ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು, ಸರ್ಕಾರ ಚಿತ್ರನಗರಿ ಮತ್ತು ಒಟಿಟಿ ಕುರಿತಂತೆ ತೆಗೆದುಕೊಂಡ ನಿಲುವು, ೧೭ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭರದ ಸಿದ್ಧತೆ, ಎಂದಿನಂತೆ ಸ್ಪರ್ಧೆಗೆ ಆಯ್ಕೆಯಾದ ಚಿತ್ರಗಳ ಕುರಿತಂತೆ ಅಲ್ಲೊಂದು ಇಲ್ಲೊಂದು ಅಪಸ್ವರ, ಈ ನಡುವೆ ತಮಿಳು ಚಿತ್ರ ‘ಜನನಾಯಗನ್’ ಗೆ ಪ್ರಮಾಣಪತ್ರ ಸಿಗದೆ ಬಿಡುಗಡೆಗೆ ತೊಡಕು.
ಅದಾಗಲೇ ಕನ್ನಡ ಚಿತ್ರನಿರ್ಮಾಪಕರ ಸಂಘದ ಚುನಾವಣೆ ಮಗಿದು ಹೊಸ ಭಾರವಾಹಿಗಳು ಅಧಿಕಾರ ಸ್ವೀಕರಿಸಿದ್ದಾರೆ. ತನ್ನದೇ ಆದ ಕಟ್ಟಡ ಹೊಂದಿದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ. ಅಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದದ್ದು ಎಂ.ಜಿ.ರಾಮಮೂರ್ತಿ. ಅವರು ಈ ಹಿಂದೆ ಅಧ್ಯಕ್ಷರಾಗಿದ್ದ ಉಮೇಶ್ ಬಣಕಾರ್ ಅವರನ್ನು ಪರಾಜಯಗೊಳಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ನ್ಯಾಯ ಸಿಗುತ್ತಿಲ್ಲ, ತಮ್ಮದೇ ಆದ ಸಂಸ್ಥೆಯೊಂದರ ಅಗತ್ಯ ಇದೆ ಎಂದು ಅಲ್ಲಿಂದ ಸಿಡಿದು ಬಂದು ಸ್ಥಾಪಿಸಿದ ಸಂಸ್ಥೆ ನಿರ್ಮಾಪಕರ ಸಂಘ. ಆರಂಭದ ದಿನಗಳಲ್ಲಿ ಸಂಘದ ಅಧ್ಯಕ್ಷರ ಕಚೇರಿಯೇ ಸಂಘದ ಕಚೇರಿಯೂ ಆಗುತ್ತಿತ್ತು. ನಂತರ ನಿರ್ಮಾಪಕ ಎಸ್.ವಿ.ಬಾಬು ಅವರ ಕಾರ್ಡ್ ರಸ್ತೆಯ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸಂಘ ಕಾರ್ಯ ನಿರ್ವಹಿಸತೊಡಗಿತು. ಆಗ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಡಾ.ಜಯಮಾಲ ಅವರು ತಮ್ಮ ಅವಧಿಯಲ್ಲಿ ನಿರ್ಮಾಪಕರ ಸಂಘಕ್ಕೆ ಈ ಕಟ್ಟಡವನ್ನು ಪಡೆಯಲು ನೆರವಾದರು. ಬಹುಶಃ ಆಗ ಮುನಿರತ್ನಂ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದರು.
ಇದೀಗ ಶಿವಾನಂದ ವೃತ್ತದ ಬಳಿ ಇರುವ ಗಾಂಧಿಭವನದ ಎದುರು ನಿರ್ಮಾಪಕರ ಸಂಘದ ಸ್ವಂತ ಕಟ್ಟಡ ಇದೆ. ಈ ಕಟ್ಟಡಕ್ಕೆ ನಿವೇಶನ ಒದಗಿಸಿ ಕಟ್ಟಡ ಕಟ್ಟಲು ಮುನಿರತ್ನಂ ಸೇರಿದಂತೆ ಹಲವು ಪ್ರಮುಖ ನಿರ್ಮಾಪಕರು ನೆರವಾದರು. ನಿರ್ಮಾಪಕರಾದ ರಮೇಶ್ ರೆಡ್ಡಿ ಬಹಳ ಕಡಿಮೆ ವೆಚ್ಚದಲ್ಲಿ ಈ ಕಟ್ಟಡ ಕಟ್ಟಿ ಕೊಟ್ಟದ್ದಾಗಿ ಸಂಬಂಧಪಟ್ಟವರು ಹೇಳುತ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಕಾವು ಏರತೊಡಗಿದೆ. ಡಾ.ಜಯಮಾಲ, ಮುನಿರತ್ನ, ಭಾ.ಮ.ಹರೀಶ್ ಮತ್ತು ಮಹದೇವ (ಚಿಂಗಾರಿ) ಈ ನಾಲ್ವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಬಾರಿ ಸರದಿಯಂತೆ ನಿರ್ಮಾಪಕರು ಅಧ್ಯಕ್ಷರಾಗುತ್ತಾರೆ. ನಾಲ್ವರ ಪೈಕಿ ಡಾ. ಜಯಮಾಲ ಮತ್ತು ಮುನಿರತ್ನ ಇಬ್ಬರೂ ರಾಜಕೀಯದಲ್ಲಿ ಸಕ್ರಿಯರು.
ಮುನಿರತ್ನ ಹಾಲಿ ಶಾಸಕರು. ಅವರು ಭಾರತೀಯ ಜನತಾ ಪಕ್ಷದವಲ್ಲಿದ್ದರೆ, ಮಾಜಿ ಸಚಿವರೂ ಆಗಿದ್ದ ಜಯಮಾಲ ಅವರದು ಕಾಂಗ್ರೆಸ್ ಪಕ್ಷ. ಹಾಗಾಗಿ ಈ ಚುನಾವಣೆಯಲ್ಲಿ ರಾಜಕೀಯದ ವಾಸನೆ ಬಂದಿದ್ದ ಮಾಧ್ಯಮಗಳಿಗೆ ಮುನಿರತ್ನ ಅವರು ಸ್ಪರ್ಧೆಯಿಂದ ಹಿಂದೆ ಸರಿದದ್ದು ಅಷ್ಟೇನೂ ಹಿತವಾಗಿರಲಾರದು. ಮುನಿರತ್ನ ನಾಮಪತ್ರ ಹಿಂದೆಗೆಯಲು ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರ ಒತ್ತಾಯವೂ ಇತ್ತು ಎನ್ನಲಾಗಿದೆ. ಚಿಂಗಾರಿ ನಿರ್ಮಾಪಕ ಮಹದೇವ ಅವರೂ ಕೂಡ ನಾಮಪತ್ರ ಹಿಂತೆಗೆದುಕೊಂಡರು. ಸ್ಪರ್ಧೆಯ ಕಣದಲ್ಲಿರುವ ಹರೀಶ್ ಹೊರತಾಗಿ ಮಾಜಿ ಅಧ್ಯಕ್ಷರುಗಳೆಲ್ಲ ಡಾ.ಜಯಮಾಲ ಅವರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ. ಹರೀಶ್ ಅವರು ಈ ಚುನಾವಣೆಗೆ ಸಾಕಷ್ಟು ಮೊದಲಿಂದಲೇ ಸಿದ್ಧತೆ ನಡೆಸಿದ್ದಾರೆ ಎನ್ನುವುದು ಅವರ ಬೆಂಬಲಿಗರ ಮಾತು. ಯಾವುದೇ ಸಾರ್ವತ್ರಿಕ ಚುನಾವಣೆಗೆ ಸರಿಸಾಟಿ ಎನ್ನುವ ಹಾಗೆ ಹರೀಶ್ ಅವರು ಮತದಾರ ಸದಸ್ಯರ ಮನೆಮನೆಗೆ ತೆರಳಿ ಮತ ಕೋರುತ್ತಿದ್ದಾರೆ ಎಂದು ಚುನಾವಣಾ ಕಣದ ಇತರ ವಿಭಾಗದಲ್ಲಿ ನಾಮಪತ್ರ ಸಲ್ಲಿಸಿದವರ ಅಂಬೋಣ.
ಈ ಮಧ್ಯೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ದೂರಿ ಸದಸ್ಯರೊಬ್ಬರು ಹೈಕೋರ್ಟಿನ ಮೆಟ್ಟಲೇರಿದ್ದರು. ಆದರೆ ನ್ಯಾಯಾಲಯ ವಾದ ವಿವಾದಗಳ ನಂತರ ನಿಗದಿಯಂತೆ ಚುನಾವಣೆ ನಡೆಸಲು ಒಪ್ಪಿದೆ. ನಾಳೆ ಚುನಾವಣೆ ನಡೆಯಲಿದೆ. ನಿನ್ನೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ವಾಣಿಜ್ಯ ಮಂಡಳಿಯ ಹಾಲಿ ಅಧ್ಯಕ್ಷರಿದ್ದರೆ, ಸಮಾರೋಪದಲ್ಲಿ ಹೊಸದಾಗಿ ಆಯ್ಕೆಯಾಗುವ ಅಧ್ಯಕ್ಷರು ಇರುತ್ತಾರೆ.
ಕಳೆದ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದಂತೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತ ಕೆಲಸಗಳು ನಡೆದಂತಿವೆ. ಮೈಸೂರಿನಲ್ಲಿ ಇದಕ್ಕಾಗಿ ಪಡೆದ ಜಾಗವನ್ನು ವಾರ್ತಾ ಇಲಾಖೆಯ ಸುಪರ್ದಿಗೆ ನೀಡಲಾಗಿದ್ದು, ಪಿಪಿಪಿ ಮಾದರಿಯಲ್ಲಿ ಇದರ ನಿರ್ಮಾಣದ ನಿಲುವು ಸರ್ಕಾರದ್ದು. ಇದಕ್ಕೆ ಬಂಡವಾಳ ಹೂಡಲು ಆಸಕ್ತರೂ ಇದ್ದಾರೆ. ಈ ಕುರಿತಂತೆ ಉದ್ಯಮದ ಮಂದಿಯ ನಿಲುವು ಸ್ವಲ್ಪ ಭಿನ್ನವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಚಿತ್ರನಗರಿಯ ಕುರಿತಂತೆ ಉದ್ಯಮದ ಮಂದಿಯ ಅಭಿಪ್ರಾಯ ಕೇಳಿದಾಗ ಈ ನಿಲುವು ಪ್ರಕಟವಾಗಿದೆ ಎನ್ನಲಾಗಿದ್ದು, ಇಲ್ಲಿನ ಆಸಕ್ತ ಚಿತ್ರೋದ್ಯಮದ ಮಂದಿಗೆ ಅಲ್ಲಿ ಜಾಗ ನೀಡಲು ಸಲಹೆ ನೀಡಿದ್ದಾಗಿ ಮೂಲಗಳು ಹೇಳುತ್ತಿವೆ. ಅಲ್ಲಿ ಚಿತ್ರೀಕರಣ ಅಂಗಣ, ಸಂಕಲನ, ಧ್ವನಿಮುದ್ರಣ ಕೇಂದ್ರಗಳು, ಅನಿಮೇಶನ್, ಡಿಐ ಇತ್ಯಾದಿ ವ್ಯವಸ್ಥೆಗಳನ್ನು ಈ ಜಾಗಗಳಲ್ಲಿ ಮಾಡಲು ಇದು ಅನುಕೂಲ ಎನ್ನುವುದು ಅಲ್ಲಿ ವ್ಯಕ್ತವಾದ ಅಭಿಪ್ರಾಯವಂತೆ.
ಸರ್ಕಾರದ ಒಡೆತನದ ಒಟಿಟಿ ಯೋಜನೆಯ ಕುರಿತಂತೆ ಕೂಡ ಸಾಕಷ್ಟು ಪ್ರಗತಿ ಆಗಿದ್ದು, ಇಷ್ಟರಲ್ಲೇ ಆ ಕುರಿತ ವಿವರಗಳೂ ಬರಲಿವೆ ಎನ್ನುವ ಮಾತು ಕೇಳಿಬರುತ್ತಿದೆ. ಕೇರಳ ಸರ್ಕಾರ ಮೊದಲು ಒಟಿಟಿ ಆರಂಭಿಸಿದರೆ, ಈಗ ಇನ್ನೂ ಕೆಲವು ರಾಜ್ಯಗಳು ಅದನ್ನು ಕೈಗೆತ್ತಿಕೊಂಡಿವೆ. ಕೇರಳದಲ್ಲಿ ಒಟಿಟಿಯ ಉದ್ದೇಶ ಸದಭಿರುಚಿಯ ಮಲಯಾಳ ಚಿತ್ರಗಳ ಉತ್ತೇಜನ. ಸಾಕಷ್ಟು ಚಿತ್ರಸಮಾಜಗಳು, ಸಿನಿಮಾ ಕ್ಲಬ್‌ಗಳು ಕೇರಳದಲ್ಲಿ ಚಲನಚಿತ್ರ ಸಂಸ್ಕೃತಿಯನ್ನು ಹರಡುವಲ್ಲಿ ನೆರವಾಗುತ್ತಿವೆ. ಆ ಕಾರಣದಿಂದಲೇ ಕೇರಳದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಬಯಸುವ ಪ್ರತಿನಿಧಿಗಳ ಸಂಖ್ಯೆಯೂ ಅಧಿಕ. ಹದಿಮೂರು ಸಾವಿರಕ್ಕೂ ಹೆಚ್ಚು ಮಂದಿ ಶುಲ್ಕ ತೆತ್ತು ಅಲ್ಲಿ ಪ್ರತಿವರ್ಷ ಪ್ರತಿನಿಧಿಗಳಾಗುತ್ತಾರೆ!
ಹ್ಞಾಂ. ಹದಿನೇಳನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ನಿನ್ನೆ ಆಗಿದೆ. ಈ ಬಾರಿ ಪ್ರದರ್ಶನದ ಜಾಗ ಬದಲಾಗಿದೆ. ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇಕಾದಷ್ಟು ಸ್ಥಳಾವಕಾಶ ಅಲ್ಲಿ ಇದೆ ಎನ್ನುವ ಕಾರಣಕ್ಕೆ ಈ ಜಾಗವನ್ನು ಆಯ್ಕೆ ಮಾಡಿದ್ದಾಗಿ ಅಕಾಡೆಮಿಯ ಅಧ್ಯಕ್ಷರ ಅಂಬೋಣ. ವಿವಿಧ ವಿಭಾಗಗಳ ಸ್ಪರ್ಧೆಗೆ ಚಿತ್ರಗಳ ಆಯ್ಕೆ ಪ್ರಕಟವಾಗಿದೆ. ಕನ್ನಡದ ಚಿತ್ರ ‘ನಂ ಸಾಲಿ’ ಮೂರೂ ವಿಭಾಗಗಳಲ್ಲಿ ಆಯ್ಕೆಯಾಗಿರುವುದು ಬಹುತೇಕರ ಹುಬ್ಬೇರಿಸಿದೆ. ಅದೊಂದೇ ಚಿತ್ರ ಆಯ್ಕೆಯಾದದ್ದು ಇದಕ್ಕೆ ಕಾರಣ. ಚಲನಚಿತ್ರ ಅಕಾಡೆಮಿಯ ಸದಸ್ಯರೊಬ್ಬರು, ಚಿತ್ರೋತ್ಸವ ಸಂಘಟನಾ ಸಮಿತಿಯ ಸದಸ್ಯರೂ ಆಗಿದ್ದು, ಅವರು ಆ ಚಿತ್ರದಲ್ಲಿ ಪಾಲ್ಗೊಂಡದ್ದು, ನಟಿಸಿದ್ದು ಅವರೇ ತಮ್ಮ ಬಳಗದಲ್ಲಿ ಹಂಚಿಕೊಂಡದ್ದರು. ಅವರು ಅಕಾಡೆಮಿಗೆ, ಸಂಘಟನಾ ಸಮಿತಿಗೆ ರಾಜಿನಾಮೆ ನೀಡಿದ್ದಾಗಿ ನಂತರ ಸಂಬಂಧ ಪಟ್ಟವರು ಹೇಳಿದರು. ಅಕಾಡೆಮಿಯ ಜಾಲತಾಣದಲ್ಲಿ ಅವರು ಈಗಲೂ ಇದ್ದಾರೆ ಎನ್ನುವುದು ಬೇರೆ ಮಾತು.
ಚಿತ್ರೋತ್ಸವಕ್ಕೆ ಕೊನೆಯ ಹಂತದಲ್ಲಿ ತಡೆ ನೀಡಲಾಗುವುದಿಲ್ಲ ಎಂದು ಸ್ಪರ್ಧಾವಿಭಾಗಗಳ ಆಯ್ಕೆಯನ್ನು ಪ್ರಶ್ನಿಸಿ ಕಟಕಟೆ ಏರಿದ ಇಬ್ಬರು ನಿರ್ಮಾಪಕರ ಪರ-ವಿರೋಧ ವಾದಗಳನ್ನು ಆಲಿಸಿದ ಹೈಕೋರ್ಟ್ ತೀರ್ಪು ನೀಡಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ. ಕಳೆದ ವರ್ಷವೂ ಇಂತಹದೇ ದೂರು ಬಂದಿತ್ತು. ಕಳೆದ ಬಾರಿ ಕನ್ನಡ ಚಿತ್ರಗಳ ವಿಭಾಗದಲ್ಲಿ ಎರಡು ತುಳು ಚಿತ್ರಗಳು ಪ್ರಶಸ್ತಿ ಪಡೆದು ದಾಖಲೆ ಆಗಿತ್ತು. ಆದರೆ ಈ ಬಾರಿ ಯಾವ ತುಳು ಚಿತ್ರವೂ ಸ್ಪರ್ಧೆಗೆ ಆಯ್ಕೆಯಾಗಿಲ್ಲ. ಚಿತ್ರಗಳು ಇರಲಿಲ್ಲ ಎಂದೇನಿಲ್ಲ. ತುಳುನಾಡಿನ ಜನಪ್ರಿಯ ಕಂಬಳದ ಹಿನ್ನೆಲೆಯ ‘ಬಿರ್ದ್‌ದ ಕಂಬಳ’ ಚಿತ್ರವನ್ನು ಮೂರೂ ವಿಭಾಗಗಳ ಸ್ಪರ್ಧೆಗೆ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದ್ದಾಗಿ ಹೇಳುತ್ತಾರೆ ಅದರ ನಿರ್ದೇಶಕರಾದ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು). ಸಂಸ್ಕೃತದ ‘ಪದ್ಮಗಂಧಿ’ ಚಿತ್ರವೂ ಕಣದಲ್ಲಿದ್ದದ್ದನ್ನು ಅದರ ನಿರ್ದೇಶಕ ಸುಚೇಂದ್ರ ಪ್ರಸಾದ್ ಹೇಳುತ್ತಾರೆ. ಯಾವುದೇ ಆಯ್ಕೆಯೂ ವಿವಾದಾತೀತವಾಗಿರುವುದಿಲ್ಲ ಎನ್ನುವ ಮಾತು ಸಾರ್ವತ್ರಿಕ ಸತ್ಯವಾದರೂ ಈ ಮಾತು ಆಯ್ಕೆ ಮಾಡುವವರಿಗೆ ಗುರಾಣಿ ಆಗಬಾರದು. ಅಷ್ಟೇ.
ಕನ್ನಡದ ಹೆಸರಾಂತ ಸಂಸ್ಥೆ ಕೆವಿಎನ್ ಅವರ ‘ಜನ ನಾಯಗನ್’ ಚಿತ್ರಕ್ಕೆ ಇನ್ನೂ ಪ್ರಮಾಣಪತ್ರ ಬಂದಿಲ್ಲ. ತಮಿಳುನಾಡಿನ ಹೈಕೋರ್ಟ್ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಪ್ರಮಾಣಪತ್ರ ಪಡೆಯುವ ಮೊದಲೇ ಬಿಡುಗಡೆಯ ದಿನಾಂಕ ಪ್ರಕಟಿಸಿದ್ದನ್ನು ಮಂಡಳಿ ಕೆಲವೊಮ್ಮೆ ಪ್ರಶ್ನಿಸುವುದಿದೆ. ಮಂಡಳಿಯ ಹಲವು ನಿಯಮಗಳು ಉದ್ಯಮಕ್ಕೆ ಇನ್ನೂ ತಿಳಿದಂತಿಲ್ಲ. ಯಾವುದೇ ಚಿತ್ರ ಪ್ರಮಾಣಪತ್ರ ಪಡೆದ ಮೇಲೆ ಆಗುವ ಎಲ್ಲ ಪ್ರಚಾರದಲ್ಲೂ ಅದು, ಯು, ಯು/ಎ, ಎ, ಯಾವ ಪ್ರಮಾಣಪತ್ರ ಪಡೆದಿದೆ ಎನ್ನುವುದನ್ನು ಪ್ರಚಾರ ಭಿತ್ತಿಪತ್ರ ಮತ್ತು ಜಾಹೀರಾತುಗಳಲ್ಲಿ ಪ್ರಕಟಿಸಬೇಕು; ಪ್ರಕಟಿಸದಿದ್ದರೆ ಅದು ಶಿಕ್ಷಾರ್ಹ ಎನ್ನುವ ನಿಯಮ ಹೇಗೆ ಸಡಿಲವಾಗಿದೆಯೋ ಏನೋ!
” ಚಿತ್ರೋತ್ಸವಕ್ಕೆ ಕೊನೆಯ ಹಂತದಲ್ಲಿ ತಡೆ ನೀಡಲಾಗುವುದಿಲ್ಲ ಎಂದು ಸ್ಪರ್ಧಾವಿಭಾಗಗಳ ಆಯ್ಕೆಯನ್ನು ಪ್ರಶ್ನಿಸಿ ಕಟಕಟೆ ಏರಿದ ಇಬ್ಬರು ನಿರ್ಮಾಪಕರ ಪರ-ವಿರೋಧ ವಾದಗಳನ್ನು ಆಲಿಸಿದ ಹೈಕೋರ್ಟ್ ತೀರ್ಪು ನೀಡಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ. ಕಳೆದ ವರ್ಷವೂ ಇಂತಹದೇ ದೂರು ಬಂದಿತ್ತು.”
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…