ಅಂಕಣಗಳು

‘ಇಂಡಿ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಸವಾಲು

ದೆಹಲಿ ಕಣ್ಣೋಟ

ಶಿವಾಜಿ ಗಣೇಶನ್‌ 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ೨೬ ರಾಜಕೀಯ ಪಕ್ಷಗಳು ಒಂದಾಗಿ ಆರಂಭಿಸಿದ ‘ಇಂಡಿಯಾ’ ( ಇಂಡಿಯನ್ ನ್ಯಾಷನಲ್ ಡೆವೆಲಂಪ್ ಮೆಂಟಲ್ ಇನ್‌ಕ್ಲುಸಿವ್ ಅಲಯನ್ಸ್) ಈಗ ಅಸ್ತಿತ್ವದಲ್ಲಿದೆಯೇ? ಬಿಜೆಪಿ ವಿರೋಧಿ ರಾಜಕೀಯ ರಂಗವಾದ ಇಂಡಿಯಾ ಮೈತ್ರಿಕೂಟದ ನಡೆ ಸದ್ಯ ಗೊಂದಲದ ಗೂಡಾಗಿದೆ.

೨೬ ಪಕ್ಷಗಳಿಗೆ ಮುಂದಾಳಾಗಿರುವ ಕಾಂಗ್ರೆಸ್ ಈಗ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ತನ್ನ ಮಿತ್ರ ಪಕ್ಷದ ವಿರುದ್ಧವೇ ಸ್ಪರ್ಧೆಗಿಳಿದಿರುವುದರಿಂದ ‘ಇಂಡಿಯಾ’ದ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ. ಈ ಮೈತ್ರಿಕೂಟ ದೇಶದ ಹೆಸರನ್ನೇ ಇಟ್ಟುಕೊಂಡಿರುವುದರಿಂದ ಬಿಜೆಪಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಇಂಡಿ ಒಕ್ಕೂಟ’ ಎಂದೇ ಕರೆಯುತ್ತಾರೆ.

ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಗೊಂದಲದ ನಡುವೆಯು ‘ಇಂಡಿಯಾ‘ ಒಂದಾಗಿತ್ತು. ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಅತ್ಯುತ್ಸಾಹ ಈ ಮೈತ್ರಿಕೂಟದಲ್ಲಿತ್ತು. ನಿಜ. ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ (ನ್ಯಾಷನಲ್ ಡೆವಲಪ್‌ಮೆಂಟ್ ಅಲಯನ್ಸ್ ) ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿಕೊಂಡಿದ್ದರು. ‘ಅಬ್ ಕಿ ಬಾರ್ ಚಾರ್ಸೋ ಪಾರ್‘ ಎನ್ನುವುದು ಚುನಾವಣೆಯ ಘೋಷಣೆಯೂ ಆಗಿತ್ತು.ಸ್ವಂತ ಬಲದಿಂದ ಅಧಿಕಾರ ಪಡೆಯಲುಬೇಕಾಗಿದ್ದ ೨೭೧ ಸ್ಥಾನಗಳ ಮಾತಿರಲಿ ಕೇವಲ ೨೪೦ ಸ್ಥಾನಗಳನ್ನು ಗಳಿಸಲೂ ಪರದಾಡಿದ ಬಿಜೆಪಿ, ಆಂಧ್ರ ಪ್ರದೇಶದ ತೆಲುಗುದೇಶಂ ಮತ್ತು ಬಿಹಾರದ ನಿತೀಶ್‌ಕುಮಾರ್ ಅವರ ಜನತಾದಳ ( ಯು) ಬೆಂಬಲದಿಂದ ಮೂರನೇ ಬಾರಿಗೆ ಅಽಕಾರ ಹಿಡಿದದ್ದು ಈಗ ಇತಿಹಾಸ. ಈ ಮೂಲಕ ಬಿಜೆಪಿ ಮುಖಭಂಗವನ್ನು ತಪ್ಪಿಸಿಕೊಂಡು ಮೋದಿ ಅವರು ಮತ್ತೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವಂತಾಯಿತು.

‘ಇಂಡಿ ಮೈತ್ರಿಕೂಟ’ವು ಒಂದೂವರೆ ತಿಂಗಳ ಹಿಂದೆಯಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಒಂದಾಗಿತ್ತು. ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಒಗ್ಗಟ್ಟಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳಿಸಿದ್ದ ಉಮೇದಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಇಂಡಿಯಾ ಮೈತ್ರಿಕೂಟಕ್ಕೆ ಮತದಾರ ನಿರಾಶೆ ಉಂಟು ಮಾಡಿದ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಛರೆನ್ಸ್ ಅಧಿಕಾರಕ್ಕೆ ಬಂದಿತು.

ಆದರೀಗ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಕೂಟದ ಭಾಗವಾಗಿದ್ದ ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಳಿಯಲು ನಿರ್ಧರಿಸಿರುವುದರಿಂದ ಮೈತ್ರಿಕೂಟದ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ. ಕಾಂಗ್ರೆಸ್ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಮೂರು ಬಾರಿ ದೆಹಲಿ ರಾಜ್ಯದ ಗದ್ದುಗೆ ಹಿಡಿದಿತ್ತು. ಈಗ ಮತ್ತೆ ತನ್ನ ಅಸ್ತಿತ್ವವನ್ನು ಮರುಸ್ಥಾಪಿಸುವ ಕನಸುಗಳೊಂದಿಗೆ ಇಂಡಿ ಮೈತ್ರಿಕೂಟದ ಭಾಗವಾಗಿರುವ ಆಮ್ ಆದ್ಮಿ ಪಾರ್ಟಿ ವಿರುದ್ಧ ಚುನಾವಣಾ ಕದನಕ್ಕಿಳಿದಿದೆ . ಕಳೆದ ಚುನಾವಣೆಯಲ್ಲಿ ಒಟ್ಟು ೭೦ ಕ್ಷೇತ್ರಗಳಲ್ಲಿ ೬೭ರಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ೬೨ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಚ್ಚರಿಯ ಫಲಿತಾಂಶದಿಂದ ಅಧಿಕಾರ ಹಿಡಿದಿತ್ತು. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಕೇವಲ ೮ ಸ್ಥಾನಗಳನ್ನು ಮಾತ್ರ ಪಡೆದಿತ್ತು.

ಕಾಂಗ್ರೆಸ್ ಒಂದು ಸ್ಥಾನವನ್ನೂ ಗಳಿಸದೆ ಮುಖಭಂಗ ಅನುಭವಿಸಿತ್ತು. ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿಯಲ್ಲಿಯೇ ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿರುವುದು ಮುಜುಗರ ತರುವ ಮೂಲಕ ಅದೀಗ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ದೀಪದ ಕೆಳಗೇ ಕತ್ತಲು ಎನ್ನುವಂತಾಗಿದೆ ಬಿಜೆಪಿಯ ಸ್ಥಿತಿ. ಹಾಗಾಗಿ ಕೇಂದ್ರ ಸರ್ಕಾರ ಇಡಿ ಮತ್ತು ಸಿಬಿಐ ಮೂಲಕ ಮುಖ್ಯಮಂತ್ರಿ ಆಗಿದ್ದ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಆಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಭ್ರಷ್ಟಾಚಾರದ ಮೇಲೆ ಜೈಲಿಗೆ ಕಳುಹಿಸಿದೆ ಎನ್ನುವ ಆರೋಪವಿದೆ. ಈ ಇಬ್ಬರೂ ನಾಯಕರು ಈಗ ಜಾಮೀನಿನ ಮೇಲೆ ಇದ್ದು ಚುನಾವಣೆ ಎದುರಿಸುತ್ತಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ‘ಇಂಡಿ ಮೈತ್ರಿಕೂಟ’ದಲ್ಲಿದ್ದರೂ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಪರಸ್ಪರ ಎದುರಾಳಿಯಾಗಿ ಸ್ಛರ್ಧೆಗೆ ಇಳಿದಿರುವುದು ‘ಇಂಡಿಯಾ‘ದಲ್ಲಿ ಗೊಂದಲ ಉಂಟು ಮಾಡಿದೆ. ಈ ಮಧ್ಯೆ ಈ ಮೈತ್ರಿಕೂಟದಲ್ಲಿರುವ ತೃಣಮೂಲ ಕಾಂಗ್ರೆಸ್, ಶಿವಸೇನೆ ಮತ್ತು ಸಮಾಜವಾದಿ ಪಕ್ಷಗಳ ಮುಖಂಡರು ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಈ ಮೂರೂ ಪಕ್ಷಗಳ ಬೆಂಬಲ ಎಷ್ಟರಮಟ್ಟಿಗೆ ಸಹಕಾರಿ, ದೆಹಲಿಯಲ್ಲಿ ನೆಲೆಸಿರುವ ಆಯಾ ರಾಜ್ಯಗಳ ಮತದಾರರು ಎಷ್ಟರಮಟ್ಟಿಗೆ ಈ ಪಕ್ಷಗಳ ನಾಯಕರ ಮಾತು ಕೇಳುತ್ತಾರೆ ಎನ್ನುವ ಪ್ರಶ್ನೆ ಬೇರೆ. ಆದರೆ ಈ ಬೆಂಬಲ ಘೋಷಣೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಲೋಕಸಭೆ ಚುನಾವಣೆಯಲ್ಲಿ ತೋರಿದ ಒಗ್ಗಟ್ಟು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ವಾರಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಇಂಡಿಯಾ‘ದ ನೇತೃತ್ವವನ್ನು ತಾನು ವಹಿಸಿಕೊಳ್ಳಲು ಸಿದ್ಧ ಎಂದಿದ್ದರು. ಮಮತಾ ನಾಯಕತ್ವಕ್ಕೆ ಶರದ್ ಪವಾರ್, ಅಖಿಲೇಶ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಬಹಿರಂಗವಾಗಿಯೇ ತಮ್ಮ ಬೆಂಬಲ ಸೂಚಿಸಿದ್ದರು. ‘ಇಂಡಿಯಾ ‘ ಮುನ್ನಡೆಸಲು ರಾಹುಲ್ ಗಾಂಧಿ ಅಸಮರ್ಥರು ಎನ್ನುವ ಮಾತುಗಳು ಈ ನಾಯಕರ ಬಾಯಿಂದ ಬಂದಿದ್ದವು.

ಬಿಜೆಪಿಗೆ ಸರಿಸಾಟಿ ಮತ್ತು ಆ ಪಕ್ಷವನ್ನು ಮಣಿಸುವ ಶಕ್ತಿ ಮಮತಾ ಬ್ಯಾನರ್ಜಿ ಅವರಿಗಿದೆ ಎನ್ನುವುದು ಈ ನಾಯಕರ ಸ್ಪಷ್ಟ ನಿಲುವು. ಐವತ್ತು ವರ್ಷಗಳ ಕಾಲ ದೇಶವನ್ನಾಳಿದ ನೂರೈವತ್ತು ವರ್ಷ ಹಳೆಯದಾದ ಕಾಂಗ್ರೆಸ್ ಈಗ ಬಿಜೆಪಿಯ ಮುಂದೆ ಪೇಲವವಾಗಿರುವುದು ನಿಜ. ಮಲ್ಲಿಕಾರ್ಜುನ ಖರ್ಗೆ ಅವರು ಆ ಪಕ್ಷದ ಅಧ್ಯಕ್ಷರಾಗಿದ್ದರೂ ಪಕ್ಷದ ದಿನ ನಿತ್ಯದ ಆಡಳಿತ ವ್ಯವಹಾರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಭಾವ ಹೆಚ್ಚಿರುವುದು ಗುಟ್ಟೇನಲ್ಲ. ಪ್ರಧಾನಿ ಮೋದಿ ಅವರ ವಿರುದ್ಧ ತೊಡೆ ತಟ್ಟಿದರೂ, ರಾಹುಲ್, ಮೋದಿ ಅವರನ್ನು ಮಣಿಸುವಷ್ಟು ರಾಜಕೀಯ ಶಕ್ತಿ ಪಡೆದಿಲ್ಲ ಎನ್ನುವುದು ಜಗಜ್ಹಾಹೀರು. ರಾಹುಲ್ ಕಾಂಗ್ರೆಸ್ ಮತ್ತು ಮೈತ್ರಿ ಕೂಟದ ಇತರೆ ಹಿರಿಯ ನಾಯಕರ ಜೊತೆ ಹೇಗೆ ನಡೆದುಕೊಳ್ಳಬೇಕೆನ್ನು ವುದನ್ನು ಇನ್ನೂ ಕಲಿಯಬೇಕಿದೆ. ಮೈತ್ರಿಕೂಟದಲ್ಲಿರುವ ಪಕ್ಷಗಳ ನಾಯಕರು ಅವರವರ ರಾಜ್ಯಗಳಲ್ಲಿ ಆಡಳಿತ ನಡೆಸಿ ಪ್ರಭಾವಿಗಳಾಗಿದ್ದಾರೆ. ಅವರು ತಮ್ಮ ಹಿರಿತನ ಮತ್ತು ಆಡಳಿತಾನುಭವದಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅವರದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಅಂತಹ ಪ್ರಭಾವಿ ಮುಖಂಡ ರನ್ನು ರಾಹುಲ್ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಈಗ ‘ಇಂಡಿಯಾ’ ಅಸ್ತಿತ್ವದ ಕುರಿತು ಮೈತ್ರಿಕೂಟದ ಹಲವು ನಾಯಕರಿಂದಲೇ ಅಪಸ್ವರ ಎದ್ದಿದೆ. ‘ಇಂಡಿ‘ ಮೈತ್ರಿಕೂಟ ಕೇವಲ ಲೋಕಸಭೆ ಚುನಾವಣೆಗಷ್ಟೇ ಇತ್ತು. ಲೋಕಸಭೆ ಚುನಾವಣೆ ಮುಗಿದಿದೆ. ಇಂಡಿ ಮೈತ್ರಿಕೂಟ ಮುಂದೇನು ಮಾಡಬೇಕು? ಎನ್ನುವ ಯಾವುದೇ ಸ್ಪಷ್ಟ ನಿಲುವುಗಳಿಲ್ಲ. ದೂರದೃಷ್ಟಿಯ ಕೊರತೆ ಈ ಮೈತ್ರಿಕೂಟದಲ್ಲಿ ಎದ್ದು ಕಾಣುತ್ತಿದೆ. ದೆಹಲಿ ಚುನಾವಣೆಯಲ್ಲಿ ಮೈತ್ರಿಕೂಟದ ದೊಡ್ಡಣ್ಣ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷದ ವಿರುದ್ಧವೇ ಸ್ಪರ್ಧೆಗೆ ಇಳಿದಿದೆ.ಇದು ಮೈತ್ರಿಕೂಟದಲ್ಲಿ ಗೊಂದಲ ಉಂಟು ಮಾಡಿದೆ. ಆದ್ದರಿಂದ ‘ಇಂಡಿಯಾ‘ವನ್ನು ವಿಸರ್ಜಿಸಬೇಕು ಎನ್ನುವುದು ಓಮರ್ ಅಬ್ದುಲ್ಲಾ ಅವರ ನೇರ ನುಡಿ. ಈ ಅಭಿಪ್ರಾಯಕ್ಕೆ ಬಿಹಾರದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ದನಿಗೂಡಿಸಿದ್ದಾರೆ. ಆದರೆ ಓಮರ್ ಅಬ್ದುಲ್ಲಾ ಅವರು ಈ ಸಂಬಂಧ ನೀಡಿದ ಹೇಳಿಕೆಯ ಬೆನ್ನಲ್ಲೇ ಅವರ ತಂದೆ ಫಾರುಕ್ ಅಬ್ದುಲ್ಲಾ ಅವರು, ಚುನಾವಣೆಯ ಹೊರತಾಗಿಯೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಎದುರಾಗಿ ನಿಲ್ಲುವ ಮೈತ್ರಿಕೂಟದ ಅವಶ್ಯಕತೆ ಇದೆ ಎನ್ನುವ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸುವ ಜೊತೆಗೆ ಈ ವಿಷಯದಲ್ಲಿ ಗಂಭೀರ ಚರ್ಚೆಗೆ ಅವಕಾಶ ಒದಗಿಸಿದಂತಾಗಿದೆ.

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಕೇಜ್ರಿವಾಲ್ ವಿರುದ್ಧ ದಿವಂಗತ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯಿಂದ ದಿವಂಗತ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ ಅವರ ಪುತ್ರ ಪರವೇಶ್ ವರ್ಮಾ ಅಭ್ಯರ್ಥಿ. ಆಮ್ ಆದ್ಮಿ ಪಕ್ಷವು ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಹೇಳಿಕೊಳ್ಳುವ ಪ್ರಗತಿ ಸಾಽಸಿಲ್ಲ. ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದೇ ಸಾಧನೆ ಎನ್ನುವ ಆರೋಪ ಸಂದೀಪ್ ದೀಕ್ಷಿತ್ ಮತ್ತು ಅಜಯ್ ಮಾಕೇನ್ ಅವರದ್ದು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಮೇಲ್ನೋಟಕ್ಕೆ ಕಂಡರೂ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ ಎನ್ನುವುದು ನಿಶ್ಚಿತ. ದೆಹಲಿಯ ಆಡಳಿತವನ್ನೂ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯ ಜೊತೆಗೆ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ‘ಇಂಡಿಯಾ‘ದ ಅಳಿವು ಉಳಿವು ನಿರ್ಣಾಯಕ ಸ್ಥಿತಿಗೆ ತಲುಪುವ ಸಾಧ್ಯತೆಗಳು ಹೆಚ್ಚಿರುವುದನ್ನು ತಳ್ಳಿಹಾಕಲಾಗದು.

” ಕಳೆದ ಎರಡು ವಾರಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಇಂಡಿಯಾ‘ದ ನೇತೃತ್ವವನ್ನು ತಾನು ವಹಿಸಿಕೊಳ್ಳಲು ಸಿದ್ಧ ಎಂದಿದ್ದರು. ಮಮತಾ ನಾಯಕತ್ವಕ್ಕೆ ಶರದ್ ಪವಾರ್, ಅಖಿಲೇಶ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಬಹಿರಂಗವಾಗಿಯೇ ತಮ್ಮ ಬೆಂಬಲ ಸೂಚಿಸಿದ್ದರು. ‘ಇಂಡಿಯಾ ‘ ಮುನ್ನಡೆಸಲು ರಾಹುಲ್ ಗಾಂಧಿ ಅಸಮರ್ಥರು ಎನ್ನುವ ಮಾತುಗಳು ಈ ನಾಯಕರ ಬಾಯಿಂದ ಬಂದಿದ್ದವು. ಬಿಜೆಪಿಗೆ ಸರಿಸಾಟಿ ಮತ್ತು ಆ ಪಕ್ಷವನ್ನು ಮಣಿಸುವ ಶಕ್ತಿ ಮಮತಾ ಬ್ಯಾನರ್ಜಿ ಅವರಿಗಿದೆ ಎನ್ನುವುದು ಈ ನಾಯಕರ ಸ್ಪಷ್ಟ ನಿಲುವು”

 

 

ಆಂದೋಲನ ಡೆಸ್ಕ್

Recent Posts

ಚಿರತೆ ಮರಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…

5 mins ago

ಹುಣಸೂರಿನಲ್ಲಿ ಹಾಡಹಗಲೇ ಚಿನ್ನಭರಣ ದರೋಡೆ : ಐಜಿಪಿ ಬೋರಲಿಂಗಯ್ಯ ಹೇಳಿದ್ದೇನು?

ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌…

1 hour ago

ವರುಣಾ ನಾಲೆಯಲ್ಲಿ ಮಹಿಳೆ ಶವ ಪತ್ತೆ : ಚಿನ್ನಕ್ಕಾಗಿ ಕೊಲೆ ಶಂಕೆ?

ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…

2 hours ago

ವಾಯುನೆಲೆ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…

2 hours ago

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ : ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಚೆನ್ನೈ : ದಳಪತಿ ವಿಜಯ್‌ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…

2 hours ago

ರಾಷ್ಟ್ರಪಿತನ‌ ಹೆಸರನ್ನೇ ಅಳಿಸುವ ಪಿತೂರಿಯನ್ನು ಸೋಲಿಸೋಣ : ಸಿ.ಎಂ.ಸಿದ್ದರಾಮಯ್ಯ ಕರೆ

ಬೆಂಗಳೂರು : ಕಾಂಗ್ರೆಸ್‌ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಇದೊಂದು ಚಳುವಳಿ ಮತ್ತು ಸಿದ್ಧಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

2 hours ago