ಅಂಕಣಗಳು

ಚತುರ್ಭಾಷಾ ಮಲಯಾಳಂ ನಿಘಂಟು ರಚನೆಗೆ ೨೫ ವರ್ಷ ಶ್ರಮಿಸಿದ ಬೀಡಿ ಕಾರ್ಮಿಕ!

ಮಲಯಾಳಂ-ತಮಿಳು-ಕನ್ನಡ-ತೆಲುಗು ಶಬ್ದಕೋಶ’ ಇದೊಂದು ಮಲಯಾಳಂನ ವಿಶಿಷ್ಟ ಶಬ್ದಕೋಶ. ಇದರಲ್ಲಿ ೧೬,೦೦೦ ಮಲಯಾಳಂ ಪದಗಳಿದ್ದು, ಅವುಗಳಿಗೆ ಮಲಯಾಳಂ ಸೇರಿ ಇತರ ಮೂರು ಸಹೋದರ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅರ್ಥಗಳಿವೆ. ಈ ಶಬ್ದಕೋಶದಲ್ಲಿರುವ ಒಟ್ಟು ಶಬ್ದಗಳು ೧.೨೫ ಲಕ್ಷ. ೯೦೦ ಪುಟಗಳಿರುವ ಇದರ ತೂಕ ೨.೨೫ ಕೆಜಿ. ಬೆಲೆ ೧,೫೦೦ ರೂಪಾಯಿ. ಇದನ್ನು ತಯಾರಿಸಿದವರು ಯಾವುದೇ ಭಾಷಾ ಪಂಡಿತರಾಗಲಿ, ನಿಘಂಟು ತಜ್ಞರಾಗಲಿ ಅಲ್ಲ. ಬದಲಿಗೆ, ನಾಲ್ಕನೇ ತರಗತಿಯಲ್ಲಿ ಫೇಲಾಗಿ ಶಾಲಾ ಶಿಕ್ಷಣ ಬಿಟ್ಟು, ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ಕೇರಳಿಗ!

ಕೇರಳದ ತಲಶೇರಿಯಲ್ಲಿ ೧೯೩೮ರಲ್ಲಿ ಜನಿಸಿದ ಎನ್.ಶ್ರೀಧರನ್ ನಾಲ್ಕನೇ ತರಗತಿಯಲ್ಲಿ ಫೇಲ್ ಆದಾಗ ಶಾಲೆ ಬಿಟ್ಟು, ಪಲಕ್ಕಾಡಿನ ಒಂದು ಬೀಡಿ ಫ್ಯಾಕ್ಟರಿಯಲ್ಲಿ ಬೀಡಿ ಕಟ್ಟುವ ಕೆಲಸಕ್ಕೆ ಸೇರಿದರು. ಶ್ರೀಧರನ್ ಶಾಲೆ ಬಿಟ್ಟರೂ ಓದುವುದನ್ನು ಬಿಟ್ಟಿರಲಿಲ್ಲ. ಬೀಡಿ ಕಟ್ಟುತ್ತಲೇ ಅವರು ಕೈಗೆ ಸಿಗುತ್ತಿದ್ದ ಮಲಯಾಳಂ ದಿನ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಓದುತ್ತಿದ್ದರು. ಬೀಡಿ ಕಟ್ಟುವ ಕಾಯಕದ ನಡುವೆಯೇ ಶ್ರೀಧರನ್ ಖಾಸಗಿಯಾಗಿ ಇಎಸ್‌ಎಲ್‌ಸಿ ಪರೀಕ್ಷೆ ಪಾಸು ಮಾಡಿ, ೧೯೭೨ರಲ್ಲಿ ಕೇರಳ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟನಲ್ಲಿ ಬ್ಲೂ ಪ್ರಿಂಟರ್ ಉದ್ಯೋಗ ಪಡೆದರು. ಸ್ಥಳೀಯ ಮಕ್ಕಳ ಸಂಸ್ಥೆಯೊಂದರ ಕಾರ್ಯದರ್ಶಿಯಾಗಿ ಒಂದು ರಾತ್ರಿ ಶಾಲೆ ತೆರೆದು ಶಾಲೆಗೆ ಹೋಗದ ಅಕ್ಕಪಕ್ಕದ ಮಕ್ಕಳು ಮತ್ತು ವಯಸ್ಕರಿಗೆ ಕಲಿಸ ತೊಡಗಿದರು. ಮುಂದೆ ಕಮ್ಯುನಿಸ್ಟ್ ಪಕ್ಷ ಸೇರಿ, ಮೂರು ಬಾರಿ ಜೈಲಿಗೆ ಹೋಗಿ ಬಂದರು.

೧೯೫೭ರಲ್ಲಿ ಕೇರಳದಲ್ಲಿ ಪ್ರಪ್ರಥಮ ಬಾರಿಗೆ ಇಎಮ್‌ಎಸ್ ನಂಬೂದ್ರಿಪಾಡ್‌ರ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಅಽಕಾರಕ್ಕೆ ಬರುವ ಮೊದಲೇ ಶ್ರೀಧರನ್ ನೂರಾರು ಅನಕ್ಷರಸ್ಥ ಮಕ್ಕಳು ಮತ್ತು ವಯಸ್ಕರಿಗೆ ಓದುವುದು ಮತ್ತು ಬರೆಯುವುದನ್ನು ಕಲಿಸಿದ್ದರು. ಶ್ರೀಧರನ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟನಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ನಿರ್ಮಲಗಿರಿ ಕಾಲೇಜಿನ ಡಾ.ಟಿ.ಪಿ.ಸುಕುಮಾರನ್ ಎಂಬ ಪ್ರೊಫೆಸರ್ ಒಬ್ಬರ ಜತೆ ಒಡನಾಟವಾಯಿತು. ಶ್ರೀಧರನ್‌ರ ಓದುವ, ಬರೆಯುವ, ಕಲಿಸುವ ಹವ್ಯಾಸವನ್ನು ನೋಡಿದ ಡಾ.ಸುಕುಮಾರನ್, ಮಲಯಾಳಂನಲ್ಲಿ ಮಲಯಾ ಂ-ತಮಿಳು-ಕನ್ನಡ-ತೆಲುಗು ಭಾಷೆಗಳ ಒಂದು ಚತುರ್ಭಾಷಾ ಶಬ್ದಕೋಶವನ್ನು ತರಲು ಅವರಿಗೆ ಸಲಹೆ ನೀಡಿದರು. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಶ್ರೀಧರನ್ ೧೯೮೨ರಲ್ಲಿ ಆ ನಿಘಂಟಿನ ಕೆಲಸವನ್ನು ಪ್ರಾರಂಭಿಸಿದರು. ಆಗ ಅವರಿಗೆ ೪೨ ವರ್ಷ ಪ್ರಾಯ.

ಶ್ರೀಧರನ್ ಬೀಡಿ ಕಟ್ಟುತ್ತಿದ್ದ ಫ್ಯಾಕ್ಟರಿಯಲ್ಲಿ ಮಲಯಾಳಂ ಪತ್ರಿಕೆಗಳ ಜೊತೆ ತಮಿಳು ಪತ್ರಿಕೆಗಳೂ ಓದಲು ಸಿಗುತ್ತಿದ್ದವು. ಶ್ರೀಧರನ್ ನಿಧಾನವಾಗಿ ತಮಿಳು ಪತ್ರಿಕೆಗಳನ್ನು ಓದುತ್ತ ಹಾಗೂ ಬೀಡಿ ಫ್ಯಾಕ್ಟರಿಯ ಪಕ್ಕದಲ್ಲಿ ಒಂದು ಕ್ಷೌರದ ಅಂಗಡಿ ನಡೆಸುತ್ತಿದ್ದ ಆರುಚಾಮಿ ಎಂಬ ತಮಿಳಿಗನಿಂದ ಮತ್ತು ತಮ್ಮ ತಮಿಳು ಭಾಷಿಕ ಸಹದ್ಯೋಗಿಗಳ ಒಡನಾಟದಲ್ಲಿ ತಮಿಳು ಭಾಷೆಯನ್ನು ಕಲಿತಿದ್ದರು. ಕನ್ನಡ ಮತ್ತು ತೆಲುಗು ಭಾಷೆಗಳು ಬಾರದ ಕಾರಣ ಅವೆರಡೂ ಭಾಷೆಗಳನ್ನು ಕಲಿಯಲು ಪ್ರಾರಂಭಿಸಿದರು. ಗೋವಿಂದ ನಾಯ್ಕ್ ಅನ್ನುವ ಅವರ ಸಹೋದ್ಯೋಗಿಯೊಬ್ಬರಿಂದ ಮಾತಾಡುವ ಅಷ್ಟು ಕನ್ನಡ ಕಲಿತರು. ನಂತರ, ಮೈಸೂರಿಗೆ ಹೋಗಿ ಅಲ್ಲಿ ಕೆಲಕಾಲವಿದ್ದು ತನ್ನ ಕನ್ನಡ ಜ್ಞಾನವನ್ನು ಹೆಚ್ಚಿಸಿಕೊಂಡರು. ಕಾಸರಗೋಡು ಮೂಲದ ಲೇಖಕ ರಾಘವನ್ ಎಂಬವರಿಂದ ತನ್ನ ಕನ್ನಡ ಕಲಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡರು. ಅದರ ನಂತರ, ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಕೆಲಕಾಲ ನೆಲೆಸಿ ತೆಲುಗು ಕಲಿತರು.

ಆಗ ತಲಶೇರಿಯಲ್ಲಿ ಕನ್ನಡ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳು ಸಿಗುತ್ತಿದ್ದರೂ ಇತರ ದ್ರಾವಿಡ ಭಾಷೆಗಳ ಪತ್ರಿಕೆಗಳು ಲಭ್ಯವಿರುತ್ತಿರಲಿಲ್ಲ. ಶ್ರೀಧರನ್ ಬೀಡಿ ಕಟ್ಟುತ್ತಲೇ ತನಗೆ ಸಿಗುತ್ತಿದ್ದ ಪತ್ರಿಕೆಗಳನ್ನು ಓದುತ್ತ ಪದಗಳನ್ನು ಗುರುತು ಹಾಕಿಕೊಳ್ಳುತ್ತಿದ್ದರು. ಇತರ ಸುಮಾರು ೨೦-೨೫ ಶಬ್ದಕೋಶಗಳಿಂದ ಶಬ್ದಗಳನ್ನು ಹೆಕ್ಕಿ ತೆಗೆದರು. ನಾಲ್ಕೂ ದ್ರಾವಿಡ ಭಾಷೆಗಳ ನಿಯತಕಾಲಿಕೆಗಳಿಂದ ಪದಗಳನ್ನು ಆರಿಸಿಕೊಂಡರು. ಅಡುಗೆ ಪುಸ್ತಕಗಳಿಂದ ಹಿಡಿದು ಜಾತಕ ಪುಸ್ತಕಗಳನ್ನೂ ಓದಿದರು.

ಮುಂದೆ, ೧೯೯೪ರಲ್ಲಿ ಶ್ರೀಧರನ್ ತನ್ನ ಉದ್ಯೋಗದಿಂದ ನಿವೃತ್ತರಾದ ಮೇಲೆ ತನ್ನೆಲ್ಲಾ ಸಮಯ ಮತ್ತು ಶಕ್ತಿಯನ್ನು ಆ ಚತುರ್ಭಾಷಾ ನಿಘಂಟನ್ನು ರಚಿಸುವುದರತ್ತ ಕೇಂದ್ರೀಕರಿಸಿದರು. ಪ್ರತಿ ದಿನ ಬೆಳಗ್ಗಿನ ಆರು ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ನಿಘಂಟಿನ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಎಷ್ಟೆಂದರೆ, ಈ ಸಮಯದಲ್ಲಿ ಅವರು ಯಾರೊಂದಿಗೂ ಮಾತಾಡುತ್ತಿರಲಿಲ್ಲ; ಯಾರನ್ನೂ ಭೇಟಿಯಾಗುತ್ತಿರಲಿಲ್ಲ; ಊಟ, ತಿಂಡಿ ಮೊದಲಾಗಿ ತನ್ನ ದಿನನಿತ್ಯದ ಅಗತ್ಯಗಳನ್ನೂ ಕಡೆಗಣಿಸಿದರು. ಮುಂದಿನ ಹಲವು ವರ್ಷಗಳ ಕಾಲ ಇದು ನಡೆಯಿತು.

೧೯೮೨ರಲ್ಲಿ ಶುರುವಾದ ಅವರ ಕೆಲಸ ೨೦೦೮ರಲ್ಲಿ ಪೂರ್ಣಗೊಂಡಿತು. ಆದರೆ, ನಿಘಂಟನ್ನು ಪ್ರಕಟಿಸುವುದು ಶ್ರೀಧರನ್‌ಗೆ ಇನ್ನೊಂದು ಬಹು ದೊಡ್ಡ ಹೊರೆಯಾಗಿ ಪರಿಣಮಿಸಿತು. ಹಲವಾರು ಪ್ರಕಾಶಕರನ್ನು ಕೇಳಿಕೊಂಡರೂ ಯಾರೊಬ್ಬರೂ ಅದನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ೨೦೧೨ರಲ್ಲಿ ಕೇರಳ ಭಾಷಾ ಸಂಸ್ಥೆಯು ಅವರ ಹಸ್ತ ಪ್ರತಿಯನ್ನು ಪಡೆದು, ಮಲಯಾಳಂ-ತಮಿಳು ಶಬ್ದಕೋಶವನ್ನು ಪ್ರಕಟಿಸಿತು. ಆದರೆ, ಶ್ರೀಧರನ್ ಯೋಜಿಸಿದಂತೆ ಮಲಯಾಳಂ -ತಮಿಳು-ಕನ್ನಡ-ತೆಲುಗು ಶಬ್ದಕೋಶವನ್ನು ಪ್ರಕಟಿಸುವ ಆಸಕ್ತಿಯನ್ನು ಅದು ತೋರಿಸಲಿಲ್ಲ. ಅದೇ ಸಮಯದಲ್ಲಿ ಶ್ರೀಧರನ್‌ಗೆ ಪಾರ್ಶ್ವವಾಯು ತಗಲಿತು. ಅದೇ ಹೊತ್ತಿಗೆ ಅವರಿಗೆ ಇನ್ನೊಂದು ಆಘಾತವಾಯಿತು. ಕೇರಳ ಭಾಷಾ ಸಂಸ್ಥೆಯ ನಿರ್ದೇಶಕರು ನಿಘಂಟಿನ ಹಸ್ತಪ್ರತಿ ಕಾಣೆಯಾಯಿತು ಎಂದು ಅವರಿಗೆ ಹೇಳಿದರು. ಸಿಟ್ಟಾದ ಶ್ರೀಧರನ್ ಸಂಸ್ಥೆಯ ಮೇಲೆ ಕಾನೂನು ಕ್ರಮ ನಡೆಸಲು ಮುಂದಾಗಿ ಅದಕ್ಕೆ ಲಾಯರ್ ನೋಟಿಸ್ ಕೊಟ್ಟರು. ೨೦೧೪ರಲ್ಲಿ ಹಸ್ತಪ್ರತಿ ಸಿಕ್ಕಿತು. ಮುಂದೆ, ಕೇರಳದ ‘ಸೀನಿಯರ್ ಸಿಟಿಜನ್ಸ್ -ರಂ’ ಎಂಬ ಹಿರಿಯ ನಾಗರಿಕರ ಸಂಘಟನೆಯೊಂದು ಧನ ಸಹಾಯ ನೀಡಿದ ಕಾರಣ ೨೦೨೦ರ ನವೆಂಬರ್ ೧ರಂದು ನಿಘಂಟು ಪ್ರಕಟವಾಯಿತು. ನವೆಂಬರ್ ೧ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಿದರೆ ಕೇರಳದಲ್ಲಿ ‘ಪಿರಾವಿ ದಿನ’ವಾಗಿ ಆಚರಿಸಲ್ಪಡುತ್ತದೆ.

ಶ್ರೀಧರನ್‌ರ ನಿಘಂಟಿನಲ್ಲಿ ಪ್ರತಿಯೊಂದು ಮಲಯಾಳಂ ಶಬ್ದಕ್ಕೆ ತಮಿಳು, ತೆಲುಗು ಮತ್ತು ಕನ್ನಡ ಅರ್ಥಗಳಿವೆ. ಕೆಲವು ಶಬ್ದಗಳಿಗೆ ಒಂದು ಭಾಷೆಯಲ್ಲಿ ಸುಲಭದಲ್ಲಿ ಅರ್ಥಗಳು ಸಿಗುತ್ತಿದ್ದರೂ ಕೆಲವು ಭಾಷೆಗಳಲ್ಲಿ ಅವುಗಳಿಗೆ ಅರ್ಥ ಹುಡುಕಲು ಶ್ರೀಧರನ್ ವರ್ಷಗಟ್ಟಲೆ ತಿಣುಕಾಡಬೇಕಾಗುತ್ತಿತ್ತು. ಉದಾಹರಣೆಗೆ, ಮಹಿಳೆಯರು ಬೈತಲೆ ತೆಗೆದು ಸಿಂಧೂರ ಹಚ್ಚಿಕೊಳ್ಳುವುದಕ್ಕೆ ಮಲಯಾಳಂನಲ್ಲಿ ‘ಸೀಮಂತ ರೇಖಾ’ ಎನ್ನುತ್ತಾರೆ. ಶ್ರೀಧರನ್ ಅದಕ್ಕೆ ಕನ್ನಡ ಮತ್ತು ತೆಲುಗು ಹೆಸರುಗಳನ್ನು ಸುಲಭದಲ್ಲಿ ಹುಡುಕಿಕೊಂಡರಾದರೂ ತಮಿಳಿನಲ್ಲಿ ಅದನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಪತ್ತೆ ಹಚ್ಚಲು ಅವರಿಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಹೀಗೆ ಸುಮಾರು ಆರು ವರ್ಷಗಳ ಕಾಲ ಆ ಪದದ ಹಿಂದೆ ಬಿದ್ದರೂ ಎಲ್ಲಿಯೂ ಅವರಿಗೆ ಅದರ ತಮಿಳು ಹೆಸರು ಸಿಗಲಿಲ್ಲ. ಕೊನೆಗೆ, ಒಬ್ಬಳು ತಮಿಳು ಮಹಿಳೆ ಅದನ್ನು ಕೇಳಿ ಮೊದಲು ನಕ್ಕಳಾದರೂ ನಂತರ ಅವಳೇ ತಮಿಳಿನಲ್ಲಿ ಅದಕ್ಕೆ ‘ವಾಕಿಡು’ ಎಂದು ಹೇಳುತ್ತಾರೆ ಎಂಬುದನ್ನು ಶ್ರೀಧರನ್‌ಗೆ ತಿಳಿಸಿದರು.

ಹರ್ಮನ್ ಗುಂಡರ್ಟ್ ಎಂಬವರು ೧೮೭೨ರಲ್ಲಿ ಪ್ರಪ್ರಥಮ ಮಲಯಾಳಂ -ಇಂಗ್ಲಿಷ್ ಶಬ್ದಕೋಶವನ್ನು ರಚಿಸಿದರು. ಅದನ್ನು ಅವರು ರಚಿಸಿದ್ದು ಇದೇ ತಲಶೇರಿಯಲ್ಲಿ. ಹಾಗಾಗಿ, ಶ್ರೀಧರನ್, ಹರ್ಮನ್ ಗುಂಡರ್ಟ್‌ರ ಆತ್ಮ ತನ್ನಲ್ಲಿ ಹೊಕ್ಕು ಈ ಕೆಲಸವನ್ನು ಮಾಡಿತು ಎಂದು ತಮಾಷೆ ಮಾಡುತ್ತಾರೆ. ಆದರೆ, ಶ್ರೀಧರನ್ ಮತ್ತು ಹರ್ಮನ್ ನಡುವಿನ ವ್ಯತ್ಯಾಸವೇನೆಂದರೆ, ಹರ್ಮನ್ ಭಾಷಾ ಪಂಡಿತನಾಗಿದ್ದನು. ಆದರೆ, ಶ್ರೀಧರನ್ ನಾಲ್ಕನೇ ತರಗತಿ ತನಕ ಓದಿದ ಒಬ್ಬ ಸಾಮಾನ್ಯ ವ್ಯಕ್ತಿ.

ಬೆಂಗಳೂರು ಮೂಲದ ಸಿವಿಲ್ ಎಂಜಿನಿಯರ್ ಆಗಿದ್ದು ಈಗ ಫಿಲ್ಮ್ ಮೇಕರ್ ಆಗಿರುವ ನಂದನ್ ಎನ್ನುವವರು ಶ್ರೀಧರನ್ ಮೇಲೆ ‘ಡ್ರೀಮಿಂಗ್ ಆಫ್ ವರ್ಡ್ಸ್’ ಎಂಬ ಹೆಸರಿನ ಒಂದು ಸಾಕ್ಷ  ಚಿತ್ರವನ್ನು ಮಾಡಿದ್ದಾರೆ. ಆ ಚತುರ್ಭಾಷಾ ನಿಘಂಟಿಗಾಗಿ ತಮ್ಮ ಬದುಕಿನ ೨೫ ವರ್ಷಗಳನ್ನು ಧಾರೆ ಎರೆದ ಶ್ರೀಧರನ್‌ಗೆ ಈಗ ೮೨ರ ಪ್ರಾಯ. ಪಾರ್ಶ್ವವಾಯುನಿಂದ ಅವರು ಚೇತರಿಸಿದ್ದಾರಾದರೂ ಅದರ ಪರಿಣಾಮವಾಗಿ ಅವರು ತಮ್ಮ ನೆನಪಿನ ಶಕ್ತಿಯನ್ನು ಗಣನೀಯವಾಗಿ ಕಳೆದುಕೊಂಡಿದ್ದಾರೆ

” ೧೯೮೨ರಲ್ಲಿ ಶುರುವಾದ ಅವರ ಕೆಲಸ ೨೦೦೮ರಲ್ಲಿ ಪೂರ್ಣಗೊಂಡಿತು. ಆದರೆ, ನಿಘಂಟನ್ನು ಪ್ರಕಟಿಸುವುದು ಶ್ರೀಧರನ್‌ಗೆ ಇನ್ನೊಂದು ಬಹು ದೊಡ್ಡ ಹೊರೆಯಾಗಿ ಪರಿಣಮಿಸಿತು. ಹಲವಾರು ಪ್ರಕಾಶಕರನ್ನು ಕೇಳಿಕೊಂಡರೂ ಯಾರೊಬ್ಬರೂ ಅದನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ೨೦೧೨ರಲ್ಲಿ ಕೇರಳ ಭಾಷಾ ಸಂಸ್ಥೆಯು ಅವರ ಹಸ್ತ ಪ್ರತಿಯನ್ನು ಪಡೆದು, ಮಲಯಾಳಂ-ತಮಿಳು ಶಬ್ದಕೋಶವನ್ನು ಪ್ರಕಟಿಸಿತು. ಆದರೆ, ಶ್ರೀಧರನ್ ಯೋಜಿಸಿದಂತೆ ಮಲಯಾಳಂ-ತಮಿಳು-ಕನ್ನಡ-ತೆಲುಗು ಶಬ್ದಕೋಶವನ್ನು ಪ್ರಕಟಿಸುವ ಆಸಕ್ತಿಯನ್ನು ಅದು ತೋರಿಸಲಿಲ್ಲ”

ಆಂದೋಲನ ಡೆಸ್ಕ್

Recent Posts

ಬಳ್ಳಾರಿ ಬ್ಯಾನರ್‌ ಗಲಾಟೆ | ಕೈ ಕಾರ್ಯಕರ್ತನಿಗೆ ಗುಂಡೇಟು ; ಸಾವು, ಉದ್ವಿಗ್ನ ವಾತಾವರಣ

ಬಳ್ಳಾರಿ : ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ…

2 hours ago

ವಾಲ್ಮೀಕಿ ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಗುಂಪುಗಳ ನಡುವೆ ಮಾರಾಮಾರಿ ; ಗಾಳಿಯಲ್ಲಿ ಗುಂಡು , ಓರ್ವನಿಗೆ ಗಾಯ

ಬಳ್ಳಾರಿ : ಜನಾರ್ಧನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು,…

3 hours ago

ನಂಜೇದೇವನಪುರ : ಹುಲಿಗಳ ಕೂಂಬಿಂಗ್ ಗೆ ಬಂದಿದ್ದ ಆನೆಗಳು ವಾಪಸ್

ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್…

4 hours ago

ಮೈಸೂರಿನ ನೂತನ ಎಸ್‌ಪಿಯಾಗಿ ಅಧಿಕಾರಿ ಸ್ವೀಕರಿಸಿದ ಮಲ್ಲಿಕಾರ್ಜುನ್‌ ಬಾಲದಂಡಿ

ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಮಂಡ್ಯ ಜಿಲ್ಲೆಯ ಎಸ್‌ಪಿ…

4 hours ago

ಗುಂಡ್ಲುಪೇಟೆ ಪಟ್ಟಣದ ರಸ್ತೆಗೆ ನಾಗರತ್ನಮ್ಮ ಹೆಸರಿಡಿ ಪುತ್ಥಳಿ ನಿರ್ಮಿಸಿ : ವಾಟಾಲ್ ಆಗ್ರಹ

ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.‌ನಾಗರತ್ನಮ್ಮ ಅವರ…

5 hours ago

ಅಧಿಕ ಭಾರಹೊತ್ತು ಸಾಗುವ ಟಿಪ್ಪರ್‌ಗಳು ; ಅಧಿಕಾರಿಗಳು ಮೌನ

ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್…

5 hours ago