ಸಂತ್ರಸ್ತೆಯ ಹೋರಾಟಕ್ಕೆ ಸಿಕ್ಕಿತು ಹೊಸ ತಿರುವು

ವೈಡ್ ಆಂಗ್‌ಲ್ ; ಬಾ.ನ.ಸುಬ್ರಮಣ್ಯ

 

ಅಪರಾಧ ನನ್ನದಲ್ಲವಾದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಮತ್ತು ಒಂಟಿಯಾಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಮುಂದಾದ ಕೆಲವರು ನನ್ನೊಂದಿಗಿದ್ದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುವಾಗ ನಾನು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಒಂಟಿಯಾಗಿಲ್ಲ ಎಂದು ಮನವರಿಕೆಯಾಗಿದೆ.. ನ್ಯಾಯವು ನೆಲೆನಿಲ್ಲಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಯಾರೂ ಇಂತಹ ಪರಿಸ್ಥಿತಿಗೆ ಒಳಗಾಗದಂತೆ ಮಾಡಲು ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ.

 

ಐದು ವರ್ಷಗಳ ಹಿಂದೆ ಜನಪ್ರಿಯ ತಾರೆಯೊಬ್ಬರನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದೀಗ ಹೊಸ ತಿರುವನ್ನು ಪಡೆಯತೊಡಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆರೋಪಿಗಳಲ್ಲಿ ಒಬ್ಬರಾಗಿ ಅಲ್ಲಿನ ಜನಪ್ರಿಯ ನಟ ದಿಲೀಪ್ ಅವರ ಹೆಸರೂ ಇತ್ತು. ಅವರ ಬಂಧನವೂ ಆಗಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ದಿಲೀಪ್ ಅವರ ಬಂಧನವಾಗುತ್ತಲೇ, ಕಲಾವಿದರ ಸಂಘದಿಂದ ಅವರನ್ನು ವಜಾ ಮಾಡಲಾಗಿತ್ತು. ಜಾಮೀನಿನ ಮೇಲೆ ಹೊರಬರುತ್ತಲೇ, ಮತ್ತೆ ಸೇರಿಕೊಳ್ಳಲಾಯಿತು.

 

 

ಕಲಾವಿದರ ಸಂಘದಲ್ಲಿದ್ದ ನಟಿಯರು ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವ ಇತರ ಮಹಿಳೆಯರ ಸಂಘ ‘ಸಿನಿಮಾ ಮಹಿಳಾ ಕೂಟ’ದ ಸ್ಥಾಪನೆ ಈ ಹಂತದಲ್ಲಿ ಆಯಿತು. ಅಂದಿನ ಮುಖ್ಯಮಂತ್ರಿಗಳನ್ನು ಭೇಟಿಯಾದ ಕೂಟದ ಸದಸ್ಯರು, ಈ ದೂರಿನ ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ಮತ್ತು ಸಂತ್ರಸ್ತೆಗೆ ನ್ಯಾಯ ನೀಡಲು ಒತ್ತಾಯಿಸಿದರು

ತನಿಖೆ ಮುಂದುವರಿಯುತ್ತಿದ್ದಂತೆ ಸಂತ್ರಸ್ತೆಯ ಪರವಾಗಿ ಸಾಕ್ಷಿ ನುಡಿದ ತಾರೆಯಲ್ಲಿ ಕೆಲವರು ನಂತರ ಉಲ್ಟಾ ಹೊಡೆದ ಪ್ರಸಂಗವೂ ಇತ್ತು. ತನಿಖಾಧಿಕಾರಿಗಳ ಬದಲಾವಣೆ, ವಕೀಲರ ನಿಧಾನಗತಿ ವರದಿಯಾಗುತ್ತಿತ್ತು. ಈ ವಿಚಾರಣೆಯ ವಿವರಗಳು ಮಾಧ್ಯಮಗಳಲ್ಲಿ ಬರಬಾರದು ಎನ್ನುವ ಕೋರಿಕೆಯೂ ಇತ್ತೆನ್ನಿ.

ಜನಪ್ರಿಯ ನಟರಾದ ದಿಲೀಪ್ ನ್ಯಾಯಾಲಯದ ಮುಂದೆ ಇಟ್ಟ ಕೆಲವು ಬೇಡಿಕೆಗಳನ್ನು ಅದು ನಿರಾಕರಿಸಿತು. ನ್ಯಾಯಾಲಯದ ಬದಲಾವಣೆ, ಲೈಂಗಿಕ ಕಿರುಕುಳದ ವಿಡಿಯೋ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿತು. ಕಿರುಕುಳದ ವಿಡಿಯೋ ನ್ಯಾಯಾಲಯದಲ್ಲಿ ಇರಬೇಕು, ಬೇರೆಯವರ ಕೈಗೆ ಸಿಗಬಾರದು ಎಂದು ನ್ಯಾಯಾಲಯ ಹೇಳಿತು.

 

ಕಳೆದ ತಿಂಗಳು, ಮಲಯಾಳ ಚಿತ್ರನಿರ್ದೇಶಕ ಹಾಗೂ ದಿಲೀಪ್ ಆತ್ಮೀಯರೆನ್ನಲಾಗಿರುವ ಬಾಲಚಂದ್ರ ಕುಮಾರ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ, ಮುಖ್ಯಮಂತ್ರಿಗಳಿಗೆ ನೀಡಿರುವ ಪತ್ರ ಮತ್ತು ಪೊಲೀಸರ ಮುಂದೆ ನೀಡಿರುವ ವಿಡಿಯೋ, ಆಡಿಯೋ ಮತ್ತಿತರ ದಾಖಲೆಗಳು ಪ್ರಕರಣದಲ್ಲಿ ದಿಲೀಪ್ ಅವರ ಪಾತ್ರವನ್ನು ಸಮರ್ಥಿಸಲು ಹಾಗೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬಲ್ಲ ಬೆಳವಣಿಗೆ ಎನ್ನಲಾಗಿದೆ.

 

ಅವರ ಪ್ರಕಾರ, ದಿಲೀಪ್ ಅವರು ಸಂತ್ರಸ್ತೆಗೆ ಕಿರುಕುಳ ನೀಡಿದ ವಿಡಿೋಂ ತುಣುಕುಗಳ ಪ್ರತಿಯನ್ನು ಹೊಂದಿದ್ದಾರೆ. ಮಾತ್ರವಲ್ಲ, ತಮ್ಮನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ಕೈಗಳನ್ನು ಕತ್ತರಿಸುವ, ಲಾರಿ ಹತ್ತಿಸಿ ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ವಿರುದ್ಧ ಸಾಕ್ಷಿ ಹೇಳಿದ ತಾರೆಯರನ್ನು ಒತ್ತಾಯದಿಂದ, ಹೆದರಿಸಿ ಉಲ್ಟಾ ತಿರುಗುವಂತೆ ಮಾಡಿದ್ದಾರೆ. ಆಡಳಿತ ಪಕ್ಷದಲ್ಲಿರುವ ಸಚಿವರ ಸಂಪರ್ಕ ಇರುವುದರಿಂದ ಯಾವುದೇ ತೊಂದರೆ ಆಗದಂತೆ ಭರವಸೆ ಇದೆ, ಇತ್ಯಾದಿ ಮಾಹಿತಿಗಳನ್ನು ಸೂಕ್ತ ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ನೀಡುವುದಾಗಿ ಅವರು ಹೇಳಿದ್ದಾರೆ. ತಾವು ಜೀವಭಯದಿಂದ ಈ ಹಿಂದೆ ಈ ವಿವರ ಮುಚ್ಚಿಟ್ಟದ್ದಾಗಿಯೂ ಅವರು ಹೇಳಿದ್ದಾರೆ.

 

 

ಸುಪ್ರೀಂ ಕೋರ್ಟು, ಈ ಫೆಬ್ರವರಿ ೧೬ರ ಒಳಗೆ ಇದನ್ನು ಇತ್ಯರ್ಥ ಮಾಡಬೇಕು ಎಂದೇ ಹೇಳಿತ್ತು. ಅಂದಿಗೆ ಘಟನೆ ನಡೆದು ಐದು ವರ್ಷವಾಗುತ್ತದೆ. ಆದರೆ ಈಗ ಹೊಸ ಎಫ್‌ಐಆರ್ ದಿಲೀಪ್ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವುದರಿಂದ, ಇನ್ನಷ್ಟು ಸಮಯಾವಕಾಶ ಕೋರಲಾಗುವುದು ಎಂದು ಸರ್ಕಾರ ಹೇಳಿದೆ.

ಮಲಯಾಳ ಸಿನಿಮಾರಂಗದಲ್ಲಿ ನಡೆಯುತ್ತಿರುವ ಮಹಿಳೆಯರ ಶೋಷಣೆಯ ಕುರಿತಂತೆ ಹೇಮಾ ಕಮಿಶನ್‌ಗೆ  ಸಾಕಷ್ಟು ಮಂದಿ ಹೇಳಿಕೆ ನೀಡಿದ್ದಾರೆ. ವಿಶ್ರಾಂತ ನ್ಯಾಯಮೂರ್ತಿ ಹೇಮಾ ಅವರು ವರದಿ ನೀಡಿ ಎರಡು ವರ್ಷವಾದರೂ ಅದಿನ್ನೂ ಜಾರಿಗೆ ಬಂದಿಲ್ಲ. ಬಂದರೆ, ಚಿತ್ರರಂಗದಲ್ಲಿರುವ ಸಾಕಷ್ಟು ಜನಪ್ರಿಯ ತಾರೆಯರಿಗೆ ತೊಂದರೆಯಾಗಬಹುದು ಎನ್ನುವ ಕಾರಣದಿಂದ ಅದನ್ನು ಮುಚ್ಚಿಟ್ಟಿದ್ದಾರೆ ಎಂದು ನಟಿ ಪಾರ್ವತಿ ಆಕ್ಷೇಪಿಸಿದ್ದಾರೆ. ಸಿನಿಮಾ ಮಹಿಳಾ ಕೂಟವೂ ಇದನ್ನು ಪ್ರಕಟಿಸಲು ಕೋರಿದೆ.

ಸಾಮಾನ್ಯವಾಗಿ ಇಂತಹ ಪ್ರಸಂಗಗಳಲ್ಲಿ ಕಿರುಕುಳಕ್ಕೆ ಒಳಗಾದ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮಾಧ್ಯಮಗಳೂ ಹೇಳುವಂತಿಲ್ಲ. ಆದರೆ ಇದಕ್ಕೆ ಅಪವಾದವೆನ್ನುವಂತೆ ತಾರೆ ಭಾವನಾ ಮೊನ್ನೆ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಮೌನ ಮುರಿದಿದ್ದಾರೆ. ಅವರು ಹೇಳಿದ ಮಾತುಗಳಿವು:

‘ಈ ಪ್ರಯಾಣ ಸುಲಭದ್ದಾಗಿರಲಿಲ್ಲ. ಬಲಿಪಶುವಾಗಿ, ಬದುಕುಳಿಯುವ ವರೆಗಿನ ಪ್ರಯಾಣ.

ಕಳೆದ ೫ ವರ್ಷಗಳಿಂದ, ನನ್ನ ಮೇಲೆ ಮಾಡಿದ ಹಲ್ಲೆಯ ಹೆಸರಲ್ಲಿ ನನ್ನ ಹೆಸರು ಮತ್ತು ನನ್ನ ಗುರುತನ್ನು ಹತ್ತಿಕ್ಕಲಾಗಿದೆ. ಅಪರಾಧ ನನ್ನದಲ್ಲವಾದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಮತ್ತು ಒಂಟಿಯಾಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಮುಂದಾದ ಕೆಲವರು ನನ್ನೊಂದಿಗಿದ್ದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುವಾಗ ನಾನು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಒಂಟಿಯಾಗಿಲ್ಲ ಎಂದು ಮನವರಿಕೆಯಾಗಿದೆ.. ನ್ಯಾಯವು ನೆಲೆನಿಲ್ಲಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಯಾರೂ ಇಂತಹ ಪರಿಸ್ಥಿತಿಗೆ ಒಳಗಾಗದಂತೆ ಮಾಡಲು ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ.

ನನ್ನೊಂದಿಗೆ ನಿಂತಿರುವ ಎಲ್ಲರಿಗೂ – ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು.’

ಭಾವನಾ ಅವರ ಈ ಹೇಳಿಕೆ ಬರುತ್ತಲೇ, ಮೋಹನಲಾಲ್, ಮಮ್ಮಟಿ ಸೇರಿದಂತೆ ಮಲಯಾಳ ಚಿತ್ರರಂಗದ ಬಹುತೇಕ ನಟನಟಿಯರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಲಯಾಳ ಮಾತ್ರವಲ್ಲ ಇತರ ಚಿತ್ರರಂಗಗಳ ಮಂದಿ, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ತಮ್ಮ ದನಿ ಸೇರಿಸಿಕೊಂಡಿದ್ದಾರೆ.

ಮಲಯಾಳ ಚಿತ್ರರಂಗದಲ್ಲಿರುವ ನಾರಿಶಕ್ತಿ ಈ ಪ್ರಕರಣ ನೆಪವಾಗಿ ಹೊರಜಗತ್ತಿಗೆ ಪರಿಚಯವಾಗುತ್ತಿದೆ.

 

ನಮ್ಮಲ್ಲಿ ಇಂತಹದೊಂದು ಶಕ್ತಿ ಶಕ್ತವಾಗಬಹುದೇ? ಇತ್ತೀಚೆಗೆ ಬಂದ ಮೀಟೂ ದೂರಿನ ಬೆಳವಣಿಗೆ ಅದಕ್ಕೆ ಒಳ್ಳೆಯ ನಿದರ್ಶನ!

× Chat with us