ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ ನಿಟ್ಟಿನಲ್ಲಿ ಕಳೆದ ವಾರ ಬೆಳವಣಿಗೆಗಳಾಗಿವೆ. ಪರಸ್ಪರ ಪೂರಕ ಘಟನೆಗಳಿವು.
ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದವರ ವಿರುದ್ಧ ನಟಿ ರಮ್ಯಾ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದರು. ಸಂಬಂಧಪಟ್ಟವರನ್ನು ಬಂಧಿಸಲಾಗಿತ್ತು. ಅದರ ವಿಚಾರಣೆ ಇದೀಗ ಆರಂಭವಾಗಿದೆ. ಮೊನ್ನೆ ರಮ್ಯಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಆರೋಪಿಗಳನ್ನು ನೋಡಿದರೆ ಬೇಸರ ಆಗುತ್ತದೆ. ಹೆಣ್ಣು ಮಕ್ಕಳ ವಿಚಾರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು.
ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬೆದರಿಕೆ ಹಾಕುವವವರಿಗೆ ಭಯ ಬರಬೇಕು ಎಂಬ ಕಾರಣಕ್ಕೆ ದೂರು ದಾಖಲಿಸಿದೆ. ಇಂಥ ವಿಚಾರ ಸುಮ್ಮನೆ ಬಿಟ್ಟರೆ ಮುಂದೆ ಅದೇ ಚಾಳಿ ಮುಂದುವರಿಸುತ್ತಾರೆ. ಇಂಥ ಬೆಳವಣಿಗೆ ತಡೆಯಲು ನಾನು ಎಲ್ಲ ಹೆಣ್ಣು ಮಕ್ಕಳ ಪರವಾಗಿ ಕೇಸ್ ಮುಂದುವರಿಸುತ್ತೇನೆ ಎಂದಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಸಂಗಗಳು, ಮಾನಹಾನಿಕಾರಕ ಹೇಳಿಕೆಗಳು ಇದ್ದರೂ, ಅವುಗಳ ವಿರುದ್ಧ ದೂರು ನೀಡಲು ಬಹಳಷ್ಟು ಮಂದಿ ಹಿಂದೆ ಮುಂದೆ ನೋಡುತ್ತಾರೆ. ತಮಗೇಕೆ ಉಸಾಬರಿ, ಹಾಳಾಗಿ ಹೋಗಲಿ ಎನ್ನುವವರೇ ಹೆಚ್ಚು. ಆದರೆ ರಮ್ಯಾ ಇಡೀ ಪ್ರಸಂಗವನ್ನು ಕೈಗೆತ್ತಿಕೊಂಡು ನ್ಯಾಯಕ್ಕಾಗಿ ಕಾದಿದ್ದಾರೆ.
೨೦೧೭ರ ಫೆಬ್ರವರಿ ತಿಂಗಳಲ್ಲಿ ನಡೆದ ಪ್ರಸಂಗವೂ ಈ ವೇಳೆ ನೆನಪಾಗುತ್ತಿದೆ. ಕೇರಳದಲ್ಲಿ ನಟಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಸಂಗ. ಆಕೆ ಅದರ ವಿರುದ್ಧ ದೂರು ನೀಡಿದರು. ನಟ ದಿಲೀಪ್ ಅವರ ಹೆಸರು ಈ ಘಟನೆಯೊಂದಿಗೆ ಸೇರಿತ್ತಾದರೂ, ಇತ್ತೀಚೆಗೆ ಆತನನ್ನು ‘ನಿರಪರಾಧಿ’ ಎಂದು ಕೆಳಗಿನ ಕೋರ್ಟು ಹೇಳಿದೆ. ಕೇರಳ ಸರ್ಕಾರ ಇದೀಗ ಅಲ್ಲಿನ ಉಚ್ಚ ನ್ಯಾಯಾಲಯಕ್ಕೆ ಅದರ ವಿರುದ್ಧ ಅಪೀಲು ಹೋಗಿದೆ.
ನ್ಯಾಯಾಲಯದ ವಾದ, ವಿವಾದ ತೀರ್ಪುಗಳು ಒತ್ತಟ್ಟಿಗಿರಲಿ, ಮಲಯಾಳ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಈ ಘಟನೆಯ ನಂತರ ಒಂದಾದರು. ಅವರದೇ ಆದ ಸಂಘಟನೆಯನ್ನು ಸ್ಥಾಪಿಸಿಕೊಂಡರು. ಸರ್ಕಾರದ ಮುಂದೆ ಹೋದರು. ಮಹಿಳೆಯರ ಸಮಸ್ಯೆಯ ಕುರಿತಂತೆ ವರದಿ ನೀಡಲು ಸರ್ಕಾರ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿಯನ್ನು ನೇಮಿಸಿತು. ಅದು ನೀಡಿದ ವರದಿ, ಮಲಯಾಳ ಚಿತ್ರರಂಗದ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿಯಿತು. ಮಹಿಳೆಯರನ್ನು ಬೇರೆಬೇರೆ ರೀತಿಯಲ್ಲಿ ಶೋಷಿಸುವುದನ್ನು ಹೇಳಿತು. ಗೌಪ್ಯತೆಯ ಆಧಾರದ ಮೇಲೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ತಮ್ಮ ನೋವಿನ ಅನುಭವವನ್ನು ಆಯೋಗದ ಮುಂದೆ ಮುಕ್ತವಾಗಿ ಹೇಳಿದ್ದರು. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾದಾಗ ಅದಕ್ಕೆ ಸಾಕ್ಷಿ ನೀಡಲು ಯಾರೂ ಸಿದ್ಧರಿರಲಿಲ್ಲ.
ಕಳೆದ ವಾರ ಈ ಅಂಕಣದಲ್ಲಿ ಪಾಪರಾಜಿಗಳ ಕುರಿತು ನಟಿ ಸಪ್ತಮಿ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಸ್ತಾಪಿದ, ಆಕ್ಷೇಪಿಸಿದ ವಿಷಯವನ್ನು ಹೇಳಲಾಗಿತ್ತು. ಆಕೆ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆಕೆಗೆ ಬೆಂಬಲವಾಗಿ ಶಿವಣ್ಣ ಸೇರಿದಂತೆ ಹಲವರು ನಿಂತಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಾಣಿಜ್ಯ ಮಂಡಳಿ ಮೊನ್ನೆ ಸೋಮವಾರ ಇದರ ಕುರಿತಂತೆ ಚರ್ಚಿಸಲು ಸಭೆಯೊಂದನ್ನು ಕರೆದಿತ್ತು. ಮಂಡಳಿಯ ಪದಾಧಿಕಾರಿಗಳು, ಚಿತ್ರೋದ್ಯಮದ ಇತರ ಸಂಘಟನೆಗಳ ಪದಾಧಿಕಾರಿಗಳು, ಮಂಡಳಿಯ ಮಾಜಿ ಅಧ್ಯಕ್ಷರುಗಳು, ದೂರು ನೀಡಿದ ಸಪ್ತಮಿಗೌಡ, ಕಲಾವಿದರಾದ ಮಾಳವಿಕ, ಶ್ರುತಿ, ತರುಣ್ ಸುಧೀರ್, ಸಿನಿಮಾ ಪ್ರಚಾರಕರ್ತರು, ಡಿಜಿಟಲ್ ಮಾಧ್ಯಮ ಮತ್ತು ಯುಟ್ಯೂಬರ್‌ಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ತೆಗೆದುಕೊಂಡ ನಿರ್ಣಯದ ಕುರಿತಂತೆ ವಾಣಿಜ್ಯ ಮಂಡಳಿ ಅದನ್ನು ಮಾಧ್ಯಮಗಳಿಗೆ ಹೇಳಿದೆ. ಅದರ ಪ್ರಕಾರ, ‘ಇನ್ನು ಮುಂದೆ ಇಂತಹ ವಿಡಿಯೋಗಳನ್ನು, ಫೋಟೋಗಳನ್ನು ಪೋಸ್ಟ್ ಮಾಡುವುದಿಲ್ಲ. ಈಗಾಗಲೇ ಪೋಸ್ಟ್ ಮಾಡಿರುವ ಫೋಟೋಗಳನ್ನು ತೆಗೆದು ಹಾಕಲಾಗಿದೆ ಎಂದು ಡಿಜಿಟಲ್ ಮೀಡಿಯಾ ಮತ್ತು ಪಿಆರ್‌ಒಗಳು ಭರವಸೆಯನ್ನು ನೀಡಿದರು. ತದನಂತರ ಸಭೆಯು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಮರುಕಳಿಸಿದ ಪಕ್ಷದಲ್ಲಿ ಅದಕ್ಕೆ ಪಿಆರ್‌ಒಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ರೀತಿಯ ಫೋಟೋಗಳು, ವಿಡಿಯೋಗಳು ಚಿತ್ರೀಕರಿಸಿದ ಘಟನೆಗಳು ಕಂಡುಬಂದಲ್ಲಿ ಕೂಡಲೇ ಸೈಬರ್ ಕ್ರೆ ಮ್‌ಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೀರ್ಮಾನಿಸಲಾಯಿತು’ ವಾಣಿಜ್ಯ ಮಂಡಳಿಯ ಈ ನಿಲುವು, ಪ್ರಚಾರಕರ್ತರ ಪಾಲಿಗೆ ಒಂದಷ್ಟು ಹೆಚ್ಚು ಹೊಣೆಗಾರಿಕೆ ನೀಡಿದೆ. ಇತ್ತೀಚೆಗೆ, ಡಿಜಿಟಲ್ ಮಾಧ್ಯಮಗಳ ಹೆಸರಿನಲ್ಲಿ ನೇರವಾಗಿ ಆಹ್ವಾನ ಪಡೆಯುವವರಿಗಿಂತ ಪರೋಕ್ಷ ಆಹ್ವಾನ ಪಡೆದು ಬರುವವರ ಸಂಖ್ಯೆಯೇ ಹೆಚ್ಚು. ಅದೂ ಅಲ್ಲದೆ, ಚಿತ್ರದ ನಟನಟಿಯರ ಪೈಕಿ ಕೆಲವರು ತಾವೇ ಇಂತಹ ಮಂದಿಗೆ ಆಹ್ವಾನ ನೀಡುತ್ತಾರೆ ಎನ್ನುವ ಮಾತೂ ಇದೆ. ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ಎದುರು ಯಾರು ಸಿಕ್ಕರೂ, ಅವರನ್ನು ಚಿತ್ರಿಸುವವರೇ ಹೆಚ್ಚು. ಎದುರಿಗೆ ಇರುವ ಸೆಲೆಬ್ರಿಟಿಯ ಅನುಮತಿ ಪಡೆದು ಚಿತ್ರಿಸಬೇಕು ಎನ್ನುವ ಕನಿಷ್ಠ ಪರಿವೆಯೂ ಇಲ್ಲದವರದೇ ಈಗ ಕಾರುಬಾರು. ಕೆಲವು ನಟನಟಿಯರೂ ಅದನ್ನು ಬಯಸುತ್ತಾರೆನ್ನಿ. ವಿಶೇಷವಾಗಿ ಹೊಸಬರು.
ಡೀಪ್‌ಫೇಕ್ ಮತ್ತು ನಕಲಿ ಬುದ್ಧಿಮತ್ತೆ ಬಳಸಿ ಈಗ ಯಾವ ರೀತಿಯ ನಕಲಿ ವಿಡಿಯೋ ಆಗಲಿ ಚಿತ್ರ ಆಗಲಿ, ರಚಿಸಬಹುದು. ಒಬ್ಬ ಹುಡುಗ, ಒಬ್ಬ ಹುಡುಗಿಯ ಛಾಯಾಚಿತ್ರ ಇದ್ದರೆ, ಕೃತಕ ಬುದ್ಧಿಮತ್ತೆಯ ಮೂಲಕ ಅವರಿಬ್ಬರು ಓಡಾಡುವಂತೆಯೋ, ಜೊತೆಯಾಗಿರುವಂತೆಯೋ ತೋರಿಸುವ ವಿಡಿಯೋ ಮಾಡಬಹುದು. ಬಹುತೇಕ ಮೊಬೈಲ್‌ಗಳಲ್ಲಿ ಈ ಆಪ್ ಇಳಿಸಿಕೊಂಡು ಫೋಟೋ, ವಿಡಿಯೋ ಮಾಡಿಕೊಳ್ಳಬಹುದು. ಇದು ಸಮಾಜದಲ್ಲಿ ಮಾಡುತ್ತಿರುವ ಅಪಾಯ ಅಷ್ಟಿಷ್ಟಲ್ಲ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕಳೆದ ತಿಂಗಳು ತಿದ್ದುಪಡಿ ತಂದಿದೆ. ಮಾತ್ರವಲ್ಲ, ತಕ್ಷಣದಿಂದಲೇ ಅದು ಜಾರಿಗೆ ಬಂದಿದೆ. ‘ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು ೨೦೨೬’ ಹೆಸರಿನಲ್ಲಿ ಹೊಸ ನಿಯಮಗಳು -.೨೦ರಿಂದಲೇ ಜಾರಿಗೆ ಬಂದಿದ್ದು, ರಾಜ್ಯದಲ್ಲೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಹೊಸ ತಿದ್ದುಪಡಿಯ ಪ್ರಕಾರ, ಸಾಮಾಜಿಕ ತಾಣಗಳಲ್ಲಿನ ಹಾನಿಕಾರಕ ಇಲ್ಲವೇ ಆಕ್ಷೇಪಾರ್ಹ ಮಾಹಿತಿಗಳನ್ನು ಈ ಹಿಂದೆ ೩೬ ಗಂಟೆಗಳ ಒಳಗೆ ತೆಗೆದು ಹಾಕಬೇಕಾಗಿತ್ತು.
ಆದರೆ ಈಗ ಸರ್ಕಾರ ಯಾ ಪೊಲೀಸ್ ಇಲಾಖೇ ಆದೇಶಿಸಿದ ೩ ಗಂಟೆಯ ಒಳಗೆ ಅದನ್ನು ಕಡ್ಡಾಯವಾಗಿ ತೆಗೆದು ಹಾಕಬೇಕು. ಮಾತ್ರವಲ್ಲ, ಬಳಕೆದಾರರ ದೂರನ್ನು ೧೫ ದಿನಗಳ ಬದಲು ೭ ದಿನಗಳಲ್ಲಿ ಬಗೆಹರಿಸಬೇಕು. ಸಾಮಾಜಿಕ ತಾಣಗಳಲ್ಲಿ ಹರಿದಾಡುವ ವಿಡಿಯೋಗಳು, ಫೋಟೋಗಳಲ್ಲಿ ಅಸಲಿ ಯಾವುದು ಕೃತಕ ಯಾವುದು ಎನ್ನುವುದು ಈ ಹಿಂದೆ ತಿಳಿಯುತ್ತಿರಲಿಲ್ಲ. ಆದರೆ ಈ ತಿದ್ದುಪಡಿಯಲ್ಲಿ ಅದನ್ನು ಪ್ರಸ್ತಾಪಿಸಲಾಗಿದೆ. ಅಸಲಿಯಂತೆಯೇ ಕಾಣುವ ನಕಲಿ ಕಂಟೆಂಟನ್ನು ಎಐ ಬಳಸಿ ಸೃಷ್ಟಿಸಿದ್ದರೆ, ಇದು ಕೃತಕವಾಗಿ ಸೃಷ್ಟಿಸಲ್ಪಟ್ಟಿದೆ’ ಎನ್ನುವ ಸಾಲು ಎದ್ದು ಕಾಣುವಂತೆ ಅಲ್ಲಿ ಇರಬೇಕು. ವಿಡಿಯೋ ಆದರೆ, ಆರಂಭದಲ್ಲೇ ಅದನ್ನು ಹೇಳಬೇಕು. ಇಂತಹ ಪ್ರತಿ ಕಂಟೆಂಟ್ ಹಿಂದೆ ಅದನ್ನು ಯಾರು, ಎಲ್ಲಿ ಮಾಡಿದರು ಎನ್ನುವ, ಅಳಿಸಲು ಸಾಧ್ಯವಾಗದ ಗುರುತು ಇರಬೇಕು.
ಸಂಸ್ಥೆಗಳು ಮಾತ್ರವಲ್ಲ, ಬಳಕೆದಾರರಿಗೂ ಕಾಲಕಾಲಕ್ಕೆ ಅವು ನಿಯಮ. ಗೌಪ್ಯತೆ ನೀತಿ ಮತ್ತು ಯಾವುದನ್ನು ಅಪ್‌ಲೋಡ್ ಮಾಡುವುದು ನಿಷೇಧ ಎನ್ನುವ ವಿವರಗಳನ್ನು ಮೂರು ತಿಂಗಳಿಗೊಮ್ಮೆ ನೀಡುತ್ತಿರಬೇಕು. ನಿಯಮ ಉಲ್ಲಂಘಿಸಿದ ಬಳಕೆದಾರರ ಖಾತೆಯನ್ನು ಅಮಾನತ್ತುಗೊಳಿಸುವುದೋ, ರದ್ದು ಮಾಡುವುದೋ ಹಕ್ಕು ಆಯಾ ಕಂಪೆನಿಗಳದು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಬರುತ್ತಿರುವ ಸುದ್ದಿ, ದೃಶ್ಯಾವಳಿಗಳಲ್ಲಿ ಅಸಲಿ ಎಷ್ಟು ನಕಲಿ ಎಷ್ಟು ಎನ್ನುವುದನ್ನು ತಿಳಿಯುವುದು ಬಹಳ ಕಷ್ಟ. ಮಳೆಗಾಲದಲ್ಲಿ ಬೇರೆಬೇರೆ ದೇಶಗಳಲ್ಲಿ ಪ್ರಕೃತಿ ವಿಕೋಪದ ತರಹಾವರಿ ವಿಡಿಯೋಗಳು ನೋಡುಗನನ್ನು ಬೆಚ್ಚಿ ಬೀಳಿಸುವಂತಿತ್ತು. ಆದರೆ ಅವುಗಳಲ್ಲಿ ಬಹುತೇಕ ನಕಲಿ, ಎಐ ಸೃಷ್ಟಿ ಎಂದು ತಿಳಿಯಲು ಸಾಕಷ್ಟು ಸಮಯ ಬೇಕಾಯಿತು.
ಕ್ಷಣಾರ್ಧದಲ್ಲಿ ಹರಡುವ ನಕಲಿ ವಿಡಿಯೋಗಳಿಗೆ, ಅದರಲ್ಲೂ ದುರುದ್ದೇಶಪೂರಿತ ನಕಲಿ ವಿಡಿಯೋ ಹರಡುವ ಮಂದಿಗೆ ಈ ತಿದ್ದುಪಡಿ ಅಂಕುಶವಾಗಬಹುದು. ಹಾಗೆಯೇ ಮಹಿಳೆಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಬದಲಾಯಿಸುವ ವಿಕೃತ ಕೃತ್ಯಗಳು ಕಡಿಮೆಯಾಗಬಹುದು. ಕರ್ನಾಟಕ ಪೊಲೀಸ್ ಸರ್ಕಾರದ ಆದೇಶವನ್ನು ಪಾಲಿಸಲು ಕಟಿಬದ್ಧವಾದರೆ, ಎಐಯ ಅನಗತ್ಯ ಸೃಷ್ಟಿಯನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯ. ಹಾಗಾಗುತ್ತದೆ ಎಂದುಕೊಳ್ಳೋಣ.
” ಸಾಮಾನ್ಯವಾಗಿ ಇಂತಹ ಪ್ರಸಂಗಗಳು, ಮಾನಹಾನಿಕಾರಕ ಹೇಳಿಕೆಗಳು ಇದ್ದರೂ, ಅವುಗಳ ವಿರುದ್ಧ ದೂರು ನೀಡಲು ಬಹಳಷ್ಟು ಮಂದಿ ಹಿಂದೆ ಮುಂದೆ ನೋಡುತ್ತಾರೆ. ತಮಗೇಕೆ ಉಸಾಬರಿ, ಹಾಳಾಗಿ ಹೋಗಲಿ ಎನ್ನುವವರೇ ಹೆಚ್ಚು. ಆದರೆ ರಮ್ಯಾ ಇಡೀ ಪ್ರಸಂಗವನ್ನು ಕೈಗೆತ್ತಿಕೊಂಡು ನ್ಯಾಯಕ್ಕಾಗಿ ಕಾದಿದ್ದಾರೆ.”
ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…
ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…
ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…
ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…
ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…
ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…