ವರ್ಚ್ಯೂವಲ್ ಜಗತ್ತಿನ ಹೀನ ವಿಕೃತಿ ’ಬುಲ್ಲಿ ಬಾಯ್’

– ರೇವಣ್ಣ ಎ.ಜೆ.

 

’ಬುಲ್ಲಿ ಬಾಯ್’ ಎಂಬ ಅಪ್ಲಿಕೇಷನ್ ಸೃಷ್ಟಿಸಿ ಪ್ರಖ್ಯಾತ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ ’ಹರಾಜಿಗಿದ್ದಾರೆ’ ಎಂದು ಕೆಟ್ಟದ್ದಾಗಿ ಬರೆಯಲಾಯಿತು. ಟ್ವಿಟರ್ ಖಾತೆಗಳ ಮೂಲಕ ಪೋಸ್ಟ್ ಮಾಡಲಾಯಿತು. ಕೆಟ್ಟದ್ದಾಗಿ ಬಿಂಬಿಸಲಾಯಿತು. ವರ್ಚ್ಯೂವಲ್ ಜಗತ್ತಿನ ಈ ವಿಕೃತಿಯನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿರುವುದು ಆಶಾದಾಯಕ ಬೆಳವಣಿಗೆ.

 

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಕೇಂದ್ರಿತ ಜಗತ್ತು ಸೃಷ್ಟಿಸುತ್ತಿರುವ ದ್ವೇಷವನ್ನು ನೆನೆದರೆ ಆತಂಕವಾಗುತ್ತದೆ. ಅನಾಮಧೇಯ ಹೆಸರುಗಳ ಫೇಸ್ ಬುಕ್, ಟ್ವಿಟರ್ ಖಾತೆಗಳ ಮೂಲಕ ಅಶ್ಲೀಲವಾಗಿ ಮಾತನಾಡುವುದು, ದಲಿತ, ಅಲ್ಪಸಂಖ್ಯಾತ ಸಮುದಾಯವನ್ನು ಅತಿರೇಕವಾಗಿ ನಿಂದಿಸುವುದು ನಡೆಯುತ್ತಿದೆ. ಇಂತಹ ಬೆಳವಣಿಗೆಗಳನ್ನು ಬಹಳ ಗಂಭೀರವಾಗಿ ನೋಡುತ್ತಿರುವ ರಾಜಕೀಯ ವಿಶ್ಲೇಷಕರು, ಅಪರಾಧ ಜಗತ್ತಿನ ವರದಿಗಾರರು, ’ಭಾರತ ನರಹತ್ಯೆ’ಯತ್ತ ಧಾವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಇತ್ತೀಚಿನ ಉದಾಹರಣೆ ’ಬುಲ್ಲಿ ಬಾಯ್’ ಎಂಬ ಅಪ್ಲಿಕೇಷನ್ ಸೃಷ್ಟಿಸಿದ ವಿಕೃತಿ.

 

 

ಕಳೆದ ವರ್ಷವೂ ಇಂತಹದ್ದೇ ವಿಕೃತಿಯನ್ನು ಮೆರೆಯಲಾಗಿತ್ತು. ಪ್ರಖ್ಯಾತ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ’ಸುಲ್ಲಿ ಡೀಲ್ಸ್’ ಎಂಬ ಆಪ್ ನಲ್ಲಿ ಹರಾಜಿಗಿಡಲಾಗಿತ್ತು. ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಲಿಲ್ಲ. ಅದರ ಮುಂದುವರಿದ ಭಾಗವಾಗಿ ಈ ವರ್ಷಾರಂಭದಲ್ಲೇ ದೇಶ ಆಘಾತ ಎದುರಿಸಬೇಕಾಯಿತು. ’ಬುಲ್ಲಿ ಬಾಯ್’ ಎಂಬ ಅಪ್ಲಿಕೇಷನ್ ಸೃಷ್ಟಿಸಿ ಪ್ರಖ್ಯಾತ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ ’ಹರಾಜಿಗಿದ್ದಾರೆ’ ಎಂದು ಕೆಟ್ಟದ್ದಾಗಿ ಬರೆಯಲಾಯಿತು. ಟ್ವಿಟರ್ ಖಾತೆಗಳ ಮೂಲಕ ಪೋಸ್ಟ್ ಮಾಡಲಾಯಿತು. ಕೆಟ್ಟದ್ದಾಗಿ ಬಿಂಬಿಸಲಾಯಿತು. ವರ್ಚ್ಯೂವಲ್ ಜಗತ್ತಿನ ಈ ವಿಕೃತಿಯನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ಕೆಲವರನ್ನು ಬಂಧಿಸಿರುವುದು ಆಶಾದಾಯಕ ಬೆಳವಣಿಗೆ.

 

ಇಂತಹ ವಿಕೃತಿಯಲ್ಲಿ ಭಾಗಿಯಾದ ಯುವಜನರ ವಯಸ್ಸನ್ನು ನೋಡಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಏಳದೆ ಇರದು. ೧೮ರಿಂದ ೨೫ ವಯಸ್ಸಿನೊಳಗಿನ ಈ ಯುವಜನರಲ್ಲಿ ಈ ಮಟ್ಟಿಗಿನ ಕ್ರೌರ್ಯ ಮನೆಮಾಡಿದ್ದು ಹೇಗೆ?

ಬುಲ್ಲಿ ಬಾಯ್ ಪ್ರಕರಣ ಹೊರಬಿದ್ದ ಮೇಲೆ ಹಿಂದುತ್ವ ಪ್ರೇರಿತ ಬಲ ಪಂಥೀಯ ರಾಜಕಾರಣದ ಮತ್ತೊಂದು ಆಯಾಮದ ಕುರಿತು ’ದಿ ವೈರ್’, ’ನ್ಯೂಸ್ ಲಾಂಡ್ರಿ’ ಥರದ ಪರ್ಯಾಯ ಮಾಧ್ಯಮಗಳು ಲೇಖನಗಳನ್ನು ಪ್ರಕಟಿಸಿವೆ. ಬಲಪಂಥೀಯರ ರಾಜಕಾರಣದಲ್ಲಿ ಎರಡು ಥರದ ಗುಂಪುಗಳು ಇರುವುದನ್ನು ಲೇಖನಗಳು ಬಯಲಿಗೆಳೆದಿವೆ. ತೀವ್ರವಾದ ಹಿಂದುತ್ವ ಹಾಗೂ ಅಧಿಕಾರ ರಾಜಕಾರಣದ ಜೊತೆಗಿನ ಹಿಂದುತ್ವಗಳೆಂಬ ಎರಡು ಬಣಗಳ ಕುರಿತು ಚರ್ಚಿಸಲಾಗಿದೆ.

 

’ಟ್ರ್ಯಾಡ್ಸ್ ಮತ್ತು ರಾಯ್ತಾಸ್’ಗಳೆಂಬ ಎರಡು ಗುಂಪುಗಳಿವೆ. ಅದರಲ್ಲಿ ಟ್ರ್ಯಾಡ್ಸ್ ಗುಂಪು ’ರಾಯ್ತಾಸ್’ ಗುಂಪಿನ ಜೊತೆಗೆ ವಿರೋಧ ಹೊಂದಿದೆ. ರಾಯ್ತಾಸ್ಗಳು ಬಿಜೆಪಿ, ಆರ್ ಎಸ್ ಎಸ್ ಜೊತೆಗೆ ಗುರುತಿಸಿಕೊಂಡಿದ್ದು ಅಧಿಕಾರ ರಾಜಕಾರಣದೊಂದಿಗೆ ಅಸ್ತಿತ್ವದಲ್ಲಿದ್ದಾರೆ. ಆದರೆ ಟ್ರಾಡ್ಸ್ ಗಳಿಗೆ ರಾಯ್ತಾಸ್ ಗಳನ್ನು ಕಂಡರೆ ಆಗದು.

 

ರಾಯ್ತಾಸ್ ಗಳು ಸಾವರ್ಕರ್ ಸಿದ್ಧಾಂತವನ್ನು ಒಪುತ್ಪೃತ್ತಾರೆ. ಆದರೆ ಟ್ರ್ಯಾಡ್ಸ್ ಸಾವರ್ಕರ್ ವಿಚಾರಗಳನ್ನು ಒಪುತ್ಪೃವುದಿಲ್ಲ. ಟ್ರ್ಯಾಡ್ಸ್ ಗಳು ಶಂಕರಾಚಾರ್ಯ ಹಾಗೂ ಸ್ಮಾರ್ತ ಬ್ರಾಹಣ ಸಿದ್ಧಾಂತವನ್ನು ಒಪುತ್ಪೃತ್ತಾರೆ. ಟ್ರ್ಯಾಡ್ಸ್ – ಜಾತಿ ವ್ಯವಸ್ಥೆ, ಅಸ್ಪ್ತ್ಯೃಶ್ಯತೆ ಜೀವಂತವಾಗಿರಬೇಕು ಎಂದು ನಂಬುತ್ತಾರೆ. ಟ್ರ್ಯಾಡ್ಸ್ ತನ್ನೊಂದಿಗೆ ವಿರೋಧ ಹೊಂದಿದವರನ್ನೆಲ್ಲ ವೈರಿಗಳೆಂದು ಬಗೆಯುತ್ತದೆ. ಇವರನ್ನು ವಿರೋಧಿಸಿದವರ ಮೇಲೆ ಮುಗಿ ಬೀಳುತ್ತಾರೆ. ಹಿಂದೂಯೇತರ ಮತಗಳಷ್ಟೇ ಟ್ರ್ಯಾಡ್ಸ್ ಕ್ಕೆ ಅಪಥ್ಯವಲ್ಲ. ದಲಿತರೂ ಕೂಡ ಅವರಿಗಾಗದು. ರಾಯ್ತಾಸ್ ದಲಿತರ ವಿರುದ್ದ ಮಾತನಾಡುವುದಿಲ್ಲ. ಆದರೆ ಹಿಂದೂಯೇತರ ಮತಗಳ ಜೊತೆಗೆ ವಿರೋಧವನ್ನು ರಾಯ್ತಾಸ್ ಹೊಂದಿದೆ. ಇದು ಟ್ರ್ಯಾಡ್ ಹಾಗೂ ರಾಯ್ತಾಸ್ ನಡುವಿನ ವ್ಯತ್ಯಾಸಗಳೆಂದು ತಜ್ಞರು ಗುರುತಿಸುವುದನ್ನು ಪರ್ಯಾಯ ಮಾಧ್ಯಮಗಳು ಚರ್ಚಿಸಿವೆ.

ತನಗಾಗದವರ ವಿರುದ್ಧ ದ್ವೇಷಕಾರುವ ಟ್ರ್ಯಾಡ್ ಬಣದವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ ಎಂಬುದನ್ನು ಮೂಲಗಳು ವಿವರಿಸುತ್ತವೆ. ಟ್ರ್ಯಾಡ್ಸ್ ಬಣದವರು ನಕಲಿ ಟ್ವಿಟರ್ ಖಾತೆಗಳನ್ನು ರಚಿಸಿ, ಕಮ್ಯನಿಟಿ ಸ್ಟ್ಯಾಂಡರ್ಡ್ ಮೀರಿ ವರ್ತಿಸಿದಾಗ ರದ್ದಾಗಿದ್ದ ಹಲವು ಉದಾಹರಣೆಗಳಿವೆ. ಆದರೆ ಒಂದು ಖಾತೆ ರದ್ದಾದಾಗ ಮತ್ತೊಂದು ನಕಲಿ ಖಾತೆಯನ್ನು ಸೃಷ್ಟಿಸಿ ಟ್ರ್ಯಾಡ್ಸ್ ದ್ವೇಷ ಹರಡಲು ಆರಂಭಿಸುತ್ತಾರೆ. ಹೀಗೆ ಹೊಸ ಹೆಸರಲ್ಲಿ ಟ್ವಿಟರ್ ಖಾತೆ ತೆರೆದಾಗ ಒಂದೇ ಗಂಟೆಯೊಳಗೆ ಒಂದು ಲಕ್ಷ ಫಾಲೋಯರ್ಸ್ ಗಳು ಈ ಟ್ರ್ಯಾಡ್ಸ್ ಖಾತೆಗಳಿಗೆ ಸೃಷ್ಟಿಯಾಗುತ್ತಿರುವುದು – ಟ್ರ್ಯಾಡ್ಸ್ ಬಣದ ಬೆಳವಣಿಗೆಯ ವೇಗವನ್ನು ಸೂಚಿಸುತ್ತದೆ. ಮಾಜಿ ವಿದೇಶಾಂಗ ಸಚಿವೆಯ ಪತಿಯನ್ನು ಕೆಟ್ಟದ್ದಾಗಿ ಟ್ರೋಲ್ ಮಾಡಿದ್ದು, ಪೊಲೀಸ್ ಅಧಿಕಾರಿ ಡಿ.ರೂಪಾ ಅವರನ್ನು ಟ್ರೋಲ್ ಮಾಡಿದ್ದು ಇದೇ ಟ್ರ್ಯಾಡ್ಸ್ ಖಾತೆಗಳು ಎಂದು ಹೆಸರು ಹೇಳಲಿಚ್ಚಿಸದ ಮೂಲಗಳು ನ್ಯೂಸ್ ಲಾಂಡ್ರಿಗೆ ಮಾಹಿತಿ ನೀಡಿವೆ.

 

ಹಿಂದೂ ಬಲಪಂಥೀಯರಲ್ಲಿನ ಟ್ರ್ಯಾಡ್ಸ್ ಗಳಾಗಲಿ, ರಾಯ್ತಾಸ್ ಗಳಾಗಲಿ- ಇದೇ ರೀತಿ ಮುಸ್ಲಿ ಮೂಲಭೂತವಾದವನ್ನು ಪ್ರತಿಪಾದಿಸುವ ಪಿಎಫ್ ಐ ಸಂಘಟನೆಯಾಗಲೀ ದೇಶಕ್ಕೆ ಅಪಾಯಕಾರಿ. ಇಂತಹ ಅತಿರೇಕಗಳಿಗೆ ಪ್ರಭುತ್ವದ ರಕ್ಷೆಯೂ ಸಿಗುತ್ತಿರುವುದರಿಂದ ಇವರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇವುಗಳ ವಿರುದ್ಧ ಪ್ರಜಾಪ್ರಭುತ್ವದ, ಸಂವಿಧಾನದ ಆಶಯಗಳಲ್ಲಿ ನಂಬಿಕೆ ಉಳ್ಳವರೆಲ್ಲ ಪಕ್ಷಾತೀತವಾಗಿ ದನಿ ಎತ್ತಬೇಕಿದೆ. ಭಾರತ ’ಜ್ಯುನಸೈಡ್’ (ನರಹತ್ಯೆ) ಹಾದಿ ಹಿಡಿಯದಂತೆ ತಡೆಯಬೇಕಿದೆ. ಸಂವಿಧಾನವನ್ನು ನಾವು ಉಳಿಸಿದರೆ, ಅದು ನಮ್ಮನ್ನು ಉಳಿಸಲಿದೆ.

× Chat with us