ಮೀಡಿಯಾ ಮತ್ತು ನ್ಯಾಯಾಂಗವ ಖರೀದಿಸಿ ಜನತಂತ್ರವನು ಕದ್ದವರ ಕತೆ; ದೆಹಲಿ ಧ್ಯಾನ

ಪೆರುವಿನಲ್ಲಿ ಜನತಂತ್ರದ ಮುಖವಾಡ ಧರಿಸಿದ್ದ ಫೂಜಿಮೊರಿ ಆಡಳಿತ

ದಕ್ಷಿಣ ಅಮೆರಿಕದ ಪುಟ್ಟ ದೇಶ ಪೆರು. ಅದಕ್ಕೊಂದು ಸಂವಿಧಾನ ಉಂಟು. ಪ್ರತಿಪಕ್ಷಗಳಿವೆ. ಕಾಲ ಕಾಲಕ್ಕೆ ಚುನಾವಣೆಗಳು ನಡೆಯುತ್ತವೆ. ಅಧ್ಯಕ್ಷೀಯ ಮಾದರಿಯ ಸರ್ಕಾರಕ್ಕೆ ಅವಧಿಯ ಮಿತಿ ಇದೆ. ಸ್ವತಂತ್ರ ನ್ಯಾಯಾಂಗ ಮತ್ತು ಮುಕ್ತ ಸಮೂಹ ಮಾಧ್ಯಮಗಳೂ ಇವೆ.
೧೯೯೦ರ ದಶಕದಲ್ಲಿ ಆಲ್ಬರ್ಟೋ ಫೂಜಿಮೊರಿಯ ಹೆಸರಿನಲ್ಲಿ ಈ ದೇಶವನ್ನು ಆಳಿದವನು ಅಲ್ಲಿಯ ರಹಸ್ಯ ಪೊಲೀಸ್ ಮುಖ್ಯಸ್ಥ ವ್ಲಾದಿಮಿರೋ ಮಾಂಟೆಸಿನೋ ಟೋರಿಸ್. ನ್ಯಾಯಮೂರ್ತಿಗಳು, ರಾಜಕಾರಣಿಗಳು ಹಾಗೂ ಪತ್ರಿಕೋದ್ಯಮಕ್ಕೆ ವ್ಯವಸ್ಥಿತವಾಗಿ ಲಂಚ ತಿನ್ನಿಸಿದ್ದ ಮಾಂಟೆಸಿನೋ. ಈ ವ್ಯವಹಾರಗಳ ದಾಖಲೆ ದಸ್ತಾವೇಜುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಡಗಿದ್ದ ಕೂಡ. ಲಂಚ ಪಡೆದವರು ಅದಕ್ಕೆ ಬದಲಾಗಿ ಏನೇನು ಕೆಲಸ ಮಾಡಬೇಕೆಂಬ ಕುರಿತ ಒಪ್ಪಂದ ಪತ್ರಗಳನ್ನು ಬರೆಯಿಸಿಕೊಂಡಿದ್ದ. ಕೊಟ್ಟಿದ್ದ ಲಂಚಕ್ಕೆ ಪ್ರತಿಯಾಗಿ ರಸೀತಿಗಳನ್ನು ಪಡೆದು ಇಟ್ಟುಕೊಂಡಿದ್ದ. ಈ ಅಕ್ರಮ ವ್ಯವಹಾರಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಕೂಡ.

ಮಾಂಟೆಸಿನೋ ಮತ್ತು ಫೂಜಿಮೊರಿ ಆಡಳಿತ ಜನತಂತ್ರದ ಮುಖವಾಡ ಧರಿಸಿತ್ತು- ಪ್ರಜೆಗಳು ಮತದಾನ ಮಾಡುತ್ತಿದ್ದರು,ನ್ಯಾಯಮೂರ್ತಿಗಳು ನ್ಯಾಯನಿರ್ಣಯ ಮಾಡುತ್ತಿದ್ದರು, ಮೀಡಿಯಾ ವರದಿ ಮಾಡುತ್ತಿತ್ತು. ಆದರೆ ಜನತಾಂತ್ರಿಕ ವ್ಯವಸ್ಥೆಯ ಜೀವರಸವ ಬತ್ತಿಸಿ ಬರಡಾಗಿಸಿತ್ತು ಈ ಜೋಡಿ.

ಟೆಲಿವಿಷನ್ ಚಾನೆಲ್ ಮಾಲೀಕನಿಗೆ ಮಾಂಟೆಸಿನೋ ನೀಡುತ್ತಿದ್ದ ಲಂಚದ ಮೊತ್ತ ಪ್ರತಿಪಕ್ಷಗಳ ರಾಜಕಾರಣಿಗಳಿಗೆ ನೀಡುತ್ತಿದ್ದ ಮೊತ್ತದ ನೂರು ಪಟ್ಟು ದೊಡ್ಡದಿತ್ತು. ರಾಜಕಾರಣಿಗಳಿಗೆ ನೀಡುತ್ತಿದ್ದ ಲಂಚದ ಮೊತ್ತವು ನ್ಯಾಯಾಧೀಶರಿಗೆ ನೀಡುತ್ತಿದ್ದ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿತ್ತು.
ಫೂಜಿಮೊರಿ ಆಡಳಿತವು ಮೋಸ ಮರೆಯ ವಿಧಾನಗಳ ಬಳಸಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವೇ ಅಲ್ಲದೆ ಸುದ್ದಿ ಮಾಧ್ಯಮಗಳ ಮೇಲೂ ಅಧಿಕಾರ ಸ್ಥಾಪಿಸಿತ್ತು.

೧೯೯೦ರಲ್ಲಿ ಪೆರು ತಳಮಳದಲ್ಲಿತ್ತು. ಅಧ್ಯಕ್ಷನಾಗಿ ಚುನಾಯಿತನಾದ ಆಲ್ಪರ್ಟೋ ಫೂಜಿಮೊರಿ ರಾಜಕಾರಣಕ್ಕೆ ಹೊಸಬ. ಅರ್ಥವ್ಯವಸ್ಥೆ ಹೊಲಬುಗೆಟ್ಟಿತ್ತು. ಭಾರೀ ಹಣದುಬ್ಬರ. ಅಭಿವೃದ್ಧಿ ದರ ಪಾತಾಳಕ್ಕೆ ಕುಸಿದಿತ್ತು. ಮಾವೋವಾದಿ ಗೆರಿಲ್ಲಾಗಳ ಬಂಡಾಯ ಅಪಾರ ಸಾವುನೋವುಗಳ ಉಂಟು ಮಾಡಿತ್ತು. ತನ್ನ ಸಲಹೆಗಾರನನ್ನಾಗಿಯೂ, ರಾಷ್ಟ್ರೀಯ ಬೇಹುಗಾರಿಕೆ ಸೇವೆಯ ಮುಖ್ಯಸ್ಥನನ್ನಾಗಿಯೂ ಮಾಂಟೆಸಿನೋನನ್ನು ನೇಮಕ ಮಾಡಿದ್ದ ಫೂಜಿಮೊರಿ. ದೇಶದ ಗೋಪ್ಯ ದಾಖಲೆಗಳನ್ನು ಅಮೆರಿಕೆಗೆ ಮಾರಿಕೊಂಡಿದ್ದ ಅಪರಾಧದ ಮೇರೆಗೆ ಅವನನ್ನು ಸೇನೆಯಿಂದ ಮನೆಗೆ ಕಳಿಸಲಾಗಿತ್ತು. ೮೦ರ ದಶಕದಲ್ಲಿ ಕೊಲಂಬಿಯಾದ ಮಾದಕದ್ರವ್ಯ ಡೀಲರುಗಳ ಪರ ವಕೀಲನಾಗಿದ್ದ ಕುಖ್ಯಾತಿ ಆತನದು.

ಮಾವೋವಾದಿ ಗೆರಿಲ್ಲಾಗಳ ಬಂಡಾಯವನ್ನು ಅಡಗಿಸಿದ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮತ್ತೆ ಚಿಗುರಿಸಿದ ಆರಂಭಿಕ ಯಶಸ್ಸಿನ ಗರಿಯನ್ನು ಮುಡಿದಿತ್ತು ಫೂಜಿಮೊರಿ ಸರ್ಕಾರ. ಆರ್ಥಿಕ ಸುಧಾರಣೆಗಳು ವಿದೇಶೀ ಬಂಡವಾಳವನ್ನು ಹರಿಸಿದ್ದವು. ಹಣದುಬ್ಬರ ಅಂಕೆಗೆ ಸಿಕ್ಕಿತ್ತು. ಭಯೋತ್ಪಾದಕರ ನಿಗ್ರಹ ಮತ್ತು ಮುಕ್ತ ಮಾರುಕಟ್ಟೆ ನಿಲುವುಗಳನ್ನು ಅಮೆರಿಕ ಮೆಚ್ಚಿತ್ತು. ಮಾದಕದ್ರವ್ಯಗಳ ವಿರುದ್ಧ ಸಮರದ ನೆಪದಲ್ಲಿ ಸಿಐಎ ಹತ್ತಾರು ಲಕ್ಷ ಡಾಲರುಗಳ ಹಣದ ಹೊಳೆ ಹರಿಸಿತ್ತು.

ಚಿತ್ರಹಿಂಸೆ, ಭ್ರಷ್ಟಾಚಾರ, ಹತ್ಯೆಗಳು ಎಗ್ಗಿಲ್ಲದೆ ಜರುಗಿದ್ದವು. ಆದರೂ ಬಲು ಬಲಿಷ್ಠ ಅಧ್ಯಕ್ಷನೆಂದೂ, ಭಯೋತ್ಪಾದಕರಿಂದ ಜನರನ್ನು ರಕ್ಷಿಸಿದವನೆಂದೂ ಫೂಜಿಮೊರಿ ಜನಪ್ರಿಯನಾಗಿದ್ದ. ಈ ಜನಪ್ರಿಯತೆಯ ನಡುವಿನಲ್ಲೇ ೧೯೯೨ರಲ್ಲಿ ಪೆರುವಿನ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದ. ನ್ಯಾಯಾಂಗದ ‘ಸಹಕಾರ’ದಿಂದ  ಉಗ್ರಗಾಮಿಗಳನ್ನು ತೀವ್ರವಾಗಿ ಶಿಕ್ಷಿಸಿದ. ೧೯೯೫ರ ಚುನಾವಣೆಗಳಲ್ಲಿ ಮತ್ತೆ ಆಯ್ಕೆಯಾದ. ೨೦೦೦ದಲ್ಲಿ ಮೂರನೆಯ ಅವಧಿಗೂ ಆರಿಸಿ ಬಂದ. ಎರಡೇ ಅವಧಿಗಳ ಮಿತಿಯನ್ನು ಮೂರು ಅವಧಿಗಳಿಗೆ ಹೆಚ್ಚಿಸಲು ಸಂಸತ್ತಿನ ಅನುಮೋದನೆ ಗಳಿಸಿದ್ದ. ಈ ಚುನಾವಣೆಗಳಲ್ಲಿ ವ್ಯಾಪಕ ಅಕ್ರಮಗಳು ಜರುಗಿದ್ದವು. ಫೂಜಿಮೊರಿ ಪರವಾಗಿರುವಂತೆ ಗೆಲುವನ್ನು ಪಳಗಿಸಲಾಗಿತ್ತು.

ಅಲ್ಲಿಂದ ಕೇವಲ ಮೂರೇ ತಿಂಗಳಲ್ಲಿ ಸರ್ಕಾರ ಬೀಳುತ್ತದೆ. ಮಾಂಟೆಸಿನೋ ಪ್ರತಿಪಕ್ಷದ ಸಂಸದನಿಗೆ ಲಂಚ ನೀಡುತ್ತಿದ್ದ ವಿಡಿಯೋ ಟೇಪೊಂದು ಬಯಲಾಗಿ ಟೆಲಿವಿಷನ್ನಿನಲ್ಲಿ ಬಿತ್ತರಗೊಂಡಿತ್ತು. ಕೌರಿ ಎಂಬ ಸಂಸದ ಪಕ್ಷ ಬದಲಿಸಿ ಫೂಜಿಮೊರಿಯನ್ನು ಬೆಂಬಲಿಸಲು ೧೫ ಸಾವಿರ ಅಮೆರಿಕನ್ ಡಾಲರುಗಳ ಲಂಚ ನೀಡುತ್ತಿದ್ದ ವಿಡಿಯೋ ಅದು. ಇಂತಹ ಇತರೆ ಹತ್ತಾರು ವಿಡಿಯೋ ಟೇಪುಗಳೂ ಬಯಲಾಗಿ ಬಿತ್ತರಗೊಂಡವು. ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಿಗೆ, ಮುಖ್ಯ ಚುನಾವಣಾ ಆಯುಕ್ತನಿಗೆ ತಿಂಗಳಿಗೆ ಹತ್ತು ಸಾವಿರ ಡಾಲರುಗಳ ಹೆಚ್ಚುವರಿ ‘ವೇತನ’, ವೈದ್ಯಕೀಯ ಸೌಲಭ್ಯ, ಮೈಗಾವಲು ಲಂಚ ನೀಡಿಕೆಯ ವಿಡಿಯೋಗಳೂ ಈ ಟೇಪುಗಳಲ್ಲಿ ಸೇರಿದ್ದವು.

ಮಾಂಟೆಸಿನೋಗೆ ಹರಿದು ಬರುವ ಹಣದ ಮೂಲದ ತನಿಖೆಗೆಂದು ನೇಮಕವಾಗಿದ್ದ ಸಂಸದೀಯ ಸಮಿತಿಯ ಸದಸ್ಯನಿಗೇ ಲಂಚ ಕೊಡುತ್ತಿದ್ದ ಟೇಪು, ಕಾನೂನು ವ್ಯಾಜ್ಯವೊಂದರಲ್ಲಿ ಚಿಲಿ ಮೂಲದ ಪಾಸ್ತಾ ಕಂಪನಿಯ ಮಾಲೀಕನಿಗೆ ನ್ಯಾಯಾಲಯದಿಂದ ಅನುಕೂಲಕರ ತೀರ್ಪು ಕೊಡಿಸುವ ಭರವಸೆಯ ಟೇಪುಗಳೂ ಬಹಿರಂಗವಾಗಿದ್ದವು.

ಜಪಾನಿಗೆ ಪಲಾಯನ ಮಾಡಿದ ಫೂಜಿಮೊರಿ, ಫ್ಯಾಕ್ಸ್ ಸಂದೇಶದ ಮೂಲಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ. ಭ್ರಷ್ಟಾಚಾರ, ಕೊಲೆ, ಅಪಹರಣ ಹಾಗೂ ಮಾದಕದ್ರವ್ಯ ಸಾಗಾಟದಲ್ಲಿ ಅವನ ಪಾತ್ರವಿದೆಯೆಂದು ಸಾಬೀತಾಯಿತು. ಜಪಾನ್ ಅವನಿಗೆ ರಾಜಕೀಯ ಆಶ್ರಯ ನೀಡಿತು. ಪೆರುವಿಗೆ ಹಸ್ತಾಂತರ ಮಾಡಲು ನಿರಾಕರಿಸಿತು. ವೆನಿಜುವೆಲಾದಲ್ಲಿ ದಸ್ತಗಿರಿಯಾದ ಮಾಂಟೆಸಿನೋನನ್ನು ಪೆರುವಿನ ವಶಕ್ಕೆ ಮರಳಿಸಲಾಯಿತು. ತರಹೇವಾರಿಯ ಮೊಕದ್ದಮೆಗಳು ಅವನ ವಿರುದ್ಧ ಜರುಗಿದವು. ಲಂಚ ಪಡೆದು ಅವನ ಜಾಲದ ಭಾಗವಾಗಿದ್ದ ೧,೬೦೦ ಮಂದಿ ಕ್ರಿಮಿನಲ್ ಆಪಾದನೆಗಳನ್ನು ಎದುರಿಸಿದರು.

ಇಂತಹ ಮಾಂಟೆಸಿನೋ ತನ್ನ ಅಧಿಕಾರಾವಧಿಯಲ್ಲಿ ಪದೇ ಪದೇ ತನ್ನನ್ನು ಅಪ್ರತಿಮ ದೇಶಭಕ್ತನೆಂದು ಬಣ್ಣಿಸಿಕೊಳ್ಳುತ್ತಿದ್ದ. ರಾಷ್ಟ್ರೀಯ ಹಿತಕ್ಕಾಗಿ ಕೆಲಸ ಮಾಡುವ ತಾನು ಯಾವ ಪ್ರತಿಫಲವನ್ನೂ ಪಡೆಯುತ್ತಿಲ್ಲವೆಂದೂ, ದೇಶಕ್ಕೆ ಶಾಂತಿ ಸಮೃದ್ಧಿ ತರಲು ಶ್ರಮಿಸುತ್ತಿರುವುದಾಗಿಯೂ ಸಾರುವ ವಿಡಿಯೋಗಳನ್ನು ಮಾಡಿಸಿ ಪ್ರಚಾರ ಪಡೆಯುತ್ತಿದ್ದ. ಅವನನ್ನು ಬಂಧಿಸಿದ ನಂತರ ವಿದೇಶೀ ಬ್ಯಾಂಕುಗಳ ತನ್ನ ಖಾತೆಯಲ್ಲಿ ೨೦ ಕೋಟಿ ಡಾಲರುಗಳನ್ನು ಇರಿಸಿದ್ದು ಪತ್ತೆಯಾಯಿತು. ಫೂಜಿಮೊರಿ ಸರ್ಕಾರ ಪೆರುವಿನಿಂದ ಲೂಟಿ ಮಾಡಿದ್ದ ಮೊತ್ತವನ್ನು ೬೦ ಕೋಟಿ ಡಾಲರುಗಳು ಎಂದು ಅಂದಾಜು ಮಾಡಲಾಯಿತು.

ತನ್ನಿಂದ ಲಂಚ ಪಡೆದವರು ಅದಕ್ಕೆ ಪ್ರತಿಯಾಗಿ ತಾನು ಬಯಸಿದ್ದ ಕೆಲಸ ಕಾರ್ಯಗಳನ್ನು ಮಾಡುತ್ತಿರುವರೇ ಇಲ್ಲವೇ ಎಂಬ ಕುರಿತು ಮಾಂಟೆಸಿನೋ ನಿತ್ಯ ನಿಗಾ ಇರಿಸಿದ್ದ. ವಿಡಿಯೋ ಟೇಪುಗಳ ಜೊತೆಗೆ ಲಂಚದ ರಸೀತಿಗಳು, ರಹಸ್ಯ ಒಡಂಬಡಿಕೆಗಳು, ಧ್ವನಿಮುದ್ರಿಕೆಗಳನ್ನೂ ಇರಿಸಿಕೊಂಡಿದ್ದ. ಇಷ್ಟು ಶಿಸ್ತಾಗಿ ಲೆಕ್ಕ ಇಟ್ಟ ಕಾರಣವೇ ಯಾರಿಗೆ ಎಷ್ಟು ಲಂಚ ಕೊಡಲಾಯಿತು ಎಂಬ ಖಚಿತ ವಿವರಗಳು ಆಧಾರ ಸಹಿತ ಬಯಲಾದವು. ಈ ಪೈಕಿ ೬೬ ಪ್ರಕರಣಗಳ ರಸೀತಿಗಳು, ವಿಡಿಯೋಗಳು, ಧ್ನನಿಮುದ್ರಿಕೆಗಳು ಪೆರುವಿನ ಸಂಸತ್ತಿನ ಅಂತರ್ಜಾಲ ತಾಣದಲ್ಲಿ ಲಭ್ಯ ಇವೆ. ಇಂತಹ ವಿಡಿಯೋಗಳ ಸಂಖ್ಯೆ ೨೦೦೦ ಎಂದು ಅಂದಾಜು ಮಾಡಲಾಗಿದೆ. ಆದರೆ ಜೈಲು ಸೇರಿದ ಮಾಂಟೆಸಿನೋ ಪ್ರಕಾರ ಅವುಗಳ ಒಟ್ಟು ಸಂಖ್ಯೆ ೩೦,೦೦೦.

ಭಾರೀ ಗೋಪ್ಯ ಕಾರ್ಯಾಚರಣೆ ನಡೆಸಿದ್ದ ಮಾಂಟೆಸಿನೋ ಮಾಹಿತಿ ಸಂಗ್ರಹಣೆಗೆ ಅಪಾರ ಪ್ರಾಮುಖ್ಯತೆ ನೀಡಿದ್ದ. ಶತ್ರುಗಳು ಮತ್ತು ಮಿತ್ರರೆನ್ನದೆ ಅವರ ದೂರವಾಣಿಗಳಿಗೆ ಕಳ್ಳಗಿವಿ ಇಡಿಸಿದ. ಅವನ ಕಚೇರಿಯಲ್ಲಿ ೨೫ ಟಿವಿ ಪರದೆಗಳ ಮೇಲೆ ಗೋಪ್ಯ ಕ್ಯಾಮೆರಾಗಳ ನೇರ ಚಿತ್ರೀಕರಣದ ದೃಶ್ಯಾವಳಿಗಳು ಮೂಡುತ್ತಿದ್ದವು. ರಾಷ್ಟ್ರಪತಿ ಭವನ, ಸಂಸತ್ತು, ನ್ಯಾಯಾಲಯಗಳು, ರಾಜಧಾನಿ ಲಿಮಾದ ವಿಮಾನ ನಿಲ್ದಾಣ ಮತ್ತಿತರೆಡೆಗಳಲ್ಲಿ ಈ ಗೋಪ್ಯ ಕ್ಯಾಮೆರಾಗಳನ್ನು ಇರಿಸಲಾಗಿತ್ತು.

ಹತ್ಯೆಗಳ ಹಿಂಸೆ ಬೇಡವೆನ್ನುತ್ತಿದ್ದ ಮಾಂಟೆಸಿನೋ. ಆದರೆ ಹಂತಕರ ಪಡೆಗಳನ್ನು ಸಾಕಿಕೊಂಡಿದ್ದ. ಈ ಪಡೆಗಳನ್ನು ಬಹುತೇಕ ವಿದ್ಯಾರ್ಥಿಗಳು ಮತ್ತು ರೈತರ ಬೇಟೆಗೆ ಬಳಸಲಾಗುತ್ತಿತ್ತು. ಗಣ್ಯರ ವಿರುದ್ಧ ಹಿಂಸೆಯನ್ನು ಬಳಸುವುದು ತಿರುಗುಬಾಣ ಆದೀತು ಎಂಬುದು ಅವನ ಲೆಕ್ಕಾಚಾರವಾಗಿತ್ತು.

ಮಾಂಟೆಸಿನೋ ಲಂಚ ನೀಡಿಕೆ ಏಕಕಾಲದ ದೊಡ್ಡ ಮೊತ್ತವಾಗಿರಲಿಲ್ಲ. ಬದಲಿಗೆ ಪ್ರತಿ ತಿಂಗಳೂ ನೀಡುವುದಾಗಿತ್ತು. ಟೆಲಿವಿಷನ್ ಚಾನಲ್‌ಗಳ ಮಾಲೀಕರಿಗೂ ಇದೇ ವ್ಯವಸ್ಥೆ ಮಾಡಲಾಗಿತ್ತು. ತಿಂಗಳಿಗೆ ಒಂದು ಕೋಟಿ ಡಾಲರುಗಳು ನಾನಾ ಸಕ್ರಮ ಮತ್ತು ಅಕ್ರಮ ಮೂಲಗಳಿಂದ ಮಾಂಟೆಸಿನೋಗೆ ಹರಿದು ಬರುತ್ತಿದ್ದವು. ಎಲ್ಲ ಲಂಚವೂ ಅಮೆರಿಕನ್ ಡಾಲರುಗಳ ಕರೆನ್ಸಿಯಲ್ಲಿ ಸಂದಾಯ ಆಗುತ್ತಿತ್ತು. ಬೇಹುಗಾರಿಕೆ ಇಲಾಖೆಯಾದ ಕಾರಣ ಸಕ್ರಮ ಮೊತ್ತದ ವಿನಿಯೋಗ ಕುರಿತು ಸಂಸತ್ತಿಗೆ ಲೆಕ್ಕ ಒಪ್ಪಿಸಬೇಕಿರಲಿಲ್ಲ.

ರಾಜಕಾರಣಿಗಳಿಗೆ (ಪ್ರತಿಪಕ್ಷಗಳ) ನೀಡುತ್ತಿದ್ದ ತಲಾ ಮಾಸಿಕ ಲಂಚ ೫೦೦೦ ಡಾಲರುಗಳಿಂದ ೨೦ ಸಾವಿರ ಡಾಲರುಗಳಷ್ಟಿತ್ತು. ತನ್ನ ಪ್ರಧಾನಮಂತ್ರಿಗೂ ತಿಂಗಳಿಗೆ ೩೦ ಸಾವಿರ ಡಾಲರುಗಳಷ್ಟು ಲಂಚ ನೀಡುತ್ತಿದ್ದ ಫೂಜಿಮೊರಿ. ಮಂತ್ರಿಗಳೂ ಈ ಮಾತಿಗೆ ಹೊರತಾಗಿರಲಿಲ್ಲ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ತಿಂಗಳಿಗೆ ೧೦ ಸಾವಿರ ಡಾಲರುಗಳ ಲಂಚ ಪಾವತಿಯಾಗುತ್ತಿತ್ತು.
ಎಕ್ಸ್‌ಪ್ರೆಸೋ ಎಂಬ ಬ್ರಾಡ್ ಶೀಟ್ ದಿನಪತ್ರಿಕೆಗೆ ಹತ್ತು ಲಕ್ಷ ಡಾಲರುಗಳ ಲಂಚ ನೀಡಲಾಯಿತು. ಎಲ್ ಟಿಯೋ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗೆ ಎರಡು ವರ್ಷಗಳ ಅವಧಿಯಲ್ಲಿ ೧೫ ಲಕ್ಷ ಡಾಲರುಗಳು ಅಥವಾ ತಿಂಗಳಿಗೆ ೬೦ ಸಾವಿರ ಡಾಲರುಗಳ ನೀಡಲಾಗುತ್ತಿತ್ತು. ಉಪ ಒಡಂಬಡಿಕೆಗಳ ಪ್ರಕಾರ ಮುಖಪುಟದ ಫೂಜಿಮೊರಿ ಪರ ತಲೆಬರೆಹಕ್ಕೆ ಮೂರು ಸಾವಿರದಿಂದ ನಾಲ್ಕು ಸಾವಿರ ಡಾಲರುಗಳು, ಒಂದು ಇಡೀ ಪುಟದ ಲೇಖನಕ್ಕೆ ಐದು ಸಾವಿರ ಡಾಲರುಗಳು, ಸಣ್ಣ ಲೇಖನಕ್ಕೆ ೫೦೦ ಡಾಲರುಗಳ ಲಂಚ ನೀಡಲಾಗಿತ್ತು.

ಟೆಲಿವಿಷನ್ ಚಾನೆಲ್‌ಗಳನ್ನೂ ಇದೇ ರೀತಿ ‘ಖರೀದಿಸಲಾಗಿತ್ತು’. ಚಾನೆಲ್-೪ ಎಂಬ ಚಾನೆಲ್‌ಗೆ ತಿಂಗಳ ಮಾಸಿಕ ಲಂಚ ಪಾವತಿಯ ಮೊತ್ತ ೧೫ ಲಕ್ಷ ಡಾಲರುಗಳು! ಅದು ಪೆರುವಿನ ‘ನಂಬರ್ ಒನ್ ಚಾನೆಲ್’ ಆಗಿತ್ತು. ಚಾನೆಲ್-೨ ಮತ್ತು ಚಾನೆಲ್-೫ಕ್ಕೆ ತಿಂಗಳಿಗೆ ತಲಾ ಐದು ಲಕ್ಷ ಡಾಲರುಗಳ ಲಂಚ. ಇತರೆ ಎರಡು ಚಾನೆಲ್‌ಗಳ ಷೇರುಗಳನ್ನು ಅಧಿಕ ದರ ನೀಡಿ ಖರೀದಿಸಿ ದೊಡ್ಡ ಮೊತ್ತ ನೀಡಲಾಯಿತು. ವ್ಯಾಪಾರ ವ್ಯವಹಾರಗಳು ಮತ್ತು ನ್ಯಾಯಾಂಗದಿಂದ ಅನುಕೂಲಕರ ತೀರ್ಪುಗಳ ಪ್ರತಿಫಲವನ್ನೂ ಅವುಗಳಿಗೆ ಲಂಚವಾಗಿ ಒದಗಿಸಲಾಯಿತು.
ಲಂಚಕ್ಕೆ ಪ್ರತಿಯಾಗಿ ಈ ಚಾನೆಲ್‌ಗಳು ಪ್ರಸಾರ ಮಾಡುವ ಸುದ್ದಿಯ ಪೂರ್ಣ ನಿಯಂತ್ರಣವನ್ನು ಮಾಂಟೆಸಿನೋಗೆ ನೀಡಲಾಗಿತ್ತು. ಈ ಕುರಿತು ಒಡಂಬಡಿಕೆ ಪತ್ರಗಳಿಗೆ ಮಾಂಟೆಸಿನೋ ಮತ್ತು ಚಾನೆಲ್‌ಗಳ ಮಾಲೀಕರು ಸಹಿ ಮಾಡಿದ್ದರು. ಮಾಂಟೆಸಿನೋನ ಲಿಖಿತ ಅನುಮತಿಯಿಲ್ಲದೆ ಯಾವ ರಾಜಕೀಯ ಸುದ್ದಿಯನ್ನೂ ಬಿತ್ತರಿಸುವಂತಿರಲಿಲ್ಲ. ದಿನ ನಿತ್ಯ ಪ್ರಸಾರವಾಗುವ ಸುದ್ದಿಗೂ ಮಾಂಟೆಸಿನೋನ ಪೂರ್ವಾನುಮತಿ ಪಡೆಯಬೇಕಿತ್ತು. ಫೂಜಿಮೊರೋ ಕುರಿತ ವ್ಯತಿರಿಕ್ತ ಸುದ್ದಿಗೆ ಎಡೆಯೇ ಇರಲಿಲ್ಲ.

ಹೀಗೆ ತಿಂಗಳೊಂದಕ್ಕೆ ರಾಜಕಾರಣಿಗಳಿಗೆ ಮೂರು ಲಕ್ಷ ಡಾಲರುಗಳು, ನ್ಯಾಯಾಧೀಶರಿಗೆ ಎರಡೂವರೆ ಲಕ್ಷ ಡಾಲರುಗಳು ಹಾಗೂ ಟೆಲಿವಿಷನ್ ಚಾನೆಲ್‌ಗಳಿಗೆ ೩೦ ಲಕ್ಷ ಡಾಲರುಗಳ ಲಂಚ ಪಾವತಿಯಾಗುತ್ತಿತ್ತು.  ನಿತ್ಯ ಮಧ್ಯಾಹ್ನ ೧೨.೩೦ಕ್ಕೆ ಪತ್ರಿಕೆಗಳು ಮತ್ತು ಟೆಲಿವಿಷನ್ ಚಾನೆಲ್‌ಗಳ ಸಭೆ ನಡೆಸುತ್ತಿದ್ದ ಮಾಂಟೆಸಿನೋ. ಸಂಜೆಯ ಸುದ್ದಿ ಏನು ಎಂಬುದು ಈ ಸಭೆಯಲ್ಲಿ ನಿರ್ಧಾರವಾಗುತ್ತಿತ್ತು. ಮೀಡಿಯಾದ ನಿಯಂತ್ರಣಕ್ಕೆ ತನ್ನ ಸಮಯ ಮತ್ತು ಸಂಪನ್ಮೂಲಗಳನ್ನು ಹೂಡಿದ್ದ ಮಾಂಟೆಸಿನೋ.

ಬೇಹುಗಾರಿಕೆ ಸಿಬ್ಬಂದಿಯ ಸೇವೆಯನ್ನು ಬೇಕಾದರೆ ಬಳಸಿಕೊಳ್ಳುವಂತೆ ಹೇಳುತ್ತಿದ್ದ. ಲಂಚ ನೀಡಿಕೆಯ ಜೊತೆಗೆ ಸರ್ಕಾರಿ ಜಾಹೀರಾತುಗಳ ಕಟಾಕ್ಷವೂ ಮೀಡಿಯಾಗೆ ಲಭಿಸಿತ್ತು. ಸರ್ಕಾರ ಅತಿ ದೊಡ್ಡ ಜಾಹೀರಾತುದಾರ ಆಗಿತ್ತು. ಮೀಡಿಯಾ ಸಂಸ್ಥೆಗಳು ತಮ್ಮ ತೆರಿಗೆ ಬಾಕಿಯನ್ನು ಜಾಹೀರಾತು ನೀಡಿ ಸಂದಾಯ ಮಾಡುವ ಅವಕಾಶ ಕಲ್ಪಿಸಲಾಯಿತು. ಫೂಜಿಮೊರಿಯ ಮರುಆಯ್ಕೆಗೂ ಈ ಜಾಹೀರಾತು ವ್ಯವಹಾರವನ್ನು ಕುದುರಿಸಲಾಯಿತು.

ನ್ಯಾಯಾಲಯದಿಂದ ಅನುಕೂಲಕರ ತೀರ್ಪುಗಳನ್ನು ಕೊಡಿಸುವುದು, ಚಾನೆಲ್ ಷೇರುಗಳ ಖರೀದಿಯ ಏರ್ಪಾಡು ಕೂಡ ಪತ್ರಿಕೆಗಳು- ಚಾನೆಲ್‌ಗಳಿಗೆ ನೀಡುವ ಲಂಚವಾಗಿತ್ತು. ಎರಡು ಚಾನೆಲ್‌ಗಳು ಬ್ಯಾಂಕೊಂದಕ್ಕೆ ೧.೩೦ ಕೋಟಿ ಡಾಲರುಗಳ ಸಾಲ ಉಳಿಸಿಕೊಂಡಿದ್ದವು. ಈ ಸಾಲಗಳನ್ನು ತೀರಿಸಲು ಈ ಚಾನೆಲ್‌ಗಳಿಗೆ ಹೊಸ ಸಾಲ ನೀಡುವಂತೆ ಮಾಂಟೆಸಿನೋ ಬ್ಯಾಂಕನ್ನು ಒಪ್ಪಿಸಿದ. ಪ್ರತಿಯಾಗಿ ಬ್ಯಾಂಕಿನ ತೆರಿಗೆ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಿ ಕೊಟ್ಟ.

ನ್ಯಾಯಾಧೀಶರು ಮತ್ತು ರಾಜಕಾರಣಿಗಳಿಗೆ ನಗದು ಮಾತ್ರವಲ್ಲದೆ ಮನೆ ಮತ್ತು ಕಾರುಗಳ ಲಂಚವನ್ನೂ ನೀಡಲಾಗುತ್ತಿತ್ತು. ಚುನಾವಣಾ ಆಯೋಗದ ಸದಸ್ಯನಾಗಿದ್ದ ನ್ಯಾಯಮೂರ್ತಿಯೊಬ್ಬನು ತನ್ನ ಪತ್ನಿ ಮತ್ತು ಮಗನಿಗೆ ಉದ್ಯೋಗಗಳನ್ನೂ, ಮಗಳಿಗೆ ಅಮೆರಿಕದಲ್ಲಿ ವಿದ್ಯಾಭ್ಯಾಸದ ವೆಚ್ಚವನ್ನೂ ಪಡೆದ.

ಚಾನೆಲ್ ಎನ್ ಎಂಬ ಸಣ್ಣ ಕೇಬಲ್ ಟಿವಿ ಚಾನೆಲ್ ಲಂಚ ಪಡೆಯಲಿಲ್ಲ. ಸ್ವತಂತ್ರ ತನಿಖಾ ವರದಿಗಳನ್ನು ಪ್ರಸಾರ ಮಾಡುತ್ತಿತ್ತು. ಸಂಸದ ಕೌರಿ ಮಾಂಟೆಸಿನೋನಿಂದ ಲಂಚ ಪಡೆಯುತ್ತಿದ್ದ ವಿಡಿಯೋವನ್ನು ಪ್ರಸಾರ ಮಾಡಿದ್ದು ಇದೇ ಚಾನೆಲ್. ಸರ್ಕಾರವನ್ನು ಕೆಡವಿತ್ತು ಈ ವಿಡಿಯೋ ಪ್ರಸಾರ. ಎಲ್ಲ ಕಿರುಕುಳಗಳನ್ನು ಸಹಿಸಿಕೊಂಡೂ ಕೆಲ ಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸರ್ಕಾರವನ್ನು ನಿರ್ಭೀತಿಯಿಂದ ಟೀಕಿಸುತ್ತಿದ್ದವು. ಕೋರ್ಟು ಕೇಸುಗಳು ಮತ್ತು ಕೊಲೆ ಬೆದರಿಕೆಗಳಿಗೂ ಬಗ್ಗಲಿಲ್ಲ. ಇಂತಹ ನಿಷ್ಠುರವಾದಿ ಪ್ರಾಮಾಣಿಕ ಪತ್ರಕರ್ತರನ್ನು ಲಂಚ ಪಡೆದ ಪತ್ರಿಕೆಗಳು ಮುಸುಕಿನ ಭಯೋತ್ಪಾದಕರೆಂದೂ, ಮಾನಸಿಕ ಕುಬ್ಜರೆಂದೂ, ದೇಶದ್ರೋಹಿಗಳೆಂದೂ ವಿಧ ವಿಧವಾಗಿ ನಿಂದಿಸಿ ಬರೆಯುತ್ತಿದ್ದವು. ಮಾರಿಕೊಂಡ ಈ ಮೀಡಿಯಾ ಪ್ರತಿಪಕ್ಷಗಳ ಪತ್ರಿಕಾಗೋಷ್ಠಿಗಳ ವರದಿಗಳನ್ನು ಪ್ರಕಟಿಸುವುದಿಲ್ಲ.

೧.೯೦ ಕೋಟಿ ಡಾಲರುಗಳ ಲಂಚವನ್ನು ತಿರಸ್ಕರಿಸಿ ಸರ್ಕಾರದ ನೀತಿಗಳನ್ನು ಟೀಕಿಸಿ ಬರೆದ ಮತ್ತು ಮಾಂಟೆಸಿನೋನ ತೆರಿಗೆ ಪಾವತಿ ಕುರಿತು ಪ್ರಶ್ನೆಗಳನ್ನು ಎತ್ತಿದ ಪತ್ರಿಕೆಯ ಮಾಲೀಕನ ಪೌರತ್ವವನ್ನು ರದ್ದು ಮಾಡಲಾಗುತ್ತದೆ. ಪತ್ರಿಕೆಯ ಒಡೆತನವನ್ನು ಮಾಂಟೆಸಿನೋ ಪರವಾಗಿದ್ದ ಮೈನಾರಿಟಿ ಷೇರುದಾರರಿಗೆ ಒಪ್ಪಿಸಲಾಗುತ್ತದೆ.

೨೦೦೦-೨೦೦೧ರ ಚುನಾವಣೆ ಫಲಿತಾಂಶದ ನಂತರ ಫೂಜಿಮೊರಿ ಪಕ್ಷಕ್ಕೆ ಬಹುಮತದ ಕೊರತೆ ಬಿತ್ತು. ಸರಳ ಬಹುಮತಕ್ಕೆ ಇನ್ನೂ ಹತ್ತು ಮಂದಿ ಸಂಸದರ ಅಗತ್ಯವಿತ್ತು. ಮಾಂಟೆಸಿನೋ ೧೨ ಮಂದಿ ಸಂಸದರನ್ನು ಖರೀದಿಸುತ್ತಾನೆ. ಜೊತೆಗೆ ಇನ್ನೂ ಐದು ಮಂದಿಯನ್ನು ಕೂಡ. ಆದರೆ ಈ ಐದು ಮಂದಿಯನ್ನು ತಮ್ಮ ಪಕ್ಷಗಳಲ್ಲೇ ಉಳಿದು ಅಲ್ಲಿನ ಗೋಪ್ಯ ಮಾಹಿತಿಯನ್ನು ತನಗೆ ಮುಟ್ಟಿಸುವಂತೆ ಸೂಚಿಸುತ್ತಾನೆ.
೧೯೯೫ರಲ್ಲಿ ಫೂಜಿಮೊರಿ ಮಾಡುವ ನ್ಯಾಯಾಂಗ ‘ಸುಧಾರಣೆ’ಯು ಹಂಗಾಮಿ ನ್ಯಾಯಾಧೀಶರ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.

ಈ ಹಂಗಾಮಿಗಳನ್ನು ಯಾವಾಗ ಬೇಕಾದರೂ ಮನೆಗೆ ಕಳಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ. ಎರಡೇ ವರ್ಷಗಳಲ್ಲಿ ಶೇ.೭೩ರಷ್ಟು ನ್ಯಾಯಾಧೀಶರನ್ನು ಹಂಗಾಮಿಗಳನ್ನಾಗಿ ಮಾಡಲಾಗುತ್ತದೆ. ಸೇವಾ ಭದ್ರತೆ ಇಲ್ಲದ ನ್ಯಾಯಾಧೀಶರು ಒತ್ತಡಗಳಿಗೆ ಮಣಿಯುತ್ತಾರೆ. ಅಧೀನ ನ್ಯಾಯಾಲಯಗಳಲ್ಲಿ ಯಾವ ಕೇಸುಗಳನ್ನು ಯಾವ ನ್ಯಾಯಾಧೀಶರಿಗೆ ವಿಚಾರಣೆಗೆ ವಹಿಸಬೇಕು ಎಂಬುದನ್ನು ಮಾಂಟೆಸಿನೋ ತೀರ್ಮಾನ ಮಾಡುತ್ತಾನೆ. ಸೂಕ್ಷ್ಮ ಸ್ವರೂಪದ ಕೇಸುಗಳನ್ನು ಸ್ನೇಹಪರ ನ್ಯಾಯಾಧೀಶರಿಗೆ ವಹಿಸಲಾಗುತ್ತದೆ. ಸುಪ್ರೀಮ್ ಕೋರ್ಟಿನಲ್ಲಿ ಲಂಚ ಪಡೆದ ನ್ಯಾಯಾಧೀಶರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಬಹುಮತದ ತೀರ್ಪುಗಳನ್ನು ನೀಡುತ್ತಾರೆ. ಪ್ರಾಮಾಣಿಕ ನ್ಯಾಯಾಧೀಶರು ಅಸಹಾಯಕರಾಗುತ್ತಾರೆ. ಯಾಕೆಂದರೆ ಸರ್ಕಾರಕ್ಕೆ ಮೂಗುದಾರ ತೊಡಿಸಬೇಕಾದ ಶಾಸಕಾಂಗ ಮತ್ತು ಪತ್ರಿಕಾಂಗಗಳು ಶಿಥಿಲವಾಗಿರುತ್ತವೆ.
ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದ ಜಾನ್ ಮೆಕ್ ಮಿಲನ್ ಎಂಬ ಪ್ರೊಫೆಸರ್ ಮತ್ತು ಪಾಬ್ಲೋ ಝೋಯ್ದೋ ಎಂಬ ಸಂಶೋಧಕ ಒಟ್ಟುಗೂಡಿ ಎouಡಿಟಿಚಿಟ oಜಿ ಇಛಿoಟಿomiಛಿ Peಡಿsಠಿeಛಿಣives ಎಂಬ ನಿಯತಕಾಲಿಕಕ್ಕೆ ೨೦೦೪ರಲ್ಲಿ ಬರೆದಿರುವ ದೀರ್ಘ ಪ್ರಬಂಧ ಈ ಮೇಲಿನ ವಿವರಗಳನ್ನು ಒಳಗೊಂಡಿದೆ.

ಫೂಜಿಮೊರಿ ಮತ್ತು ಮಾಂಟೆಸಿನೋ ದೇಶ-ಕಾಲವನ್ನು ಮೀರಿ ಅವತರಿಸಬಲ್ಲವರು. ಜನತಂತ್ರಗಳನ್ನು ಕದಿಯಬಲ್ಲವರು. ಹೀಗಾಗಿ ಇತಿಹಾಸ ಮರುಕಳಿಸುತ್ತದೆ ಎಂಬ ಮಾತು ಸಾರ್ವಕಾಲಿಕ ಮತ್ತು ಸಾರ್ವತ್ರಿಕ.

× Chat with us