ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಬೇರೆ ಬೇರೆ ಕಾರಣಗಳಿಗಾಗಿ ಮತ್ತೆ ಮತ್ತೆ ಸುದ್ದಿಯಲ್ಲಿದೆ. ಸೆನ್ಸಾರ್ ಮಂಡಳಿ ಮರುನಾಮಕರಣವಾಗಿ, ಈಗ ಪ್ರಮಾಣೀಕರಣ ಮಂಡಳಿ ಎಂದಾಗಿದೆ. ಆದರೆ ಅದನ್ನು ಸೆನ್ಸಾರ್ ಎಂದು ಕರೆಯುವುದನ್ನು ಉದ್ಯಮವಾಗಲಿ, ಮಾಧ್ಯಮವಾಗಲಿ ಬಿಟ್ಟಿಲ್ಲ. ಸಿನಿಮಾ ಸಂಬಂಧಪಟ್ಟ ಪ್ರಮಾಣೀಕರಣದ ವಿಷಯ ಬಂದಾಗಲೆಲ್ಲ ಅದು ಸೆನ್ಸಾರ್ ಎಂದೇ ಸುದ್ದಿಯಾಗುತ್ತಿರುತ್ತದೆ.
ಒಂದೆರಡು ತಿಂಗಳುಗಳ ಹಿಂದೆ ಮುಂಬೈಯಲ್ಲಿ ತಮಿಳು ಚಿತ್ರವೊಂದರ ಹಿಂದಿ ಡಬ್ಬಿಂಗ್ ಅವತರಣಿಕೆಯ ಪ್ರಮಾಣಪತ್ರವನ್ನು ಪಡೆಯಲು ನಟ, ನಿರ್ಮಾಪಕರೊಬ್ಬರು ಆರು ಲಕ್ಷರೂ.ಗಳ ಲಂಚ ನೀಡಿದ್ದನ್ನು ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು, ಅದು ಭಾರೀ ಸುದ್ದಿಯಾಗಿತ್ತು. ಮಾತ್ರವಲ್ಲ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತಾಯಿತು.
ಯಾವುದೇ ಭಾಷೆಯ ಚಿತ್ರವನ್ನು ಬೇರೆ ಭಾಷೆಗೆ ಡಬ್ ಮಾಡಿದ ಸಂದರ್ಭದಲ್ಲಿ ಅದು ಪ್ರಮಾಣಪತ್ರ ಪಡೆದ ಮೂಲ ಕೇಂದ್ರದಲ್ಲೇ ಅದರ ಡಬ್ಬಿಂಗ್ ಅವತರಣಿಕೆಗೂ ಪ್ರಮಾಣಪತ್ರ ಪಡೆಯಬೇಕು ಎನ್ನುವ ನಿಯಮ ಇತ್ತು. ಆದರೆ ಅದೇಕೋ ಏನೋ, ಯಾವುದೇ ಭಾಷೆಯ ಹಿಂದಿ ಅವತರಣಿಕೆಗೆ ಮಾತ್ರ ಮುಂಬೈ ಪ್ರಾದೇಶಿಕ ಕಚೇರಿಯಲ್ಲಿ ಪ್ರಮಾಣಪತ್ರ ಪಡೆಯಬೇಕು ಎನ್ನುವ ತಿದ್ದುಪಡಿ ಬಂತು!
ಮೇಲೆ ಹೇಳಿದ ತಮಿಳು ಚಿತ್ರದ ನಿರ್ಮಾಪಕರು, ಅದರ ಹಿಂದಿ ಅವತರಣಿಕೆಯ ಪ್ರಮಾಣಪತ್ರ ಪಡೆಯುವ ಮೊದಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿ, ನಂತರ ಅದಕ್ಕೆ ಪ್ರಮಾಣಪತ್ರ ಪಡೆಯಲು ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿದ್ದಿರಬೇಕು. ನಿರ್ಮಾಪಕರ ಇಂತಹ ತುರ್ತುಗಳ ಉಪಯೋಗ ಪಡೆಯಲು ಅಧಿಕಾರಿಗಳು ಮತ್ತು ಅವರ ಮಧ್ಯವರ್ತಿಗಳು ತುದಿಗಾಲಲ್ಲಿ ನಿಂತಿರುತ್ತಾರೆನ್ನಿ.
ಮುಂಬೈ ಪ್ರಸಂಗದಲ್ಲಿ ಆದದ್ದೂ ಅದೇ ಇರಬೇಕು. ಅದಾದ ಒಂದೆರಡು ತಿಂಗಳಲ್ಲಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಸಂಗವೊಂದು ಸುದ್ದಿಯಾಯಿತು. ಅಲ್ಲಿನ ಅಧಿಕಾರಿ ಹದಿನೈದು ಸಾವಿರ ರೂ.ಗಳ ಬೇಡಿಕೆ ಇಟ್ಟದ್ದಾಗಿಯೂ, ಕೊನೆಗೆ ಹನ್ನೆರಡು ಸಾವಿರ ರೂ. ನಿಗದಿಯಾದದ್ದಾಗಿಯೂ, ಸಂಬಂಧಪಟ್ಟ ನಿರ್ಮಾಪಕ/ನಿರ್ದೇಶಕರು ಸಿಬಿಐಗೆ ದೂರು ನೀಡಿ, ಅಧಿಕಾರಿಯನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದದ್ದಾಗಿಯೂ ನಿರ್ಮಾಪಕರು ತಮ್ಮ ಸಾಮಾಜಿಕ ತಾಣದ ಮೂಲಕ ಹೇಳಿದರೆ, ಸಿಬಿಐ ಅಧಿಕೃತವಾಗಿ ಅದರ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು.
ಚಿತ್ರೋದ್ಯಮದ ಮಂದಿಯಲ್ಲಿ ಬಹುತೇಕ ಮಂದಿ, ಈ ಅಧಿಕಾರಿಯ ಕುರಿತಂತೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಈ ಜುಜುಬಿ ಮೊತ್ತ ಕೇಳುತ್ತಾರೆಯೇ ಎನ್ನುವುದು ಅವರಲ್ಲಿ ಕೆಲವರ ಪ್ರಶ್ನೆ. ನಿರ್ಮಾಪಕರಿಗೆ ತುರ್ತು ಇದ್ದಾಗ, ಹಿಂದಿನ ಅಧಿಕಾರಿಗಳು ಲಕ್ಷ ರೂ.ಗಳಲ್ಲಿ ಲಂಚ ಪಡೆದ ಉದಾಹರಣೆಗಳನ್ನು ನೀಡುವವರೂ ಇದ್ದಾರೆ.
ಅದೀಗ ನ್ಯಾಯಾಲಯದಲ್ಲಿರುವ ಪ್ರಕರಣವಾದ್ದರಿಂದ ಅದರ ಕುರಿತಂತೆ ವಿಶ್ಲೇಷಣೆ, ವಿವರಣೆಗಳು ಸರಿಯಲ್ಲ. ಆದರೆ, ಕನ್ನಡ ಚಿತ್ರಗಳ ನಿರ್ದೇಶಕ ನಿರ್ಮಾಪಕರು ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಒಪ್ಪಿಸುವ ಚಿತ್ರಗಳ ಗುಣಮಟ್ಟದ ಕುರಿತಂತೆ ಈ ಪ್ರಸಂಗ ಬೆಳಕು ಚೆಲ್ಲುತ್ತದೆ. ಮೂಲಗಳ ಪ್ರಕಾರ, ಪ್ರಮಾಣಪತ್ರಕ್ಕಾಗಿ ಈ ಚಿತ್ರದ ವೀಕ್ಷಣೆ ಮುಗಿದಾಗ, ಅದರ ಆಂಗ್ಲ ಉಪಶೀರ್ಷಿಕೆಗಳು ಅಲ್ಲಿರುವ ಸಂಭಾಷಣೆಗೆ ಹೊಂದಿಕೊಳ್ಳುತ್ತಿರಲಿಲ್ಲವಂತೆ. ಇತರ ಪ್ರಸಂಗಗಳಲ್ಲಿ, ಚಿತ್ರಿಕೆಗಳಲ್ಲಿನ ಮಾತುಗಳನ್ನು ತೆಗೆದು ಹಾಕುವುದೋ, ಸದ್ದಿಲ್ಲದಾಗಿಸುವುದೋ ಇದ್ದಾಗ ಮಂಡಳಿ ಅದನ್ನು ಸೂಚಿಸಿ, ಅಂತಿಮ ಪ್ರತಿಯನ್ನು ಒಪ್ಪಿಸಲು ಹೇಳುತ್ತದೆ. ಒಪ್ಪಿಸಿದ ನಂತರ ಅದನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡಲಾಗುತ್ತದೆ. ಆದರೆ ಚಿತ್ರವೊಂದರ ಉಪಶೀರ್ಷಿಕೆ ಚಿತ್ರ ದೊಂದಿಗೆ ತಾಳೆ ಆಗುವುದಿಲ್ಲ ಎಂದರೆ, ಅದರ ಸಂಕಲನಕಾರರು, ಡಿಐ ತಂತ್ರಜ್ಞರು, ಅಂತಿಮವಾಗಿ ಅದನ್ನು ನೋಡುವ ನಿರ್ದೇಶಕರು ಇದನ್ನು ಗಮನಿಸದೆ, ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರೇ? ಎನ್ನುವ ಪ್ರಶ್ನೆ ಗಾಂಧಿನಗರದ್ದು. ಅದನ್ನೇ, ಇದು ಕನ್ನಡದ ಬಹುತೇಕ ಚಿತ್ರಗಳ ಇಂದಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿ ಎನ್ನುವವರೂ ಇದ್ದಾರೆ. ಹಾಗಂತ ಅದಕ್ಕೂ, ಪ್ರಮಾಣೀಕರಣ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಲಂಚಪ್ರಕರಣಕ್ಕೂ ಸಂಬಂಧ ಕಲ್ಪಿಸುವುದು ಬೇಕಿಲ್ಲ.
ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ನಡೆದಿರುವ ಪ್ರಸಂಗವೊಂದು, ಈ ಲಂಚ ಪ್ರಕರಣಕ್ಕಿಂತಲೂ ಗುರುತರವಾದದ್ದು. ಅದು ಭಾರತದ ಪ್ರಾಣಿ ಹಿತರಕ್ಷಣಾ ಮಂಡಳಿಯ ಹೆಸರಿನಲ್ಲಿ ನೀಡಲಾಗುತ್ತಿರುವ ನಕಲಿ ನಿರಾಕ್ಷೇಪಣ ಪ್ರಮಾಣಪತ್ರ, ಹಿಂದೆ ಮದರಾಸಿನಲ್ಲಿದ್ದು, ಈಗ ಹರಿಯಾಣದ ನಗರವೊಂದರಲ್ಲಿ ಈ ಮಂಡಳಿಯ ಕಚೇರಿ ಇದೆ. ಯಾವುದೇ ಚಿತ್ರವಾಗಲಿ, ಸರಣಿಯಾಗಲಿ, ಜಾಹೀರಾತಾಗಲಿ, ಅದರಲ್ಲಿ ಪ್ರಾಣಿ, ಪಕ್ಷಿಗಳನ್ನು ಬಳಸುವುದೇ ಆದರೆ, ಚಿತ್ರೀಕರಣ ಪೂರ್ವದಲ್ಲಿ ಅದರ ವಿವರ ನೀಡಿ, 25,000 ರೂ.ಗಳ ಬಾ.ನಾ.ಸುಬ್ರಹ್ಮಣ್ಯ baanaasu@gmail.com ಶುಲ್ಕದೊಂದಿಗೆ ಭಾರತದ ಪ್ರಾಣಿ ಹಿತರಕ್ಷಣಾ ಮಂಡಳಿಗೆ ಅರ್ಜಿ ಸಲ್ಲಿಸಬೇಕು.
ಪ್ರತಿ ವಾರ ನಿಗದಿತ ದಿನದಂದು ಸಭೆ ಸೇರುವ ಇದಕ್ಕೆ ಸಂಬಂಧಪಟ್ಟ ಮಂಡಳಿಯ ಸಮಿತಿ, ಅದನ್ನು ಪರಿಶೀಲಿಸಿ, ಕೆಲವೊಮ್ಮೆ ಚಿತ್ರೀಕರಣ ತಾಣಕ್ಕೆ ತನ್ನ ಪ್ರತಿನಿಧಿಯನ್ನು ಕಳುಹಿಸಿ, ಅವುಗಳ ಸುರಕ್ಷತೆಯನ್ನು ನೋಡಿ, ನಿರಾಕ್ಷೇಪಣ ಪ್ರಮಾಣಪತ್ರವನ್ನು ನಿರ್ಮಾಪಕರಿಗೆ ಹಾಗೂ ಪ್ರಾದೇಶಿಕ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಿಕೊಡುವುದು ವಾಡಿಕೆ. ಚಿತ್ರೀಕರಣ ಪೂರ್ವದಲ್ಲಿ ಅರ್ಜಿ ಸಲ್ಲಿಸದೆ ಇದ್ದರೆ, ಚಿತ್ರೀಕರಣಾ ನಂತರ 30,000 ರೂ.ಗಳ ಶುಲ್ಕ ನೀಡಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಚಿತ್ರದಲ್ಲಿ ಬಳಸಲಾದ ಪ್ರಾಣಿ ಅಥವಾ ಪಕ್ಷಿಗಳು ಪಾಲ್ಗೊಂಡ ಚಿತ್ರಿಕೆಗಳನ್ನು ಕಳುಹಿಸಬೇಕು.
ಇತ್ತೀಚೆಗೆ ನಕಲಿ ನಿರಾಕ್ಷೇಪಣ ಪ್ರಮಾಣಪತ್ರವನ್ನು ನೀಡುತ್ತಿರುವ ಕುರಿತಂತೆ ವರದಿಯಾಗಿದೆ. ಸಾಮಾನ್ಯವಾಗಿ ನಿರ್ಮಾಪಕರ ಪರವಾಗಿ, ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ಮಧ್ಯವರ್ತಿಗಳ ಮೊರೆಹೋಗುತ್ತಾರೆ. ಈ ಕೆಲಸಗಳನ್ನು ಮಾಡುವ ಕೆಲವರು ಕನ್ನಡ ಚಿತ್ರರಂಗದಲ್ಲೂ ಇದ್ದಾರೆ. ನಿರ್ಮಾಪಕರ ಪರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸೂಕ್ತ ಶುಲ್ಕವನ್ನು ತುಂಬಿ, ಸೆನ್ಸಾರ್ ಸ್ಕ್ರಿಪ್ಟ್, ಮತ್ತಿತರ ವಿವರಗಳನ್ನು ಆನ್‌ಲೈನ್ ಮೂಲಕ ಕಳುಹಿಸಿ, ಚಿತ್ರದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವವರೆಗೆ, ನಿರ್ಮಾಪಕರ ಪರವಾಗಿ ಕೆಲಸವನ್ನು ಅವರು ಮಾಡುತ್ತಾರೆ. ಅಂತಹ ಮಧ್ಯವರ್ತಿಯೊಬ್ಬರು ಈ ನಕಲಿ ಪ್ರಕರಣವನ್ನು ಕಂಡುಹಿಡಿದಿದ್ದಾರೆ. ಅವರು ಪ್ರಮಾಣೀಕರಣ ಮಂಡಳಿಗೆ ಅರ್ಜಿ ಸಲ್ಲಿಸುವ ಮೊದಲೇ, ಚಿತ್ರವೊಂದಕ್ಕೆ ಪ್ರಾಣಿ ಹಿತರಕ್ಷಣಾ ಮಂಡಳಿಯ ನಿರಾಕ್ಷೇಪಣ ಪ್ರಮಾಣಪತ್ರಕ್ಕಾಗಿ ಇದೇ ಕೆಲಸ ಮಾಡಿಕೊಡುವ, ಈ ಹಿಂದೆ ತಮ್ಮ ಕೆಲವು ಚಿತ್ರಗಳಿಗೆ ಈ ಪ್ರಮಾಣಪತ್ರ ಒದಗಿಸಿದ ಮಧ್ಯವರ್ತಿಯನ್ನು ಕೋರುತ್ತಾರೆ. ಅವರು ಅಲ್ಲಿ ಸಲ್ಲಿಸಬೇಕಾದ ಶುಲ್ಕ ಮತ್ತು ತಮ್ಮ ಫೀಸನ್ನು ಪಡೆದು, ಕೆಲವು ದಿನಗಳ ನಂತರ ಪ್ರಮಾಣಪತ್ರ ನೀಡುತ್ತಾರೆ. ಆದರೆ ಅವರಿಗೇಕೋ ಅನುಮಾನ ಬಂದು ಪ್ರಶ್ನಿಸಿದಾಗ, ಅದು ನಕಲಿ ಪ್ರಮಾಣಪತ್ರ ಎಂದು ತಿಳಿಯುತ್ತದೆ. ಮುಂದೆ ಆಗಬಹುದಾದ ಅಪಾಯವನ್ನು ಮನಗಂಡ ಆ ವ್ಯಕ್ತಿ, ತಾನು ಎರಡುಚಿತ್ರಗಳಿಗಾಗಿಪಡೆದುಕೊಂಡಹಣವನ್ನು ಹಿಂದಿರುಗಿಸುವುದಾಗಿ ಹೇಳಿ ಬಚಾವಾಗಲು ನೋಡುತ್ತಿದ್ದಾರೆ ಎನ್ನಲಾಗಿದೆ. ಸ್ವಲ್ಪ ಮೊತ್ತವನ್ನು ಹಿಂದಿರುಗಿಸಿದ್ದಾಗಿಯೂ ಹೇಳಲಾಗಿದೆ.
ಆ ವ್ಯಕ್ತಿ ಯಾವುದೇ ಅನುಮಾನ ಬಾರದ ರೀತಿಯಲ್ಲಿ ನಕಲಿ ನಿರಾಕ್ಷೇಪಣ ಪ್ರಮಾಣಪತ್ರವನ್ನು ಸಿದ್ಧಮಾಡಿ, ನಿರ್ಮಾಪಕರಿಗೆ ಮತ್ತು ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಕಳುಹಿಸುತ್ತಾನೆ. ಅದರಲ್ಲಿ ಆತನ ಚಾಕಚಕ್ಯತೆ ಗಮನಾರ್ಹ. ಪ್ರಾಣಿ ಹಿತರಕ್ಷಣಾ ಮಂಡಳಿಯ ಇ-ಮೇಲ್‌ಗೆ ಪರ್ಯಾಯವಾಗಿ ಅಂತಹದೇ ಇ-ಮೇಲ್ ವಿಳಾಸದ ಮೂಲಕ ಎಲ್ಲ ಪತ್ರ ವ್ಯವಹಾರವನ್ನು ಆತ ನಡೆಸುತ್ತಾನೆ. ಅಷ್ಟೇ ಅಲ್ಲ, ಮಂಡಳಿಗೆ ಕಳುಹಿಸುವ ಶುಲ್ಕದ ರಶೀದಿಯನ್ನು ನಕಲಿ ಖಾತೆಯ ಮೂಲಕ ನಿರ್ಮಾಪಕರಿಗೆ ತಲುಪುವಂತೆ ನೋಡಿಕೊಳ್ಳುತ್ತಾನೆ. ಇದರ ಕುರಿತಂತೆ ಸಮಗ್ರ ತನಿಖೆಯ ಮೂಲಕ ಮಾತ್ರ ಈ ಚಾಣಾಕ್ಷ ನಕಲಿ ಶಾಮ, ಈ ತನಕ ಎಷ್ಟು ಚಿತ್ರಗಳಿಗೆ ಇಂತಹ ನಕಲಿ ಪ್ರಮಾಣಪತ್ರಗಳನ್ನು ನೀಡಿದ್ದಾನೆ ಎನ್ನುವುದನ್ನು ತಿಳಿಯಬಹುದು. ಈ ಕುರಿತಂತೆ, ಭಾರತದ ಪ್ರಾಣಿ ಹಿತರಕ್ಷಣಾ ಮಂಡಳಿ ಆಗಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಆಗಲಿ, ವಾಣಿಜ್ಯ ಮಂಡಳಿ ಆಗಲಿ, ದೂರನ್ನು ದಾಖಲಿಸಬೇಕಾಗುತ್ತದೆ. ನಕಲಿ ಪ್ರಮಾಣಪತ್ರ ನೀಡುವ ಈತನ ಕೆಲಸ ನೋಡಿದರೆ, ‘ಶಹಬ್ಬಾಸ್ ಬಡ್ಡಿಮಗನೇ’ ಎಂದರೆ ಆಶ್ಚರ್ಯವಿಲ್ಲ.
ಪ್ರಸಕ್ತ ವರ್ಷದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನಾ ಅಡಿಯಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಜೆನೆರಿಕ್ ಔಷಧಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದ 785 ಜಿಲ್ಲೆಗಳಲ್ಲಿ ಇರುವ ಜೆನೆರಿಕ್ ಕೇಂದ್ರಗಳಲ್ಲಿ ಔಷಧ ಖರೀದಿಸುವ ಮೂಲಕ ಜನರು ಈ ವರ್ಷದಲ್ಲಿ ಸುಮಾರು 5 ಸಾವಿರ ಕೋಟಿ ರೂ. ಉಳಿತಾಯ ಮಾಡಿದ್ದಾರೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…