ಅಂಕಣಗಳು

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಪೈರೆಸಿ ವಿರುದ್ಧ ಚಿತ್ರೋದ್ಯಮ ಯುದ್ಧ ಸನ್ನದ್ಧ!?

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ ಗಳಿಕೆ ಏನೇ ಇರಲಿ, ಉಳಿದಂತೆ ಸಾಕಷ್ಟು ಸುದ್ದಿ ಮಾಡಿದ್ದಂತೂ ಹೌದು. ಹುಬ್ಬಳ್ಳಿಯಲ್ಲಿ ತಮ್ಮ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು ಮಾಧ್ಯಮಗಳಿಗೆ, ಉದ್ಯಮದ ಮಂದಿಗೆ ಗ್ರಾಸವಾಗಿತ್ತು. ತಾವು ಸಾರಿದ ಯುದ್ಧ ಪೈರೆಸಿ ಮಾಡುವವರ ವಿರುದ್ಧ, ಆ ನಿಟ್ಟಿನಲ್ಲಿ ಕೆಲಸ ಮಾಡುವವರ ವಿರುದ್ಧ ಎಂದ ಅವರ ಮಾತನ್ನು ಅಂತೆಯೇ ಸ್ವೀಕರಿಸಿದವರು ಕಡಿಮೆ. ಅದೇನೇ ಇರಲಿ, ಮುಂದೆ ಪೈರೆಸಿಯ ಕುರಿತಂತೆ ದೊಡ್ಡ ಬೆಳವಣಿಗೆಯೇ ಆಯಿತು.

ಕಳೆದ ವಾರ ತೆರೆಕಂಡದ್ದು ‘ಮಾರ್ಕ್’ ಮತ್ತು ‘೪೫’. ಸುದೀಪ್ ತಮ್ಮ ಚಿತ್ರ ‘ಮಾರ್ಕ್’ ಪೈರೆಸಿ ಮಾಡಲು ಸಿದ್ಧರಾಗುತ್ತಿರುವ ಮಂದಿಯ ಬಗ್ಗೆ ಹೇಳಿದ್ದರೆನ್ನಿ. ಆದರೆ ಈ ಚಿತ್ರಗಳು ಬಿಡುಗಡೆಯಾದ ಒಂದೆರಡು ದಿನಗಳಲ್ಲಿ ‘೪೫’ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿಯವರು, ತಮಗೆ ಈ ಪೈರೆಸಿ ಚಿತ್ರದ ಕೊಂಡಿಯನ್ನು ಕಳುಹಿಸಿಕೊಟ್ಟದ್ದನ್ನು ಹೇಳಿದರು. ‘ಪೈರೆಸಿ ಮಾಡಬೇಡಿ’ ಎಂದು ವಿನಂತಿಸಿದರು.

ಅದಕ್ಕೊಂದು ತಾರ್ಕಿಕ ಅಂತ್ಯ ಆರಂಭವಾದದ್ದು ‘ಕೋಣ’ ಚಿತ್ರದ ನಿರ್ಮಾಪಕರ ದೂರಿನಿಂದ. ಆ ಚಿತ್ರ ತೆರೆಕಂಡದ್ದು ಕಳೆದ ವರ್ಷ ಅಕ್ಟೋಬರ್ ಕೊನೆಯ ವಾರದಲ್ಲಿ. ನಟಿ ತನಿಷಾ ಕುಪ್ಪಂಡ ನಿರ್ಮಾಪಕಿಯೂ ಆಗಿದ್ದ ಚಿತ್ರವದು. ಕೋಮಲ್ ಕುಮಾರ್ ಮುಖ್ಯಭೂಮಿಕೆಯ ಚಿತ್ರ. ಬಹುತೇಕ ಚಿತ್ರಗಳ ಕಳ್ಳಪ್ರತಿಗಳು ಬೇರೆಬೇರೆ ಜಾಲತಾಣಗಳಲ್ಲಿ ತೆರೆಕಂಡ ದಿನ ಇಲ್ಲವೇ ಮಾರನೇ ದಿನ ಲಭ್ಯ ಎನ್ನುವುದು ಉದ್ಯಮದ ಬಹಳಷ್ಟು ಮಂದಿಗೆ ತಿಳಿದಿದ್ದರೂ ಸಾಧಾರಣ ವೆಚ್ಚದ ಚಿತ್ರಗಳ ನಿರ್ಮಾಪಕ ಅದರ ವಿರುದ್ಧ ಏನೂ ಮಾಡಲಾಗುತ್ತಿರಲಿಲ್ಲ. ಪೈರೆಸಿ ಒಂದು ಶಿಕ್ಷಾರ್ಹ ಅಪರಾಧ, ಅದು ಗೂಂಡಾ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎನ್ನುವ ಮಾಹಿತಿ ಸಾಕಷ್ಟು ಮಂದಿಗೆ ಇದ್ದಂತಿಲ್ಲ ಎನ್ನುವುದು, ಮೊನ್ನೆ ಈ ಕುರಿತಂತೆ ಅವರು ಮಾಧ್ಯಮಗಳ ಮುಂದೆ ಬಂದಾಗಲೇ ತಿಳಿದದ್ದು.

ಪೈರೆಸಿ ಮಾಡುವ ಬಹುದೊಡ್ಡ ಜಾಲದಲ್ಲಿ ಒಬ್ಬಾತ ಸಿಕ್ಕಿಹಾಕಿಕೊಂಡಿದ್ದಾನೆ. ರಾಜ್ಯಸಭೆಯಲ್ಲಿ ಪೈರೆಸಿ ವಿರುದ್ಧ ದನಿ ಎತ್ತಿದ್ದ ಜಗ್ಗೇಶ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಮಾರಕವಾಗಿರುವ ಈ ಜಾಲದ ವಿರುದ್ಧ ನಿಂತಿದ್ದಾರೆ. ಚಿತ್ರೋದ್ಯಮವೂ ಅವರ ಬೆನ್ನಿಗಿದೆ ಎನ್ನಿ. ತೆರೆಕಂಡ ಚಿತ್ರಗಳ ಪೈರೆಸಿ ಪ್ರತಿಗಳನ್ನು ಯುಟ್ಯೂಬ್ ಚಾನಲ್‌ಗಳಿಗೆ ಹಾಕಿ ಆ ಮೂಲಕ ಹಣ ಮಾಡುವ ಬಹುದೊಡ್ಡ ಜಾಲ ಈ ಕೆಲಸ ಮಾಡುತ್ತಿದೆ, ಇದು ಕನ್ನಡ ಮಾತ್ರವಲ್ಲ, ಇತರ ಭಾಷಾ ಚಿತ್ರೋದ್ಯಮಗಳಲ್ಲೂ ಬೇರು ಬಿಟ್ಟಿದೆ.

‘ಕೋಣ’ ಚಿತ್ರಕ್ಕಿಂತ ‘ಡೆವಿಲ್’, ‘೪೫’ ಮತ್ತು ‘ಮಾರ್ಕ್’ ಚಿತ್ರಗಳ ಪೈರೆಸಿಯ ಸಾವಿರಾರು ಕೊಂಡಿಗಳು ಇದ್ದವು. ಅವುಗಳನ್ನು ತೆಗೆದು ಹಾಕಲೆಂದೇ ಇರುವ ಸಂಸ್ಥೆಗಳಿಗೆ ಶುಲ್ಕ ನೀಡಿ ಕಿತ್ತುಹಾಕಲಾಗಿದೆ. ದುಬಾರಿ ನಿರ್ಮಾಣ ವೆಚ್ಚದ ಚಿತ್ರಗಳ ನಿರ್ಮಾಪಕರು ಈ ಮೊತ್ತವನ್ನು ನೀಡಬಲ್ಲರು. ಆದರೆ ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸುವ ನಿರ್ಮಾಪಕರು ಇದನ್ನು ಭರಿಸುವು ದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಒಂದು ಅಂದಾಜಿನ ಪ್ರಕಾರ, ಭಾರತೀಯ ಚಿತ್ರೋದ್ಯಮಕ್ಕೆ ವಾರ್ಷಿಕ ೨೪,೦೦೦ ಕೋಟಿ ರೂ. ಪೈರೆಸಿಯಿಂ ದಾಗಿ ನಷ್ಟವಾಗುತ್ತದೆ. ಸರ್ಕಾರಕ್ಕೆ ೪,೫೦೦ ಕೋಟಿ ರೂ. ತೆರಿಗೆ ನಷ್ಟವಾಗುತ್ತದೆ. ಭಾರತದಲ್ಲಿ ಪೈರೆಸಿ ಸುಲಭಸಾಧ್ಯವಾದಂತಿದೆ. ಅದು ನಿರ್ದಿಷ್ಟ ಚಾನೆಲ್ ಗಳಿಗೆ ಸೀಮಿತವಾಗಿಲ್ಲ, ಆದರೆ ಅಕ್ರಮ ಸ್ಟ್ರೀಮಿಂಗ್ ತಾಣಗಳು( iBomma, Movierನಂತಹವು), ಟೆಲಿಗ್ರಾಮ್, ರೆಡ್ಡಿಟ್ ಮತ್ತು ಎಕ್ಸ್ (ಟ್ವಿಟ್ಟರ್) ನಂತಹ ತಾಣಗಳಲ್ಲಿನ ಸಾಮಾಜಿಕ ಮಾಧ್ಯಮ ಕೊಂಡಿಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಟೊರೆಂಟ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ,

ಆಗಾಗ್ಗೆ ತ್ವರಿತ ವಿತರಣೆಗಾಗಿ ಬಾಟ್‌ಳನ್ನು ಬಳಸುತ್ತವೆ, ಟೆಲಿಗ್ರಾಮ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋರಿಕೆಗಳಿಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಈ ಕುರಿತು ಕೃತಕ ಬುದ್ಧಿಮತ್ತೆಯ ಉತ್ತರ. ಇವುಗಳ ಸರ್ವರ್‌ಗಳು, ಬೇರೆಬೇರೆ ದೇಶಗಳಲ್ಲಿ ಇರುವುದು, ಕಾನೂನು ಕ್ರಮ ಕೈಗೊಳ್ಳಲು ತೊಡಕಾಗಿದೆ, ಮಾತ್ರವಲ್ಲ, ಕ್ಷಣಾರ್ಧದಲ್ಲಿ ಸರ್ವರ್‌ಗಳನ್ನು ಬದಲಾಯಿಸುವುದರಲ್ಲಿ ಈ ಮಂದಿ ಚಾಣಾಕ್ಷರು. ಹಾಗಾಗಿ ಪೈರೆಸಿ ವಿರುದ್ಧ ಕ್ರಮ ಕೈಗೊಳ್ಳಲು ಬಳಸುವ ಮಾರ್ಗವೂ ಸಾಕಷ್ಟು ಸೂಕ್ಷ್ಮವಾಗಿರಬೇಕು.

ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ. ಆದರೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡ ಉದಾಹರಣೆ ಕಡಿಮೆ. ಜಗ್ಗೇಶ್ ಅವರೆಂದಂತೆ ೪೦೦-೫೦೦ ಮಂದಿ ಪೈರೆಸಿ ಮಾಡುವ ಮಂದಿ ಇರುವುದೇ ಆದರೆ, ಈಗಾಗಲೇ ಸೆರೆ ಸಿಕ್ಕಿರುವವನ ಮೂಲಕ ಅವರ ಬಗ್ಗೆ ತಿಳಿಯುವುದು ಕಷ್ಟಸಾಧ್ಯವಾಗಲಾರದು. ಚಿತ್ರಗಳ ನಿರ್ಮಾಣಕ್ಕಿಂತ ಅದನ್ನು ಪ್ರೇಕ್ಷಕರ ಬಳಿ ತಲುಪಿಸುವ ಪ್ರಚಾರದ ವೆಚ್ಚವೇ ಹೇಳತೀರದ್ದು. ಡಿಜಿಟಲ್ ದಿನಗಳ ನಂತರ, ನವಮಾಧ್ಯಮಗಳು, ಸಾಮಾಜಿಕ ತಾಣಗಳು ತಮ್ಮ ಮೂಲಕ ಪ್ರಚಾರ ಮಾಡಲು ದುಬಾರಿ ಮೊತ್ತದ ಬೇಡಿಕೆ ಇಡುತ್ತವೆ ಎನ್ನುವುದು, ನಿರ್ಮಾಪಕರ ಅದರಲ್ಲೂ ಕಡಿಮೆ ವೆಚ್ಚದ ಚಿತ್ರಗಳ ನಿರ್ಮಾಪಕರ ಅಳಲು.

ಪ್ರಚಾರಕ್ಕಾಗಿ ಸಾಕಷ್ಟು ಹಣ ವ್ಯಯಿಸಿದ ‘೪೫’ರ ನಿರ್ಮಾಪಕ ರಮೇಶ್ ರೆಡ್ಡಿ ಒಂದು ಸಂದರ್ಶನದಲ್ಲಿ ಹೇಳಿದ ಮಾತು, ಚಿತ್ರೋದ್ಯಮದ ಇಂದಿನ ಸ್ಥಿತಿಗೆ ಕನ್ನಡಿ ಹಿಡಿದಂತಿತ್ತು. ‘ಚಿತ್ರ ನಿರ್ಮಾಪಕ ಬಡ್ಡಿಗೆ ಹಣ ತಂದು ಇಲ್ಲಿ ಬಂಡವಾಳ ಹೂಡಬಾರದು. ಸ್ವಂತ ಹಣ ಇದ್ದರಷ್ಟೇ ಚಿತ್ರ ನಿರ್ಮಿಸಬೇಕು’ ಎನ್ನುವ ಅವರು, ‘ಚಿತ್ರ ನಿರ್ಮಾಣ ಏನೋ ಮಾಡಬಹುದು, ಅದನ್ನು ಜನರಿಗೆ ತಲಪಿಸುವುದು ಕಷ್ಟ. ಎಷ್ಟೋ ಒಳ್ಳೆಯ ಚಿತ್ರಗಳು ಪ್ರಚಾರದ ಕೊರತೆಯಿಂದ ಸೋತಿವೆ’ ಎನ್ನುವುದನ್ನು ಮನಗಂಡಿದ್ದಾರೆ. ಪ್ರಚಾರದ ವಿಷಯ ಬಂದರೆ ಸಾಮಾಜಿಕ ತಾಣಗಳ ಮೂಲಕ ಪ್ರಚಾರ ಎನ್ನುವುದು ಅಂಧರು ಆನೆಯನ್ನು ಮುಟ್ಟಿ ನೋಡಿ, ಅದರ ಆಕಾರವನ್ನು ಹೇಳಿದ ಹಾಗಿದೆ.

‘ವಾಹಿನಿಗಳು ತಮ್ಮಲ್ಲಿ ಪ್ರಚಾರಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸುತ್ತವೆ. ಅಲ್ಲಿನ ಮಂದಿ ಅಧಿಕೃತವಾಗಿ ಮಾತ್ರವಲ್ಲದೆ ಬೇರೆ ರೀತಿಯಲ್ಲೂ ನಿರ್ಮಾಪಕರಿಂದ ನಿರೀಕ್ಷಿಸುತ್ತಾರೆ. ಎಲ್ಲರೂ ಅಲ್ಲ. ಅಪವಾದಗಳೂ ಇವೆ. ಕೆಲವು ನಿರ್ಮಾಪಕರು ಅವರನ್ನೂ ಉತ್ತೇಜಿಸುತ್ತಾರೆ’ ಎನ್ನುವ ಪ್ರಚಾರಕರ್ತರ ವಲಯದ ಮಾತಲ್ಲಿ ಹುರುಳಿಲ್ಲದೆ ಇಲ್ಲ. ಚಿತ್ರವೊಂದರ ಪ್ರಚಾರದ ಬಾಬತ್ತು ಡಿಜಿಟಲ್ ಮಾಧ್ಯಮಗಳು ಮಾತ್ರ ಎಂಟಂಕಿಯವರೆಗೆ ನಿರ್ಮಾಪಕರಿಂದ ಪಡೆದಿದ್ದಾರೆ, ಏನಿಲ್ಲ ಎಂದರೂ, ಪ್ರಚಾರಕ್ಕೆ ಕೋಟಿಗಳಲ್ಲಿ ವೆಚ್ಚವಾಗುತ್ತದೆ ಎಂದರೆ, ಕಡಿಮೆ ವೆಚ್ಚದ ಚಿತ್ರಗಳ ಪ್ರಚಾರ ಆಗುವುದಾದರೂ ಹೇಗೆ? ಸಿನಿಮಾ ಪ್ರಚಾರಕರ್ತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ನಡುವೆ ಪ್ರಚಾರಕರ್ತರೊಬ್ಬರ ಮೇಲೆ ನಿರ್ಮಾಪಕಿಯೊಬ್ಬರು ದೂರು ನೀಡಿದ್ದೂ ವರದಿಯಾಗಿತ್ತು. ಪ್ಯಾನ್ ಇಂಡಿಯಾ ಹೆಸರಿನಲ್ಲಿ ಒಂದು ಭಾಷೆಯಲ್ಲಿ ತಯಾರಾಗಿ ಇತರ ಭಾಷೆಗಳಿಗೆ ಡಬ್ ಆಗಿ ತೆರೆಕಾಣುವ ಚಿತ್ರಗಳ ಪ್ರಚಾರಗಳ ಕೆಲಸವೂ ಈಗ ಲಭ್ಯ. ಮೂಲ ಕನ್ನಡ ಚಿತ್ರಗಳಿಗಿಂತ ಇತರ ಭಾಷೆಗಳಿಂದ ಕನ್ನಡಕ್ಕಿಳಿಯುವ ಚಿತ್ರಗಳ ಪ್ರಚಾರ ವೃತ್ತಿಪರವಾಗಿ ಹೆಚ್ಚು ಲಾಭದಾಯಕ ಆದದ್ದೇ ಆದರೆ ಅತ್ತ ಆಕರ್ಷಣೆ ಸಹಜ.

ಇತ್ತೀಚಿನ ಒಂದು ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ಡೆವಿಲ್’ ಚಿತ್ರ ತೆರೆಕಂಡಾಗ, ಬುಕ್ ಮೈ ಶೋದಲ್ಲಿ ಅದರ ಕುರಿತಂತೆ ವಿಮರ್ಶೆಗಳು ಕೂಡದು, ನ್ಯಾಯಾಲಯದ ಆದೇಶದ ಪ್ರಕಾರ ಈ ನಿರ್ಧಾರ ಎಂದು ಹೇಳಲಾಗಿತ್ತು. ಅದರ ಹಿನ್ನೆಲೆಯ ಕುರಿತಂತೆ ಸಾಮಾಜಿಕ ತಾಣಗಳಲ್ಲೂ ಸಾಕಷ್ಟು ಪರ -ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ನವಮಾಧ್ಯಮಗಳು ಬಂದ ನಂತರ, ಹೊಸ ಚಿತ್ರದ ಬಿಡುಗಡೆಯ ನಂತರ ಅದನ್ನು ನೋಡಿ ವಿಮರ್ಶೆ ಹೆಸರಿನಲ್ಲಿ ಅದರ ಕುರಿತಂತೆ ಬರುತ್ತಿದ್ದ ಅಭಿಪ್ರಾಯ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಒಂದು ವರ್ಗದ ಅಭಿಪ್ರಾಯವಾಗಿತ್ತು. ತಮಿಳುನಾಡಿನಲ್ಲಿ ಅಲ್ಲಿನ ನಿರ್ಮಾಪಕರ ಸಂಘ ಯುಟ್ಯೂಬ್ ವಾಹಿನಿಗಳ ಮಂದಿಯನ್ನು ಆಹ್ವಾನಿಸದಿರಲು ನಿರ್ಧರಿಸಿದ್ದು ವರದಿಯಾಗಿತ್ತು. ಕೇರಳ ಕೂಡ ಇದನ್ನು ಅನುಮೋದಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಇದು ಎನ್ನುವುದಾಗಿ ಇದಕ್ಕೆ ಪ್ರತಿಕ್ರಿಯಿಸಿದವರೂ ಇದ್ದರು. ತಮ್ಮ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಎಷ್ಟೇ ಮೊತ್ತ ಖರ್ಚಾದರೂ ಪರವಾಗಿಲ್ಲ ಎನ್ನುವ ನಿರ್ಮಾಪಕರ ಬಳಗದಲ್ಲಿ, ಈ ಮಾಧ್ಯಮಗಳ ಕುರಿತ ಸಮಗ್ರ ಚಿತ್ರವಿರುವ ಮಂದಿ ಇದ್ದರೆ ಏನೂ ತೊಂದರೆ ಇಲ್ಲ. ಇಲ್ಲದೇ ಹೋದರೆ ಅವರನ್ನು ಬಳಸಿಕೊಳ್ಳುವ, ಸೇರುವವವರ ಸಂಖ್ಯೆಗೇನೂ ಕಡಿಮೆ ಇರುವುದಿಲ್ಲ.

ಅದ್ಧೂರಿ ವೆಚ್ಚದಲ್ಲಿ ತಯಾರಾದ ‘೪೫’ ಚಿತ್ರದ ಬಿಡುಗಡೆ ಸಕಾಲದಲ್ಲಿ ಆಗದೆ ಇರಲು, ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಸರಿಯಾದ ಸಮಯಕ್ಕೆ ಸಿಗದೆ ಇರುವುದು ಕಾರಣ ಎಂದು ನಿರ್ಮಾಪಕರೂ ಹೇಳಿದರು, ನಿರ್ದೇಶಕರೂ ಹೇಳಿದರು. ಮಾತ್ರವಲ್ಲ ಮಾತಿನ ನಡುವೆ, ಅದು ತಮಗೆ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ ಎನ್ನುವುದನ್ನೂ ಪ್ರಕಟಿಸಿದರು. ‘೪೫’ಚಿತ್ರದ ನಿರ್ಮಾಪಕರು ತಮ್ಮ ಇನ್ಸ್ಟಾದಲ್ಲಿ ಒಂದು ಪತ್ರಿಕಾ ಪ್ರಕಟಣೆ ಹಾಕಿದ್ದಾರೆ. ಅದರ ಬಗ್ಗೆ ಮುಂದೆ ಹೇಳುವೆ. ಇನ್‌ಸ್ಟಾದಲ್ಲಿ ಪತ್ರಿಕಾ ಪ್ರಕಟಣೆ ಹಾಕಬಹುದು ಎಂದು ಅವರಿಗೆ ಸಲಹೆ ನೀಡಿದವರು ಯಾರೋ! ಅವರ ಇನ್‌ಸ್ಟಾ, ಅವರಿಷ್ಟ

” ಭಾರತದಲ್ಲಿ ಪೈರೆಸಿ ಸುಲಭಸಾಧ್ಯವಾದಂತಿದೆ. ಅಕ್ರಮ ಸ್ಟ್ರೀಮಿಂಗ್ ತಾಣಗಳು ( iBomma, Movierನಂತಹವು), ಟೆಲಿಗ್ರಾಮ್, ರೆಡ್ಡಿಟ್ ಮತ್ತು ಎಕ್ಸ್ (ಟ್ವಿಟರ್) ನಂತಹ ತಾಣಗಳಲ್ಲಿನ ಸಾಮಾಜಿಕ ಮಾಧ್ಯಮ ಕೊಂಡಿಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಟೊರೆಂಟ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ, ಆಗಾಗ್ಗೆ ತ್ವರಿತ ವಿತರಣೆಗಾಗಿ ಬಾಟ್‌ಳನ್ನು ಬಳಸುತ್ತವೆ”

ಆಂದೋಲನ ಡೆಸ್ಕ್

Recent Posts

ಬಳ್ಳಾರಿ ಘರ್ಷಣೆ | ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ; ಬಿವೈವಿ ಆಗ್ರಹ

ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…

59 mins ago

ಬಳ್ಳಾರಿ ಘರ್ಷಣೆ | ಕೈ ಕಾರ್ಯಕರ್ತ ಸಾವು, ಘಟನೆ ಬಗ್ಗೆ ಸಿಎಂ ಹೇಳಿದ್ದೇನು?

ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ  ಬ್ಯಾನರ್‌ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್‌ ಆಗಿ…

2 hours ago

ಫೆ.23ಕ್ಕೆ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಲೋಕಾರ್ಪಣೆ : ಪ್ರಧಾನಿ ಮೋದಿ ಭಾಗಿ

ಬೆಂಗಳೂರು : ಬಾಲಗಂಗಾಧರನಾಥ ಶ್ರೀಗಳ ಧಾರ್ಮಿಕ ಗದ್ದುಗೆ ಲೋಕಾರ್ಪಣೆ ಹಾಗೂ ಡಾ.ನಿರ್ಮಲಾನಂದನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ…

2 hours ago

ಸ್ವಜಾತಿ ಪಕ್ಷಪಾತ ಬೇಡ ; ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು : ಎಲ್ಲಾ ಅಧಿಕಾರಿಗಳು ಜಾತ್ಯಾತೀತ ದೃಷ್ಠಿಕೋನದಿಂದ ಕಾರ್ಯ ನಿರ್ವಹಿಸಬೇಕು. ಆಗಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

3 hours ago

ಬಳ್ಳಾರಿ ಬ್ಯಾನರ್‌ ಘರ್ಷಣೆ | ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್‌

ಬಳ್ಳಾರಿ : ವಾಲ್ಮೀಕಿ ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…

5 hours ago

ಓದುಗರ ಪತ್ರ: ಕೆರೆ, ಕಟ್ಟೆಗಳ ಹೂಳೆತ್ತಿಸಿ

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…

8 hours ago