ಅಂಕಣಗಳು

ಕಾಂಗ್ರೆಸ್ ವರಿಷ್ಠರಿಗೆ ನಿರಾಳ ತಂದ ಬಿಜೆಪಿಯ ಭವಿಷ್ಯದ ನಾಯಕತ್ವದ ಪೈಪೋಟಿ

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಂಘರ್ಷ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಮಾಧಾನ ತಂದಿದೆ. ಈ ಮಾತನ್ನು ಹೇಳಿದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೂ ಇದು ನಿಜ. ಅರ್ಥಾತ್, ರಾಜ್ಯ ಬಿಜೆಪಿಯ ಒಳಜಗಳ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ನೀಡಿದೆ ಎಂಬ ಭಾವನೆ ಕೈ ಪಾಳೆಯದ ವರಿಷ್ಠರಲ್ಲಿದೆ.

ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯ ಒಳಜಗಳ ಸದ್ಯಕ್ಕೆ ನಿಲ್ಲುವುದಿಲ್ಲ ವಾದ್ದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬಹುದಾದ ಸಂಭವನೀಯ ಅಪಾಯಗಳು ತಪ್ಪಿವೆ ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ. ಅಂದ ಹಾಗೆ ಅವರ ಲೆಕ್ಕಾಚಾರದಲ್ಲಿ ಹುರುಳಿಲ್ಲ ಅಂತೇನಲ್ಲ. ಏಕೆಂದರೆ ರಾಜ್ಯ ಬಿಜೆಪಿಯ ಒಳಜಗಳವನ್ನು ನೋಡಿದರೆ ಅದು ಸದ್ಯಕ್ಕೆ ಬಗೆಹರಿಯುವುದು ಕಷ್ಟ ಎಂಬುದು ಸ್ಪಷ್ಟವಾಗಿದೆ. ಕಾರಣ ರಾಜ್ಯ ಬಿಜೆಪಿಯ ಒಳಜಗಳದ ಮೂಲ.

ನೋಡುತ್ತಾ ಹೋದರೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವುದು ಭವಿಷ್ಯದ ನಾಯಕತ್ವಕ್ಕಾಗಿನ ಪೈಪೋಟಿ. ಒಂದು ಸಲ ಹಾಲಿ ಅಧ್ಯಕ್ಷ ಬಿ. ವೈ.ವಿಜಯೇಂದ್ರ ಅವರೇನಾದರೂ ಅಧ್ಯಕ್ಷ ಸ್ಥಾನದಲ್ಲಿ ನೆಲೆಯಾದರೆ ಮತ್ತು  ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸುವಂತಾದರೆ ತಮಗೆ ಭವಿಷ್ಯವಿಲ್ಲ ಎಂಬುದು ರಾಜ್ಯ ಬಿಜೆಪಿಯ ಹಲವು ನಾಯಕರ ತೀರ್ಮಾನ. ನೋಡುತ್ತಾ ಹೋದರೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರೆಲ್ಲ ಭವಿಷ್ಯದಲ್ಲಿ ಮುಖ್ಯಮಂತ್ರಿಗಳಾಗುವ ಕನಸು ಇಟ್ಟುಕೊಂಡವರು. ಹಾಗಂತ ಇವರಷ್ಟೇ ಅಲ್ಲ, ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಆರ್.ಅಶೋಕ್, ಡಾ.ಸಿ.ಎನ್.ಅಶ್ವಥ್ಥನಾರಾಯಣ, ಗೋವಿಂದ ಕಾರಜೋಳ ಸೇರಿದಂತೆ ಇನ್ನೂ ಹಲವು ನಾಯಕರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅಕಾಂಕ್ಷೆ ಇರಿಸಿಕೊಂಡವರು.

ಇದೇ ರೀತಿ ಮೇಲ್ನೋಟಕ್ಕೆ ಇಲ್ಲ ಎಂದರೂ ಆಳದಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೂ ಭವಿಷ್ಯದಲ್ಲಿ ಕರ್ನಾಟಕದ ಚುಕ್ಕಾಣಿ ಹಿಡಿಯುವ ಮಹತ್ವಕಾಂಕ್ಷೆ ಉಳ್ಳವರು ಎಂಬುದು ಬಿಜೆಪಿ ಪಾಳೆಯದ ಮಾತು. ಹೀಗೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಇಷ್ಟೊಂದು ಜನ ಪೈಪೋಟಿ ನಡೆಸುತ್ತಿರುವಾಗ ಬಿ.ವೈ.ವಿಜಯೇಂದ್ರ ಅವರು ಸೆಟ್ಲಾಗಿ ಬಿಟ್ಟರೆ ಉಳಿದವರ ಗತಿಯೇನು? ನೇರವಾಗಿ ಹೇಳಬೇಕೆಂದರೆ ವಿಜಯೇಂದ್ರ ಅವರು ಈ ಎಲ್ಲ ನಾಯಕರಿಗಿಂತ ವಯಸ್ಸಿನಲ್ಲಿ ಚಿಕ್ಕವರು.

ರಾಜಕಾರಣವನ್ನು ಅವರು ಗಂಭೀರವಾಗಿ ತೆಗೆದುಕೊಂಡರೆ ಇನ್ನೂ ಇಪ್ಪತ್ತೈದು ವರ್ಷಗಳ ಕಾಲ ಮುಖ್ಯವಾಹಿನಿಯಲ್ಲಿ ಉಳಿಯಬಲ್ಲವರು. ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಅವರು ನೆಲೆಯಾದರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುವ ಸನ್ನಿವೇಶ ಉದ್ಭವವಾದರೆ ಅನುಮಾನವೇ ಬೇಡ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಅವರು ಮುಂದಿರುತ್ತಾರೆ. ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ, ಇವತ್ತು ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ತಮ್ಮ ಬೆಂಬಲಿಗರಿಗೆ ಸಿಂಹಪಾಲು ದಕ್ಕುವಂತೆ ಮಾಡಿರುವ ವಿಜಯೇಂದ್ರ ನಾಳೆ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬೇಕಾದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಕೊಡಿಸುತ್ತಾರೆ.

ಒಂದು ಸಲ ಅವರು ಈ ಕಾರ್ಯದಲ್ಲಿ ಯಶಸ್ವಿಯಾದರೆ ಸಹಜವಾಗಿಯೇ ಪಕ್ಷದ ಶಾಸಕಾಂಗ ಸಭೆಯಲ್ಲಿ ವಿಜಯೇಂದ್ರ ಅವರ ನಾಯಕತ್ವವನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಿದ್ದಾಗ ನಿರ್ಣಾಯಕ ಘಳಿಗೆಯಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಬುಲ್ಡೋಜ್ ಮಾಡಿ ಬೇರೆಯವರಿಗೆ ಪಟ್ಟ ಕಟ್ಟುವುದು ವರಿಷ್ಠರಿಗೂ ಕಷ್ಟ. ಇಂತಹ ಮಾತಿಗೆ ಪೂರಕವಾದ ಇನ್ನೊಂದು ಸಂಗತಿ ಎಂದರೆ ಬಿ.ವೈ.ವಿಜಯೇಂದ್ರ ಅವರು ಬಲಿಷ್ಠ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಬಲಿಷ್ಠ ಸಮುದಾಯವನ್ನು ನಿರ್ಲಕ್ಷಿಸಿ ಬಿಜೆಪಿ ವರಿಷ್ಠರು ಹೆಜ್ಜೆ ಇಡಲೂ ಆಗುವುದಿಲ್ಲ.

೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದು ಮೈತ್ರಿ ಸರ್ಕಾರ ಅನಿವಾರ್ಯವಾಯಿತಲ್ಲ, ಆ ಸಂದರ್ಭದಲ್ಲಿ ಜಾ.ದಳ ಜತೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚಿಸಲು ಬಿಜೆಪಿ ನಾಯಕ ಅನಂತಕುಮಾರ್ ಯತ್ನಿಸಿದ್ದರು. ಇದಕ್ಕೆ ಪೂರಕವಾಗಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಕರೆದುಕೊಂಡು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಮಾತುಕತೆ ನಡೆಸಿದ್ದರು. ಆದರೆ ಆಳದಲ್ಲಿ ಅನಂತಕುಮಾರ್ ಇಂತಹ ಪ್ರಯತ್ನ ಮಾಡುತ್ತಾ, ಮೈತ್ರಿ ಸರ್ಕಾರದಲ್ಲಿ ಮುಖ್ಯಮತ್ರಿಯೋ, ಉಪಮುಖ್ಯಮಂತ್ರಿಯೋ ಆಗಲು ಯತ್ನಿಸುತ್ತಿದ್ದಾರೆ ಎಂಬ ಸುಳಿವು ಪಡೆದ ಯಡಿಯೂರಪ್ಪ ದೊಡ್ಡ ಸಮಾವೇಶವೊಂದನ್ನು ಏರ್ಪಡಿಸಿ ಲಿಂಗಾಯತ ಮಠಾಧಿಪತಿಗಳನ್ನು ಕರೆಸಿದರು.

ಈ ಸಮಾವೇಶದಲ್ಲಿ ಮಾತನಾಡಿದ ಲಿಂಗಾಯತ ಮಠಾಧಿಪತಿಗಳು: ಲಿಂಗಾಯತರನ್ನು ಕಡೆಗಣಿಸಿದರೆ ಸಹಿಸುವುದಿಲ್ಲ ಎಂದು ಅಬ್ಬರಿಸಿದಾಗ ಬಿಜೆಪಿ ಹೈಕಮಾಂಡ್ ಅಳುಕಿತು. ಅಷ್ಟೇ ಅಲ್ಲ, ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರ ರಚಿಸಿ ಕೈ ತೊಳೆದುಕೊಂಡಿತು. ಇದನ್ನು ಏಕೆ ನೆನಪಿಸಿಕೊಳ್ಳಬೇಕೆಂದರೆ ಇಪ್ಪತ್ತು ವರ್ಷಗಳಷ್ಟು ಹಿಂದೆಯೆ ಯಡಿಯೂರಪ್ಪ ಅವರು ಜಾತಿ ಕಾರ್ಡು ಬಳಸಿ ಯಶಸ್ವಿಯಾಗಿದ್ದರು. ಈಗ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಸರದಿ. ನಾಳೆ ವಿಧಾನಸಭಾ ಚುನಾವಣೆಯ ನಂತರ ತಮ್ಮ ನಾಯಕತ್ವಕ್ಕೆ ಯಾರಾದರೂ ಅಡ್ಡಗಾಲು ಹಾಕುತ್ತಾರೆ ಎಂದರೆ ವಿಜಯೇಂದ್ರ ಕೂಡ ಜಾತಿ ಕಾರ್ಡು ಬಳಸುತ್ತಾರೆ. ಹೀಗಾಗಿ ಮುಂದಿನ ದಿನಗಳ ಫಲಿತಾಂಶವನ್ನು ಈಗಲೇ ಊಹಿಸಿರುವ ಬಿಜೆಪಿಯ ನಾಯಕರು ನಿರಂತರವಾಗಿ ವಿಜಯೇಂದ್ರ ಅವರ ವಿರುದ್ಧ ದಾಳಿ ಮಾಡುತ್ತಿದ್ದಾರೆ ಮತ್ತು ಇಂತಹ ದಾಳಿ ಯಶಸ್ವಿಯಾಗುವವರೆಗೆ ಅವರು ಸುಮ್ಮನಿರುವುದಿಲ್ಲ.

ಪರಿಸ್ಥಿತಿ ಹೀಗಿರುವುದರಿಂದಲೇ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಮಾಧಾನವಾಗಿದೆ. ಹೀಗೆ ಬಿಜೆಪಿಯ ಒಳಜಗಳ ನಿರಂತರವಾಗಿ ಮುಂದುವರಿದರೆ ಕರ್ನಾಟಕದಲ್ಲಿ ತಮ್ಮ ಪಕ್ಷದ ಸರ್ಕಾರಕ್ಕೆ ಯಾವ ಆತಂಕವೂ ಇಲ್ಲ ಎಂಬುದು ಅವರ ನಂಬಿಕೆ. ಅದೇ ಸದ್ಯದ ವಿಶೇಷ.

” ಇದೇ ರೀತಿ ಮೇಲ್ನೋಟಕ್ಕೆ ಇಲ್ಲ ಎಂದರೂ ಆಳದಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೂ ಭವಿಷ್ಯದಲ್ಲಿ ಕರ್ನಾಟಕದ ಚುಕ್ಕಾಣಿ ಹಿಡಿಯುವ ಮಹತ್ವಕಾಂಕ್ಷೆ ಉಳ್ಳವರು ಎಂಬುದು ಬಿಜೆಪಿ ಪಾಳೆಯದ ಮಾತು. ಹೀಗೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಇಷ್ಟೊಂದು ಜನ ಪೈಪೋಟಿ ನಡೆಸುತ್ತಿರುವಾಗ ಬಿ.ವೈ.ವಿಜಯೇಂದ್ರ ಅವರು ಸೆಟ್ಲಾಗಿ ಬಿಟ್ಟರೆ ಉಳಿದವರ ಗತಿಯೇನು? ನೇರವಾಗಿ ಹೇಳಬೇಕೆಂದರೆ ವಿಜಯೇಂದ್ರ ಅವರು ಈ ಎಲ್ಲ ನಾಯಕರಿಗಿಂತ ವಯಸ್ಸಿನಲ್ಲಿ ಚಿಕ್ಕವರು.”

ಆಂದೋಲನ ಡೆಸ್ಕ್

Recent Posts

ಸ್ವಾತಂತ್ರ್ಯ ಚಳುವಳಿಗೆ ವಂದೇ ಮಾತರಂ ಶಕ್ತಿ ತುಂಬಿತು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…

1 hour ago

ಸಿಎಂ ಸಿದ್ದರಾಮಯ್ಯಗೆ ಬಿಗ್‌ಶಾಕ್‌ ಕೊಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…

1 hour ago

ಬೆಳಗಾವಿ ಚಳಿಗಾಲದ ಅಧಿವೇಶನ: ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…

2 hours ago

ಮುಂದುವರಿದ ಇಂಡಿಗೋ ಸಮಸ್ಯೆ: ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…

2 hours ago

ನಟಿ ಮೇಲೆ ಅತ್ಯಾಚಾರ ಕೇಸ್‌: ಮಲಯಾಳಂ ಸ್ಟಾರ್‌ ನಟ ದಿಲೀಪ್‌ ಖುಲಾಸೆ

ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…

2 hours ago

ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋದ ನಟ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…

2 hours ago