ಅಂಕಣ: ನಿನ್ನೆ, ಮೊನ್ನೆ ನಮ್ಮ ಜನ
ಜೆ.ಬಿ.ರಂಗಸ್ವಾಮಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ
ಮುಂದಿನ ಭಾಷಣವೇ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರದು. ಅವರೋ ವಿಹ್ವಲರಾಗಿದ್ದಾರೆ. ಭಾಷಣ ಏನಾಗುತ್ತೋ ಎಂಬ ಆತಂಕ ನವ ನಿರ್ಮಾಣದ ಹುಡುಗರದು.
ಹಾಸನದಲ್ಲಿ ಎಂಡಿಎನ್ರ ಮೊತ್ತ ಮೊದಲ ಸಾರ್ವಜನಿಕ ಭಾಷಣ ಆವತ್ತಿನದು. ಮೊದಲೆರಡು ಬಾರಿ ನಮ್ಮ ಲಾ ಕಾಲೇಜಿನಲ್ಲಿ ಮಾತಾಡಿದ್ದರು. ಅವೇನಿದ್ದರೂ ಕಾಲೇಜಿನ ಇಂಟಲೆಕ್ಚುಯೆಲ್ ಸೆಮಿನಾರಿಗೆ ಸರಿ. ಆದರಿದು ಸಾವಿರಾರು ಜನರ ಸಭೆ.
ನಿಧಾನವಾಗಿ ಮಾತು ಆರಂಭವಾಯಿತು. ಜೆಪಿ ಚಳವಳಿ ನಡೆಯುತ್ತಿರುವ ಐತಿಹಾಸಿಕ ಅವಶ್ಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಹೋದರು.
ಈ ಸಭೆ ನಡೆಯುವ ಹದಿನೈದು ದಿನಗಳ ಹಿಂದೆ ಪೊಲೀಸರು ಶಿವರಾಂ ಬಾಬು ಮತ್ತು ಮೂರ್ನಾಲ್ಕು ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಕಾರಣವೇ ಇಲ್ಲದೆ ಬಂಽಸಿ ಹಲ್ಲೆ ಮಾಡಿದ್ದರು. ಅವರು ಮಾಡಿದ್ದ ಅಪರಾಧವೆಂದರೆ ಲಾ ಕಾಲೇಜಿನ ಪಕ್ಕದ ಅಂಗಡಿ ಮಳಿಗೆಗಳ ಮೆಟ್ಟಿಲಿನ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದುದು.
ಆ ದಿನಗಳಲ್ಲಿ ಕೋಮು ಗಲಭೆ ನಡೆದಿತ್ತು. ಅಂಗಡಿಗಳೆಲ್ಲ ಮುಚ್ಚಿದ್ದವು. ರಾತ್ರಿ ಒಂಬತ್ತು ಗಂಟೆಗೆ ಲಾ ಕಾಲೇಜು ಮುಗಿದ ಮೇಲೆ ತಮ್ಮ ಪಾಡಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಜೀಪಿನಲ್ಲಿ ಗಸ್ತು ಬಂದ ಪೊಲೀಸರು ಏಕಾಏಕಿ ಆಕ್ರಮಣ ಮಾಡಿ ಹೊಡೆದು ಠಾಣೆಗೆ ಕರೆದೊಯ್ದು ರಾತ್ರಿಯಿಡೀ ಲಾಕಪ್ಪಿನಲ್ಲಿ ಅದುಮಿದ್ದಾರೆ.
ಮಾರನೇ ಸಂಜೆ ಲಾ ಕಾಲೇಜಿನ ಪ್ರಿನ್ಸಿಪಾಲರಾದ ಹಾರನಹಳ್ಳಿ ರಾಮಸ್ವಾಮಿ, ಪ್ರೊಫೆಸರ್ಗಳಾದ ಎಚ್.ಎಸ್.ಮುರಿಗಪ್ಪ, ಸಿ.ಎಸ್ .ಕೃಷ್ಣಸ್ವಾಮಿ, ಡಾ.ಮುನಿವೆಂಕಟೇಗೌಡ ಮುಂತಾದ ಪ್ರಮುಖರೆಲ್ಲ ಠಾಣೆಗೆ ಹೋಗಿ ನಡುರಾತ್ರಿಯ ತನಕ ಚರ್ಚಿಸಿ ಬಿಡಿಸಿಕೊಂಡು ಬರುವಂತಾಗಿತ್ತು.
ಅಲ್ಲೊಂದು awkward ಘಟನೆಯೊಂದು ನಡೆದಿತ್ತು. ಆಗಿನ ಎಸ್ಪಿ ಎಂ.ಡಿ.ಸಿಂಗ್ ಯುವ ಐಪಿಎಸ್ ಅ ಧಿಕಾರಿ. ಅದೇನೋ ಹೆಡಸು. ತಾನು ಪ್ರಾಮಾಣಿಕ ಎಂಬ ಸಲ್ಲದ ಧಿಮಾಕು. ಬಿಡಿಸಿಕೊಂಡು ಬರಲು ಹೋಗಿದ್ದ ಹಿರಿಯರನ್ನು ಏನೋ ಒಂದು ಬಗೆಯ ತಿರಸ್ಕಾರದಿಂದ ಕಂಡಿದ್ದಾರೆ. ಕೂತಿದ್ದ ಮನುಷ್ಯ, ಮಾತಿನ ಮಧ್ಯೆ ಎರಡೂ ಕಾಲುಗಳನ್ನು ಟೇಬಲ್ ಮೇಲೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಧಿಮಾಕಿನಿಂದ ಮಾತಾಡಿಸಿದ್ದಾರೆ.
ಹೋಗಿರುವವರೋ ಬರಿಯ ಕಾಲೇಜಿನ ಮುಖ್ಯಸ್ಥರಲ್ಲ. ಹಾಸನ ಜಿಲ್ಲೆಯ ಅತ್ಯಂತ ಪ್ರತಿಷ್ಠಿತ ಹಿರಿಯರು. ಸ್ವಾತಂತ್ರ್ಯ ಹೋರಾಟಗಾರರು. ಹಾರನಹಳ್ಳಿಯವರಂತೂ ಕಾರಂತರ ಕಾದಂಬರಿಗಳಲ್ಲಿ ಉಲ್ಲೇಖಿತವಾಗಿದ್ದ ಹೆಸರು. “”ಭೂಗತರು ಅಂದರೆ ನಿಟ್ಟೂರರೋ, ಹಾರನಹಳ್ಳಿಯವರೋ ಅಂತ ಭಾವಿಸಿದ್ದೆʼʼ ಎಂದು ಪಾತ್ರವೊಂದು ಉದ್ಗರಿಸುತ್ತದೆ. ಅಂತಹ ಗೌರವಾನ್ವಿತರನ್ನು ವೃಥಾ ಅವಮಾನಿಸಿದ್ದರೆಂದು ವಿದ್ಯಾರ್ಥಿಗಳು ಕನಲಿದ್ದರು.
ಹೀಗೆಯೇ ಕಳೆದ ವರ್ಷ ನಿಷ್ಕಾರಣವಾಗಿ ರಾಜು ಎಂಬ ವಿದ್ಯಾರ್ಥಿ ಯನ್ನು ಅಕ್ರಮವಾಗಿ ಬಂಧಿಸಿ, ಅವನ ಲಾಕಪ್ ಡೆತ್ಗೆ ಪೊಲೀಸರು ಕಾರಣರಾಗಿದ್ದರು (೫-೯-೧೯೭೩). ಪೊಲೀಸ್ ದೌರ್ಜನ್ಯ ದಬ್ಬಾಳಿಕೆ ಮಿತಿಮೀರಿತ್ತು.
ಇವೆರಡೂ ಘಟನೆಗಳನ್ನು ಬಹಿರಂಗ ಭಾಷಣದಲ್ಲಿ ಪ್ರಸ್ತಾಪಿಸಿದ ಎಂಡಿಎನ್ “” ಇಲ್ಲಿ ಕಂಡಾಬಟ್ಟೆ ಬಂದು ನಿಂತಿರುವ ಪೊಲೀಸರೇ ನಿಮಗೇ ಹೇಳ್ತಿದ್ದೀನಿ. ಮೊದಲು ಸರಿಯಾಗಿ ಕೇಳಿಸ್ಕಳಿ. ಸಕಾರಣವೇ ಇಲ್ಲದೇ ನಿರಪರಾಧಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ತದುಕುವ ನಿಮ್ಮ ದೌರ್ಜನ್ಯ ದಬ್ಬಾಳಿಕೆಗಳನ್ನು ಮೊದಲು ನಿಲ್ಲಿಸಿ”.
“”ಹಾಸನದ ಮರ್ಯಾದಗೇಡಿ ಎಸ್ಪಿಯಾಗಿರುವ ಎಂ.ಡಿ.ಸಿಂಗ್ ಎಂಬಾತನಿಗೆ ಈ ಮೂಲಕ ಎಚ್ಚರಿಕೆ ಕೊಡ್ತಿದ್ದೇನೆ. ಮೊದಲು ಕಾನೂನನ್ನು ಸರಿಯಾಗಿ ತಿಳಿದುಕೊಂಡು ಆಮೇಲೆ ಕೆಲಸ ಮಾಡಲಿ. ಈ ಸಿಂಗ್ ಮೊದಲು ತನ್ನ ಅವಿವೇಕಿ ಪೊಲೀಸರನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಕಾನೂನು ಏನು ಹೇಳುತ್ತೆ ಅದನ್ನು ಮೊದಲು ಪಾಠ ಮಾಡಲಿʼʼ!
“”ಯಾವುದೇ ವ್ಯಕ್ತಿಯನ್ನು ದಸ್ತಗಿರಿ ಮಾಡಿದರೆ ಇಪ್ಪತ್ತು ನಾಲ್ಕು ಗಂಟೆಯೊಳಗೆ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತೆ. ಅದು ಬೇಸಿಕ್ ಕಾನೂನುʼʼ.
“” ಯಾಕಾಗಿ ದಸ್ತಗಿರಿ ಮಾಡಿದ್ದೇನೆ ಎಂಬುದನ್ನು ಬಂಧಿತನಿಗೆ ತಿಳಿಯಪಡಿಸಬೇಕು. ಈ ಮಾತುಗಳನ್ನು ನಾನು ಜನಗಳಿಗೆ ಹೇಳ್ತಾ ಇಲ್ಲ. ಇಲ್ಲಿ ನಿಂತಿರೋ ಅವಿವೇಕಿ ಪೊಲೀಸರಿಗೆ ಎಚ್ಚರಿಕೆ ಕೊಡ್ತಿದ್ದೀನಿ!ʼʼ
“ಜನಗಳನ್ನು ದನಗಳಂತೆ ಹೊಡೆದು ಬಡಿದು ಮಾಡೋದಿಕ್ಕೆ ಪೊಲೀಸರಾದ ನಿಮಗೆ ಯಾವ ಅಽಕಾರವೂ ಇಲ್ಲ” ಎಂಬುದನ್ನು ಮೊದಲು ನೀವು ತಿಳ್ಕಳ್ಳಿ.
“ಇದ್ಯಾವುದೂ ಇಲ್ಲದೆ ಲಾಠಿ ಏಟು, ಬೂಟಿನೇಟು ಎಂದರೆ, ಜನಗಳೇ ಅದನ್ನು ನಿಮಗೆ ತಿರುಗಿಸಿ ಕೊಡ್ತಾರೆ ಎಚ್ಚರ!” ಎಂದರು.
ಆ ತಣ್ಣಗಿನ ದನಿ, ಅದರೊಳಗಿನ ಆ ಆಜ್ಞೆ ಹೇಗಿತ್ತೆಂದರೆ ಇಡೀ ಸಭೆ ಸ್ತಂಭೀಭೂತವಾಯಿತು. ಹೋಗಿ ಹೋಗಿ ಪೊಲೀಸರನ್ನು ಅವರೆದುರಿಗೇ ಅವಿವೇಕಿ ಎಂದೆಲ್ಲಾ ಪಬ್ಲಿಕ್ಕಾಗಿ ಬೈಯ್ಯುವುದುಂಟೇ? ಅದರಲ್ಲೂ 1970ರ ದಶಕ. ಪೊಲೀಸರೆಂದರೆ ಜನ ಹೆದರಿ ನಡುಗುತ್ತಿದ್ದ ಸಮಯ. ಜಿಲ್ಲೆಯ ಎಸ್ಪಿ ಸಿಂಗ್ ಅವರನ್ನು ಮ್ಯಾಡ್ ಸಿಂಗ್ ಎಂದು ಜನಗಳೆದುರು ಜರಿಯುವುದುಂಟೇ? ಕಳೆದ ವರ್ಷದ ಕಹಿ ನೆನಪಲ್ಲಿತ್ತು. ಲಾಠಿ ಚಾರ್ಜ್ ಆಗೇ ಬಿಡುತ್ತೇನೋ ಎಂಬ ಭಯ ನಮ್ಮೆಲ್ಲರನ್ನೂ ಬಾಧಿಸಿತು.
ಸಭೆಗೆ ನಗರದ ಪ್ರಮುಖರೆಲ್ಲಾ ಬಂದಿದ್ದರು. ಮೈಸೂರು ಪೇಟಾ ಧರಿಸಿ ಕುಳಿತಿದ್ದ ಹಿರಿಯ ವಕೀಲ ಎಸ್.ವಿ.ಪಟ್ಟಾಭಿಯವರು (ರಾಜಾಜಿಯವರ ಸ್ನೇಹಿತರ ಮಗ) ನನಗೆ ಕೈ ಸನ್ನೆ ಮಾಡಿ ಕರೆದರು.
“ಯಾವನಯ್ಯಾ ಈ ಒಣಕಲ? ಹುಚ್ಚನಂಗೆ ಮಾತಾಡ್ತಿದ್ದಾನೆ. ಪೊಲೀಸ್ನೋರ್ನ ಬಾಯಿಗೆ ಬಂದಂತೆ ಬಯ್ಯೋದು ಅಂದ್ರೆ ಹುಡುಗಾಟಾನಾ? ಅವರು ಸಿಕ್ಕಿದಂಗೆ ಜನಗಳ ಮೇಲೆ ಲಾಠಿ ಚಾರ್ಜ್ ಮಾಡಿದರೆ ಏನು ಗತಿ? ನಿಮ್ಮ ಡಾಕ್ಟರಿಗೆ (ಮುನಿವೆಂಕಟೇಗೌಡ) ಹೋಗಿ ಹೇಳು” ಎಂದರು.
ವೇದಿಕೆಯ ಮೇಲೆ ತೇಜಸ್ವಿಯ ಪಕ್ಕ ಕುಳಿತಿದ್ದ ಡಾಕ್ಟರಿಗೆ ಹೇಳಿದೆ. ಅವರೇನೂ ಮಾತಾಡಲಿಲ್ಲ. ವಧಾ ಸ್ಥಾನದಲ್ಲಿರುವಾತ ನೇಣಿನ ಕುಣಿಕೆ ನೋಡುವಂತೆ ಹತಾಶರಾಗಿ ನನ್ನತ್ತ ನೋಡಿದರು!
ಎಂಡಿಎನ್ರ ಭಾಷಣ ಪ್ರಹಾರ ನಿರರ್ಗಳವಾಗಿ ಮುಂದುವರಿದಿತ್ತು. “”ಸ್ವಾತಂತ್ರಾನಂತರ ಈವತ್ತಿನ ದಿನ ಇಡೀ ದೇಶಕ್ಕೆ ಬುದ್ಧಿ ಹೇಳುವ ಅರ್ಹತೆ ಯೋಗ್ಯತೆ ಇರೋದು ಜಯಪ್ರಕಾಶ್ ನಾರಾಯಣ್ ಅವರಿಗೆ ಮಾತ್ರ. ಅಂದು ಗಾಂಧಿ ಇಂದು ಜೇಪಿ ಎಂಬ ಸ್ಲೋಗನ್ ಇರೋದು ಸುಮ್ಮನೇ ಅಲ್ಲ”.
“ಜೇಪಿಯವರು ಈ ದೇಶದ ಪೊಲೀಸರಾದ ನಿಮಗೆಲ್ಲ ಒಂದು ಕರೆ ನೀಡಿದ್ದಾರೆ. ಸರಿಯಾಗಿ ಕೇಳಿಸ್ಕಳಿ. ನಿಮ್ಮ ಮೇಲಿನ ಅಽಕಾರಿಗಳು, ಮಂತ್ರಿಗಳು, ತಂತ್ರಿಗಳೇನಾದರೂ ಕಾನೂನು ಬಾಹಿರ ಆಜ್ಞೆಗಳನ್ನು ನೀಡಿದರೆ ಅದನ್ನು ಮೊದಲು ತಿರಸ್ಕರಿಸಿರಿ” ಎಂದು ಹೇಳಿದ್ದಾರೆ.
“ಪೊಲೀಸರೇ ನೀವಿರುವುದೇ ಕಾನೂನಿನ ರಕ್ಷಣೆಗಾಗಿ. ನಿಮ್ಮ ಅವಿವೇಕಿ, ಅಯೋಗ್ಯ ಅಽಕಾರಿಗಳು ಕುಡಿದ ಮತ್ತಿನಲ್ಲಿ ಏನೋ ಹೇಳಿದರೂ ಅಂತ ಕಾನೂನು ಬಾಹಿರ ಆದೇಶಗಳನ್ನು ಪಾಲಿಸಬೇಡಿ. ನೀವು ಹೇಳ್ತಿರೋದು ನ್ಯಾಯ ಬಾಹಿರ, ನೀತಿ ಬಾಹಿರ ಅಂತ ಮುಖಕ್ಕೇ ಹೇಳಿ ತಿರಸ್ಕರಿಸಿ. ಹಾಗೆ ತಿರಸ್ಕರಿಸುವುದು ನಿಮ್ಮ ಹಕ್ಕು!”
“ನೀವುಗಳಿರುವುದು ಸರ್ಕಾರದ ಗುಲಾಮರಂತೆ ಕೆಲಸ ಮಾಡುವುದಕ್ಕೆ ಅಲ್ಲ. ಸಂವಿಧಾನ ಪ್ರಣೀತವಾದ ಕಾನೂನುಗಳನ್ನು ಪಾಲಿಸುವುದಕ್ಕೆ. ನೀವು ಕಾನೂನಿನ ರಕ್ಷಕರೇ ಹೊರತು, ಯಾವುದೇ ಸರ್ಕಾರದ, ರಾಜಕಾರಣಿಗಳ ಗುಲಾಮರಲ್ಲ. ನೀವು ಕೆಲಸ ಮಾಡೋದು ಸಂವಿಧಾನ ಏನು ಹೇಳುತ್ತೋ ಅದನ್ನು ಪಾಲಿಸುವುದಕ್ಕೆ..”
ಮಾತಾಡುತ್ತಾ ಮಾತಾಡುತ್ತಾ ಅದೇನು ಸ್ಛೂರ್ತಿ ಬಂದಿತೋ? ರಾತ್ರಿ ೧೦.೨೦ ಗಂಟೆಯವರೆಗೂ ನಿರರ್ಗಳವಾಗಿ ಭಾಷಣ ಮಾಡಿದರು. ಇಡೀ ಸಭೆ ಮಂತ್ರಮುಗ್ಧವಾಗಿ ಅವರ ಮಾತುಗಳಿಗೆ ಕಿವಿಯಾಯಿತು.
ಜನಗಳಿರಲಿ, ಆ ಬಗೆಯ ನೇರ ನಿರ್ಭಿಡೆಯ ಭಾಷಣಗಳನ್ನು ನಾವೂ ಕೇಳಿರಲಿಲ್ಲ. ನಂಜುಂಡಸ್ವಾಮಿಯವರ ಮಾತುಗಳೇ ಹಾಗಿದ್ದವು. ಒಂದೊಂದೂ ಖಡಾಖಂಡಿತವಾದ ಸಿಡಿಗುಂಡುಗಳು. ಅದರಲ್ಲಿ ಕಾಠಿಣ್ಯ, ನಿಷ್ಠುರತೆ, ರಪ್ಪೆಂದು ಕಪಾಳಕ್ಕೇ ಬೀಸುವ ಛಾತಿ ಹೊಂದಿದ್ದವು. ಅವು ಯಾವನೋ ಅಜ್ಞಾನಿ, ಅವಿವೇಕಿ, ಪುಢಾರಿಯ ಪೊಳ್ಳು ಮಾತುಗಳಾಗಿರಲಿಲ್ಲ. ತುಂಬ ಸಾಂದ್ರವಾಗಿ, ವಿದ್ವತ್ತಿನ ಸ್ಪರ್ಶ ಹೊಂದಿದ್ದವು. ಯಾವುದೇ ನಾಯಕನಾಗಿರಲಿ. ತೆಗೆದು ಬೀಸಾಡುವಂಥ ಡೋಂಟ್ ಕೇರ್ ಛಾತಿ ಇತ್ತಲ್ಲಾ ಅದು ಅಪರೂಪದಲ್ಲಿ ಅಪರೂಪದ್ದು. ನಂತರದಲ್ಲಿ ರಾಮಕೃಷ್ಣ ಹೆಗಡೆ, ಪುಟ್ಟಣ್ಣಯ್ಯ ಮುಂತಾದವರೂ ಎಂಡಿಎನ್ ಶೈಲಿಯಲ್ಲಿ ಮಾತಾಡುತ್ತಿದ್ದರು. ಆದರೆ ಎಂಡಿಎನ್ರ ವಿದ್ವತ್ತು, ಜಗ್ಗಿಸಿ ಬೀಸಾಡುವ ಡೋಂಟ್ ಕೇರ್ ಮಾತಿನ ಹರಿತ ಅವರಲ್ಲಿರಲಿಲ್ಲ.
ಅಂದಿನ ಸಭೆಯೇ ಜೆಪಿಯವರ ನವ ನಿರ್ಮಾಣ ಕ್ರಾಂತಿಯ ಉದ್ಘಾಟನೆಗೆ ನಾಂದಿಯಾಯಿತು. ಎಂಡಿಎನ್ ಭಾಷಣದಿಂದಾಗಿ, ಸಾವಿರಾರು ಯುವಕರು ಆವತ್ತೇ ಅವರ ಅಭಿಮಾನಿಗಳಾದರು. ಆವರೆಗೆ ನೂರು ಮಂದಿಯೂ ಇರದಿದ್ದ ನಮ್ಮ ಸಂಘಟನೆ ಒಂದು ಕರೆ ನೀಡಿದರೆ ಸಾಕು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಬರುವಂತಾಯಿತು. ಅದೇ ಸ್ಛೂರ್ತಿಯಲ್ಲಿ ನಾವುಗಳೂ ಹೀರೋಗಳಂತೆ ಒಂದೆರಡು ತಿಂಗಳು ತಿರುಗುತ್ತಿದ್ದೆವು. ಪೊಲೀಸರನ್ನೂ ಕೇವಲವಾಗಿ ಮಾತಾಡಿಸುತ್ತಿದ್ದೆವು!
ಪ್ರತಿಫಲವಾಗಿ ನಾಲ್ಕಾರು ಯುವ ಮುಖಂಡರಾದ ನಮ್ಮಮೇಲೆ ರೌಡಿ ಷೀಟುಗಳು ತೆರೆಯಲ್ಪಟ್ಟವು.