ಮಲ್ಕುಂಡಿ ಮಹದೇವಸ್ವಾಮಿ
ಯುದ್ಧ ಬೇಡ ಬುದ್ಧ ಬೇಕು ಎನ್ನುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ. ಜಗತ್ತಿನಲ್ಲಿ ಜನ ಬುದ್ಧರ ಆಲೋಚನೆಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ. ಮನುಷ್ಯನ ಎಲ್ಲಾ ಮಾನಸಿಕ ವಿಕಲತೆಗಳಿಗೆ ಬುದ್ಧರ ತತ್ವ ಆದರ್ಶಗಳು ದಿವ್ಯ ಔಷಧದಂತೆ ಪ್ರಕಾಶಿಸುತ್ತಿವೆ. ಇದಕ್ಕೆ ಕಾರಣ ತನ್ನನ್ನು ತಾನು ಪರಿಶುದ್ಧಗೊಳಿಸಿಕೊಂಡು, ಜಗತ್ತನ್ನು ಪರಿಶುದ್ಧ ರೀತಿಯಲ್ಲಿ ನೋಡುವ ಸರಳ ಜೀವನ ಮಾರ್ಗವನ್ನು ತಥಾಗತರು ಬೋಧಿಸಿರುವುದೇ ಆಗಿದೆ. ಇಂತಹ ಪರಿಶುದ್ಧ ಸರಳ ಜೀವನ ಮಾರ್ಗವನ್ನೇ ಡಾ.ಅಂಬೇಡ್ಕರ್ ಅವರು ‘ಧಮ್ಮ‘ ಎಂದು ವ್ಯಾಖ್ಯಾನಿಸಿ ವ್ಯಾಪಕಗೊಳಿಸಿದರು.
ಇದನ್ನೂ ಓದಿ: ಹಿಂದು ಧಾರ್ಮಿಕ ಭಾವನೆ ಒಪ್ಪಿ ದಸರಾ ಉದ್ಘಾಟಿಸಲಿ : ಸಂಸದ ಯದುವೀರ್
ಇಂತಹ ಸಾಲುಗಳನ್ನು ನಾನೇಕೆ ಬರೆಯುತ್ತಿದ್ದೇನೆಂದರೆ, ಬುದ್ಧರ ಚಿಂತನೆಗಳನ್ನು ಬಿತ್ತಲು ಒಂದು ವೈಭವಪ್ರೇರಿತ ವಾತಾವರಣ ಬೇಕಿಲ್ಲ. ಸಕಲ ಪರಿ ವ್ಯವಸ್ಥೆಯೂ ಬೇಕಿಲ್ಲ. ಅದು ಸರಳವಾಗಿ ಪ್ರಕೃತಿಯಲ್ಲಿಯೇ ಹರಡುತ್ತದೆ. ಹೆಚ್ಚೆಂದರೆ ನಿಮಗೆ ಕುಳಿತು ಮಾತನಾಡಲು ಒಂದು ಮರದ ನೆರಳು ಸಾಕು. ಅರಳಿಮರವಾದರೆ ಇನ್ನೂ ಸ್ವಾದ. ನೀವು ಗಮನಿಸಿ, ಬುದ್ಧರು ಅರಮನೆಯಿಂದ ಅರಳಿ ಮರದ ಕಡೆಗೆ ನಡೆದು, ಅರಳಿ ಮರದ ನೆರಳಿನಲ್ಲಿಯೇ ತಮ್ಮ ಬದುಕಿನ ಬಹುಭಾಗವನ್ನು ಕಳೆದರು. ಗಿಡ ಮರ ಬಳ್ಳಿಗಳ ಆಶ್ರಯದಲ್ಲಿ ಧಮ್ಮ ಬೋಽಸುತ್ತಾ ಹೊರಟರು. ಹಾಗಾಗಿ ಧಮ್ಮದಲ್ಲಿ ಅರಮನೆಗಿಂತ ಅರಳಿ ಮರಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಬುದ್ಧರ ಭಾವ ಚಿತ್ರಗಳನ್ನು ಗಮನಿಸಿದರೆ ಅವರು ಅರಮನೆಯೊಳಗೆ ಕುಳಿತು ಬೋಽಸಿದ ಚಿತ್ರಗಳನ್ನು ನಾವು ಕಾಣಲಾರೆವು.
ಹಾಗಾಗಿ ತನ್ನೊಳಗೆ ಧಮ್ಮ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಅರಮನೆಗಿಂತ ಅರಳಿಮರ ಹಿತ ಅನಿಸುತ್ತದೆ, ಹಾಗೆ ಉಸಿರಾಟಕ್ಕೂ ಕೂಡ. ಈ ಉಸಿರಾಟವನ್ನೆ ಬುದ್ಧರು ‘ಆನಾಪಾನಸತಿ’ ಎಂದು ಕರೆದದ್ದು. ಈ ಕಾರಣ ನೀವು ಯಾವುದೇ ಅರಳಿ ಮರದ ನೆರಳಿನಲ್ಲಿ ಬುದ್ಧರನ್ನು ಕೂರಿಸಿದರೆ, ಪ್ರಕೃತಿಗೇ ಸಮಾಧಾನ. ಅಲ್ಲೊಂದು ಆರ್ದ್ರ ಶಾಂತಿ ನಿರ್ಮಾಣವಾಗಿ ಬಿಡುತ್ತದೆ. ಏಕೆಂದರೆ ಕಣ್ಣು ಮುಚ್ಚಿ ತನ್ನ ಉಸಿರನ್ನು ಗಮನಿಸುವ ಬುದ್ಧರ ಮುಂದೆ ನಿಂತ ಜನ ಕೂಡ ಕಣ್ಮುಚ್ಚಿ ತಮ್ಮ ಉಸಿರನ್ನು ಗಮನಿಸುತ್ತಾರೆ. ಇದೆ, ಅಂತರಂಗದ ಶುದ್ಧಿಗಾಗಿ ಮನುಷ್ಯ ಮೌನನಾಗುವ ಕ್ರಿಯೆ. ಅಂತಹದೊಂದು ಕ್ರಿಯೆ ಮಾನಸ ಗಂಗೋತ್ರಿಯ ಬುದ್ಧರ ಉದ್ಯಾನದಲ್ಲಿ ಆರಂಭವಾಗಿ, ಇಲ್ಲಿಗೆ ಹತ್ತು ವರ್ಷಗಳು ಪೂರ್ಣಗೊಂಡಿವೆ. ಅಲ್ಲಿ ವಾಯುವಿಹಾರಕ್ಕೆ ಆಗಮಿಸುವ ನೂರಾರು ಜನರು, ಅಂತಹ ಮಾನಸಿಕ ಪರಿಶುದ್ಧ ಕ್ರಿಯೆಗೆ ಸಾಕ್ಷಿಯಾಗಿದ್ದಾರೆ. ೧೨೫ ವರ್ಷಗಳ ಪುರಾತನ ಅರಳಿ ಮರದ ಕೆಳಗಡೆ ಕುಳಿತು ನೆಮ್ಮದಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬುದ್ಧರ ಲೆಕ್ಕದಲ್ಲಿ ಈ ಮೌನ ಮತ್ತು ನೆಮ್ಮದಿಯೇ ಧಮ್ಮದ ಹಾದಿಯಾಗಿದೆ.
ಇಂತಹ ವಾತಾವರಣವನ್ನು ನಿರ್ಮಾಣ ಮಾಡಿದ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇದಕ್ಕಾಗಿ ಸತತವಾಗಿ ಶ್ರಮಿಸಿದ ಚಿಂಬಬ ರವರ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಬೇಕೆಂದು ಅನಿಸುತ್ತದೆ. ಇಂತಹ ವಾತಾವರಣ ಮಾನಸಗಂಗೋತ್ರಿಯಲ್ಲಿ ಸುಮ್ಮನೆ ಪ್ರಾಪ್ತವಾದುದ್ದಲ್ಲ. ನಾನು ಕಣ್ಣಾರೆ ಕಂಡ ಹಾಗೆ; ಚಿಂಬಬ ಎಂದು ನಾಮಂಕಿತರಾದ ಬುದ್ಧಪ್ರಿಯ ಡಾ.ಬಿ.ಬಸವರಾಜುರವರು ೧೩ ವರ್ಷಗಳ ಹಿಂದೆ, ಒಂದು ಹಳೇ ಪೊರಕೆ ಹಿಡಿದು, ಅರಳಿಯ ಮರದ ಸುತ್ತ, ರಾತ್ರಿ ಪೂರ್ಣ ಮದ್ಯಪಾನ ಮತ್ತು ಧೂಮಪಾನಗಳಿಂದ ತುಂಬಿ ಹೋಗುತ್ತಿದ್ದ ತ್ಯಾಜ್ಯಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದರು. ಮುಂಜಾನೆ, ಆಗತಾನೆ ಎದ್ದು ಬಿಎಂ ಆಸ್ಪತ್ರೆಯತ್ತ ಕಾಫಿಗಾಗಿ ಹೊರಟ ನೂರಾರು ಜನ ವಿದ್ಯಾರ್ಥಿಗಳ ದಂಡು ಈ ದೃಶ್ಯವನ್ನು ನೋಡಿ ನಕ್ಕು ಅಪಹಾಸ್ಯ ಮಾಡಿದ್ದುಂಟು. ಮುಸು ಮುಸು ನಕ್ಕಿದ್ದೂ ಉಂಟು. ಹೀಗೆ ಅವರು ಅರಳಿಮರದ ತಳವನ್ನು ಸ್ವಚ್ಛ ಮಾಡುತ್ತಿದ್ದ ಶ್ರದ್ಧೆಯನ್ನು ಗಮನಿಸುತ್ತಿದ್ದ ವಾಯುವಿಹಾರಿಗಳು, ನಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚಾದರು. ನಂತರ ಅಲ್ಲಿನ ಅನೈತಿಕ ಚಟುವಟಿಕೆಗಳೂ ನಿಂತವು.
ಈ ಮಧ್ಯೆ ‘ಆಂದೋಲನ’ ದಿನಪತ್ರಿಕೆಯಲ್ಲಿ ಮಾರ್ಚ್ ೨೧, ೨೦೧೮ರಂದು ಬೋಽವೃಕ್ಷ ತನ್ನ ನೋವನ್ನು ಹೇಳಿಕೊಂಡಂತೆ ‘ಗಂಗೋತ್ರಿ ಮನವಿ‘ ಪ್ರಕಟವಾಗಿತ್ತು. ಈ ಮನವಿಯನ್ನು ಅರಳಿ ಮರದ ಹಿಂದೆ ನಿಂತು ಸ್ವತಃ ಚಿಂಬಬರವರೇ ಮಾಡಿಕೊಂಡಿದ್ದರು. ಈ ವರದಿಯ ಗಹನ ವಿಚಾರದ ಪರಿಣಾಮ, ೨೦೧೩ ರಿಂದ ಆರಂಭವಾದ ಈ ನಿರಂತರ ಕ್ರಿಯೆಯನ್ನು ಮುಂದುವರಿಸಿದ ಚಿಂಬಬ ರವರು ಮೇ ೧೪ ೨೦೧೪ ರಲ್ಲಿ ಪ್ರಥಮ ಬಾರಿಗೆ ಈ ಅರಳಿ ಮರದಡಿ ೨೫ ಬುದ್ಧರ ಪ್ರತಿಮೆಗಳನ್ನು ಕೂರಿಸಿ ಬುದ್ಧ ಪೂರ್ಣಿಮೆಯನ್ನು ಆಚರಿಸುವಂತೆ ಪ್ರೇರೇಪಿಸಿತು.
ಆ ನಂತರ ಏಕಾಂಗಿಯಾಗಿ ಪ್ರತಿ ತಿಂಗಳು ಹುಣ್ಣಿಮೆಗೆ ಬುದ್ಧರ ಸಣ್ಣ ಮೂರ್ತಿಗೆ ದೀಪ ಹಚ್ಚಿ ಪ್ರಾರ್ಥಿಸುತಿದ್ದ ಚಿಂಬಬ ಅವರೊಟ್ಟಿಗೆ ನೂರಾರು ಜನರು ನಿಂತು ಪ್ರಾರ್ಥಿಸಿರುವುದನ್ನು ನಾನು ಗಮನಿಸಿದ್ದೇನೆ.‘ಆಂದೋಲನ’ ಪತ್ರಿಕೆಯ ವರದಿ, ಚಿಂಬಬರ ಪರಿಶ್ರಮ, ಪ್ರಾಮಾಣಿಕ ಶ್ರದ್ಧೆ ಮತ್ತು ಹೃದಯಪೂರ್ವಕ ಮನವಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿ ಪ್ರೊ.ಕೆ.ಎಸ್.ರಂಗಪ್ಪನವರು ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಆರು ಅಡಿ ಎತ್ತರದ ಬುದ್ಧರ ಪ್ರತಿಮೆಯೊಂದಿಗೆ ಬುದ್ಧರ ಉದ್ಯಾನವನ್ನೂ ಕೂಡ ಯೋಜಿಸಿ ನಿರ್ಮಿಸಿದ್ದು ಅವಿಸ್ಮರಣೀಯವಾಗಿದೆ. ಆ ಒಂದು ಸುಂದರ ಉದ್ಯಾನವನವನ್ನು ದಿನಾಂಕ: ೧೯.೦೮.೨೦೧೮ ರಂದು ಉದ್ಘಾಟಿಸಿದ , ಪ್ರೊ.ಕೆ.ಎಸ್.ರಂಗಪ್ಪರವರು ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬುದ್ಧ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದೆಂದು ಭರವಸೆಯನ್ನು ನೀಡಿದ್ದರು. ಅಂದಿನಿಂದ ಆ ಅರಳಿ ಮರದ ಸುತ್ತ ಒಂದು ಸೌಂದರ್ಯ ಬಂದು, ಅದು ಧ್ಯಾನ ಕೇಂದ್ರವಾಗಿ ಮೈದಾಳಿ ನಿಂತಿತು. ಮದ್ಯಪಾನಕ್ಕೆ ನೆಲೆಯಾಗಿದ್ದ ಭೂಮಿಯು ಇಂದು ನೂರಾರು ವಿದ್ಯಾರ್ಥಿಗಳು ಧ್ಯಾನಿಸುವ ತಪೋವನವಾಯಿತು.
ಅಂದಿನಿಂದ ಆ ಅರಳಿಮರದ ಕೆಳಗಡೆ ಬುದ್ಧ ಪೂರ್ಣಿಮೆ ಅತ್ಯಂತ ಅರ್ಥಪೂರ್ಣವಾಗಿ ನೆರವೇರುತ್ತಿದ್ದು, ಅದೊಂದು ಸಾಂಸ್ಕ ತಿಕ ನೆಲೆಯಾಗಿ ರೂಪಿತವಾಗುತ್ತಿದೆ. ನಾಡಿನ ಹೆಸರಾಂತ ಚಿಂತಕರು, ಹೋರಾಟಗಾರರು, ಬಿಕ್ಕುಗಳು, ಉಪಾಸಕರು ಜನಪ್ರತಿನಿಧಿಗಳು ಇಲ್ಲಿ ಭಾಗವಹಿಸುವುದರ ಮುಖಾಂತರ ಅಲ್ಲಿ ವೈಚಾರಿಕ ಚಿಂತನೆಗಳು ನಿರಂತರವಾಗಿ ಸಾಗುತ್ತಾ ಬಂದಿವೆ. ಈ ಕ್ರಿಯೆಗೆ ೨೦೨೫ಕ್ಕೆ ಹತ್ತು ವರ್ಷಗಳು ತುಂಬಿವೆ. ಈ ಸುಂದರ ಉದ್ಯಾನ, ಮತ್ತು ಬುದ್ಧರ ಮೂರ್ತಿಗೂ ಕೂಡ. ದಶಕದ ಈ ಸಂಭ್ರಮದಲ್ಲಿ ಇಂದು ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ‘ಧಮ್ಮ ದೀಪ ಪ್ರತಿಷ್ಠಾನದ ಮತ್ತು ಮೈಸೂರು ವಿವಿ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ಚಿಂಬಬರವರು ಆಯೋಜಿಸಿದ್ದಾರೆ. ಈ ನಿಟ್ಟಿನಲ್ಲಿ ನಾಡಗೀತೆಯಲ್ಲಿ ‘ಬೌದ್ಧರು ಧ್ಯಾನ‘ ಸೇರಿಸಬೇಕೆಂಬ ಚಿಂಬಬರವರ ಸಂಶೋಧನಾತ್ಮಕ ಹೋರಾಟ ಇದೇ ಸ್ಥಳದಿಂದ ಜನ್ಮ ತಾಳಿ, ಕರ್ನಾಟಕ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಮೈಸೂರು ವಿವಿಯ ಮಾನಸ ಗಂಗೋತ್ರಿಯಲ್ಲಿ ಬುದ್ಧರ ಉದ್ಯಾನವನ ಹಾಗೂ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ರಾಷ್ಟ್ರಕವಿ ಕುವೆಂಪುರವರ ಪುತ್ತಳಿಗಳನ್ನು ಒಮ್ಮೆಗೆ ನಿರ್ಮಾಣ ಮಾಡಿ, ವಿಶ್ವವಿದ್ಯಾನಿಲಯದ ಆವರಣದಲ್ಲಿ ವೈಚಾರಿಕ ಅಸ್ಮಿತೆಯಾಗಿ ಬುದ್ಧರನ್ನು ವಿದ್ಯಾರ್ಥಿಗಳ ಮುಂದೆ ಇಟ್ಟಿದ್ದು ಮೈಸೂರು ವಿವಿಯು ತನ್ನ ವೈಚಾರಿಕ ಆಲೋಚನೆಗಳ ಪರಂಪರೆಯನ್ನು ಮುಂದುವರಿಸಿದ ಗೌರವಕ್ಕೆ ಸಾಕ್ಷಿಯಾಗಿದೆ. ಮೂಲ ರಚನೆಯಲ್ಲಿ, ಕುವೆಂಪುರವರು ತಮ್ಮ ನೆನಪಿನ ದೋಣಿ ಆತ್ಮಕಥೆಯಲ್ಲಿ ರಚಿಸಿದಂತೆ, ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಬೌದ್ಧರು ಧ್ಯಾನ ಎಂಬ ಸಾಲುಗಳಿದ್ದು, ಅದನ್ನು ಯಥಾವತ್ತಾಗಿ ಪರಿಷ್ಕರಿಸಿ ಇಂದಿನ ಪರಿಸ್ಥಿತಿಗೆ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನ ಬೌದ್ಧರುಧ್ಯಾನ’ ಎಂದು ಸರ್ಕಾರ ಸ್ವೀಕರಿಸಬೇಕು ಎಂಬ ಸಿಪಿಕೆರವರ ನಿಲುವನ್ನು ಹಾಗೂ ವಿದ್ವಾಂಸರಾದ ಪ್ರೊ.ಅರವಿಂದ ಮಾಲಗತ್ತಿ ಮತ್ತು ಪ್ರೊ.ಕೆ.ಎಸ್.ಭಗವಾನ್ ರವರ ನಿಲುವನ್ನು ಸರ್ಕಾರ ಪರಿಗಣಿಸಲಿ ಎಂಬ ಆಶಯದೊಂದಿಗೆ.
” ಸೆ.೭ರಂದು ಸಂಜೆ ೫ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಮುಖ್ಯದ್ವಾರದಲ್ಲಿರುವ ಕುವೆಂಪು ಪುತ್ತಳಿಯಿಂದ ಬುದ್ಧರ ಉದ್ಯಾನವನದವರೆಗೆ ‘ಧಮ್ಮ ಪಯಣ’ವನ್ನು ಏರ್ಪಡಿಸಲಾಗಿದೆ. ಈ ನಿದರ್ಶನ ನಮ್ಮ ಸುತ್ತಮುತ್ತ ಇರುವ ಅರಳಿ ಮರಗಳನ್ನು ಜ್ಞಾನ ಕೇಂದ್ರಗಳನ್ನಾಗಿಸಲು ಬಹುದೊಡ್ಡ ಪ್ರೇರಣೆಯಾಗಬೇಕು.”
ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…
ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…
ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…
ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…
ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(45)…
ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…