ಅಂಕಣಗಳು

ದೆಹಲಿ ಕಣೋಟ: ಯೋಗಿ ಸಾಮರ್ಥ್ಯದ ಮೇಲೆ ಬಿಜೆಪಿ ಅಸಮಾಧಾನ

ಶಿವಾಜಿ ಗಣೇಶನ್

ಉತ್ತರ ಪ್ರದೇಶವನ್ನು ಗೆದ್ದ ಪಕ್ಷ ದೇಶದ ಆಡಳಿತ ಸೂತ್ರವನ್ನು ಹಿಡಿಯುತ್ತದೆ ಎನ್ನುವುದು ಹಿಂದಿನಿಂದ ಹೇಳಿಕೊಂಡು ಬಂದ ರಾಜಕೀಯ ಮಂತ್ರ, ಉತ್ತರ ಪ್ರದೇಶ ಎರಡು ದಶಕಗಳ ಹಿಂದೆ ಇಬ್ಬಾಗವಾದರೂ 80 ಲೋಕಸಭೆ ಕ್ಷೇತ್ರ ಗಳನ್ನು ಉಳಿಸಿಕೊಂಡಿದೆ. ಪ್ರತ್ಯೇಕಗೊಂಡ ಉತ್ತರಾಖಂಡ ಕೇವಲ ನಾಲ್ಕು ಲೋಕಸಭೆ ಕ್ಷೇತ್ರಗಳನ್ನು ಹೊಂದಿದೆ. ಉತ್ತರ ಪ್ರದೇಶದ ರಾಜಕೀಯ ಇತಿಹಾಸವನ್ನು ನೋಡಿದರೆ ಕಾಂಗ್ರೆಸ್, ಜನತಾ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಹೇಗೆ ಹಿಂದಿ ನಿಂದಲೂ ಸ್ವಂತ ಬಲದಿಂದಲೇ ಆಡಳಿತ ನಡೆಸಿವೆ ಎನ್ನುವುದು ತಿಳಿಯುತ್ತದೆ.

2017ರಿಂದ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಕಾವಿಧಾರಿ ರಾಜಕಾರಣಿ ಯೋಗಿ ಆದಿತ್ಯನಾಥ್ 2017ರಲ್ಲಿ ಮುಖ್ಯಮಂತ್ರಿ ಆದಾಗ ಒಬ್ಬ ಸನ್ಯಾಸಿ ಹೇಗೆ ಆಡಳಿತ ಮಾಡುತ್ತಾರೆ ಎಂದು ಎಲ್ಲರೂ ಹುಬ್ಬೇ ರಿಸಿದ್ದರು. ಉತ್ತರ ಭಾರತದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದು ಳಿದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ‘ಬಿಮಾರು’ (ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ) ರೋಗಗ್ರಸ್ತ ರಾಜ್ಯಗಳೆಂದು ವಾಡಿಕೆಯ ಮಾತು. ಆದರೆ ಈಗ ಈ ನಾಲ್ಕೂ ರಾಜ್ಯಗಳ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ.

ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಉತ್ತರ ಪ್ರದೇಶ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿಯೇನೂ ಹೇಳಿಕೊಳ್ಳುವಂತಹ ಅಭಿ ವೃದ್ಧಿ ಕಂಡಿಲ್ಲ. ಬದಲಾಗಿ ಕೋಮುವಾದ ಬೆಳೆಯಲು ಹೆಚ್ಚು ಉತ್ತೇಜನ ನೀಡುತ್ತಾ ಬಂದಿದ್ದಾರೆ ಎನ್ನುವುದು ಜನಜನಿತ ಮತ್ತು ಅವರ ಕಾರ್ಯವೈಖರಿಯೇ ಇದನ್ನು ಹೇಳುತ್ತದೆ. ಯೋಗಿ ಆದಿತ್ಯನಾಥ್ ಇದುವರೆಗೂ ಒಬ್ಬ ಬಲಿಷ್ಠ ಮುಖ್ಯಮಂತ್ರಿ ಎನ್ನಲಾಗುತ್ತಿತ್ತು. ಸಮಾಜದಲ್ಲಿ ಕೆಡುಕನ್ನು ಉಂಟು ಮಾಡುವ ಮತ್ತು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅಂತಹ ಆರೋಪಿಗಳ ಮನೆಗಳನ್ನು ಬುಲ್ಲೋಜರ್ ಕಳುಹಿಸಿ ನೆಲಸಮ ಮಾಡುವ ಕಾರ್ಯತಂತ್ರ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತಿತ್ತು. ತಪ್ಪು ಮಾಡುವ ಮುಸ್ಲಿಮರ ವಿರುದ್ಧ ಅವರ ಆಡಳಿತ ಸಮರವನ್ನೇ ಸಾರುವಂತೆ ಕಠಿಣ ಕ್ರಮ ಕೈಗೊಳ್ಳುತ್ತಿತ್ತು. ಹೀಗಾಗಿ ಹಿಂದೂ ಮತ ಬ್ಯಾಂಕನ್ನು ಭದ್ರಗೊಳಿಸಿದ್ದಾರೆಂಬ ಭ್ರಮೆ ಬಿಜೆಪಿಗೆ ಇತ್ತು.ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಆದದ್ದೇ ಬೇರೆ. ಒಟ್ಟು 80 ಸ್ಥಾನಗಳ ಪೈಕಿ ಬಿಜೆಪಿ 33 ಸ್ಥಾನಗಳನ್ನು ಪಡೆಯುವ ಮೂಲಕ ಸಮಾಜವಾದಿ ಪಕ್ಷಕ್ಕಿಂತ ಹಿಂದೆ ಬಿದ್ದಿತು. ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗಳಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿರುವುದು ಈಗ ಬಿಜೆಪಿಗೆ ಸಂಕಟ ತಂದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಫಲಿತಾಂಶ ಪಡೆದಿದ್ದರ ಫಲವಾಗಿ ಕೇಂದ್ರದಲ್ಲೂ ಆ ಪಕ್ಷ ತನ್ನ ಸ್ವಂತ ಶಕ್ತಿಯ ಮೇಲೆ ಅಧಿಕಾರ ಗಳಿಸಲು ಆಗಲಿಲ್ಲ.

ರಾಜ್ಯ ವಿಧಾನಸಭೆಯ ಒಟ್ಟು 403 ಸ್ಥಾನಗಳ ಪೈಕಿ 255 ಸ್ಥಾನಗಳು ಬಿಜೆಪಿಯ ತೆಕ್ಕೆಯಲ್ಲಿದ್ದರೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರ್ಚಿ ಅಲುಗಾಡುವ ರಾಜಕಾರಣ ಈಗ ಚಿಗುರೊಡೆಯುತ್ತಿದೆ. ಉತ್ತರ ಪ್ರದೇಶದ ಕಳಪೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಕಳವಳಕ್ಕೀಡು ಮಾಡಿದೆ. ಕಳೆದ ವಾರ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಬಂದ ನಂತರ ‘ಪಕ್ಷಕ್ಕಿಂತ ಯಾರೂ ದೊಡ್ಡವರೇನಲ್ಲ’ ಎಂದು ಹೇಳಿಕೆ ನೀಡುವ ಮೂಲಕ ರಾಜ್ಯದ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿದ್ದಾರೆ.

ಒಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಈ 33 ಮಂದಿ ಲೋಕಸಭೆ ಸದಸ್ಯರ ಪೈಕಿ ಅರ್ಧದಷ್ಟು ಮಂದಿ ಯೋಗಿ ನಾಯಕತ್ವ ಬದಲಾಗಬೇಕೆಂದು ದೆಹಲಿ ನಾಯಕರ ಮುಂದೆ ವಾದ ಮಂಡಿಸಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ ಹಿಂದೂ ಧಾರ್ಮಿಕ ಭಾವನೆಯಂತೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಿದರೂ ಯೋಗಿ ರಾಜ್ಯದ ಜನರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಯೋಗಿ ನಾಯಕತ್ವದಲ್ಲಿ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 75 ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ನಂಬಿಕೆ ಬಿಜೆಪಿಯ ಕೇಂದ್ರ ನಾಯಕರದಾಗಿತ್ತು. ಆದರೆ ಯೋಗಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ನಿರಾಶೆಗೊಳಿಸಿದ್ದಾರೆ ಎನ್ನುವ ಅಸಮಾಧಾನ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿನ ಬಿಜೆಪಿ ನಾಯಕರಲ್ಲಿ ಮನೆ ಮಾಡಿದೆ.

ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾ ಯಿಸಲಿದೆ, ಪರಿಶಿಷ್ಟ ಜಾತಿಯವರ ಮೀಸಲಾತಿಯನ್ನು ತೆಗೆಯುತ್ತದೆ ಮತ್ತು ಮುಸ್ಲಿಮರ ವಿರುದ್ಧ ಬುಲ್ಲೋಜರ್ ನೀತಿ ಅನುಸರಿಸುತ್ತದೆ ಎನ್ನುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಅಪಪ್ರಚಾರವನ್ನು ಯೋಗಿಗೆ ದಿಟ್ಟವಾಗಿ ಎದುರಿಸ ಲಾಗಲಿಲ್ಲ. ಇದು ಬಿಜೆಪಿಯ ಕಳಪೆ ಸಾಧನೆಗೆ ಮುಖ್ಯ ಕಾರಣ ಎನ್ನುವುದು ಬಿಜೆಪಿಯ ಹಲವು ನಾಯಕರು ಯೋಗಿ ಮೇಲೆ ಮಾಡುತ್ತಿರುವ ಆರೋಪ. ಇದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡುವ ಉತ್ತರ ‘ನಾವು ಅತಿ ಯಾದ ಆತ್ಮವಿಶ್ವಾಸವನ್ನು ಹೊಂದಿದ್ದೇ ಕಾರಣವೇ ಹೊರತು ಬೇರೇನೂ ಅಲ್ಲ’

ಈ ಮಧ್ಯೆ ಬಿಜೆಪಿಯಲ್ಲಿನ ಈ ಆಂತರಿಕ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಗಮನಿ ಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಉದ್ದೇಶಿಸಿ ‘ನೂರು ಮಂದಿ ಶಾಸಕರನ್ನು ಕರೆತನ್ನಿ ನಮ್ಮ ಬೆಂಬಲದಿಂದ ಸರ್ಕಾರ ರಚಿಸಿ’ ಎಂದು ಕರೆ ನೀಡಿರುವುದು ಬಿಜೆಪಿಯೊಳಗೆ ಆತಂಕ ಸೃಷ್ಟಿಸಿದೆ. ಅಂತೂ ಉತ್ತರ ಪ್ರದೇಶದ ರಾಜಕಾರಣ ಈಗ ಇಲ್ಲಿಗೆ ಬಂದು ನಿಂತಿದೆ. ಬೂದಿ ಮುಚ್ಚಿದ ಬೆಂಕಿಯಿಂದ ರಾಜಕಾರಣ ಈಗ ಇಲ್ಲಿಗೆ ಬಂದು ನಿಂತಿದೆ. ಬೂದಿ ಮುಚ್ಚಿದ ಬೆಂಕಿಯಿಂದ ಈಗ ಹೊಗೆ ಎದ್ದಿದೆ. ಅದು ಹೊತ್ತಿ ಉರಿಯಲಿದೆಯೋ ಅಥವಾ ಅಷ್ಟಕ್ಕೇ ನಿಲ್ಲಲಿದೆಯೋ ಎನ್ನುವುದು ಪಕ್ಷದೊಳಗಿನ ರಾಜಕೀಯ ಬೆಳವಣಿಗೆಯನ್ನು ಅವಲಂಬಿಸಿದೆ. ಇಷ್ಟಾದರೂ ಬಿಜೆಪಿಯ ಕೇಂದ್ರ ನಾಯಕತ್ವ ಉತ್ತರ ಪ್ರದೇಶದ ಬೆಳವಣಿಗೆ ಬಗೆಗೆ ಬಹಿರಂಗವಾಗಿ ಏನೂ ಹೇಳದಿರುವುದು ಅಚ್ಚರಿ.

ಲೋಕಸಭೆ ಚುನಾವಣೆ ನಂತರ ನಲವತ್ತು ದಿನಗಳಲ್ಲಿ ನಡೆದ ವಿವಿಧ ವಿಧಾನಸಭೆಗಳ ಈ ಉಪಚುನಾವಣೆಯ ಫಲಿತಾಂಶವೂ ಬಿಜೆಪಿಯನ್ನು ಆತಂಕಕ್ಕೀಡು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಪಡೆದಿದ್ದ ಶೇಕಡಾವಾರು 50ರಷ್ಟು ಮತಗಳಿಕೆ ಈಗ ಶೇ.35ಕ್ಕೆ ಇಳಿಕೆಯಾಗಿರುವುದು ಬಿಜೆಪಿಯ ಜನಪ್ರಿಯತೆ ಕುಸಿಯುತ್ತಾ ಬಂದಿರುವುದರ ಸ್ಪಷ್ಟ ಸೂಚನೆ. ಈ ಉಪಚುನಾವಣೆಯು ಮುಖ್ಯವಾಗಿ ಸ್ಥಳೀಯ ಸಮಸ್ಯೆಗಳನ್ನು ಪ್ರತಿ ಬಿಂಬಿಸಿದೆ. ಇಲ್ಲಿ ಬಿಜೆಪಿಯ ರಾಷ್ಟ್ರೀಯ ಚಿಂತನೆ, ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಮತದಾರ ಗಮನಿಸಿಲ್ಲ. ಹಾಗಾಗಿ ಬಿಜೆಪಿಗೆ ಹಿನ್ನಡೆ ಆಗಿದೆ ಎನ್ನುವುದು ಈ ಪಕ್ಷದ ನಾಯಕರು ಮಾಡುವ ವಿಶ್ಲೇಷಣೆ.

ಆದರೆ ರಾಜಕೀಯ ಪಂಡಿತರ ಮತ್ತು ಚುನಾವಣಾ ವಿಶ್ಲೇಷಕರ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗಳಿಸಿ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗದೆ ಮಿತ್ರ ಪಕ್ಷಗಳನ್ನು ಅವಲಂಬಿಸಿದರೂ, ಬಿಜೆಪಿಯ ನಡೆ ನುಡಿ ಮತ್ತು ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹಿಂದಿನಂತೆಯೇ ರಾಜಕೀಯ ದಾರ್ಷ್ಟ ಮನೋಭಾವ ಪ್ರದರ್ಶನ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ನಿರ್ಲಕ್ಷ್ಯ ಮುಂತಾದವು ಬಿಜೆಪಿಯ ಕಳಪೆ ಫಲಿತಾಂಶಕ್ಕೆ ಕಾರಣ. ಆದರೆ, ಈ ಉಪ ಚುನಾವಣೆ ಫಲಿತಾಂಶವು ದೇಶದಾದ್ಯಂತ ಬಿಜೆಪಿಯ ವರ್ಚಸ್ಸು ಕಡಿಮೆ ಆಗುತ್ತಿರುವುದನ್ನು ಸ್ಪಷ್ಟವಾಗಿ ತೋರುತ್ತಿದೆ ಎನ್ನುವುದು ‘ಇಂಡಿಯಾ’ ಮೈತ್ರಿಕೂಟದ ನಾಯಕರ ಅಭಿಮತ.

ಬದಲಾಗದ ಮನೋಭಾವ: ಈ ಮಧ್ಯೆ ಮುಸ್ಲಿಮರ ಬಗೆಗೆ ಬಿಜೆಪಿ ನಾಯಕರಲ್ಲಿರುವ ಮನೋಭಾವ ಚುನಾವಣೆಯ ನಂತರವೂ ಬದಲಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ ಆಗಿರುವುದನ್ನು ಪ್ರಸ್ತಾಪಿಸಿರುವ ಆ ಪಕ್ಷದ ನಾಯಕ ಸುವೇಂದು ಅಧಿಕಾರಿ, ಮುಸ್ಲಿಮರು ಬಿಜೆಪಿಗೆ ಮತ ಹಾಕಿಲ್ಲ. ಆದ್ದರಿಂದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಪಕ್ಷ ಮತ್ತು ಸರ್ಕಾರದ ಘೋಷಣೆಯನ್ನು ತೆಗೆದು ಹಾಕಬೇಕು ಎನ್ನುವ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನೂ ಒಂದಾಗಿ ನೋಡುವುದನ್ನು ಕೈಬಿಡಬೇಕು ಎನ್ನುವ ವಿಚಾರವನ್ನು ಪ್ರಧಾನಿ ಮೋದಿ ಅವರ ಮುಂದಿಟ್ಟಿದ್ದಾರೆ.

ಇತ್ತ ಕೇಂದ್ರದ ಜವಳಿ ಖಾತೆ ಸಚಿವ ಗಿರಿರಾಜ್ ಸಿಂಗ್ ‘1947ರಲ್ಲಿ ದೇಶವನ್ನು ಧಾರ್ಮಿಕ ವಿಷಯದ ಆಧಾರದ ಮೇಲೆ ಇಬ್ಬಾಗ ಮಾಡಿದಾಗ ಮುಸ್ಲಿಮರನ್ನು ಇಲ್ಲಿ ಉಳಿಸಿಕೊಂಡು ತಪ್ಪು ಮಾಡಲಾಗಿದೆ. ಮುಸ್ಲಿಮರನ್ನೆಲ್ಲ ಪಾಕಿಸ್ತಾನಕ್ಕೆ ಕಳುಹಿಸಬೇಕಿತ್ತು. ಹಾಗೆ ಮಾಡಿದ್ದರೆ ಭಾರತದ ಸ್ವರೂಪವೇ ಬೇರೆ ಆಗಿರುತ್ತಿತ್ತು’ ಎಂದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ‘ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ಹೀಗೆಯೇ ಬಿಟ್ಟರೆ 2041ಕ್ಕೆ ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗುತ್ತಾರೆ’ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ಬಗೆಗೆ ಬದಲಾಗದ ಬಿಜೆಪಿ ನಾಯಕರ ಈ ನಿಲುವಿನಿಂದ ಪ್ರಧಾನಿ ಮೋದಿ ಅವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಮಂತ್ರ ಚುನಾವಣೆಗಳಲ್ಲಿ ಜನರನ್ನು ಮರುಳುಮಾಡುವ ಮಾತಲ್ಲದೆ ಮತ್ತೇನೂ ಅಲ್ಲ ಎನ್ನುವುದು ವಾಸ್ತವ.

ಆರ್‌ ಎಸ್‌ ಎಸ್ ಮುನಿಸು: ಈ ಮಧ್ಯೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಮೋದಿ ಅವರ ಕಾರ್ಯವೈಖರಿ ಬಗೆಗಿನ ಅಸಮಾಧಾನ ಮುಂದುವರಿದಂತೆ ಕಾಣುತ್ತಿದೆ. ಅಧಿಕಾರ ನಡೆಸುವವರಿಗೆ ಅಹಂಕಾರ ಮತ್ತು ದಾರ್ಷ್ಟ ಮನೋಭಾವ ಇರಬಾರದು ಎಂದಿದ್ದ ಅವರೀಗ ಮತ್ತೆ ಪರೋಕ್ಷವಾಗಿ ಮೋದಿ ಅವರ ಮಾತಿನ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕೆಲವರು ತಾನು ದೇವರಾಗಲು ಮತ್ತು ಸೂಪರ್ ಮ್ಯಾನ್ ಆಗಲು ಹೊರಟಿದ್ದಾರೆ.

ಆದರೆ ಅವರಿಗೆ ಅನಿಶ್ಚಿತತೆ ಬಗೆಗೆ ಅರಿವಿರುವುದಿಲ್ಲ’ ಎಂದಿರುವುದನ್ನು ಕಾಂಗ್ರೆಸ್ ‘ಇದು ಮೋದಿಯನ್ನೇ ಉದ್ದೇಶಿಸಿ ಆಡಿರುವ ಮಾತು’ ಎಂದರೆ, ಶಿವಸೇನೆಯ (ಉದ್ಧವ್ ಬಣ) ರಾಜ್ಯಸಭೆಯ ಸದಸ್ಯ ಸಂಜಯ್ ರಾವುತ್ ‘ಭಾಗವತ್ ಅವರು ಬಹಿರಂಗವಾಗಿಯೇ ತಮ್ಮ ಹೇಳಿಕೆಯನ್ನು ಮುಚ್ಚುಮರೆ ಇಲ್ಲದೆ ಹೇಳಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಣ ಶೀತಲ ಸಮರ, ಮುಸುಕಿನ ಗುದ್ದಾಟ ಮುಂದುವರಿದಿರುವುದು ಸ್ಪಷ್ಟವಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

5 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago