ಅಂಕಣಗಳು

ಮೂತ್ರಕೋಶದ ಏಡಿಗಂತಿ

ಡಾ. ಎಸ್. ಬಿ. ವಸಂತ್ ಕುಮಾರ್, ಸೋಂಪುರ ಬಸಪ್ಪ ಆಸ್ಪತ್ರೆ, ಬನ್ನೂರು ರಸ್ತೆ, ಮೈಸೂರು

ಮೂತ್ರಕೋಶ ಅಥವಾ ಮೂತ್ರಚೀಲ ನಮ್ಮ ದೇಹದ ಕೆಳಹೊಟ್ಟೆಯಲ್ಲಿರುವ ಮಾಂಸದ ಚೀಲ. ಸುಮಾರು ೫೦೦ ಮಿಲಿಲೀಟರುಗಳಷ್ಟು ಮೂತ್ರವನ್ನು ಸಂಗ್ರಹಿಸಿಡಬಲ್ಲ ಮೂತ್ರ ಚೀಲದ ಕೆಲಸವೇ ಅದ್ಭುತ ಮತ್ತು ಆಶ್ಚರ್ಯಕರ. ಸೋಜಿಗವೆಂದರೆ ಮೂತ್ರವನ್ನು ಐದಾರು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಮೂತ್ರ ಚೀಲ ತುಂಬಿತೆಂದರೆ ಚೀಲದ ಮಾಂಸಖಂಡ ಮೇಲಿಂದ ಕೆಳಕ್ಕೆ ಕುಗ್ಗುತ್ತಾ ಹೋಗುತ್ತದೆ. ಇತ್ತ ಮಾಂಸಖಂಡದ ಬಿಗಿಸುತ್ತು ಸಡಿಲವಾಗುತ್ತದೆ. ಸೂಕ್ತ ಜಾಗ ದೊರೆತ ನಂತರ ಮೂತ್ರ ವಿಸರ್ಜನೆ ಮಾಡುವುದು ಸ್ವಭಾವ. ಸೂಕ್ತ ಜಾಗ ಸಿಗದಿದ್ದರೆ ತುಂಬಿದ ಚೀಲ ತೋರ್ಪಡಿಸುವ ನಯವಾದ ನೋವಿನ ಸನ್ನೆಗೆ ಸ್ಪಂದಿಸದಿದ್ದರೆ ಕೆಲವೊಮ್ಮೆ ಮೂತ್ರ ಚೀಲ ಒಂದು ಲೀಟರಿಗೂ ಮಿಕ್ಕು ಹಿಗ್ಗಬಲ್ಲದು!

ಮೂತ್ರ ಒಂದು ದ್ರವ, ತಿಳಿ ನೀರಲ್ಲ. ರಕ್ತವೂ ದ್ರವ. ಸನ್ನಿವೇಶಕ್ಕೆ ತಕ್ಕಂತೆ ಹರಿಯುತ್ತಿರುವುದು ದ್ರವವಸ್ತುಗಳ ಗುಣಗಳಲ್ಲೊಂದು. ದೇಹದ ಶಕ್ತಿ ಉತ್ಪಾದನೆಯ ವಿಶಿಷ್ಟ ಕ್ರಿಯೆಯ ನಂತರ ಉದ್ಭವವಾಗುವ ತ್ಯಾಜ್ಯವೆನಿಸುವ ದ್ರಾವಣವನ್ನು ಮೂತ್ರಾಂಗ ವ್ಯವಸ್ಥೆ ಹೊರಹಾಕುತ್ತದೆ. ವಿವಿಧ ರಾಸಾಯನಿಕಗಳನ್ನು ಒಳಗೊಂಡ ಮೂತ್ರ ಮೂತ್ರಕೋಶಕ್ಕೆ ಹಾನಿಮಾಡಲಾಗದಂತಹ ಒಳಹೊದಿಕೆ ಇದೆ. ವಿಶೇಷವಾಗಿ ಮೇಲುಸ್ತರದ ಪ್ರಾಣಿಗಳಿಗೆ, ಮನುಷ್ಯನನ್ನು ಒಳಗೊಂಡಂತೆ, ಬಿಗಿಸುತ್ತು ಹೊಂದಿದ ಮೂತ್ರಕೋಶ ಒಂದು ವರ ಎಂದೇ ಹೇಳಬೇಕು.

ಮೂತ್ರ ಚೀಲದ ಒಳಹೊದಿಕೆ ಅಥವಾ ಪದರಗಳಲ್ಲಿ ಕೆಚ್ಚನೆ ಬಣ್ಣದ ಬದಲಾವಣೆ ಯಾವುದಾದರೂ ಒಂದು ಕಡೆ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಅಗಲವಾಗುತ್ತದೆ ನೋವೇನು ಗೋಚರವಾಗುವುದಿಲ್ಲ. ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಗೋಚರವಾಗುವಂತೆ ಸಣ್ಣ ಪ್ರಮಾಣದಲ್ಲಿ ರಕ್ತ ಹೋಗುತ್ತಿರುತ್ತದೆ. ಇದು ಮೂತ್ರ ಚೀಲದೊಳಗೆ ಉದ್ಭವವಾಗುತ್ತಿರುವ ಏಡಿಗಂತಿಯ (ಕ್ಯಾನ್ಸರ್) ಲಕ್ಷಣ. ದಿನ ಕಳೆದಂತೆ ಬೆಳೆಯತೊಡಗುವ ಏಡಿಗಂತಿ ಮೂತ್ರ ಚೀಲದ ಒಳ ಭಾಗಕ್ಕೂ ತೂರಿಕೊಳ್ಳುತ್ತದೆ ಮೂತ್ರ ಚೀಲದ ಮಾಂಸದ ಹೊದಿಕೆಗೂ ಹರಡುತ್ತದೆ. ಈ ಹಂತದಲ್ಲಿ ಮೂತ್ರ ವಿಸರ್ಜನೆಯಲ್ಲಿ ಕಂದು ಬಣ್ಣ ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಬೆಳೆದ ಏಡಿಗಂತಿ ಮೂತ್ರ ಚೀಲದ ಹಿಂಬದಿಯಲ್ಲಿರುವ ನೆಟ್ಟಗರುಳಿಗೂ, ತಳಭಾಗದಲ್ಲಿರುವ ಮುನ್ನಿಲುಗಗ್ರಂಥಿಗೂ (ಪ್ರಾಸ್ಟೇಟ್) ಹರಡುತ್ತದೆ. ಹೆಂಗಸರ ಮೂತ್ರಚೀಲದ ಮುಂಭಾಗದಲ್ಲಿ ಗರ್ಭಕೋಶ ಇದೆ. ಏಡಿಗಂತಿ ಗರ್ಭಕೋಶಕ್ಕೂ ಆಕ್ರಮಣ ಮಾಡಬಲ್ಲದು. ಇದು ಮೂತ್ರಚೀಲದ ಏಡಿಗಂತಿಯ ಮೀರಿದ ಸ್ಥಿತಿ. ಇಂತಹವರಲ್ಲಿ ರಕ್ತ ಮೂತ್ರದ ಮೂಲಕ ಹೊರ ಬರುತ್ತದೆ. ಕೆಳಹೊಟ್ಟೆಯಲ್ಲಿ ಸಣ್ಣನೆಯ ನೋವು ಕಾಣಿಸಿಕೊಳ್ಳುತ್ತದೆ.

ಮೂತ್ರ ಚೀಲದೊಳಗೆ ಮೂರು ರಂಧ್ರಗಳಿವೆ, ಎಡ ಮತ್ತು ಬಲ ಮೂತ್ರಪಿಂಡದಿಂದ ಮೂತ್ರ ಹರಿದು ಬರುವ ಎರಡು ರಂಧ್ರಗಳು ಮತ್ತು ಮೂತ್ರ ಹೊರಹೋಗಲು ಇರುವ ಒಂದು ರಂಧ್ರ. ಹಬ್ಬುತ್ತಿರುವ ಏಡಿಗಂತಿ ಈ ರಂಧ್ರಗಳ ಕಡೆಗೂ ಹೋಗಬಹುದು. ಹೀಗಾದಾಗ ಮೂತ್ರವು ಮೂತ್ರಪಿಂಡಗಳಿಂದ ಚೀಲಕ್ಕೆ ಬರುವುದು ದುಸ್ತರವಾಗುತ್ತದೆ. ಮೂತ್ರ ಹೊರಹೋಗುವ ರಂಧ್ರ ಮುಚ್ಚಿಕೊಂಡರೆ ಮೂತ್ರ ವಿಸರ್ಜನೆಯೇ ಆಗುವುದಿಲ್ಲ. ಆಗ ಉಬ್ಬಿದ ಅಥವಾ ಹಿಗ್ಗಿದ ಮೂತ್ರ ಚೀಲ ಹೊಕ್ಕಳಿನ ಕೆಳಗೆ ಗೋಳಾಕಾರಕ್ಕೆ ಭಾಸವಾಗುವ ಸಂಭವವೂ ಇರುತ್ತದೆ.

ಮೂತ್ರಚೀಲದ ಏಡಿಗಂತಿ ಬರುವುದಾದರೂ ಏಕೆ? ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ ಬೀಡಿ, ಸಿಗರೇಟು ಸೇದುವವರಲ್ಲಿ ಸರ್ವೆ ಸಾಮಾನ್ಯ. ಆಧುನಿಕ ಪ್ರಪಂಚದ ಅನಿವಾರ್ಯವೆನಿಸಿರುವ ವಿವಿಧ ಬಣ್ಣಗಳ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಮೂತ್ರ ಚೀಲದ ಒಳಪದರಕ್ಕೆ ಘಾಸಿಯನ್ನುಂಟು ಮಾಡುತ್ತವೆ. ಬೆಂಜಿಡನ್, ಟಾಲುಡಿನ್, ಮಿಥೈಲ್, ಡೈಅನಿಲಿನ್ ಮುಂತಾದವು ಜವಳಿ, ವಾಹನಗಳ ಚಕ್ರ, ಪೆಟ್ರೋಲಿಯಂ, ಕ್ರಿಮಿನಾಶಕಗಳು ಮುಂತಾದವುಗಳನ್ನು ಉತ್ಪಾದಿಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಲ್ಲಿ ಮೂತ್ರ ಚೀಲದ ಏಡಿಗಂತಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಹಿರಿಯ ವಯಸ್ಸಿನಲ್ಲಿರುವವರಲ್ಲಿ ಕಂಡುಬರುವ ಯಾವುದೇ ರೀತಿಯ ಮೂತ್ರ ವಿಸರ್ಜನೆಯ ವ್ಯತ್ಯಯವನ್ನು ಕಡೆಗಣಿಸಬಾರದು. ನಿಮ್ಮ ಅನುಭವವನ್ನು ವೈದ್ಯರೊಡನೆ ಹೇಳಿಕೊಂಡರೆ ಅವರು ಸೂಕ್ತ ಚಿಂತನೆ ಮಾಡಿ ಅಗತ್ಯ ಪರೀಕ್ಷೆಗಳ ನಂತರ ಏಡಿಗಂತಿಯ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಮೀರಿದ ಸ್ಥಿತಿಯಲ್ಲಿರುವ ಕೆಲವು ಏಡಿಗಂತಿಗಳು ಯಾವುದೇ ತೊಂದರೆ ಕೊಡದಂತೆ ಬೆಳೆದುಕೊಳ್ಳುತ್ತಿರುವ ಸಂದರ್ಭಗಳೂ ಉಂಟು. ಕೆಂಪನೆಯ ಮೂತ್ರ ಅಸಹಜವೆಂಬುದು ನೆನಪಿರಲಿ.

ಅಗತ್ಯವೆನಿಸಿದ ಪರೀಕ್ಷೆಗಳ ನಂತರ ಚಿಕಿತ್ಸೆ ಪ್ರಾರಂಭವಾಗುತ್ತದೆ. ಶಸ್ತ್ರಚಿಕಿತ್ಸೆಯ ಗುರಿ ಏಡಿಗಂತಿ ಹೊರಬರಬೇಕು, ಮೂತ್ರದಲ್ಲಿ ರಕ್ತ ಹೋಗಬಾರದು, ಮೂತ್ರದ ಹರಿವಿಗೆ ಅಡ್ಡಿಯಾಗಬಾರದು. ಮೂತ್ರ ಚೀಲದೊಳಕ್ಕೆ ಏಡಿಗಂತಿ ಮಾರಕ ಔಷಧಗಳನ್ನು ತುಂಬಿ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಬಿಸಿಜಿ ಮರೆವಣೆ ಚಿಕಿತ್ಸೆಯೂ ಒಂದು (ಬಿಸಿಜಿ ಇಮ್ಯುನೋಥೆರಪಿ). ಇಲ್ಲಿಂದ ಮುಂದೆ ಚಿಕಿತ್ಸೆಯ ಪರಿಣಾಮ ಮತ್ತು ಏಡಿಗಂತಿಯ ವರ್ತನೆಯನ್ನು ಗಮನಿಸಬೇಕಾಗುತ್ತದೆ. ಪರಿಸ್ಥಿತಿಗನುಗುಣವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಏಡಿಗಂತಿ ಉಗಮವಾದ ಜಾಗದಿಂದ ಮೂತ್ರ ಚೀಲದ ಬೇರೆ ಭಾಗಕ್ಕೆ ಹಬ್ಬಿದರೆ ಸನಿಹ ಇರುವ ಅಂಗಾಂಗಗಳಿಗೆ ಹರಡಿದ್ದರೆ ಮೂತ್ರಚೀಲದ ಜೊತೆಗೆ ರೋಗತಗುಲಿರುವ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಬೇಕಾಗುತ್ತದೆ. ಗಂಡಸರಲ್ಲಿ ಏಡಿಗಂತಿ ಹರಡಿರುವ ಮುನ್ನಿಲುಗ ಗ್ರಂಥಿಯನ್ನು ತೆಗೆಯಬೇಕಾಗುತ್ತದೆ. ಹೆಂಗಸರಲ್ಲಿ ಗರ್ಭಕೋಶ ವನ್ನು ತೆಗೆದುಹಾಕಬೇಕಾಗುತ್ತದೆ. ಇದೊಂದು ಸಂಕೀರ್ಣ ಶಸ್ತ್ರಕ್ರಿಯೆ.

ಮೂತ್ರ ಚೀಲವನ್ನು ತೆಗೆದುಹಾಕಿದ ಮೇಲೆ ಮೂತ್ರದ ಗತಿ ಏನು? ಹೇಗಾದರೂ ಸರಿ ಉತ್ಪತ್ತಿಯಾದ ಮೂತ್ರ ದೇಹದಿಂದ ಹೊರಬರಲೇಬೇಕು. ಇದಕ್ಕೂ ಮಾರ್ಗಗಳಿವೆ. ಆಹಾರ ಪಚನಿಕೆಗೆ, ಹೀರುವಿಕೆಗೆ ಮತ್ತು ಪಾರುಗಾಣಿಕೆಗೆ ಜೀರ್ಣಾಂಗಗಳ ವ್ಯವಸ್ಥೆ ಇದೆ. ಸಣ್ಣ ಕರುಳು ಆಹಾರಾಂಶಗಳನ್ನು ಹೀರಿ ರಕ್ತಕ್ಕೆ ಸೇರಿಸುವ ಕೆಲಸ ಮಾಡಿದರೆ, ದೊಡ್ಡ ಕರುಳು ಹೀರುವಿಕೆಯನ್ನು ಪೂರ್ಣಗೊಳಿಸಿ ತ್ಯಾಜ್ಯ ವಸ್ತುಗಳನ್ನು ಮಲವಿಸರ್ಜನೆಯ ರೂಪದಲ್ಲಿ ಹೊರಹಾಕುವ ಕೆಲಸ ಮಾಡುತ್ತದೆ. ಮೂತ್ರ ಚೀಲವನ್ನು ಸುರಕ್ಷಿತವಾಗಿ ಕತ್ತರಿಸಿ ತೆಗೆದ ನಂತರ ಮೂತ್ರವನ್ನು ಶೇಖರಿಸಿ ಹೊರಹಾಕುವ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಸಣ್ಣ ಕರುಳು ಅಥವಾ ದೊಡ್ಡ ಕರುಳನ್ನು ಭಾಗಶಃ ಬಳಸಿಕೊಳ್ಳಬೇಕಾಗುತ್ತದೆ. ಕತ್ತರಿಸಲ್ಪಟ್ಟ ಮೂತ್ರ ನಾಳಗಳು ಮೂತ್ರವನ್ನು ಮೂತ್ರಪಿಂಡಗಳಿಂದ ಕೆಳಸಾಗಿಸುವ ಕೆಲಸವನ್ನು ಮುಂದುವರಿಸುತ್ತವೆ. ಸಣ್ಣ ಕರುಳಿನ ಕೊನೆಯ ಭಾಗದ ಸುಮಾರು ೨೦ ಸೆಂಟಿಮೀಟರ್ ತುಂಡೊಂದನ್ನು ರಕ್ತ ಸಂಚಾರ ಸಹಿತ ಬೇರ್ಪಡಿಸಲಾಗುತ್ತದೆ. ಇದರ ಮೇಲ್ತುದಿಯನ್ನು ಮುಚ್ಚಿ ಅಲ್ಲಿಂದ ತುಸು ಕೆಳಕ್ಕೆ ರಂಧ್ರ ಮಾಡಿ ಮೂತ್ರಕ ನಾಳಗಳನ್ನು ತೂರಿಸಿ ಭದ್ರಪಡಿಸಲಾಗುತ್ತದೆ. ಕರುಳಿನ ಕೆಳ ತುದಿಯನ್ನು ಚರ್ಮದ ಮೇಲೊಂದು ಸೂಕ್ತ ರಂಧ್ರ ಮಾಡಿ ಹೊಟ್ಟೆಯೊಳಗಿನಿಂದ ಹೊರತರಲಾಗುತ್ತದೆ. ಈ ತುದಿಗೆ ಮೂತ್ರವನ್ನು ಶೇಖರಿಸುವ ಚೀಲ ಒಂದನ್ನು ಅಳವಡಿಸಲಾಗುತ್ತದೆ. ಹೀಗೆ ಶೇಖರವಾದ ಮೂತ್ರವನ್ನು ಕಾಲಕಾಲಕ್ಕೆ ಹೊರಹಾಕಿ ಮತ್ತೆ ಚೀಲವನ್ನು ಜೋಡಿಸಿಕೊಳ್ಳಬೇಕಾಗುತ್ತದೆ. ಇದೇ ರೀತಿ ದೊಡ್ಡ ಕರುಳಿನ ಒಂದು ಭಾಗವನ್ನು ಬಳಸಿಕೊಂಡು ಮೂತ್ರ ನಾಳಗಳನ್ನು ಜೋಡಿಸಿ ಮೂತ್ರ ಶೇಖರ ಮಾಡಲು ಅನುಕೂಲವಾಗುವ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇಲ್ಲಿ ಮೂತ್ರ ಮಲದ್ವಾರದ ಮೂಲಕ ಹೊರಬರುತ್ತದೆ.

ನೆನಪಿರಲಿ, ಮೂತ್ರ ಚೀಲವನ್ನು ಹೊರತೆಗೆದ ನಂತರ ಮೂತ್ರವನ್ನು ಕರುಳಿಗೆ ಹರಿಯಬಿಡಲಾಗುತ್ತದೆ. ಕರುಳು ಹೀರಿಕೊಳ್ಳಲು ಇರುವ ಅಂಗಾಂಗ. ಆದರೆ ಅನಿವಾರ್ಯವಾಗಿ ಮೂತ್ರವನ್ನು ಕರುಳಿಗೆ ಹರಿಸಲಾಗುತ್ತದೆ. ಇಲ್ಲಿ ಮೂತ್ರದ ಕೆಲವು ಅಂಶಗಳು ಸಹಜವಾಗಿ ಹೀರಲ್ಪಡುತ್ತವೆ. ಇದರ ಪ್ರತಿಕೂಲ ಪರಿಣಾಮಗಳು ಇಲ್ಲದಿರುವುದಿಲ್ಲ. ವೈದ್ಯರಂಗದಲ್ಲಿ ಇದಕ್ಕೆಲ್ಲ ಪರಿಣಾಮಕಾರಿ ವ್ಯವಸ್ಥೆಗಳಿವೆ. ಇನ್ನು ನಾಲ್ಕಾರು ದಿನ ಬದುಕುಳಿಯಲು ಈ ತಂತ್ರ ಅನಿವಾರ್ಯ.

ಆಂದೋಲನ ಡೆಸ್ಕ್

Recent Posts

ಹನೂರು| ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಅಪಘಾತ: ಇಬ್ಬರು ಸಾವು

ಮಹಾದೇಶ್‌ ಎಂ ಗೌಡ  ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…

17 seconds ago

ಹನೂರು: ಟ್ರ್ಯಾಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸಾವು

ಮಹಾದೇಶ್‌ ಎಂ ಗೌಡ  ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…

3 mins ago

ಮೈಸೂರು ಏರ್‌ಪೋರ್ಟ್‌ನಲ್ಲಿ ಸಿಎಂ, ಡಿಸಿಎಂ ಜೊತೆ ರಾಹುಲ್‌ ಗಾಂಧಿ ಮಾತುಕತೆ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌…

3 hours ago

ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜನ‌ ಎಂಟ್ರಿ: ವಾಹನ ಸವಾರರಿಗೆ ಢವಢವ

ಮಹಾದೇಶ್‌ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…

3 hours ago

ಎಂ.ಲಕ್ಷ್ಮಣ್‌ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ ಶಾಸಕ ಶ್ರೀವತ್ಸ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…

4 hours ago

ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ನೀಡಲಿ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…

4 hours ago