ನಾ ದಿವಾಕರ
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಜಾತಿ ವ್ಯವಸ್ಥೆಯ ಕರ್ಮಠ ವಿಧಿವಿಧಾನಗಳು ಈಗಲೂ ಸಮಾಜದ ಎಲ್ಲ ಸ್ತರಗಳನ್ನೂ ವ್ಯಾಪಿಸಿರುವ ಹೊತ್ತಿನಲ್ಲಿ, ೨೧ನೇ ಶತಮಾನದ ವಿಕಸಿತ ಭಾರತ ತನ್ನ ಪ್ರಾಚೀನತೆಯ ಪೊರೆ ಕಳಚಿಕೊಂಡು ಆಧುನಿಕತೆಯ ಕವಚವನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು. ವೈಚಾರಿಕತೆ ಅಥವಾ ಆಧುನಿಕತೆ ವಿಶಾಲ ಸಮಾಜದಲ್ಲಿ ಪ್ರಕಟವಾಗುವುದು, ಸಮಾಜದ ಸಾಮೂಹಿಕ ನಡೆನುಡಿಗಳಲ್ಲಿ ಮತ್ತು ಇಲ್ಲಿ ವ್ಯಕ್ತವಾಗುವ ಸಾಂಸ್ಕೃತಿಕ ಅಭಿವ್ಯಕ್ತಿಗಳಲ್ಲಿ. ವಾಸ್ತವದಲ್ಲಿ ಈ ಸಮಾಜವನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯಲು ಅವಶ್ಯವಾಗಿ ಬೇಕಾಗುವ ಬೌದ್ಧಿಕ ಸೃಜನಶೀಲತೆ ಮತ್ತು ಭೌತಿಕ ಕ್ರಿಯಾಶೀಲತೆಯ ನೆಲೆಗಳು ವಿನಾಶದತ್ತ ಸಾಗುತ್ತಿವೆ.
ಕರ್ಮಠ ಜಾತಿ ಶ್ರೇಷ್ಠತೆಯ, ಧಾರ್ಮಿಕ ಮಡಿವಂತಿಕೆಯ ವಾತಾವರಣದಲ್ಲಿ ಬೆಳೆದ ಅನೇಕ ಸಾಹಿತಿ, ಕಲಾವಿದರು ಈ ಸೃಜನಶೀಲ ಪ್ರಯತ್ನಗಳಿಗೆ ಸಾಕ್ಷಿಯಾಗಿರುವುದನ್ನು ಗುರುತಿಸಬಹುದು. ೨೦ನೇ ಶತಮಾನದಲ್ಲಿ ಗುರುತಿಸಬಹುದಾದ ಈ ಗುಣಾತ್ಮಕ ಸುಧಾರಣೆ ಅಥವಾ ಪರಿವರ್ತನೆಯ ಚಿಂತನಾಕ್ರಮಗಳು, ೨೧ನೇ ಶತಮಾನದಲ್ಲಿ ಮತ್ತಷ್ಟು ಮೊನಚಾಗಬೇಕಿತ್ತು. ದುರದೃಷ್ಟವಶಾತ್ ಡಿಜಿಟಲ್ ಯುಗದ ವಿಕಸಿತ ಭಾರತ ಈ ಗುಣಾತ್ಮಕತೆಗೆ ವಿಮುಖವಾಗುತ್ತಿದೆ.
ಸೃಜನಶೀಲತೆಯ ಮತ್ತೊಂದು ಪ್ರಧಾನ ಲಕ್ಷಣ ಎಂದರೆ ಅದು ಸಮಾಜದಲ್ಲಿ ಮನುಜ ಸೂಕ್ಷ್ಮತೆಯನ್ನು ಬೆಳೆಸಲು ನೆರವಾಗುತ್ತದೆ. ವರ್ತಮಾನದ ಆಧುನಿಕ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಅತ್ಯವಶ್ಯವಾಗುವ ಆರೋಗ್ಯಕರ ಮಾನವೀಯ ಗುಣಾಂಶಗಳನ್ನು ತತ್ವ ಸಿದ್ದಾಂತಗಳಿಂದಾಚೆಗೂ ಪಡೆದುಕೊಂಡು, ಭವಿಷ್ಯಕ್ಕಾಗಿ ಆರೋಗ್ಯಕರ-ಸುಸ್ಥಿರ ಸಮಾಜವನ್ನು ರೂಪಿಸುವ ಜವಾಬ್ದಾರಿಯನ್ನು ವರ್ತಮಾನದ ಆಧುನಿಕ ಸಮಾಜ ಹೊರಲೇಬೇಕಿದೆ.
ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟ ಮೋಹನ್ ಲಾಲ್ ನಟನೆಯ ಎಂಪುರಾನ್ ಇದಕ್ಕೊಂದು ಜ್ವಲಂತ-ದುರಂತ ನಿದರ್ಶನ. ‘ಎಂಪುರಾನ್’ ನಾಯಕ ನಟ ಮೋಹನ್ ಲಾಲ್, ತನ್ನ ಅನುಗಾಲದ ಗೆಳೆಯ ಮತ್ತು ಮಲಯಾಳಂ ಚಿತ್ರರಂಗದ ಮೇರು ನಟ ಮಮ್ಮೂಟಿ ಶೀಘ್ರ ಗುಣಮುಖವಾಗಲಿ ಎಂದು ಶಬರಿಮಲೆ ದೇವಸ್ಥಾನದಲ್ಲಿ, ಮಮ್ಮೂಟಿ ಹೆಸರಿನಲ್ಲೇ (ಮುಹಮ್ಮದ್ ಕುಟ್ಟಿ) ಅರ್ಚನೆ ಮಾಡಿಸಿರುವುದು ಕೆಲವು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಾಧ್ಯಮಮ್ ಪತ್ರಿಕೆಯ ಮಾಜಿ ಸಂಪಾದಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಮಮ್ಮೂಟಿಯ ಕೋರಿಕೆಯ ಮೇರೆ ಮೋಹನ್ ಲಾಲ್ ಪೂಜೆ ಮಾಡಿಸಿದ್ದರೆ, ಮಮ್ಮೂಟಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ಈ ವಿವಾದ ಗಂಭೀರ ಸ್ವರೂಪ ಪಡೆಯಲಿಲ್ಲವಾದರೂ, ಇದು ಮುಸ್ಲಿಂ ಸಮುದಾಯದಲ್ಲಿರುವ ಅಂಧ ಶ್ರದ್ಧೆ ಮತ್ತು ಮೂಲಭೂತವಾದ ಒಂದು ನಿದರ್ಶನವಾಗಿ ಕಾಣುತ್ತದೆ. ಮಮ್ಮೂಟಿಯಂತಹ ಒಬ್ಬ ಮೇರು ನಟನನ್ನು ನಿರ್ದಿಷ್ಟ ಧರ್ಮದ ಚೌಕಟ್ಟಿನೊಳಗೆ ಬಂಧಿಸುವುದೇ, ಚಲನಚಿತ್ರ ರಂಗದ ಸೃಜನಶೀಲತೆಯ ಕತ್ತುಹಿಸುಕಿದಂತೆ ಅಲ್ಲವೇ ? ಕರ್ನಾಟಕದ ಚಾಮರಾಜನಗರದ ಶಾಲೆಯಲ್ಲಿ ನಡೆದ ಪ್ರಸಂಗ ಇನ್ನೂ ಆಘಾತಕಾರಿಯಾಗಿದೆ. ಚಾಮರಾಜನಗರದ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲಾ ಬಾಲಕಿಯೊಬ್ಬಳು ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಒಂದನ್ನು ಕಪ್ಪುಬಟ್ಟೆಯಿಂದ, ಮತ್ತೊಂದನ್ನು ಚೇಳಿನ ಚಿತ್ರ ಇರುವ ಬಟ್ಟೆಯಿಂದ ಮುಚ್ಚಿದ್ದಾಳೆ. ‘ಬುರ್ಖಾ ಧರಿಸಿದರೆ ಸತ್ತಮೇಲೆ ಶವಕ್ಕೆ ಏನೂ ಆಗುವುದಿಲ್ಲ, ತುಂಡುಡುಗೆ ತೊಟ್ಟರೆ ನರಕಕ್ಕೆ ಹೋಗುವುದಲ್ಲದೆ, ದೇಹವನ್ನು ಹಾವು ಚೇಳು ತಿನ್ನುತ್ತವೆ’ ಎಂಬ ವಿವರಣೆಯನ್ನೂ ನೀಡಿರುವುದು ವರದಿಯಾಗಿದೆ. ಶಾಲಾ ಮಕ್ಕಳಲ್ಲೇ ಇಂತಹ ಮೌಢ್ಯ ಮತ್ತು ಕ್ರೂರ ಚಿಂತನೆಗಳನ್ನು ಬಿತ್ತುವ ಒಂದು ಸಮಾಜವೂ ನಮ್ಮ ನಡುವೆ ಇರುವುದಕ್ಕೆ ಸಾಕ್ಷಿ. ಈ ಎರಡೂ ಪ್ರಕರಣಗಳು ವಿವಾದವಾಗದೆ ಇದ್ದರೂ, ಹೆಚ್ಚು ಸಾರ್ವಜನಿಕ ಚರ್ಚೆಗೊಳಗಾಗಲಿಲ್ಲ, ಆಗಬೇಕಿತ್ತು.
ಈ ಅಸಹಿಷ್ಣುತೆಯ ಮತ್ತೊಂದು ಆಯಾಮವನ್ನು ಮುಂಬೈನ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಪ್ರಕರಣದಲ್ಲಿ ಗುರುತಿಸಬಹುದು . ಕಳೆದ ವಾರ ಕುನಾಲ್ ಕಾಮ್ರಾ ಬಿಡುಗಡೆ ಮಾಡಿದ ನಯಾ ಭಾರತ್ ಎಂಬ ಯುಟ್ಯೂಬ್ ವಿಡಿಯೋದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯ ವಿರುದ್ಧ ಟೀಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಶಿವಸೇನೆ ಕಾರ್ಯಕರ್ತರು ಆತನ ಕಾಮಿಡಿ ಪ್ರದರ್ಶನ ನಡೆಯುತ್ತಿದ್ದ ಸಭಾಂಗಣದ ಮೇಲೆ ದಾಳಿ ನಡೆಸಿದ್ದಾರೆ. ಸದ್ಯಕ್ಕೆ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಕಾಮ್ರಾ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ೫೦೦ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿರುವುದಾಗಿ ಕಲಾವಿದ ಸ್ವತಃ ಹೇಳಿಕೊಂಡಿದ್ದಾರೆ.
ಆತ್ಮವಿಮರ್ಶೆಯ ಕಲ್ಪನೆಯೇ ನಶಿಸುತ್ತಾ ಹೋಗುವಂತಹ ಯಾವುದೇ ಸಮಾಜಗಳಲ್ಲಿ ಹಾಸ್ಯಪ್ರಜ್ಞೆ ನಶಿಸುತ್ತಾ ಇಲ್ಲವಾಗುತ್ತಲೇ ಹೋಗುತ್ತದೆ. ಬರಹ, ಹಾಡು, ಅಭಿನಯ, ನಟನೆ ಎಲ್ಲವೂ ಸಾಂಪ್ರದಾಯಿಕ ಸಮಾಜವೊಂದರ, ಮೂಲಭೂತವಾದಿ ಚಿಂತನಾ ಕ್ರಮಗಳ ವಕ್ರದೃಷ್ಟಿಯಲ್ಲೇ ಬೆಳೆಯ ಬೇಕಾದ ಪರಿಸ್ಥಿತಿಯೇ ಸಮಾಜವನ್ನು ಪ್ರಾಚೀನತೆಯ ಕಡೆಗೆ ಕರೆದೊಯ್ಯುವ ಸಾಂಸ್ಥಿಕ ವಾಹಕಗಳಾದಾಗ, ಯಾವುದೇ ಸಮಾಜ ವಾದರೂ ತನ್ನೊಳಗಿನ ಸೃಜನಶೀಲತೆಯ ಶಕ್ತಿ ಕಳೆದುಕೊಂಡು, ನೈತಿಕತೆಯ ಪಾತಾಳಕ್ಕೆ ಕುಸಿಯುತ್ತದೆ.
” ೨೦ನೇ ಶತಮಾನದಲ್ಲಿ ಗುರುತಿಸಬಹುದಾದ ಈ ಗುಣಾತ್ಮಕ ಸುಧಾರಣೆ ಅಥವಾ ಪರಿವರ್ತನೆಯ ಚಿಂತನಾಕ್ರಮಗಳು, ೨೧ನೇ ಶತಮಾನದಲ್ಲಿ ಮತ ಷ್ಟು ಮೊನಚಾಗಬೇಕಿತ್ತು. ದುರದೃಷ ವಶಾತ್ ಡಿಜಿಟಲ್ ಯುಗದ ವಿಕಸಿತ ಭಾರತ ಈ ಗುಣಾತ್ಮಕತೆಗೆ ವಿಮುಖವಾಗುತ್ತಿದೆ.”
ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್…
ಹೊಸದಿಲ್ಲಿ : ವಿವಾಹಪೂರ್ವ ದೈಹಿಕ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಮದುವೆಯ ಸುಳ್ಳು…
ಮೈಸೂರು : ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X, ಹಿಂದಿನ ಟ್ವಿಟರ್) ಇಂದು ಸಂಜೆ (ಫೆಬ್ರವರಿ 16)…
ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕ ವ್ಯಾಪಾರ…
ಮಲ್ಕುಂಡಿ : ಕಾಡಾನೆಗಳ ದಾಳಿಯಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ…
ಮೈಸೂರು : ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಪತ್ತೆ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಮತ್ತು ತಾಂತ್ರಿಕ ಸೇವೆ…