ಬಾ.ನಾ ಸುಬ್ರಹ್ಮಣ್ಯ
ಭಾರತೀಯ ಚಿತ್ರರಂಗದ ಭವಿಷ್ಯದ ಕುರಿತಂತೆ ಇದಮಿತ್ಥಂ ಎಂದು ಹೇಳುವುದು ಈಗಂತೂ ಕಷ್ಟ. ಡಿಜಿಟಲ್ ತಂತ್ರಜ್ಞಾನದ ಭೀಮಹೆಜ್ಜೆ ಮುಂದಿನ ದಿನಗಳಲ್ಲಿ ಹೇಗೆ ಹೊರಳಬಹುದು ಎಂಬುದನ್ನು ಹೇಳುವುದು ಸುಲಭ ಸಾಧ್ಯವಲ್ಲ. ಅದು ಭಾರತೀಯ ಚಿತ್ರರಂಗ ಮಾತ್ರವಲ್ಲ, ವಿಶ್ವದ ಎಲ್ಲ ದೇಶಗಳ ಎಲ್ಲ ಭಾಷೆಗಳ ಚಿತ್ರರಂಗಗಳಿಗೂ ಅನ್ವಯಿಸುವ ಮಾತು.
ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಛಾಯಾಗ್ರಹಣ ತಂತ್ರಜ್ಞಾನದ ಮುಂದುವರಿದ ಅನ್ವೇಷಣೆಯಾಗಿ ಬಂದ ಚಲನಚಿತ್ರ ಮುಂದಿನ ಶತಮಾನದುದ್ದಕ್ಕೂ ದೇಶ-ವಿದೇಶಗಳಲ್ಲಿ ಜನಮನ ಸೂರೆಗೊಂಡದ್ದು, ಮನರಂಜಿಸಿದ್ದು ಹೌದು. ರಂಗಭೂಮಿಯ ತಾಂತ್ರಿಕ ವಿಸ್ತರಣೆ ಎಂದು ಕೂಡ ಅನಿಸಿಕೊಂಡ ಈ ರಂಜನೆ ಕಲೆಯಾಗಿ, ಉದ್ಯಮವಾಗಿ ಅವರವರ ಪಾಲಿಗೆ, ಅವರವರ ಗ್ರಹಿಕೆಯಾಗಿ, ಉಳಿದು ಬೆಳೆದದ್ದು ಹೌದು.
ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಿಂದೆ ಚಿತ್ರೋದ್ಯಮದ ತಜ್ಞರ ಸಮಿತಿಯನ್ನು ರಚಿಸಿ, ವರದಿಯನ್ನು ಪಡೆದು ಮುಂದುವರಿಯುವುದಿತ್ತು. ೧೯೭೯ರಲ್ಲಿ ಕೋಟ ಶಿವರಾಮ ಕಾರಂತರ ಅಧ್ಯಕ್ಷತೆಯ ಸಮಿತಿಯೊಂದರ ರಚನೆಯಾಗಿತ್ತು. ಆ ಸಮಿತಿಯಲ್ಲಿ ಎಂ. ಭಕ್ತವತ್ಸಲ, ಶಾಮ್ ಬೆನಗಲ್, ತಾರಾಚಂದ್ ಭರ್ಜಾತ್ಯಾ, ಬಿಕ್ರಂಸಿಂಗ್, ಬಸುಭಟ್ಟಾಚಾರ್ಯ, ಮನೋಜ್ ಕುಮಾರ್, ರಮಾನಂದ ಸಾಗರ್, ಅಡೂರ್ ಗೋಪಾಲಕೃಷ್ಣನ್, ತರುಣ್ ಮುಜುಂದಾರ್, ವಿಜಯ್ ಮುಲೆ, ಜಗದೀಶ್ ಪಾರಖ್, ನೀಲಕಂಠನ್, ಮೃಣಾಲ್ ಸೇನ್ ಅಲ್ಲದೆ, ಡಿವಿಎಸ್ ರಾಜು, ಡಿ. ರಾಮಾನುಜಂ, ಸಂತೋಷ್ ಸಿಂಗ್ ಜೈನ್ ಮುಂತಾದ ಚಿತ್ರೋದ್ಯಮದ ಗಣ್ಯರು ಸದಸ್ಯರಾಗಿದ್ದರು. ದೇಶದ ವಿವಿಧ ರಾಜ್ಯಗಳ ವಾರ್ತಾ ಸಚಿವರ ಸಭೆಯಲ್ಲಿನ ನಿರ್ಣಯದಂತೆ ಈ ಸಮಿತಿಯನ್ನು ರಚಿಸಿ, ಉದ್ಯಮದ ಬೇಕು ಬೇಡಗಳನ್ನು ತಿಳಿಯುವ ಉದ್ದೇಶವಾಗಿತ್ತು.
ಅದರ ಶಿಫಾರಸುಗಳಲ್ಲಿ ರಾಷ್ಟ್ರೀಯ ಚಲನಚಿತ್ರ ನೀತಿಯೊಂದನ್ನು ಹೊರತರಬೇಕು ಎನ್ನುವುದು ಒಂದಾಗಿತ್ತು. ಸಮಾಜದ ಮೇಲೆ ಸಿನಿಮಾ ಬೀರುವ ಅಗಾಧ ಪರಿಣಾಮದ ಕಾರಣ, ಅದರ ಸಾಂಸ್ಕೃತಿಕ ಗುಣಮಟ್ಟವನ್ನು ವೃದ್ಧಿಸಲು, ದೇಶಾದ್ಯಂತ ಅತಿ ಹೆಚ್ಚು ಮಂದಿಗೆ ಸಿನಿಮಾ ನೋಡಲು ಅವಕಾಶವಾಗಲು, ಸಿನಿಮಾ ಬೆಳವಣಿಗೆಯನ್ನು ಸಾಂಸ್ಕೃತಿಕ ಮಾಧ್ಯಮವಾಗಿ, ಕಲಾತ್ಮಕ ಅಭಿವ್ಯಕ್ತಿಯಾಗಿ, ಸಂವಹನ, ಮನರಂಜನೆ, ಮನೋವಿಕಾಸಗಳಿಗೆ ಪೂರಕವಾಗಿಸಲು, ಚಲನಚಿತ್ರ ರಸಗ್ರಹಣ ಮತ್ತು ಪ್ರಜ್ಞೆಯನ್ನು ತಿಳಿ ಹೇಳುವ ಭಾಗವಾಗಿಸಲು ಸೇರಿದಂತೆ, ಹಲವು ಆಶಯಗಳನ್ನು ರಾಷ್ಟ್ರೀಯ ಚಲನಚಿತ್ರ ನೀತಿ ಹೊಂದಿರಬೇಕು ಎಂದು ಹೇಳಲಾಗಿತ್ತು.
ಇದು ಮಾತ್ರವಲ್ಲ, ಚಿತ್ರೋದ್ಯಮವನ್ನು ಉದ್ಯಮವಾಗಿ ಅಂಗೀಕರಿಸುವ, ಆ ಮೂಲಕ ಇತರ ಉದ್ಯಮಗಳಿಗೆ ದೊರಕುವ ಎಲ್ಲ ಸೌಲಭ್ಯಗಳನ್ನೂ ಚಿತ್ರರಂಗಕ್ಕೂ ಒದಗಿಸುವ ಶಿಫಾರಸು ಅಲ್ಲಿತ್ತು. ಕಿರುಚಿತ್ರಗಳು, ಸಾಕ್ಷ್ಯ ಚಿತ್ರಗಳು, ವಾರ್ತಾ ಚಿತ್ರಗಳು, ಶೈಕ್ಷಣಿಕ ಚಿತ್ರಗಳು, ವೈಜ್ಞಾನಿಕ ಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ಮತ್ತು ಅವುಗಳನ್ನು ಶಾಲೆ, ಕಾಲೇಜುಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆಗಳ ಮೂಲಕ ಸಾಮಾಜಿಕ ಪ್ರಗತಿಗೆ ಅನುವು ಮಾಡಿಕೊಡುವ ಪ್ರಯತ್ನ, ದೇಶದ ಎಲ್ಲ ಕಡೆ ಮಕ್ಕಳ ಚಲನಚಿತ್ರಗಳ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನಗಳ ವ್ಯವಸ್ಥೆಗಳೇ ಮೊದಲಾದ ಕೆಲಸಗಳ ಕುರಿತು ಅಲ್ಲಿ ಹೇಳಲಾಗಿತ್ತು.
ಇದೀಗ ಕೋಟ ಶಿವರಾಮ ಕಾರಂತರ ಅಧ್ಯಕ್ಷತೆಯ ಸಮಿತಿಯ ಶಿಫಾರಸು ಮತ್ತು ವಿವರಗಳ ಪ್ರಸ್ತಾಪಕ್ಕೆ ಕಾರಣವಿಷ್ಟೆ. ಹಿಂದಿನ ದಿನಗಳಲ್ಲಿ ಕನಿಷ್ಠ ಚಿತ್ರರಂಗದ ಬೇಕು ಬೇಡಗಳ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿ ವರದಿ ಕೊಡುವಂತೆ ಕೋರಲಾಗುತ್ತಿತ್ತು. ಪ್ರದರ್ಶನ ವಲಯ, ಹಂಚಿಕಾ ವಲಯ, ನಿರ್ಮಾಣ ವಲಯಗಳ ಬೇಡಿಕೆಗಳ ಕುರಿತು ಅಧ್ಯಯನ ಮಾಡಿ ಶಿಫಾರಸುಗಳನ್ನು ನೀಡುವಂತೆ ಹಿಂದಿನ ಸರ್ಕಾರಗಳು ತಜ್ಞರ ಸಮಿತಿ ರಚಿಸಿ ವರದಿಗಳನ್ನು ಪಡೆದುಕೊಂಡು ಅದರಂತೆ ನೆರವಾಗಿತ್ತು.
ಈ ಅಂಕಣದಲ್ಲಿ ಈ ಹಿಂದೆ ಪ್ರಸ್ತಾಪವಾದಂತೆ ಹಿರಿಯ ಪತ್ರಕರ್ತ ವಿ. ಎನ್. ಸುಬ್ಬರಾಯರ ಅಧ್ಯಕ್ಷತೆಯಲ್ಲಿ ಚಲನಚಿತ್ರ ರಂಗದ ಪ್ರಮುಖರನ್ನು ಒಳಗೊಂಡ ಸಮಿತಿ ನೀಡಿದ ವರದಿಯ ನಂತರ ಮುಂದೆ ಹೊಸ ಸಮಿತಿಯ ರಚನೆ ಆಗಲಿಲ್ಲ. ಅಂದಿನ ದಿನಮಾನಕ್ಕೂ ಇಂದಿಗೂ ಅಜಗಜಾಂತರ. ಆಗ ಸೆಲ್ಯುಲಾಯಿಡ್‌ನಲ್ಲಿದ್ದ ಸಿನಿಮಾ ಈಗ ಡಿಜಿಟಲ್‌ಗೆ ಹೊರಳಿದೆ. ಚಿತ್ರನಿರ್ಮಾಣ, ಹಂಚಿಕೆ, ಪ್ರದರ್ಶನ ಎಲ್ಲವೂ ಬದಲಾಗಿದೆ. ಇಂದು ಚಲನಚಿತ್ರೋದ್ಯಮದ ಅಗತ್ಯಗಳೇನು ಎನ್ನುವುದನ್ನು ತಿಳಿದು ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಅಗತ್ಯ ಇದೆ.
ರಾಜ್ಯದಲ್ಲೊಂದು ಚಲನಚಿತ್ರ ನೀತಿ ಇದೆ. ೨೦೧೧ರಲ್ಲಿ ಜಾರಿಗೆ ಬಂದ ನೀತಿ. ಐದು ವರ್ಷಗಳ ನಂತರ ಅದು ಬದಲಾಗಬೇಕಿತ್ತು. ಅದು ಸಮಗ್ರ ಚಲನ ಚಿತ್ರ ನೀತಿ ಆಗಿರಲಿಲ್ಲ. ಸಹಾಯಧನ, ಪ್ರಶಸ್ತಿ, ತೆರಿಗೆ ವಿನಾಯಿತಿಗಳಿಗೆ ಸಂಬಂಧಪಟ್ಟಂತೆ ನಿಯಮಾವಳಿಗಳು ಮುಖ್ಯವಾಗಿದ್ದ ನೀತಿ ಅದು. ತುರ್ತಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಕಾರಣದಿಂದ ಅದು ಅವಸರದ ನೀತಿ ಎನ್ನಲಾಗುತ್ತಿದೆ.
ಅದರಲ್ಲಿನ ಕೆಲವೊಂದು ನಿಯಮಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ತರಲಾಗುತ್ತಿದೆಯೇ ವಿನಾ ಹೊಸ ನೀತಿಯನ್ನು ತರುವ ಕುರಿತಂತೆ ಯಾವುದೇ ಕಾಳಜಿ ಇದ್ದಂತಿಲ್ಲ. ಅದು ಉದ್ಯಮದಲ್ಲೂ ಇಲ್ಲ. ಅತ್ತ ಸರ್ಕಾರದಲ್ಲೂ ಇಲ್ಲ. ರಾಜ್ಯ ಚಲನಚಿತ್ರ ನೀತಿ ಜಾರಿಗೆ ಬರುವ ವೇಳೆ, ಜಿಎಸ್‌ಟಿ ಬಂದಿರಲಿಲ್ಲ. ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಇತ್ತು. ಆದರಂತೆ ಈಗ ಎಲ್ಲಚಿತ್ರಗಳಿಗೂ ಜಿಎಸ್‌ಟಿ ಇದೆ. ಕನ್ನಡ ಚಿತ್ರಗಳಿಗೆ ಅದರಿಂದ ವಿನಾಯಿತಿ ಇಲ್ಲ. ಅದರ ಬದಲಿಗೆ ಈ ಚಿತ್ರಗಳಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎನ್ನುವ ಕುರಿತಂತೆ ಸರ್ಕಾರ ನಿರ್ಧರಿಸಬಹುದು.
ಇನ್ನು ಸಹಾಯಧನ ಮತ್ತು ಪ್ರಶಸ್ತಿಗಳು. ಕಾರಣಾಂತರಗಳಿಂದ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇವುಗಳನ್ನು ನೀಡಲಾಗಿಲ್ಲ. ಚಲನಚಿತ್ರ ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳಬೇಕಾದ ರೀತಿಯಲ್ಲಿ, ಸಮಾಜಕ್ಕೆ ಪೂರಕವಾಗಿ ಬಳಸಿಕೊಳ್ಳಲಾಯಿತೇ ಎಂದರೆ ‘ಹೌದು’ ಎನ್ನುವ ಉತ್ತರ ಕಷ್ಟಸಾಧ್ಯ. ರಂಗಭೂಮಿಯ ವಿಸ್ತರಣೆ ಇದು ಎಂದು ಹೇಳಿದರಾದರೂ, ಒಮ್ಮೆ ಸಿದ್ಧವಾದ ಚಲನಚಿತ್ರ ಪ್ರದರ್ಶನದ ಸಂದರ್ಭದಲ್ಲಿ, ನಾಟಕದ ಪ್ರದರ್ಶನದ ವೇಳೆ ಆಗುವಂತೆ ಬೇರೊಂದು ರೂಪ ಪಡೆಯುವುದು ಸಾಧ್ಯವಿಲ್ಲವೆನ್ನಿ. ಕೊರೊನಾ ಬೇರೆ ಅಡ್ಡವಾಗಿತ್ತು. ಈಗ ಆ ಕೆಲಸ ಸಾಗಿದೆ. ಈ ನಡುವೆ ಉದ್ಯಮದ ಮಂದಿ, ಅದರಲ್ಲೂ ಸಹಾಯಧನಕ್ಕೆಂದೇ ಸಂತೆಗೆ ಮೂರು ಮೊಳ ನೇಯುವ ಮಂದಿಯ ಆರೋಪ, ನೋವುಗಳ ದನಿಯೂ ಕೇಳಿಬರತೊಡಗಿದೆ. ಸರ್ಕಾರ ಸಹಾಯಧನಕ್ಕೆಂದು ಮೀಸಲಿಟ್ಟ ಮೊತ್ತವನ್ನು ಸಮನಾಗಿ ಹಂಚಿಬಿಡಿ ಎನ್ನುವ ಮಂದಿಯೂ ಇದ್ದಾರೆ.
ಸರ್ಕಾರ ಉತ್ತಮ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಸಹಾಯಧನ ನೀಡುತ್ತದೆ; ರಿಮೇಕ್, ಡಬ್ಬಿಂಗ್ ಚಿತ್ರಗಳಿಗೆ ಈ ಉತ್ತೇಜನ ಇಲ್ಲ ಎಂದು ಹೇಳಿದೆಯಾದರೂ, ಯಾವುದೇ ಎಗ್ಗಿಲ್ಲದೆ ರಿಮೇಕ್ ಚಿತ್ರಗಳನ್ನು ಸಹಾಯ ಧನ ಪಡೆಯಲು ಕಳುಹಿಸುತ್ತಾರೆ ಎನ್ನುತ್ತಿವೆ ಮೂಲಗಳು. ರಂಗೋಲಿಯಡಿಗೆ ನುಗ್ಗುವ ಜಾಯಮಾನ ಇಲ್ಲಿ ಸ್ವಲ್ಪ ಹೆಚ್ಚೇ ಎನ್ನಿ. ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು , ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಚಿತ್ರಗಳು, ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನ ಕಂಡ ಚಿತ್ರಗಳು ನೇರವಾಗಿ, ಆಯ್ಕೆ ಸಮಿತಿಯ ಮುಂದೆ ಬರದೆ ಸಹಾಯಧನ ಪಡೆಯಲು ಅರ್ಹತೆ ಹೊಂದಿರುತ್ತವೆ.
ಆದರೆ, ೨೦೧೯ರ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಕೆಟ್ಟ ಬೆಳವಣಿಗೆಯೊಂದು ಮಾನ್ಯತೆ ಪಡೆದ ಚಿತ್ರೋತ್ಸವಗಳ ನೇರ ಸಹಾಯಧನಕ್ಕೆ ಕಲ್ಲುಹಾಕಿತು. ಆ ವರ್ಷ, ಕನ್ನಡ ಚಿತ್ರಗಳತ್ತ ಅಲ್ಲಿ ವಿಶೇಷ ಗಮನವಿತ್ತು. ಹತ್ತು ಕನ್ನಡ ಚಿತ್ರಗಳು, ಅಲ್ಲದೆ ಇಲ್ಲಿನ ಪ್ರಾದೇಶಿಕ ಭಾಷಾ ಚಿತ್ರಗಳು, ಮಕ್ಕಳ ಚಿತ್ರಗಳು ಸೇರಿದಂತೆ ೧೯ ಚಿತ್ರಗಳು ನಮ್ಮ ರಾಜ್ಯದಿಂದಲೇ ಇದ್ದವು. ಆಯ್ಕೆ ಮಾಡುವ ವ್ಯಕ್ತಿ ಚಿತ್ರಗಳ ಗುಣಮಟ್ಟಕ್ಕಿಂತ ಬೇರೆಯೇ ಆದ ದಾರಿಕಂಡುಕೊಂಡಿದ್ದ. ಅಲ್ಲಿ ಪ್ರದರ್ಶನ ಕಂಡ ಚಿತ್ರಗಳು ತಲಾ ೧೮. ೭೫ ಲಕ್ಷ ರೂ. ಸಹಾಯಧನ ನೇರವಾಗಿ ಪಡೆಯುತ್ತಿದ್ದವು.
ಇದು ತಿಳಿಯುತ್ತಿದ್ದಂತೆ ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಸ್ಪರ್ಧೆಯಲ್ಲಿದ್ದ ಚಿತ್ರಗಳಿಗೆ ಮಾತ್ರ ಎಂದು ಚಲನಚಿತ್ರ ನೀತಿಗೆ ತಿದ್ದುಪಡಿ ತರಲಾಯಿತು. ಮುಂದೆ ಅದು ಇನ್ನೂ ಬದಲಾಗಿ, ಮಾನ್ಯತೆ ಯಾವ ವಿಭಾಗಕ್ಕೆ ಸಂದಿದೆಯೋ ಆ ವಿಭಾಗದಲ್ಲಿದ್ದು ಗೆದ್ದರೆ ಮಾತ್ರ ಎಂದು ಮತ್ತೆ ತಿದ್ದುಪಡಿ ತರಲಾಗಿದೆ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಮಾನ್ಯತೆಯನ್ನು ನಾಲ್ಕು ವಿಭಾಗ ಗಳಲ್ಲಿ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಿರುವ ಚಿತ್ರೋತ್ಸವ, ವಿಶೇಷ ವಿಭಾಗಗಳ ಸ್ಪರ್ಧೆ ಇರುವ ಚಿತ್ರೋತ್ಸವ, ಸ್ಪರ್ಧೆ ಇಲ್ಲದೆ ಇರುವ ಚಿತ್ರೋತ್ಸವ ಮತ್ತು ಕಿರುಚಿತ್ರಗಳ ಚಿತ್ರೋತ್ಸವ. ಬೆಂಗಳೂರು ಅಂತಾ ರಾಷ್ಟ್ರೀಯ ಚಿತ್ರೋತ್ಸವ ವಿಶೇಷ ವಿಭಾಗದಲ್ಲಿದೆ. ನಮ್ಮಲ್ಲಿ ಏಷ್ಯಾ ಚಿತ್ರಗಳ ಸ್ಪರ್ಧೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಚಿತ್ರೋತ್ಸವಕ್ಕೆ ಮಾನ್ಯತೆ ನೀಡುವುದಕ್ಕೂ ಕರ್ನಾಟಕ ಸರ್ಕಾರ ನೀಡುವ ಸಹಾಯಧನ ನಿಯಮಾವಳಿಗೂ ಸಂಬಂಧ ಬೇಕೇ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಒಂದಂತೂ ಹೌದು. ಇತರ ಭಾರತೀಯ ಭಾಷಾ ಚಿತ್ರಗಳಂತೆ ಕನ್ನಡ ಚಿತ್ರರಂಗವೂ ಕುಸಿಯುತ್ತಿದೆ. ಆದರೆ ಅದನ್ನು ಯಾರೂ ಒಪ್ಪಿಕೊಳ್ಳುವುದು ಕಷ್ಟ. ಜನಪ್ರಿಯ ನಟರ ಬೆನ್ನು ಬಿದ್ದು ಅದ್ಧೂರಿ ಚಿತ್ರಗಳನ್ನು ನಿರ್ಮಿಸುವ ಕಾರ್ಪೊರೇಟ್ ಸಂಸ್ಥೆಗಳು ಈಗ ಸಕ್ರಿಯವಾಗಿವೆ. ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆ. ಸಣ್ಣ ಪುಟ್ಟ ಚಿತ್ರಗಳು ಚಿತ್ರರಂಗವನ್ನು ನಿರಂತರವಾಗಿ ಚಲನಶೀಲವಾಗಿಸಿದರೆ, ಅದ್ಧೂರಿ ಚಿತ್ರಗಳು ಇತ್ತ ತಿರುಗುವಂತೆ ಆಗೊಮ್ಮೆ ಈಗೊಮ್ಮೆ ಮಾಡುತ್ತವೆ. ಜೊತೆಗೆ ಸಮಾನಾಂತರ ಪ್ರಯತ್ನಗಳೂ. ಇವುಗಳ ಬೇಕುಬೇಡಗಳನ್ನು ಗಮನದಲ್ಲಿಟ್ಟುಕೊಂಡ ಚಲನಚಿತ್ರ ನೀತಿಯೊಂದರ ಅಗತ್ಯ ಇಂದು ಇದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸುತ್ತಾರೆ ಎಂದುಕೊಳ್ಳೋಣ.
ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್ ಠಾಣೆ ವ್ಯಾಪ್ತಿಯ…
ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…
ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ…
ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…
ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…
ಬೆಂಗಳೂರು: ನಿಮಗೆಲ್ಲಾ ಡಿಬಾಸ್, ಆ ಡಿಬಾಸ್ ನನಗೆ ಮಗ ನೆನಪಿಟ್ಟುಕೊಳ್ಳಿ. ಇನ್ನೆರಡು ತಿಂಗಳಲ್ಲಿ ದರ್ಶನ್ ಹೊರಬರುತ್ತಾರೆ ಎಂದು ನಟ ರವಿಚಂದ್ರನ್…