ಅಂಕಣಗಳು

ದುಬೈ ಹವಾಮಾನ ಸಮಾವೇಶ: ಕೊನೆಗೂ ತೈಲ ದೇಶಗಳ ಮೇಲುಗೈ

ಡಿ.ವಿ.ರಾಜಶೇಖರ

ಕೈಗಾರಿಕಾ ಕ್ರಾಂತಿಯ ನಂತರದ ಆಧುನಿಕ ಬದುಕಿನಲ್ಲಿ ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್, ಗ್ಯಾಸ್‌ನ (ಪಳೆಯುಳಿಕೆ ಇಂಧನಗಳು) ಪಾತ್ರ ಬಹು ದೊಡ್ಡದು. ಇವುಗಳ ಬಳಕೆ ಇಲ್ಲದೆ ಬದುಕಲು ಮತ್ತು ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎನ್ನುವಂಥ ಸ್ಥಿತಿಗೆ ನಾಗರಿಕತೆ ಬಂದು ತಲುಪಿದೆ. ಆದರೆ ಈ ಇಂಧನಗಳು ಸೃಷ್ಟಿಸುವ ಹವಾಮಾನ ವೈಪರೀತ್ಯ ಇಡೀ ಜೀವ ಜಗತ್ತಿಗೇ ಕುತ್ತು ತರಲಿದೆ ಎನ್ನುವುದು ಬೆಳಕಿಗೆ ಬಂದ ನಂತರ ಅವುಗಳಿಲ್ಲದೆ ಬದುಕುಕಟ್ಟಿಕೊಳ್ಳುವಮತ್ತು ಅಭಿವೃದ್ಧಿಸಾಧಿಸುವ ಪ್ರಯತ್ನಗಳು ಹಲವಾರು ದಶಕಗಳಿಂದ ನಡೆಯುತ್ತ ಬಂದಿವೆ.

ಇಂಥ ಪ್ರಯತ್ನದ ಫಲವಾಗಿ ಕಳೆದ 28 ವರ್ಷಗಳಿಂದ ವಿವಿಧ ದೇಶಗಳ ಪ್ರತಿನಿಧಿಗಳು ಪ್ರತಿವರ್ಷ ಒಂದು ಕಡೆ ಸೇರಿ ಚರ್ಚಿಸುತ್ತ ಬಂದಿದ್ದಾರೆ, ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಆ ಯೋಜನೆಗಳನ್ನು ಜಾರಿಗೊಳಿಸಲಾಗದೆ ನಿರಾಶರಾಗಿದ್ದಾರೆ. ಇದೀಗ ತಾನೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ದೇಶದ ದುಬೈನಲ್ಲಿ ಎರಡು ವಾರಗಳ ಕಾಲ ನಡೆದು ಮುಕ್ತಾಯವಾದ ಹವಾಮಾನ ವೈಪರೀತ್ಯ ಕುರಿತ 28ನೇ ಸಮಾವೇಶದಲ್ಲಿ (ಸಿಒಪಿ-28) ಭಾಗವಹಿಸಿದ್ದ ಬಹುಪಾಲು ಪ್ರತಿನಿಧಿಗಳು ಮತ್ತೆ ಅದೇ ನಿರಾಶೆಯ ಭಾವನೆ ತಾಳುವಂತಾಗಿದೆ.

ಭೂಮಿಯ ಮೇಲಿನ ವಾತಾವರಣದ ತಾಪಮಾನ ಏರಿಕೆಗೆ ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್, ಗ್ಯಾಸ್ ಬಹುಮುಖ್ಯ ಕಾರಣ. ಅವುಗಳನ್ನು ಇಂಧನವಾಗಿ ಬಳಸುವುದರಿಂದ ವಾತಾವರಣದಲ್ಲಿ ಉಂಟಾಗುವ ಹಸಿರುಮನೆ ಪರಿಣಾಮ- ವಾಹನ, ಕಾರ್ಖಾನೆಗಳಿಂದ ಹೊರಬರುವ ಕಾರ್ಬನ್ ಡೈಆಕ್ಸೆಡ್ ಹಾಗೂ ಕೃಷಿ ಮತ್ತಿತರ ವಲಯಗಳಿಂದ ಹೊರಸೂಸುವ ಮಿಥೇನ್ ಅನಿಲವು ವಾತಾವರಣ ಸೇರಿ ಉಷ್ಣಾಂಶ ಏರಿಕೆಯಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ. ವಾತಾವರಣದ ಬಿಸಿ ಏರುವುದರಿಂದ ಹಿಮಪರ್ವತಗಳು ಕರಗುತ್ತವೆ, ಸಮುದ್ರ ಮಟ್ಟ ಏರುತ್ತದೆ. ಬರ, ಪ್ರವಾಹ ಉಂಟಾಗುತ್ತದೆ, ಆಹಾರ ಧಾನ್ಯಗಳ ಉತ್ಪಾದನೆ ಕುಸಿಯುತ್ತದೆ. ಇಷ್ಟು ಕೆಟ್ಟ ಪರಿಣಾಮ ಬೀರುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹೇಗಾದರೂ ತಡೆಯಬೇಕು ಎಂಬ ಬಗ್ಗೆ ಚರ್ಚಿಸಲೆಂದೇ ಹವಾಮಾನ ವೈಪರೀತ್ಯ ತಡೆಗೆ ಸಮಾವೇಶಗಳು ನಡೆಯುತ್ತಿವೆ. ವಿಚಿತ್ರ ಎಂದರೆ ಈ ಬಾರಿ ಸಮಾವೇಶ ನಡೆದದ್ದು ತೈಲ ಸಂಪನ್ಮೂಲ ಶ್ರೀಮಂತ ದೇಶದಲ್ಲಿ, ಯುಎಇ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯ ಮುಖ್ಯಸ್ಥರಾದ ಡಾ.ಸುಲ್ತಾನ್ ಅಲ್ ಜಬರ್ ಅವರನ್ನು ಈ ಸಮಾವೇಶದ ಅಧ್ಯಕ್ಷರನ್ನಾಗಿ ಕಳೆದ ವರ್ಷ ಆಯ್ಕೆ ಮಾಡಿದಾಗಲೇ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಸಿರಿವಂತ ದೇಶಗಳು ಅವರ ಆಯ್ಕೆಯನ್ನು ಬೆಂಬಲಿಸಿದ್ದರಿಂದ ಆ ಆಕ್ಷೇಪ ತಣ್ಣಗಾಗಿತ್ತು. ಇದೀಗ ಸಮಾವೇಶದ ಅಂತಿಮ ಘೋಷಣೆ ನೋಡಿದರೆ ಆ ಆಕ್ಷೇಪ ಸರಿಯಿತ್ತು ಎಂದೆನ್ನಿಸದಿರದು.

ವಿಶ್ವದ ನಾನಾ ದೇಶಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮಾವೇಶದಲ್ಲಿ ಮೊದಲ ವಾರವೇ ಆಶ್ಚರ್ಯ ಕಾದಿತ್ತು. ಪಳೆಯುಳಿಕೆ ಇಂಧನ ವಾತಾವರಣದ ಮೇಲೆ ಬೀರುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಮತ್ತು ಪರಿಣಾಮ ತಡೆಗೆ ನಿರ್ದಿಷ್ಟ ಪ್ರಯತ್ನ ಅಗತ್ಯವಿದೆ ಎಂದು ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಡಾ.ಸುಲ್ತಾನ್ ಅಲ್ ಜಬರ್ ಹೇಳಿ ಆಶ್ಚರ್ಯ ಹುಟ್ಟಿಸಿದ್ದರು. ಆದರೆ ಸಮಾವೇಶ ದಿನಕಳೆದಂತೆ ಗುಂಪುಗಳಾಗಿ ಒಡೆಯಿತು. ಬಡದೇಶಗಳ ಪ್ರತಿನಿಧಿಗಳದ್ದು ಒಂದು ಗುಂಪು, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪ್ರತಿನಿಧಿಗಳದ್ದು ಮತ್ತೊಂದು ಗುಂಪು, ಹಾಗೆಯೇ ಅಭಿವೃದ್ಧಿ ಹೊಂದಿದ ದೇಶಗಳದ್ದು ಮಗದೊಂದು ಗುಂಪು ರೂಪುಗೊಂಡಿತು. ಇನ್ನು ತೈಲ ದೇಶಗಳ ಪ್ರತಿನಿಧಿಗಳು ಸುಮ್ಮನಿರುವರೆ ಅವರದೂ ಒಂದು ಗುಂಪಾಯಿತು. ಇದರ ಪರಿಣಾಮವಾಗಿ ತೈಲ ದೇಶಗಳು ಪಳೆಯುಳಿಕೆ ಇಂಧನಗಳ ಉತ್ಪಾದನೆಯನ್ನು ನಿಲ್ಲಿಸಬೇಕೆಂಬ ಕೂಗಿಗೆ ತಡೆಯೊಡ್ಡಿದರು. ಹೀಗಾಗಿ ಸಮಾವೇಶದ ಅಂತಿಮ ಘೋಷಣೆ ತಿದ್ದುಪಡಿಗೆ ಒಳಗಾಯಿತು. ವಿವಿಧ ಹಂತಗಳಲ್ಲಿ ಕ್ರಮೇಣ ಉತ್ಪಾದನೆ ನಿಲ್ಲಿಸಬೇಕೆಂಬ ಸಾಮಾನ್ಯ ಮಾತು ಮಾತ್ರ ಅಂತಿಮ ಘೋಷಣೆಯಲ್ಲಿ ಹೊರಬೀಳಲು ಸಾಧ್ಯವಾಯಿತು. ಅಂದರೆ ಅದು ಸದ್ಯಕ್ಕೆ ಆಗದ ಕೆಲಸ ಎಂಬ ಸಂದೇಶ ಕೊಡುವಂತಾಯಿತು. ಪಳೆಯುಳಿಕೆ ಇಂಧನಗಳ ಉತ್ಪಾದನೆ ನಿಲ್ಲಿಸಬೇಕೆಂಬ ನಿಲುವುಳ್ಳ ಕೆಲವು ದೇಶಗಳ ಪ್ರತಿನಿಧಿಗಳು ಸಮಾವೇಶದಿಂದ ಹೊರನಡೆದರು. ಇವರ ಬಹಿಷ್ಕಾರ ಸಮಾವೇಶದ ಅಂತಿಮ ಘೋಷಣೆಯ ಮೇಲೇನೂ ಪರಿಣಾಮ ಬೀರಲಿಲ್ಲ. ಪಳೆಯುಳಿಕೆ ಇಂಧನಗಳ ಉತ್ಪಾದನೆಯನ್ನು ನಿಲ್ಲಿಸುವುದು ಅನಿವಾರ್ಯ ಎಂಬ ವಿಚಾರ ಇದೇ ಮೊದಲ ಬಾರಿಗೆ ಹವಾಮಾನ ಸಮಾವೇಶದಲ್ಲಿ ಗಟ್ಟಿಯಾಗಿ ಹೊರದೂಡಿದ್ದು ದೊಡ್ಡ ಬೆಳವಣಿಗೆಯೇ ಸರಿ.

ಹವಾಮಾನ ವೈಪರೀತ್ಯದಿಂದ ಆಗಬಹುದಾದ ವಿವಿಧ ರೀತಿಯ ಪರಿಣಾಮಗಳ ಬಗ್ಗೆ ಸಮಾವೇಶ ವಿವರವಾಗಿ ಚರ್ಚಿಸಿದೆ. ಹಮಾಮಾನ ವೈಪರೀತ್ಯದಿಂದ ಹಾನಿಗೊಳಗಾದ ದೇಶಗಳ ನೆರವಿಗೆ ಒಂದು ನಿಧಿ ಸ್ಥಾಪಿಸಬೇಕೆಂಬ ಸಲಹೆ ಹಳೆಯದು. ಆದರೆ ಈ ಬಾರಿ ಆ ಸಲಹೆ ಕಾರ್ಯರೂಪಕ್ಕೆ ಬಂದದ್ದು ಒಂದು ಸಕಾರಾತ್ಮಕ ಬೆಳವಣಿಗೆ. ಈ ನಿಧಿಗೆ ಹಲವು ದೇಶಗಳು ಹಣ ಕೊಡುವ ಭರವಸೆ ಕೊಟ್ಟವು. ಸುಮಾರು 650 ಮಿಲಿಯನ್ ಡಾಲರ್‌ನಷ್ಟು ಹಣದ ಭರವಸೆ ಬಂದಿದೆ. ಇದು ಏನೇನೂ ಸಾಲದು ಎನ್ನುವುದು ನಿಜ. ಆದರೆ ಇದು ಆರಂಭ. ಇದೇ ರೀತಿ ಪಳೆಯುಳಿಕೆ ಇಂಧನಕ್ಕೆ ಪರ್ಯಾಯ ಇಂಧನ ಮೂಲ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ 31 ದೇಶಗಳು 12.6 ಬಿಲಿಯನ್ ಡಾಲರ್‌ಗಳಷ್ಟು ಹಣಕೊಡುವ ಭರವಸೆ ನೀಡಿದ್ದು ಇದು ಕನಿಷ್ಠ ನೂರು ಬಿಲಿಯನ್ ಡಾಲರ್‌ಗೆ ಏರುವ ಸಾಧ್ಯತೆ ಇದೆ. ಮುಖ್ಯವಾಗಿ ಸೋಲಾರ್ ಇಂಧನ ಮತ್ತು ಗಾಳಿ ಇಂಧನ ಉತ್ಪಾದನೆಯನ್ನು ಪರ್ಯಾಯವಾಗಿ ಬಳಸಲು ಸಾಧ್ಯವಿದೆ ಎನ್ನುವ ಅಭಿಪ್ರಾಯಕ್ಕೆ ಹೆಚ್ಚು ಬೆಂಬಲ ವ್ಯಕ್ತವಾಯಿತು.

ವಾತಾವರಣಕ್ಕೆ ಸೇರುತ್ತಿರುವ ಕಾರ್ಬನ್ ಡೈಆಕ್ಸೆಡ್ ಮತ್ತು ಮಿಥೇನ್ ಅನಿಲವನ್ನು ಸಂಗ್ರಹಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆಯೂ ಅಂತಿಮ ಘೋಷಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಲಹೆಯಿಂದ ತೈಲರಾಷ್ಟ್ರಗಳು ಖುಷಿಗೊಂಡಿವೆ. ಅಂಥ ಯೋಜನೆಗಳಲ್ಲಿ ಹಣ ಹೂಡಲು ಸಿದ್ಧವಿವೆ. ಇದರ ಅರ್ಥ ತೈಲ, ಅನಿಲ ಉತ್ಪಾದನೆ ನಿಲ್ಲುವುದಿಲ್ಲ ಎಂದಾಯಿತು.

ವಿವಿಧ ದೇಶಗಳ ಜೊತೆ ತೈಲ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳುವ ರಹಸ್ಯ ಉದ್ದೇಶದಿಂದ ಯುಎಇ ದುಬೈಯಲ್ಲಿ ಈ ಸಮಾವೇಶ ಸಂಘಟಿಸಲಾಗಿದೆ ಎಂಬ ಆರೋಪವನ್ನು ಸರ್ಕಾರ ಅಲ್ಲಗಳೆದರೂ ಪಳೆಯುಳಿಕೆ ಇಂಧನಗಳನ್ನು ಉತ್ಪಾದಿಸುವುದಕ್ಕೆ ಬರಬಹುದಾಗಿದ್ದ ತಡೆಗಳನ್ನು ಈ ಸಮಾವೇಶವನ್ನು ಮುಂದಕ್ಕೆ ಹಾಕುವಲ್ಲಿ ಯಶಸ್ವಿಯಾದಂತಿದೆ. ಕಲ್ಲಿದ್ದಲು ಉತ್ಪಾದನೆಯನ್ನು ಸಂಪೂರ್ಣ ವಾಗಿ ನಿಲ್ಲಿಸಬೇಕೆಂಬ ವಿಚಾರದಲ್ಲಿಯೂ ಮತ್ತೆ ವಿರೋಧ ವ್ಯಕ್ತವಾಗಿದೆ. ಹಿಂದಿನ ಸಮಾವೇಶಗಳಲ್ಲೂ ಈ ವಿಚಾರ ಚರ್ಚಿತವಾಗುತ್ತ ಬಂದಿದೆ. ಆ ದಿಕ್ಕಿನಲ್ಲಿ ಪ್ರಯತ್ನಗಳೂ ಆರಂಭವಾಗಿವೆ. ಹೊಸದಾಗಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನೆ ಘಟಕಗಳ ಸ್ಥಾಪನೆಗೆ ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇದನ್ನು ವಿರೋಧಿಸಿದವು. ವಿದ್ಯುತ್‌ ಶಕ್ತಿ ಉತ್ಪಾದನೆಯಲ್ಲಿ ಕಲ್ಲಿದ್ದಲು ಬಳಕೆ ಹೆಚ್ಚಿದ್ದು ಅದಕ್ಕೆ ತಡೆಯೊಡ್ಡಿದರೆ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎನ್ನುವ ವಾದವನ್ನು ಈ ದೇಶಗಳು ಮುಂದಿಡುತ್ತ ಬಂದಿವೆ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಗೆ ಪೂರ್ಣವಾಗಿ ತಡೆಯೊಡ್ಡಲೂ ಸಮಾವೇಶದಲ್ಲಿ ಸಾಧ್ಯವಾಗಲಿಲ್ಲ.

ಹಲವು ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ವಾತಾವರಣ ಕುರಿತ ಸಮಾವೇಶದಲ್ಲಿ ವಾತಾವರಣದ ಉಷ್ಣಾಂಶ 1.5 ಸೆಲಿಷಿಯಸ್ ಒಳಗೆ ಇರುವಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಲಾಗಿತ್ತು. ಪ್ಯಾರಿಸ್ ಒಪ್ಪಂದ ಆಗಿ ಏಳು ವರ್ಷಗಳು ಕಳೆದರೂ ಆ ಬಗ್ಗೆ ಯಾರಲ್ಲೂ ವಿಶ್ವಾಸವಿಲ್ಲ. ಸದ್ಯ ಜಾಗತಿಕ ತಾಪಮಾನ ಏರುತ್ತಿದ್ದು ವಿಶ್ವದಾದ್ಯಂತ ಪ್ರವಾಹ, ಬರ, ಕಾಳಿಚ್ಚು ಹೆಚ್ಚುತ್ತಿದೆ. ಹಾಗಾಗಿ ಈಗ ಮತ್ತೆ ದುಬೈ ಸಮಾವೇಶದಲ್ಲಿ ಅದೇ ಅಳತೆಗೋಲನ್ನು (1.5 ಸೆ) ಪುನರುಚ್ಛರಿಸಲಾಗಿದೆ. ಸದ್ಯ ಜಾಗತಿಕ ತಾಪಮಾನದ ಮಟ್ಟ 0.18 ಇದ್ದು ಮುಂದಿನ ವರ್ಷಗಳಲ್ಲಿ ಅದು ಹೆಚ್ಚಾಗುತ್ತದೆಂಬ ವೈಜ್ಞಾನಿಕ ಲೆಕ್ಕಾಚಾರದ ಮೇಲೆ ಆ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ವಾತಾವರಣದ ಬಿಸಿ 2 ಸೆಲ್ಸಿಯಸ್‌ ಮೀರಿದರೆ ಪ್ರವಾಹ, ಬರಗಾಲ, ಹಿಮಬಂಡೆಗಳು ಕರಗಿ ಸಮುದ್ರದ ನೀರಿನ ಮಟ್ಟ ಏರುವುದು, ಕಾಳಿಚ್ಚು ಹಾವಳಿ ಮುಂತಾದ ಅನಾಹುತಗಳು ಅನಿಯಂತ್ರಿತವಾಗಿ ಸಂಭವಿಸುವುದು ಖಚಿತ ಎಂದು ಸಮಾವೇಶ ಎಚ್ಚರಿಕೆ ನೀಡಿದೆ. ಮುಖ್ಯವಾಗಿ ಕೃಷಿ ಕ್ಷೇತ್ರದ ಮೇಲೆ ಬಹು ಕೆಟ್ಟ ಪರಿಣಾಮ ಬೀರಿ ಉತ್ಪಾದನೆ ಕುಸಿಯುತ್ತದೆ. ಆಹಾರದ ಅಭಾವ ದೊಡ್ಡ ಸಮಸ್ಯೆಯಾಗಬಹುದು ಎಂಬುದೇ ಆತಂಕ.

ಭೂಮಿ ಮೇಲಿನ ತಾಪಮಾನ ಏರಿಕೆ ಅಪಾಯಕಾರಿ ಎಂಬುದು ಈಗ ಎಲ್ಲರಿಗೆ ತಿಳಿದಿದೆ. ಆದರೆ ತಾಪಮಾನ ಏರುವುದನ್ನು ತಡೆಯುವ ವಿಚಾರದಲ್ಲಿ ಗಂಭೀರ ಯತ್ನಗಳು ನಡೆಯುತ್ತಿಲ್ಲ. ಪ್ರತಿ ವರ್ಷ ನಡೆಯುವ ತಾಪಮಾನ ಏರಿಕೆ ಕುರಿತ ಸಮಾವೇಶಗಳಿಂದ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ. ಮುಂದಿನ ವರ್ಷ ಹವಾಮಾನ ಸಮಾ ವೇಶ ಅಜರ್‌ ಬೈಜಾನ್ ದೇಶದಲ್ಲಿ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

12 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago