ಅಂಕಣಗಳು

ಪ್ಯಾಲೆಸ್ಟೇನ್ ಜನರನ್ನು ಹೊರಹಾಕಲು ಟ್ರಂಪ್ ಸಿಡಿಸಿದ ಗಾಜಾ ಬಾಂಬ್

ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಘೋಷಣೆ ಪಶ್ಚಿಮ ಏಷ್ಯಾ ವಲಯವನ್ನೇ ತಲ್ಲಣಗೊಳಿಸಿದೆ. ಎರಡು ಬಾರಿ ಅಧ್ಯಕ್ಷರಾದರೂ ಟ್ರಂಪ್ ಅವರಲ್ಲಿ ರಿಯಲ್ ಎಸ್ಟೇಟ್ ಆಸಕ್ತಿ ಕಡಿಮೆ ಆದಂತೆ ಕಾಣುತ್ತಿಲ್ಲ. ಸುಮಾರು ೨೫ ಮೈಲಿ ಉದ್ದ, ೬ ಮೈಲಿ ಅಗಲವಿದ್ದು ಸಮುದ್ರಕ್ಕೆ ಚಾಚಿಕೊಂಡಿರುವ ಗಾಜಾ ಪ್ರದೇಶದಿಂದ ಪ್ಯಾಲೆಸ್ಟೇನ್ ಜನರನ್ನು ಖಾಲಿ ಮಾಡಿಸಿ ಅದನ್ನು ಸುಂದರ ಕರಾವಳಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಟ್ರಂಪ್ ಇತ್ತೀಚೆಗೆ ಘೋಷಿಸಿ ಆಘಾತ ಉಂಟು ಮಾಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅವರನ್ನು ಜೊತೆಯಲ್ಲಿ ಕೂರಿಸಿಕೊಂಡು ಮಾಡಿರುವ ಈ ಘೋಷಣೆಗೆ ಪಶ್ಚಿಮ ಏಷ್ಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಈ ಆಲೋಚನೆಯನ್ನು ಮೊದಲು ಸಾರ್ವಜನಿಕರ ಮುಂದೆ ಇಟ್ಟವರು ಟ್ರಂಪ್ ಅವರ ಅಳಿಯ ಕುಶನರ್. ಕೆಲವು ತಿಂಗಳ ಹಿಂದೆ ಅವರು ತಮ್ಮ ಈ ಆಲೋಚನೆಯನ್ನು ಬಹಿರಂಗ ಮಾಡಿದ್ದರು. ಅವರು ಕೂಡ ರಿಯಲ್ ಎಸ್ಟೇಟ್ ಉದ್ಯಮಿ. ಬಹುಶಃ ಟ್ರಂಪ್ ಈ ಆಲೋಚನೆಯಿಂದ ಪ್ರಭಾವಿತರಾದಂತೆ ಕಾಣುತ್ತದೆ. ಗಾಜಾ ಪ್ರದೇಶದಿಂದ ಪ್ಯಾಲೆಸ್ಟೇನ್ ಜನರನ್ನು ಹೊರ ಹಾಕಿದರೆ ಇಸ್ರೇಲ್‌ನ ದೊಡ್ಡ ಸಮಸ್ಯೆಯೊಂದು ನಿವಾರಣೆಯಾದಂತೆ ಆಗುತ್ತದೆ ಎಂದೂ ಟ್ರಂಪ್ ಯೋಚಿಸಿರಬಹುದು. ಗಾಜಾ ಪ್ರದೇಶದ ಭೂಗರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಸಂಪತ್ತಿದೆ. ಇತ್ತಲೂ ಟ್ರಂಪ್ ಕಣ್ಣಿಟ್ಟಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಿತ್ರ ದೇಶ ಇಸ್ರೇಲ್‌ಗೆ ಭದ್ರತೆ ಒದಗಿಸಲು ಒಂದು ನೆಲೆ ಸ್ಥಾಪಿಸುವುದು ಟ್ರಂಪ್ ಉದ್ದೇಶವಾಗಿರುವಂತೆ ಕಾಣುತ್ತದೆ.

ಗಾಜಾ ಪ್ರದೇಶವನ್ನು ಅಮೆರಿಕ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬ ಅವರ ಮಾತಿಗೆ ನೆತಾನ್ಯಹು ದನಿಗೂಡಿಸಿರುವುದನ್ನು ನೋಡಿದರೆ ಇಬ್ಬರೂ ಮಾತನಾಡಿಕೊಂಡೇ ಈ ಘೋಷಣೆ ಮಾಡಿದಂತೆ ಕಾಣುತ್ತಿದೆ. ಗಾಜಾ ಬಹು ಪಾಲು ನಾಶವಾಗಿದೆ. ಮನೆ, ಕುಡಿಯುವ ನೀರು, ವಿದ್ಯುತ್ ಸರಬರಾಜು ಸೇರಿದಂತೆ ಯಾವ ಮೂಲ ಸೌಲಭ್ಯಗಳೂ ಇಲ್ಲವಾಗಿವೆ. ಅಂಥ ಜಾಗಕ್ಕೆ ಪ್ಯಾಲೆಸ್ಟೇನ್ ಜನರು ಹಿಂತಿರುಗಿ ಬದುಕುವುದಾದರೂ ಹೇಗೆ ಎಂದು ಅನುಕಂಪ ತೋರಿರುವ ಟ್ರಂಪ್ ಈ ಸಮಸ್ಯೆಗೆ ಪರಿಹಾರ ಆ ಜನರಿಗೆ ಬೇರೆ ಕಡೆ ನೆಲೆ ಒದಗಿಸುವುದಾಗಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನೆರೆಯ ಜೋರ್ಡಾನ್ ಮತ್ತು ಈಜಿಪ್ಟ್ ದೇಶಗಳು ಪ್ಯಾಲೆಸ್ಟೇನ್ ಜನರಿಗೆ ಪುನರ್‌ವಸತಿ ಕಲ್ಪಿಸಲು ಮನಸ್ಸು ಮಾಡಬೇಕಿದೆ ಎಂದೂ ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ಆ ದೇಶಗಳ ನಾಯಕರ ಜೊತೆ ಮಾತುಕತೆ ನಡೆಸುವುದಾಗಿ ಟ್ರಂಪ್ ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಶಾಶ್ವತವಾಗಿ ನೆಲಸುವಂತೆ ಮಾಡುವ ದೃಷ್ಟಿಯಿಂದ ಗಾಜಾದಿಂದ ಪ್ಯಾಲೆಸ್ಟೇನ್ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಆಲೋಚನೆಯನ್ನು ಮಾಡಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ಆದರೆ ಟ್ರಂಪ್ ಅವರ ಈ ಯೋಜನೆಗೆ ಜೋರ್ಡಾನ್ ಮತ್ತು ಈಜಿಪ್ಟ್ ದೇಶಗಳಷ್ಟೇ ಅಲ್ಲ ಪಶ್ಚಿಮ ಏಷ್ಯಾದ ಎಲ್ಲ ದೇಶಗಳೂ ವಿರೋಧ ವ್ಯಕ್ತಮಾಡಿವೆ. ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆಯಾಗದೆ ಇಸ್ರೇಲ್ ಜೊತೆ ಬಾಂಧವ್ಯ ಸುಧಾರಿಸುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದರೆ ಗಾಜಾದಿಂದ ಪ್ಯಾಲೆಸ್ಟೇನ್ ಜನರನ್ನು ಒಕ್ಕಲೆಬ್ಬಿಸುವ ಟ್ರಂಪ್ ಯತ್ನ ಯಶಸ್ವಿಯಾಗುವುದಿಲ್ಲ ಎಂದು ಇರಾನ್ ಹೇಳಿದೆ. ಒಂದು ಜನಾಂಗವನ್ನು ನಿರ್ಮೂಲನೆ ಮಾಡುವ ಹುನ್ನಾರ ಇದು ಎಂದು ಟ್ರಂಪ್ ವಿರೋಧಿಗಳು ಆರೋಪಿಸಿದ್ದಾರೆ. ಎಲ್ಲರಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮ ನಿಲುವನ್ನು ಈಗ ಸ್ವಲ್ಪ ಬದಲಾಯಿಸಿಕೊಂಡಂತೆ ಕಾಣುತ್ತಿದೆ. ಧ್ವಂಸವಾಗಿರುವ ಗಾಜಾ ಪ್ರದೇಶವನ್ನು ಸ್ವಚ್ಛಮಾಡಲು ಹತ್ತಾರು ವರ್ಷಗಳು ಬೇಕಾಗುತ್ತವೆ. ಗಾಜಾ ಈಗ ನರಕದಂತಿದೆ. ಆ ಪ್ರದೇಶವನ್ನು ವಾಸಿಸಲು ಯೋಗ್ಯವಾಗುವಂತೆ ಮೊದಲು ಮಾಡಬೇಕು. ಅಲ್ಲಿಯವರೆಗೆ ಅಲ್ಲಿ ಜನರು ವಾಸಿಸಲು ಸಾಧ್ಯವಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಪ್ಯಾಲೆಸ್ಟೇನ್ ಜನರನ್ನು ಬೇರೆಡೆಗೆ ಸ್ಥಳಾಂತರಿಸುವುದು ಅನಿವಾರ್ಯ ಎಂದು ಶ್ವೇತಭವನದ ವಕ್ತಾರರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸ್ಪಷ್ಟನೆ ಪ್ರಾಮಾಣಿಕವಾದುದು ಎಂದು ಯಾರೂ ಭಾವಿಸಿಲ್ಲ. ಒಮ್ಮೆ ಜನರನ್ನು ಹೊರಹಾಕಿ ನಂತರ ಅವರನ್ನು ವಾಪಸ್ ಬರದಂತೆ ಮಾಡುವುದು ಸುಲಭ ಎಂದು ಟ್ರಂಪ್ ಭಾವಿಸಿದ್ದಾರೆ. ಪ್ಯಾಲೆಸ್ಟೇನ್ ಪ್ರದೇಶದಲ್ಲಿ ಇಸ್ರೇಲ್ ದೇಶ ರಚನೆಗೆ ವಿಶ್ವಸಂಸ್ಥೆ ಒಪ್ಪಿಗೆ ನೀಡಿದ ೧೯೪೮ರಲ್ಲಿಯೇ ಯಹೂದಿಗಳ ಆಕ್ರಮಣದಿಂದಾಗಿ ಲಕ್ಷಾಂತರ ಪ್ಯಾಲೆಸ್ಟೇನ್ ಜನರು ಬೇರೆ ಬೇರೆ ದೇಶಗಳಿಗೆ ವಲಸೆಹೋದರು. ಜರೂಸಲೆಂನ ಪೂರ್ವಭಾಗ, ಪಶ್ಚಿಮ ದಂಡೆ , ಗೋಲನ್ ಹೈಟ್ಸ್ ಪ್ರದೇಶಗಳನ್ನು ಇಸ್ರೇಲ್ ಅತಿಕ್ರಮಿಸಿ ಅಲ್ಲಿ ಹೊರ ದೇಶಗಳಿಂದ ಬಂದ ಯಹೂದಿಗಳಿಗೆ ನೆಲೆವಾಸ ಕಲ್ಪಿಸಿದೆ. ಅವುಗಳನ್ನು ತೆರವು ಮಾಡಿಸಲು ಇನ್ನೂ ಸಾಧ್ಯವಾಗಿಲ್ಲ. ಗಾಜಾ ಪ್ರದೇಶದ ಗತಿಯೂ ಇದೇ ಆಗುತ್ತದೆ ಎನ್ನುವುದು ಅರಬ್ ದೇಶಗಳ ಅಭಿಪ್ರಾಯ. ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆಯನ್ನು ಇಸ್ರೇಲ್ ವಿರೋಽಸುತ್ತ ಬಂದಿದೆ. ನೆತಾನ್ಯಹು ಅವರಂತೂ ಸುತರಾಂ ಒಪ್ಪುವುದಿಲ್ಲ. ಪ್ಯಾಲೆಸ್ಟೇನ್ ಜನರನ್ನು ಗಾಜಾದಿಂದ ಓಡಿಸಲು ನೆತಾನ್ಯಹು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಈಗ ಅವರ ಪ್ರಯತ್ನಕ್ಕೆ ದೊಡ್ಡ ಬೆಂಬಲ ಸಿಕ್ಕಂತೆ ಆಗಿದೆ. ಆದರೆ ಪ್ಯಾಲೆಸ್ಟೇನ್ ಜನರು ಅಂಥ ಆಲೋಚನೆಯನ್ನು ಒಪ್ಪುವುದಿಲ್ಲ. ಇದು ನಾವು ಹುಟ್ಟಿ ಬೆಳೆದ ಭೂಮಿ, ಅದನ್ನು ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಪ್ಯಾಲೆಸ್ಟೇನ್‌ನ ಸಾಮಾನ್ಯ ಜನರು. ಹಮಾಸ್ ಮತ್ತು ಪ್ಯಾಲೆಸ್ಟೇನ್ ಸಂಘಟನೆ(ಪಿಎಲ್‌ಒ)ಯ ನಾಯಕರು ಟ್ರಂಪ್ ಸಲಹೆಯನ್ನು ಸಹಜವಾಗಿಯೇ ತಿರಸ್ಕರಿಸಿದ್ದಾರೆ.

ಈ ಮಧ್ಯೆ ಈ ಆಲೋಚನೆಯ ಹಿಂದಿನ ಕೆಲವು ವಿವರಗಳು ಕ್ರಮೇಣ ಬಯಲಾಗತೊಡಗಿವೆ. ಗಾಜಾ ಪ್ರದೇಶವನ್ನು ಅಮೆರಿಕ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದ ಟ್ರಂಪ್ ಈಗ ಅಮೆರಿಕದ ಒಬ್ಬ ಸೈನಿಕನೂ ಅಲ್ಲಿಗೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಜನರನ್ನು ಅಲ್ಲಿಂದ ತೆರವು ಮಾಡಿಸುವವರು ಯಾರು? ಅಮೆರಿಕದ ಸೈನಿಕರಲ್ಲ; ಇಸ್ರೇಲ್ ಸೇನೆಯೇ ಆ ಕೆಲಸ ಮಾಡುತ್ತದೆ ಎಂದು ಗೊತ್ತಾಗಿದೆ. ಗಾಜಾ ಪ್ರದೇಶದಿಂದ ಪ್ಯಾಲೆಸ್ಟೇನ್ ಜನರನ್ನು ತೆರವು ಮಾಡಿಸಲು ಅಗತ್ಯ ಯೋಜನೆ ಹಾಗೂ ಸಿದ್ಧತೆ ಮಾಡಿಕೊಳ್ಳಬೇಕೆಂದು ಇಸ್ರೇಲ್‌ನ ರಕ್ಷಣಾ ಸಚಿವರು ಇದೀಗ ಕರೆ ನೀಡಿದ್ದು ಅಮೆರಿಕದ ಯೋಜನೆಯ ವಿವರ ಬಹಿರಂಗವಾಗಿದೆ. ಗಾಜಾ ಪುನರ್ ನಿರ್ಮಾಣ ಕಾರ್ಯಕ್ಕೆ ಅಮೆರಿಕವಾಗಲಿ, ಇಸ್ರೇಲ್ ಆಗಲಿ ಯಾವುದೇ ವೆಚ್ಚ ಮಾಡುವುದಿಲ್ಲ. ಅಂತಾರಾಷ್ಟ್ರೀಯ ರಿಯಲ್‌ಎಸ್ಟೇಟ್ ಡೆವಲಪರ್‌ಗಳಿಗೆ ಈ ಕಾರ್ಯವನ್ನು ಒಪ್ಪಿಸಲಾಗುವುದು. ಶ್ರೀಮಂತ ಐಶಾರಾಮಿ ಜೀವನಕ್ಕೆ ಅಗತ್ಯವಾದ ತಾಣವನ್ನಾಗಿ ಅಭಿವೃದ್ಧಿ ಮಾಡುವುದು ಟ್ರಂಪ್ ಉದ್ದೇಶ. ಆ ಪ್ರದೇಶದ ಉಸ್ತುವಾರಿ ಅಮೆರಿಕದ್ದೇ ಆಗಿರುತ್ತದೆ. ಅಲ್ಲಿಗೆ ಗಾಜಾ ಪ್ರದೇಶ ಪ್ಯಾಲೆಸ್ಟೇನ್ ಜನರ ಕೈತಪ್ಪಿದಂತೆಯೆ. ಪಶ್ಚಿಮ ದಂಡೆ ಪ್ರದೇಶದಲ್ಲಿ ಸಾಕಷ್ಟು ಮಂದಿ ಪ್ಯಾಲೆಸ್ಟೇನ್ ಜನರು ವಾಸಿಸುತ್ತಿದ್ದಾರೆ. ಅದನ್ನು ಈಗಾಗಲೇ ಇಸ್ರೇಲ್ ಅತಿಕ್ರಮಿಸಿಕೊಂಡಿದೆ. ಅಲ್ಲಿಂದಲೂ ಪ್ಯಾಲೆಸ್ಟೇನ್ ಜನರನ್ನು ಒಕ್ಕಲೆಬ್ಬಿಸಲಾಗುವುದು. ಅಲ್ಲಿಗೆ ಪ್ಯಾಲೆಸ್ಟೇನ್ ಜನರ ಹೋರಾಟಕ್ಕೆ ತೆರೆ ಬೀಳುತ್ತದೆ. ಯಾವ ಉದ್ದೇಶದಿಂದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಪ್ಯಾಲೆಸ್ಟೇನ್ ಜನರು ಹೋರಾಡುತ್ತ ಬಂದರೋ ಅದು ಮಣ್ಣುಪಾಲಾಗುತ್ತದೆ. ಇಸ್ರೇಲ್‌ನ ಈ ಆಲೋಚನೆ ಬಹುಶಃ ಕೇವಲ ಕನಸಾಗಿರಲು ಸಾಧ್ಯ. ಅಷ್ಟು ಸುಲಭವಾಗಿ ಪ್ಯಾಲೆಸ್ಟೇನ್ ಮತ್ತು ಪಶ್ಚಿಮ ಏಷ್ಯಾದ ಇತರ ದೇಶಗಳ ನಾಯಕರು ಇಸ್ರೇಲ್‌ನ ಸಂಚಿಗೆ ಬಲಿಯಾಗುವ ಸಾಧ್ಯತೆ ಇಲ್ಲ.

ಗಾಜಾ ವಿಚಾರದಲ್ಲಿ ಅಷ್ಟೇ ಅಲ್ಲ ಇನ್ನೂ ಅನೇಕ ವಿಷಯಗಳಲ್ಲಿ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ವಿವಾದ ಎಬ್ಬಿಸಿವೆ. ಅಕ್ರಮ ವಲಸಿಗರ ವಿಚಾರದಲ್ಲಿ ಅವರು ಕಠಿಣ ನಿಲುವು ತಳೆದಿದ್ದಾರೆ. ಅಕ್ರಮ ವಲಸಿಗರನ್ನು ಹಿಡಿದು ಕೈಗೆ ಬೇಡಿ, ಕಾಲಿಗೆ ಚೈನು ಹಾಕಿ ಅವರವರ ದೇಶಗಳಿಗೆ ವಿಮಾನದಲ್ಲಿ ಸಾಗಹಾಕಲಾಗುತ್ತಿದೆ. ಇದೊಂದು ಅಮಾನವೀಯ ನಡೆ ಎಂದು ಭಾರತದಲ್ಲಿ ವಿರೋಧ ಪಕ್ಷಗಳು ಆರೋಪಿಸಿವೆ.

ಅಧಿಕಾರಕ್ಕೆ ಬಂದ ಎರಡೇ ವಾರಗಳ ಅವಧಿಯಲ್ಲಿ ನೂರಾರು ಆದೇಶಗಳನ್ನು ಟ್ರಂಪ್ ಹೊರಡಿಸಿದ್ದಾರೆ. ಹವಾನ ವೈಪರೀತ್ಯ ಕುರಿತ ಪ್ಯಾರಿಸ್ ಒಪ್ಪಂದದಿಂದ ಹೊರಬರಲಾಗಿದೆ. ದ್ವಿಲಿಂಗಿಗಳನ್ನು ( ಕ್ರೀಡೆಯಲ್ಲಿ) ಮಹಿಳೆಯ ಗುಂಪಿಗೆ ಸೇರಿಸಿರುವುದನ್ನು ರದ್ದು ಮಾಡಲಾಗಿದೆ. ಜನಕಲ್ಯಾಣಕ್ಕಾಗಿ ನೀಡಲಾಗುತ್ತಿದ್ದ ಎಲ್ಲ ನೆರವನ್ನು ನಿಲ್ಲಿಸಲಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಯಿಂದಲೂ ಹೊರಬರಲಾಗಿದೆ. ಫೆಡರಲ್ ಸರ್ಕಾರದ ಉದ್ಯೋಗಿಗಳಿಗೆ ಸ್ವಇಚ್ಛೆಯಿಂದ ನಿವೃತ್ತಿಪಡೆಯಲು ತಿಳಿಸಲಾಗಿದೆ. ನಿವೃತ್ತಿ ಪಡೆಯದಿದ್ದರೆ ಕೆಲಸದಿಂದ ವಜಾಮಾಡುವುದಾಗಿಯೂ ಘೋಷಿಸಲಾಗಿದೆ. ಮೆಕ್ಸಿಕೋ, ಕೆನಡಾ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಲಾಗಿದೆ. ಅಮೆರಿಕದಲ್ಲಿ ಹುಟ್ಟಿದ ಮಕ್ಕಳು ಸಹಜವಾಗಿಯೇ ಅಮೆರಿಕದ ಪ್ರಜೆಯಾಗುವ ಹಿಂದಿನ ನಿಯಮವನ್ನು ರದ್ದು ಮಾಡಲಾಗಿದೆ. (ಈ ಆದೇಶಕ್ಕೆ ಫೆಡರಲ್ ಕೋರ್ಟ್ ಪೀಠಗಳು ತಡೆ ಆಜ್ಞೆ ನೀಡಿವೆ.) ೨೦೨೧ರ ಕ್ಯಾಪಿಟಲ್ ಹಿಲ್ ಗಲಭೆಯಲ್ಲಿ ಬಂಧಿತರಾದ ತಮ್ಮ ಬೆಂಬಲಿಗರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದು ಬಿಡುಗಡೆಮಾಡಲಾಗಿದೆ. ಗರ್ಭಪಾತಕ್ಕೆ ಅವಕಾಶ ನೀಡುವ ಅಥವಾ ನಿರಾಕರಿಸುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಗಲ್ಛ್ ಆಫ್ ಮೆಕ್ಸಿಕೋವನ್ನು ಗಲ್ಛ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಪನಾಮ ಕಾಲುವೆ ನಿರ್ವಹಣೆಯನ್ನು ಅಮೆರಿಕದ ಆಡಳಿತಕ್ಕೆ ಬರುವಂತೆ ಮಾಡಲು ನಿರ್ಧರಿಸಲಾಗಿದೆ. ಗಾಜಾ ಯುದ್ಧಕ್ಕೆ ಸಂಬಂಽಸಿದಂತೆ ಸಾಮೂಹಿಕ ಮಾನವ ಹತ್ಯೆ ಆರೋಪಕ್ಕೆ ಒಳಗಾಗಿರುವ ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಹೊರಡಿಸಿರುವ ಬಂಧನ ವಾರೆಂಟ್ ಜಾರಿಯಾಗದಂತೆ ಮಾಡಲು ಅದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇನ್ನೂ ಹಲವು ಆದೇಶಗಳು ಮುಂದಿನ ದಿನಗಳಲ್ಲಿ ಬರುವ ಸೂಚನೆ ಇದೆ. ಟ್ರಂಪ್ ಆಡಳಿತ ವಿಧಾನದಲ್ಲಿ ಸರ್ವಾಽಕಾರದ ನೆರಳು ದಟ್ಟವಾಗಿ ಕಾಣುತ್ತಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರಗಳು ವಿಶ್ವದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

” ಗಾಜಾ ಪ್ರದೇಶವನ್ನು ಅಮೆರಿಕ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬ ಟ್ರಂಪ್ ಮಾತಿಗೆ ನೆತಾನ್ಯಹು ದನಿಗೂಡಿಸಿರುವುದನ್ನು ನೋಡಿದರೆ ಇಬ್ಬರೂ ಮಾತನಾಡಿಕೊಂಡೇ ಈ ಘೋಷಣೆ ಮಾಡಿದಂತೆ ಕಾಣುತ್ತಿದೆ. ಗಾಜಾ ಬಹುಪಾಲು ನಾಶವಾಗಿದೆ. ಮನೆ, ಕುಡಿಯುವ ನೀರು, ವಿದ್ಯುತ್ ಸರಬರಾಜು ಸೇರಿದಂತೆ ಯಾವ ಮೂಲ ಸೌಲಭ್ಯಗಳೂ ಇಲ್ಲವಾಗಿವೆ. ಅಂಥ ಜಾಗಕ್ಕೆ ಪ್ಯಾಲೆಸ್ಟೇನ್ ಜನರು ಹಿಂತಿರುಗಿ ಬದುಕುವುದಾದರೂ ಹೇಗೆ ಎಂದು ಅನುಕಂಪ  ತೋರಿರುವ ಟ್ರಂಪ್ ಈ ಸಮಸ್ಯೆಗೆ ಪರಿಹಾರ ಆ ಜನರಿಗೆ ಬೇರೆ ಕಡೆ ನೆಲೆ ಒದಗಿಸುವುದಾಗಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.”

 

ಆಂದೋಲನ ಡೆಸ್ಕ್

Recent Posts

ಮೈಸೂರು ಸೇರಿದಂತೆ 4ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮೂನ್ಸೂಚನೆ

ಮೈಸೂರು : ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿ.31ರಿಂದ ಎರಡು ದಿನ ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ…

2 hours ago

ಕೇಂದ್ರ ಬಜೆಟ್‌ | ನಾಳೆ ಆರ್ಥಿಕ ತಜ್ಞರ ಭೇಟಿ ಮಾಡಲಿರುವ ಮೋದಿ

ಹೊಸದಿಲ್ಲಿ : ಮುಂಬರುವ ಕೇಂದ್ರ ಬಜೆಟ್ ಕುರಿತು ಸಂವಾದ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ತಜ್ಞರು…

3 hours ago

ಗಗನಚುಕ್ಕಿ | ಕಾಡಾನೆ ದಾಳಿಗೆ ಸ್ಟೀಲ್‌ ಕಂಬಿಗಳು ನಾಶ

ಮಳವಳ್ಳಿ : ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣಕ್ಕೆ ನುಗ್ಗಿದ್ದ ಕಾಡಾನೆಗಳು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಇಳಿಯುವ ಎರಡು ಕಡೆಗಳಲ್ಲೂ ಹಾಕಲಾಗಿದ್ದ…

3 hours ago

ಮೈಸೂರು | ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ ; ಬೆಟ್ಟಕ್ಕಿಲ್ಲ ಪ್ರವೇಶ?

ಮೈಸೂರು : ಇನ್ನೇನು ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್‌…

3 hours ago

ಕೋಗಿಲು ಕಲಹ | ಅರ್ಹರಿಗೆ ಪರ್ಯಾಯ ಮನೆ ಹಂಚಿಕೆ ; ಸಿಎಂ ಘೋಷಣೆ

ಬೆಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.…

3 hours ago

ಚಾಮರಾಜನಗರ ಹೇಮಂತ್‌ಗೆ ಮಿಸ್ಟರ್‌ ಇಂಡಿಯಾ ಕಿರೀಟ!

ಚಾಮರಾಜನಗರ : ರಾಷ್ಟ್ರ ಮಟ್ಟದ ಪುರುಷರ ಮೈಕಟ್ಟು ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ತಾಲ್ಲೂಕಿನ ಕೋಡಿಮೋಳೆ ಬಸವನಪುರ ಬಿ.ಆರ್.ಹೇಮಂತ್ ಅವರು ಮಿಸ್ಟರ್…

4 hours ago