ವಿ.ಎಲ್.ನರಸಿಂಹಮೂರ್ತಿ
ನಾನು ಮೊದಲ ಬಾರಿಗೆ ಬಾಬಾಸಾಹೇಬರನ್ನು ಕಂಡದ್ದು ಎಲ್ಲಿ? ನನ್ನ ನೆನಪಿನಲ್ಲಿ ರಿಜಿಸ್ಟರ್ ಆಗಿರುವ ಬಾಬಾಸಾಹೇಬರ ಮೊದಲ ಇಮೇಜ್ ಯಾವುದು? ಯಾವಾಗ? ಎಂದು ನೆನಪು ಮಾಡಿಕೊಂಡಾಗಲೆಲ್ಲ ನನಗೆ ನೆನಪಾಗುವುದು ನನ್ನ ತಾಯಿಯ ಊರು ಮತ್ತು ಆ ಊರಿನಲ್ಲಿದ್ದ ದಸಂಸದ ಬೋರ್ಡು. ಆಂಧ್ರದ ಸೆರಗಿನಲ್ಲಿರುವ ಗೌರಿಬಿದನೂರು ಭಾಗದಲ್ಲಿ ಆಂಧ್ರದಲ್ಲಿದ್ದಷ್ಟೇ ಫ್ಯೂಡಲ್ ದೌರ್ಜನ್ಯ ಇತ್ತು. ಆ ಊರಿನಲ್ಲಿದ್ದ ಫ್ಯೂಡಲ್ ಜಾತಿಯ ವ್ಯಕ್ತಿಯೊಬ್ಬ ಇಡೀ ಊರಿಗೆ ತೊಂದರೆ ಕೊಡುತ್ತಿದ್ದನಂತೆ. ಊರಲ್ಲಿ ಏನೇ ನಡೆದರೂ ಈತನ ಕಣ್ಸನ್ನೆಯಲ್ಲಿ ನಡೆಯಬೇಕಿತ್ತಂತೆ. ಈತನಿಂದ ನನ್ನ ತಾತನ ಕುಟುಂಬಕ್ಕೂ ಒಮ್ಮೆ ತೊಂದರೆಯಾಯಿತಂತೆ. ಕುರಿ ಮೇಯಿಸುತ್ತಿದ್ದ ನನ್ನ ತಾತನ ತಮ್ಮನ ಬಳಿ ಈ ಫ್ಯೂಡಲ್ ವ್ಯಕ್ತಿ ಒಂದೆರಡು ಕುರಿ ಪಾಲಿಗೆ ಮೇಯಿಸಲು ಬಿಟ್ಟಿದ್ದನಂತೆ.
ವರ್ಷಕ್ಕೊಮ್ಮೆ ತುಪ್ಪಟ ಕತ್ತರಿಸುವ ಸಂದರ್ಭದಲ್ಲಿ ತುಪ್ಪಟದ ಬದಲಿಗೆ ಕಂಬಳಿ ಕೊಡಬೇಕೆಂದು ನನ್ನ ತಾತನ ತಮ್ಮನ ಮೇಲೆ ಜಬರ್ದಸ್ತು ಮಾಡಿದ್ದನಂತೆ. ಎರಡು ಕುರಿಗಳ ತುಪ್ಪಟಕ್ಕೆ ಕಂಬಳಿ ಕೊಡುವುದು ಅಸಾಧ್ಯ ಅಂದಿದ್ದಕ್ಕೆ, ತನ್ನ ಆಳುಗಳ ಕೈಯಲ್ಲಿ ನನ್ನ ತಾತನ ತಮ್ಮನಿಗೆ ಹಿಗ್ಗಾಮುಗ್ಗಾ ಥಳಿಸಿದ್ದನಂತೆ. ಅನ್ಯಾಯವಾಗಿ ಹೊಡೆದ ಈತನನ್ನು ಪ್ರಶ್ನಿಸುವ, ಎದುರು ಹಾಕಿಕೊಳ್ಳುವ ಧೈರ್ಯ ಸಾಲದೆ ನನ್ನ ತಾತನ ಕುಟುಂಬ ಸುಮ್ಮನಾಯಿತಂತೆ. ಈ ರೀತಿಯ ದೌರ್ಜನ್ಯಗಳನ್ನು ಆ ಫ್ಯೂಡಲ್ ವ್ಯಕ್ತಿ ಊರಿನ ಹಲವು ಕುಟುಂಬಗಳ ಮೇಲೆ ನಡೆಸುತ್ತಲೇ ಇದ್ದರೂ ಊರಿನ ಜನಕ್ಕೆ ಆತನನ್ನು ಖಂಡಿಸುವ ಧೈರ್ಯವಿರಲಿಲ್ಲ.
ಅದೇ ಸಮಯಕ್ಕೆ ದಸಂಸದ ಕೋಲಾರ ಜಿಲ್ಲಾ ಸಮಿತಿ ನಾಗಸಂದ್ರ ಭೂ ಹೋರಾಟ ನಡೆಸುತ್ತಿದ್ದು, ದಲಿತ ಚಳವಳಿಯ ಚಟುವಟಿಕೆಗಳು ಗೌರಿಬಿದನೂರಿನ ಹಳ್ಳಿಗಳಿಗೆ ಗೊತ್ತಾಗಲು ಶುರುವಾಗುತ್ತದೆ. ಜಾತಿ ಅಸಮಾನತೆಯ ಜೊತೆಗೆ ಫ್ಯೂಡಲ್ ದಬ್ಬಾಳಿಕೆಯಿಂದ ಬೇಸತ್ತಿದ್ದ ನಮ್ಮ ತಾಯಿಯ ಊರಿನ ದಲಿತರು ದಸಂಸದ ಹೋರಾಟಗಾರರನ್ನು ಸಂಪರ್ಕಿಸಿ ತಮ್ಮ ಊರಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಒಂದೆರಡು ವರ್ಷಗಳಲ್ಲೇ ಇಡೀ ಊರಿನ ಜನ ಒಂದಾಗಿ ಆ ಊರಿಗೆ ತೊಂದರೆ ಕೊಡುತ್ತಿದ್ದ ಫ್ಯೂಡಲ್ ಕುಟುಂಬದ ವಿರುದ್ಧ ತಿರುಗಿಬಿದ್ದು ಆ ವ್ಯಕ್ತಿಯನ್ನು ಊರಿನಿಂದಲೇ ಓಡಿಸುತ್ತಾರೆ. ಹೀಗೆ ಸಂಘದವರು ಬಂದು ಆ ಊರಿನಲ್ಲಿ ಮಾಡಿದ ಹೋರಾಟದ ಕತೆ ಮತ್ತು ಅದರಲ್ಲಿ ತನ್ನ ಪಾತ್ರವೂ ಇತ್ತೆಂದು ನನ್ನ ತಾತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಇದರ ಜೊತೆಗೆ ನೆನಪಾಗುವ ಇನ್ನೊಂದು ಘಟನೆ, ನಾನು ಹೈಸ್ಕೂಲು ಓದುತ್ತಿದ್ದ ಸಮಯದಲ್ಲಿ ನನ್ನ ತಮ್ಮನ ಶಾಲೆಯಲ್ಲಿ ನಡೆದ ಪ್ರಸಂಗ. ನನ್ನ ತಮ್ಮನ ಶಾಲೆಗೆ ಹೆಡ್ ಮಾಸ್ಟರ್ ಆಗಿ ವರ್ಗಾವಣೆ ಆಗಿ ಬಂದ ಶಿಕ್ಷಕರೊಬ್ಬರು ಮದ್ಯ ವ್ಯಸನಿಯಾಗಿದ್ದರು. ಶಾಲೆಯಲ್ಲಿದ್ದ ಹತ್ತಕ್ಕೂ ಹೆಚ್ಚು ಶಿಕ್ಷಕರಿಗೆ ಇವರನ್ನು ಕಂಡರೆ ಆಗುತ್ತಿರಲಿಲ್ಲ. ಇವರ ಕುಡಿತದ ಚಟವನ್ನೇ ದೊಡ್ಡದು ಮಾಡಿ ಅವರನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಲೇ ಇದ್ದರು. ತಂಟೆಕೋರನಂತಿದ್ದ ಒಬ್ಬ ಶಿಕ್ಷಕ ಈ ಹೆಡ್ ಮಾಸ್ಟರ್ ವಿರುದ್ಧ ನನ್ನ ತಮ್ಮ ಮತ್ತು ಅವನ ಸಹಪಾಠಿಯ ಹೆಸರಲ್ಲಿ ಒಂದು ದೂರು ಬರೆಸಿಬಿಟ್ಟಿದ್ದರು. ದೂರಿನ ವಿಚಾರಣೆ ನಡೆಸಲು ಬಂದ ಬಿಇಒ ಮುಂದೆ, ತಮ್ಮ ಮೇಷ್ಟ್ರು ಹೇಳಿದ ಕಾರಣಕ್ಕೆ ಖಾಲಿ ಪೇಪರ್ ಮೇಲೆ ಸಹಿ ಹಾಕಿ ಕೊಟ್ಟಿದ್ದ ನನ್ನ ತಮ್ಮ ಮತ್ತು ಅವನ ಸಹಪಾಠಿ ಕಕ್ಕಾಬಿಕ್ಕಿಯಾಗಿದ್ದರು. ಕುಡಿತ ಮತ್ತು ನನ್ನ ತಮ್ಮ ಮತ್ತವನ ಸಹಪಾಠಿಯ ಕೈಯಲ್ಲಿ ಬರೆಸಿದ್ದ ದೂರಿನ ಕಾರಣಕ್ಕೆ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಹಿಂಬಡ್ತಿ ನೀಡಲಾಯಿತು. ಆದರೆ ವರ್ಗಾವಣೆಯಾದ ಹೆಡ್ ಮಾಸ್ಟರ್ ಹೋಗುವ ಮುಂಚೆ ದೂರುಕೊಟ್ಟಿದ್ದ ನನ್ನ ತಮ್ಮ ಮತ್ತು ಆತನ ಸಹಪಾಠಿಯನ್ನು ಕರೆದು ನಿಮ್ಮಬ್ಬರ ಮೇಲೆ ನನಗೆ ಕೋಪ ಇಲ್ಲ ಯಾಕೆಂದರೆ ತಪ್ಪು ನಿಮ್ಮದಲ್ಲ ಎಂದು ಹೇಳಿ ಈ ಇಬ್ಬರಿಗೂ ಬಾಬಾಸಾಹೇಬರ ಬರಹಗಳ ಒಂದೊಂದು ಸಂಪುಟ ಕೊಟ್ಟು ಇದನ್ನು ಓದಿ ಮುಂದೆ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿ ಹೋಗಿದ್ದರು. ಮದ್ಯ ವ್ಯಸನಿಯಾಗಿದ್ದ ಆತ ತನ್ನ ಮೇಲೆ ಸುಳ್ಳು ಅರ್ಜಿ ಬರೆದ ಹುಡುಗರಿಗೆ ಬಾಬಾಸಾಹೇಬರ ಪುಸ್ತಕ ಕೊಟ್ಟು ಹೋದಾಗಲೇ ಆತ ದಲಿತ ಎನ್ನುವುದು ಈ ಹುಡುಗರಿಗೆ ಗೊತ್ತಾಗಿದ್ದು ಮತ್ತು ದೂರು ಕೊಟ್ಟ ಈ ಹುಡುಗರಿಬ್ಬರೂ ದಲಿತರಾಗಿದ್ದರು.
ಇಲ್ಲಿ ನನ್ನನ್ನು ಕಾಡುವುದು ತನ್ನ ಮೇಲೆ ದೂರು ಕೊಟ್ಟ ಹುಡುಗರಿಗೆ ಬಾಬಾಸಾಹೇಬರ ಬರಹಗಳ ಸಂಪುಟ ಕೊಟ್ಟು ಹೋಗಬೇಕು ಎಂದು ಆ ಶಿಕ್ಷಕನಿಗೆ ಅನಿಸಿದ್ದು. ಅಕ್ಷರದ ಕಾರಣಕ್ಕೆ ತಾನೊಂದುರೀತಿಯಲ್ಲಿ ಜಾತಿಯ ವಿಷ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಕ್ಷರವೇ ಈ ಹುಡುಗರನ್ನುಬಿಡುಗಡೆ ಮಾಡುತ್ತದೆ ಎಂದು ಅವರಿಗೆ ಅನಿಸಿದ್ದು ನೆನಪಾದಾಗ ಲೆಲ್ಲಾ ಕೃತಜ್ಞತೆ ಹುಟ್ಟುತ್ತದೆ.
ಹೀಗೆ ಆ ಶಿಕ್ಷಕ ಕೊಟ್ಟ ಬಾಬಾಸಾಹೇಬರ ಬರಹಗಳಮೂರನೆಯ ಸಂಪುಟ ನನ್ನ ತಮ್ಮನ ಮೂಲಕ ನಮ್ಮ ಮನೆಗೆ ಬಂದಿತು. ಅದು ನಾನು ಮುಟ್ಟಿದ ಮೊದಲ ಬಾಬಾಸಾಹೇಬರ ಪುಸ್ತಕ.
” ಅಕ್ಷರದ ಕಾರಣಕ್ಕೆ ತಾನೊಂದು ರೀತಿಯಲ್ಲಿ ಜಾತಿಯ ವಿಷ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಕ್ಷರವೇ ಈ ಹುಡುಗರನ್ನು ಬಿಡುಗಡೆ ಮಾಡುತ್ತದೆ ಎಂದು ಅವರಿಗೆ ಅನಿಸಿದ್ದು ನೆನಪಾದಗಲೆಲ್ಲಾ ಕೃತಜ್ಞತೆ ಹುಟ್ಟುತ್ತದೆ”
ಚಿಕ್ಕಮಗಳೂರು : ಕುದುವರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವ, ಹಿಡ್ಲುಮನೆ ಫಾಲ್ಸ್ ಹಾಗೂ ಕೊಡಚಾದ್ರಿ ಟ್ರೆಕ್‌ಗಳನ್ನು…
ಬೆಂಗಳೂರು: ಕೇರಳ ಮೂಲದ ಬಾಹ್ಯಾಕಾಶ ವಿಜ್ಞಾನಿ, ಪರಿಸರ ತಜ್ಞ ಡಾ. ಕೆ. ಕಸ್ತೂರಿರಂಗನ್ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.…
ಮಂಡ್ಯ : ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಹೆದ್ದಾರಿಯಲ್ಲಿಯೇ ಹೊತ್ತಿ ಉರಿದಿದೆ. ಅದೃಷ್ಟವಶಾತ್ 25 ಕ್ಕೂ ಹೆಚ್ಚು…
ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದಾಗಿ ಪಾಕಿಸ್ತಾನ ತೀವ್ರ ಆರ್ಥಿಕ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಯಶಸ್ವಿಗೆ ಜಿಲ್ಲಾಧಿಕಾರಿ ಸಿಟಿ ಶಿಲ್ಪಾ ನಾಗ್…
ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ ಮುನ್ನೆಚ್ಚೆರಿಕೆ ವಹಿಸಲು ಸಲಹೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾ ಗಿದೆ,ಜೊತೆಗೆ ಮಳೆಯೂ…