ಅದೇ ಸುದ್ದಿ. ಎಲ್ಲರ ಗಮನವೂ ಅತ್ತಲೇ. ಬಿಡದಿಯತ್ತ. ಅಲ್ಲಿ ಬಿಗ್‌ಬಾಸ್ ಮನೆಗೆ ಬೀಗ ಹಾಕಿದ ಪುಕಾರು. ಬೀಗ ಹಾಕಿದ್ದು ಎಲ್ಲಿಗೆ? ಏಕೆ? ಬಿಗ್‌ಬಾಸ್ ಮನೆಗೆ ಬೀಗ ಹಾಕಿದರೇ? ಇವುಗಳ ಸುತ್ತ ಪುಂಖಾನುಪುಂಖ ಲೆಕ್ಕಾಚಾರ. ಅದಕ್ಕೆ ತರಹೇವಾರಿ ವಿಮರ್ಶೆ. ಪ್ರತಿಕ್ರಿಯೆ. ಅಲ್ಲೂ ರಾಜಕೀಯ. ಬರೀ ರಾಜಕೀಯ ಅಲ್ಲ. ಜಾತಿ ಲೆಕ್ಕಾಚಾರ. ಮನರಂಜನೋದ್ಯಮಕ್ಕೂ ತಟ್ಟಿದ ಜಾತಿ ರಾಜಕೀಯದ ಸೋಂಕು.
ಬಿಡದಿಯಲ್ಲಿ ಇನೊವೇಟಿವ್ ಫಿಲಂ ಸಿಟಿ ಇತ್ತು. ಚಿತ್ರನಗರಿಯ ಹೆಸರು ಮಾತ್ರ. ವಾರಾಂತ್ಯ ಪ್ರವಾಸಿಗರ ಮನರಂಜನಾ ಕೇಂದ್ರ. ಆಗೊಮ್ಮೆ ಈಗೊಮ್ಮೆ ಚಿತ್ರೀಕರಣವೂ ನಡೆಯುತ್ತಿತ್ತು. ಅದರ ಮುಖ್ಯಸ್ಥ ಶರವಣ ಪ್ರಸಾದ್. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಇನೊವೇಟಿವ್ ಮಲ್ಟಿಪ್ಲೆಕ್ಸ್ ಮೂಲಕ ಅವರು ಚಿತ್ರೋದ್ಯಮಕ್ಕೆ ಕಾಲಿಟ್ಟವರು. ಬಿಡದಿಯಲ್ಲಿ ಈ ಚಿತ್ರನಗರಿಯನ್ನು ಕೆಲಕಾಲ ನಡೆಸಿದರು. ಅಲ್ಲೇ ಇನೊವೇಟಿವ್ ಫಿಲಂ ಅಕಾಡೆಮಿಯನ್ನು ಸ್ಥಾಪಿಸಿ, ಸಿನಿಮಾ ತರಬೇತಿಗೂ ಕೈಯಿಟ್ಟರು. ಬೆಂಗಳೂರು ವಿವಿ ಅಲ್ಲಿನ ತರಬೇತಿಗೆ ಮಾನ್ಯತೆ ನೀಡಿತ್ತು.
ಅವರದ್ದೇ ಆದ ಚಿತ್ರೋತ್ಸವವನ್ನೂ ಆರಂಭಿಸಿದರು. ಬಹಳಷ್ಟು ಮಂದಿ ಅದನ್ನು ತಪ್ಪಾಗಿ ತಿಳಿದದ್ದೂ ಇದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಮುಖ್ಯಸ್ಥರಿಗೆ ಅಲ್ಲಿನ ಅವ್ಯವಸ್ಥೆಯ ಕುರಿತ ದೂರು ಬಂದದ್ದೂ ಇದೆ. ಸುಮಾರು ೪೦ ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿತ್ತು ಫಿಲಂ ಸಿಟಿ.
ಬಿಗ್‌ಬಾಸ್ ಕನ್ನಡದಲ್ಲಿ ಆರಂಭವಾಯಿತು. ಸುದೀಪ್ ನಿರೂಪಣೆ. ಮೊದಲು ಅದರ ಚಿತ್ರೀಕರಣ ನಡೆದ ಸ್ಥಳ ಲೋನಾವಾಲ. ಹಿಂದಿಯ ಬಿಗ್‌ಬಾಸ್ ನಡೆಯುತ್ತಿದ್ದ ಜಾಗ. ಅದಾದ ನಂತರ ಬೆಂಗಳೂರಿನಲ್ಲೇ ನಡೆಸುವ ನಿರ್ಧಾರ. ಇನೊವೇಟಿವ್ ಫಿಲಂ ಸಿಟಿಯಲ್ಲಿ. ಕೆಲವು ವರ್ಷಗಳಿಗೆ ಒಪ್ಪಂದ ಆಗಿತ್ತು. ಐದು ಎಕರೆ ಜಾಗವನ್ನು ಅದು ಪಡೆದಿತ್ತು ಎನ್ನುತ್ತಿವೆ ಮೂಲಗಳು. ಎರಡು ಮೂರು ಆವೃತ್ತಿಗಳು ಅಲ್ಲಿ ಆದವು. ಹಾಕಿದ್ದ ಸೆಟ್ಟನ್ನು ಕೊಂಚ ಬದಲಾಯಿಸಿ ಮುಂದಿನ ಆವೃತ್ತಿ ನಡೆಸಲಾಗುತ್ತಿತ್ತು. ಆದರೆ ಒಮ್ಮೆ ಅದಕ್ಕೆ ಬೆಂಕಿ ಬಿತ್ತು. ಬೆಂಕಿ ಬಿತ್ತೋ ಇನ್ನೇನೋ ಗೊತ್ತಿಲ್ಲ. ಸಂಬಂಧಪಟ್ಟವರು ಮೌನಿಗಳಾದರು. ಮೌನ ಬಹಳಷ್ಟು ಹೇಳಿತ್ತು.
ಇದನ್ನು ಓದಿ : ಬಿಗ್‌ಬಾಸ್‌ಗೆ ಅನುಮತಿ ; ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಬಿಗ್‌ಬಾಸ್, ಮುಂದೆ ಅಲ್ಲಿಂದ ದೊಡ್ಡ ಆಲದ ಮರದ ಬಳಿಯಲ್ಲಿ ಹಾಕಿದ ಸೆಟ್ಟಲ್ಲಿ ನಡೆಯಿತು. ಅಲ್ಲಿ ಕೂಡಾ ಸ್ಥಳೀಯರ ವಿರೋಧ ಇತ್ತು ಎನ್ನಲಾಗಿತ್ತು. ಈ ಬಾರಿ ಮತ್ತೆ ಇನೋವೇಟಿವ್ ಫಿಲಂ ಸಿಟಿಯಲ್ಲಿ. ಆದರೆ ಈ ಬಾರಿ ಅದು ಇನೋವೇಟಿವ್ ಆಗಿರಲಿಲ್ಲ. ಜಾಲಿವುಡ್ ಆಗಿತ್ತು. ವೆಲ್ಸ್ ಜಾಲಿವುಡ್. ಸಿನಿಮಾ ನಿರ್ಮಾಣ, ಶಿಕ್ಷಣ ಕ್ಷೇತ್ರ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ವೆಲ್ಸ್ ಸಂಸ್ಥೆಗಳ ಸಮೂಹಕ್ಕೆ ಇದು ಸೇರಿತ್ತು.
ಇನೊವೇಟಿವ್ ಫಿಲಂ ಸಿಟಿಯ ಮೇಲೆ ರಾಜ್ಯ ಹಣಕಾಸು ನಿಗಮ ತನಗೆ ಬರಬೇಕಾದ ಬಾಕಿಗಾಗಿ ಕಾನೂನು ಮೊರೆ ಹೋಗುತ್ತದೆ. ಅದು ದಿವಾಳಿ ಆಗಿದೆ ಎಂದು ಹೇಳಿ ಉಳಿದಂತೆ ಕಾನೂನು ಕ್ರಮ ಕೈಗೊಂಡು ಬಾಕಿ ವಸೂಲಿಗೆ ವ್ಯವಸ್ಥೆ ಆಗುತ್ತದೆ. ಫಿಲಂ ಸಿಟಿಯ ಪ್ರತಿಷ್ಠೆ ಉಳಿಸಿ, ಬೆಳೆಸಲು ಸಾಧ್ಯ ಆಗುವ ಹಾಗೆ ಬೇರೆ ಆಸಕ್ತರನ್ನು ಹುಡುಕಲಾಗುತ್ತದೆ. ಇನೊವೇಟಿವ್ ಫಿಲಂ ಸಿಟಿಯ ಮುಖ್ಯಸ್ಥರೂ ನಿರ್ದೇಶಕರಾಗಿದ್ದ ವೆಲ್ಸ್ ಸಂಸ್ಥೆಯ ಬಳಗ ಇದನ್ನು ತನ್ನದಾಗಿಸಿಕೊಳ್ಳುತ್ತದೆ. ನಿಯಮಗಳ ಪ್ರಕಾರವೇ ಎನ್ನಿ! ಇನೊವೇಟಿವ್ ಫಿಲಂ ಸಿಟಿ ಬದಲಾಗಿ ವೆಲ್ಸ್ ಜಾಲಿವುಡ್ ಆಯಿತು.
ಅದನ್ನು ಉದ್ಘಾಟಿಸಿದವರು ಡಿ.ಕೆ.ಶಿವಕುಮಾರ್ ಅವರು. ಚಿತ್ರೀಕರಣ ಅಲ್ಲಿ ಅಪರೂಪ. ಮನರಂಜನಾ ಕೇಂದ್ರವದು. ಸಾಹಸ ಕ್ರೀಡೆಗಳೂ ಇವೆ. ನೀರಾಟಗಳಿವೆ. ಹತ್ತು ಹಲವು ಇತರ ದೈಹಿಕ, ಬೌದ್ಧಿಕ ಕಸರತ್ತುಗಳ ಆಟಗಳು. ಸಿನಿಮಾ ಕೇಂದ್ರಿತ ಥೀಮ್ ಪಾರ್ಕ್ ಇದು ಎಂದು ಸಂಸ್ಥೆಯೇ ಹೇಳಿಕೆ. ಹೊಸ ಆಡಳಿತ ವರ್ಗದ ಜೊತೆ ಬಿಗ್‌ಬಾಸ್ ನಡೆಸುವ ಸಂಸ್ಥೆ ಒಪ್ಪಂದ ಮಾಡಿಕೊಂಡು ಈ ರಿಯಾಲಿಟಿ ಪ್ರದರ್ಶನ ಆರಂಭಿಸುತ್ತದೆ. ಆದರೆ ಜಾಲಿವುಡ್ ಸಂಸ್ಥೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ನಿಯಮದ ಪ್ರಕಾರ ನೋಟೀಸ್‌ಗಳನ್ನು ನೀಡಿದ ನಂತರ ಅದನ್ನು ಜಪ್ತಿ ಮಾಡಲು ಸ್ಥಳೀಯ ಜಿಲ್ಲಾಧಿಕಾರಿಗಳು ಆದೇಶ ನೀಡುತ್ತಾರೆ. ಅದರಂತೆ ಮೊನ್ನೆ ಜಾಲಿವುಡ್‌ಗೆ ಬೀಗ ಹಾಕಲಾಗುತ್ತದೆ. ಅಲ್ಲಿ ನಡೆಯುತ್ತಿದ್ದ ಬಿಗ್‌ಬಾಸ್ ಕಾರ್ಯಕ್ರಮದ ಒಳಗಿದ್ದ, ಹೊರಗಿದ್ದ ಮಂದಿ ಕೂಡಾ ಜಾಗ ಖಾಲಿ ಮಾಡಬೇಕಾಗುತ್ತದೆ.
ಆಗಲೇ ಈ ಎಲ್ಲ ಬೆಳವಣಿಗೆ. ಅವರವರ ಭಾವಕ್ಕೆ ತಕ್ಕಂತೆ ಪ್ರತಿಕ್ರಿಯೆ. ರಾಜಕೀಯದ ಒಳಹೊರಗುಗಳ ಅನಾವರಣ. ಭಾಗಶಃ ರಾಜಕಾರಣ ಎಂದರೆ ಅದೇ ಇರಬೇಕು! ಸುದೀಪ್ ಮೇಲಿನ ಕೋಪಕ್ಕೆ ಈ ಕೆಲಸ ಮಾಡಿದ್ದಾರೆ ಎಂದು ಒಬ್ಬರ ಆರೋಪ. ಅದಕ್ಕೆ ಪೂರಕ ಕಾರಣವೂ ಅವರಲ್ಲಿತ್ತು. ೧೬ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯ ದಿನ ಉಪಮುಖ್ಯಮಂತ್ರಿಗಳಾಡಿದ್ದ ಮಾತು.
ಚಿತ್ರರಂಗದ ಗಣ್ಯರು, ವಿಶೇಷವಾಗಿ ಪ್ರಮುಖ ನಟನಟಿಯರು ಅಂದು ಬಂದಿರಲಿಲ್ಲ. ಸಹಜವಾಗಿಯೇ ಇದು ಡಿಕೆಶಿ ಅವರನ್ನು ಕೆಣಕಿದ್ದಿರಬೇಕು. ‘ಚಿತ್ರೋದ್ಯಮದಲ್ಲಿ ಬೋಲ್ಟು ನಟ್ಟು ಎಲ್ಲಿ ಹೇಗೆ ಟೈಟು ಮಾಡಬೇಕು ಅಂತ ನನಗೆ ಗೊತ್ತು’ ಎಂದು ತಮ್ಮ ಭಾಷಣದ ವೇಳೆ ಹೇಳಿದರು. ಈ ಮಾತು ಉದ್ಯಮದ ಮಂದಿ ಹಾಗೂ ಸಾಮಾಜಿಕ ವಲಯದಲ್ಲಿ ಸಾಕಷ್ಟು ಪರ, ವಿರುದ್ಧ ಪ್ರತಿಕ್ರಿಯೆಗೆ ದಾರಿ ಮಾಡಿಕೊಟ್ಟಿತ್ತು.
ಸುದೀಪ್ ಅವರು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಕೊನೆಯ ಕ್ಷಣದಲ್ಲಿ ಮುದ್ರಣವಾಗಿತ್ತು. ಹಿಂದಿನ ದಿನ ಬಹಳಷ್ಟು ಮಂದಿಗೆ ಆಹ್ವಾನ ತಲಪಿತ್ತು. ಇದನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ಸಂಬಂಧಪಟ್ಟವರು ತಂದಿದ್ದರೋ ಇಲ್ಲವೋ ಗೊತ್ತಿಲ್ಲ. ಇರಲಿ, ಬಿಗ್‌ಬಾಸ್ ನಿಲ್ಲಿಸಲು ಇದು ಕಾರಣ ಎಂದು ಒಬ್ಬರ ಮಾತು.
ಇನ್ನೊಬ್ಬರೋ, ಸುದೀಪ್ ಅವರ ಜಾತಿಯನ್ನು ಎತ್ತಿಕೊಂಡರು. ರಾಜ್ಯ ಸರ್ಕಾರ ಹಿಂದುಳಿದ ಜಾತಿ, ಜನಾಂಗವನ್ನು ಕಡೆಗಣಿಸುತ್ತದೆ, ಎಂದು ಇತರ ಒಂದೆರಡು ಪ್ರಕರಣಗಳೊಂದಿಗೆ ಇದನ್ನೂ ಸೇರಿಸಿದರು, ಮತ್ತೊಬ್ಬರು. ಮನರಂಜನೋದ್ಯಮದಲ್ಲಿ ಸಾಮಾನ್ಯವಾಗಿ ಜಾತಿಯ ಪ್ರಸ್ತಾಪ ಬರುವುದು ಕಡಿಮೆ. ಆದರೆ ಇಂತಹ ಹೇಳಿಕೆ ಅದಕ್ಕೆ ದಾರಿ ಮಾಡಿಕೊಟ್ಟರೆ ಆಶ್ಚರ್ಯವಿಲ್ಲ. ಅಷ್ಟಕ್ಕೂ ಬಿಗ್‌ಬಾಸ್ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಂದಿರಲಿಲ್ಲ. ಅದೇನಿದ್ದರೂ ಜಾಲಿವುಡ್ ಸ್ಟುಡಿಯೊ ವಿರುದ್ಧ. ಆದರೆ ರಾಜಕಾರಣಿಗಳು ಬಿಗ್‌ಬಾಸ್‌ಗೂ, ಜಾಲಿವುಡ್‌ಗೂ ಅಂತರ ಕಾಣಲಿಲ್ಲ! ಅದೇ ಇದು, ಇದೇ ಅದು ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದರು.
ಇದನ್ನು ಓದಿ : ಡಿಕೆಶಿ ಆದೇಶದ ಬೆನ್ನಲ್ಲೇ ಮಧ್ಯರಾತ್ರಿಯೇ ಬಿಗ್‌ಬಾಸ್ ಮನೆ ರೀ ಓಪನ್
ಚೋದ್ಯ ಎಂದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸರ್ಕಾರದ ವಿರುದ್ಧ ಎಲ್ಲರ ತೋರು ಬೆರಳು ಇತ್ತು. ಈ ನಡುವೆ, ಬಿಗ್‌ಬಾಸ್ಗೆ ತೊಂದರೆ ಆಗದಂತೆ ಡಿಕೆಶಿ ಅವರೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಅವಕಾಶ ನೀಡುವಂತೆ ಕೋರಿದ್ದಾರೆ. ಬುಧವಾರ ಬಿಗ್‌ಬಾಸ್ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಜಾಲಿವುಡ್ ಸಂಸ್ಥೆ ಕೂಡ ಒಂದು ವಾರದಲ್ಲಿ ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಅವಕಾಶ ಕೇಳಿದೆ. ಮತ್ತೆ ಬಿಗ್‌ಬಾಸ್ ಅದರ ಪಾಡಿಗೆ ನಡೆಯುವ ಎಲ್ಲ ಸೂಚನೆಗಳೂ ಇವೆ.
ಸರ್ಕಾರದ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಾಗ ಅದಕ್ಕೊಂದು ರಾಜಕೀಯ ಬಣ್ಣ ಬಳಿಯುವ ಕೆಲಸ ಸದಾ ನಡೆಯುತ್ತಿರುತ್ತದೆ. ಅದು ಆಡಳಿತದ ವಿರುದ್ಧ ಪಕ್ಷಗಳ ಕತ್ತಿ ಮಸೆಯುವ ಪ್ರಕ್ರಿಯೆ. ವಿರೋಧ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮುಖ್ಯ. ವಿರೋಧವೂ ಅಷ್ಟೇ ಮುಖ್ಯ. ಆದರೆ ವಿರೋಧ ಮಾಡುವಾಗಲೂ ಅದು ವಿರೋಧಕ್ಕಾಗಿ ವಿರೋಧ ಆಗಬಾರದಲ್ಲ.
ಬಿಗ್‌ಬಾಸ್ ಮೇಲೆ ಗಮನ ಹರಿಸುವ ಬದಲು, ಕಾನೂನು, ನಿಯಮಗಳ ಕಣ್ಣಿಗೆ ಮಣ್ಣೆರಚುವ ಸಂಸ್ಥೆಗಳ ಮೇಲೆ ಕಣ್ಣಿಡುವ ಕೆಲಸ ಆದರೆ ಹೆಚ್ಚು ಸರಿ. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋ ವಿಷಯದಲ್ಲೂ ಹಾಗೇ ಆಯಿತು. ಸ್ಟುಡಿಯೋಕ್ಕೆಂದು ಕೊಟ್ಟ ಜಾಗವನ್ನು ತಮ್ಮ ಅಪ್ಪನ ಆಸ್ತಿ ಎಂದು ಬಾಲಣ್ಣನ ಮಕ್ಕಳು ಹೇಳಿದ್ದು, ನಂತರದ ಬೆಳವಣಿಗೆ, ವಿಷ್ಣುವರ್ಧನ್ ಪುಣ್ಯ ಭೂಮಿಯ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿತ್ತು. ಷರತ್ತುಗಳನ್ನು ಮೀರಿದರೆ ಆ ಜಾಗವನ್ನು ಮುಟ್ಟುಗೋಲು ಹಾಕುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು. ಈ ಹಿಂದೆ ಮುಟ್ಟುಗೋಲು ಹಾಕಲು ಹೋದಾಗ, ರಾಜಕಾರಣಿಗಳೇ ತಡೆದರು ಎನ್ನುವ ಮಾತೂ ಕೇಳಿ ಬಂದಿದೆ. ಉಳಿದೆಲ್ಲ ಕ್ಷೇತ್ರಗಳಿಗಿಂತ ತಕ್ಷಣ ಪ್ರಚಾರ ಪಡೆಯುವುದು ಮನರಂಜನಾ ಕ್ಷೇತ್ರ. ಅದರಲ್ಲೂ ಜನಪ್ರಿಯ ನಟರು, ವ್ಯಕ್ತಿಗಳು ಅಲ್ಲಿ ತೊಡಗಿಸಿಕೊಂಡರೆ, ಇನ್ನೂ ಪ್ರತಿಕ್ರಿಯೆ, ಪ್ರಚಾರ ಹೆಚ್ಚು. ಆದರೆ ಪ್ರತಿಕ್ರಿಯೆ ಹಾದಿ ತಪ್ಪಬಾರದಲ್ಲ! ಆಗಲೇ ಬೋಲ್ಟು, ನಟ್ಟು, ಟೈಟು ನೆನಪಾಗುವುದು.
” ಸರ್ಕಾರದ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಾಗ ಅದಕ್ಕೊಂದು ರಾಜಕೀಯ ಬಣ್ಣ ಬಳಿಯುವ ಕೆಲಸ ಸದಾ ನಡೆಯುತ್ತಿರುತ್ತದೆ. ಅದು ಆಡಳಿತದ ವಿರುದ್ಧ ಪಕ್ಷಗಳ ಕತ್ತಿ ಮಸೆಯುವ ಪ್ರಕ್ರಿಯೆ”
-ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…
ಎಚ್.ಡಿ.ಕೋಟೆ: ಬಸ್ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…
ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…