– ಡಾ.ಐ.ಸೇಸುನಾಥನ್
‘ಒಬ್ಬ ನಿನ್ನ ಬಲಗೆನ್ನೆಗೆ ಹೊಡೆದರೆ ಅವನಿಗೆ ನಿನ್ನ ಇನ್ನೊಂದು ಕೆನ್ನೆಗೂ ಹೊಡೆಯಲು ಅನುವು ಮಾಡಿಕೊಡು; ನಿನ್ನ ಮೇಲಂಗಿಯನ್ನು ಸೆಳೆದುಕೊಳ್ಳುವವನಿಗೆ ನಿನ್ನ ವಸ್ತ್ರವನ್ನೂ ತೆಗೆದುಕೊಳ್ಳಲುಅಡ್ಡಿಪಡಿಸದಿರು; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮ ವಿರುದ್ಧ ತಪ್ಪುಮಾಡಿದವರನ್ನು ಕ್ಷಮಿಸಿರಿ’ ಎಂದು ಜಗತ್ತಿಗೆ ಪ್ರೀತಿ, ಶಾಂತಿಯ ಸಂದೇಶವನ್ನು ಸಾರುವ ಯೇಸು ಕ್ರಿಸ್ತನ ಜನ್ಮ ದಿನವೇ ಕ್ರಿಸ್ಮಸ್.
ದೇಶ-ದೇಶಗಳ ನಡುವೆ, ಜನಾಂಗ-ಜನಾಂಗಗಳ ನಡುವೆ, ವ್ಯಕ್ತಿ-ವ್ಯಕ್ತಿಗಳ ನಡುವೆ ದ್ವೇಷ, ಅಸೂಯೆ, ಅಸಹಿಷ್ಣುತೆ ಹೊಗೆಯಾಡುತ್ತಿರುವ, ಕೆಲವೊಮ್ಮೆ ಅದು ಭುಗಿಲೆದ್ದು ಯುದ್ಧದ ಕಾರ್ಮೋಡ ಕವಿಯುವಂತೆ ಮಾಡುವ ಇಂದಿನ ದಿನಗಳಲ್ಲಿ ಎರಡು ಸಹಸ್ರಮಾನ ವರ್ಷಗಳ ಹಿಂದೆ ಜೆರುಸಲೆಮಿನ ಬೆತ್ಲಹೆಂನಲ್ಲಿ ಜನಿಸಿದ ಯೇಸು ಕ್ರಿಸ್ತನ ಶಾಂತಿಯ ಸಂದೇಶಗಳು ಹೆಚ್ಚು ಪ್ರಸ್ತುತವೆನಿಸಿವೆ.
ದ್ವೇಷಕ್ಕೆ ದ್ವೇಷ, ಹಿಂಸೆಗೆ ಹಿಂಸೆ ಪರಿಹಾರವಲ್ಲ. ವಿನಾಕಾರಣ ಕುಪಿತಗೊಂಡು ಸೇಡು ತೀರಿಸಿಕೊಳ್ಳುವುದನ್ನು ಬಿಟ್ಟು ಸಹನೆಯಿಂದ ವರ್ತಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಕ್ರಿಸ್ತನ ಸಂದೇಶಗಳು ಸಾರುತ್ತವೆ. ಕ್ರಿಸ್ತನ ಇಂತಹ ಬೋಧನೆಗಳಿಂದ ಪ್ರಭಾವಿತರಾದ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು ಮಹಾತ್ಮರಾದರು. ಶತ್ರುಗಳಾದ ಬ್ರಿಟಿಷರ ಮನಸ್ಸನ್ನು ಪ್ರೀತಿಯಿಂದ ಗೆದ್ದರು. ಯೇಸು ಪ್ರಬಲ ಯೆಹೂದಿ ಜನಾಂಗದಲ್ಲಿ ಹುಟ್ಟಿದರೂ, ಆತನ ತಂದೆ ಜೋಸೆಫ್ ಒಬ್ಬ ಸಾಮಾನ್ಯ ಬಡಗಿಯಾಗಿದ್ದ. ಯೇಸು ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆಳೆದನು. ಯೇಸುವಿನ ೧೨ ಮಂದಿ ಶಿಷ್ಯರು ವಿವಿಧ ಸಮುದಾಯ ಮತ್ತು ವೃತ್ತಿಗೆ ಸೇರಿದವರಾಗಿದ್ದರು. ತಾನು ಯೆಹೂದಿಯಾಗಿದ್ದರೂ ಸಮಾಜದಲ್ಲಿ ಕೆಳ ಸ್ತರದಲ್ಲಿದ್ದ ಸಮಾರಿಟನ್ ಮಹಿಳೆಯ ಬಳಿ ಕುಡಿಯಲು ನೀರು ಕೇಳುವ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದನು. ಭ್ರಷ್ಟ ರಾಜಕೀಯ ವ್ಯವಸ್ಥೆ ಮತ್ತು ಪುರೋಹಿತಶಾಹಿಗಳನ್ನು ಕಟುವಾಗಿ ಟೀಕಿಸಿದನು. ದಾರಿ ತಪ್ಪಿದ ಧರ್ಮಾಧಿಕಾರಿಗಳನ್ನು ‘ಸುಣ್ಣ ಬಳಿದ ಸಮಾಧಿಗಳು’ ಎಂದು ಜರಿದನು. ಧಾರ್ಮಿಕ ಕೇಂದ್ರಗಳ ವ್ಯಾಪಾರೀಕರಣವನ್ನು ವಿರೋಧಿಸಿದನು. ಇವೆಲ್ಲ ಕಾರಣಗಳಿಂದ ಆತನಿಗೆ ವಿರೋಧಿಗಳು ಹೆಚ್ಚಾಗಿ, ದೇಶದ್ರೋಹದಂತಹ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಶಿಲುಬೆಗೇರಿಸುವಂತೆ ಮಾಡಿದರು.
ಆದರೂ ಆತ ಧೃತಿಗೆಡಲಿಲ್ಲ. ಶಿಲುಬೆಯ ಮೇಲಿದ್ದಾಗಲೂ ತನ್ನ ನಿಲುವನ್ನು ಸಮರ್ಥಿಸಿಕೊಂಡನು. ‘ಗೋಧಿಯ ಕಾಳು ಮಣ್ಣಿನಲ್ಲಿ ಬಿದ್ದು ಮಡಿಯದ ಹೊರತು, ಹೊಸ ಪೈರು ಹುಟ್ಟಿ ಮತ್ತಷ್ಟು ಕಾಳುಗಳು ಉತ್ಪತ್ತಿಯಾಗಲು ಸಾಧ್ಯವಿಲ್ಲ’ ಎಂದು ಹೇಳಿದನು. ಕೇವಲ ೩೩ ವರ್ಷಕ್ಕೆ ಮರಣ ಹೊಂದಿದರೂ ಆತನ ಶಿಷ್ಯರು ವಿವಿಧ ದೇಶಗಳಿಗೆ ಸಂಚರಿಸಿ, ಅವನ ಬೋಧನೆಗಳನ್ನು ಎಲ್ಲೆಡೆ ಹರಡುವಂತೆ ಮಾಡಿದರು. ನಮ್ಮಲ್ಲಿ ಅಹಿಂಸೆ, ಸತ್ಯ, ಸಮಾನತೆಗಾಗಿ ಹೋರಾಡಿದ ಮಹಾತ್ಮ ಗಾಂಽ, ಬಸವಣ್ಣ ಮುಂತಾದವರಿಗೆ ಉಂಟಾದ ಗತಿಯೇ ಅಂದು ಕ್ರಿಸ್ತನಿಗೂ ಸಂಭವಿಸಿತ್ತು. ಆದರೂ ಆತನ ಬೋಧನೆಗಳು ಶೋಷಿತರ ಕಣ್ಣೀರನ್ನು ಒರೆಸುವ, ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸುವ ಮಹಾಶಕ್ತಿಯಾಗಿ ಕಾಣಿಸಿಕೊಂಡಿವೆ.
ಕ್ರಿಸ್ಮಸ್ ಹಬ್ಬವು ಯೇಸುಕ್ರಿಸ್ತನ ಜನ್ಮ ದಿನಾಚರಣೆಗೆ ಸಂಬಂಧಿಸಿದ್ದರೂ, ವಿವಿಧ ಧಾರ್ಮಿಕ ಮತ್ತು ಪ್ರಾದೇಶಿಕ ದೃಷ್ಟಿಕೋನಗಳನ್ನು ಹೊಂದಿದೆ. ಈ ಹಬ್ಬವನ್ನು ಪ್ರಪಂಚದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಗ್ರೀಟಿಂಗ್ ಕಾರ್ಡ್‌ಗಳನ್ನು ಹಂಚಿಕೊಳ್ಳುವುದು ಪರಸ್ಪರ ವಿಶ್ವಾಸ ಮತ್ತು ಬಾಂಧವ್ಯವನ್ನು ನವೀಕರಿಸುವ ಒಂದು ಸಂಪ್ರದಾಯವಾಗಿದೆ. ಬಿಷಪ್ ಸಾಂತಾಕ್ಲಾಸ್ ನಿರ್ಗತಿಕ ಮಕ್ಕಳಿಗೆ ಅವರ ಗಮನಕ್ಕೆ ಬಾರದಂತೆ ಉಡುಗೊರೆಗಳನ್ನು ನೀಡುವ ಸಂಪ್ರದಾಯವನ್ನು ಹುಟ್ಟುಹಾಕಿದ. ಕರುಣೆ ಮತ್ತು ಧಾರಾಳ ಗುಣದವನಾದ ಆತ ತನ್ನ ಆಸ್ತಿಯನ್ನು ಬಡವರಿಗೆ ದಾನ ಮಾಡಿದನು. ಮೂರು ಬಡ ಹೆಣ್ಣು ಮಕ್ಕಳಿಗೆ ಮದುವೆಯಾಗಲು ರಹಸ್ಯವಾಗಿ ಆರ್ಥಿಕ ಸಹಾಯ ಮಾಡಿದನು. ಆ ಮೂಲಕ ಕ್ರಿಸ್ಮಸ್ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುವ ಸಂಪ್ರದಾಯ ಬೆಳೆಯಿತು.
ಬಹು ಸಂಸ್ಕ ತಿಯ ಹಿನ್ನೆಲೆ ಹೊಂದಿರುವ ಭಾರತದಲ್ಲಿ ಕ್ರಿಸ್ಮಸ್ ಆಚರಣೆಯು ವಿವಿಧತೆಯಲ್ಲಿ ಏಕತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಇದು ಧಾರ್ಮಿಕ ಗಡಿಗಳನ್ನು ಮೀರಿ ಪ್ರೀತಿ, ಸಂತೋಷ ಮತ್ತು ಸಾಮರಸ್ಯವನ್ನು ಬಿತ್ತುತ್ತದೆ. ಕ್ರಿಶ್ಚಿಯನ್ ಧರ್ಮವು ವಿಶ್ವದ ಜನಪ್ರಿಯ ಧರ್ಮವಾಗಿದ್ದರೂ, ಭಾರತದಲ್ಲಿ ಇದು ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಂತರ ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ. ೨೦೧೧ರ ಜನಗಣತಿಯ ಪ್ರಕಾರ ಭಾರತೀಯರಲ್ಲಿ ಶೇ.೨.೩ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಆದ್ದರಿಂದ, ಸೈದ್ಧಾಂತಿಕವಾಗಿ ಕ್ರಿಸ್ಮಸ್ ಅಲ್ಪಸಂಖ್ಯಾತ ಸಮುದಾಯದ ಹಬ್ಬವಾಗಿದೆ. ಆದರೆ ಇತರ ಧರ್ಮೀಯರೂ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಇದು ದೇಶದ ಪ್ರಮುಖ ಹಬ್ಬಗಳಲ್ಲಿ ಒಂದೆನಿಸಿದೆ. ಇಗರ್ಜಿಗಳಲ್ಲಿ ಮಧ್ಯರಾತ್ರಿಯ ಪ್ರಾರ್ಥನೆ, ಉಡುಗೊರೆ ನೀಡುವಿಕೆ ಮತ್ತು ಅಲಂಕಾರಗಳು ಇತ್ಯಾದಿಗಳು ಒಗ್ಗಟ್ಟು, ಪ್ರೀತಿ ಮತ್ತು ಶಾಂತಿಯನ್ನು ಒತ್ತಿಹೇಳುತ್ತವೆ.
ದೀಪಾವಳಿ ಮತ್ತು ಈದ್‌ನಂತಹ ಹಬ್ಬಗಳಂತೆ ಕ್ರಿಸ್ಮಸ್ ಕೂಡ ಧರ್ಮಗಳನ್ನು ಮೀರಿ ಪರಸ್ಪರ ಗೌರವ ಮತ್ತು ಸಾಮೂಹಿಕ ಸಂತೋಷವನ್ನು ಸಂಕೇತಿಸುವ ಆಚರಣೆಯಾಗಿದೆ. ಹಿಂದೂಗಳು ಕ್ರಿಶ್ಚಿಯನ್ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡುವುದು, ಮುಸ್ಲಿಂ ಮಕ್ಕಳು ಹಾಡುಗಳನ್ನು ಹಾಡುವುದು ಮತ್ತು ಇತರ ಧರ್ಮಗಳ ಜನರು ಕ್ರಿಸ್ಮಸ್ ಅಲಂಕಾರಗಳನ್ನು ಮಾಡುವುದು ಇಂದು ಸಾಮಾನ್ಯವಾಗಿದೆ. ಭಾರತದಲ್ಲಿ ಕ್ರಿಸ್ಮಸ್ ದೇಶದ ಸಾಂಸ್ಕ ತಿಕ ವೈಭವಕ್ಕೆ ಸಾಕ್ಷಿಯಾಗಿದೆ.
ದಿನನಿತ್ಯದ ಬದುಕಿನಲ್ಲಿ ಜಾತಿ, ಧರ್ಮ, ಬಣ್ಣ, ಭಾಷೆ ಮತ್ತು ಅನುಕೂಲತೆಯ ಆಧಾರದ ಮೇಲೆ ಜನರನ್ನು ವಿಂಗಡಿಸಿ ನೋಡದೆ, ಎಲ್ಲರನ್ನೂ ಸಮಾನತೆಯಿಂದ ಕಾಣಬೇಕೆಂಬ ಸಂದೇಶವನ್ನು ಕ್ರಿಸ್ಮಸ್ ಹಬ್ಬ ಸಾರುತ್ತದೆ. ನೊಂದವರಿಗೆ ಸಾಂತ್ವನ ಹೇಳುವುದು, ದಿಕ್ಕೆಟ್ಟವರ ಬದುಕಿನಲ್ಲಿ ಭರವಸೆಯನ್ನು ಮೂಡಿಸುವುದು, ಹಬ್ಬದ ನೆಪದಲ್ಲಿ ದಾನ ಧರ್ಮ ಮತ್ತು ಬಡವರಿಗೆ ಸಹಾಯ ಮಾಡುವುದು ಮುಂತಾದ ಸಾಮಾಜಿಕ ಜವಾಬ್ದಾರಿಗಳನ್ನು ಕ್ರಿಸ್ಮಸ್ ಹಬ್ಬ ಒತ್ತಿ ಹೇಳುತ್ತದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಉಡುಗೊರೆಗಳ ವಿನಿಮಯ, ಕೇಕ್ ಕತ್ತರಿಸಿ ಹಂಚುವುದು ಮತ್ತು ಕೌಟುಂಬಿಕ ಭೋಜನಗಳು ಎಲ್ಲರನ್ನೂ ಒಂದೇ ವೇದಿಕೆಗೆ ತಂದು ಸಹಬಾಳ್ವೆಯನ್ನು ಬಲಪಡಿಸುತ್ತವೆ. ನಗರೀಕರಣವು ಕ್ರಿಸ್ಮಸ್‌ನ ವ್ಯಾಪಾರೀಕರಣವನ್ನು ತೀವ್ರಗೊಳಿಸಿದ್ದು, ಈ ಹಬ್ಬವು ಬೇಕರಿಗಳು, ಮಾಲ್‌ಗಳು ಮತ್ತು ಅಲಂಕಾರಿಕ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿವೆ. ಇದರಿಂದ ಧಾರ್ಮಿಕ ಮಹತ್ವಕ್ಕಿಂತ ಖರೀದಿ-ಮಾರಾಟಕ್ಕೆ ಒತ್ತು ಬಿದ್ದಿದೆ. ಆದಾಗ್ಯೂ ಈ ಬೆಳವಣಿಗೆಯು, ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಈ ಹಬ್ಬದ ಆಚರಣೆಯ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
ಆಧುನಿಕ ಕ್ರಿಸ್ಮಸ್ ಆಚರಣೆಯು ಡಿಜಿಟಲೀಕರಣ, ಪರಿಸರ ಪ್ರಜ್ಞೆ ಮತ್ತು ಸಾಂಸ್ಕ ತಿಕ ಸಮ್ಮಿಶ್ರಣದಿಂದ ಕೂಡಿದೆ. ಇ-ಕಾರ್ಡ್‌ಗಳು ಮತ್ತು ಡಿಜಿಟಲ್ ಉಡುಗೊರೆಗಳು (ಗಿಫ್ಟ್ ಕಾರ್ಡುಗಳು) ಸಾಂಪ್ರದಾಯಿಕ ಕಾರ್ಡುಗಳನ್ನು ಬದಿಗೆ ಸರಿಸಿವೆ. ಪ್ಲಾಸ್ಟಿಕ್ ಕ್ರಿಸ್ಮಸ್ ಟ್ರೀಗಳ ಬದಲು ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಅಲಂಕಾರಿಕ ಸಾಮಗ್ರಿಗಳು ಹೆಚ್ಚಾಗಿವೆ. ಶಕ್ತಿ ಉಳಿತಾಯಕ್ಕೆ ಎಲ್.ಇ.ಡಿ ದೀಪಗಳನ್ನು ಬಳಸಲಾಗುತ್ತದೆ.
ಭಾರತದಲ್ಲಿ ಕ್ರಿಸ್ಮಸ್ ಜಾಗತಿಕ ಸಂಪ್ರದಾಯಗಳು ಮತ್ತು ಸ್ಥಳೀಯ ಪದ್ಧತಿಗಳ ಸಮ್ಮಿಲನವಾಗಿದ್ದು, ಅದು ಧಾರ್ಮಿಕ ಸಂಪ್ರದಾಯಗಳಲ್ಲಿ ಬೇರುಗಳನ್ನು ಹೊಂದಿದ್ದರೂ, ಅದರ ಆಚರಣೆಗಳು ಜಾತ್ಯತೀತವಾಗಿವೆ ಎನ್ನಲು ಅಡ್ಡಿಯಿಲ್ಲ. ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ‘ಶಿಲುಬೆಯೇರಿದ್ದಾನೆ’ ಕವಿತೆಯ ಕೆಳಗಿನ ಸಾಲಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಕ್ಷಿಪ್ತ ಸಂದೇಶ ಅಡಗಿದೆ ಎನ್ನಬಹುದು -ಅಸಂಖ್ಯ ಕ್ರಿಸ್ಮಸ್ಸುಗಳ ಹರಸಿ ಶೋಷಿತರ ಕಂಬನಿಯನ್ನೊರಸಿ ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ
” ಕ್ರಿಸ್ಮಸ್ ಹಬ್ಬವು ಯೇಸುಕ್ರಿಸ್ತನ ಜನ್ಮ ದಿನಾಚರಣೆಗೆ ಸಂಬಂಧಿಸಿದ್ದರೂ, ವಿವಿಧ ಧಾರ್ಮಿಕ ಮತ್ತು ಪ್ರಾದೇಶಿಕ ದೃಷ್ಟಿಕೋನಗಳನ್ನು ಹೊಂದಿದೆ. ಈ ಹಬ್ಬವನ್ನು ಪ್ರಪಂಚದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.”
ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…
ಗಿರೀಶ್ ಹುಣಸೂರು ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…
ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…