ಪಂಜು ಗಂಗೊಳ್ಳಿ
ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಖಿನ್ನತೆ, ಒತ್ತಡ ನಿವಾರಿಸಲು ನೆರವು
ಡಾ. ಎ.ಕೆ.ಕುಂದ್ರಾ ೧೯೮೪ರಲ್ಲಿ ಆಂಧ್ರದ ಬೋಳರಾಮ್ ಜಿಲ್ಲೆಯ ಒಂದು ಶಾಲೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾಗ ಅವರಿಗೆ ಆ ಶಾಲೆಯಲ್ಲಿ ಒಬ್ಬ ವಿಶೇಷಚೇತನ ವಿದ್ಯಾರ್ಥಿ ಇರುವುದು ತಿಳಿದು ಬಂತು. ಆ ವಿದ್ಯಾರ್ಥಿ ಕಲಿಕೆಯ ವಿಚಾರದಲ್ಲಿ ತಪ್ಪಿಸಿಕೊಳ್ಳುವ ಸಲುವಾಗಿ ಉದ್ದೇಶ ಪೂರ್ವಕವಾಗಿ ಹಾಗೆ ಭಿನ್ನವಾಗಿ ವರ್ತಿಸುತ್ತಿದ್ದನೆಂದು ಅವರು ತಿಳಿದಿದ್ದರು. ಆದರೆ, ಬಹಳ ಸುದೀರ್ಘಕಾಲ ಆ ಹುಡುಗನ ವರ್ತನೆಯಲ್ಲಿ ಏನೂ ಬದಲಾವಣೆ ಕಾಣದಿದ್ದಾಗ ಅವನಲ್ಲಿ ಕಲಿಕಾ ದೋಷವಿರುವುದನ್ನು ಅವರು ಪತ್ತೆ ಹಚ್ಚಿದರು.
ಕೆಲವು ತಿಂಗಳ ನಂತರ ಕುಂದ್ರಾ ಯಾವುದೋ ಕಾರಣಕ್ಕೆ ಲಂಡನ್ನಿಗೆ ಹೋದಾಗ ಆ ಹುಡುಗನ ದೋಷದ ಬಗ್ಗೆ ಹೆಚ್ಚು ವಿವರಗಳನ್ನು ಸಂಗ್ರಹಿಸಿದಾಗ ಅದು ಆಟಿಸಂ ಎಂಬುದು ತಿಳಿಯಿತು. ಲಂಡನ್‌ನಿಂದ ವಾಪಸ್ ಬಂದ ನಂತರ ಅವರು ಅದೇ ಶಾಲೆಯಲ್ಲಿ ಆಟಿಸಂ ಮಕ್ಕಳಿಗಾಗಿ ಒಂದು ಕೇಂದ್ರವನ್ನು ತೆರೆದರು. ಅಂದಿನಿಂದ ಡಾ.ಕುಂದ್ರಾ ಆಟಿಸಂನಿಂದ ಬಳಲುವವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ೨೦೧೨ರಲ್ಲಿ ಹೈದರಾಬಾದಿನಲ್ಲಿ ‘ಆಟಿಸಂ ಆಶ್ರಮ್’ ಎಂಬ ಹೆಸರಿನ ಒಂದು ಆಶ್ರಮವನ್ನು ತೆರೆದರು.
ಅದರ ನಂತರ, ಹಲವಾರು ಆಟಿಸಂ ಪೀಡಿತ ಮಕ್ಕಳ ಹೆತ್ತವರ ಬೇಡಿಕೆಯ ಕಾರಣದಿಂದ, ಡಾ. ಕುಂದ್ರಾ ೨೦೨೦ರಲ್ಲಿ ‘ದಿ ಆಟಿಸಂ ಗಾರ್ಡಿಯನ್ ವಿಲೇಜ್’ ಎಂಬ ಹೆಸರಿನ ೧೦ ಎಕರೆ ವಿಸ್ತೀರ್ಣದ ವಸತಿ ಸಂಕುಲವನ್ನು ನಿರ್ಮಿಸಿದರು. ಮೊದಲಿಗೆ ಅವರು ತಮ್ಮ ಉಳಿತಾಯದ ಹಣ ಉಪಯೋಗಿಸಿ ಒಂದು ವಿಶಾಲವಾದ ಜಾಗವನ್ನು ಖರೀದಿಸಿದರು. ನಂತರ ಅದರಲ್ಲಿ ಆಮ್ಲಾ, ಮಾವು ಮಾತ್ತು ಬೇವು ಮೊದಲಾದ ಗಿಡಗಳನ್ನು ತಂದು ನೆಟ್ಟು, ಆ ಪ್ರದೇಶವನ್ನು ಹಸಿರುಗೊಳಿಸಿದರು. ಈಗ ಅಲ್ಲಿ ನೂರಾರು ಮರಗಳಿವೆ. ೮೪ಕ್ಕೂ ಹೆಚ್ಚು ಕಾಟೇಜುಗಳಿವೆ. ಒಂದು ಕಮ್ಯುನಿಟಿ ಹಾಲ್ ಇದೆ. ಒಂದು ಆಸ್ಪತ್ರೆ, ಒಂದು ಕೆಫೆ ಇದೆ. ಹಲವು ವಿದೇಶಗಳಲ್ಲಿ ಆಟಿಸಂ ಪೀಡಿತ ವ್ಯಕ್ತಿಗಳಿಗಾಗಿ ಇಂತಹ ವ್ಯವಸ್ಥೆ ಸಾಮಾನ್ಯವಾದರೂ ಭಾರತದಲ್ಲಿ ಇಂತಹದು ಇದೊಂದೇ. ‘ದಿ ಆಟಿಸಂ ಗಾರ್ಡಿಯನ್ ವಿಲೇಜ್’ನಲ್ಲಿ ಆಟಿಸಂ ಕಾಯಿಲೆ ಇರುವ ವ್ಯಕ್ತಿಗಳು ಹಾಗೂ ಅವರ ಹೆತ್ತವರು ಅಥವಾ ಪೋಷಕರು ಮನೆಗಳನ್ನು ಬಾಡಿಗೆಗೆ ಪಡೆದು ಅಥವಾ ಖರೀದಿಸಿ ವಾಸಿಸಬಹುದು.
ಪ್ರತಿಯೊಂದು ಕಾಟೇಜು ಎರಡು ಕೋಣೆಗಳನ್ನು ಹೊಂದಿದ್ದು, ನಡುವೆ ಅತ್ಯಂತ ಕಡಿಮೆ ಸಂಖ್ಯೆಯ ಗೋಡೆಗಳನ್ನು ಹೊಂದಿದೆ. ಇದರಿಂದ ಆಟಿಸಂ ಪೀಡಿತ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ಅವಕಾಶಲಭಿಸುತ್ತದೆ. ಆಟಿಸಂ ಪೀಡಿತ ಮಕ್ಕಳು ಸಾಕಷ್ಟು ದೈಹಿಕ ಚಟುವಟಿಕೆಗಳನ್ನು ನಡೆಸದಿದ್ದರೆ ಸುಲಭದಲ್ಲಿ ಅವರ ಮೈ ತೂಕ ಹೆಚ್ಚುತ್ತದೆ. ಹಾಗೆ ಮೈ ತೂಕ ಹೆಚ್ಚಿದರೆ ಆಟಿಸಂ ಜೊತೆಗೆ ಇತರ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಈ ಕಾರಣದಿಂದಾಗಿ ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಇಂತಹ ಮಕ್ಕಳು ದೈಹಿಕ ಚಟುವಟಿಕೆಗಳನ್ನು ನಡೆಸಲು ವಿಪುಲ ಅವಕಾಶಗಳನ್ನು ಕಲ್ಪಿಸಲಾಗಿದೆ. ದೈಹಿಕ ಚಟುವಟಿಕೆಗಳನ್ನು ನಡೆಸುವ ಆಟಿಸಂ ಮಕ್ಕಳ ಸುರಕ್ಷತೆಗಾಗಿ ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದಿ ಆಟಿಸಂ ಗಾರ್ಡಿಯನ್ ವಿಲೇಜಲ್ಲಿ ಸುಮಾರು ೩೫ ಕುಟುಂಬಗಳು ವಾಸಿಸುತ್ತಿವೆ.
ಡಾ. ಕುಂದ್ರಾರ ತಜ್ಞರ ತಂಡವು ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನ ಮೇಲ್ವಿಚಾರಣೆಯನ್ನು ನಡೆಸುತ್ತದೆ. ಪ್ರತಿದಿನ ಕಮ್ಯುನಿಟಿ ಹಾಲಿನಲ್ಲಿ ಆಟಿಸಂ ಮಕ್ಕಳಿಗಾಗಿ ಓದು, ಸಂಗೀತ ಮೊದಲಾದ ಸಮೂಹ ಚಟುವಟಿಕೆಗಳನ್ನೂ ನಡೆಸುತ್ತಾರೆ. ಪ್ರತಿಯೊಂದು ಚಟುವಟಿಕೆಯನ್ನೂ ಆಟಿಸಂ ಪೀಡಿತ ಮಕ್ಕಳು ಹಾಗೂ ಅವರ ಹೆತ್ತವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಯೋಜನಕಾರಿಯಾಗುವಂತೆ ರಚಿಸಲಾಗಿದೆ. ಉದಾಹರಣೆಗೆ, ಆಟಿಸಂ ಮಕ್ಕಳು ಮತ್ತು ಅವರ ಹೆತ್ತವರಿಗೆ ಆಗಾಗ್ಗೆ ಡ್ರಮ್ ಬಾರಿಸುವ ಚಟುವಟಿಕೆಯನ್ನು ನಡೆಸಲಾಗುತ್ತದೆ. ಹೀಗೆ ಡ್ರಮ್ ಬಾರಿಸುವುದರಿಂದ ಅವರ ದೇಹದ ನರ, ನಾಡಿ, ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ, ಮನಸ್ಸಿ ನೊಳಗೆ ತುಂಬಿ ಕೊಂಡ ಖಿನ್ನತೆ, ಒತ್ತಡ, ಆತಂಕ ಮೊದಲಾದ ಋಣಾತ್ಮಕ ಭಾವನೆಗಳನ್ನು ಹೊರಹಾಕುವಲ್ಲಿ ನೆರವಾಗುತ್ತದೆ. ಒಂದು ಬಾಸ್ಕೆಟ್ ಬಾಲ್ ಕೋರ್ಟು, ಟೇಬಲ್ ಟೆನ್ನಿಸ್, ಮಿನಿ ಗಾಲ್ಛ್ ಕೋರ್ಸ್ ಮತ್ತು ಬಿಲಿಯರ್ಡ್ಸ್ ಕೂಡ ಇದೆ. ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಒಂದು ಕಿರಾಣಿ ಅಂಗಡಿ ಕೂಡ ಇದ್ದು ಇಲ್ಲಿ ವಾಸಿಸುವ ಕುಟುಂಬಗಳು ತಮ್ಮ ಮನೆಗಳಿಗೆ ಬೇಕಾದ ಗೃಹಬಳಕೆ ವಸ್ತುಗಳನ್ನು ಖರೀದಿಸಬಹುದು. ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಎರಡು ವರ್ಷ ಪ್ರಾಯದ ಮಗುವಿನಿಂದ ಹಿಡಿದು ೪೨ ವರ್ಷ ಪ್ರಾಯದ ಆಟಿಸಂ ಪೀಡಿತರವರೆಗೆ ಆಶ್ರಯ ಪಡೆದಿದ್ದಾರೆ. ಇಲ್ಲಿ ಬೇರೆ ಬೇರೆ ವಯೋಮಾನದ ತಾಯಂದಿರು ಒಂದೆಡೆ ವಾಸಿಸುತ್ತಿರುವುದರಿಂದ ಸಣ್ಣ ಪ್ರಾಯದ ತಾಯಂದಿರು ಹಿರಿಯ ತಾಯಂದಿರಿಂದ ತಮ್ಮ ಆಟಿಸಂ ಪೀಡಿತ ಮಕ್ಕಳ ಲಾಲನೆ ಪಾಲನೆ ಮಾಡುವುದರಲ್ಲಿ ಮಾರ್ಗ ದರ್ಶನ ಪಡೆಯಲು ಅನುಕೂಲವಾಗುತ್ತದೆ. ಕುಟುಂಬಗಳವರು ಇಲ್ಲಿ ಎಷ್ಟು ಸಮಯ ಇಲ್ಲಿರಬೇಕೆಂದು ಬಯಸುತ್ತಾರೋ ಅಷ್ಟು ಸಮಯ ಇಲ್ಲಿರಬಹುದು. ಪಾಲಕರು ಇಲ್ಲದ ಸಮಯದಲ್ಲಿ ಆಡಳಿತ ವರ್ಗವು ಅವರ ಆರೈಕೆಗೆ ತಮ್ಮ ಆರೈಕೆದಾರರನ್ನು ಕಳುಹಿಸಿಕೊಡುತ್ತದೆ.
ತನ್ಮಯ್ ನೋಯ್ಡಾದ ದಂಪತಿಗಳಾದ ಮೋನಾ ಮತ್ತು ಭಾನುರವರ ಮಗ. ಅವನು ಎರಡು ವಯಸ್ಸಿನವನಾಗಿದ್ದಾಗ ಅವನಿಗೆ ಆಟಿಸಂ ಇರುವುದು ಪತ್ತೆಯಾಯಿತು. ಪ್ರಾರಂಭದಲ್ಲಿ ಮೋನಾ ಮತ್ತು ಭಾನು ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದರೆ, ದಿನಗಳೆದಂತೆ ಅವರು ಆ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಯಿತು. ತನ್ಮಯ್‌ಗೆ ಸೂಕ್ತ ಥೆರಪಿ ಹಾಗೂ ವೈದ್ಯಕೀಯ ಆರೈಕೆ ಕೊಡಿಸಲು ಅವರು ಬಹಳ ಹೆಣಗಬೇಕಾಯಿತು. ಏಕೆಂದರೆ ನೋಯ್ಡಾದಲ್ಲಿ ಆಗ ಅಂತಹ ಅನುಕೂಲತೆಗಳು ಇರಲಿಲ್ಲ. ತನ್ಮಯ್‌ನನ್ನು ನೋಡಿಕೊಳ್ಳುವ ಸಲುವಾಗಿ ಮೋನಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಮಧ್ಯೆ, ೨೦೨೦ರಲ್ಲಿ ಭಾನು ತೀರಿಕೊಂಡರು. ಈಗ ಮೋನಾ ಏಕಾಂಗಿಯಾಗಿ ತನ್ಮಯ್ನನ್ನು ನೋಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದರು. ಆಗ ಅವರು ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಒಂದು ಮನೆಯನ್ನು ಖರೀದಿಸಿ, ಅಲ್ಲಿಗೆ ಸ್ಥಳಾಂತರಗೊಂಡರು.
ಮೋನಾ ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ವಾಸಿಸುವ ನಿರ್ಧಾರ ಮಾಡಿದ್ದು ತನ್ಮಯ್ ವಿಚಾರದಲ್ಲಿ ಅವರು ಕೈಗೊಂಡ ಅತ್ಯಂತ ಪ್ರಮುಖವಾದ ನಿರ್ಧಾರ. ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿರುವ ಹೆತ್ತವರೆಲ್ಲ ಒಬ್ಬರಿ ಗೊಬ್ಬರು ನೆರವಾಗುತ್ತ ಒಂದು ಗಟ್ಟಿಯಾದ ಸಹಯೋಗತನವನ್ನು ಬೆಳೆಸಿ ಕೊಂಡಿದ್ದಾರೆ. ಆಟಿಸಂ ಇರುವ ಮಕ್ಕಳು ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಅಳು ವುದು, ಕಿರುಚುವುದು, ಉಗ್ರವಾಗಿ ನಡೆದುಕೊಳ್ಳುವುದು ಮಾಡುತ್ತಾರೆ. ಅಲ್ಲಿ ವಾಸಿಸಲು ಶುರು ಮಾಡಿದ ಕೆಲವೇ ಸಮಯದಲ್ಲಿ ತನ್ಮಯ್‌ನ ಅಂತ ನಡವಳಿಕೆಗಳು ಗಮನಾರ್ಹವಾಗಿ ಕಡಿಮೆಯಾದವು. ಅವನು ಮೋನಾಗಿಂತಲೂ ಮೊದಲೇ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡನು. ಮೊದಲು ಯಾರೊಂದಿಗೂ ಬೆರೆಯದಿರುತ್ತಿದ್ದ ಅವನು ಅಲ್ಲಿ ಬಹಳ ಖುಷಿ ಯಿಂದ ಇತರ ಮಕ್ಕಳ ಮನೆಗೆ ಹೋಗಿ ಬರಲು ಪ್ರಾರಂಭಿಸಿದನು. ಅವನೇ ತನ್ನ ಸ್ನಾನ ಮುಗಿಸುತ್ತಾನೆ. ತನ್ನ ಬಟ್ಟೆಗಳನ್ನು ತಾನೇ ಆರಿಸಿಕೊಳ್ಳುತ್ತಾನೆ. ಚಹ ಮಾಡಿಕೊಳ್ಳುತ್ತಾನೆ. ಹಾಗೂ ಮನೆಯ ಇತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾನೆ.
ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನ ನಿಯಮದಂತೆ ಪ್ರತಿದಿನ ಬೆಳಿಗ್ಗೆ ೯ರಿಂದ ಸಂಜೆ ಮೂರರ ತನಕ ತರಬೇತಿ ಕೇಂದ್ರದಲ್ಲಿದ್ದು ವಿವಿಧ ಚಟುವಟಿಕೆಗಳನ್ನು ನಡೆಸುತ್ತಾನೆ. ಮನೆಗೆ ಬಂದ ನಂತರ ತುಸು ವಿಶ್ರಾಂತಿ ಪಡೆದು, ನಂತರ ಹಸಿರಿನ ನಡುವೆ ವಾಕಿಂಗ್ ಮಾಡುತ್ತಾನೆ. ರಾತ್ರಿಯ ಊಟದ ನಂತರ ೯.೩೦ಕ್ಕೆ ನಿದ್ದೆಗೆ ಹೋಗುತ್ತಾನೆ. ಅವನು ನಿದ್ದೆಗೆ ಹೋದ ನಂತರ ಮೋನಾರಿಗೆ ತಮ್ಮ ಕೆಲಸಗಳನ್ನು ಮಾಡಲು ಬಿಡುವು ಸಿಗುತ್ತದೆ. ಅವರೊಬ್ಬ ಕನ್ಸಲ್ಟಿಂಗ್ ಉದ್ಯೋಗಿ. ಅವರಿಗೆ ತನ್ಮಯ್ ಬಗ್ಗೆ ಮೊದಲಿದ್ದ ಭಯ ಆತಂಕಗಳು ಈಗಿಲ್ಲ. ಎಷ್ಟೆಂದರೆ, ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನ ವಾತಾವರಣ ಮೋನಾ ಮತ್ತು ತನ್ಮಯ್ ಇಬ್ಬರಿಗೂ ಭಾನು ಇಲ್ಲದಿರುವ ಕೊರತೆ ಮತ್ತು ನೋವನ್ನು ಎಷ್ಟೋ ಕಡಿಮೆಯಾಗಿಸಿದೆ.
” ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಎರಡು ವರ್ಷ ಪ್ರಾಯದ ಮಗುವಿನಿಂದ ಹಿಡಿದು ೪೨ ವರ್ಷ ಪ್ರಾಯದ ಆಟಿಸಂ ಪೀಡಿತರವರೆಗೆ ಆಶ್ರಯ ಪಡೆದಿದ್ದಾರೆ. ಇಲ್ಲಿ ಬೇರೆ ಬೇರೆ ವಯೋಮಾನದ ತಾಯಂದಿರು ಒಂದೆಡೆ ವಾಸಿಸುತ್ತಿರುವುದರಿಂದ ತಮ್ಮ ಆಟಿಸಂ ಪೀಡಿತ ಮಕ್ಕಳ ಲಾಲನೆ ಪಾಲನೆ ಮಾಡುವುದರಲ್ಲಿ ಮಾರ್ಗದರ್ಶನ ಪಡೆಯಲು ಅನುಕೂಲವಾಗುತ್ತದೆ.”
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…