ಬಾ.ನಾ ಸುಬ್ರಹ್ಮಣ್ಯ
ಕೊನೆಕ್ಷಣದ ನಿರ್ಧಾರಗಳಿಲ್ಲದೆ ಹೋದರೆ, ಈ ವಾರ ಹೊಸ ಕನ್ನಡ ಚಿತ್ರಗಳ ಬಿಡುಗಡೆ ಇರುವುದಿಲ್ಲ. ಮಕರ ಇಳಿಸಂಕ್ರಮಣ, ಪೊಂಗಲ್ ವೇಳೆ ತಮಿಳು, ತೆಲುಗು ಚಿತ್ರಗಳ ಬಿಡುಗಡೆ ಇರುತ್ತದೆ. ಜನಪ್ರಿಯ ನಟರ ಚಿತ್ರಗಳು ಪೊಂಗಲ್, ದೀಪಾವಳಿ ಮುಂತಾದ ಹಬ್ಬಗಳಿಗಾಗಿ ಕಾಯುವುದೂ ಇದೆ. ತೆಲುಗಿನಲ್ಲೂ ಕೂಡ. ಆದರೆ ಕನ್ನಡ ಚಿತ್ರರಂಗದಲ್ಲಿ ಅಂತಹ ಪರಿಪಾಠ ಕಡಿಮೆ. ಯುಗಾದಿ, ದಸರಾ ವೇಳೆಗೆ ಕೆಲವೊಮ್ಮೆ ಜನಪ್ರಿಯ ನಟರ ಚಿತ್ರಗಳು ತೆರೆಗೆ ಬರುವುದಿದೆ.
ಹಿಂದಿನ ದಿನಗಳ ಮಾತು ಒತ್ತಟ್ಟಿಗಿರಲಿ, ಈ ವಾರ ಕನ್ನಡ ಚಿತ್ರಗಳ ಬಿಡುಗಡೆ ಏಕಿಲ್ಲ? ಈ ಹಿಂದೆ ಜನವರಿ 12ಕ್ಕೆ ತಮ್ಮ ಚಿತ್ರದ ಬಿಡುಗಡೆ ಎಂದು ಪ್ರಕಟಿಸಿದವರು ತಾಂತ್ರಿಕ ಕಾರಣದ ನೆಪ ಹೇಳಿ ಮುಂದಿನ ವಾರ ಬಿಡುಗಡೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಈ ವಾರ ತೆರೆಗೆ ಬರುತ್ತಿರುವ ಪರಭಾಷಾ ಚಿತ್ರಗಳು. ಏಳು ಅದ್ದೂರಿ ತಮಿಳು ಮತ್ತು ತೆಲುಗು ಚಿತ್ರಗಳು ಈ ವಾರ ತೆರೆಗೆ ಬರುತ್ತಿವೆ.
ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’, ಶಿವ ಕಾರ್ತಿಕೇಯನ್ ಅಭಿನಯದ ‘ಅಯಲಾನ್’, ಅರುಣ್ ವಿಜಯ್ ಅಭಿನಯದ ‘ಮಿಷನ್ -ಚಾಪ್ಟರ್ 1’, ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂ’, ವೆಂಕಟೇಶ್ ಅಭಿನಯದ ‘ಸೈಂಧವ’, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’ ಮತ್ತು ತೇಜ ಸಜ್ಜಾ ಅಭಿನಯದ ‘ಹನುಮ್ಯಾನ್’ ಈ ಚಿತ್ರಗಳು. ಇವುಗಳಲ್ಲಿ ಕೆಲವು ಕನ್ನಡದಲ್ಲೂ ಡಬ್ ಆಗಿ ಪ್ರದರ್ಶನ ಕಾಣುತ್ತಿವೆ. ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ. ‘ಜೈಲ’ ಚಿತ್ರದ ನಂತರ ಅವರು ಅಭಿನಯಿಸಿದ ತಮಿಳು ಚಿತ್ರವದು.
ಪರಭಾಷಾ ಚಿತ್ರಗಳು ತೆರೆಗೆ ಬರುತ್ತಿರುವ ಕಾರಣ ಕನ್ನಡ ಚಿತ್ರಗಳ ಬಿಡುಗಡೆ ಇಲ್ಲ ಎನ್ನುವುದನ್ನು ಸಂಬಂಧಪಟ್ಟ ಮಂದಿ ಗಮನಿಸಿಲ್ಲವೇ? ಕಳೆದ ತಿಂಗಳು ‘ಕಾಟೇರ’ ಚಿತ್ರದ ಬಿಡುಗಡೆ ಪೂರ್ವದ ಪತ್ರಿಕಾಗೋಷ್ಠಿಯೊಂದರಲ್ಲಿ, ನಟ ದರ್ಶನ್ ಅವರು, ‘ನಮ್ಮ ನೆಲದಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನಾವೇಕೆ ಹೆದರಬೇಕು? ಹೊರಗಿನಿಂದ ಬರುವವರು ಹೆದರಬೇಕು’ ಎಂದಿದ್ದರು. ಆ ಚಿತ್ರ ತೆರೆಗೆ ಬರುವ ವೇಳೆ ಪರಭಾಷೆಯ ಭಾರೀ ಚಿತ್ರಗಳೂ ಇದ್ದವೆನ್ನಿ.
ಕಳೆದ ವರ್ಷ ಪ್ರಮಾಣಪತ್ರ ಪಡೆದು ಈ ವರ್ಷ ತೆರೆಗೆ ಬರಲು ಕಾದಿರುವ ಚಿತ್ರಗಳು ಸಾಕಷ್ಟಿವೆ. ಹೊಸಬರ ಚಿತ್ರಗಳ ಜೊತೆಗೆ ಜನಪ್ರಿಯ ನಟರ ಅದ್ದೂರಿ ಚಿತ್ರಗಳ ಸಾಲೂ ಇದೆ. ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅದರ ಒಳಗೆ ಚಿತ್ರಗಳನ್ನು ತೆರೆಗೆ ತರುವ ಅವಸರದವರೇ ಹೆಚ್ಚು. ಸಾಂಪ್ರದಾಯಿಕ ಬೇಸಿಗೆ ರಜೆಯ ದಿನಗಳು ಅವು ಎನ್ನುವುದು ಲೆಕ್ಕಾಚಾರ. ಆದರೆ ಮಳೆಯ ಹಾಗೆ, ಈಗ ಪರೀಕ್ಷೆಗಳೂ ಹಿಂದಿನಂತೆ ಮಾರ್ಚ್‌ಗೆ ಸೀಮಿತವಾಗಿಲ್ಲ.
ಪ್ರಮಾಣಪತ್ರ ಪಡೆದ ಚಿತ್ರಗಳು ಬಿಡುಗಡೆಗೆ ಹರಸಾಹಸ ಮಾಡುತ್ತಿವೆ. ಇತ್ತ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿ, ಡಿಸೆಂಬರ್ 31ರೊಳಗೆ ಸಿಗದೆ ಇರುವ ಒಂದಷ್ಟು ಮಂದಿ ನಿರ್ಮಾಪಕರಿದ್ದಾರೆ. ಅದರಲ್ಲಿ ಬಹಳಷ್ಟು ಮಂದಿ, ರಾಜ್ಯದಲ್ಲಿ ಸಿಗುವ ಸಹಾಯಧನ, ಪ್ರಶಸ್ತಿ ಇವುಗಳತ್ತ ಗಮನ ಹರಿಸಿರುವವರು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ, ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲೇ ಸೂಚನಾ ಪತ್ರವೊಂದು ಚಿತ್ರೋದ್ಯಮದ ಸಂಸ್ಥೆಗಳಿಗೆ ಬಂತು. ಡಿಸೆಂಬರ್ 31ರ ಒಳಗೆ ಪರಮಾಣಪತ್ರ ಪಡೆಯಲು ಬಯಸುವ ನಿರ್ಮಾಪಕರು ನವೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಬೇಕು ಎನ್ನುವುದು ಅದರ ಒಕ್ಕಣೆಯಾಗಿತ್ತು. ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದರು ಕೂಡ.
ನವೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಾದೇಶಿಕ ಅಧಿಕಾರಿಯನ್ನು ಲಂಚದ ಆರೋಪದ ಮೇಲೆ ಬಂಧಿಸಿದ ನಂತರ ಕೆಲವು ದಿನಗಳ ಕಾಲ ಚಿತ್ರಗಳ ವೀಕ್ಷಣೆ ಇರಲಿಲ್ಲ. ಇದರಿಂದಾಗಿ, ಡಿಸೆಂಬರ್ 31ರ ಒಳಗೆ ಎಲ್ಲ ಚಿತ್ರಗಳನ್ನೂ ವೀಕ್ಷಿಸುವುದು ಆಗಲಿಲ್ಲ. ಮೂಲಗಳ ಪ್ರಕಾರ ಅರುವತ್ತಕ್ಕೂ ಹೆಚ್ಚು ಚಿತ್ರಗಳನ್ನು ಡಿಸೆಂಬರ್ ಒಳಗೆ ಪ್ರಮಾಣೀಕರಣ ಮಂಡಳಿ ವೀಕ್ಷಿಸಲು ಆಗಲಿಲ್ಲ. ಈಗ ಆ ನಿರ್ಮಾಪಕರೆಲ್ಲ ಒಂದಾಗಿ ತಮಗೆ ನ್ಯಾಯ ಬೇಕು ಎಂದು ಕೇಳತೊಡಗಿದ್ದಾರೆ. ತಮ್ಮದಲ್ಲದ ತಪ್ಪಿಗೆ ತಾವೇಕೆ ನಷ್ಟ ಅನುಭವಿಸಬೇಕು ಎನ್ನುವುದು ನಿರ್ಮಾಪಕರ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಒತ್ತಾಯಿಸುವಂತೆ ಈ ನಿರ್ಮಾಪಕರು ತಮ್ಮ ಪ್ರಾತಿನಿಧಿಕ ವೈಡ್ ಆಂಗಲ್ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಕಳೆದ ವರ್ಷ ನವೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಿರುವ ನಿರ್ಮಾಪಕರಿಗೆ ಬಾ.ನಾ.ಸುಬ್ರಹ್ಮಣ್ಯ baanaasu@gmail.com ಡಿಸೆಂಬರ್ 31ರ ಒಳಗೆ ಸೆನ್ಸಾರ್ ಆಗಿದೆ ಎನ್ನುವ ಪ್ರಮಾಣಪತ್ರ ಬೇಕು ಎನ್ನು ವುದು ಅವರ ಒತ್ತಾಯ. ಚಲನಚಿತ್ರ ವಾಣಿಜ್ಯ ಮಂಡಳಿಯಪದಾಧಿಕಾರಿಗಳು, ಪ್ರಮಾಣೀಕರಣ ಮಂಡಳಿಯ ಕೇಂದ್ರ ಕಚೇರಿಗೆ ಹೋಗಿ ಅದರ ಅಧ್ಯಕ್ಷರು ಮತ್ತು ನಿರ್ವಾಹಕ ನಿರ್ದೇಶಕರ ಗಮನಕ್ಕೆ ಇದನ್ನು ತಂದಿದ್ದಾರೆ. ಅಲ್ಲಿ ಕೂಡ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿ ಫೆಬ್ರವರಿ 29ರಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಇದರ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳನ್ನು ಆಯ್ಕೆಗೆ ಆಹ್ವಾನಿಸಲಾಗಿದೆ. ಕಳೆದ ವರ್ಷ ಜನವರಿ 1ರಿಂದ, ಡಿಸೆಂಬರ್ 31ರವರೆಗೆ ಸೆನ್ಸಾರಾದ ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹವಾಗುತ್ತವೆ. ಸುಮಾರು ಅರುವತ್ತಕ್ಕಿಂತಲೂ ಹೆಚ್ಚು ಚಿತ್ರಗಳು ಪ್ರಮಾಣ ಪತ್ರ ಸಿಗದೆ ಹೋದರೆ ಈ ವರ್ಷ ಸ್ಪರ್ಧೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ಶತಾಯಗತಾಯ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟವರ ಪ್ರಯತ್ನ ಸಾಗಿದೆ.
ಪ್ರಶಸ್ತಿಗಿರಲಿ, ಸಹಾಯಧನ ಪಡೆಯಲಿಕ್ಕಾಗಲಿ, ಚಿತ್ರೋತ್ಸವದ ಸ್ಪರ್ಧೆಗಾಗಲಿ, ಚಲನಚಿತ್ರದ ಪ್ರಮಾಣಪತ್ರದಲ್ಲಿ ಇರುವ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ನಡೆದ ಘಟನೆಯೊಂದು ಇದನ್ನು ಇನ್ನಷ್ಟು ಪುಷ್ಟಿಕರಿಸುತ್ತದೆ.
2018ರ ಸಾಲಿನಲ್ಲಿ ಇಂತಹದೇ ಪ್ರಸಂಗ ಎದುರಾಗಿತ್ತು. ಹಿಂದಿನ ವರ್ಷದಲ್ಲಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ ಕೆಲವು ಚಿತ್ರಗಳಿಗೆ ಮುಂದಿನ ವರ್ಷ ಪ್ರಮಾಣಪತ್ರ ಸಿಕ್ಕಿತು. ಆಗ ಇದ್ದ ಪ್ರಮಾಣೀಕರಣ ಮಂಡಳಿಯ ಬೆಂಗಳೂರಿನ ಅಧಿಕಾರಿ, ನಿರ್ಮಾಪಕರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಆ ಚಿತ್ರಗಳನ್ನು ಪರಿಗಣಿಸಬಹುದು ಎಂದು ಪತ್ರ ನೀಡಿದರು.
2018ರ ಸಾಲಿನ ಸಹಾಯಧನ ಆಯ್ಕೆ ಸಮಿತಿ ಆರಿಸಿದ ಗುಣಮಟ್ಟದ ಚಿತ್ರಗಳಲ್ಲಿ ಕೆಲವು 2019ರ ದಿನಾಂಕದ ಪ್ರಮಾಣಪತ್ರ ಪಡೆದ ಚಿತ್ರಗಳಿದ್ದವು. ಅದರ ವಿರುದ್ಧ ನಿರ್ಮಾಪಕರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದರು. ಅದನ್ನು ವಿಚಾರಣೆ ಮಾಡಿರುವ ನ್ಯಾಯಾಲಯ, ಪ್ರಮಾಣೀಕರಣ ಆದ ದಿನಾಂಕವನ್ನೇ ಕಟ್ಟುನಿಟ್ಟಾಗಿ ಅನುಸರಿಸಬೇಕು. ಮುಂದಿನ ವರ್ಷದ ದಿನಾಂಕ ಇದ್ದರೆ ಅದನ್ನು ಸಹಾಯಧನಕ್ಕೆ ಪರಿಗಣಿಸುವಂತಿಲ್ಲ ಎಂದು ತೀರ್ಪು ನೀಡಿತು.
ಈಗಲೂ ಅಂತಹದೇ ಪ್ರಸಂಗ ಎದುರಾಗಿದೆ. ಅಧಿಕೃತವಾಗಿ ಪ್ರಮಾಣಪತ್ರ ನೀಡಿರುವ ದಿನಾಂಕಗಳನ್ನು ಪರಿಗಣಿಸದೆ ಅವಕಾಶ ನೀಡಿದರೆ ನ್ಯಾಯಾಲಯ ನಿಂದನೆ ಕೇಸನ್ನು ಎದುರಿಸಬೇಕಾದ ಪ್ರಸಂಗ ಎದುರಾಗಬಹುದು. ಇಲ್ಲದೆ ಹೋದರೆ, ಇದಕ್ಕೆ ಸೂಕ್ತ ರಿಯಾಯಿತಿಯನ್ನು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ವಿಶೇಷ ಪ್ರಸಂಗ ಎಂದು ಪರಿಗಣಿಸಿ ಪಡೆಯುವುದು ಸಾಧ್ಯವಾದರೆ ಆಗ ಪರಿಗಣಿಸಬಹುದೇನೋ.
ಕನ್ನಡ ಚಿತ್ರಗಳ ನಿರ್ಮಾಪಕರಲ್ಲಿ ಬಹಳಷ್ಟು ಮಂದಿ, ಅದರಲ್ಲೂ ಈ ರೀತಿ ತೊಂದರೆಗೆ ಒಳಗಾದವರು, ಬೇರೆ ರಾಜ್ಯಗಳಲ್ಲಿ ಇಲ್ಲದೆ ಇರುವ ಸಮಸ್ಯೆ ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಇದೆ? ಬೇರೆ ಎಲ್ಲೂ ಸೆನ್ಸಾರ್ ಸಮಸ್ಯೆ ಹೀಗೆ ವರ್ಷದ ಕೊನೆಯಲ್ಲಿ ಇರುವುದಿಲ್ಲವಲ್ಲ? ಎಂದು ಪ್ರಶ್ನಿಸುತ್ತಾರೆ. ಕರ್ನಾಟಕದಲ್ಲಿ ಮಾತ್ರ ಸಹಾಯಧನಕ್ಕಾಗಿ ಚಿತ್ರ ನಿರ್ಮಿಸುವ ಮಂದಿ ವರ್ಷದ ಕೊನೆಯಲ್ಲಿ ಸಾಲುಗಟ್ಟುತ್ತಾರೆ ಎನ್ನುವುದನ್ನು ಅವರು ಮರೆತಿರುತ್ತಾರೆ.
ಅದೇನೇ ಇರಲಿ, ಕನ್ನಡ ಚಿತ್ರೋದ್ಯಮ ಒಂದಲ್ಲ ಒಂದು ರೀತಿಯಲ್ಲಿ ಇಂತಹ ತಕರಾರುಗಳನ್ನು ಎತ್ತುತ್ತಲೇ ಇರುತ್ತದೆ, ಎದುರಿಸುತ್ತಲೇ ಇರುತ್ತದೆ ಎನ್ನುವುದು ಮಾತ್ರ ಸತ್ಯ.
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…
ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ ಎಂದು…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ…