ಅಂಕಣಗಳು

ಪ್ರೇಕ್ಷಕರ ಅನುಕೂಲ V/S ಮಲ್ಟಿಪ್ಲೆಕ್ಸ್‌ಗಳ ವಹಿವಾಟು

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

ಇದು ದಶಕದಿಂದ ಸರ್ಕಾರದ ಮುಂದಿದ್ದ ಬೇಡಿಕೆ. ಚಿತ್ರಮಂದಿರಗಳಲ್ಲಿ ಮುಖ್ಯವಾಗಿ ಬಹುಪರದೆಗಳ ಚಿತ್ರಮಂದಿರ ಸಂಕೀರ್ಣ(ಮಲ್ಟಿಪ್ಲೆಕ್ಸ್)ಗಳಲ್ಲಿ ಪ್ರವೇಶ ದರದ ನಿಯಂತ್ರಣ. ಅಲ್ಲಿನ ದುಬಾರಿ ಪ್ರವೇಶದರ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಪ್ರೇಕ್ಷಕರನ್ನು ಅಲ್ಲಿ ಬಂದು ಚಿತ್ರಗಳನ್ನು ನೋಡದಂತೆ ಮಾಡುತ್ತಿದೆ ಎನ್ನುವುದನ್ನು ಕನ್ನಡ ಚಿತ್ರೋದ್ಯಮ ಕಂಡಿತ್ತು. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರಗಳೇ ಪ್ರವೇಶ ದರವನ್ನು ನಿಗದಿಪಡಿಸಿವೆ.

ಆಂಧ್ರಪ್ರದೇಶದಲ್ಲಿ ಪ್ರದೇಶವಾರು ಮತ್ತು ಚಿತ್ರಮಂದಿರಗಳ ಸೌಲಭ್ಯಗಳನ್ನು ಅನುಸರಿಸಿ, ಪ್ರವೇಶ ದರ ನಿಗದಿ ಆಗಿದೆ. ನಾನ್ ಎಸಿ, ಎಸಿ, ವಿಶೇಷ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಹೀಗೆ ನಾಲ್ಕು ವರ್ಗೀಕರಣ ಮಾಡಿ ಅದರಲ್ಲಿ ನಾನ್ ಪ್ರೀಮಿಯಂ ಮತ್ತು ಪ್ರೀಮಿಯಂ ಎಂದು ಗುರುತಿಸಿದೆ. ಮುನ್ಸಿಪಲ್ ಕಾರ್ಪೊರೇಶನ್, ಮುನ್ಸಿಪಾಲಿಟಿ ಮತ್ತು ನಗರ/ ಗ್ರಾಮಪಂಚಾಯತ್ ಪ್ರದೇಶಗಳಲ್ಲಿ ಈ ಪ್ರವೇಶ ದರ ಬೇರೆಬೇರೆ ಆಗಿರುತ್ತದೆ. ೨೦೨೨ರಲ್ಲಿ ಜಾರಿಗೆ ಬಂದ ಈ ಆದೇಶವನ್ನು ತೆಲುಗು ಚಿತ್ರೋದ್ಯಮ ಮುಕ್ತವಾಗಿ ಸ್ವಾಗತಿಸಿದೆ.

ಅಲ್ಲೂ ಮೊದಲು ಸರ್ಕಾರವೇ ಪ್ರವೇಶದರ ನಿಗದಿಪಡಿಸುವುದರ ಕುರಿತಂತೆ ಅಸಮಾಧಾನ ಇತ್ತು. ಆದರೆ ಸರ್ಕಾರ ಉದ್ಯಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಪ್ಪಿಸುವುದರಲ್ಲಿ ಯಶಸ್ವಿಯಾಗಿದೆ. ಆಂಧ್ರ ಪ್ರದೇಶಕ್ಕೂ ಮೊದಲು ತಮಿಳುನಾಡು ಸರ್ಕಾರ ಪ್ರವೇಶದರ ನಿಯಂತ್ರಣ ಮಾಡಿತ್ತು. ಆರಂಭದ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳ ಮುಂದಿನ ಸಾಲಿನಲ್ಲಿ ೧೦ ರೂ. ಪ್ರವೇಶ ದರ ಇತ್ತು!

ತಮಿಳುನಾಡಿನಲ್ಲಿ ಈಗ ಗರಿಷ್ಟ ಪ್ರವೇಶ ದರ ೧೫೦ ರೂ. ಇದೆ. . IMAX  ಅಥವಾ 4DXಗಳಲ್ಲಿ ೨೦ ರಿಂದ ೩೦% ಏರಿಸಬಹುದು. ಆಂಧ್ರಪ್ರದೇಶದಲ್ಲಿ ೧೦೦ ಕೋಟಿ ರೂ. ಗೂ ಹೆಚ್ಚು ನಿರ್ಮಾಣ ವೆಚ್ಚದ (ಕಲಾವಿದರ, ತಂತ್ರಜ್ಞರ ಸಂಭಾವನೆ ಹೊರತುಪಡಿಸಿ) ಚಿತ್ರಗಳಿಗೆ ಸರ್ಕಾರದ ಪೂರ್ವಾನುಮತಿ ಪಡೆದು ಮೊದಲ ಹತ್ತು ದಿನಗಳ ಕಾಲ ಪ್ರವೇಶ ದರ ಏರಿಸುವ ಅವಕಾಶ ಇದೆ. ಅಲ್ಲಿ ಸಾಧಾರಣ ನಿರ್ಮಾಣ ವೆಚ್ಚದ ಚಿತ್ರಗಳೆಂದರೆ ೨೦ ಕೋಟಿ ರೂ. ವೆಚ್ಚದವು. ನಾಲ್ಕು ಕೋಟಿ ರೂ.ಗಿಂತ ಕಡಿಮೆ ನಿರ್ಮಾಣ ವೆಚ್ಚದ (ಕಲಾವಿದರ, ತಂತ್ರಜ್ಞರ ಸಂಭಾವನೆಯೂ ಸೇರಿದಂತೆ) ಚಿತ್ರಗಳಿಗೆ ಅದರ ಪ್ರದರ್ಶನ ವೇಳೆ ಸಂಗ್ರಹವಾದ ಜಿಎಸ್‌ಟಿಯನ್ನು ನಿರ್ಮಾಪಕರಿಗೆ ಹಿಂದಿರುಗಿಸುವ ವ್ಯವಸ್ಥೆಯೂ ಅಲ್ಲಿದೆ. ಅಷ್ಟೇ ಅಲ್ಲ, ಅಂತಹ ಚಿತ್ರಗಳಲ್ಲಿ ಉತ್ತಮ ೧೫ ಚಿತ್ರಗಳಿಗೆ ತಲಾ ಹತ್ತು ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿರುವಂತೆ, ಚಿತ್ರದ ಶೀರ್ಷಿಕೆ ತೆಲುಗಿನಲ್ಲಿರಬೇಕು, ತೆಲುಗರ ಸಂಸ್ಕೃತಿ, ಸಂಪ್ರದಾಯಗಳನ್ನು ಹೇಳುವ ಕಥಾ ವಸ್ತು ಆಗಿರಬೇಕು, ಸಂಪೂರ್ಣ ಚಿತ್ರ ಆಂಧ್ರಪ್ರದೇಶದಲ್ಲಿ ಚಿತ್ರೀಕರಣ ಆಗಿರಬೇಕು ಇವೇ ಮುಂತಾದ ಷರತ್ತುಗಳು ಅಲ್ಲಿವೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳು ನಾಡಿನಲ್ಲಿರುವಂತೆ ಪ್ರವೇಶ ದರಕ್ಕೆ ಸಂಬಂಧಿಸಿ ಸರ್ಕಾರ ೨೦೧೭ರಲ್ಲೇ ಗರಿಷ್ಟ ೨೦೦ರೂ. ಆದೇಶ ಹೊರಡಿಸಿತ್ತು. ಆದರೆ ಸಂಬಂಧಪಟ್ಟ ಇಲಾಖೆಯ ಬದಲು ಬೇರೊಂದು ಇಲಾಖೆಯ ಮೂಲಕ ಆದೇಶಆದ್ದರಿಂದ, ನ್ಯಾಯಾಲಯದ ಮೂಲಕ ಅದಕ್ಕೆ ತಡೆಯಾಜ್ಞೆ ತರುವುದು ಸುಲಭವಾಯಿತು. ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು-೨೦೧೪’ಕ್ಕೆ ತಿದ್ದುಪಡಿಯ ಮೂಲಕ ಹೊಸ ಆದೇಶ ಹೊರಡಿಸಿದೆ.

ಅದರ ಪ್ರಕಾರ, ಮಲ್ಟಿಪ್ಲೆಕ್ಸ್‌ಗಳನ್ನೂ ಒಳಗೊಂಡು ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಎಲ್ಲಾ ಪ್ರದರ್ಶನಕ್ಕಾಗಿ ಎಲ್ಲಾ ತೆರಿಗೆ ಹೊರತುಪಡಿಸಿ, ಟಿಕೆಟ್ ದರ ಗರಿಷ್ಟ ಮಿತಿ ೨೦೦ ರೂ.ಗಳನ್ನು ನಿಗದಿಪಡಿಸಿದೆ. ಆದರೆ ಇದು ೭೫ ಅಥವಾ ಅದಕ್ಕಿಂತ ಕಡಿಮೆ ಆಸನಗಳಿರುವ ಚಿತ್ರಮಂದಿರಗಳಿಗೆ ಅನ್ವಯವಿಲ್ಲ! ಇದೀಗ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಽ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಮತ್ತಿತರರು ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಈ ಬೆಳವಣಿಗೆಯ ಹಿಂದಿನ ಉದ್ದೇಶವನ್ನು ಕನ್ನಡ ಚಿತ್ರೋದ್ಯಮ ಪ್ರಶ್ನಿಸತೊಡಗಿದೆ. ಆ ಸಂಸ್ಥೆಗಳ ಪ್ರಕಾರ, ಈ ನಿಯಮಗಳು ಸಂವಿಧಾನ ಖಾತ್ರಿಪಡಿಸುವ ಮೂಲಭೂತ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಲಿದೆ. ಅವು ಜಾರಿಗೆ ಬಂದಲ್ಲಿ ಮಲ್ಟಿಪ್ಲೆಕ್ಸ್‌ಗಳ ವಹಿವಾಟಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಸರ್ಕಾರಕ್ಕೂ ಭಾರಿ ನಷ್ಟ ಉಂಟಾಗಲಿದೆ. ಆದ್ದರಿಂದ, ತಿದ್ದುಪಡಿ ನಿಯಮಗಳನ್ನು ರದ್ದುಪಡಿಸಬೇಕು ಎನ್ನುವುದು ಅವರ ಕೋರಿಕೆ.  ಮಾತ್ರವಲ್ಲ ಅರ್ಜಿ ಇತ್ಯರ್ಥವಾಗುವವರೆಗೆ ತಿದ್ದುಪಡಿ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ. ನ್ಯಾಯಾಲಯ ತನ್ನ ತೀರ್ಪನ್ನು ನಾಡಿದ್ದು, ಮಂಗಳವಾರ ಪ್ರಕಟಿಸಲಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳು ಇಂತಹದೊಂದು ಪ್ರಶ್ನೆ ಎತ್ತುವುದು, ಸಮಗ್ರ ಚಿತ್ರೋದ್ಯಮದ ದೃಷ್ಟಿಯಿಂದ ಸರಿಯಲ್ಲದೆ ಹೋದರೂ, ವ್ಯಾಪಾರಿಗಳಾಗಿ ಅವರ ಯೋಚನೆ ತಪ್ಪೇನಲ್ಲ. ಅವರಿಗೆ ಕನ್ನಡ ಚಿತ್ರಗಳು ಮಾತ್ರವಲ್ಲ, ಭಾರತದ ಬಹುತೇಕ ಭಾಷೆಗಳ ಚಿತ್ರಗಳು, ವಿದೇಶಿ ಚಿತ್ರಗಳು, ಹೀಗೆ ಸಾಕಷ್ಟು ಸರದಿಯಲ್ಲಿರುತ್ತವೆ. ಕನ್ನಡದ ಹೊಸ ಚಿತ್ರಗಳಿಗೆ ನೀಡುವ ವೇಳೆ ಕೂಡಾ ಸರಿಯಾದದ್ದಲ್ಲ, ಎನ್ನುವ ಆಕ್ಷೇಪವೂ ಇದೆ.

ಅಖಿಲ ಭಾರತ ವ್ಯಾಪ್ತಿಯ ಮಲ್ಟಿಪ್ಲೆಕ್ಸ್‌ಗಳ ಸಂಘಟನೆ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗರಿಷ್ಟ ಪ್ರವೇಶ ದರದ ಕುರಿತಂತೆ ತಲೆಕೆಡಿಸಿಕೊಳ್ಳದೆ, ಕರ್ನಾಟಕದಲ್ಲಿ ನ್ಯಾಯಾಲಯದ ಮೆಟ್ಟಲನ್ನು ಏಕೆ ಏರಿತು ಎನ್ನುವ ಪ್ರಶ್ನೆ. ಪರಭಾಷಾ ಚಿತ್ರಗಳ ನಿರ್ಮಾಪಕ/ವಿತರಕರಿಗೆ ಕರ್ನಾಟಕ ಎಂದರೆ ಅತಿ ಹೆಚ್ಚು ವ್ಯವಹಾರ ಆಗುವ ಪ್ರದೇಶ. ಜನಪ್ರಿಯ ನಟರ ಚಿತ್ರಗಳೆಂದರೆ ಅವು ಗಲ್ಲಾಪೆಟ್ಟಿಗೆ ದೋಚುವ ರೀತಿಯೇ ಹೇಳಿತೀರದು. ಅದರಲ್ಲೂ ಗುಣಮಟ್ಟದ ಚಿತ್ರಗಳಾದರೆ ಮುಗಿದೇ ಹೋಯಿತು. ಗಮನಿಸಿ, ಈ ವರ್ಷದ ಪೂರ್ವಾರ್ಧದಲ್ಲಿ ತೆರೆಕಂಡ ಮಲಯಾಳ, ತಮಿಳು, ಹಿಂದಿ ಚಿತ್ರಗಳ ಗಳಿಕೆಯ ಕುರಿತಂತೆ ಎಲ್ಲರಿಗೂ ತಿಳಿದೇ ಇದೆ. ಅದಕ್ಕೆ ಮೂಲ ಕಾರಣ, ಈ ಚಿತ್ರಮಂದಿರಗಳು ಮನಸೋಇಚ್ಛೆ ಪ್ರವೇಶ ದರ ನಿಗದಿಪಡಿಸುವುದು. ಪ್ರವೇಶ ದರ ಮಾತ್ರವಲ್ಲ, ಅಲ್ಲಿನ ತಿಂಡಿ, ತಿನಿಸುಗಳ ಬೆಲೆ ಕೂಡಾ! ಅಷ್ಟೇ ಏಕೆ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಿಸಲು ಕಾರಿನಲ್ಲೋ, ದ್ವಿಚಕ್ರ ವಾಹನದಲ್ಲೋ ಹೋದರೆ ಅಲ್ಲಿ ಪಾರ್ಕಿಂಗ್‌ಗೆ ಪ್ರತ್ಯೇಕ ಹಣ ನೀಡಬೇಕಾಗಿಲ್ಲ. ಆದರೆ ಕರ್ನಾಟಕದಲ್ಲಿ ತೆರಲೇಬೇಕು. ಅದು ಕೂಡಾ ದುಬಾರಿ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುವಷ್ಟು ಅದ್ಧೂರಿ ವೆಚ್ಚದ ಚಿತ್ರಗಳು ಕನ್ನಡದಲ್ಲಿ ತಯಾರಾಗುತ್ತಿಲ್ಲ. ಆಂಧ್ರಪ್ರದೇಶ ಸರ್ಕಾರ ಹೇಳುವ ಸೂಪರ್ ಹೈ ವೆಚ್ಚದ ಚಿತ್ರ ಕನ್ನಡದಲ್ಲಿ ತಯಾರಾಗಿದೆಯೇ ಎಂದರೆ ನಕಾರಾತ್ಮಕ ಉತ್ತರ ಸಿಗಬಹುದು. ಅಲ್ಲಿ ಕಲಾವಿದರ, ತಂತ್ರಜ್ಞರ ಸಂಭಾವನೆ ಹೊರತಾಗಿ ರೂ. ನೂರು ಕೋಟಿಗಿಂತ ಹೆಚ್ಚು ವೆಚ್ಚವಾದ ಚಿತ್ರ ಸೂಪರ್ ಹೈ ನಿರ್ಮಾಣ ವೆಚ್ಚದ್ದು ಎಂದು ನಿಗದಿಯಾಗುತ್ತದೆ. ಕನ್ನಡದಲ್ಲಿ ಅಂತಹ ಚಿತ್ರ ಯಾವುದಿದೆ ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿರುವ

‘ಕಾಂತಾರ ಒಂದು ದಂತಕತೆ : ಚಾಪ್ಟರ್ ೧’ ಈ ಸಾಲಿಗೆ ಸೇರಲಿದೆಯೇ ಎಂದು ಸಂಬಂಧಪಟ್ಟವರೇ ಹೇಳಬೇಕು. ಸೆಪ್ಟೆಂಬರ್ ೧೨ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-೨೦೨೫ ಈಗ ನ್ಯಾಯಾಲಯದ ಮುಂದಿದೆ. ಪಿವಿಆರ್ ಜೊತೆಗೆ ‘ಕಾಂತಾರ’ ಚಿತ್ರದ ಶೀರ್ಷಿಕೆ ಸೇರಿದಂತೆ ಆ ಚಿತ್ರದ ಪ್ರಚಾರ ನಡೆದಿದೆ. ಇದರ ನಿರ್ಮಾಣ ಸಂಸ್ಥೆ ಹೊಂಬಾಳೆ ಕೂಡ ಈ ಆದೇಶವನ್ನು ಪಿವಿಆರ್ ಜೊತೆ ಸಹಜವಾಗಿಯೇ ವಿರೋಧಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುಕಾಲದ ಬೇಡಿಕೆಯೂ ಆಗಿದ್ದ ಈ ಬೆಳವಣಿಗೆಯ ವಿರೋಧವನ್ನು ಅದು ಕೂಡ ವಿರೋಧಿಸಿದೆ. ನ್ಯಾಯಾಲಯದಲ್ಲಿ ತನ್ನ ವಾದವನ್ನೂ ಮಂಡಿಸುವ ಅವಕಾಶ ಕೇಳಬಹುದು. ನೆರೆಯ ರಾಜ್ಯಗಳಲ್ಲಿ ಇರುವಂತೆ ಅತಿ ಹೆಚ್ಚು ನಿರ್ಮಾಣ ವೆಚ್ಚದ ಚಿತ್ರಗಳ ಬಿಡುಗಡೆಯ ಮೊದಲ ಎರಡು ವಾರವೋ, ಹತ್ತು ದಿನವೋ, ಮಾಮೂಲಿ ಪ್ರವೇಶ ದರದ ಮೇಲೆ ಇಂತಿಷ್ಟು ಹೆಚ್ಚಿಸಲು ಅದು ಕೋರಬಹುದಿತ್ತು. ಸರ್ಕಾರದ ಆದೇಶದಲ್ಲೂ ಅದರ ಪ್ರಸ್ತಾಪ ಇರಬಹದಾಗಿತ್ತೇನೋ. ಪರಭಾಷಾ ಚಿತ್ರಗಳ ಪಾಲಿಗೆ ಕರ್ನಾಟಕದ ಗಲ್ಲಾಪೆಟ್ಟಿಗೆ ಒಂದು ರೀತಿಯ ಅಕ್ಷಯ ನಿಧಿ ಇದ್ದಂತೆ. ಅದು ಕಡಿಮೆಯಾದರೆ ಹೇಗೆ?

ಅಷ್ಟಕ್ಕೂ ಈ ವ್ಯವಹಾರಸ್ಥರಲ್ಲಿ ಕನ್ನಡೇತರರಿಗಿಂತ ಕನ್ನಡದ ಉದ್ಯಮಿಗಳೇ ಹೆಚ್ಚು. ಕನ್ನಡ ಚಿತ್ರೋದ್ಯಮದ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಮರ್ಥ ವಾಗಿ ತನ್ನ ವಾದವನ್ನು ಮಂಡಿಸಿ, ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಉದ್ಯಮದಲ್ಲಿದೆ. ನಾಡಿದ್ದು ಮಂಗಳವಾರ ಇದರ ತೀರ್ಮಾನ ಆಗಲಿದೆ.

ಮೊನ್ನೆ ಸರ್ಕಾರ ಹೊಸದೊಂದು ಪ್ರಶಸ್ತಿಯನ್ನು ಸ್ಥಾಪಿಸಿದೆ. ‘ಅಭಿನಯ ಸರಸ್ವತಿ ಸರೋಜಾದೇವಿ ಪ್ರಶಸ್ತಿ’ ಎಂದು ಅದಕ್ಕೆ ಹೆಸರು. ಕನ್ನಡ ಚಿತ್ರರಂಗಕ್ಕೆ ಕನಿಷ್ಠ ೨೫ ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರಿಗೆ ನೀಡುವುದು ಎಂದಿರುವ ಆದೇಶ, ಕ್ಯಾಲೆಂಡರ್ ವರ್ಷ ೨೦೨೫ರಿಂದ ಆ ಪ್ರಶಸ್ತಿಯನ್ನು ನೀಡಲಾಗುವುದು ಎಂದಿದೆ. ಇದು ಒಂದು ಲಕ್ಷ ರೂ. ನಗದು ಮತ್ತು ೧೦೦ ಗ್ರಾಂ ಬೆಳ್ಳಿಪದಕವನ್ನು ಒಳಗೊಂಡಿದೆ. ಅಲ್ಲಿಗೆ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ನಾಲ್ಕು ವಾರ್ಷಿಕ ಪ್ರಶಸ್ತಿಗಳಾದವು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ರಾಜಕುಮಾರ್ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಈಗ ‘ಅಭಿನಯ ಸರಸ್ವತಿ ಸರೋಜಾದೇವಿ ಪ್ರಶಸ್ತಿ’ ಮೊದಲ ಮೂರು ಪ್ರಶಸ್ತಿಗಳು ತಲಾ ಐದು ಲಕ್ಷ ರೂ. ನಗದು ಮತ್ತು ಚಿನ್ನದ ಪದಕ (೫೦ ಗ್ರಾಂ) ಹೊಂದಿವೆ. ಈ ತಾರತಮ್ಯ ಏಕೆ ಎನ್ನುವ ಪ್ರಶ್ನೆಯೂ ಎದ್ದಿದೆ. ಇರಲಿ. ‘ಅಭಿನಯ ಸರಸ್ವತಿ ಸರೋಜಾದೇವಿ’ ಪ್ರಶಸ್ತಿಯನ್ನು ಮೊದಲು ಪಡೆಯುವವರು ಇನ್ನೂ ಸಾಕಷ್ಟು ಕಾಯಬೇಕು. ೨೦೧೯ರ ಸಾಲಿನಿಂದ ಜೀವಿತಾವಧಿ ಸಾಧಕರ ಆಯ್ಕೆ ಆಗಿಲ್ಲ.  ೨೦೨೨ರಿಂದ ಪ್ರಶಸ್ತಿಗಾಗಿ ಚಿತ್ರಗಳನ್ನು ಆಹ್ವಾನಿಸಿಲ್ಲ. ೨೦೨೫ರ ಸಾಲಿನ ಪ್ರಶಸ್ತಿಗೆ ಇನ್ನೂ ಎರಡು ಮೂರು ವರ್ಷಗಳಾದರೂ ಕಾಯಬೇಕಾಗ ಬಹುದು. ಪ್ರಶಸ್ತಿ ಸ್ಥಾಪಿಸಿದ ಸುದ್ದಿಯಂತೂ ಆಗಿದೆ. ಆದೇಶ ಕಾರ್ಯಗತ ಆಗುವಂತೆ ನೋಡುವವರು ಅಲ್ಲಿ ಇರಬೇಕು.

” ಪರಭಾಷಾ ಚಿತ್ರಗಳ ನಿರ್ಮಾಪಕ/ವಿತರಕರಿಗೆ ಕರ್ನಾಟಕ ಎಂದರೆ ಅತಿ ಹೆಚ್ಚು ವ್ಯವಹಾರ ಆಗುವ ಪ್ರದೇಶ. ಜನಪ್ರಿಯ ನಟರ ಚಿತ್ರಗಳೆಂದರೆ ಅವು ಗಲ್ಲಾಪೆಟ್ಟಿಗೆ ದೋಚುವ ರೀತಿಯೇ ಹೇಳಿತೀರದು.”

ಆಂದೋಲನ ಡೆಸ್ಕ್

Recent Posts

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

8 mins ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

22 mins ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

47 mins ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

1 hour ago

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್‌ ಮುಂದೆ…

2 hours ago

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…

2 hours ago