ನ್ಯಾಯಮೂರ್ತೀಗಳೇ ಕಟ್ಟಾ ಸಂಪ್ರದಾಯವಾದಿಗಳಾಗಿ ಗರ್ಭಪಾತದ ವಿರುದ್ಧ ತೀರ್ಪು ನೀಡಿರುವುದು ಯಾವುದೇ ದೇಶಕ್ಕೆ ಮಾದರಿಯಾಗಲಾರದು!
-ಡಿವಿ ರಾಜಶೇಖರ
ಗರ್ಭಪಾತ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂಬ ಸುಮಾರು ಐದು ದಶಕಗಳ ಹಿಂದಿನ ತೀರ್ಪನ್ನು ರದ್ದು ಮಾಡಿದ ಅಮೆರಿಕದ ಸುಪ್ರೀಂ ಕೋರ್ಟಿನ ಇತ್ತೀಚಿನ ಬಹುಮತದ ತೀರ್ಪಿನ ವಿರುದ್ಧ ಅಮೆರಿಕದ ಮಹಿಳೆಯರು ಮತ್ತೆ ದನಿ ಎತ್ತಿದ್ದಾರೆ. ದೇಶದಾದ್ಯಂತ ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿವೆ. ಬೆರಳೆಣಿಕೆಯಷ್ಟು ಸಂಪ್ರದಾಯವಾದಿ ಮಹಿಳೆಯರು ತೀರ್ಪನ್ನು ಸ್ವಾಗತಿಸಿ ಜಯಘೋಷಗಳೊಂದಿಗೆ ಪ್ರದರ್ಶನ ನಡೆಸುತ್ತಿದ್ದಾರೆ.
ಅಮೆರಿಕದ ಸಂವಿಧಾನ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ನೀಡಿಲ್ಲ, ಹಾಗೆ ನೋಡಿದರೆ ಗರ್ಭಪಾತದ ಪ್ರಸ್ತಾಪವೇ ಸಂವಿಧಾನದಲ್ಲಿ ಇಲ್ಲ. ಗರ್ಭಪಾತ ಕುರಿತ ನಿಯಮಗಳನ್ನು ರೂಪಿಸಲು ರಾಜ್ಯಗಳ ಜನಪ್ರತಿನಿಧಿಗಳು ಸ್ವತಂತ್ರರಾಗಿದ್ದಾರೆ ಎಂದು ಇದೇ ಜೂನ್ ೨೪ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ವಿವಾದ ರಾಜಕೀಯ ಸ್ವರೂಪ ಪಡೆದಿದೆ. ಗರ್ಭಪಾತವನ್ನು ೧೫ ವಾರಗಳಿಗೆ ಸೀಮಿತಗೊಳಿಸಿರುವ ಅಮೆರಿಕದ ಮಿಸ್ಸಿಸಿಪ್ಪಿ ರಾಜ್ಯದ ಕಾನೂನನ್ನು ಪ್ರಶ್ನಿಸಿದ್ದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಮಿಸ್ಸಿಸಿಪ್ಪಿ ರಾಜ್ಯದಲ್ಲಿನ ಕಾನೂನು ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟಿಗೆ ಮೂವರು ಸಂಪ್ರದಾಯವಾದಿಗಳನ್ನು ನೇಮಕ ಮಾಡಿದರು. ಇದರಿಂದಾಗಿ ಸುಪ್ರೀಂ ಕೋರ್ಟ್ನಲ್ಲಿ ಸಂಪ್ರದಾಯವಾದಿ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಯಿತಲ್ಲದೆ ಇಂಥ ತೀರ್ಪು ಬರಲು ಕಾರಣವಾಗಿದೆ. ತೀರ್ಪಿನ ಪರ ಮತ್ತು ವಿರೋಧವಾಗಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಈ ವಿವಾದ ರಾಜಕೀಯ ಮತ್ತು ಧಾರ್ಮಿಕ ಸ್ವರೂಪ ಪಡೆಯುವ ಸಾಧ್ಯತೆ ಕಾಣುತ್ತಿದೆ. ‘ಈ ತೀರ್ಪನ್ನು ದೇವರೇ ನೀಡಿದ್ದಾನೆ. ಐದು ದಶಕಗಳ ಕಾಲದ ತಪ್ಪು ಈಗ ಸರಿಪಡಿಸಿದಂತಾಗಿದೆ’ ಎಂದು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀವ್ರವಾದಿ ಸಿದ್ಧಾಂತದ ದಾರಿ ಅನುಸರಿಸಿ ದುರಂತಮಯ ತಪ್ಪು ಮಾಡಿದೆ. ಆ ಮೂಲಕ ಮಹಿಳೆಯರ ಜೀವವನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಟೀಕಿಸಿದ್ದಾರೆ. ‘ಈ ವಿವಾದ ಈ ತೀರ್ಪಿನೊಂದಿಗೆ ಮುಗಿಯದು. ಗರ್ಭ ಧರಿಸುವುದನ್ನು ತಡೆಯಲು ಬಳಸುತ್ತಿರುವ ಗರ್ಭನಿರೋಧಗಳ ಬಳಕೆ ಮತ್ತು ಸಲಿಂಗ ವಿವಾಹದ ಬಗ್ಗೆಯೂ ಮುಂದೆ ಪ್ರಶ್ನೆ ಏಳಲಿದೆ‘ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಈ ವಿವಾದ ರಾಜಕೀಯ ಸ್ವರೂಪ ಪಡೆದಿರುವುದರಿಂದ ಮುಂಬರುವ ಮಧ್ಯಕಾಲೀನ ಚುನಾವಣೆಗಳಲ್ಲಿ ಮಹತ್ವದ ವಿಷಯವಾಗಿ ಚರ್ಚಿತವಾಗಲಿದೆ. ಈ ತೀರ್ಪು ಬರುತ್ತಿದ್ದಂತೆಯೇ ಅಮೆರಿಕದ ಸಂಪ್ರದಾಯವಾದಿಗಳ ಹಿಡಿತದಲ್ಲಿರುವ ರಾಜ್ಯಗಳು ಈಗಾಗಲೇ ಸಿದ್ಧವಿರುವ ಗರ್ಭಪಾತ ನಿಷೇಧ ಕಾನೂನನ್ನು ಜಾರಿಗೊಳಿಸಲು ಮುಂದಾಗಿವೆ. ಹತ್ತಿರ ಹತ್ತಿರ ೧೩ ರಾಜ್ಯಗಳಲ್ಲಿ ತುರ್ತಾಗಿ ನಿಷೇಧ ಜಾರಿಗೆ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಹತ್ತು ರಾಜ್ಯಗಳಲ್ಲಿ ಇಂಥ ಕಾನೂನು ತರಲು ಮುಂದಾಗಿವೆ ಎಂದೂ ಹೇಳಲಾಗಿದೆ. ಈ ತೀರ್ಪು ಬರುತ್ತಿರುವಂತೆಯೇ ಗರ್ಭಪಾತ ಕ್ಲಿನಿಕ್ಗಳ ಬಾಗಿಲು ಮುಚ್ಚುತ್ತಿವೆ. ಈ ಕಾರಣದಿಂದಾಗಿ ಗರ್ಭಪಾತ ನಿಷೇಧ ಮಾಡದ ರಾಜ್ಯಗಳಿಗೆ ಗರ್ಭಪಾತ ಬಯಸುವವರು ಹೋಗಬೇಕಾಗಿ ಬಂದಿದೆ. ಇದೊಂದು ಸಾಮಾಜಿಕ ಸಮಸ್ಯೆಯಾಗಿ ಬೆಳೆದರೆ ಆಶ್ಚರ್ಯವಿಲ್ಲ.
ಇಂಥದೊಂದು ತೀರ್ಪು ಸುಪ್ರೀಂ ಕೋರ್ಟ್ನಿಂದ ಬರುವ ಬಗ್ಗೆ ಕಳೆದ ತಿಂಗಳಲ್ಲಿಯೇ ಸೂಚನೆ ಸಿಕ್ಕಿತ್ತು. ಸುಪ್ರೀಂ ಕೋರ್ಟಿನ ಸಹ ನ್ಯಾಯಾದೀಶ ಸ್ಯಾಮ್ಯುಯಲ್ ಅಲಿತೋ ಅವರು ಬರಬಹುದಾದ ತೀರ್ಪಿನಲ್ಲಿ ಅಡಕವಾಗಿರಬಹುದಾದ ಅಂಶಗಳ ಬಗ್ಗೆ ಬರೆದ ತಮ್ಮ ಅಭಿಪ್ರಾಯಗಳುಳ್ಳ ಲೇಖನದ ಕರಡು ಕಳೆದ ತಿಂಗಳು ಸೋರಿಕೆಯಾದಾಗಲೇ ಸಾರ್ವಜನಿಕ ವಲಯದಲ್ಲಿ ಕಿಡಿ ಹೊತ್ತಿಕೊಂಡಿತ್ತು. ಇದೀಗ ತೀರ್ಪು ಬಂದಿದ್ದು ಸಾರ್ವಜನಿಕರ ಆತಂಕ ನಿಜವಾಗಿದೆ. ಸುಪ್ರೀಂಕೋರ್ಟಿನ ತೀರ್ಪು ಬರುವ ಮೊದಲೇ ಗರ್ಭಪಾತವನ್ನು ಫೆಡರಲ್ ಸರ್ಕಾರದ ವ್ಯಾಪ್ತಿಗೆ ತರುವ ಮತ್ತು ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ವಿಫಲ ಪ್ರಯತ್ನವೊಂದನ್ನು ಜೋಬಿಡನ್ ಅಧ್ಯಕ್ಷತೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷ ನಡೆಸಿತು. ಪ್ರಜಾಪ್ರತಿನಿಧಿ ಸಭೆಯಲ್ಲಿ ಉದ್ದೇಶಿತ ಮಸೂದೆಗೆ ಅನುಮೋದನೆ ದೊರೆತರೂ ಸೆನೆಟ್ನಲ್ಲಿ ಅನುಮೋದನೆ ದೊರಕಲಿಲ್ಲ. ಫೆಡರಲ್ ಕಾನೂನು ರಚಿಸಲು ಅವಕಾಶ ನೀಡುವುದಿಲ್ಲ ಎಂದು ತೀರ್ಪಿನ ಪರ ಇರುವ ರಿಪಬ್ಲಿಕನ್ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಗರ್ಭಪಾತದ ವಿರುದ್ಧ ಅಮೆರಿಕದ ಎವಾಂಜಲಿಸ್ಟ್ಸ್(ಕ್ರೈಸ್ತ ಧರ್ಮ ಪ್ರಚಾರಕರು) ಮತ್ತು ಪ್ರೊಟೆಸ್ಟೆಂಟ್ ಕ್ರೈಸ್ತರು ಮೊದಲಿನಿಂದಲೂ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ರಿಪಬ್ಲಿಕನ್ನರು ಧರ್ಮಕ್ಕೆ ಹೆಚ್ಚು ಮಹತ್ವ ನೀಡಿದ್ದು ಗರ್ಭಪಾತ ತೀರ್ಪಿನಿಂದ ಪುಳಕಿತರಾಗಿದ್ದಾರೆ. ಈ ತೀರ್ಪಿನಿಂದ ಹೆಚ್ಚು ಆತಂಕಕ್ಕೆ ಒಳಗಾಗಿರುವವರು ಏಷ್ಯಾ ಮತ್ತಿತರ ಕಡೆಗಳಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿರುವವರು. ಮುಂದೇನಾಗುವುದೋ ಎಂಬ ಭಯ ಅವರಲ್ಲಿದೆ.
೧೯೬೯ರಲ್ಲಿ ಡಲ್ಹಾಸ್ನ ನಾರ್ಮಾ ಮಕಾರ್ವೆ ಎಂಬ ೨೨ ವರ್ಷದ ಮಹಿಳೆ ಮೂರನೆಯ ಬಾರಿಗೆ ಗರ್ಭವತಿಯಾಗಿದ್ದಳು. (ಅವಳು ತಾನು ಹೂಡಿದ ಮೊಕದ್ದಮೆಯ ಅರ್ಜಿಗೆ ನಿಜವಾದ ಹೆಸರನ್ನು ಗೋಪ್ಯವಾಗಿರಿಸಿಕೊಳ್ಳುವ ಉದ್ದೇಶದಿಂದ ರೋಇ ಎಂಬ ಕಲ್ಪಿತ ಹೆಸರು ನೀಡಿದ್ದಳು) ತನ್ನ ಮೇಲೆ ನಡೆದ ಅತ್ಯಾಚಾರದ ಪರಿಣಾಮವಾಗಿ ತಾನು ಗರ್ಭವತಿಯಾಗಿದ್ದು ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ಟೆಕ್ಸಾಸ್ ರಾಜ್ಯದ ಡಲ್ಲಾಸ್ ಜಿಲ್ಲಾ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದಳು. ಅದನ್ನು ಜಿಲ್ಲಾ ಕೋರ್ಟ್ ತಿರಸ್ಕರಿಸಿತ್ತು. ಅವಳ ಆ ಪ್ರಕರಣದ ವಿರುದ್ಧ ಕೋರ್ಟಿನಲ್ಲಿ ಸರ್ಕಾರದ ಪರ ವಾದ ಮಾಡಿದವರು ಅಟಾರ್ನಿ ಜನರಲ್ (ಸರ್ಕಾರಿ ವಕೀಲ) ಹೆನ್ರಿ ಮೆನಸ್ಕೊ ವಾಡೆ. ನಂತರ ಜಿಲ್ಲಾ ಕೋರ್ಟಿನ ತೀರ್ಪಿನ ವಿರುದ್ಧ ಅವಳು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದಳು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (೧೯೭೩ರಲ್ಲಿ) ಗರ್ಭಪಾತವನ್ನು ನಿಷೇಧಿಸಲು ಸರ್ಕಾರಕ್ಕೆ ಯಾವುದೆ ಅಧಿಕಾರವಿಲ್ಲ. ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯ ಹಕ್ಕಿಗೆ ಅಮೆರಿಕದ ಸಂವಿಧಾನದ ಸಂಪೂರ್ಣ ರಕ್ಷಣೆ ಇದೆ ಎಂದು ೭-೨ರ ಬಹುಮತದಿಂದ ತೀರ್ಪು ನೀಡಿತು.
ಆ ತೀರ್ಪಿನ ಪ್ರಕಾರ ಮೊದಲ ಮೂರು ತಿಂಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗೆ ಇತ್ತು. ಆರು ತಿಂಗಳವರೆಗಿನ ಗರ್ಭಪಾತಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಆರರಿಂದ ಒಂಬತ್ತು ತಿಂಗಳಲ್ಲಿ ಗರ್ಭಪಾತವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ತೀರ್ಪಿನಿಂದಾಗಿ ಗರ್ಭಪಾತ ಹಕ್ಕಿನ ಮಹಿಳೆಯರ ಹೋರಾಟಕ್ಕೆ ಜಯ ದೊರಕಿದಂತಾಗಿತ್ತು. ಈ ಪ್ರಕರಣ ರೋಇ ವಿರುದ್ಧ ವಾಡೆ ಎಂದೇ ಹೆಸರಾಗಿದೆ.
ಪ್ರಪಂಚ ಬದಲಾಗುತ್ತಲೇ ಇದೆ. ಆದರೆ ಕೆಲವು ಪುರಾತನ ಕಾನೂನುಗಳು ಬದಲಾಗುತ್ತಲೇ ಇಲ್ಲ. ಅಮೆರಿಕದಂಥ ಆಧುನಿಕ ದೇಶದಲ್ಲಿಯೇ ಹೆಣ್ಣು ತನ್ನ ದೇಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರಳಲ್ಲ ಎಂದಾದರೆ ಉಳಿದ ಬಡ ಮತ್ತು ಹಿಂದುಳಿದ ದೇಶಗಳ ಹೆಣ್ಣಿನ ಸ್ಥಿತಿ ಹೇಳತೀರದು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ೨೪ ದೇಶಗಳಲ್ಲಿ ಗರ್ಭಪಾತ ನಿಷೇಧಿಸಲಾಗಿದೆ. ನಿರ್ಬಂಧಗಳಿಂದಾಗಿ ಅಸುರಕ್ಷಿತ ಗರ್ಭಪಾತಗಳು ಹೆಚ್ಚು ನಡೆಯುತ್ತಿವೆ. ಇಂಥ ಗರ್ಭಪಾತಗಳಿಂದಾಗಿ ಪ್ರತಿವರ್ಷ ೪೭ ಸಾವಿರ ಮಹಿಳೆಯರು ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಕೆಲವು ದೇಶಗಳಲ್ಲಿ ಗರ್ಭಪಾತ ಅಪರಾಧವಾಗಿದೆ. ಮಾನವ ಹಕ್ಕು ಪರಿವೀಕ್ಷಣಾ ಸಂಸ್ಥೆಯ ಪ್ರಕಾರ ಗರ್ಭಪಾತವನ್ನು ಕೊಲೆ ಎಂದು ಪರಿಗಣಿಸಲಾದ ದೇಶಗಳೂ ಇವೆ. ಗರ್ಭಪಾತಕ್ಕೆ ಅವಕಾಶ ನೀಡಿರುವ ದೇಶಗಳಲ್ಲಿಯೂ ಅನೇಕ ರೀತಿಯ ನಿರ್ಬಂಧಗಳನ್ನು ಹೇರಲಾಗಿದೆ. ಕೆಲವು ದೇಶಗಳು ನಾಲ್ಕುವಾರಗಳಿಂದ ೨೪ ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡಿವೆ. ಭಾರತದಲ್ಲಿ ಗರ್ಭಪಾತ ಕುರಿತಂತೆಯೇ ೧೯೭೧ರಲ್ಲಿ ಕಾನೂನು ತರಲಾಗಿದೆ. ೨೦ ವಾರಗಳ ವರೆಗೆ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ. ಇದನ್ನು ೨೦೨೧ರಲ್ಲಿ ೨೪ ವಾರಗಳಿಗೆ ಏರಿಸಲಾಗಿದೆ. ಅತ್ಯಾಚಾರ ಮುಂತಾದ ವಿಶೇಷ ಪ್ರಕರಣಗಳಲ್ಲಿ ಇಬ್ಬರು ವೈದ್ಯರು ಅಥವಾ ವೈದ್ಯರ ಸಮಿತಿ ಗರ್ಭಪಾತವನ್ನು ನಿರ್ಧರಿಸುತ್ತದೆ. ಭಾರತದಲ್ಲಿ ಉದಾರವಾದ ಕಾನೂನು ಇದೆ. ೧೮ ವರ್ಷ ತುಂಬಿದ ಯಾವುದೇ ಮಹಿಳೆ ತಾನೇ ಒಪ್ಪಿಗೆ ಪತ್ರ ಕೊಟ್ಟು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ. ೧೮ ವರ್ಷ ತುಂಬದವರು ತಂದೆ ತಾಯಿಯರ ಒಪ್ಪಿಗೆ ಪಡೆದು ಮಾತ್ರ ಗರ್ಭಪಾತ ಮಾಡಿಸಿಕೊಳ್ಳಬಹುದಾಗಿದೆ.
ಗರ್ಭಪಾತ ಕುರಿತಂತೆ ಭಾರತ ಉದಾರವಾದ ಕಾನೂನನ್ನು ಜಾರಿ ಮಾಡಿದೆ. ಭಾರತದ ಮೇಲೆ ಉದಾರವಾದಿ ಅಮೆರಿಕದ ಪ್ರಭಾವ ಸಾಕಷ್ಟಿದೆ. ಆದರೆ ಉದಾರವಾದಿ ಅಮೆರಿಕ ಸಂಪ್ರದಾಯವಾದಿಗಳ ತೆಕ್ಕೆಯಿಂದ ಇನ್ನೂ ಹೊರಬಂದಿಲ್ಲ. ಸುಪ್ರೀಂ ಕೋರ್ಟಿನ ಕೆಲ ನ್ಯಾಯಮೂರ್ತೀಗಳೇ ಕಟ್ಟಾ ಸಂಪ್ರದಾಯವಾದಿಗಳಾಗಿ ಗರ್ಭಪಾತದ ವಿರುದ್ಧ ತೀರ್ಪು ನೀಡಿರುವುದು ಯಾವುದೇ ಆಧುನಿಕ ದೇಶಕ್ಕೆ ಮಾದರಿಯಾಗಲಾರದು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯೂ ಸಂಪ್ರದಾಯವಾದಿಗಳು ಮತ್ತು ಬಲಪಂಥೀಯರು ಮೇಲುಗೈ ಪಡೆಯುತ್ತಿರುವುದು ಸಹಜವಾಗಿ ಆತಂಕ ಹುಟ್ಟಿಸುವ ಸಂಗತಿ. ಅಮೆರಿಕದ ತೀರ್ಪನ್ನೇ ಅನುಸರಿಸಿ ಭಾರತದಲ್ಲಿ ಗರ್ಭಪಾತ ಕಾನೂನು ಬದಲಿಸುವ ಸಾಹಸಕ್ಕೆ ಬಲಪಂಥೀಯರು, ಸಂಪ್ರದಾಯವಾದಿಗಳು ಕೈಹಾಕಬಹುದು. ಇಂಥದ್ದರ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ.