮಾಡಿದ್ದರೆ ಕನ್ನಡೇತರ ಚಿತ್ರಗಳಿಗೆ ನೆರೆಯ ತಮಿಳುನಾಡಿನಲ್ಲಿ ಇದ್ದಂತೆ ಸ್ಥಳೀಯ ಸಂಸ್ಥೆಗಳ ತೆರಿಗೆ ಹಾಕಬಹುದಾಗಿತ್ತು. ಉದ್ಯಮದಲ್ಲಿ ಸ್ವಾವಲಂಬನೆ ಮತ್ತು ಸ್ಥಳೀಯರಿಗೆ ಉದ್ಯೋಗ ಎನ್ನುವ ನಿಟ್ಟಿನಲ್ಲಿ ಟ್ರಂಪ್ ಮಾತು ಒಪ್ಪಬಹುದಾದರೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳ ಯಾದಿಯಲ್ಲಿ ಮುಂದಿರುವ ಅಮೆರಿಕಕ್ಕೆ ಇದು ತರವಲ್ಲ ಎಂದೂ ಅನಿಸಬಹುದು.

ರಾಜ್ಯ ಸರ್ಕಾರ ಜಾರಿಗೆ ತಂದ ಆದೇಶಕ್ಕೆ ತಡೆಯಾಜ್ಞೆ ತರುವುದರಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಯಶಸ್ವಿಯಾಯಿತಷ್ಟೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ಸರ್ಕಾರ ಚಿತ್ರಮಂದಿರಗಳ ಗರಿಷ್ಟ ಶುಲ್ಕ ನಿಗದಿ ಮಾಡಬೇಕು ಎನ್ನುವ ಬೇಡಿಕೆ ದಶಕದಿಂದಲೂ ಇತ್ತು. ೨೦೧೭ರಲ್ಲಿ ಬೇರೊಂದು ಇಲಾಖೆ ಈ ಕುರಿತ ಆದೇಶಹೊರಡಿಸಿದ್ದ ಕಾರಣ ಅದಕ್ಕೆ ತಡೆಯಾಜ್ಞೆ ಸುಲಭಸಾಧ್ಯವಾಯಿತು. ಅದರ ಹಿನ್ನೆಲೆಯಲ್ಲಿ ಈ ಬಾರಿ ತಡೆ ಸಿಕ್ಕಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿ ಉದ್ಯಮ ಮೌನವಾಗಿಲ್ಲ. ತಡೆಯಾಜ್ಞೆ ತೆರವಿಗೆ ನ್ಯಾಯಾಲಯದ ಕದ ತಟ್ಟಿದೆ. ತಡೆಯಾಜ್ಞೆ ತೆರವಾಗದೇ ಇದ್ದರೂ ಕೆಲವೊಂದು ಷರತ್ತುಗಳ ಮೂಲಕ ಅದು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಮತ್ತು ಅದರ ಸದಸ್ಯರನ್ನು ಹಗ್ಗ ಇಲ್ಲದೆ ಕಟ್ಟಿಹಾಕುವ ಕೆಲಸ ಮಾಡಿದೆ.

ಅದರ ಪ್ರಕಾರ ಅಂತಿಮವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ನ್ಯಾಯಾಲಯದಲ್ಲಿ ಗೆದ್ದರೆ ಸಮಸ್ಯೆ ಏನೂ ಇಲ್ಲ.ಒಂದು ವೇಳೆ ಸರ್ಕಾರದ ವಾದ ಗೆದ್ದರೆ, ಅದು ಹೇಳಿದ ಗರಿಷ್ಟ ೨೦೦ ರೂ.ಗಿಂತ ಹೆಚ್ಚು ಪಡೆದ ಶುಲ್ಕವನ್ನು ಪ್ರೇಕ್ಷಕರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸಲು ಬೇಕಾದ ಸೂಕ್ತ ವ್ಯವಸ್ಥೆ, ದಾಖಲೆ ಇಟ್ಟುಕೊಳ್ಳಬೇಕು. ಟಿಕೆಟ್ ಪಡೆಯುವಾಗ ಯಾವ ರೀತಿ ಅದರ ಪ್ರವೇಶ ದರ ನೀಡಲಾಗಿತ್ತೋ ಆ ಮೂಲಕವೇ ಅದನ್ನು ಹಿಂದಿರುಗಿಸಬೇಕು, ನಗದು ಮೊತ್ತವಾದರೆ, ಅದನ್ನು ಹಿಂದಿರುಗಿಸಲು ಬೇಕಾದ ವ್ಯವಸ್ಥೆ ಮಾಡಿರಬೇಕು. ಅದಷ್ಟೇ ಅಲ್ಲದೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿ ಪ್ರದರ್ಶನಕ್ಕೂ ಮೊದಲು ಈ ಕುರಿತ ವಿವರಗಳನ್ನು ತೋರಿಸಬೇಕು. ಮಲ್ಟಿಪ್ಲೆಕ್ಸ್ ಗಳ ಹೊರಗೆ ಕೂಡ ಇದನ್ನು ಲಗತ್ತಿಸಿರಬೇಕು.

ಇದನ್ನು ಓದಿ : ದಸರಾ ಪ್ರಾಧಿಕಾರ ಅಗತ್ಯ ಇಲ್ಲ: ಸಿಎಂ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಮತ್ತಿತರರು ತಡೆಯಾಜ್ಞೆ ತೆರವು ಮಾಡಲು ನೀಡಿದ ಅಪೀಲಿನಲ್ಲಿ ಬಹುತೇಕ ಗೆಲುವು ಖಚಿತ ಎನ್ನುತ್ತಾರೆ ಕಾನೂನು ಬಲ್ಲವರು. ಅದಕ್ಕೆ ಪೂರಕವಾಗಿ ಎರಡು ತೀರ್ಪು ಮತ್ತು ಆದೇಶಗಳಿವೆ. ಒಂದು ತೆಲಂಗಾಣ ಹೈಕೋರ್ಟಿನದು, ಇನ್ನೊಂದು ಮದರಾಸು ಹೈಕೋರ್ಟಿನದು. ಇತ್ತೀಚೆಗೆ ತೆಲಂಗಾಣ ಸರ್ಕಾರ, ‘ಒಜಿ’ ಚಿತ್ರದ ಪ್ರವೇಶವನ್ನು ವಿಶೇಷ ಪ್ರದರ್ಶನ ಒಂದಕ್ಕೆ ೮೦೦ ರೂ. ವಿಧಿಸಲು ಅನುಮತಿ ನೀಡಿತ್ತು. ಅದು ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿತ್ತು. ಪ್ರೇಕ್ಷಕರನ್ನು ಶೋಷಣೆ ಮಾಡಿದಂತೆ ಇದು, ಎಂದು ನ್ಯಾಯಾಲಯ ಹೇಳಿತ್ತು.

ಮದರಾಸು ಹೈಕೋರ್ಟಿನ ಆದೇಶವನ್ನು ಕಳೆದ ವಾರ ಪ್ರಸ್ತಾಪಿಸಲಾಗಿತ್ತು. ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ದರ ವಿಧಿಸಿದ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಸರ್ಕಾರಕ್ಕೆ ಆದೇಶ ನೀಡಿತ್ತು. ಎರಡೂ ಪ್ರಸಂಗಗಳು ಪ್ರೇಕ್ಷಕರಿಗೆ ಕಡಿಮೆ ಪ್ರವೇಶದರದಲ್ಲಿ ಸಿನಿಮಾ ನೋಡಲು ಅವಕಾಶ ಮಾಡಿಕೊಡಬೇಕು ಎನ್ನುವುದನ್ನು ಹೇಳಿದ್ದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಸರ್ಕಾರದ ವಾದಕ್ಕೆ ಪುಷ್ಟಿ ಸಿಗುತ್ತದೆ ಎನ್ನುವ ವಿಶ್ವಾಸ ಉದ್ಯಮದ್ದು. ಹ್ಞಾಂ, ಕಾಂತಾರ ಚಿತ್ರದ ಪ್ರಚಾರದ ವೇಳೆ ಹೈದರಾಬಾದಿನಲ್ಲಿ ರಿಷಭ್ ಶೆಟ್ಟಿ ಕನ್ನಡದಲ್ಲಿ ಭಾಷಣ ಮಾಡಿದರು ಎನ್ನುವ ಕಾರಣ ಅವರ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಕೆಲವರು ತಮ್ಮ ಸಾಮಾಜಿಕ ತಾಣದಲ್ಲಿ ಅಲವತ್ತುಕೊಂಡರು. ಅದೇನೂ ಅಂತಹ ದೊಡ್ಡ ವಿಷಯ ಆಗಲಿಲ್ಲ. ಅಲ್ಲಿನ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂತಹ ಬೆಳವಣಿಗೆಗೆ ಆಸ್ಪದ ಕೊಡದಂತೆ ಮಾತನಾಡಿದರು. ಕಲೆಗೆ ಭಾಷೆಯ ಗಡಿ ಇಲ್ಲ ಎನ್ನುವ ಮಾತನ್ನು ಅವರು ಪುನರುಚ್ಛರಿಸಿದರು.

ಪ್ಯಾನ್ ಇಂಡಿಯಾ ಹೆಸರಿನಲ್ಲಿ ಬರುವ ಚಿತ್ರಗಳ ಮಂದಿ ಕರ್ನಾಟಕಕ್ಕೆ ಬಂದಾಗ, ಹಲವರು ಅವರದ್ದೇ ಭಾಷೆಗಳಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಹಾಗಂತ ಅವರ ಚಿತ್ರಗಳಿಗೆ ಬಹಿಷ್ಕಾರ ಎಂದ ಪ್ರಸಂಗ ಇದೆಯೇ?

” ಅಮೆರಿಕದಲ್ಲಿ ಭಾರತೀಯ ಭಾಷಾ ಚಿತ್ರಗಳಲ್ಲಿ ಹಿಂದಿ ಚಿತ್ರಗಳಿಗೆ ಹೆಚ್ಚು ಮಾರುಕಟ್ಟೆ ಇದೆ. ಅದನ್ನು ಹೊರತುಪಡಿಸಿದರೆ ತೆಲುಗು ಚಿತ್ರಗಳಿಗೆ. ಕನ್ನಡದ ‘ಕೆಜಿಎಫ್‘, ‘ಕಾಂತಾರ‘ ‘೭೭೭ ಚಾರ್ಲಿ’ಗಳ ನಂತರ ಕನ್ನಡ ಚಿತ್ರಗಳು ಅಲ್ಲಿ ಕೂಡ ಮಾರುಕಟ್ಟೆ ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿವೆ.”

-ವೈಡ್‌ ಆಂಗಲ್‌ 
ಬಾ.ನಾ.ಸುಬ್ರಹ್ಮಣ್ಯ

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

9 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

11 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

11 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

11 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

12 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

12 hours ago