ಅಂಕಣಗಳು

ನಾಳೆ ಬಾಂಗ್ಲಾ ಚುನಾವಣೆ: ಏಕಪಕ್ಷ ಆಡಳಿತದ ಭೀತಿ

ಡಿ.ವಿ.ರಾಜಶೇಖರ

ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ನಾಳೆ ಭಾನುವಾರ (ಜ.7) ಸಂಸತ್ ಚುನಾವಣೆಗಳು ನಡೆಯಲಿದ್ದು, ಹಿಂಸೆ ಸಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶದಾದ್ಯಂತ ಅರೆ ಮತ್ತು ಮಿಲಿಟರಿ ಪಡೆಗಳನ್ನು ಸರ್ಕಾರ ನಿಯೋಜಿಸಿದೆ. ಪ್ರಸ್ತುತ ಪ್ರಧಾನಿಯಾಗಿರುವ ಷೇಖ್ ಹಸೀನಾ ವಾಜೆದ್ ಅವರು ಐದನೆಯ ಬಾರಿಗೆ ದೇಶದ ಪ್ರಧಾನಿಯಾಗಲು ತಮ್ಮದೇ ಅವಾಮಿ ಲೀಗ್(ಎಎಲ್) ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಅದರಲ್ಲಿಯೂ ಮುಖ್ಯವಾಗಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲ್ ಪಕ್ಷ(ಬಿಎನ್ಪಿ) ಚುನಾವಣೆಗಳನ್ನು ಬಹಿಷ್ಕರಿಸಿದೆ. ನಾಮಕಾವಾಸ್ತೆಗೆ ಕೆಲವರು ವಿರೋಧ ಪಕ್ಷಗಳ ಹೆಸರಿನಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಚುನಾವಣೆ ಏಕ ಪಕ್ಷ ಕೇಂದ್ರಿತವಾಗಿದೆ.

ತೀವ್ರ ಸ್ಪರ್ಧೆಯೇ ಇಲ್ಲವಾದ್ದರಿಂದ ಷೇಖ್ ಹಸೀನಾ ಪಕ್ಷ ಗೆಲ್ಲುವುದು ಖಚಿತ ಎಂದು ಮೊದಲೇ ಎಲ್ಲರೂ ಹೇಳುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಂತೆ ಹಿಂಸಾಚಾರ ನಡೆಸಬಹುದಾದ ಸಾಧ್ಯತೆಯ ಹೆಸರಿನಲ್ಲಿ ಮುಖ್ಯ ವಿರೋಧ ಪಕ್ಷವಾದ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಸುಮಾರು ಮಂದಿ ಕಾರ್ಯಕರ್ತರು ಮತ್ತು ನಾಯಕರನ್ನು ಸರ್ಕಾರ ಬಂಧಿಸಿ ಜೈಲಿಗೆ ಕಳುಹಿಸಿದೆ. ಇದೇನು ಪ್ರಜಾತಂತ್ರ ವ್ಯವಸ್ಥೆಯೋ ಅಥವಾ ಸರ್ವಾಧಿಕಾರವೋ ಎನ್ನುವ ಪ್ರಶ್ನೆಯನ್ನು ನಾಗರಿಕ ಹಕ್ಕುಗಳ ಸಂಘಟನೆಗಳು ಕೇಳುತ್ತಿವೆ.

ಬಾಂಗ್ಲಾ ದೇಶ ಕೆಲವು ವರ್ಷಗಳ ಹಿಂದೆಯಷ್ಟೇ ವಿಶ್ವದ ಕಡುಬಡತನದ ದೇಶಗಳ ಪೈಕಿ ಒಂದಾಗಿತ್ತು. ಇದು ಈಗ ವಿಶ್ವದ ಎರಡನೆಯ ಅತಿದೊಡ್ಡ ಸಿದ್ಧ ಉಡುಪುಗಳ ರಫ್ತು ದೇಶವಾಗಿ ಮಾರ್ಪಟ್ಟು ತೀವ್ರ ಅಭಿವೃದ್ಧಿ ಸಾಧಿಸಿ ಪವಾಡವನ್ನೇ ಮಾಡಿ ಆಶ್ಚರ್ಯ ಹುಟ್ಟಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹಿಂಸಾಚಾರ ಹೆಚ್ಚಿದ್ದು ಅಭಿವೃದ್ಧಿ ಪ್ರಮಾಣ ಬಿದ್ದು ಹೋಗಿದೆ. ಆಹಾರ ವಸ್ತುಗಳ ಅಭಾವ, ಏರುತ್ತಿರುವ ಇಂಧನ ಬೆಲೆ ಮತ್ತು ತೈಲ ಬಿಕ್ಕಟ್ಟಿನಿಂದಾಗಿ ಹಣದುಬ್ಬರ ದೇಶವನ್ನು ಮತ್ತೆ ಆರ್ಥಿಕ ಬಿಕ್ಕಟ್ಟಿನತ್ತ ದೂಡಿದೆ. ಕಳೆದ ವರ್ಷವಷ್ಟೇ ಹಸೀನಾ ಸರ್ಕಾರ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಐಎಂಎಫ್‌ನಿಂದ 4.7 ಬಿಲಿಯನ್ ಡಾಲರ್ ಹಣಕ್ಕಾಗಿ ಅರ್ಜಿಸಲ್ಲಿಸಿದ್ದು ಈ ಪೈಕಿ 468 ಮಿಲಿಯನ್ ಡಾಲರ್ ಹಣವನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದೆ. ಹವಾಮಾನ ವೈಪರೀತ್ಯದಿಂದ ತೀವ್ರ ಹಾನಿಗೊಳಗಾದ ದೇಶವೆಂದು ಪರಿಗಣಿತವಾದ ಬಾಂಗ್ಲಾದೇಶಕ್ಕೆ ಅಂತಾರಾಷ್ಟ್ರೀಯಹವಾಮಾನ ವೈಪರೀತ್ಯ ನಿಧಿಯಿಂದ 221 ಮಿಲಿಯನ್ ಡಾಲರ್ ಪರಿಹಾರವೂ ಸಿಗಲಿದ್ದು ದೇಶ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಸಾಧ್ಯತೆ ಇದೆ. ಆದರೂ ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆಯದ್ದೇ ಸಮಸ್ಯೆ, ದೇಶಕ್ಕೆ ಅಪಾರ ವಿದೇಶೀ ವಿನಿಮಯ ತರುವ ಸಿದ್ಧ ಉಡುಪು ತಯಾರಿಕಾ ಕ್ಷೇತ್ರದಲ್ಲಿನ ನೌಕರರು ಹೆಚ್ಚು ವೇತನಕ್ಕೆ ಆಗ್ರಹಿಸಿ ಆಗಿಂದಾಗ್ಗೆ ಮುಷ್ಕರ ನಡೆಸುತ್ತಲೇ ಬಂದಿದ್ದಾರೆ. ವಿರೋಧ ಪಕ್ಷಗಳು ಈ ಕಾರಣವನ್ನೇ ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ತಂದೊಡ್ಡುತ್ತಿವೆ ಎನ್ನುವುದು ಆಡಳಿತ ಪಕ್ಷದ ನಾಯಕರ ಆರೋಪ. ಸರ್ಕಾರ ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಬಂಧಿಸುತ್ತಿದೆ ಆರೋಪಿಸಲಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ದೇಶದಲ್ಲಿ ನ್ಯಾಯಯುತ ಚುನಾವಣೆ ನಡೆಯುತ್ತದೆಯೇ ಎನ್ನುವ ಅನುಮಾನವನ್ನು ವ್ಯಕ್ತ ಮಾಡಲಾಗುತ್ತಿದೆ.

1970ರಲ್ಲಿ ಹಿಂಸೆಯ ಒಡಲಲ್ಲೇ ಹುಟ್ಟಿದ ಬಾಂಗ್ಲಾ ದೇಶದಲ್ಲಿ ಹಿಂಸಾಚಾರ ಸತತವಾಗಿ ನಡೆಯುತ್ತ ಬಂದಿದೆ. ಹಸೀನಾ ಮತ್ತು ಖಲೀದಾ ಅವರು ಅಧಿಕಾರಕ್ಕಾಗಿ ನಡೆಸುತ್ತ ಬಂದಿರುವ ರಾಜಕೀಯ, ಹಿಂಸೆಗೆ ಎಡೆಮಾಡಿಕೊಟ್ಟಿರುವುದು ಸಮಸ್ಯೆಯ ಒಂದು ಮುಖ ಅಷ್ಟೆ. ಹಿಂದೂ-ಮುಸ್ಲಿಂ ವೈಮನಸ್ಯ, ಬಿಹಾರಿಗಳು ಮತ್ತು ಬಾಂಗ್ಲಾದೇಶೀಯರ ನಡುವಣ ದ್ವೇಷ, ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ, ಅಲ್ ಖೈದಾ ರೀತಿಯ ಇಸ್ಲಾಮಿಕ್ ಉಗ್ರವಾದ -ಹೀಗೆ ಬಾಂಗ್ಲಾದಲ್ಲಿ ಹಿಂಸಾಚಾರ ಸತತವಾಗಿ ನಡೆಯುತ್ತಿರುವುದಕ್ಕೆ ಹಲವು ಕಾರಣಗಳು. ಇದರ ಜೊತೆಗೆ ಅವಾಮಿ ಲೀಗ್ ಮತ್ತು ಬಿಎನ್‌ ಪಿ ಪಕ್ಷಗಳ ಕಾರ್ಯಕರ್ತರುಮೇಲುಗೈ ಸಾಧಿಸಲುಬೀದಿಯಲ್ಲಿ ನಡೆಸುತ್ತಿರುವ ಹೋರಾಟ ದೇಶವನ್ನು ಹಿಂಸೆಯಲ್ಲಿ ಮುಳುಗಿಸಿದೆ. ಈ ಹಿಂಸೆಯಲ್ಲಿ ಸಾಯುತ್ತಿರುವವರು ಮತ್ತು ಮನೆಮಠ ಕಳೆದುಕೊಂಡವರು ಸಾವಿರಾರು ಮಂದಿ ಜನಸಾಮಾನ್ಯರು.

ಕೆಲವು ವರ್ಷಗಳ ಹಿಂದೆ ಸಾಧಿಸಿದ ತೀವ್ರ ಪ್ರಗತಿಯಿಂದಾಗಿ ಬಾಂಗ್ಲಾದೇಶ ಅಭಿವೃದ್ಧಿ ದೇಶಗಳ ಕಣ್ಣಿಗೆ ಬಿತ್ತು. ಅಮೆರಿಕ, ಚೀನಾ ನಾಯಕರು ಬಾಂಗ್ಲಾ ದೇಶದ ಬೆಳವಣಿಗೆಗಳ ಬಗ್ಗೆ ಗಮನಹರಿಸಲಾರಂಭಿಸಿದರು. ಅಷ್ಟೇ ಏಕೆ ಬಾಂಗ್ಲಾದೇಶವನ್ನು ಚೀನಾ ತನ್ನ ಅಂತಾರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ವಲಯದ ಭಾಗವಾಗಿಸಿಕೊಂಡಿತು. ಅಮೆರಿಕ ಕೂಡ ಬಾಂಗ್ಲಾದ ವಿವಿಧ ಯೋಜನೆಗಳಿಗೆ ನೆರವು ನೀಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಚುನಾವಣೆಗಳ ಬಗ್ಗೆ ಈ ದೇಶಗಳು ಆಸಕ್ತಿ ತಾಳಿವೆ. ದೇಶದಲ್ಲಿ ವಿರೋಧ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರನ್ನು ಜೈಲಿಗೆ ಅಟ್ಟುತ್ತಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಮುಖ್ಯವಾಗಿದ್ದು ಅವುಗಳನ್ನು ಯಾವುದೇ ಕಾರಣಕ್ಕೂ ನಿಷ್ಕ್ರಿಯಗೊಳಿಸಬಾರದೆಂಬುದು ಅಮೆರಿಕದ ವಾದ. ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವ ಪ್ರಕ್ರಿಯೆ ಮುಂದುವರಿದರೆ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕ ಇತ್ತೀಚೆಗೆ ಬೆದರಿಕೆ ಹಾಕಿದೆ. ಇದು ಚೀನಾವನ್ನು ಕೆರಳಿಸಿದ್ದು ಬಾಂಗ್ಲಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಕೂಡದೆಂದು ಹೇಳಿಕೆ ನೀಡಿದೆ. ಬಾಂಗ್ಲಾ ದೇಶ ಭಾರತದ ಮೈತ್ರಿ ದೇಶವಾಗಿದೆ. ಷೇಖ್ ಹಸೀನಾ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯವಿದ್ದು, ಅವರ ಆಡಳಿತಕ್ಕೆ ಯಾವುದೇ ತೊಂದರೆಯಾಗದಂತೆ ಸಹಕರಿಸಲಾಗುತ್ತಿದೆ. ಬಾಂಗ್ಲಾ ದೇಶದ ಆಂತರಿಕ ವ್ಯವಹಾರದಲ್ಲಿ ತಾನು ತಲೆಹಾಕುವುದಿಲ್ಲ ಎಂದು ಭಾರತ ಘೋಷಿಸಿದೆ. ಆದರೆ ಚೀನಾ ಷೇಖ್ ಹಸೀನಾ ಪರವಾಗಿಲ್ಲ. ವಿರೋಧಿ ಖಲೀದಾ ಜಿಯಾ ಪಕ್ಷದ ಪರ ಚೀನಾ ನಿಲ್ಲುತ್ತ ಬಂದಿದೆ. ಆದರೆ ಖಲೀದಾ ಜಿಯಾ ಪಕ್ಷ ಸರ್ಕಾರ ರಚಿಸುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವಂಥ ಸ್ಥಿತಿ ಈಗ ಬಾಂಗ್ಲಾದಲ್ಲಿ ನಿರ್ಮಾಣವಾಗಿದೆ.

ಬಾಂಗ್ಲಾ ಸಂಸತ್ತಿನ 350 ಸ್ಥಾನಗಳ ಪೈಕಿ 300 ಸ್ಥಾನಗಳಿಗೆ ಇದೀಗ ಚುನಾವಣೆ ನಡೆಯುತ್ತಿದೆ. ಉಳಿದ 50 ಸ್ಥಾನಗಳು ಮಹಿಳೆಯರಿಗೆ ಮೀಸಲು. 2018ರ ಚುನಾವಣೆಯಲ್ಲಿ ಷೇಖ್ ಹಸೀನಾ ಅವರ ಪಕ್ಷ 230 ಸ್ಥಾನಗಳನ್ನು ಗೆದ್ದಿತ್ತು. ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಕೇವಲ ಏಳು ಸ್ಥಾನಗಳನ್ನು ಗಳಿಸಿ ಹೀನಾಯ ಸೋಲು ಅನುಭವಿಸಿತು. ಜತಿಯಾ ಪಾರ್ಟಿ 26 ಸ್ಥಾನಗಳನ್ನು ಗಳಿಸಿ ಮುಖ್ಯ ವಿರೋಧ ಪಕ್ಷವಾಗಿದೆ. ಕಳೆದ ಚುನಾವಣೆಗಳಲ್ಲಿ ಬಿಎನ್‌ಪಿ ಸಾಕಷ್ಟು ಸ್ಥಾನಗಳನ್ನು ಗೆಲ್ಲದಿದ್ದರೂ ಜನಬೆಂಬಲದ ದೃಷ್ಟಿಯಿಂದ ನೋಡಿದರೆ ಅದೇ ಮುಖ್ಯ ವಿರೋಧ ಪಕ್ಷ. ಈ ಹಿಂದೆ ಮೂರು ಬಾರಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಿದೆ. ಬೀದಿ ಹೋರಾಟಗಳಿಂದ ಷೇಖ್ ಹಸೀನಾ ಸರ್ಕಾರಕ್ಕೆ ದೊಡ್ಡ ಸವಾಲಾಗುತ್ತ ಬಂದಿದೆ. ಹಾಗೆ ನೋಡಿದರೆ ಬಾಂಗ್ಲಾ ದೇಶದ ರಾಜಕೀಯ ಖಲೀದಾ ಜಿಯಾ ಮತ್ತು ಷೇಖ್ ಹಸೀನಾ ಕುಟುಂಬಗಳ ಹಿಡಿತದಲ್ಲಿದೆ. ಒಂದು ರೀತಿಯಲ್ಲಿ ಕುಟುಂಬ ರಾಜಕಾರಣ. ಬಾಂಗ್ಲಾ ದೇಶದ ಸಂಸ್ಥಾಪಕ ಷೇಖ್ ಮುಜಿಬುರ್ ರಹಮಾನ್ ಅವರ ಮಗಳು ಷೇಖ್ ಹಸೀನಾ, ಖಲೀದಾ ಜಿಯಾ ದೇಶದ ಅಧ್ಯಕ್ಷರಾಗಿದ್ದ ದಿವಂಗತ ಜಿಯಾ ಉರ್ ರಹಮಾನ್ ಅವರ ಪತ್ನಿ, ಖಲೀದಾ ದೇಶದ ಮೊದಲಪ್ರಧಾನಿಯಾಗಿದ್ದವರು. ಹಸೀನಾಮತ್ತುಖಲೀದಾರಾಜಕೀಯವಾಗಿ ಬದ್ಧ ವೈರಿಗಳು. ಹೀಗಾಗಿಯೇ ಬಾಂಗ್ಲಾ ದೇಶದ ರಾಜಕೀಯ ಈ ಇಬ್ಬರ ಸುತ್ತಲೇ ನಡೆಯುತ್ತ ಬಂದಿದೆ.

ಖಲೀದಾ ಅವರು ಅಧಿಕಾರ ಕಳೆದುಕೊಂಡ ನಂತರ ಜೀವನದ ಬಹು ಪಾಲು ವರ್ಷಗಳನ್ನು ಜೈಲಲ್ಲಿ ಕಳೆಯುತ್ತ ಬಂದಿದ್ದಾರೆ. ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಖಲೀದಾ ಜಿಯಾ ಅವರಿಗೆ 17 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಜೈಲಿನಲ್ಲಿದ್ದ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದೆ. ಅದೇ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ಮಕ್ಕಳಿಬ್ಬರಿಗೂ ಜೈಲುಶಿಕ್ಷೆ ವಿಧಿಸಲಾಗಿದ್ದು, ಆ ಪೈಕಿ ಒಬ್ಬ ಪುತ್ರ ತಾರೀಕ್ ರಹಮಾನ್ ಬ್ರಿಟನ್ ನಲ್ಲಿ ಆಶ್ರಯ ಪಡೆದಿದ್ದಾರೆ.

ಬಿಎನ್‌ಪಿಯ ಕಾರ್ಯಾಧ್ಯಕ್ಷರಾಗಿರುವ ಅವರು ಅಲ್ಲಿಂದಲೇ ಪಕ್ಷದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಿಎನ್‌ಪಿ ಒಂದು ರೀತಿಯಲ್ಲಿ ಸರಿಯಾದ ನಾಯಕರಿಲ್ಲದ ಪಕ್ಷವಾಗಿದ್ದು ಹಸೀನಾ ಸರ್ಕಾರದ ವಿರುದ್ಧ ಪ್ರಬಲ ಪ್ರತಿರೋಧ ಒಡ್ಡುವಲ್ಲಿ ವಿಫಲವಾಗಿದೆ. ಹಸೀನಾ ರಾಜಕೀಯವಾಗಿ ಗಟ್ಟಿಯಾಗಿ ನೆಲೆಯೂರಲು ಇದೂ ಒಂದು ಕಾರಣವಾಗಿದೆ. ವಿರೋಧಿ ನಾಯಕರನ್ನು ಜೈಲಿನಲ್ಲಿಟ್ಟು ನಡೆಸುತ್ತಿರುವ ಚುನಾವಣೆಗಳು ಸಹಜವಾಗಿ ಷೇಖ್ ಹಸೀನಾ ಪರ ಇರುತ್ತವೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಚುನಾವಣೆಗಳು ನ್ಯಾಯಯುತವಾಗಿ ನಡೆದವು ಎಂದು ತೋರಿಸಲು ಹಸೀನಾ ಅವರು ತಮ್ಮ ಪಕ್ಷದವರನ್ನೇ ವಿರೋಧಿ ಬಿಎನ್‌ ಪಿ ಪಕ್ಷದ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿದ್ದಾರೆ ಎಂದು ತಾರೀಕ್ ರಹಮಾನ್ ಆರೋಪಿಸಿದ್ದಾರೆ. ಇದೇನೇ ಇದ್ದರೂ ಚುನಾವಣೆಗಳು ಅಂತಾರಾಷ್ಟ್ರೀಯ ವೀಕ್ಷಕರ ಪರಿವೀಕ್ಷಣೆಯಲ್ಲಿ ನಡೆಯಲಿದೆ.

ಭಾರತದ ಮತ್ತೊಂದು ನೆರೆಯ ದೇಶ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಚುನಾವಣೆಗಳು ಇದೇ ಫೆಬ್ರವರಿಯಲ್ಲಿ ನಡೆಯಲಿವೆ. ಅಲ್ಲಿ ಮಿಲಿಟರಿ ಬೆಂಬಲದ ಪಕ್ಷ ಮೇಲುಗೈ ಸಾಧಿಸಬಹುದಾದ ಸೂಚನೆಗಳಿವೆ. ಭಾರತದಲ್ಲಿಯೂ ಸಂಸತ್ ಚುನಾವಣೆಗಳು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಬೇಕಿದ್ದು ಇಲ್ಲಿಯೂ ಕೂಡ ಏಕಪಕ್ಷ ಮತ್ತು ಏಕ ವ್ಯಕ್ತಿ ಮೇಲುಗೈ ಸಾಧಿಸುವ ಸಾಧ್ಯತೆಗಳಿದ್ದು, ಇಡೀ ವಲಯಕ್ಕೆ ಪ್ರಜಾತಂತ್ರ ವ್ಯವಸ್ಥೆ ಮಸುಕಾಗುವ ಆತಂಕ ಎದುರಾಗಿದೆ.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

1 hour ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

2 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

2 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

3 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

3 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

3 hours ago