ಅಂಕಣಗಳು

ಬಾಂಗ್ಲಾ ಬಿಕ್ಕಟ್ಟು ಭಾರತಕ್ಕೆ ತಂದಿದೆ ಸಂಕಷ್ಟ

ಶಿವಾಜಿ ಗಣೇಶನ್‌

ನಿತ್ಯವೂ ಪಕ್ಕದ ಮನೆಯಲ್ಲಿ ಜಗಳ ನಡೆಯುತ್ತಿದ್ದರೆ ನೆರೆಹೊರೆಯ ಮನೆಯವರಿಗೂ ನೆಮ್ಮದಿ ಇರುವುದಿಲ್ಲ. ಇದು ಬಾಂಗ್ಲಾದೇಶದಲ್ಲಿ ಆಗಿರುವ ರಾಜಕೀಯ ಬದಲಾವಣೆಯಿಂದ ಭಾರತಕ್ಕಾಗುತ್ತಿರುವ ಕಹಿ ಅನುಭವ. ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟದಿಂದಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ತಾತ್ಕಾಲಿಕ ಆಶ್ರಯ ಕೇಳಿ ಭಾರತಕ್ಕೆ ಬಂದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಗಮನದಿಂದ ಆಗಿರುವ ಬೆಳವಣಿಗೆ ಮತ್ತು ಆ ದೇಶದಲ್ಲಿನ ಬದಲಾದ ರಾಜಕೀಯ ಪರಿಸ್ಥಿತಿ, ಬಿಕ್ಕಟ್ಟು, ತಾತ್ಕಾಲಿಕ ಆಡಳಿತ ವ್ಯವಸ್ಥೆ ಭಾರತಕ್ಕೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿದೆ.

ಬಾಂಗ್ಲಾದೇಶದಲ್ಲಿನ ಈ ರಾಜಕೀಯ ಬೆಳವಣಿಗೆಯಿಂದ ಅಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅಲ್ಲಿ ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ಹೇಗೆ ಬಗೆಹರಿಯುತ್ತದೆ ಎಂಬುದು ಕುತೂಹಲಕಾರಿ ಸಂಗತಿ.

ಸ್ವಾತಂತ್ರ್ಯ ಯೋಧರಿಗೆ, ಅವರ ಕುಟುಂಬದವರಿಗೆ ಶೇ.30 ಸೇರಿದಂತೆ ಆಡಳಿತ ಪಕ್ಷ ಮಾಡಿಕೊಂಡಿದ್ದ ಶೇ.56 ಮೀಸಲಾತಿ, ಹೆಚ್ಚುತ್ತಿರುವ ನಿರುದ್ಯೋಗ, ಹದಗೆಟ್ಟಿರುವ ಆರ್ಥಿಕ ಸಮಸ್ಯೆಯಿಂದಾಗಿ ಭುಗಿಲೆದ್ದ ವಿದ್ಯಾರ್ಥಿಗಳ ಚಳವಳಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಹೋಗುವಂತೆ ಮಾಡಿರುವುದು ಅಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಬಗೆಹರಿಯಲಾರದಂತೆ ಬಿರುಸುಗೊಂಡ ವಿದ್ಯಾರ್ಥಿ ಚಳವಳಿಗೆ ತಲೆಬಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವಲ್ಪದಿನಗಳ ಆಶ್ರಯ ನೀಡುವಂತೆ ಶೇಖ್ ಹಸೀನಾ ಭಾರತಕ್ಕೆ ಬಂದಿದ್ದಾರೆ. ಆಶ್ರಯ ನೀಡುವಂತೆ ಕೋರಿದ್ದ ಶೇಖ್ ಹಸೀನಾ ಅವರ ಮನವಿಯನ್ನು ಬ್ರಿಟನ್ ದೇಶ ತಳ್ಳಿಹಾಕಿದೆ. ಪಾಕಿಸ್ತಾನದಿಂದ ತಲೆಮರೆಸಿಕೊಂಡು ಬಂದಿದ್ದ ಮಾಜಿ ಪ್ರಧಾನಿಗಳಾದ ದಿವಂಗತ ಬೆನಜೀರ್ ಭುಟ್ಟೋ, ನವಾಜ್ ಶರೀಫ್, ಜನರಲ್ ಮುಷರಫ್, ಇಮಾನ್ ಖಾನ್ ಮುಂತಾದ ನಾಯಕರಿಗೆ ಆಶ್ರಯ ನೀಡಿದ್ದ ಬ್ರಿಟನ್ ಈ ಬಾರಿ ಜೀವ ಉಳಿಸಿಕೊಳ್ಳಲು ದೇಶ ತೊರೆದು ಬಂದಿರುವ ಶೇಖ್ ಹಸೀನಾ ಅವರಿಗೆ ನೆಮ್ಮದಿಯ ತಾಣ ನೀಡಲು ನಿರಾಕರಿಸಿದೆ. ಇದು ಶೇಖ್ ಹಸೀನಾ ಅವರ ಮುಂದಿರುವ ಸಮಸ್ಯೆ.

ಶೇಖ್ ಹಸೀನಾ ರಾಜೀನಾಮೆ ಮತ್ತು ಅವರ ಸರ್ಕಾರದ ಪತನ, ಕೂಡಲೇ ಸೇನೆಯು ಅಲ್ಲಿನ ಆಡಳಿತವನ್ನು ಕೈಗೆತ್ತಿಕೊಂಡ ಮೇಲೆ ಅಲ್ಲಿನ ಅಧ್ಯಕ್ಷರು ನೊಬೆಲ್ ಪ್ರಶಸ್ತಿ ಪುರಸ್ಕೃತಮಹಮದ್ ಯೂನಸ್ ಅವರನ್ನು ತಾತ್ಕಾಲಿಕವಾಗಿ ಪ್ರಧಾನಿಯನ್ನಾಗಿ ನೇಮಿಸಿದ್ದಾರೆ. ಭಾರತದ ಮಿತ್ರ ರಾಷ್ಟ್ರವಾಗಿದ್ದ ಜನತಂತ್ರದಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಅವಾಮಿ ಲೀಗ್ ಪಕ್ಷದ ಆಡಳಿತ ಈಗ ಕೊನೆಗೊಂಡಿದೆ. ಹಿಂಸಾಚಾರದಿಂದ ನಡೆದ ವಿದ್ಯಾರ್ಥಿ ಚಳವಳಿಯಿಂದ ಸುಮಾರು19 ಸಾವಿರದಷ್ಟಿರುವ ಅಲ್ಪಸಂಖ್ಯಾತರಾದ ಹಿಂದೂ ಧರ್ಮೀಯರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವುದು ಭಾರತವನ್ನು ಆತಂಕಕ್ಕೀಡು ಮಾಡಿದೆ. ಜೊತೆಗೆ ಅಲ್ಲಿನ ಹಿಂದೂ ದೇವಾಲಯಗಳನ್ನು ನಾಶಮಾಡಲಾಗು ತ್ತಿದೆ ಎಂಬ ವರದಿಗಳಿವೆ. ಈ ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಹಿಂದೂಗಳ ರಕ್ಷಣೆಗೆ ಬಾಂಗ್ಲಾದ ತಾತ್ಕಾಲಿಕ ಆಡಳಿತ ವ್ಯವಸ್ಥೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಲೋಕಸಭೆಯಲ್ಲಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದ ವಿದ್ಯಾರ್ಥಿಗಳು ಸುರಕ್ಷಿತ ವಾಗಿ ಭಾರತಕ್ಕೆ ಮರಳಿದ್ದಾರೆಂಬ ಸರ್ಕಾರದ ಹೇಳಿಕೆಯು ವಿದ್ಯಾರ್ಥಿಗಳ ಪೋಷಕರಿಗೆ ನೆಮ್ಮದಿ ತಂದಿದೆ.

ಬಾಂಗ್ಲಾದಲ್ಲಿ ಮತ್ತೆ ಯಾವಾಗ ಚುನಾವಣೆ ನಡೆದು ಜನತಂತ್ರ ವ್ಯವಸ್ಥೆ ಬರಲಿದೆ. ಎನ್ನುವ ಬಗ್ಗೆ ಈಗಲೇ ಏನೂ ಹೇಳಲಾಗದ ಪರಿಸ್ಥಿತಿ ಇದೆ. ಬಾಂಗ್ಲಾದ ಈ ಬದಲಾವಣೆಯಿಂದ ನೆರೆ ರಾಷ್ಟ್ರಗಳ ಪೈಕಿ ಶತ್ರು ರಾಷ್ಟ್ರಗಳು ಬಲಗೊಳ್ಳುವ ಪರಿಸ್ಥಿತಿ ಎದುರಾಗಿಬಿಡುವುದೇ ಎನ್ನುವ ಪ್ರಶ್ನೆ ಭಾರತವನ್ನು ಕಾಡುತ್ತಿದೆ. ಈಗಾಗಲೇ ಚೀನಾ, ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ನೇಪಾಳ, ಮಯನ್ಮಾರ್ ದೇಶಗಳಲ್ಲೂ ಪದೇ ಪದೇ ರಾಜಕೀಯ ಅಸ್ಥಿರತೆ ಉಂಟಾಗುತ್ತಿದೆ. ಶ್ರೀಲಂಕಾದಲ್ಲಿಯೂ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ. ಅಲ್ಲಿನ ಆಂತರಿಕ ಕೋಭೆಯಿಂದ ಈಗಷ್ಟೇ ಆ ದೇಶ ಸುಧಾರಿಸಿಕೊಳ್ಳುತ್ತಿದೆ. ಚೀನಾದಿಂದ ಗಡಿ ಸಮಸ್ಯೆ ಸಂಬಂಧ ಆಗಿಂದಾಗ್ಗೆ ಕಿರಿಕಿರಿ ಉಂಟಾಗುತ್ತಲೇ ಇದೆ. ಇತ್ತ ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರವಿದ್ದರೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವುದರಿಂದ ಕಾಶ್ಮೀರದ ಗಡಿಯಲ್ಲಿ ಆತಂಕದ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ ಭಾರತವು ನೆರೆ ರಾಷ್ಟ್ರಗಳ ಬಗೆಗೆ ಕಣ್ಣಾವಲು ಜೊತೆಗೆ ರಾಜತಾಂತ್ರಿಕವಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

ಬಾಂಗ್ಲಾದಲ್ಲಿ ಸ್ಥಾಪಿತವಾಗಿರುವ ತಾತ್ಕಾಲಿಕ (ಉಸ್ತುವಾರಿ) ಸರ್ಕಾರ ಮತ್ತು ಅಲ್ಲಿನ ಸೇನೆಯ ಜೊತೆಯೂ ಭಾರತ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಈಗ ನಡೆದಿರುವ ಚಳವಳಿ ಶೇಖ್ ಹಸೀನಾ ಮತ್ತು ಅವರ ಆಡಳಿತದ ವಿರುದ್ಧವಾಗಿರುವುದರಿಂದ ಮುಂದೆ ಬರುವ ಸರ್ಕಾರ ಪಾಕಿಸ್ತಾನದ ಪರ ಆಗಬಹುದು ಎನ್ನುವ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ ಭಾರತಕ್ಕೆ ನೆರೆಯಲ್ಲಿ ಮತ್ತೊಂದು ವಿರೋಧಿ ಹುಟ್ಟಿಕೊಂಡಂತಾಗುತ್ತದೆ ಎನ್ನುವ ಆತಂಕ ಈಗಾಗಲೇ ದೆಹಲಿಯ ರಾಜಕೀಯ ವಲಯ ಮತ್ತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಬಾಂಗ್ಲಾದ ಪರಿಸ್ಥಿತಿಯ ಬಗೆಗೆ ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿದೆ. ಈ ವಿಷಯದಲ್ಲಿ ವಿರೋಧ ಪಕ್ಷಗಳೂ ಸರ್ಕಾರದ ಜೊತೆ ನಿಲ್ಲುವ ಭರವಸೆ ನೀಡಿರುವುದು ದೇಶದ ಐಕ್ಯತೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ ಸದ್ಯಕ್ಕೆ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರಿಗೆ ಬೇರೆ ರಾಷ್ಟ್ರಗಳ ನೆರವು ಸಿಗದಿದ್ದರೆ ಅವರಿಗೆ ಎಲ್ಲಿಯವರೆಗೆ ರಾಜಾಶ್ರಯ ನೀಡಬೇಕೆನ್ನುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿದೆ. ಬ್ರಿಟನ್ ದೇಶವು ಹಸೀನಾ ಅವರ ಆಶ್ರಯ ಕೋರಿಕೆಯನ್ನು ತಿರಸ್ಕರಿಸಿರುವುದರಿಂದ ಈಗ ಅವರು ಫಿನ್‌ಲ್ಯಾಂಡ್ ಸರ್ಕಾರದ ಆಶ್ರಯ ಕೋರಿದ್ದಾರೆ. ಆದರೆ ತಮ್ಮ ತಾಯಿ ಹಸೀನಾ ಅವರು ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪುನರ್ ಸ್ಥಾಪನೆಗೊಂಡಾಗ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಅವರ ಪುತ್ರ ಹೇಳಿಕೊಂಡಿದ್ದಾರೆ. ಈಗಿನ ಪರಿಸ್ಥಿತಿ ಗಮನಿಸಿದರೆ ಸದ್ಯಕ್ಕೆ ಅಂತಹ ಯಾವ ಆಶಾದಾಯಕ ಪರಿಸ್ಥಿತಿಯೂ ಕಾಣುತ್ತಿಲ್ಲ.

ವಿವಾದಿತ ವಕ್ಫ್‌ ಮಸೂದೆ: ಕೇಂದ್ರಸರ್ಕಾರದ್ದಿರಲಿರಾಜ್ಯ ಸರ್ಕಾರಗಳದ್ದಿರಲಿ ವಕ್ಸ್ ಮಂಡಳಿಯ ಆಡಳಿತಗಳ ಬಗೆಗೆ ಅಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ವಿಷಯದಲ್ಲಿ ಆಗಿಂದ್ದಾಗ್ಗೆ ದೂರುಗಳು ಮತ್ತು ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇವೆ. ವಕ್ಸ್ ಮಂಡಳಿಯು ಇದುವರೆಗೂ ಮುಸ್ಲಿಂ ಸಮುದಾಯದವರಲ್ಲದೆ ಬೇರೆ ಯಾರನ್ನೂ ಒಳಗೊಳ್ಳದೆ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಇನ್ನೂ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ ಅದರ ಹೆಸರಿನಲ್ಲಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆರ್ಥಿಕ ನೆರವನ್ನೂ ಪಡೆಯುತ್ತಿರುವುದು ರಹಸ್ಯವೇನಲ್ಲ.

ಮುಸ್ಲಿಂ ಸಮುದಾಯಕ್ಕೆ ಇರುವ ವಿಶೇಷ ಸ್ಥಾನಮಾನ ಮತ್ತು ವಿಶೇಷ ಹಕ್ಕುಗಳನ್ನು ರದ್ದು ಮಾಡಿ ಅವರನ್ನೂ ಎಲ್ಲರಂತೆಯೇ ದೇಶದ ಪ್ರಮುಖ ವಾಹಿನಿಗೆ ತರಬೇಕೆನ್ನುವುದು ಭಾರತೀಯ ಜನತಾ ಪಕ್ಷ ಸರ್ಕಾರದ ಉದ್ದೇಶ ಎನ್ನುವುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಅದರ ಮುಂದುವರಿದ ಭಾಗವೇ ವಕ್ಸ್ ಮಂಡಳಿಯ ನಿಯಮಾವಳಿಗಳಿಗೆ ಸುಮಾರು 44 ತಿದ್ದುಪಡಿಗಳನ್ನು ತಂದು ಕೇಂದ್ರ ಸರ್ಕಾರ ಹೊಸ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿರುವುದು.

ಅಲ್ಪಸಂಖ್ಯಾತ ಮುಸ್ಲಿಮರ ಪರ ತಾನಿದ್ದೇನೆ ಎಂದುಕೊಳ್ಳುವ ವಿಪಕ್ಷದಲ್ಲಿರುವ ಕಾಂಗ್ರೆಸ್ ಮತ್ತು ಇತರೆ ಕೆಲವು ಪಕ್ಷಗಳು ಸರ್ಕಾರ ಮಂಡಿಸಿರುವ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ವಿರೋಧ ಪಕ್ಷಗಳ ಗದ್ದಲ ಮತ್ತು ಟೀಕೆಗಳಿಗೆ ಮಣಿದಿರುವ ಸರ್ಕಾರ ಮಸೂದೆಯನ್ನು ಮತ್ತಷ್ಟು ಪರಿಶೀಲನೆಗಾಗಿ ಸಂಸದೀಯ ಜಂಟಿ ಸದನ ಸಮಿತಿಗೆ ಒಪ್ಪಿಸಿದೆ. ತಿದ್ದುಪಡಿ ಮಸೂದೆಯಲ್ಲಿ ವಕ್ಷ ಮಂಡಳಿಗೆ ಇಬ್ಬರು ಮುಸ್ಲಿಮ್ ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರರನ್ನು ನೇಮಕ ಮಾಡುವ ಪ್ರಸ್ತಾವಕ್ಕೆ ಸಹಜವಾಗಿಯೇ ಮುಸ್ಲಿಮರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ. ದೇಶದ ಸಂವಿಧಾನಕ್ಕಿಂತ ಷರಿಯತ್ ಕಾನೂನುಗಳೇ ತಮಗೆ ಮುಖ್ಯ ಎಂದು ವಾದಿಸುವವರಿದ್ದಾರೆ. ಇಂತಹವರ ಕಪಿಮುಷ್ಟಿಯಿಂದ ಅಸಹಾಯಕ ಮುಸ್ಲಿಂ ಸಮುದಾಯವನ್ನು ಬಿಡುಗಡೆಗೊಳಿಸಬೇಕಿದೆ ಎನ್ನುವುದು ಹಲವರ ವಾದ.

ಅಷ್ಟಕ್ಕೂ ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ರಾಜ್ಯ ವಕ್ಸ್ ಮಂಡಳಿಗಳ ಅಧಿಕಾರ, ನೋಂದಣಿ ಮತ್ತು ವಕ್ಸ್ ಆಸ್ತಿಗಳ ಸರ್ವೆ, ಒತ್ತುವರಿ ತೆರವು ಮತ್ತು ವಕ್ಸ್ ವ್ಯಾಖ್ಯಾನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜುಜು ಭರವಸೆ ನೀಡಿದರೂ ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಒಪ್ಪಲು ತಯಾರಿರಲಿಲ್ಲ. ಹಾಗಾಗಿ ಈ ತಿದ್ದುಪಡಿ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಸಂಸದೀಯ ನಡಾವಳಿಯಲ್ಲಿನ ಪರಸ್ಪರ ಚರ್ಚೆ ಮಾಡಿ ಯಾವುದೇ ಮಸೂದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಸ್ವಾಗತಾರ್ಹ ಬೆಳವಣಿಗೆ.

ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಕಾಣುತ್ತಿಲ್ಲ. ಕಾಂಗ್ರೆಸ್ ಸದಸ್ಯರನ್ನು ಮತ್ತು ಲೋಕಸಭೆಯಲ್ಲಿ ಆ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಬಗೆಗೆ ಮೊದಲಿನಿಂದ ಇರುವ ಮನೋಭಾವದಲ್ಲಿ ಬದಲಾವಣೆ ಕಾಣುತ್ತಿಲ್ಲ. ಹಾಗೆಯೇ ರಾಹುಲ್ ಕೂಡ ಪ್ರಧಾನಿ ಮೋದಿ ಅವರನ್ನು ತಮ್ಮ ವೈರಿಯಂತೆ ಹೊರಗೂ ಮತ್ತು ಸದನದ ಒಳಗೂ ಕಾಣುವ ಪ್ರವೃತ್ತಿಯಲ್ಲಿ ಬದಲಾವಣೆ ಕಾಣದಿರುವುದು ಸದನದ ಕಲಾಪದ ಮೇಲೂ ಪರಿಣಾಮ ಬೀರುತ್ತಿರುವುದನ್ನು ಕಾಣಬಹುದಾಗಿದೆ.

ಯಾರು ಒಪ್ಪಲಿ ಬಿಡಲಿ, ರಾಹುಲ್ ಗಾಂಧಿ ಅಧಿಕೃತ ವಿರೋಧ ಪಕ್ಷದ ನಾಯಕ ಎನ್ನುವುದು ಸತ್ಯ. ಸಂಸದೀಯ ವ್ಯವಸ್ಥೆಯಲ್ಲಿ ವಿರೋಧಿ ನಾಯಕನಿಗೂ ವಿಶೇಷ ಸ್ಥಾನಮಾನವಿದೆ. ವ್ಯಕ್ತಿ ಯಾರೇ ಇರಲಿ ಆ ಸ್ಥಾನಕ್ಕೆ ಅದರದೇ ಆದ ಗೌರವವಿದೆ. ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಿದ್ದ ಪ್ರಧಾನಿ ಮೋದಿ ಅವರು ಒಂದು ಹಂತದಲ್ಲಿ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ, ‘ಬಾಲಕ ಬುದ್ದಿ’ ಎಂದು ವ್ಯಂಗ್ಯವಾಡಿದ್ದು ಸಂಸದೀಯ ನಡವಳಿಕೆಯಲ್ಲ.

ಹಾಗೆಯೇ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಸಚಿವ ಅನುರಾಗ್ ಠಾಕೂರ್ ‘ತನ್ನದು ಯಾವ ಜಾತಿ ಎನ್ನುವುದೇ ಗೊತ್ತಿಲ್ಲದವರು ಜಾತಿ ಜನಗಣತಿ ಆಗಬೇಕೆನ್ನುತ್ತಿರುವುದು ಹಾಸ್ಯಾಸ್ಪದ ಎಂದಿದ್ದರು. ಸಚಿವ ಅನುರಾಗ್ ಠಾಕೂರ್ ಅವರ ಈ ಮಾತನ್ನು ಪ್ರಧಾನಿ ಮೋದಿ ಅವರು ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಆದರೆ ಪ್ರಧಾನಿ ಅವರ ಈ ಟ್ವಿಟನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ ಪ್ರಧಾನಿ ವಿರುದ್ಧ ಹಕ್ಕು ಚ್ಯುತಿ ನಿರ್ಣಯ ಮಂಡಿಸಲು ಮುಂದಾಗಿದೆ. ಹೀಗೆ ಹೇಳುತ್ತಾ ಹೋದರೆ ಪರಸ್ಪರ ನಿಂದನೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸದನದ ಗೌರವ ಮತ್ತು ಘನತೆಯನ್ನು ಕಾಪಾಡುವಲ್ಲಿ ಎರಡೂ ಕಡೆಯವರಿಂದಲೂ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ವಿರೋಧಿ ನಾಯಕ ರಾಹುಲ್ ಗಾಂಧಿ ಅವರು ಗಂಭೀರವಾಗಿ ಚಿಂತಿಸಬೇಕಿದೆ.

ಆಂದೋಲನ ಡೆಸ್ಕ್

Recent Posts

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

25 mins ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಮಂಡ್ಯ: ಇಂದಿನಿಂದ ( ಡಿಸೆಂಬರ್‌ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…

2 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

10 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

10 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

11 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

11 hours ago