ಅಂಕಣಗಳು

ಕಟಕಟೆಯ ಕಥೆಗಳು: ಆತ್ಮಹತ್ಯೆ; ಮಾನವೀಯತೆಯಿಂದ ಪರಿಹಾರ ಕೊಡಿಸುವ ಯತ್ನ

ಮೈಸೂರಿನ ಸಿಟಿ ಮಾರ್ಕೆಟ್ ಬಳಿ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಒಬ್ಬ ತಾಯಿ ಮತ್ತು ಮಗ ಇದ್ದಕ್ಕಿದ್ದಂತೆ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿಬಿಟ್ಟಿದ್ದರು. ಅದೇನೆಂದರೆ, ತಾಯಿ ತನ್ನ ಮಗನಿಗೆ ಸ್ವಲ್ಪ ನಾಜೂಕಾದ ಹುಡುಗಿಯೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆ ತಂದಿದ್ದಳು. ಆ ಹುಡುಗಿ ಪಾಪ ಹೊರಗಿನ ಪ್ರಪಂಚವನ್ನು ನೋಡಿ ತಾನು ಆ ರೀತಿ ಇರಬೇಕು ಎಂಬ ಆಸೆಪಟ್ಟಿದ್ದು ತಪ್ಪೇನಲ್ಲ. ಆದರೆ ಇವನಿಗೆ ಬರುವ ಆದಾಯದಲ್ಲಿ ಸಂಸಾರ ತೂಗಿಸುವುದೇ ಕಷ್ಟ, ಇನ್ನು ಹೆಂಡತಿಯ ಆಸೆಗಳನ್ನು ಹೇಗೆ ಪೂರೈಸಿಯಾನು. ಆ ಕಾರಣ ಅವರಿಬ್ಬರ ಮಧ್ಯೆ ಮನಸ್ತಾಪ ಇದ್ದದ್ದೇನೋ ನಿಜ. ಅದು ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ…

ಅದೇನಾಯ್ತೋ ಏನೋ ಆ ಹುಡುಗಿ ಒಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಳು. ಆ ಹುಡುಗಿಯ ತಂದೆ ಕೊಟ್ಟ ಕಂಪ್ಲೇಂಟ್ ಮೇರೆಗೆ, ಪೊಲೀಸರು 304 ಬಿ ಹಾಗೂ 498 ಎ ಐಪಿಸಿ ಮತ್ತು ವರದಕ್ಷಿಣೆ ನಿರೋಧ ಕಾಯ್ದೆ ಅಡಿಯಲ್ಲಿ ಕೇಸ್ ಮಾಡಿದ್ದರು. ಕೇಸು ಸಾಬೀತಾದರೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಆಗುವ ಸಂಭವ ಇತ್ತು. ನನ್ನ ಸ್ನೇಹಿತರೊಬ್ಬರು ಅವರನ್ನು ನನ್ನ ಬಳಿ ಕಳುಹಿಸಿದರು. ನಾನು ಅವರನ್ನು ಏನಪ್ಪ ಆ ಹುಡುಗಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಸಾಯೋ ಹಾಗೆ ಮಾಡಿದ್ದೀರಲ್ಲ ಎಂದೆ.

ಅವರು, ಇಲ್ಲ ನಾವೇನು ಮಾಡಿಲ್ಲ ಸರ್ ದಯವಿಟ್ಟು ಕೇಸ್ ಮಾಡಿಕೊಡಿ ಎಂದರು. ನ್ಯಾಯಾಲಯದಲ್ಲಿ ವಿಚಾರಣೆ ದಿನ ನಿಗದಿಯಾಯಿತು. ಆ ದಿನ ನಾನು ನ್ಯಾಯಾಲಯದ ಬಳಿ ಹೋದಾಗ ಹುಡುಗಿಯ ತಂದೆ-ತಾಯಿ ಮತ್ತು ಕೆಲ ಸಂಬಂಧಿಕರು ಅಲ್ಲಿಗೆ ಬಂದಿದ್ದರು. ಆರೋಪಿಯು ನನ್ನ ಬಳಿ ಬಂದು, ಅವರ ಬಳಿ ಮಾತನಾಡುತ್ತಿದ್ದೇನೆ, ರಾಜಿ ಮಾಡಿಕೊಳ್ಳುತ್ತೇನೆ ಸರ್ ಎಂದ. ಅದಾದ ನಂತರ 25 ರಿಂದ 30 ನಿಮಿಷ ಅಲ್ಲೇ ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದರು. ನಾನು ಸ್ವಲ್ಪ ದೂರದಲ್ಲಿಯೇ ನಿಂತಿದ್ದೆ. ನನ್ನ ಕಡೆ ಅವರು ಆಗಾಗ ನೋಡುತ್ತಿದ್ದರು. ಸ್ವಲ್ಪ ಸಮಯದ ನಂತರ ಆರೋಪಿ ನನ್ನ ಬಳಿ ಬಂದು ನಾವು ಊರಲ್ಲಿರೋ ಅರ್ಧ ಎಕರೆ ಜಮೀನು ಕೊಡ್ತೀವಿ ಅಂದ್ರೆ ಅವರು ಒಂದು ಎಕರೆ ಬೇಕೇ ಬೇಕು ಅಂತಿದ್ದಾರೆ. ಆಗಲ್ಲ ನೀವು ಕೇಸನ್ನು ನಡೆಸಿ ಕೊಡಿ ಸಾರ್ ಎಂದರು. ನಾನು ಸರಿ ಎಂದು ನ್ಯಾಯಾಲಯದ ಒಳಗಡೆಗೆ ಹೋದೆ.

ಮುಖ್ಯ ವಿಚಾರಣೆ ನಡೆಯುವಾಗ ಸಾಕ್ಷಿಗಳು ಎಲ್ಲ ವಿಚಾರಗಳನ್ನೂ ಸರಿಯಾಗಿ ಹೇಳಿದರು. ನಾನು ಪಾಟಿಸವಾಲಿನಲ್ಲಿ ಯಾವ ಪ್ರಶ್ನೆ ಕೇಳಿದರೂ ಅವರು ಅದನ್ನು ಒಪ್ಪಿಕೊಳ್ಳಲು ಆರಂಭಿಸಿದರು. ನಾನು ಆರೋಪಿಗಳು ವರದಕ್ಷಿಣೆ ಪಡೆದಿಲ್ಲ ಹಾಗೂ ಯಾವುದೇ ರೀತಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿಲ್ಲ ಅಂದಾಗ ಸುಲಭವಾಗಿ ಒಪ್ಪಿಕೊಂಡುಬಿಟ್ಟರು. ನನಗೆ ನಿಜವಾಗಲೂ ತುಂಬಾ ಆಶ್ಚರ್ಯವಾಯಿತು. ಈಗಷ್ಟೇ ನ್ಯಾಯಾಲಯದ ಆಚೆ ಕಿತ್ತಾಡುತ್ತಿದ್ದವರು, ಇಲ್ಲಿ ಆರೋಪಿಗಳ ಪರ ಸಾಕ್ಷಿ ನುಡಿಯುತ್ತಿದ್ದಾರಲ್ಲ ಎಂದುಕೊಂಡು, ಅದೇ ದಿನ ಎಲ್ಲರ ಪಾಟಿ ಸವಾಲು ಮುಗಿಸಿಬಿಟ್ಟೆ.

ಕೇಸ್ ಮುಗಿದ ನಂತರ ನಾನು ಆಚೆ ಬಂದು ನಿಂತಿದ್ದೆ. ಆಗ ನನ್ನ ಬಳಿ ಬಂದ ಮೃತಳ ಕುಟುಂಬದವರು ನಮ್ಮ ಸಾಕ್ಷಿ ಚೆನ್ನಾಗಿ ಬಂತ ಸಾರ್ ಅಂತ ಕೇಳಿದರು. ನನಗೆ ಮತ್ತೆ ಆಶ್ಚರ್ಯ ನನ್ನನ್ಯಾಕೆ ಕೇಳುತ್ತಿದ್ದಾರೆ ಅಂತ. ಮೆಲ್ಲಗೆ ವಿಚಾರ ಮಾಡಿದಾಗ ತಿಳಿದು ಬಂದಿದ್ದು ಏನೆಂದರೆ, ಅವರು ನನ್ನನ್ನು ಅವರ ಕಡೆಯ ಲಾಯರ್ ಅಂತ ತಿಳಿದು ನಾನು ಕೇಳಿದ್ದನ್ನೆಲ್ಲ ಒಪ್ಪಿಕೊಂಡು ಬಿಟ್ಟಿದ್ದರು.

ನನಗೆ ಅವರನ್ನು ನೋಡಿ ಕರುಣೆ ಬಂತು. ಆರೋಪಿ ಬಿಡುಗಡೆಯಾಗುವುದಂತೂ ಗ್ಯಾರಂಟಿ, ಅವರನ್ನು ನೋಡಿದರೆ ತುಂಬಾ ಬಡತನದಲ್ಲಿ ಇದ್ದಂತೆ ಕಂಡು ಬಂತು. ನಾನು ನಮ್ಮ ಆರೋಪಿಯನ್ನು ಕರೆದು ನೋಡಪ್ಪ ಕೇಸ್ ಕಷ್ಟ ಇದೆ. ನಿಮ್ಮ ಅತ್ತೆ ಮಾವಂಗೆ ಏನಾದ್ರು ಕೊಟ್ಟುಬಿಡು ಎಂದೆ. ಅವನು ಮೊದಲು ಒಪ್ಪದಿದ್ದರೂ ನನ್ನ ಒತ್ತಾಯದ ಮೇರೆಗೆ 10 ಗುಂಟೆ ಜಮೀನು ಕೊಡಲು ಒಪ್ಪಿಕೊಂಡ. ನಾನಂದುಕೊಂಡಂತೆ ಆರೋಪಿಗಳು ಬಿಡುಗಡೆಯಾದರು. ಆ ದಿನ ಹೋದವರು ಇಲ್ಲಿಯವರೆಗೂ ಯಾರೂ ಬಂದಿಲ್ಲ. ಆರೋಪಿ ಜಮೀನು ಕೊಟ್ಟನೋ ಇಲ್ಲವೋ ಎಂದೂ ತಿಳಿಯಲಿಲ್ಲ.

andolana

Recent Posts

ಶಿವಾನಂದಪುರಿ ಶ್ರೀಗಳಿಗೆ ಕನಕ ಭವನ ನಿರ್ವಹಣೆ ಹೊಣೆ

ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…

24 mins ago

ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…

29 mins ago

ಹುಲಿ ಸೆರೆಗೆ ಬಂತು ಥರ್ಮಲ್ ಡ್ರೋನ್‌

ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…

33 mins ago

ಕೃಷಿ ಮೇಳಕ್ಕೆ 10 ಲಕ್ಷ ಜನ ಭೇಟಿ

ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ  ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…

38 mins ago

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

10 hours ago