ಅಂಕಣಗಳು

ತೆರೆಯ ಮೇಲೆ ಕ್ರಿಕೆಟ್‌ ತಾರೆಯರು, ಕ್ರೀಡಾಂಗಣದಲ್ಲಿ ಚಿತ್ರ ತಾರೆಯರು

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ baanaasu@gmail.com

ಎಲ್ಲೆಡೆ ಕ್ರಿಕೆಟ್ ಜ್ವರ. ಇದೀಗ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸಮೂಹ ಸನ್ನಿಯಂತೆ ಹರಡತೊಡಗಿದೆ. ವಾಹಿನಿಗಳಲ್ಲಿ ಅವುಗಳ
ನೇರ ಪ್ರಸಾರ. ಅದರಿಂದಾಗಿ ಇತರ ಧಾರಾವಾಹಿಗಳ ಜನಪ್ರಿಯತೆ ಸಹಜವಾಗಿಯೇ ಇಳಿಯತೊಡಗಿದೆ. ವಾಹಿನಿಗಳಲ್ಲಿ ಮಾತ್ರವಲ್ಲ, ಮಲ್ಟಿಪ್ಲೆಕ್ಸ್ ಗಳಲ್ಲೂ ಇವುಗಳನ್ನು ಪ್ರದರ್ಶಿಸುವ ಕುರಿತಂತೆ ಒಪ್ಪಂದವಾದ ಸುದ್ದಿ. ಕೆಲವು ಚಿತ್ರಮಂದಿರಗಳಲ್ಲೂ ಈ ಬೆಳವಣಿಗೆ ಇದ್ದ ವರ್ತಮಾನವೂ ಇದೆ. ಇದು ಸಹಜವಾಗಿಯೇ ಮನರಂಜನೋದ್ಯಮದ ನಿದ್ದೆಗೆಡಿಸಿದೆ.

ಕನ್ನಡ ಚಿತ್ರ ನಿರ್ಮಾಪಕರ ಸಂಘ ತಕ್ಷಣ ಎಚ್ಚರಗೊಂಡಿದೆ. ಅದು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಈ ಕುರಿತಂತೆ ಪತ್ರ ಮುಖೇನ ದೂರು ಸಲ್ಲಿಸಿದೆ. ಸಾಮಾನ್ಯವಾಗಿ ಚಿತ್ರಮಂದಿರಗಳಿಗೆ ಅನುಮತಿ ನೀಡುವುದು ಚಲನಚಿತ್ರಗಳ ಪ್ರದರ್ಶನಕ್ಕಾಗಿ. ಅಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡುವುದಕ್ಕೆ ಅವು ಅನುಮತಿ ಪಡೆದಿರುವುದಿಲ್ಲ. ಹಾಗಾಗಿ ಅಲ್ಲಿ
ಇವುಗಳ ಪ್ರಸಾರ ಕಾನೂನು ಬಾಹಿರ ಆಗುತ್ತದೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ, ಕ್ರಿಕೆಟ್ ಪಂದ್ಯಾವಳಿ ಆರಂಭ ಆಯಿತು ಎಂದರೆ, ಅದರ ಬೆನ್ನಲ್ಲೇ ಬೆಟ್ಟಿಂಗ್ ದಂಧೆ ಜಾಗೃತವಾಗುತ್ತದೆ. ಯುವ ಸಮೂಹಕ್ಕೆ ಬಹಳ ಆಕರ್ಷಣೆ ಇದರತ್ತ. ಹಾಗಾಗಿಯೇ, ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಅವುಗಳ ಪ್ರಸಾರ ಆಗದಂತೆ ತಡೆಯುವ ಮೂಲಕ ಯುವಜನರು ಹಾದಿ
ತಪ್ಪದಂತೆ, ಜೊತೆಗೆ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಲು ಕೋರಿ ನಿರ್ಮಾಪಕರ ಸಂಘ ಪತ್ರ ಬರೆದಿದೆ. ಈ ಹಿಂದೆ ಹೊತ್ತಿಲ್ಲದ ಹೊತ್ತಲ್ಲಿ ಚಿತ್ರಗಳ ಪ್ರದರ್ಶನ ನಡೆದಾಗಲೂ, ಸಂಘ ಪತ್ರ ಬರೆದು ಅದನ್ನು ತಡೆಯುವಲ್ಲಿ ಸಫಲವಾಗಿತ್ತು.

ಈ ವಾರ ತೆರೆಕಾಣುತ್ತಿರುವ ಕನ್ನಡ ಚಿತ್ರಗಳಲ್ಲಿ ಯೋಗರಾಜ ಭಟ್ಟರ ‘ಮನದ ಕಡಲು’ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಅದಕ್ಕೆ ಕಾರಣವೂ ಇದೆ. ವರ್ಷಗಳ ನಂತರ ‘ಮುಂಗಾರು ಮಳೆ’ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಜೊತೆಯಾಗಿರುವ ಚಿತ್ರ. ತೆರೆಯ ಹಿಂದೆ ಸಮರ್ಥ ತಂಡವಿರುವ, ತೆರೆಯ ಮೇಲೆ ಹೊಸ ಜೋಡಿ ಇರುವ ಪ್ರೇಮಕಥಾನಕ. ‘ಮುಂಗಾರು ಮಳೆ’ ಮಾಡಿದ ಮೋಡಿಯನ್ನೇ ಇದು ಮಾಡಬಹುದು ಎನ್ನುವ ನಿರೀಕ್ಷೆ ಇದೆ.

ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ, ತನಗೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಮೊದಲ ಬಾರಿಗೆ ಅವಕಾಶ ನೀಡಿದ ನಿರ್ಮಾಪಕರ ಚಿತ್ರ ಎನ್ನುವ ಕಾರಣದಿಂದ ಬಂದಿದ್ದ ನಟ ಯಶ್, ಕಾರ್ಯಕ್ರಮಕ್ಕೆ ಯಾರು ಬಂದರು ಎನ್ನುವುದರಿಂದ ಚಿತ್ರ ಗೆಲ್ಲುವುದಿಲ್ಲ; ಅದೇನಿದ್ದರೂ ಚಿತ್ರದ ಶಕ್ತಿಯ ಮೇಲೆ ಗೆಲ್ಲುತ್ತದೆ ಎನ್ನುವ ನಿತ್ಯಸತ್ಯವನ್ನು ಅಲ್ಲಿ ಹೇಳಿದರು.

ಯುಗಾದಿಯ ಪೂರ್ವದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಿಗೆ ಪರಭಾಷೆಯ ಭಾರೀ ಚಿತ್ರಗಳ ಪೈಪೋಟಿ ಇದೆ. ಬಹುಶಃ ಇಂತಹ ಸ್ಪರ್ಧೆ ಅಪರೂಪ. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳ ಬಹುನಿರೀಕ್ಷಿತ ಚಿತ್ರಗಳು ಈ ವಾರವೇ ತೆರೆಗೆ ಬರುತ್ತಿವೆ. ಹಿಂದಿಯ ಸಿಕಂದರ್, ತಮಿಳಿನ ವೀರ ಧೀರ ಸೂರನ್, ತೆಲುಗಿನ ರಾಬಿನ್ ಹುಡ್, ಮಲಯಾಳದ ಎಂಪುರಾನ್ ಈ ಚಿತ್ರಗಳು. ಇವು ಹೀಗೆ ಏಕಕಾಲಕ್ಕೆ ತೆರೆಗೆ ಬರಲು ಮುಖ್ಯ ಕಾರಣ ಯುಗಾದಿಯ ಜೊತೆಯಲ್ಲೇ ಬರುವ ಈದ್.

ಸಿಕಂದರ್, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಚಿತ್ರ. ಗಜನಿ ಖ್ಯಾತಿಯ ಮುರುಗದಾಸ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಸಾಜಿದ್ ನಾಡಿಯದ್‌ವಾಲ. ಕನ್ನಡದ ನಟ ಕಿಶೋರ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತಮಿಳಿನ ವೀರ ಧೀರ ಸೂರನ್, ತಮಿಳು ಮಾತ್ರವಲ್ಲದೆ ಹಿಂದಿ, ಕನ್ನಡ, ತೆಲುಗು, ಮಲಯಾಳ ಭಾಷೆಗಳಲ್ಲೂ ಡಬ್ ಆಗಿ ತೆರೆಗೆ ಬರುತ್ತಿದೆ. ಇದು ತಮಿಳಿನ ಹೆಸರಾಂತ ನಟ ವಿಕ್ರಮ್ ಶೀರ್ಷಿಕಾ ಪಾತ್ರದಲ್ಲಿ ನಟಿಸಿರುವ ಚಿತ್ರ.

ನಿತಿನ್-ಶ್ರೀಲೀಲಾ ಜೋಡಿಯ ರಾಬಿನ್ ಹುಡ್ ತೆಲುಗು ಚಿತ್ರ. ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸಿದ್ದಾರೆ. ಬಹು ನಿರೀಕ್ಷೆಯ ಈ ಚಿತ್ರವೂ ಇದೇ ವಾರ ತೆರೆಗೆ ಬರುತ್ತಿದೆ.

ಕಳೆದೆರಡು ವರ್ಷಗಳಲ್ಲಿ ಮಲಯಾಳದ ಮುಖ್ಯವಾಹಿನಿ ಚಿತ್ರಗಳು ಎಲ್ಲೆಡೆ ಗಮನಸೆಳೆಯತೊಡಗಿವೆ. ಅಂತಹದೇ ನಿರೀಕ್ಷೆಯ ಚಿತ್ರ ಎಲ್-2 : ಎಂಪುರಾನ್. ಇದು ಅದಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಲೂಸಿಫರ್ ಚಿತ್ರದ ಮುಂದುವರಿದ ಅಧ್ಯಾಯ ಎನ್ನಲಾಗಿದೆ. ನಿನ್ನೆ ತೆರೆಕಂಡಿರುವ ಈ ಚಿತ್ರದಲ್ಲಿ ಮಲಯಾಳದ ಜನಪ್ರಿಯ ತಾರೆಯರಾದ ಮೋಹನ್‌ಲಾಲ್, ಪೃಥ್ವಿರಾಜ್
ಸುಕುಮಾರನ್ ಜೋಡಿಯ ಈ ಚಿತ್ರವನ್ನು ನಿರ್ದೇಶಿಸಿರುವವರು ಪೃಥ್ವಿರಾಜ್ ಸುಕುಮಾರನ್. ಬಹುತಾರಾಗಣದ ಈ ಚಿತ್ರ ಅಖಿಲ ಭಾರತ ವ್ಯಾಪ್ತಿಯಲ್ಲಿ ತೆರೆಗೆ ಬಂದಿದೆ. ಅದಕ್ಕಾಗಿ ಈ ಮಲಯಾಳ ಚಿತ್ರವನ್ನು ಇತರ ಭಾಷೆಗಳಿಗೂ ಡಬ್ ಮಾಡಲಾಗಿದೆ.

ಇತರ ಭಾಷೆಗಳ ಚಿತ್ರಗಳೊಂದಿಗೆ ಪೈಪೋಟಿ ಮಾಡಲು ಸಮರ್ಥವಾದ ಚಿತ್ರಗಳಾದರೂ, ಅವುಗಳನ್ನು ವಿತರಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಶಕ್ತಿ, ಸಾಧ್ಯತೆಗಳು ಕೂಡ ಚಿತ್ರದ ಗೆಲುವಿಗೆ ಬಹಳಷ್ಟು ಸಂದರ್ಭಗಳಲ್ಲಿ ಒತ್ತಾಸೆ ಆಗುವುದೂ ಇದೆ. ವಿಶೇಷವಾಗಿ ಆಯಾ ಚಿತ್ರಗಳಿಗೆ ಸಿಗುವ ಚಿತ್ರ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು, ಅಲ್ಲಿನ ಪ್ರದರ್ಶನಗಳ ಸಮಯ ಮತ್ತು ಸಂಖ್ಯೆ ಎಲ್ಲವೂ ಚಿತ್ರಗಳ ಗೆಲವಿನ ಮೇಲೆ ಪರಿಣಾಮ ಬೀರುತ್ತವೆ.

ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆಯ ಕುರಿತಂತೆ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿವೆ. ಎಲ್ಲರೂ ಒಂದೆಡೆ ಕುಳಿತು ಈ ಕುರಿತಂತೆ ಚರ್ಚಿಸಬೇಕು ಎನ್ನುವ ಸಲಹೆಯೂ ಇದೆ. ಕಳೆದ ವಾರ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ವಲಯದ ಸಭೆಯನ್ನೂ ಕರೆಯಿತು. ಆದರೆ ಅಲ್ಲಿ ಸಹಾಯಧನ, ಪ್ರಶಸ್ತಿಗಳ ಕುರಿತು, ಅಲ್ಲಿನ ವಿದ್ಯಮಾನಗಳ ಕುರಿತು ಚಚರ್ಚೆಗಳಾಯಿತೇ ಹೊರತು ಇನ್ನೇನೂ ಆಗಲಿಲ್ಲ ಎನ್ನುತ್ತಾರೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬ ನಿರ್ಮಾಪಕರು.

ಕೆಲವೊಂದು ಅಪವಾದಗಳನ್ನು ಹೊರತುಪಡಿಸಿದರೆ, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಈ ಉದ್ಯಮದ, ಮಾಧ್ಯಮದ ಸಾಕಷ್ಟು ಅರಿವು ಇರುವುದಿಲ್ಲ. ಯಾರು ಬೇಕಾದರೂ, ಬಂಡವಾಳ ಹೂಡಿ ಚಿತ್ರ ನಿರ್ಮಾಪಕರಾಗಬಹುದು ಎನ್ನುವ ವಾತಾವರಣ. ಒಂದೋ ಎರಡೋ ಚಿತ್ರಗಳನ್ನು ನಿರ್ಮಿಸಿದ ಮಂದಿ, ಚಿತ್ರೋದ್ಯಮದ ಸರ್ವಸ್ವವನ್ನೂ ಬಲ್ಲ ಜಾಣರಾಗಿ ಬಿಡುತ್ತಾರೆ. ಉಪದೇಶವನ್ನೂ ಮಾಡುತ್ತಾರೆ. ಚಿತ್ರೋದ್ಯಮದ ಪ್ರಾತಿನಿಧಿಕ ಸಂಘಟನೆಗಳ ಭಾರವಾಹಿಗಳಿಗೂ ತಮ್ಮ ಜವಾಬ್ದಾರಿಯ ಕುರಿತಂತೆ ತಿಳಿಯುವ ಅವಕಾಶ ಕಡಿಮೆ, ಆ ಧಾವಂತವೂ ಇಲ್ಲ ಎನ್ನುವುದು ಅಲ್ಲಿನ ವಾತಾವರಣ ಬಲ್ಲವರ ಮಾತು.

ಇರಲಿ, ಇನ್ನು ಕಲಾವಿದರು. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯ ದಿನ ಕಲಾವಿದರ ಗೈರು ಹಾಜರಿಯನ್ನು ಕಂಡ ಉಪಮುಖ್ಯಮಂತ್ರಿಗಳು ಆಡಿದ ಮಾತು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಮಾರ್ಚ್ 1 ಮತ್ತು 2ರಂದು ಮೈಸೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗಿನ ಅಂತಿಮ ಪಂದ್ಯಾಟ ಇತ್ತು! ಅವರಿಗೆಲ್ಲ ಆಹ್ವಾನ ತಲುಪಿದೆಯೋ
ಇಲ್ಲವೋ ಬೇರೆ ಮಾತು. ಐಪಿಎಲ್ ಮಾತ್ರವಲ್ಲ, ನಮ್ಮಲ್ಲೂ ಸಾಕಷ್ಟು ಕ್ರಿಕೆಟ್ ಪಂದ್ಯಗಳಿವೆ. ಬಾಕ್ಸ್ ಕ್ರಿಕೆಟ್ ಲೀಗ್, ಡಾ.ರಾಜ್ ಕ್ರಿಕೆಟ್ ಕಪ್, ಹೀಗೆ ಪಟ್ಟಿ ಬೆಳೆಯುತ್ತದೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಮಾತ್ರವಲ್ಲ, ಬ್ಯಾಡ್ಮಿಂಟನ್ ಕೂಡ ಇದೆ. ಅಪ್ಪು ಕಪ್ ಬ್ಯಾಡ್ಮಿಂಟನ್, ಸೆಲೆಬ್ರಿಟಿ ಶಟ್ಲ್ ಬ್ಯಾಡ್ಮಿಂಟನ್ ಲೀಗ್ ಮುಂತಾಗಿ. ಅದಕ್ಕೀಗ ಹೊಸ ಸೇರ್ಪಡೆ ಕಬಡ್ಡಿ, ಹೆಣ್ಣುಮಕ್ಕಳ ಕಬಡ್ಡಿ. ಇನ್ನೇನು ಆರಂಭವಾಗಲಿರುವ ಈ ಪಂದ್ಯಾಟ, ಸೆಲೆಬ್ರಿಟಿ ವಿಮೆನ್ಸ್ ಕಬಡ್ಡಿ ಲೀಗ್.

ಚಲನಚಿತ್ರ ನಟನಟಿಯರು ತೆರೆಯ ಮೇಲೆ ಮಾತ್ರವಲ್ಲ ಕ್ರೀಡಾಂಗಣದಲ್ಲೂ ಮಿಂಚಲು ಬರುತ್ತಾರೆ. ಬೆಳ್ಳಿತೆರೆಯ ಮೇಲೆ ಮಿಂಚುವ ಮಂದಿಯನ್ನು ಕ್ರೀಡಾಂಗಣದಲ್ಲಿ, ಹತ್ತಿರದಿಂದ ನೋಡಲು ಬಯಸುವವರೂ ಇರುತ್ತಾರಲ್ಲ! ಆದರೆ ಅಲ್ಲಿ ಮಾತ್ರ ನೋಡಿದರೆ ಸಾಕು ಎನ್ನುವ ಸ್ಥಿತಿ ಬರಬಾರದು. ಹಾಗದಿರಲಿ ಎಂದು ಆಶಿಸೋಣ.

ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆಯ ಕುರಿತಂತೆ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿವೆ. ಎಲ್ಲರೂ ಒಂದೆಡೆ ಕುಳಿತು ಈ ಕುರಿತಂತೆ ಚರ್ಚಿಸಬೇಕು ಎನ್ನುವ ಸಲಹೆಯೂ ಇದೆ. ಕಳೆದ ವಾರ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ವಲಯದ ಸಭೆಯನ್ನೂ ಕರೆಯಿತು. ಆದರೆ ಅಲ್ಲಿ ಸಹಾಯಧನ, ಪ್ರಶಸ್ತಿಗಳ ಕುರಿತು, ಅಲ್ಲಿನ ವಿದ್ಯಮಾನಗಳ ಕುರಿತು ಚರ್ಚೆಗಳಾಯಿತೇ ಹೊರತು ಇನ್ನೇನೂ ಆಗಲಿಲ್ಲ ಎನ್ನುತ್ತಾರೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒಬ್ಬ ನಿರ್ಮಾಪಕರು.

 

 

ಆಂದೋಲನ ಡೆಸ್ಕ್

Recent Posts

ಹನೂರು| ರಾಜ್ಯ ಸರ್ಕಾರದ ವಿರುದ್ಧ ಅಂಡೆ ಕುರುಬನದೊಡ್ಡಿ ಗ್ರಾಮಸ್ಥರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ  ಹನೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ…

34 mins ago

ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಅಮಾನತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರನ್ನು ತಡೆದ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.…

40 mins ago

ಮೈಸೂರು ಪಾಲಿಕೆಯಲ್ಲಿ ಅಕ್ರಮಗಳ ಸಂಖ್ಯೆ ಏರಿಕೆ: ಸಂಸದ ಯದುವೀರ್‌ ಆರೋಪ

ಮೈಸೂರು: ಮೈಸೂರು ನಗರ ಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ…

58 mins ago

ನಮ್ಮ ಪಕ್ಷವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ರೈತರಿಂದ ಬೆಳೆದ ಪಕ್ಷ, ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾಸನ…

2 hours ago

ಗಣರಾಜ್ಯೋತ್ಸವ ಭಾಷಣ ಓದಲೂ ರಾಜ್ಯಪಾಲರ ತಗಾದೆ

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ…

2 hours ago

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ 2025-26ನೇ ಸಾಲಿನ ರಾಜ್ಯಮಟ್ಟದ ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ-2ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಜ.27…

2 hours ago