ಅಂಕಣಗಳು

ಟ್ರಂಪ್ ಸುಂಕ: ಅಮೆರಿಕಕ್ಕೆ ರಫ್ತು ಸ್ಥಗಿತ, ಲಕ್ಷಾಂತರ ಕೋಟಿ ರೂ.ನಷ್ಟ

ಸಂಕಷ್ಟದಲ್ಲಿ ಬಳ್ಳಾರಿಯ ಸಿದ್ಧ ಉಡುಪು, ಚಾಮರಾಜನಗರದ ಕಲ್ಲು ರಫ್ತು ಕಾರ್ಮಿಕರು 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಶೇ. ೫೦ ಸುಂಕ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಭಾರತ ಹಿಂದೆಂದೂ ಕಾಣದಂಥ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ಸಂಕಷ್ಟ ಅಷ್ಟೇ ಅಲ್ಲ, ಸಿದ್ಧ ಉಡುಪು, ಜವಳಿ, ಕಸೂತಿ ಮಾಡಿದ ಉಡುಪುಗಳು, ನಯಗೊಳಿಸಿದ ವಜ್ರ, ಆಭರಣ, ಸೀಗಡಿ ಕೃಷಿ ಮತ್ತಿತರ ಕ್ಷೇತ್ರಗಳ ಲಕ್ಷಾಂತರ ಮಂದಿ ಹಠಾತ್ತನೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಬಳ್ಳಾರಿ,ಬೆಂಗಳೂರು ಮತ್ತಿತರ ಕಡೆ ಕೆಲಸ ಮಾಡುತ್ತಿರುವ ಸಿದ್ಧ ಮತ್ತು ಕಸೂತಿ ಉಡುಪು, ಚಾಮರಾಜನಗರ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತಿತರ ಕಡೆಯ ಕಲ್ಲುಗಣಿ ರಫ್ತು, ಬೆಂಗಳೂರು, ಕೋಲಾರ ಮತ್ತಿತರ ಪ್ರದೇಶಗಳ ಹೂವು, ಚಿಕ್ಕಮಗಳೂರಿನ ಕಾಫಿ, ಕರಾವಳಿಯ ಸಾಂಬಾರ ಪದಾರ್ಥಗಳು ಟ್ರಂಪ್ ಸುಂಕದ ಹೊಡೆತಕ್ಕೆ ಸಿಲುಕಿವೆ. ಟ್ರಂಪ್ ಸುಂಕ ಹೇರುವ ಸುಳಿವು ತಿಳಿದ ಸಿದ್ಧ ಉಡುಪು, ಕಲ್ಲು ಉದ್ಯಮಿಗಳು ಸಾಕಷ್ಟು ಸರಕನ್ನು ಗಡುವಿನ ಒಳಗೇ ಅಮೆರಿಕಕ್ಕೆ ರ- ಮಾಡಿದರು. ಸರಕು ಸಾಗಾಣಿಕೆಗೆ ಅಗತ್ಯ ಹಡಗು ಸಿಗದಿದ್ದಾಗ ಉದ್ಯಮಿಗಳು ಸಿದ್ಧ ಉಡುಪನ್ನು ವಿಮಾನಗಳ ಮೂಲಕ ಸಾಗಿಸಿದ್ದೂ ಉಂಟು. ಆದರೆ ಕಲ್ಲು ಸಾಗಣೆಗೆ ಸೂಕ್ತ ಕಂಟೈನರ್ ಸಿಗದೆ ಬಂದರುಗಳಲ್ಲಿ ಉಳಿದ ನಿದರ್ಶನಗಳೂ ಇವೆ. ಅಮೆರಿಕದ ಜನರಿಗಾಗಿ ಸಿದ್ಧಮಾಡಲಾದ ಉಡುಪುಗಳನ್ನು ಬೇರೆ ಕಡೆ ಮಾರಲು ಸಾಧ್ಯವಿಲ್ಲ. ಏಕೆಂದರೆ ಬೇರೆ ದೇಶಗಳ ಜನರ ಮೈಕಟ್ಟು ಮತ್ತು ಫ್ಯಾಷನ್ ಭಿನ್ನವಾಗಿದ್ದು ಸಿದ್ಧ ಉಡುಪುಗಳು ಸರಿಯಾಗಿ ಹೊಂದುವುದಿಲ್ಲ. ಹೀಗಾಗಿ ಬೇರೆಡೆಗೆ ಕಳುಹಿಸಿದರೂ ಮಾರಾಟವಾಗುವ ಸಾಧ್ಯತೆ ಇಲ್ಲ. ಶೇ. ೫೦ ಸುಂಕ ಹೇರಿದ್ದರಿಂದ ದುಬಾರಿ ಬಟ್ಟೆಗಳನ್ನು ಯಾರೂ ಕೊಳ್ಳುವುದಿಲ್ಲ. ಅಮೆರಿಕದಲ್ಲಿ ೧೦ ಡಾಲರ್‌ಗೆ ಸಿಗುತ್ತಿದ್ದ ಶರ್ಟ್ ಶೇ.೫೦ ಸುಂಕ ಹೇರಿದ ನಂತರ ಸುಮಾರು ೧೬ ಡಾಲರ್ ಆಗುತ್ತದೆಯಂತೆ. ಚೀನಾ, ವಿಯೆಟಾಂ,ಬಾಂಗ್ಲಾ ದೇಶದ ಮೇಲೆ ಹೇರಿರುವ ಸುಂಕ ಕಡಿಮೆ ಇರುವುದರಿಂದ ಆ ದೇಶಗಳ ಸಿದ್ಧ ಉಡುಪುಗಳ ಬೆಲೆ ಕಡಿಮೆ ಇರುತ್ತದೆ. ಹೀಗಾಗಿ ಅವುಗಳೇ ಹೆಚ್ಚು ಮಾರಾಟವಾಗುತ್ತವೆ. ಭಾರತದ ಉಡುಪು ಮಾರಾಟವಾಗುವುದಿಲ್ಲ. ಇದರ ಪರಿಣಾಮ ಭಾರತದ ಮೇಲೆ ಆಗುತ್ತದೆ. ಹೀಗಾಗಿ ಸಿದ್ಧ ಉಡುಪು ಕ್ಷೇತ್ರದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಸಿದ್ಧ ಉಡುಪು ಕ್ಷೇತ್ರದಲ್ಲಿ ೨ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಆ ಪೈಕಿ ಸುಮಾರು ೫೦ ಸಾವಿರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ ಎಂಬುದು ಈಗಿನ ಅಂದಾಜು.

ವಿವಿಧ ಬಣ್ಣಗಳ ದೊಡ್ಡದೊಡ್ಡ ಹಾಸು ಕಲ್ಲು, ನಯಗೊಳಿಸಿದ ಕಟ್ಟು ಕಲ್ಲುಗಳು ಹೊರ ದೇಶಗಳಲ್ಲಿ ಜನಪ್ರಿಯ. ಅಮೃತಶಿಲೆ, ಕೆಂಪು ಮತ್ತು ನೀಲಿ ಹಾಗೂ ಚಾಮರಾಜನಗರ ಪ್ರದೇಶದ ಕಪ್ಪು ಬಣ್ಣದ ಕಲ್ಲಿಗೆ ಅಮೆರಿಕ ಅಷ್ಟೇ ಅಲ್ಲ ಯೂರೋಪಿನಲ್ಲೂ ಬೇಡಿಕೆ ಇದೆ. ವರ್ಷಕ್ಕೆ ಕನಿಷ್ಠ ೧೦,೦೦೦ ಕೋಟಿ ರೂ. ಮೌಲ್ಯದ ಕಲ್ಲು ರಫ್ತಾಗುತ್ತದೆ. ಟ್ರಂಪ್ ಸುಂಕದಿಂದಾಗಿ ಹಠಾತ್ತನೆ ಬೇಡಿಕೆ ತಗ್ಗಿದ್ದು ಈಗಾಗಲೇ ಚಾಮರಾಜನಗರ ಜಿಲ್ಲೆ ಅಷ್ಟೇ ಅಲ್ಲದೆ, ಕಲಬುರಗಿ, ಬೀದರ್ , ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲೂ ಕಲ್ಲು ತೆಗೆಯುವ ಕೆಲಸ ನಿಲ್ಲುವ ಹಂತಕ್ಕೆ ಬಂದಿದೆ. ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಸೂಚನೆ ಕಾಣುತ್ತಿದೆ. ಮಾರಾಟದ ಪರ್ಯಾಯ ಮಾರ್ಗಗಳನ್ನು ಹುಡುಕುವವರೆಗೆ ಅನಿಶ್ಚಿತತೆ ಮುಂದುವರಿಯಲಿದೆ.

ಸೀಗಡಿ ಸೇರಿದಂತೆ ಇತರೆ ಜಲಚರಗಳು ಅಪಾರ ಪ್ರಮಾಣದಲ್ಲಿ ಕರಾವಳಿ ಜಿಲ್ಲೆಗಳಿಂದ ಅಮೆರಿಕ ಸೇರಿದಂತೆ ಯೂರೋಪಿನ ಹಲವು ದೇಶಗಳಿಗೆ ಹತ್ತಾರು ದಶಕಗಳಿಂದ ರಫ್ತಾಗುತ್ತಿವೆ. ಕರ್ನಾಟಕದಿಂದ ಸಿದ್ಧ ಉಡುಪು ಅಲ್ಲದೆ ಕಾಫಿ, ಸಾಂಬಾರ ಪದಾರ್ಥ, ಏಲಕ್ಕಿ ಮುಂತಾದ ಪದಾರ್ಥಗಳು ನೂರಾರು ವರ್ಷಗಳಿಂದ ರಫ್ತಾಗುತ್ತಿವೆ. ಸಾಮಾನ್ಯವಾಗಿ ಈ ಪದಾರ್ಥಗಳ ಮೇಲೆ ಶೇ. ೨ರಿಂದ ಶೇ.೩, ಗರಿಷ್ಟ ಶೇ.೧೦ ಸುಂಕ ಇತ್ತು. ಈಗ ಹಠಾತ್ತನೆ ಶೇ. ೨೫ ಮತ್ತು ಶೇ. ೫೦ ಸುಂಕ ವಿಧಿಸಿರುವುದರಿಂದ ಸಹಜವಾಗಿ ಈ ವಸ್ತುಗಳ ಬೆಲೆಗಳು ಏರಲಿವೆ. ಬೆಲೆ ಏರಿದರೆ ಬೇಡಿಕೆ ಕಡಿಮೆಯಾಗುವುದು ಸಾಮಾನ್ಯ. ಹೀಗಾಗಿ ಕರ್ನಾಟಕದ ರಫ್ತುದಾರರು ನಷ್ಟ ಎದುರಿಸಲಿದ್ದಾರೆ. ಇದರ ಕೆಟ್ಟ ಪರಿಣಾಮ ಬೆಳೆಗಾರರ ಮೇಲೆ ಆಗುತ್ತದೆ. ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಔಷಧಿ, ಎಲೆಕ್ಟ್ರಾನಿಕ್, ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಈ ಕ್ಷೇತ್ರಗಳ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ರಫ್ತಾಗುತ್ತವೆ. ಈ ಕ್ಷೇತ್ರಗಳಿಗೆ ಟ್ರಂಪ್ ಸುಂಕದ ರಿಯಾಯ್ತಿ ಇರುವುದರಿಂದ ರಫ್ತಿನ ಮೇಲೆ ಕೆಟ್ಟ ಪರಿಣಾಮ ಆಗಿಲ್ಲ.

ಅಮೆರಿಕದ ಮಾರುಕಟ್ಟೆಗೆ ಸರಬರಾಜಾಗುವ ವಸ್ತುಗಳ ಮೇಲಿನ ಆಮದು ಸುಂಕವನ್ನು ಟ್ರಂಪ್ ಪರಿಷ್ಕರಿಸಿ ಭಾರತದ ಮೇಲೆ ಶೇ.೨೫ ಹೊಸ ಸುಂಕ ವಿಧಿಸಿದ ನಂತರ (ಆಗಸ್ಟ್ ೭) ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಹೆಚ್ಚುವರಿಯಾಗಿ ಶೇ.೨೫ ಸುಂಕ ವಿಧಿಸಿದರು. ಅಲ್ಲಿಗೆ ಅಮೆರಿಕದ ಮಾರುಕಟ್ಟೆಗೆ ಆಮದು ಮಾಡಿಕೊಂಡ ವಸ್ತುಗಳ ಮೇಲಿನ ಸುಂಕ ಶೇ. ೫೦ ಆಯಿತು (ಆಗಸ್ಟ್ ೨೭). ಇದರಿಂದ ಅಮೆರಿಕದ ಗ್ರಾಹಕರು ಕೊಳ್ಳುವ ಭಾರತದ ವಸ್ತುಗಳು ಶೇ.೫೦ ಹೆಚ್ಚುವರಿ ಸುಂಕ ತೆರಬೇಕಾಗಿದೆ. ಭಾರತದ ವಸ್ತುಗಳು ದುಬಾರಿಯಾಗಿದ್ದರಿಂದ ಗ್ರಾಹಕರು ಭಾರತದ ವಸ್ತುಗಳನ್ನು ಕೊಳ್ಳುವುದಿಲ್ಲ, ಅಮೆರಿಕದ ವಸ್ತುಗಳನ್ನೇ ಕೊಳ್ಳುತ್ತಾರೆ, ಸುಂಕ ಏರಿಕೆಯಿಂದಾಗಿ ಭಾರತದಿಂದ ಆಮದಾದ ವಸ್ತುಗಳು ಮಾರಾಟವಾಗದೆ ಭಾರತ ಅಪಾರ ನಷ್ಟ ಅನುಭವಿಸುತ್ತದೆ ಎನ್ನುವುದು ಟ್ರಂಪ್ ಲೆಕ್ಕಾಚಾರ.

ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಭಾರತ ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲ ಕೊಳ್ಳುತ್ತಿದೆ. ಉಕ್ರೇನ್ ಮೇಲೆ ಯುದ್ಧ ಮುಂದುವರಿಸಲು ರಷ್ಯಾಕ್ಕೆ ಈ ವಹಿವಾಟು ಸಹಾಯ ಮಾಡುತ್ತಿದೆ. ಈ ಸಹಾಯಕ್ಕೆ ಕತ್ತರಿ ಹಾಕುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.೨೫ ಸುಂಕ ವಿಧಿಸಲಾಗಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಉಕ್ರೇನ್-ರಷ್ಯಾ ಯುದ್ಧ ಅಂತ್ಯಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದು ಅವರ ಸಮರ್ಥನೆ. ವಿಚಿತ್ರ ಎಂದರೆ ವಾಸ್ತವವಾಗಿ ರಷ್ಯಾದಿಂದ ಅತಿ ಹೆಚ್ಚು ತೈಲ ಕೊಳ್ಳುತ್ತಿರುವ ದೇಶ ಚೀನಾ. ಅಂತೆಯೇ ಯೂರೋಪ್ ದೇಶಗಳು ಭಾರತಕ್ಕಿಂತ ಹೆಚ್ಚು ಮೌಲ್ಯದ ಅನಿಲ ಕೊಳ್ಳುತ್ತಿವೆ. ಅವುಗಳ ವಿರುದ್ಧ ಟ್ರಂಪ್ ಹೆಚ್ಚು ಸುಂಕ ವಿಧಿಸುವ ಗೋಜಿಗೆ ಹೋಗಿಲ್ಲ. ಭಾರತದ ಮೇಲೆ ಮಾತ್ರ ಕ್ರಮ ಏಕೆ? ಇದು ವಿರೋಧಾಭಾಸ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಪ್ರಶ್ನಿಸುತ್ತಿದ್ದಾರೆ.

ಈ ವಾದ ವಿವಾದ ಏನೇ ಇರಲಿ ಟ್ರಂಪ್ ಸುಂಕ ಭಾರತ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸಿದೆ. ಮುಖ್ಯವಾಗಿ ಜವಳಿ, ಸಿದ್ಧ ಉಡುಪು, ವಜ್ರ ಮತ್ತು ಆಭರಣ, ಸೀಗಡಿ, ಕಲ್ಲುಗಣಿ ಮುಂತಾದ ಕ್ಷೇತ್ರಗಳ ಮೇಲೆ ಕೆಟ್ಟಪರಿಣಾಮ ಬೀರಿದೆ. ಅಂದರೆ ಅಮೆರಿಕಕ್ಕೆ ರಫ್ತಾಗುತ್ತಿದ್ದ ಈ ಸರಕುಗಳಿಗೆ ಬೇಡಿಕೆ ಇಲ್ಲದಾಗಿದೆ. ಅಮೆರಿಕದ ಆಮದು ಉದ್ಯಮಿಗಳು ಕೊಳ್ಳುವುದನ್ನು ನಿಲ್ಲಿಸಿದ್ದಾರೆ.  ಭಾರತದಿಂದ ಅಮೆರಿಕಕ್ಕೆ ಸುಮಾರು ೨ ಬಿಲಿಯನ್ ಡಾಲರ್ ಮೌಲ್ಯದ ಸೀಗಡಿ ಪ್ರತಿ ವರ್ಷ ರಫ್ತಾಗುತ್ತಿತ್ತು. ಸೀಗಡಿ ಮೇಲೆ ಶೇ.೮.೫ಸುಂಕ ವಿಧಿಸಲಾಗುತ್ತಿತ್ತು. ಅದು ಈಗ ಶೇ ೫೮.೫೬ಕ್ಕೆ ಏರಿದೆ. ಮೂರು ಬಿಲಿಯನ್ ಡಾಲರ್ ಮೌಲ್ಯದ ವಿವಿಧ ರಾಸಾಯನಿಕ ವಸ್ತುಗಳು ಅಮೆರಿಕ್ಕೆ ಪ್ರತಿ ವರ್ಷ ರಫ್ತಾಗುತ್ತಿದ್ದವು. ಅವುಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕ ಕೇವಲ ಶೇ.೩, ಹೊಸ ಸುಂಕ ಶೇ.೫೪ ಆಗಿದೆ. ಸಿದ್ಧ ಉಡುಪಿನ ಮೇಲೆ ಶೇ. ೧೩.೯ ಸುಂಕ ಇತ್ತು. ಅದು ಈಗ ಶೇ ೬೦.೩ ಆಗಿದೆ. ಜವಳಿಯ ಮೇಲೆ ಸುಂಕ ಶೇ. ೯ ಇದ್ದದ್ದು ಈಗ ೫೯ಕ್ಕೆ ಏರಿದೆ. ಸುಮಾರು ಹತ್ತು ಬಿಲಿಯನ್ ಡಾಲರ್ ಮೌಲ್ಯದ ವಜ್ರ, ಆಭರಣ ಅಮೆರಿಕಕ್ಕೆ ಭಾರತದಿಂದ ರಫ್ತಾಗುತ್ತಿತ್ತು. ಇವುಗಳ ಮೇಲೆ ಇದ್ದ ಶೇ. ೩.೨ ಸುಂಕ ಈಗ ಶೇ. ೫೩.೨ ಕ್ಕೆ ಏರಿದೆ. ಇದೇ ರೀತಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಎಲ್ಲ ವಸ್ತುಗಳ ಮೇಲೆ ಸುಂಕ ಐವತ್ತು ಪಟ್ಟು ಏರಿದೆ.

ಈಗಿನ ಲೆಕ್ಕಾಚಾರದ ಪ್ರಕಾರ ಸೂರತ್, ನೊಯ್ಡಾ ಮತ್ತು ತಿರುಪ್ಪೂರ್‌ನ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು ೫ ಲಕ್ಷ ಕಾರ್ಮಿಕರು ಉದ್ಯೋಗ ನಷ್ಟ ಭೀತಿ ಎದುರಿಸುತ್ತಿದ್ದಾರೆ. ಗುಜರಾತ್ ರಾಜ್ಯದಲ್ಲಿ ವಜ್ರ ಮತ್ಯು ಆಭರಣ ತಯಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು ೨ ಲಕ್ಷ ಜನರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸೀಗಡಿ ಕೃಷಿಯಲ್ಲಿ ಸುಮಾರು ೩ ಲಕ್ಷ ರೈತರು ತೊಡಗಿದ್ದು, ಟ್ರಂಪ್ ವಿಧಿಸಿರುವ ಶುಲ್ಕದಿಂದ ಬಹುಪಾಲು ಜನರು ಕೆಲಸ ಕಳೆದು ಕೊಳ್ಳಲಿದ್ದಾರೆ. ಭಾರತದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿ ರುವುದರಿಂದಾಗಿ ಕಡಿಮೆ ಸುಂಕ ಇರುವ ಥೈಲ್ಯಾಂಡ್‌ಗೆ ಆಭರಣ ಕ್ಷೇತ್ರದಲ್ಲಿ. ಸೀಗಡಿ ಕ್ಷೇತ್ರದಲ್ಲಿ ಉರುಗ್ವೆ ದೇಶಕ್ಕೆ, ಜವಳಿಯಲ್ಲಿ ಬಾಂಗ್ಲಾ, ಚೀನಾ, ವಿಯೆಟ್ನಾಂ, ಇಂಡೊನೇಷ್ಯಾ, ಜಪಾನ್‌ಗೆ ಅನುಕೂಲಕರ ವಾತಾವರಣನಿರ್ಮಾಣವಾಗಿದೆ.

ಅಮೆರಿಕದ ಜೊತೆಗಿನ ಭಾರತದ ಒಟ್ಟು ರಫ್ತು ೮೭ ಬಿಲಿಯನ್ ಡಾಲರ್. ಈ ಪೈಕಿ ಈಗಾಗಲೇ ೪೭ ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಅಂತಿಮಗೊಂಡಿದೆ. ೨೦ ಬಿಲಿಯನ್ ಡಾಲರ್ ಮೌಲ್ಯದ ಸರಕುಗಳು ಈ ಸುಂಕದ ವ್ಯಾಪ್ತಿಗೆ ಬರುವುದಿಲ್ಲ. ಈಗ ಉಳಿದಿರುವುದು ಇನ್ನು ೨೦ ಬಿಲಿಯನ್ ಡಾಲರ್ ವಹಿವಾಟು ಮಾತ್ರ. ಭಾರತದಲ್ಲಿಯೇ ಉಳಿದಿರುವ ವಸ್ತುಗಳ ವಹಿವಾಟಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ವಕ್ತಾರರು ಹೇಳುತ್ತಿದ್ದಾರೆ. ಹಠಾತ್ತನೆ ಪರ್ಯಾಯ ಮಾರ್ಗ ಹುಡುಕುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ಉದ್ಯಮಿಗಳು. ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮ ಆಗದಂತೆ ಪರಿಹಾರೋಪಾಯ ಹುಡುಕುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ.

ಅಮೆರಿಕದ ಬದಲಾದ ಧೋರಣೆಯಿಂದ ಭಾರತ ಪಾಠ ಕಲಿಯಬೇಕಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಈ ಸಂದರ್ಭವನ್ನು ಬಳಸಿಕೊಂಡು ಒಂದೇ ದೇಶವನ್ನು ಅವಲಂಬಿಸುವುದನ್ನು ಬಿಟ್ಟು ಬೇರೆ ದೇಶಗಳ ಮಾರುಕಟ್ಟೆಗೂ ರಫ್ತು ವಿಸ್ತರಿಸಬೇಕು ಎನ್ನುತ್ತಾರೆ ಅವರು. ಈ ಸಂದರ್ಭದಲ್ಲಿ ರಿಯಾಯ್ತಿ ದರಗಳಲ್ಲಿ ರಷ್ಯಾದಿಂದ ತೈಲ ಕೊಳ್ಳುವುದರಿಂದ ಬರುತ್ತಿರುವ ಲಾಭ ಎಷ್ಟು ಮತ್ತು ಅಮೆರಿಕದ ರಫ್ತು ಸಮಸ್ಯೆಯಿಂದ ಆಗುತ್ತಿರುವ ನಷ್ಟ ಎಷ್ಟು ಎಂಬುದನ್ನು ಲೆಕ್ಕಹಾಕಿ ಯಾವುದು ಭಾರತಕ್ಕೆ ಹೆಚ್ಚು ಅನುಕೂಲಕರ ಎಂಬುದನ್ನು ಸರ್ಕಾರ ನಿರ್ಧರಿಸಬೇಕು ಎಂದು ಆರ್ಥಿಕ ತಜ್ಞ ರಘುರಾಮ ರಾಜನ್ ಸಲಹೆ ನೀಡಿದ್ದಾರೆ. ಅಮೆರಿಕದ ಜೊತೆ ಮಾತುಕತೆ ಮುಂದುವರಿಸಿ ಪರಿಹಾರ ಕಂಡುಕೊಳ್ಳಬೇಕು. ಸವಾಲು ಹಾಕುವುದರಿಂದ ಪ್ರಯೋಜನ ಇಲ್ಲ ಎಂದು ಅವರು ಹೇಳಿದ್ದಾರೆ.

” ವಿವಿಧ ಬಣ್ಣಗಳ ದೊಡ್ಡ ದೊಡ್ಡ ಹಾಸು ಕಲ್ಲು, ನಯಗೊಳಿಸಿದ ಕಟ್ಟು ಕಲ್ಲುಗಳು ಹೊರ ದೇಶಗಳಲ್ಲಿ ಜನಪ್ರಿಯ.ಅಮೃತ ಶಿಲೆ, ಕೆಂಪು ಮತ್ತು ನೀಲಿ ಹಾಗೂ ಚಾಮರಾಜನಗರ ಪ್ರದೇಶದ ಕಪ್ಪು ಬಣ್ಣದ ಕಲ್ಲಿಗೆ ಅಮೆರಿಕ ಅಷ್ಟೇ ಅಲ್ಲ ಯೂರೋಪಿನಲ್ಲೂ ಬೇಡಿಕೆ ಇದೆ. ವರ್ಷಕ್ಕೆ ಕನಿಷ್ಠ ೧೦,೦೦೦ ಕೋಟಿ ರೂ. ಮೌಲ್ಯದ ಕಲ್ಲು ರಫ್ತಾಗುತ್ತದೆ. ಟ್ರಂಪ್ ಸುಂಕದಿಂದಾಗಿ ಹಠಾತ್ತನೆ ಬೇಡಿಕೆ ತಗ್ಗಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲೆ ಅಷ್ಟೇ ಅಲ್ಲದೆ, ಕಲಬುರಗಿ,ಬೀದರ್ , ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲೂ ಕಲ್ಲು ತೆಗೆಯುವ ಕೆಲಸ ನಿಲ್ಲುವ ಹಂತಕ್ಕೆ ಬಂದಿದೆ. ಸಾವಿರಾರು ಜನರು ಉದ್ಯೋಗ  ಕಳೆದುಕೊಳ್ಳುವ ಸೂಚನೆ ಕಾಣುತ್ತಿದೆ. ಮಾರಾಟದ ಪರ್ಯಾಯ ಮಾರ್ಗಗಳನ್ನು ಹುಡುಕುವವರೆಗೆ ಅನಿಶ್ಚಿತತೆ ಮುಂದುವರಿಯಲಿದೆ”

-ಡಿ.ವಿ.ರಾಜಶೇಖರ

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

42 mins ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

48 mins ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

57 mins ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

10 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

11 hours ago