ಅಂಕಣಗಳು

ವಯನಾಡಿಗೆ ಆಗಿದ್ದು ಕಾಫಿನಾಡಿಗೂ ಆಗಬಹುದು

• ಉಷಾ ಪ್ರೀತಮ್, ವಿರಾಜಪೇಟೆ

ವಯಾಡಿನಲ್ಲಿ ಸಂಭವಿಸಿದ ಘೋರ ದುರಂತ ನೂರಾರು ಜನರ ಜೀವ, ಜೀವನವನ್ನು ಬಲಿಪಡೆದುಕೊಂಡಿದೆ. ಪ್ರಕೃತಿ ಮುನಿದರೆ ತಾನೇನು ಮಾಡಬಹುದು ಎಂಬುದಕ್ಕೆ ವಯನಾಡು ನಮ್ಮ ಮುಂದಿರುವ ಸಾಕ್ಷಿ.

ವಯನಾಡಿನ ದುರಂತ ಇತರೆ ಭಾಗಗಳಲ್ಲಿ ಬೆಟ್ಟದ ಮೇಲೆ, ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯ ಘಂಟೆಯಾಗಿರುವುದಂತೂ ನಿಜ. ಕರ್ನಾಟಕದ ನಾನಾ ಭಾಗಗಳಲ್ಲಿಯೂ ಭೂಕುಸಿತ ಗಳಾಗುತ್ತಿವೆ. ಈಗಲೇ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ರಾತ್ರಿ ನಿದ್ರೆ ಬರುತ್ತಿಲ್ಲ. ಮಳೆ ಜೋರಾದರೆ ಅದರ ಸದ್ದು ಕಿವಿಗೆ ಅಪ್ಪಳಿಸುತ್ತದೆ… ಇಂತಹದೊಂದು ಆತಂಕ ಈಗ ಕೊಡಗಿನ ವಿರಾಜಪೇಟೆಯಲ್ಲಿನ ಮಲೆತಿರಿಕೆ ಬೆಟ್ಟದ ತಪ್ಪಲಿನ ಹಾಗೂ ಬೆಟ್ಟದ ಮೇಲೆ ವಾಸಿಸುವ ಜನರನ್ನು ಕಾಡುತ್ತಿದೆ.

ವಿರಾಜಪೇಟೆ ಒಂದು ಕಣಿವೆಯಂತಹ ನಗರಿ. ಮಲೆತಿರಿಕೆ ಬೆಟ್ಟವು ಈ ನಗರವನ್ನು ಸುತ್ತುವರಿದಿದೆ. ಈ ಕಿರಿದಾದ ನಗರದಲ್ಲಿ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಣಾಮ ಬೆಟ್ಟದ ಮೇಲ್ಬಾಗದಲ್ಲಿಯೂ ಜನಸಂಖ್ಯೆ ಹೆಚ್ಚುತ್ತಿದೆ. ಈ ಬೆಟ್ಟ ಅಪಾಯದ ಅಂಚಿನಲ್ಲಿರುವ ಬಗ್ಗೆ ಈಗಾಗಲೇ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ವರದಿಗಳಿದ್ದರೂ ಜನರ ಸುರಕ್ಷತೆ ಕಾಪಾಡುವುದನ್ನು ಸರ್ಕಾರ ಮರೆತಂತಿದೆ. ಕೆಲ ವರ್ಷಗಳ ಹಿಂದೆ ಈ ಬೆಟ್ಟದ ತಪ್ಪಲಿನಲ್ಲಿರುವ ಕೀರ್ತಿ ಬಡಾವಣೆಯ ಸಮೀಪ ನಡೆಸುತ್ತಿದ್ದ ಕಲ್ಲು ಕ್ವಾರಿಯ ತಡೆಗೋಡೆ ಕುಸಿದು ಮೂರು ಮನೆಗಳು ಜಖಂಗೊಂಡಿದ್ದವು. ಆ ಬಳಿಕ ಕ್ವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಬೆಟ್ಟದ ಮತ್ತೊಂದು ಭಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲು ಬೆಟ್ಟದ ಬುಡವನ್ನು ಬಗೆದು ಅಲ್ಲಿನ ಶಿಲಾಪದರವನ್ನೂ ಸಡಿಲಗೊಳಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ಈ ಕೆಲಸಗಳು ನಿಂತಿದ್ದರೂ ಅವುಗಳ ಪರಿಣಾಮ ಬೆಟ್ಟವನ್ನು ಸಡಿಲಗೊಳಿಸಿರುವುದಂತೂ ಸುಳ್ಳಲ್ಲ. ಇವುಗಳೊಂದಿಗೆ ರೆಸಾರ್ಟ್ ನಿರ್ಮಾಣ, ಈಜುಕೊಳಗಳ ನಿರ್ಮಾಣಕ್ಕಾಗಿ ಅನಧಿಕೃತವಾಗಿ ಬೆಟ್ಟದ ತಪ್ಪಲನ್ನು ಅಗೆದಿರುವುದು ಬೆಟ್ಟವನ್ನು ಸಡಿಲಗೊಳಿಸಿದೆ.

2018ರ ಆಗಸ್ಟ್ 13ರಂದು ಈ ಮಲೆತಿರಿಕೆ ಬೆಟ್ಟದಲ್ಲಿ ಸುಮಾರು 200 ಅಡಿಗಳ ಆಳಕ್ಕೆ ಭೂಮಿ ಬಿರುಕು ಬಿಟ್ಟಿತ್ತು. ಆಗ ಘಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಭಾರಿ ಮಳೆಯಾದರೆ ಭೂಗರ್ಭದಿಂದ ನೀರು ಉಕ್ಕಿ ಭಾರೀ ಪ್ರಮಾಣದ ಭೂಕುಸಿತವಾಗಬಹುದು, ಮನೆಗಳೂ ಕುಸಿಯಬಹುದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಧಾರಾಕಾರ ಮಳೆಯಾಗುವ ಸಂದರ್ಭದಲ್ಲಿ ಇಲ್ಲಿ ಜನರು ವಾಸ ಮಾಡುವುದು ಸೂಕ್ತವಲ್ಲ ಎಂಬುದು ಅವರ ಸೂಚನೆಯಾಗಿತ್ತು. ಈ ವರದಿ ಬಂದು 7 ವರ್ಷಗಳೇ ಕಳೆದಿವೆ. ಆರಂಭದ ನಾಲ್ಕು ವರ್ಷಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಯಿತು. ತದನಂತರ ವರದಿಯನ್ನು ಕಡೆಗಣಿಸಲಾಗಿದೆ ಅನಿಸುತ್ತದೆ.

ಬೆಟ್ಟದ ನಿವಾಸಿಗಳೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ ತಿಳಿಯದು. ಕಾಳಜಿ ಕೇಂದ್ರಕ್ಕೂ ಬಾರದೆ ‘ನಾವು ಬರುವುದಿಲ್ಲ. ಸತ್ತರೂ ಇಲ್ಲಿಯೇ ಸಾಯುತ್ತೇವೆ’ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.

ಇಲ್ಲಿನ ನಾಂಗಾಲ ಗ್ರಾಮದ ಬಳಿ ಭೂಮಿ ಖರೀದಿಸಿ ಜನರನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎಂದಿದ್ದ ಸರ್ಕಾರ ಈವರೆಗೂ ಅದರ ಗೋಜಿಗೇ ಹೋಗದಿರುವ ಪರಿಣಾಮ ಇಲ್ಲಿನ ಸುಮಾರು 64 ಕುಟುಂಬಗಳ ಸ್ಥಳಾಂತರ ಪ್ರಕ್ರಿಯೆ ಹಾಗೆಯೇ ಉಳಿದಿದೆ. ಸ್ಥಳಾಂತರ ಮಾಡುತ್ತೇವೆ ಎನ್ನುತ್ತಲೇ ನಾಲ್ಕು ವರ್ಷಗಳು ಉರುಳಿವೆ ಅಷ್ಟೇ. ಜಿಲ್ಲಾಡಳಿತ ಹಾಗೂ ಪುರಸಭೆ ಕಳೆದ ಐದಾರು ವರ್ಷಗಳಿಂದ ಯೆಲ್ಲೋ ಅಲರ್ಟ್, ರೆಡ್ ಅಲರ್ಟ್ ಎಂದು ಎಚ್ಚರಿಕೆಗಳನ್ನು ನೀಡುತ್ತಿದ್ದದ್ದನ್ನೂ ಈಗ ನಿಲ್ಲಿಸಿದೆ. ಎಚ್ಚರಿಕೆ ನೀಡಿದರೂ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸವಿರುವ ಈ ಪ್ರದೇಶದಲ್ಲಿ ಅದರ ಮಾಹಿತಿ ಸುಲಭವಾಗಿ ತಲುಪುತ್ತದೆ ಎಂಬ ಭರವಸೆ ಕಡಿಮೆ. ಮಳೆ ಬಂದರೆ ಸ್ಥಳಾಂತರ, ಮತ್ತೆ ಅಲ್ಲಿಯೇ ವಾಸ. ಇದರಿಂದ ಬೇಸತ್ತ ಇಲ್ಲಿನ ಜನರ ಉತ್ತರ ಈಗ ಒಂದೇ: ‘ನಾವು ಬೆಟ್ಟದ ಮೇಲೆ ಇದ್ದೇವೆ ಎಂದು ನಮ್ಮನ್ನು ಸ್ಥಳಾಂತರ ಮಾಡುತ್ತಾರೆ. ಅದೇ ಬೆಟ್ಟ ಕುಸಿದರೆ ಬೆಟ್ಟದ ತಪ್ಪಲಿನ ತೆಲುಗರ ಬೀದಿ, ದಬ್ಬನಿ ಮೊಹಲ್ಲಾ, ಸುಂಕದಕಟ್ಟೆ ಬೀದಿಯ ಜನರಿಗೂ ತೊಂದರೆಯಾಗುತ್ತದೆ ಅಲ್ಲವೇ? ಅವರನ್ನೂ ಏಕೆ ಕಾಳಜಿ ಕೆಂದ್ರಕ್ಕೆ ಕರೆತರುವುದಿಲ್ಲ?’ ಅವರ ಮಾತಿನಲ್ಲಿ ಅರ್ಥವಿಲ್ಲದಿಲ್ಲ. ಬೆಟ್ಟ ಕುಸಿದರೆ ಬೆಟ್ಟದ ತಪ್ಪಲಿನ ಜನರಿಗೂ ತೊಂದರೆಯೇ ಅಲ್ಲವೆ?

ಇಲ್ಲಿನ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಪ್ರತಿ ಮಳೆಗಾಲದಲ್ಲಿಯೂ ಅಪಾಯಕಾರಿ ಮನೆಗಳನ್ನು ಗುರುತಿಸಿ ಅವರನ್ನು ಕಾಳಜಿ ಕೇಂದ್ರಕ್ಕೆ ತರುವುದು, ಮಳೆ ಕಡಿಮೆಯಾದ ಮೇಲೆ ಅವರನ್ನು ಮನೆಗೆ ಕಳುಹಿಸುವುದರಲ್ಲಿಯೇ ಇದ್ದಾರೆ. ಹೀಗಾದರೆ ಅವರು ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವುದಾದರೂ ಹೇಗೆ?

ಕರ್ನಾಟಕದಲ್ಲಿ ಭೂ ಕುಸಿತಗಳು ಸಂಭವಿಸಬಹುದಾದ ಅಪಾಯಕಾರಿ 32 ಸ್ಥಳಗಳ ಪಟ್ಟಿಯಲ್ಲಿ ವಿರಾಜಪೇಟೆ ತಾಲ್ಲೂಕೂ ಇದೆ. ಇದನ್ನು ಅಧಿಕಾರಿಗಳು ಮನಗಾಣುವುದು ಅಗತ್ಯವಿದೆ. ಮಲೆತಿರಿಕೆ ಬೆಟ್ಟದ ಸಮೀಪ ವಯನಾಡಿನಂತೆ ಯಾವುದೇ ನದಿ ಹರಿಯುತ್ತಿಲ್ಲವಾದರೂ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ಬೆಟ್ಟದ ಮೇಲಿಂದ ಸಣ್ಣ ಸಣ್ಣ ತೊರೆಗಳು ಹರಿದು ಬರುತ್ತವೆ. ಮಳೆ ಹೆಚ್ಚಾದಂತೆ ಹರಿಯುವ ನೀರಿನ ಪ್ರಮಾಣವೂ ಮತ್ತು ರಭಸವೂ ಹೆಚ್ಚಾಗುತ್ತದೆ.

ಬೆಟ್ಟ ಅಪಾಯಕಾರಿಯಾಗಿ ಕಾಣುತ್ತಿದ್ದರೂ ಸರ್ಕಾರವಾಗಲಿ, ಅಧಿಕಾರಿ ಗಳಾಗಲಿ ಅಲ್ಲಿನ ಜನರನ್ನು ಯಾವ ರೀತಿ ರಕ್ಷಿಸಬಹುದು ಎಂಬುದರ ಬಗ್ಗೆ ಒಂದು ಸ್ಪಷ್ಟ ನಿಲುವು ಪಡೆದಿಲ್ಲ. ದುರ್ಘಟನೆ ಸಂಭವಿಸಿದ ಬಳಿಕ ಕಾರ್ಯಪ್ರವೃತ್ತರಾಗುವ ಬದಲು, ಮುನ್ನೆಚ್ಚರಿಕೆ ವಹಿಸಿದರೆ ಆಗುವ ಅನಾಹುತವನ್ನು ತಪ್ಪಿಸಬಹುದು.

ವಿರಾಜಪೇಟೆಯ ಈ ಬೆಟ್ಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಅಧಿಕೃತ ವರದಿ ಬಂದಿದೆ. ಕಳೆದ ವರ್ಷ ವಿರಾಜಪೇಟೆಯಲ್ಲಿ 935.76 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಹೆಚ್ಚು ಮಳೆಯಾಗಿದ್ದು, 2141.69 ಮಿ.ಮೀ. ದಾಖಲಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಷ್ಟೆಲ್ಲ ಮಾಹಿತಿ ಇದ್ದರೂ ಬೆಟ್ಟದ ಮೇಲಿನ ಹಾಗೂ ತಪ್ಪಲಿನ ಜನರ ರಕ್ಷಣೆಯ ಬಗ್ಗೆ ಜಿಲ್ಲಾಡಳಿತ ಯಾವುದೇ ಕಾಳಜಿ ವಹಿಸದೆ ಬೇಜವಾಬ್ದಾರಿ ತೋರುತ್ತಿದೆ. ಈಗ ಎಚ್ಚೆತ್ತುಕೊಂಡು ಅನಾಹುತ ಸಂಭವಿಸುವ ಮೊದಲು ಜನರ ರಕ್ಷಣೆಯಾಗಲಿದೆಯೇ? ಜನರಿಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ

ಆಂದೋಲನ ಡೆಸ್ಕ್

Recent Posts

ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ.!

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು…

1 min ago

ನಂಜುಂಡೇಶ್ವರ ದೇವಾಲಯದ ಹುಂಡಿ ಎಣಿಕೆ: 82 ಲಕ್ಷ ರೂ. ಕಾಣಿಕೆ ಸಂಗ್ರಹ

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜುಂಡೇಶ್ವರನ ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ…

19 mins ago

ಇರಾನ್-ಅಮೆರಿಕಾ ಯುದ್ಧ: ಮಂಡ್ಯದಲ್ಲಿ ಕಂಟ್ರೋಲ್ ರೂಂ

ಮಂಡ್ಯ: ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ…

25 mins ago

ಹನೂರು: ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಮನೋಜ್‌ ಕುಮಾರ್‌ ನೇತೃತ್ವದ ತಂಡ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಪಟ್ಟಣದ ಕ್ರಿಸ್ತರಾಜ ಶಾಲೆಯ ಶಿಕ್ಷಕ ಮನೋಜ್ ಕುಮಾರ್.ಪಿ. ಅವರು ರಾಷ್ಟ್ರೀಯ…

36 mins ago

ಜನಗಣತಿ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಜನಗಣತಿ ಕಾರ್ಯವು ರಾಷ್ಟçದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು…

52 mins ago

ಪರಿಸರ ಬಲಿಯಾಗದಂತೆ ಯೋಜನೆ ರೂಪುಗೊಳ್ಳಲಿ: ಸಂಜಯ್ ಗುಬ್ಬಿ

ಮಂಡ್ಯ: ಯಾವುದೇ ಅಭಿವೃದ್ಧಿ ಯೋಜನೆಯು ಪರಿಸರವನ್ನು ಬಲಿಗೊಟ್ಟು ರೂಪಿತವಾಗಬಾರದು. ಉದ್ದೇಶಿತ ಮೇಕೆದಾಟು ಯೋಜನೆಯಿಂದ ಕಾವೇರಿ ವನ್ಯಜೀವಿ ವಲಯದ ಸುಮಾರು 4,800…

1 hour ago