ಅಂಕಣಗಳು

ಬಾ.ನಾ.ಸುಬ್ರಹ್ಮಣ್ಯ ವಾರದ ಅಂಕಣ:  ಕೆಳಗಿನ ಕೋರ್ಟಿನಲ್ಲಿ ನಟ ದಿಲೀಪ್ ಆರೋಪ ಮುಕ್ತ;  ಅವಳೊಂದಿಗೆ v/s ದಿಲೀಪ್ ಪರ

ಜನಪ್ರಿಯ ನಟರು ಜೈಲಲ್ಲಿದ್ದರೆ, ಜಾಮೀನಿನಿಂದ ಹೊರಬಂದರೆ ಅಂತಹ ಪ್ರಕರಣದ ತೀರ್ಪಿನ ಬಗ್ಗೆ ಜನರ ಕುತೂಹಲ ಹೆಚ್ಚು. ಮಲಯಾಳ ಚಿತ್ರರಂಗದ ಹೆಸರಾಂತ ನಟ ದಿಲೀಪ್ರನ್ನು ನಟಿಯೊಬ್ಬರ ಬಲಾತ್ಕಾರಕ್ಕೆ ಸುಪಾರಿ ನೀಡಿದ ಆರೋಪದಿಂದ ಮೊನ್ನೆ ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮುಕ್ತಗೊಳಿಸಿದೆ. ದಿಲೀಪ್ ಪರ ಇದ್ದವರಿಗೆ ಇದು ಸಂಭ್ರಮದ ಬೆಳವಣಿಗೆಯಾದರೆ, ಅತಿಕ್ರಮಕ್ಕೆ ಒಳಗಾದ ನಟಿ ಮತ್ತವರ ಬೆಂಬಲಿಗ ಸಮೂಹಕ್ಕೆ ಇದು ನಿರಾಸೆ ತಂದ ತೀರ್ಪು.

ಹಾಗಂತ ಇದು ಅನಿರೀಕ್ಷಿತ ತೀರ್ಪೇನೂ ಆಗಿರಲಿಲ್ಲ. ೨೦೧೭ರ ಫೆಬ್ರವರಿ ೧೭ರಂದು ಚಿತ್ರವೊಂದರ ಡಬ್ಬಿಂಗ್ ಮುಗಿಸಿ ಬರುತ್ತಿದ್ದ ನಟಿಯ ಕಾರಿಗೆ ಹಿಂದಿನಿಂದ ಬಂದ ಟೆಂಪೋ ಟ್ರಾವಲರ್ ಡಿಕ್ಕಿ ಹೊಡೆಯುತ್ತದೆ. ಕ್ಷಣಾರ್ಧದಲ್ಲಿ ಅದರಲ್ಲಿದ್ದ ಮಂದಿ ಆ ಕಾರಿಗೆ ಹತ್ತುತ್ತಾರೆ. ಚಾಲಕನಿಗೆ ತಮ್ಮ ಆದೇಶದಂತೆ ಹೋಗಲು ಹೇಳುತ್ತಾರೆ. ಆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅದರ ಚಿತ್ರೀಕರಣ ನಡೆಯುತ್ತದೆ. ಯಾರದೋ ಸುಪಾರಿಯಂತೆ ಈ ಘಟನೆ ಎನ್ನುವುದನ್ನು ಪರೋಕ್ಷವಾಗಿ ಆಕೆಗೆ ತಿಳಿಸಲಾಗುತ್ತದೆ. ಬಲಾತ್ಕಾರದ ನಂತರ ಆಕೆಯನ್ನು ಬಿಟ್ಟು ಆ ಮಂದಿ ತೆರಳುತ್ತಾರೆ.

ನಟಿ, ಅಲ್ಲೇ ಇದ್ದ ಚಿತ್ರ ನಿರ್ದೇಶಕರ ಮನೆಗೆ ತೆರಳಿ, ಅಲ್ಲಿಂದ ಪೊಲೀಸ್‌ಗೆ ದೂರು ನೀಡುತ್ತಾರೆ. ಕಾರಲ್ಲಿ ಬಲಾತ್ಕಾರ ಮಾಡಿದವರ ಬಂಧನವಾಗುತ್ತದೆ. ಇಂತಹದೊಂದು ಕ್ರೌರ್ಯದ ಹಿಂದೆ ನಿಗೂಢ ರಹಸ್ಯ ಅಡಗಿದೆ ಎನ್ನುವ ಚರ್ಚೆ ಆರಂಭವಾಗುತ್ತದೆ. ತಂಡದ ಮುಖ್ಯಸ್ಥನಾಗಿದ್ದ ಪಲ್ಸರ್ ಸುನಿ ಜೈಲಿನಿಂದ ನಟ ದಿಲೀಪ್‌ಗೆ ತನ್ನ ಒಪ್ಪಂದದಂತೆ ನೀಡಬೇಕಾದ ಮೊತ್ತವನ್ನು ನೀಡಲು ಮತ್ತು ನೀಡದಿದ್ದರೆ, ರಹಸ್ಯವನ್ನು ಬಹಿರಂಗಗೊಳಿಸುವುದಾಗಿ ಬರೆದ ಪತ್ರ ಇಡೀ ಕೇಸಿನ ತಿರುವಿಗೆ ಕಾರಣವಾಯಿತು. ದಿಲೀಪ್ ಬಂಧನ ವಾಯಿತು.

ಇದನ್ನು ಓದಿ: ರೈತರು ಬೆಳೆದ ಕಾಫಿ, ಅಡಿಕೆ, ಮೆಣಸು ಕಳ್ಳರ ಪಾಲು 

ದಿಲೀಪ್ ಪತ್ನಿ ಮಂಜು ವಾರಿಯರ್ ಜೊತೆ ವಿಚ್ಛೇದನವಾಗಿ ಕೌಟುಂಬಿಕ ಜೀವನ ಮುರಿದುಬಿದ್ದದ್ದು ಆ ನಟಿಯಿಂದ ಎನ್ನುವುದು ಈ ಬೆಳವಣಿಗೆಗೆ ಕಾರಣ ಎಂದು ಆಗ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು. ೨೦೧೦ರ ನಂತರದ ದಿನಗಳಲ್ಲಿ ಮಲಯಾಳದ ನಟನಟಿಯರು ಅಮೆರಿಕಕ್ಕೆ ಮನರಂಜನಾ ಕಾರ್ಯಕ್ರಮವನ್ನು ನೀಡಲು ತೆರಳಿದ ಸಂದರ್ಭ, ಈ ನಟಿಯೂ ಜೊತೆಗಿದ್ದರು. ಅಲ್ಲಿ ದಿಲೀಪ್ ಮತ್ತು ಕಾವ್ಯ ಮಾಧವನ್ (ಈಗ ದಿಲೀಪ್ ಪತ್ನಿ) ಅವರ ಒಡನಾಟದ ಕುರಿತಂತೆ ಮಂಜುವಾರಿಯರ್‌ಗೆ ಹೇಳಿದ್ದು ಈ ನಟಿಯ ಮೇಲಿನ ರೋಷಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಅದಕ್ಕಾಗಿ ಆಕೆಯನ್ನು ಬಲಾತ್ಕಾರ ಮಾಡಲು ಸುಪಾರಿ ನೀಡಿದ್ದಾಗಿ ಸುದ್ದಿಯಾಗಿತ್ತು.

ನ್ಯಾಯಾಲಯದಲ್ಲಿ ಈ ಕುರಿತಂತೆ ಆದ ವಾದ ವಿವಾದಗಳು, ಹೊರಗೆ ನಡೆದ ಘಟನೆಗಳು, ನಟಿಯ ಪರವಾಗಿ ಇದ್ದ ಸಾಕ್ಷಿಗಳು ಬದಲಾದ ಪ್ರಸಂಗ ಇವೆಲ್ಲ ಒಂದೆಡೆಯಾದರೆ, ಮಲಯಾಳ ಚಿತ್ರರಂಗದಲ್ಲಿ ಆದ ಬೆಳವಣಿಗೆ ಗಮನಾರ್ಹ. ಮಲಯಾಳ ಕಲಾವಿದರ ಸಂಘದಿಂದ ದಿಲೀಪ್ ಅವರನ್ನು ಅಮಾನತ್ತು ಮಾಡಲು ನಟಿಯರು ಒತ್ತಾಯಿಸಿದರು. ಮಾತ್ರವಲ್ಲ, ‘ವಿಮೆನ್ ಇನ್ ಸಿನಿಮಾ ಕಂಬೈನ್’ ಸಂಸ್ಥೆಯನ್ನು ಸ್ಥಾಪಿಸಿಕೊಂಡರು. ಚಿತ್ರೋದ್ಯಮದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವ ಮಹಿಳೆಯರು ಅದರ ಸದಸ್ಯರಾದರು. ಮುಖ್ಯಮಂತ್ರಿಗಳನ್ನು ಕಂಡು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು. ಅವರು ನ್ಯಾಯಮೂರ್ತಿ ಹೇಮಾ ಅಧ್ಯಕ್ಷತೆಯ ಆಯೋಗ ರಚಿಸಿ, ಈ ಸಮಸ್ಯೆಗಳನ್ನು ಪರಿಶೀಲಿಸಿ, ಸೂಕ್ತ ಪರಿಹಾರಕ್ಕೆ ಶಿಫಾರಸು ಮಾಡಲು ಹೇಳಿದರು. ಮಲಯಾಳ ಚಿತ್ರರಂಗದ ಇನ್ನೊಂದು ಮುಖದ ಅನಾವರಣ ಆದದ್ದು ಆಗಲೇ.

ಅವಕಾಶಕ್ಕಾಗಿ ಎಲ್ಲ ರೀತಿಯ ಸಹಕಾರ ಕೋರುವ ಪ್ರತಿಷ್ಠಿತರು, ಅವಕಾಶ ಕಸಿಯುತ್ತಿದ್ದ ಮಂದಿ, ಕೆಲವೇ ಮಂದಿಯಿಂದ ಇಡೀ ಮಲಯಾಳ ಚಿತ್ರರಂಗದ ನಿಯಂತ್ರಣವೇ ಮೊದಲಾದ ವಿವರಗಳು ಅಲ್ಲಿ ಇದ್ದವು. ಎಲ್ಲ ಸಂದರ್ಶನಗಳೂ ಗೌಪ್ಯ ಮತ್ತು ಬಹಿರಂಗಗೊಳಿಸುವುದಿಲ್ಲ ಎನ್ನುವ ಷರತ್ತಿನೊಂದಿಗೆ ಆಗಿದ್ದವು. ಹೇಮಾ ಆಯೋಗದ ವರದಿಯಲ್ಲಿ ಬಹಿರಂಗವಾದಾಗ ಅದರಲ್ಲಿ ಸಂಬಂಧಪಟ್ಟವರ ವಿವರಗಳನ್ನು ಪ್ರಕಟಿಸಿರಲಿಲ್ಲ. ಆದರೆ ಮುಂದೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಹೆಚ್ಚಾದಾಗ ಸರ್ಕಾರ ಹೆಸರುಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಬೇಕಾಯಿತು. ಆದರೆ, ಶೋಷಿತ ಮಹಿಳೆಯರು, ತಮ್ಮ ಅನುಭವಗಳನ್ನು ಆಯೋಗದ ಮುಂದೆ ದಾಖಲಿಸಿದವರಲ್ಲಿ ಹೆಚ್ಚಿನವರು ಅಲ್ಲಿ ಬರಲು ಸಿದ್ಧರಿರಲಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳಿದ್ದವು. ಚಿತ್ರರಂಗದಲ್ಲಿ ತಮಗೆ ಮುಂದೆ ಅವಕಾಶಗಳು ಇಲ್ಲದೇ ಹೋಗಬಹುದು ಎನ್ನುವುದು ಅದರಲ್ಲಿ ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲಿನ ಮಾಧ್ಯಮಗಳೂ ಆ ಕುರಿತಂತೆ ಮುಂದೆ ಹೆಚ್ಚೇನೂ ಬಿಗಿಯಾಗಲಿಲ್ಲ. ಇದರ ಬೆನ್ನಲ್ಲೇ ಬಂದ ಮೀ ಟೂ ಪ್ರಸಂಗಗಳು, ಕಾಸ್ಟಿಂಗ್ ಕೌಚ್ ಸುದ್ದಿಗಳು ಕೇರಳ ಮಾತ್ರವಲ್ಲದೆ ಇತರ ರಾಜ್ಯಗಳಲ್ಲೂ ಕೇಳಿಬಂದವು. ಆದರೆ ಅವುಗಳ ಕುರಿತಂತೆ ಕೂಡ ಅಂತಹ ಕ್ರಮಗಳೇನೂ ನಡೆಯಲಿಲ್ಲ.

ಇತ್ತ ಬಂದಿಯಾದ ನಟ ದಿಲೀಪ್ ತಮ್ಮದೇ ಆದ ರೀತಿಯಲ್ಲಿ ಈ ಘಟನೆಯನ್ನು ಮಾಧ್ಯಮಗಳಿಗೆ ಹೇಳಿದರು. ತಮ್ಮ ವಿರುದ್ಧ ಮಸಲತ್ತು ನಡೆಯುತ್ತಿದೆ ಎಂದರು. ಕೆಲ ಸಮಯದ ನಂತರ ಅವರು ಜಾಮೀನಿನಲ್ಲಿ ಹೊರಬಂದರು. ಬಂಧನಕ್ಕೆ ಒಳಗಾಗುವ ಮೊದಲು, ಸುನಿ ತಾನು ಚಿತ್ರೀಕರಿಸಿದ್ದ ಬಲಾತ್ಕಾರದ ಚಿತ್ರಿಕೆಗಳ ಮೂರು ಪ್ರತಿಗಳನ್ನು ಮಾಡಿ ತನಗೆ ಸುಪಾರಿ ಕೊಟ್ಟವರಿಗೆ ಕೊಟ್ಟದ್ದಾಗಿಯೂ ಹೇಳಲಾಗುತ್ತಿದೆ. ಮೂಲ ಪ್ರತಿ ಮತ್ತು ಮೊಬೈಲ್ ಫೋನನ್ನು ಎಲ್ಲೋ ಎಸೆದದ್ದಾಗಿ ಹೇಳಿದ್ದ. ಕೊನೆಗೂ ಅದು ಸಿಗಲಿಲ್ಲ.

ಮಂಜು ವಾರಿಯರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೇರಿ ಈ ಆರೋಪಕ್ಕೆ ಬೇಕಾದ ವಾತಾವರಣ ಸೃಷ್ಟಿಸಿದ್ದಾಗಿ ದಿಲೀಪ್ ಹೇಳಿಕೆ. ಈ ನಡುವೆ, ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯ ಕೊಲೆಯ ಪ್ರಯತ್ನ, ಅದರ ಗೂಢಾಲೋಚನೆಯ ಸಂದರ್ಭದಲ್ಲಿ ತಾನು ಸಾಕ್ಷಿಯಾಗಿದ್ದೆ; ಬಲಾತ್ಕಾರದ ವೇಳೆ ಚಿತ್ರಿಸಿದ ತುಣುಕನ್ನು ದಿಲೀಪ್ ಮನೆಯಲ್ಲಿ ನೋಡುವಾಗ ನಾನಿದ್ದೆ ಎಂದಿದ್ದ ನಿರ್ದೇಶಕ ಬಾಲಚಂದ್ರ ಕುಮಾರ್ ಕಳೆದವರ್ಷ ಕಾಲವಾಗಿದ್ದ. ೨೦೧೭ರಲ್ಲೇ ತಿಳಿದಿದ್ದರೂ ನಾಲ್ಕೈದು ವರ್ಷ ಅದನ್ನುತಾನು ಮುಚ್ಚಿಟ್ಟದ್ದು ಭಯ ಮತ್ತು ಸ್ವಾರ್ಥದಿಂದ ಎಂದಿದ್ದರಾತ. ದಿಲೀಪ್ ಮುಖ್ಯಭೂಮಿಕೆಯ ಚಿತ್ರ ನಿರ್ದೇಶನದ ಸ್ವಾರ್ಥ ಒಂದೆಡೆಯಾದರೆ, ದಿಲೀಪ್ ಯಾವುದಕ್ಕೂ ಹೇಸುವವನಲ್ಲ, ಹಾಗಾಗಿ ಭಯವಿತ್ತು ಎಂದದ್ದು ವರದಿಯಾಗಿದೆ.

ಇದನ್ನು ಓದಿ: 19 ಬೇಚರಾಕ್ ಹಳ್ಳಿಗಳು ಇನ್ಮುಂದೆ ಕಂದಾಯ ಗ್ರಾಮಗಳು

ತನ್ನೆಲ್ಲ ಶಕ್ತಿಯನ್ನು, ಪ್ರಭಾವವನ್ನು ಬಳಸಿದ್ದ ನಟ ದಿಲೀಪ್ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟು ಮೆಟ್ಟಲೇರಿದ್ದೂ ಇದೆ. ನ್ಯಾಯಾಲಯದಲ್ಲಿ ವಿಚಾರಣೆ ಗೌಪ್ಯವಾಗಿತ್ತು. ಕೇಸಿಗೆ ಸಂಬಂಧಪಟ್ಟವರ ಹೊರತು ಬೇರೆ ಯಾರೂ ಅಲ್ಲಿ ಇರುವಂತಿರಲಿಲ್ಲ. ದಿಲೀಪ್ ಮತ್ತವರ ಸಂಗಡಿಗರ ವಕೀಲರೇ ೩೨ ಮಂದಿ ಇದ್ದರೆ, ನಟಿಯ ಪರವಾಗಿ ಇಬ್ಬರಿದ್ದರು. ಪುರುಷನ್ಯಾಯಮೂರ್ತಿಯ ಬದಲು ಮಹಿಳಾ ನ್ಯಾಯಮೂರ್ತಿಗೆ ಈ ಕೇಸನ್ನು ವಹಿಸಲು ನಟಿ ಕೋರುತ್ತಾರೆ. ಅದರಂತೆ ಹನಿ ಎಂ.ವರ್ಗೀಸ್ ಬರುತ್ತಾರೆ. ಇಂತಹ ಪ್ರಸಂಗಗಳಲ್ಲಿ ತಮ್ಮ ಎದುರಾಳಿಗಳನ್ನು ಮಾನಸಿಕವಾಗಿ ದುರ್ಬಲಗೊಳಿಸಿ, ಕಂಗೆಡಿಸುವಂತೆ ಮಾಡುವುದರಲ್ಲಿ ಹೆಸರಾದ ವಕೀಲರೆಂದೇ ಖ್ಯಾತರಾದ ರಾಮನ್ ಪಿಳ್ಳೈ ದಿಲೀಪ್ ಪರ ವಾದಿಸಿದ್ದರು. ನ್ಯಾಯಮೂರ್ತಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವುದು ಮನವರಿಕೆಯಾಗುತ್ತಲೇ ಅವರನ್ನು ಬದಲಾಯಿಸಲು ನಟಿ ಕೋರಿದ್ದರು. ಆದರೆ ನ್ಯಾಯಾಲಯ ಒಪ್ಪಲಿಲ್ಲ. ನ್ಯಾಯಮೂರ್ತಿ ವರ್ತನೆಗೆ ರೋಸಿ, ಮೊದಲ ಸರ್ಕಾರಿ ವಕೀಲರು ರಾಜೀನಾಮೆ ನೀಡಿದ್ದರು. ನ್ಯಾಯಮೂರ್ತಿ ಯೊಬ್ಬರಿಗೆ ತಕ್ಕುದಲ್ಲದ ಮಾತುಗಳಾಗಿದ್ದವು ಅವು ಎನ್ನಲಾಗುತ್ತಿದೆ.

ಏಳು ತಿಂಗಳುಗಳ ಅವಧಿಯಲ್ಲಿ ನಡೆದ ೧೫ ದಿನಗಳ ವಿಚಾರಣೆಯ ದಿನಗಳ ಅನುಭವ ಆಘಾತಕಾರಿ ಆಗಿತ್ತು, ಎರಡನೇ ಬಾರಿ ಮಾನಸಿಕ ಹಿಂಸೆ ಅನುಭವಿಸಿದೆ ಎಂದು ನಟಿ ಹೇಳಿದ್ದಾರೆ. ಘಟನೆಯಲ್ಲಿ ದಿಲೀಪ್ ಪಾತ್ರ ಇತ್ತು ಎನ್ನುವುದಕ್ಕೆ ಸರಿಯಾದ ಸಾಕ್ಷಿಗಳಿಲ್ಲ ಎಂದು ಹೇಳಿ ನ್ಯಾಯಾಲಯ ದಿಲೀಪ್‌ರನ್ನು ಬಂಧಮುಕ್ತಗೊಳಿಸಿದೆ. ಸರ್ಕಾರ ಮೇಲ್ಮನವಿ ನೀಡಲು ನಿರ್ಧರಿಸಿದೆ. ನಟಿ ಕೂಡ. ಅಲ್ಲಿನ ಮಾಧ್ಯಮಗಳಲ್ಲಿ ದಿಲೀಪ್ ಪರ ಕೆಲವಿದ್ದರೆ ನಟಿಯ ಪರ ಹೆಚ್ಚಿನವಿವೆ.

ಹಲವು ಮಾಧ್ಯಮಗಳ ವಿರುದ್ಧ ದಿಲೀಪ್ ಕೇಸ್ ದಾಖಲಿಸಿದ್ದರು. ತಮ್ಮ ಸುದ್ದಿ ಎಲ್ಲೂ ಬಾರದಂತೆ ತಡೆಯಾಜ್ಞೆ ತಂದಿದ್ದರು. ಮೊನ್ನೆನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತಾಡುತ್ತಾ, ‘ಸತ್ಯ ಇವತ್ತು ಹೊರಗೆ ಬಂದಿದೆ. ಒಂಬತ್ತು ವರ್ಷಗಳಿಂದ ನೀವು ಹೇಳುತ್ತಿದ್ದಿರಿ. ಈಗ ನಾನು ಹೇಳುವುದನ್ನು ಕೇಳಿ. ಮಸಲತ್ತು ನನ್ನದಲ್ಲ. ನನ್ನ ವಿರುದ್ಧ ನಡೆಯಿತು. ಅದರ ವಿರುದ್ಧ ನಾನು ಕಾನೂನು ಕ್ರಮಕೈಗೊಳ್ಳುತ್ತೇನೆ’ ಎಂದರು. ಮಾಧ್ಯಮಗಳ ಪ್ರಕಾರ ಅವರು ತಮ್ಮ ಮಾಜಿ ಪತ್ನಿ ಮಂಜು ವಾರಿಯರ್ ಮತ್ತು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳ ಬಗ್ಗೆ ಈ ಮಾತು ಹೇಳಿದ್ದಾರೆ. ಈ ಪ್ರಕರಣ ಅಲ್ಲಿನ ಚಿತ್ರರಂಗವನ್ನು ಎರಡಾಗಿಸಿದೆ. ಸಾರ್ವಜನಿಕವಾಗಿ ಈ ತೀರ್ಪಿನ ಕುರಿತಂತೆ ಚರ್ಚೆ ನಡೆದಿದೆ. ತೀರ್ಪು ನ್ಯಾಯಾಲಯದಲ್ಲಿ ಪ್ರಕಟವಾಗುವ ವಾರದ ಮೊದಲೇ ಅದು ಬಹಿರಂಗವಾಗಿತ್ತು, ಹೋಟೆಲೊಂದರಲ್ಲಿ ವ್ಯವಹಾರಕ್ಕಾಗಿ ಎನ್ನುವುದು ಅಲ್ಲಿನ ಮಾಧ್ಯಮಗಳಿಗೆ ಚರ್ಚೆಗೆ ಗ್ರಾಸವಾಗಿದೆ. ನ್ಯಾಯದೇವತೆಯ ಕಣ್ಣಿಗೆ ಬಟ್ಟೆಕಟ್ಟಿದೆ. ಹಾಗಂತ ನ್ಯಾಯ ಕುರುಡೇನೂ ಅಲ್ಲ ಎನ್ನುವುದು  ಅವಳೊಂದಿಗೆ ಇರುವವರ ನಂಬಿಕೆ.

” ಈ ಘಟನೆಯಲ್ಲಿ ದಿಲೀಪ್ ಪಾತ್ರ ಇತ್ತು ಎನ್ನುವುದಕ್ಕೆ ಸರಿಯಾದ ಸಾಕ್ಷಿಗಳಿಲ್ಲ ಎಂದು ಹೇಳಿ ನ್ಯಾಯಾಲಯ ದಿಲೀಪ್‌ರನ್ನು ಬಂಧಮುಕ್ತಗೊಳಿಸಿದೆ. ಸರ್ಕಾರ ಮೇಲ್ಮನವಿ ನೀಡಲು ನಿರ್ಧರಿಸಿದೆ. ನಟಿ ಕೂಡ. ಅಲ್ಲಿನ ಮಾಧ್ಯಮಗಳಲ್ಲಿ ದಿಲೀಪ್ ಪರ ಕೆಲವಿದ್ದರೆ ನಟಿಯ ಪರ ಹೆಚ್ಚಿನವಿವೆ. ”

-ವೈಡ್‌ ಆಂಗಲ್‌ 
ಬಾ.ನಾ.ಸುಬ್ರಹ್ಮಣ್ಯ 

ಆಂದೋಲನ ಡೆಸ್ಕ್

Recent Posts

ಫಲಿತಾಂಶ ಯಶಸ್ವಿಗೊಳಿಸಲು ಶಾಲೆಯಲ್ಲೇ ವಾಸ್ತವ್ಯ ಹೂಡಿದ ಬಿಇಓ

ಎಚ್.ಡಿ.ಕೋಟೆ: ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಕಾಡಂಚಿನ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಗಡಿಭಾಗದ…

5 mins ago

ದೊಡ್ಡಕವಲಂದೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳು: ಸಾಂಕ್ರಾಮಿಕ ರೋಗದ ಭೀತಿ

ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…

37 mins ago

ಓದುಗರ ಪತ್ರ: ಗಾಳಿ… ತಂಗಾಳಿ !

ಓದುಗರ ಪತ್ರ: ಗಾಳಿ... ತಂಗಾಳಿ ! ಚಾಮರಾಜನಗರದ ಶುದ್ಧ ಗಾಳಿಗೆ ದೇಶದಲ್ಲಿ ೪ನೇ ಸ್ಥಾನ ಎಂಥ ಪ್ರಾಣವಾಯು ! ಮಲೆ ಮಾದಪ್ಪ…

42 mins ago

ಓದುಗರ ಪತ್ರ:  ದ್ವೇಷ ಭಾಷಣ ಮಸೂದೆ ದುರ್ಬಳಕೆಯಾಗದಿರಲಿ

ರಾಜ್ಯ ಸರ್ಕಾರ ಮಂಡಿಸಿದ ದ್ವೇಷ ಭಾಷಣ ಮಸೂದೆ ೨೦೨೫ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವ್ಯಾಪಕ…

46 mins ago

ಮೈಸೂರು ಮುಡಾ ಹಗರಣ: ಅಕ್ರಮ ನಿವೇಶನ ಹಂಚಿಕೆಗೆ 22.47 ಕೋಟಿ ಲಂಚ ಪಡೆದಿದ್ದ ದಿನೇಶ್‌ ಕುಮಾರ್‌

ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬಯಲಾಗಿವೆ. ಮುಡಾ ಹಗರಣದ…

48 mins ago

ಓದುಗರ ಪತ್ರ: ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ

ಮೈಸೂರಿನ ಬಹುತೇಕ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ. ನಗರದ…

1 hour ago