Column by D.V. Rajasekhar BRICS under Trumps wrath India in crisis
ಈಗ ತಾನೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ಅಥವಾ ತೆರಿಗೆ ನೀತಿಯಿಂದಾಗಿ ‘ಬ್ರಿಕ್ಸ್’ ಸಂಘಟನೆ ಸೇರಲು ಆಸಕ್ತಿ ತೋರಿಸುತ್ತಿವೆ. ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಚೀನಾ, ರಷ್ಯಾ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಒಟ್ಟಾಗಿ ಸೇರಿ ೨೦೦೯ರಲ್ಲಿ ರಚಿಸಿದ ಸಂಘಟನೆಯೇ ಬ್ರಿಕ್ಸ್. ವಾಣಿಜ್ಯ ವಹಿವಾಟು, ಭದ್ರತೆ, ಆರ್ಥಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸಾಧಿಸಿ ಅಭಿವೃದ್ಧಿಯ ಗತಿಯನ್ನೂ ಹೆಚ್ಚಿಸಿ ಬಡತನ ನಿವಾರಣೆ ಮಾಡುವುದೇ ಈ ಬ್ರಿಕ್ಸ್‌ನ ಗುರಿ. ಈ ಸಂಘಟನೆಗೆ ಶಾಶ್ವತ ಸದಸ್ಯರಾಗಿ ಇದೀಗ ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್ , ಯುಎಇ ಸೇರ್ಪಡೆಗೊಂಡಿವೆ. ಇದರ ಜೊತೆಗೆ ಪಾಲುದಾರ ಸದಸ್ಯರಾಗಲು ಬೆಲರಸ್, ಬೊಲಿವಿಯಾ, ಕಜಕಿಸ್ತಾನ್, ಕ್ಯೂಬಾ, ನೈಜೀರಿಯಾ, ಮಲೇಷ್ಯಾ, ವಿಯಟ್ನಾಮ್, ಉಗಾಂಡಾ ಮತ್ತು ಉಜ್ಬೆಕಿಸ್ತಾನ್ ಮುಂದೆ ಬಂದಿರುವುದು ಬ್ರಿಕ್ಸ್‌ನ ಮಹತ್ವವನ್ನು ಹೆಚ್ಚಿಸಿದೆ.
ಇದುವರೆಗೆ ವಿಶ್ವದ ವಾಣಿಜ್ಯ, ಭದ್ರತೆ ಮತ್ತಿತರ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಅಮೆರಿಕವೇ ನಿರ್ವಹಿಸುತ್ತಾ ಬಂದಿದ್ದು ಇದೀಗ ಅಭಿವೃದ್ಧಿಶೀಲ ದೇಶಗಳಿಗೆ ಪರ್ಯಾಯ ಸಂಘಟನೆಯೊಂದು ಹುಟ್ಟಿಕೊಂಡಿರುವುದು ಸಹಜವಾಗಿಯೇ ಡೊನಾಲ್ಡ್ ಟ್ರಂಪ್ ಅವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ವಿಶ್ವದಲ್ಲಿ ಅಮೆರಿಕದ ಕರೆನ್ಸಿ ಡಾಲರ್ ಅತಿ ಹೆಚ್ಚು ಪ್ರಭಾವಶಾಲಿ. ವಿಶ್ವದ ಯಾವುದೇ ದೇಶದ ವಹಿವಾಟಿಗೆ ಡಾಲರ್ ರಹದಾರಿ. ಈ ಏಕಸ್ವಾಮ್ಯ ಒಂದು ರೀತಿಯಲ್ಲಿ ಇದೀಗ ಬೆಳೆಯುತ್ತಿರುವ ದೇಶಗಳ ಆರ್ಥಿಕ ಬೆಳವಣಿಗೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜಿ-೭, ಜಿ-೨೦ ಸಂಘಟನೆಗಳೇ ಬಡದೇಶಗಳ ಭವಿಷ್ಯವನ್ನು ನಿರ್ಧರಿಸುವಂತಾಗಿತ್ತು. ಈ ಗುಂಪಿನ ದೇಶಗಳೇ ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳಾದ ಐಎಂಎಫ್ ವಿಶ್ವಬ್ಯಾಂಕ್‌ಗಳು ಸಾಲ ಕೊಡುವಾಗ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಮತ್ತು ಲಾಭ ತಂದುಕೊಡುವಂಥ ಅನೇಕ ಷರತ್ತುಗಳನ್ನು ವಿಧಿಸುತ್ತಿದ್ದವು. ಈ ವ್ಯವಸ್ಥೆಗೆ ಇಷ್ಟು ವರ್ಷ ಕಾಲ ಪರ್ಯಾಯವೇ ಇಲ್ಲದೆ ಶೋಷಣೆಗೆ ಗುರಿಯಾಗುತ್ತಿದ್ದವು. ಹಿಂದೆ ಅಲಿಪ್ತ ರಾಷ್ಟ್ರಗಳ ಒಕ್ಕೂಟ ಸ್ಥಾಪನೆಯಾದರೂ ಅದು ಯಶಸ್ವಿಯಾಗಿರಲಿಲ್ಲ. ಇದೀಗ ೨೦೦೯ರಲ್ಲಿ ಆರಂಭವಾದ ಬ್ರಿಕ್ಸ್ ಕ್ರಮೇಣ ಅಮೆರಿಕದ ತೆಕ್ಕೆಯಲ್ಲಿದ್ದ ದೇಶಗಳ ಆಕರ್ಷಣೆಗೂ ಒಳಗಾಗುತ್ತಿರುವುದು ಆಸಕ್ತಿದಾಯಕ ಬೆಳವಣಿಗೆ.
ಬ್ರೆಜಿಲ್ ದೇಶದ ಡಿ ಜನೈರೋ ನಗರದಲ್ಲಿ ಇತ್ತೀಚೆಗೆ ತಾನೆ ಮುಕ್ತಾಯವಾದ (ಜುಲೈ ೬-೭) ಈ ವರ್ಷದ ಶೃಂಗಸಭೆ ವಿಶ್ವದ ಸಮಕಾಲೀನ ಬೆಳವಣಿಗೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಎಲ್ಲರ ಅದರಲ್ಲಿಯೂ ಅಮೆರಿಕದ ಗಮನ ಸೆಳೆದಿದೆ. ವಿಶ್ವದ ವಿದ್ಯಮಾನಗಳ ಮೇಲೆ ಅದರಲ್ಲಿಯೂ ಮುಖ್ಯವಾಗಿ ವ್ಯಾಪಾರ ವಹಿವಾಟು, ಭದ್ರತೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯವನ್ನು ಅಂತ್ಯಗೊಳಿಸಿ ಬಹುಪಕ್ಷೀಯ ವ್ಯವಸ್ಥೆಯನ್ನು ಸ್ಥಾಪಿಸುವತ್ತ ಬ್ರಿಕ್ಸ್ ಹೆಜ್ಜೆ ಇಟ್ಟಿರುವುದು ಸಹಜವಾಗಿಯೇ ಟ್ರಂಪ್ ಅವರನ್ನು ಕೆರಳಿಸಿದೆ. ಅದರಲ್ಲಿಯೂ ಜಗತ್ತಿನ ಶಕ್ತಿಶಾಲಿ ಕರೆನ್ಸಿಯಾಗಿರುವ ಡಾಲರ್‌ಗೆ ಪರ್ಯಾಯ ಕರೆನ್ಸಿ ರೂಪಿಸುವ ಪ್ರಯತ್ನಗಳು ಟ್ರಂಪ್ ಅವರಿಗೆ ಸಹಜವಾಗಿಯೇ ಆತಂಕ ಉಂಟುಮಾಡಿವೆ. ೨೦೦೯ರಿಂದಲೂ ಪರ್ಯಾಯ ಕರೆನ್ಸಿ ರೂಪಿಸುವ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ಅದು ಇದುವರೆಗೆ ಸಾಧ್ಯವಾಗಿಲ್ಲ. ಬ್ರಿಕ್ಸ್ ಗುಂಪಿನಲ್ಲಿ ಅತಿ ಶಕ್ತಿಶಾಲಿಯಾಗಿರುವ ಚೀನಾದ ಯುವಾನ್ ಕರೆನ್ಸಿ ಬಳಸುವ ವಿಚಾರ ಚರ್ಚೆಗೆ ಬಂದಿತ್ತು. ಹುವಾನ್ ಕರೆನ್ಸಿಯನ್ನು ಬ್ರಿಕ್ಸ್ ಕರೆನ್ಸಿ ಮಾಡಲು ಭಾರತ ಒಪ್ಪಲಿಲ್ಲ. ಹುವಾನ್ ಕರೆನ್ಸಿಯನ್ನು ಬ್ರಿಕ್ಸ್ ಕರೆನ್ಸಿ ಮಾಡುವುದರ ಹಿಂದಿನ ಹುನ್ನಾರ ಭಾರತಕ್ಕೆ ತಿಳಿಯದಿರುವುದೇನೂ ಆಗಿರಲಿಲ್ಲ. ರಷ್ಯಾ ಕ್ರಮೇಣ ಹುವಾನ್ ಕರೆನ್ಸಿಯಲ್ಲಿಯೇ ವ್ಯವಹಾರ ಮಾಡುತ್ತಿದೆಯಾದರೂ ಭಾರತ ಮಾತ್ರ ಆಯಾ ದೇಶಗಳ ಕರೆನ್ಸಿ ಮೂಲಕ ವ್ಯವಹಾರ ಮಾಡುವುದಕ್ಕೆ ಒತ್ತಾಯ ಮಾಡುತ್ತಾ ಬಂತು. ಭಾರತ ರೂಪಾಯಿ ಕರೆನ್ಸಿಯಲ್ಲಿಯೇ ಬ್ರಿಕ್ಸ್ ದೇಶಗಳ ನಡುವೆ ವಾಣಿಜ್ಯ ವ್ಯವಹಾರ ನಡೆಸುತ್ತಿದೆ. ಅಂತೆಯೇ ಬೇರೆ ದೇಶಗಳು ಕೂಡ ಸದ್ಯಕ್ಕೆ ಆಯಾ ದೇಶಗಳ ಕರೆನ್ಸಿಯಲ್ಲಿಯೇ ವ್ಯವಹಾರ ಮಾಡುತ್ತಿವೆ. ಬ್ರೆಜಿಲ್ ಶೃಂಗಸಭೆಯಲ್ಲಿಯೂ ಡಾಲರ್‌ಗೆ ಪರ್ಯಾಯ ಕರೆನ್ಸಿ ರೂಪಿಸಬೇಕಾದ ಅಗತ್ಯವನ್ನು ಇಂಡೋನೇಷ್ಯಾ ಅಧ್ಯಕ್ಷ ಪ್ರಸಾವೋ ಸುಬಹಿಂತೋ ಮತ್ತು ಬ್ರೆಜಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ಡಿಸಿಲ್ವ ಪ್ರಸ್ತಾಪಿಸಿದ್ದಾರೆ. ಆದರೆ ಈ ಶೃಂಗಸಭೆಯಲ್ಲಿ ಅದು ನಿರ್ದಿಷ್ಟ ವಿಷಯವಾಗಿ ಪ್ರಸ್ತಾಪವಾಗಲಿಲ್ಲ.
ಬ್ರಿಕ್ಸ್‌ನ ಉದ್ದೇಶ ಡಾಲರ್‌ಗೆ ಪರ್ಯಾಯ ರೂಪಿಸುವುದಲ್ಲ ಎಂದು ಭಾರತ ಹಿಂದೆಯೇ ಸ್ಪಷ್ಟಪಡಿಸಿದೆ. ಅಮೆರಿಕದ ಜೊತೆಗೆ ವಾಣಿಜ್ಯ ವಹಿವಾಟು ನಡೆಸುತ್ತಿರುವ ಹಲವು ಬ್ರಿಕ್ಸ್‌ನ ಸದಸ್ಯ ದೇಶಗಳೂ ಇದನ್ನು ಸ್ಪಷ್ಟಪಡಿಸಿವೆ. ಆದರೂ ಟ್ರಂಪ್ ತಮ್ಮ ನಿಲುವನ್ನು ಬದಲಿಸುತ್ತಿಲ್ಲ.
ಟ್ರಂಪ್ ಅವರು ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆಬಂದ ನಂತರ ಹಲವು ಬದಲಾವಣೆಗಳನ್ನು ಘೋಷಿಸಿದ್ದಾರೆ. ಮುಖ್ಯವಾಗಿ ವಲಸೆ ನೀತಿ ಮತ್ತು ವಾಣಿಜ್ಯ ವಹಿವಾಟು ಕುರಿತಂತೆ ಆಘಾತಕಾರಿಯಾದಕಾನೂನುಗಳನ್ನೇ ತಂದಿದ್ದಾರೆ. ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರಹಾಕುವ ಕ್ರಮ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕ್ರಮದಂತೆಯೇ ಅಮೆರಿಕದ ವಾಣಿಜ್ಯ ನೀತಿಯಲ್ಲಿ ತಂದ ಬದಲಾವಣೆಗಳು ವಿಶ್ವದ ವಾಣಿಜ್ಯ ವಹಿವಾಟನ್ನೇ ಹಾಳುಮಾಡಿವೆ. ಅಮೆರಿಕದೊಳಕ್ಕೆ ಬರುವ ವಸ್ತುಗಳ ಮೇಲೆ ಸುಂಕವನ್ನು ಬೇಕಾಬಿಟ್ಟಿ ಏರಿಸಿರುವುದೇ ಆ ಕ್ರಮ. ಶೇ. ನೂರರಿಂದ ಆರಂಭವಾದ ಈ ಸುಂಕ ಈ ತಿಂಗಳು ಶೇ. ೫೦ರೊಳಕ್ಕೆ ಬಂದುನಿಂತಿವೆ. ಒತ್ತಡ ಹೇರಿ ಸುಂಕ ವಿಧಿಸುವುದು ಮತ್ತು ಆ ಮೂಲಕ ಲಾಭ ಗಳಿಸುವುದು ಟ್ರಂಪ್ ಹಿಡಿದಿರುವ ದಾರಿ. ಈ ಸಂದರ್ಭದಲ್ಲಿ ಬ್ರಿಕ್ಸ್ ದೇಶಗಳು ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿವೆ. ಡಾಲರ್ ಶಕ್ತಿಯನ್ನು ಹಾಳುಮಾಡುವುದೇ ಬ್ರಿಕ್ಸ್‌ನ ಉದ್ದೇಶ ಎಂದು ತಿಳಿದಿರುವ ಟ್ರಂಪ್ ಬ್ರಿಕ್ಸ್ ದೇಶಗಳ ಮೇಲೆ ನೂರರಷ್ಟು ಸುಂಕ ಘೋಷಿಸಿದರು. ಬ್ರಿಕ್ಸ್ ದೇಶದಿಂದ ಬರುವ ಎಲ್ಲ ವಸ್ತುಗಳ ಮೇಲೆ ಈ ಸುಂಕ ವಿಧಿಸಲಾಗುವುದು ಎಂದು ಪ್ರಕಟಿಸಲಾಯಿತು. ಇದು ಕ್ರಮೇಣ ಹತ್ತಕ್ಕೆ ಇಳಿದಿದೆಯಾದರೂ ಸುಂಕ ಹೇರುವ ವಿಚಾರದಲ್ಲಿ ಟ್ರಂಪ್ ನಿಲುವು ಬದಲಾಗಿಲ್ಲ. ಸುಂಕದ ವಿಚಾರದಲ್ಲಿ ಭಾರತವೂ ಇಕ್ಕಟ್ಟಿಗೆ ಒಳಗಾಗಿ ರುವ ಸಂದರ್ಭದಲ್ಲಿ ಬ್ರಿಕ್ಸ್ ವಿವಾದವೂ ಎದ್ದಿದೆ. ಮುಂದಿನ ವರ್ಷ ಬ್ರಿಕ್ಸ್ ಅಧ್ಯಕ್ಷತೆ ಭಾರತಕ್ಕೆ ವರ್ಗಾವಣೆ ಆಗಲಿದೆ. ಭಾರತದ ಪ್ರಧಾನಿ ಮೋದಿ ಅವರು ಮುಂದಿನ ವರ್ಷ ಬ್ರಿಕ್ಸ್ ಶೃಂಗಸಭೆಯನ್ನು ಭಾರತದಲ್ಲಿ ನಡೆಸಬೇಕಿದೆ. ಮೋದಿ ಅವರು ಬ್ರಿಕ್ಸ್‌ನ ಪ್ರಬಲ ಪ್ರತಿಪಾದಕರು. ಮಾಮೂಲಿ ಸುಂಕದ ಜೊತೆಗೆ ಬ್ರಿಕ್ಸ್ ಸುಂಕವನ್ನೂ ಎದುರಿಸಬೇಕಾದ ಸನ್ನಿವೇಶ ಮೋದಿ ಅವರಿಗೆ ಎದುರಾಗಲಿದೆ. ಮೋದಿ ಅವರು ತಮ್ಮ ಆತ್ಮೀಯ ಸ್ನೇಹಿತರು ಎಂದು ಟ್ರಂಪ್ ಎಷ್ಟೇ ಹೇಳಿಕೊಂಡರೂ ಸುಂಕದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಭಾರತಕ್ಕೆ ಸಂಬಂಽಸಿದಂತೆ ಅಮೆರಿಕದ ಜೊತೆಗಿನ ಸುಂಕದ ವಿವಾದ ಇನ್ನೂ ಬಗೆಹರಿದಿಲ್ಲ. ಮಾತುಕತೆಗಳು ನಡೆಯುತ್ತಲೇ ಇವೆ. ಅಮೆರಿಕ ಹೇರಿರುವ ಸುಂಕದ ಪ್ರಮಾಣಕ್ಕೆ ಭಾರತದ ಒಪ್ಪಿಗೆ ಇಲ್ಲ. ವಿಶ್ವ ವಾಣಿಜ್ಯ ಸಂಘಟನೆಗೂ ಭಾರತ ದೂರು ಸಲ್ಲಿಸಿದೆ. ಮುಂದಿನ ತಿಂಗಳ ಒಂದರ ವೇಳೆಗೆ ಸುಂಕದ ಪ್ರಮಾಣ ಅಂತಿಮವಾಗಿ ನಿರ್ಧಾರವಾಗಲೇಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಅದು ಬದಲಾವಣೆಗೆ ಒಳಪಡಬಹುದಾದರೂ ಭಾರತದ ವಾಣಿಜ್ಯ ವಹಿವಾಟಿನ ಮೇಲೆ ಸುಂಕ ವಿಧಿಸುವುದಂತೂ ಖಚಿತ. ಟ್ರಂಪ್ ಅವರು ಒಂದು ರೀತಿಯಲ್ಲಿ ಸಾಮ್ರಾಜ್ಯಶಾಹಿಯಂತೆ ವರ್ತಿಸುತ್ತಿದ್ದಾರೆ. ಊಳಿಗ ಮಾನ್ಯ ಪದ್ಧತಿ ಅಧಿಕೃತವಾಗಿ ನಾಶವಾಗಿದ್ದರೂ ಅದನ್ನು ವಾಣಿಜ್ಯ ಕ್ಷೇತ್ರದ ಮೂಲಕ ಪುನರ್ ಸ್ಥಾಪಿಸಲು ಟ್ರಂಪ್ ಯತ್ನಿಸುತ್ತಿರುವಂತೆ ಕಾಣುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಕ್ರೂರ ರೂಪವನ್ನು ವಿವಿಧ ದೇಶಗಳು ಹೇಗೆ ನಿಭಾಯಿಸುತ್ತವೆ ಎನ್ನುವುದನ್ನು ಕಾದು ನೋಡಬೇಕು.
” ೨೦೦೯ರಿಂದಲೂ ಪರ್ಯಾಯ ಕರೆನ್ಸಿ ರೂಪಿಸುವ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ ಅದು ಇದುವರೆಗೆ ಸಾಧ್ಯವಾಗಿಲ್ಲ. ಬ್ರಿಕ್ಸ್ ಗುಂಪಿನಲ್ಲಿ ಅತಿ ಶಕ್ತಿಶಾಲಿಯಾಗಿರುವ ಚೀನಾದ ಯುವಾನ್ ಕರೆನ್ಸಿ ಬಳಸುವ ವಿಚಾರ ಚರ್ಚೆಗೆ ಬಂದಿತ್ತು. ಹುವಾನ್ ಕರೆನ್ಸಿಯನ್ನು ಬ್ರಿಕ್ಸ್ ಕರೆನ್ಸಿ ಮಾಡಲು ಭಾರತ ಒಪ್ಪಲಿಲ್ಲ. ಹುವಾನ್ ಕರೆನ್ಸಿಯನ್ನು ಬ್ರಿಕ್ಸ್ ಕರೆನ್ಸಿ ಮಾಡುವುದರ ಹಿಂದಿನ ಹುನ್ನಾರ ಭಾರತಕ್ಕೆ ತಿಳಿಯದಿರುವುದೇನೂ ಆಗಿರಲಿಲ್ಲ. ರಷ್ಯಾ ಕ್ರಮೇಣ ಹುವಾನ್ ಕರೆನ್ಸಿಯಲ್ಲಿಯೇ ವ್ಯವಹಾರ ಮಾಡುತ್ತಿದೆಯಾದರೂ ಭಾರತ ಮಾತ್ರ ಆಯಾ ದೇಶಗಳ ಕರೆನ್ಸಿ ಮೂಲಕ ವ್ಯವಹಾರ ಮಾಡುವುದಕ್ಕೆ ಒತ್ತಾಯ ಮಾಡುತ್ತಾ ಬಂತು. ಭಾರತ ರೂಪಾಯಿ ಕರೆನ್ಸಿಯಲ್ಲಿಯೇ ಬ್ರಿಕ್ಸ್ ದೇಶಗಳ ನಡುವೆ ವಾಣಿಜ್ಯ ವ್ಯವಹಾರ ನಡೆಸುತ್ತಿದೆ. ಅಂತೆಯೇ ಬೇರೆ ದೇಶಗಳು ಕೂಡ ಸದ್ಯಕ್ಕೆ ಆಯಾ ದೇಶಗಳ ಕರೆನ್ಸಿಯಲ್ಲಿಯೇ ವ್ಯವಹಾರ ಮಾಡುತ್ತಿವೆ.”
– ಡಿ.ವಿ. ರಾಜಶೇಖರ
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…