ಬಾ.ನಾ ಸುಬ್ರಹ್ಮಣ್ಯ
ಮೊನ್ನೆ ‘ಕಾಟೇರ’ ಚಿತ್ರದ ಯಶಸ್ಸಿನ ಸಂತೋಷ ಕೂಟ ಇತ್ತು. ಡಿಸೆಂಬರ್ ಕೊನೆಯ ವಾರ ತೆರೆಕಂಡ ಚಿತ್ರ ‘ಕಾಟೇರ’, ಡಿಸೆಂಬರ್ ಕೊನೆಯ ವಾರ ತೆರೆಕಂಡು ಕೆಲವು ಚಿತ್ರಗಳು ಗಳಿಕೆಯಲ್ಲಿ ದಾಖಲೆ ಬರೆದಿವೆ. ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’, ಗಣೇಶ್ ಅಭಿನಯದ ‘ಮುಂಗಾರು ಮಳೆ’, ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ಹಲವು ಚಿತ್ರಗಳು ಈ ಸಾಲಿನಲ್ಲಿವೆ.
ಸಿನಿಮಾ ಚೆನ್ನಾಗಿದ್ದರೆ, ವರ್ಷದ ಕೊನೆಯಲ್ಲಿ ತೆರೆಗೆ ಬಂದ ಚಿತ್ರಗಳು ಯಶಸ್ವಿಯಾಗುವುದು ಗ್ಯಾರಂಟಿ ಎನ್ನುವುದನ್ನು ‘ಕಾಟೇರ’ ಮತ್ತೆ ಶ್ರುತಪಡಿಸಿದೆ. ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿಗೆ ಬಂದ ನಂತರ ಆದ ಬೆಳವಣಿಗೆಗಳು, ಜಮೀನ್ದಾರಿಕೆಯ ಅಹಮಿಕೆ, ಜಾತಿಪದ್ಧತಿ ಸೇರಿದಂತೆ ಆ ದಿನಗಳಲ್ಲಿ ಢಾಳಾಗಿದ್ದ ಸಮಸ್ಯೆಗಳನ್ನು ಇಟ್ಟುಕೊಂಡು ಹೆಣೆದ ಕಥೆ ‘ಕಾಟೇರ’.
ಕಥೆಗೆ ಮೂಲಧಾತು ಒದಗಿಸಿದ ಜಡೇಶ್ ಅವರು ಮೊನ್ನೆ ಹೇಳಿದ್ದು ನಮ್ಮ ನೆಲದ ಕಥೆಯನ್ನು ತೆರೆಗೆ ಅಳವಡಿಸಿದರೆ, ಯಾವುದೇ ಕಾರಣಕ್ಕೂ ಸೋಲಿಲ್ಲ’ ಅಂತ, ಅವರ ಬೆನ್ನಹಿಂದೆಯೇ ಅಂತಹದೊಂದು ಉದಾಹರಣೆ ಇದೆ. 2022ರಲ್ಲಿ ತೆರೆಕಂಡ ‘ಕಾಂತಾರ’ ನಮ್ಮ ನೆಲದ ಕಥೆ. ಆ ಚಿತ್ರದ ಜೈತ್ರಯಾತ್ರೆ, ಗಳಿಕೆ, ಜನಪ್ರೀತಿ ಎಲ್ಲವೂ ಈಗ ಇತಿಹಾಸ, ನೆಲದ ಕಥೆಯನ್ನು ಅಷ್ಟು ಸಮರ್ಥವಾಗಿ ತೆರೆಯ ಮೇಲೆ ತಂದರೆ ಮಾತ್ರ ಇಂತಹ ಗೆಲುವು ಸಾಧ್ಯ.
ಎರಡೂ ನೆಲದ ಕಥೆಗಳೇ. ಅಷ್ಟೇ ಅಲ್ಲ, ಅವೆರಡೂ ಮೊದಲು ತಯಾರಾಗಿರುವುದು ಕನ್ನಡದಲ್ಲಿ. ‘ಕಾಂತಾರ’ ವಿಶ್ವಾದ್ಯಂತ ಕನ್ನಡದಲ್ಲೇ ತೆರೆಕಂಡು ಗೆದ್ದಿತು. ಈಗ ‘ಕಾಟೇರ’ ಕೂಡ ಅದೇ ದಾರಿಯಲ್ಲಿ ಸಾಗಿದೆ. ಹಾಗಂತ ಇತರ ಭಾರತೀಯ ಭಾಷೆಗಳಿಗೆ ಡಬ್ ಆಗುವುದಿಲ್ಲ ಎಂದೇನಿಲ್ಲ. ವ್ಯವಹಾರ ಕುದುರಿದರೆ, ಆಸಕ್ತರು ಬಂದರೆ ಅದಾಗಬಹುದು. ಇವೆರಡೂ ಚಿತ್ರಗಳು ಬಿಡುಗಡೆಯ ವೇಳೆ ವ್ಯವಹಾರಸ್ಥರು ಬಳಸುವ ‘ಪಾನ್ ಇಂಡಿಯಾ’ ಪದವನ್ನು ಬಳಸಿಲ್ಲ ಎನ್ನುವುದು ಗಮನಾರ್ಹ.
‘ಕಾಟೇರ’ ಬಿಡುಗಡೆಗೆ ಮೊದಲು ನಡೆದ ಪತ್ರಿಕಾಗೋಷ್ಠಿಗಳಲ್ಲಿ ದರ್ಶನ್ ಒಂದು ವಿಷಯದಲ್ಲಿ ಸ್ಪಷ್ಟವಾಗಿದ್ದರು. ಅದು, ತಮ್ಮ ಚಿತ್ರ ಕನ್ನಡದ್ದು, ಕನ್ನಡ ನೆಲದ್ದು ಎನ್ನುವುದು. ಹಾಗಾಗಿಯೇ ‘ಪಾನ್ ಇಂಡಿಯಾ ಅವರ ಶಬ್ದಕೋಶದಿಂದ ದೂರ. ಅಷ್ಟಕ್ಕೂ ಪಾನ್ ಇಂಡಿಯಾ ಚಿತ್ರಗಳ ಹೆಸರಿನಲ್ಲಿ ಆಗುವ ಚಿತ್ರಗಳೆಂದರೆ ಯಾವುವು? ಹಿಂದಿಯಲ್ಲೋ, ತೆಲುಗಲ್ಲೋ, ಕನ್ನಡದಲ್ಲೊ ನಿರ್ಮಿಸಿ, ಅದನ್ನು ಇತರ ಭಾರತೀಯ ಭಾಷೆಗಳಿಗೆ ಡಬ್ ಮಾಡಿ, ಬಿಡುಗಡೆ ಮಾಡುವ ಚಿತ್ರಗಳನ್ನು ‘ಪಾನ್ ಇಂಡಿಯಾ’ ಚಿತ್ರಗಳೆಂದು ಆ ಚಿತ್ರಗಳ ನಿರ್ಮಾಪಕರು ಕರೆದರು. ಅದನ್ನೇ ಮಾಧ್ಯಮಗಳೂ ಹೇಳತೊಡಗಿದವು.
ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವಾಗ ಆ ಭಾಷೆ ಯನ್ನು ಮಾತನಾಡುವ ಮಂದಿಯ ಸಂಸ್ಕೃತಿ, ಉಡುಗೆ ತೊಡುಗೆಗಳ ಕುರಿತಂತೆಯೂ ಗಮನ ನೀಡಬೇಕಾಗುತ್ತದೆ. ಮೊನ್ನೆ ದರ್ಶನ್ ಅವರು ಅದನ್ನು ಬೊಟ್ಟು ಮಾಡಿದರು. ರೈತರು ಹೊಲದಲ್ಲಿ ಕೆಲಸ ಮಾಡುವಾಗ ಇರುವ ಉಡುಪು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ. ಕನ್ನಡದಲ್ಲಿ ತಯಾರಾಗುವ ಚಿತ್ರಗಳಲ್ಲಿ ರೈತನಿಗೆ ಪಂಜಾಬಿನ ರೈತನ ಉಡುಪು ಬಳಸುವುದಾಗದು. ಹಾಗಾಗಿಯೇ ‘ಪಾನ್ ಇಂಡಿಯಾ’ ಇಲ್ಲ ಎನ್ನುವುದು ಅವರ ಮಾತು.
ಅದಷ್ಟೇ ಅಲ್ಲ, ‘ಕಾಟೇರ’ ಚಿತ್ರ ಬಿಡುಗಡೆಯ ಮುನ್ನಾ ವಾರ ಎರಡು ಭಾರೀ ಚಿತ್ರಗಳು ತೆರೆಕಂಡಿದ್ದವು. ಹಿಂದಿಯ ‘ಡಂಕಿ ಮತ್ತು ತೆಲುಗಿನ ‘ಸಲಾ’. ಈ ಎರಡೂ ಚಿತ್ರಗಳ ಮುಂದೆ ಬಂದರೆ ತೊಂದರೆ ಆಗುವುದಿಲ್ಲವೇ ಎಂದು, ಪತ್ರಕರ್ತರು ತಮ್ಮ ಆತಂಕ ಪ್ರಕಟಿಸಿದ್ದರು. ಆದರೆ ಹಾಗೇನೂ ಆಗಲಿಲ್ಲ. ಅಷ್ಟೆ ಅಲ್ಲ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನೂ ಕಂಡಿತು. ರಾಕ್‌ಲೈನ್ ನಿರ್ಮಾಣದ ಚಿತ್ರಗಳಲೆಲ್ಲ ಅತ್ಯಧಿಕ ಆರಂಭದಲ್ಲೇ ಮಾಡಿದವು. ಚಿತ್ರಗಳ ಗಳಿಕೆಯ ಕುರಿತಂತೆ ಪ್ರಚಾರ ಮಾಡುವ ಮಂದಿಯೇಗಾಂಧಿನಗರದಲ್ಲಿ ಇದ್ದಂತಿದೆ.
ಹಿಂದಿನ ದಿನಗಳಂತೆ ಪ್ರತಿ ಕಚೇರಿಗೂ ಹೋಗಿಗಳಿಕೆಯನ್ನು ತಿಳಿದುಕೊಳ್ಳುವ ಪ್ರಮೇಯ ಈಗಿಲ್ಲ. ಬುಕ್ ಮೈ ಶೋ ವ್ಯವಸ್ಥೆ ಬಂದ ಮೇಲಂತೂ, ಚಿತ್ರಗಳು ಎಲ್ಲೆಲ್ಲಿ ಬಿಡುಗಡೆ ಆಗಿವೆ, ಅಲ್ಲಿ ಪ್ರವೇಶ ದರ ಎಷ್ಟು, ಎಷ್ಟು ಟಿಕೆಟುಗಳು ಮಾರಾಟ ಆಗಿವೆ ಇವೇ ಮೊದಲಾದ ಲೆಕ್ಕಾಚಾರ ಈಗ ಸುಲಭಸಾಧ್ಯ. ಆಸಕ್ತಿ ಮತ್ತು ಸಂಪರ್ಕಗಳಿದ್ದರೆ, ಮನೆಯಿಂದಲೇ ಮಾಡಲು ಸಾಧ್ಯವಿರುವ ಕೆಲಸ ಇದು. ಆದರೆ ಯಾರಿಗೂ ಅಷ್ಟು ವ್ಯವಧಾನ, ಸಮಯ ಇದ್ದಂತಿಲ್ಲ. ಹಾಗಾಗಿ, ಚಿತ್ರತಂಡದ ಹೆಸರಲ್ಲಿ, ಚಿತ್ರದ ಗಳಿಕೆಯ ಕುರಿತಂತೆ ನಿರ್ಮಾಪಕರೇ ಆಗಬೇಕೆಂದೇನೂ ಇಲ್ಲ, ಅವರ ಬದಲು ಯಾರು ಬೇಕಾದರೂ ಹೇಳಿ ಬರೆಸಿಕೊಳ್ಳುವ ದಿನಗಳಿವು.
‘ಕಾಟೇರ’ ಚಿತ್ರದ್ದೂ ಅಷ್ಟೇ. ರಾಕ್‌ಲೈನ್ ತಮ್ಮ ಹಿಂದಿನ ಮಾತುಗಳನ್ನೇ ಮೊನ್ನೆ ಕೂಡ ಪುನರುಚ್ಚರಿಸಿದರು. ‘ನಾನು ಮೊದಲಿನಿಂದಲೂ, ಚಿತ್ರಕ್ಕೆ ಆದ ನಿರ್ಮಾಣ ವೆಚ್ಚ, ಅದರ ಗಳಿಕೆಯ ಅಂಕಿ ಸಂಖ್ಯೆಗಳನ್ನು ಹೇಳಿಲ್ಲ. ಈಗಲೂ ಅಷ್ಟೇ. ನೀವೇ ಹೇಳುತ್ತಿದ್ದೀರಿ’ ಎಂದರು. ಅವರ ಜೊತೆಗಿರುವ ಮಂದಿ ಈ ಅಂಕಿಸಂಖ್ಯೆಗಳನ್ನು ತಮಗೆ ಬೇಕಾದಂತೆ, ತಮ್ಮಿಷ್ಟ ಬಂದಂತೆ ಹೇಳಿದ್ದು ಕ್ಷಣಾರ್ಧದಲ್ಲಿ ಸುದ್ದಿಯಾಗಿ ಬಿಡುತ್ತದೆ.
ಪ್ರತಿಯೊಂದು ಪ್ರದರ್ಶನವೂ ಜನಭರಿತ ಆಗದೆ ಇದ್ದರೂ, ಸತತ ‘ಜನಭರಿತ’ ಎಂದು ಹೇಳಿಬಿಡುವುದು ವಾಡಿಕೆ. ದೊಡ್ಡ ಬಜೆಟಿನ ಚಿತ್ರಗಳ ಗಲ್ಲಾಪೆಟ್ಟಿಗೆ ಗಳಿಕೆಯ ವರದಿಗಳನ್ನು ಮಾಡುವ ಮಾಧ್ಯಮಗಳಿವೆ. ಅವು, ಬೆಳಗಿನ ಪ್ರದರ್ಶನದ ಗಳಿಕೆ ಎಷ್ಟು, ಪ್ರತಿಶತ ಎಷ್ಟು ತುಂಬಿದೆ ಇವೇ ಮುಂತಾಗಿ ವಿವರಗಳನ್ನು ನೀಡುತ್ತಿರುತ್ತವೆ.
‘ಕಾಟೇರ’ 406 ಏಕಪರದೆಯ ಚಿತ್ರಮಂದಿರಗಳಲ್ಲಿ ತೆರೆಕಂಡದ್ದಾಗಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದಾಗ ಅದನ್ನು ನಂಬುವುದು ಸ್ವಲ್ಪ ಕಷ್ಟವೇ ಆಯಿತೆನ್ನಿ. ಅದಾದ ನಂತರ, ‘ರಜನಿಕಾಂತ್’ ಅಭಿನಯದ ‘ಜೈಲರ್’ ಚಿತ್ರದ ಬಿಡುಗಡೆಯ ವೇಳೆ ಆದ ಬೆಳವಣಿಗೆ ಅನುಮಾನಕ್ಕೆ ಪರಿಹಾರ ಹೇಳಿತು. ರಾಜ್ಯದಲ್ಲಿ 150ರವರೆಗೆ ಇರುವ ಏಕಪರದೆಯ ಚಿತ್ರಮಂದಿರಗಳು ಇನ್ನೂ ನೆಲಸಮವಾಗಿಲ್ಲ. ಅವು ಮುಚ್ಚಿರುತ್ತವೆ. ಜನಪ್ರಿಯ ನಟರ ಚಿತ್ರಗಳು ತೆರೆಗೆ ಬಂದಾಗ ಅವು ಬಾಗಿಲು ತೆರೆಯುತ್ತವೆ. ‘ಕಾಟೇರ’ ಅಂತಹದೊಂದು ಬೆಳವಣಿಗೆಗೆ ಬಹುಶಃ ದಾರಿ ಮಾಡಿ ಕೊಟ್ಟಿದೆ. ಇಲ್ಲದೆ ಹೋದರೆ, ರಾಜ್ಯದಲ್ಲಿ ಇರುವ ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಆರುನೂರಕ್ಕೂ ಕಡಿಮೆ ಎಂದು ಕಳೆದ ಕೆಲವು ವರ್ಷಗಳಿಂದ ಹೇಳಲಾಗುತ್ತಿದೆ. ಅದರಲ್ಲಿ 406 ಚಿತ್ರಗಳು ಕನ್ನಡದ ಒಂದು ಚಿತ್ರಕ್ಕೆ ಸಿಗುವುದು ಸಾಧ್ಯವೇ? ಖಂಡಿತ ಇಲ್ಲ. ಅದನ್ನೇ ರಾಕ್ ಲೈನ್ ಅವರೂ ನಂತರ ಹೇಳಿದರು.
ದರ್ಶನ್ ಅಭಿನಯದ ಚಿತ್ರದಿಂದ ಮುಚ್ಚಿದ ಕೆಲವು ಚಿತ್ರಮಂದಿರಗಳು ತೆರೆಯುತ್ತವೆ, ಅವುಗಳ ಮಾಲೀಕರಿಗೋ, ಮಧ್ಯವರ್ತಿಗಳಿಗೋ ವ್ಯಾಪಾರ ಆಗುತ್ತದೆ ಎಂದಾದರೆ, ಅದಕ್ಕಿಂತ ಒಳ್ಳೆಯ ಬೆಳವಣಿಗೆ ಏನಿದೆ?
ದರ್ಶನ್ ಒಪ್ಪಿಕೊಳ್ಳುವ ಯಾವುದೇ ಚಿತ್ರದಲ್ಲಿ ಅವರ ಆಯ್ಕೆಯಲ್ಲಿ ಮುಖ್ಯವಾದ ಮೂರು ಅಂಶಗಳನ್ನು ಅಲ್ಲಿ ಹೇಳಿದರು. ಹೆಣ್ಣನ್ನು ಕೇವಲವಾಗಿ ನೋಡಬಾರದು, ನಮ್ಮ ಭಾಷೆಯನ್ನು ಕೆಟ್ಟದಾಗಿ ಬಿಂಬಿಸಬಾರದು, ತಮ್ಮದೇ ದುಡ್ಡು ಹಾಕುತ್ತಾರೋ ಅಥವಾ ಎಲ್ಲಿಂದಲೋ ತಂದು ಹಾಕುತ್ತಾರೋ, ಆ ನಿರ್ಮಾಪಕನಿಗೆ ಒಳ್ಳೆಯದಾಗುವ ಹಾಗೆ ಇರಬೇಕು ಎನ್ನುವ ಅವರದು ಕನ್ನಡದ ನೆಲಕ್ಕೆ ಬದ್ಧವಾದ ನಿಲುವು.
ನನ್ನ ಚಿತ್ರ ಮಾತ್ರವಲ್ಲ, ಎಲ್ಲ ಕನ್ನಡ ಚಿತ್ರಗಳನ್ನೂ ನೋಡಿ, ಪ್ರೋತ್ಸಾಹಿಸಿ, ಅದು ಉದ್ಯಮದ ಒಂದಷ್ಟು ಮಂದಿಯ ಹೊಟ್ಟೆ ತುಂಬಿಸಲು ನೆರವಾಗುತ್ತದೆ. ನಾವು ಮೊದಲು ನಮ್ಮವರಿಗಾಗಿ ಕೆಲಸ ಮಾಡೋಣ ಎನ್ನುವ ದರ್ಶನ್ ಅವರು, ಕನ್ನಡ ನೆಲದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ಇರುವುದರ ಕುರಿತಂತೆ ಪ್ರತಿಕ್ರಿಯಿಸಿದ್ದನ್ನು ಗಮನಿಸಬೇಕು. ನಮ್ಮ ನೆಲದಲ್ಲಿ ನಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ನಾವು ಏಕೆ ಹೆದರಬೇಕು? ಹೆದರಬೇಕಾದವರು ಹೊರಗಿನಿಂದ ಬಂದವರು ಎನ್ನುವುದಾಗಿತ್ತು ಅವರ ಮಾತು.
‘ಕಾಟೇರ’ ಚಿತ್ರದ ಮೂಲಕ ಒಂದಷ್ಟು ಚಿತ್ರಮಂದಿರಗಳು ಮತ್ತೆ ಪ್ರದರ್ಶನ ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ, ಮತ್ತೆ ಅವು ಮುಚ್ಚದಂತೆ, ಜನಪ್ರಿಯ ನಟರ, ಬಹು ನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸರದಿಯಲ್ಲಿವೆ. ಜೊತೆಗೆ ಈ ನೆಲದ ಕಥೆಯ ಚಿತ್ರಗಳಿಗೆ ಸೋಲಿಲ್ಲ ಎನ್ನುವುದು, ಹಾಲಿವುಡ್ ಚಿತ್ರಗಳಿಗೆ ಸಡ್ಡು ಎನ್ನುವ ಹೆಸರಿನಲ್ಲಿ, ಅವುಗಳ ಸ್ಫೂರ್ತಿಯ ಹೆಸರಿನಲ್ಲಿ, ಈ ನೆಲದ ಬದುಕಿಗೆ ವಿಮುಖವಾಗುವ ಚಿತ್ರಗಳತ್ತ ಮುಖ ಮಾಡುವ ಮಂದಿ ಇತ್ತಲೂ ಗಮನಿಸುವಂತಾದರೆ ಚೆನ್ನ. ಜೊತೆಗೆ, ಒಳ್ಳೆಯ ಕಥೆಯಲ್ಲಿ ನಾನೊಂದು ಭಾಗವಾಗಬೇಕು, ನನ್ನ ವರ್ಚಸ್ಸಿಗಾಗಿ ಚಿತ್ರ ಅಲ್ಲ ಎನ್ನುವ ಯುವನಟರ ಬಳಗ ದೊಡ್ಡದಾಗಬೇಕು. ಹಾಗಾಗಲಿ.
ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…