ಡಾ.ಎಂ.ಎಸ್.ಆಶಾದೇವಿ
ಅಂಬೇಡ್ಕರ್ ನನ್ನ ಬುದ್ಧಿಯ ಭಾಗವಾದದ್ದು ನನ್ನ ಹದಿಹರೆಯದಲ್ಲಿ. ಅವರು ನನ್ನ ಭಾವಕೋಶದ ಭಾಗವಾದದ್ದು ನಾನು ಸ್ತ್ರೀವಾದವನ್ನು ಗಂಭೀರವಾಗಿ ಅಭ್ಯಾಸ ಮಾಡತೊಡಗಿದಾಗ
ಅಂಬೇಡ್ಕರ್ ಅವರನ್ನು ನಾನು ಮೊದಲು ಭೇಟಿಯಾದದ್ದು ಎಲ್ಲಿ? ನಾನು ಐದನೇ ತರಗತಿಯಲ್ಲಿದ್ದೆ ಎಂದು ನೆನಪು. ಸಂವಿಧಾನದ ಪಿತೃ ಎನ್ನುವ ಪಾಠವಿತ್ತೋ, ಅಧ್ಯಾಪಕರು ಇದನ್ನು ತುಂಬು ಅಭಿಮಾನದಿಂದ ಹೇಳಿದ್ದರೋ ನೆನಪಾಗುತ್ತಿಲ್ಲ. ಆ ಅಧ್ಯಾಪಕರ ಧ್ವನಿಯಲ್ಲಿದ್ದ ಎಣೆಯಿಲ್ಲದ ಪ್ರೀತಿ, ಗೌರವದ ಭಾವ ಮಾತ್ರ ಕಣ್ಣೆದುರಿಗೂ ಮನದೆದುರಿಗೂ ಇದೆ. ಈಗ ಆ ಅಧ್ಯಾಪಕರು ಹೇಳಿದರೋ ಎನ್ನುವಂತೆ ನಾನು ಅನುಭವಿಸಬಲ್ಲೆ. ತನ್ನ ಇಷ್ಟದೈವವನ್ನು ಕುರಿತು ಮನದುಂಬಿ ಹಾಡುವ ಭಕ್ತರ ಮನಸ್ಥಿತಿಯಲ್ಲಿ ಆ ಅಧ್ಯಾಪಕರು ಮಾತನಾಡಿದ್ದರು. ಹೆಚ್‌ಜಿಎನ್ ಎನ್ನುವುದು ಅವರ ಹೆಸರಾಗಿತ್ತು. ಇದು ನಡೆದದ್ದು ಚಿತ್ರದುರ್ಗದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಆ ಹೆಸರು ತುಸು ವಿಚಿತ್ರವಾಗಿ ನನ್ನ ಕಿವಿಗೆ ಕೇಳಿಸಿದ್ದೂ ನನ್ನ ನೆನಪಿನಲ್ಲಿದೆ. ಖರೆ ಎಂದರೆ, ಆಗ ನಮಗೆ ಇತಿಹಾಸ ಪಾಠ ಮಾಡುತ್ತಿದ್ದ ಸೌಭಾಗ್ಯ ಮೇಡಂಭಾವಾವೇಶದಲ್ಲಿ ಪರಿಚಯಿಸಿದ್ದ ಅಶೋಕನೇ ನನಗೆ ಹೆಚ್ಚು ಪ್ರಿಯನಾಗಿ ಕಂಡಿದ್ದ!
ಮುಂದೆ ನಾನು ತಿಪಟೂರಿನಲ್ಲಿ ಹೈಸ್ಕೂಲು ಓದುತ್ತಿದ್ದಾಗ ಅಂಬೇಡ್ಕರ್ ನನಗೆ ಮತ್ತೆ ಸಿಕ್ಕರು. ಆ ಶಾಲೆಯಲ್ಲಿ ಅತ್ಯುತ್ತಮ ಗ್ರಂಥಾಲಯವಿತ್ತು. ವಾರಕ್ಕೆ ಎರಡು ಬಾರಿ ಪುಸ್ತಕ ಒಯ್ಯಲು ಅವಕಾಶವಿತ್ತು. ಬಿಡುವಿದ್ದಾಗ ಅಲ್ಲೇ ಓದಲೂಬಹುದಾಗಿತ್ತು. ಸಿಕ್ಕದ್ದನ್ನೆಲ್ಲ ಓದುವ ಅಭ್ಯಾಸ ಆದದ್ದು ಅಲ್ಲಿ. ಮನೆಯಲ್ಲಿ ಅಪ್ಪ ಅಮ್ಮ ಸದಾ ಓದುತ್ತಲೇ ಇರುತ್ತಿದ್ದರು. ಅವರ ಜೊತೆ ಪೈಪೋಟಿಗೆ ಬಿದ್ದ ನಾನು ಓದುತ್ತಲೇ ಇದ್ದುದನ್ನು ಗಮನಿಸಿದ ತಂದೆ ಒಂದು ಅಭ್ಯಾಸ ಜಾರಿಗೆ ತಂದರು. ನಾನು ಓದಿದ ಪುಸ್ತಕಗಳ ಬಗ್ಗೆ ಅವರ ಜೊತೆ ಮಾತನಾಡಬೇಕು ಎನ್ನುವ ನಿಯಮ ಜಾರಿಗೊಳಿಸಿದರು. ಹೀಗೆ ಒಮ್ಮೆ ಅಂಬೇಡ್ಕರ್ ಕುರಿತ ಪುಸ್ತಕವನ್ನು ಓದುತ್ತಾ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಅದು ಮಹಾಡ್ ಕೆರೆಯ ಪ್ರಸಂಗ. ಎಂಟನೆ ತರಗತಿಯೋ ಒಂಬತ್ತನೆಯದೋ ಸರಿಯಾಗಿ ನೆನಪಿಲ್ಲ. ಕಣ್ಣಲ್ಲಿ ನೀರು ತುಂಬಿದ್ದರೂ, ದಲಿತರು ಯಾರು ಎನ್ನುವುದು ನನಗೆ ತಿಳಿಯಲಿಲ್ಲ. ಸೀದಾ ಅಪ್ಪಾಜಿ ಬಳಿ ಹೋದವಳೇ ದಲಿತರು ಅಂದರೆ ಯಾರು, ಅವರಿಗೆ ಯಾಕೆ ಇಷ್ಟೆಲ್ಲ ತೊಂದರೆ ಕೊಡ್ತಾರೆ? ಅವರಿಗೆ ತೊಂದರೆ ಕೊಟ್ಟವರನ್ನೆಲ್ಲ ಜೈಲಿಗೆ ಯಾಕೆ ಹಾಕಲಿಲ್ಲ? ಅಂತೆಲ್ಲ ಪ್ರಶ್ನೆಗಳನ್ನು ಕೇಳಿದ್ದೆ. ನನ್ನ ಅಜ್ಞಾನ ಎಷ್ಟರ ಮಟ್ಟಿಗಿತ್ತು ಎಂದರೆ, ಇದಕ್ಕೂ ಬ್ರಿಟಿಷರೇ ಕಾರಣ ಅಲ್ಲವೆ ಅಂತಲೂ ತಂದೆಯವರನ್ನು ಕೇಳಿದ್ದೆ. ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿದ್ದ ಅವರು ಸಾಯಂಕಾಲ ಹೇಳ್ತೀನಿ ಅಂದರು. ಮನಸ್ಸು ಎಷ್ಟು ಪ್ರಕ್ಷುಬ್ಧವಾಗಿತ್ತು ಅಂದರೆ, ಶಾಲೆಗೆ ಹೋದವಳೇ ಇತಿಹಾಸದ ಮೇಷ್ಟ್ರ ಹತ್ತಿರ ಹೋಗಿ ಅವೇ ಪ್ರಶ್ನೆಗಳನ್ನು ಪುನರುಚ್ಚರಿಸಿದೆ. ನನ್ನನ್ನು ವಿಚಿತ್ರವಾಗಿ ನೋಡಿದ ಅವರು, ಆ ಪುಸ್ತಕಾನೆಲ್ಲ ಓದು ಅಂತ ನಿನಗೆ ಯಾರು ಹೇಳಿದ್ದು ಅಂದು ಗದರಿದರು. ಏನೇನೋ ಗೊಣಗಿಕೊಂಡ ಅವರು, ಕೊನೆಗೆ, ಆ ಹರಿಜನರಿದ್ದಾರಲ್ಲ, ಅವರನ್ನು ಉದ್ದಾರ ಮಾಡೋಕೆ ಅಂತ ಈ ದೊಡ್ಡಮನುಷ್ಯ ಹೋರಾಟ ಮಾಡಿದ ಅಂದವರೇ ಹೊರಟು ಹೋದರು. ಮತ್ತೆ ಪ್ರಶ್ನೆ ಮನಸ್ಸಿನಲ್ಲಿ ‘ಹರಿಜನರು ಅಂದರೆ ಯಾರು?’ ಇದಕ್ಕೆಲ್ಲ ಉತ್ತರ ಸಿಕ್ಕಿದ್ದು ಸಂಜೆ, ಅಂಬೇಡ್ಕರ್ ನನಗೆ ನಿಜವಾದ ಅರ್ಥದಲ್ಲಿ ಸಿಕ್ಕದ್ದೂ ಆ ಸಂಜೆಯೇ. ಸುಮಾರು ಒಂದು ಗಂಟೆ ಅವರನ್ನು ಕಟ್ಟಿಕೊಟ್ಟವರು ನನ್ನ ತಂದೆ. ಜಾತಿ ವ್ಯವಸ್ಥೆ ಎಂದರೇನು ಎನ್ನುವುದು ನನಗೆ ಗೊತ್ತಾದದ್ದು ಆಗಲೇ.
ಅಂಬೇಡ್ಕರ್ ಜೊತೆ ಅಪ್ಪಾಜಿ ಅವತ್ತು ಬಸವಣ್ಣನವರನ್ನೂ ಪರಿಚಯಿಸಿದ್ದರು. ಬಹುಶಃಈ ಕಾರಣಕ್ಕೇ ಇರಬೇಕು ಇವರಿಬ್ಬರಲ್ಲಿ ಒಬ್ಬರ ಹೆಸರನ್ನು ಎಲ್ಲಿಯೇ ಓದಿದರೂ, ಕೇಳಿದರೂ, ನಾನೇ ಮಾತನಾಡಿದರೂ ಇಬ್ಬರ ಚಿತ್ರವೂ ಒಟ್ಟಿಗೇ ಕಣ್ಣೆದುರು ಮೂಡುತ್ತದೆ. ಮುಂದೆ ಬಿ.ಎ. ಓದುತ್ತಿದ್ದಾಗ ಗೆಳತಿ ಕನಕಳ ಮನೆಯಲ್ಲಿ, ಅವರ ತಂದೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಪುಸ್ತಕ ಜೀವಿಯಾಗಿದ್ದ ನನ್ನ ಬಗ್ಗೆ ಅವರಿಗೆ ಅದೇನೋ ಪ್ರೀತಿ. ಅವರ ಮನೆಯಲ್ಲಿ ಅಂಬೇಡ್ಕರ್ ಅವರ ಅನೇಕ ಪುಸ್ತಕಗಳಿದ್ದವು. ಅವುಗಳನ್ನೆಲ್ಲ ಓದುವ ಅವಕಾಶ ಸಿಕ್ಕಿತು. ಅವುಗಳಲ್ಲಿ ಹಲವನ್ನು ಅವರು ನನಗೇ ಕೊಟ್ಟರೂ ಕೂಡ. ಅಂಬೇಡ್ಕರ್ ನನ್ನ ಬುದ್ಧಿಯ ಭಾಗವಾದದ್ದು ನನ್ನ ಬಾಲ್ಯದಲ್ಲಿ ಹದಿಹರೆಯದಲ್ಲಿ. ಅವರು ನನ್ನ ಭಾವ ಕೋಶದ ಭಾಗವಾದದ್ದು ನಾನು ಸ್ತ್ರೀವಾದವನ್ನು ಗಂಭೀರವಾಗಿ ಅಭ್ಯಾಸ ಮಾಡತೊಡಗಿದಾಗ.ಅಂಬೇಡ್ಕರ್ ಮತ್ತು ಗಾಂಧಿ ಹೆಣ್ಣುಮಕ್ಕಳ ಹೋರಾಟದ ನೈತಿಕ ಶಕ್ತಿ ಎನ್ನುವುದು ಅರಿವಾದದ್ದು ಆಗ. ದೇಶವೊಂದರ ಅಭಿವೃದ್ಧಿಯ ಮಟ್ಟವನ್ನು ಅಳೆಯಬೇಕಾದ ಮಾನದಂಡಗಳಲ್ಲಿ ಅಲ್ಲಿನ ಮಹಿಳೆಯರ ಸ್ಥಿತಿಗತಿಯೂ ಒಂದಾಗಬೇಕು ಎಂದು ಹೇಳಿದ ಅಂಬೇಡ್ಕರ್ ಅವರನ್ನು ಕುರಿತು ಎಳೆಯ ವಯಸ್ಸಿನಲ್ಲಿ ಕೇಳಿದ ಅಧ್ಯಾಪಕ ರಂತೆಯೇ ನಾನೂ ಭಾವುಕಳಾಗಿ ಮಾತನಾಡುತ್ತೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್ ಉರಿ ಯುವ ಬೌದ್ಧಿಕತೆ ಮತ್ತು ಜಿನುಗುವ ಅಂತಃಕರಣದಲ್ಲಿ ಮನುಷ್ಯರನ್ನು ಅಪ್ಪಿಕೊಂಡರು ಎನ್ನುವುದಕ್ಕಾಗಿ.
ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ…
ಬೆಂಗಳೂರು: ಜಮ್ಮುಕಾಶ್ಮೀರದ ಪುಹಲ್ಗಾಮ್‍ನ ಪ್ರಕೃತಿ ಸೌಂದರ್ಯವನ್ನು ಸವಿಯಲು ತೆರಳಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾದ ಇಬ್ಬರು ಕನ್ನಡಿಗರ ಅಂತ್ಯಕ್ರಿಯೆ ಗುರುವಾರ…
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ವಿವರಗಳ…
ಬಿಹಾರ: ಭಾರತದ ಮೇಲೆ ದಾಳಿ ನಡೆಸಿರುವ ಪ್ರತಿಯೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಮಣ್ಣಿನಲ್ಲಿ ಹೂತು ಹಾಕುತ್ತೇವೆ. ಕಲ್ಪನೆಗೂ ಮೀರಿದ…
ಯುವ ರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಬುಧವಾರ (ಏಪ್ರಿಲ್ 23) ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಎಕ್ಕ’ದ ಟೀಸರ್…
ಅಜೇಯ್ ರಾವ್ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರದ ಗಳಿಕೆ ಕುಸಿದಿದೆ. ಮೊದಲ ಮೂರು ದಿನ ಒಳ್ಳೆಯ ಪ್ರದರ್ಶನ ಕಂಡ…