ಅಂಕಣಗಳು

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಶಾಂತ; ವರಿಷ್ಠರ ಕನಸು ಬೇರೆ!

ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ 

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆಂತರಿಕ ಸಂಘರ್ಷದಲ್ಲಿ ಮುಳುಗಿದ್ದ ರಾಜ್ಯ ಬಿಜೆಪಿಯಲ್ಲೀಗ ಎಲ್ಲವೂ ಶಾಂತವಾಗಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು. ಅವರ ಜಾಗಕ್ಕೆ ಬೇರೊಬ್ಬರನ್ನು ತರಬೇಕು ಎಂದು ರಾಜ್ಯ ಬಿಜೆಪಿಯ ಒಂದು ಬಣ ನಡೆಸುತ್ತಿದ್ದ ನಿರಂತರ ಸಮರ ಇದ್ದಕ್ಕಿದ್ದಂತೆ ಶಾಂತವಾಗಲು ಮತ್ತು ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರು ಎಂದು ಹೊಸತಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದ ಬಣ ಇದ್ದಕ್ಕಿದ್ದಂತೆ ಮೌನವಾಗಲು ಏನು ಕಾರಣ? ಹಾಗೆಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಪಾಳೆಯದ ಆಳಕ್ಕಿಳಿದರೆ ಬೇರೆ ಸಂಗತಿಗಳು ಗೋಚರವಾಗುತ್ತವೆ.

ಅಂದ ಹಾಗೆ ಭಿನ್ನಮತೀಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ವರಿಷ್ಠರ ಕ್ರಮದಿಂದ ವಿಜಯೇಂದ್ರ ವಿರೋಧಿಗಳು ಹೆದರಿದರು ಎಂದೋ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದೆ ಇರುವುದರಿಂದ ವಿಜಯೇಂದ್ರ ಅವರನ್ನು ಮತ್ತೊಮ್ಮೆ ಅಧ್ಯಕ್ಷರು ಎಂದು ಘೋಷಿಸುವ ಪ್ರಕ್ರಿಯೆ ಸ್ಥಗಿತವಾಗಿದೆ ಎಂದೋ ಕೆಲವರು ಭಾವಿಸುತ್ತಿದ್ದಾರಾದರೂ ಅಂತಿಮವಾಗಿ ಅದು ಸತ್ಯವಲ್ಲ.

ಏಕೆಂದರೆ ಒಂದು ಉಚ್ಚಾಟನೆಯಿಂದ ರಾಜ್ಯ ಬಿಜೆಪಿಯ ಭಿನ್ನರು ಬೆದರಿಯೂ ಇಲ್ಲ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆದಿಲ್ಲ ಎಂಬ ಕಾರಣಕ್ಕಾಗಿ ವಿಜಯೇಂದ್ರ ಪರವಾಗಿರುವವರು ಮೌನವಾಗಿದ್ದಾರೆ ಅಂತಲೂ ಅಲ್ಲ.

ವಾಸ್ತವವಾಗಿ ಬಿಜೆಪಿಯ ವರಿಷ್ಠರಿಗೆ ಬೇರೆಯೇ ಕನಸು ಬಿದ್ದಿದೆ. ಅದೆಂದರೆ, ಕರ್ನಾಟಕದಲ್ಲಿರುಐ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದು. ಸಂಖ್ಯಾಬಲದ ದೃಷ್ಟಿಯಿಂದ ನೋಡಿದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದು ಸರಳವಾದ ಮಾತಲ್ಲ. ಮೊದಲ ನೆಯದಾಗಿ, ಮೂರನೇ ಎರಡರಷ್ಟು ಭಾಗದ ಶಾಸಕರು ಪಕ್ಷ ತೊರೆದು ಬಿಜೆಪಿ ಕಡೆ ಹೋಗುತ್ತಾರೆ ಎಂಬುದೂ ಕಪೋಲಕಲ್ಪಿತ.

ಹೀಗಾಗಿ ಸರ್ಕಾರವನ್ನು ಅಲುಗಾಡಿಸುವುದು ಕಷ್ಟ ಎಂದು ಹಲವರು ಭಾವಿಸಿದ್ದಾರೆ. ಹೀಗೆ ಭಾವಿಸುವವರ ಮನಸ್ಸಿನಲ್ಲಿರುವುದೆಂದರೆ ಮೂರನೇ ಎರಡರಷ್ಟು ಭಾಗದ ಶಾಸಕರು ಪಕ್ಷ ತೊರೆಯದೆ ಇದ್ದರೆ, ಪರ್ಯಾಯ ಸರ್ಕಾರವನ್ನು ರಚಿಸುವುದಾದರೂ ಹೇಗೆ ಎಂಬುದು. ಆದರೆ ಪರ್ಯಾಯ ಸರ್ಕಾರ ರಚನೆಯ ಆಸೆ ತೋರಿಸದೆ ಹೋದರೆ ಕೈ ಪಾಳೆಯದ ಶಾಸಕರು ಪಕ್ಷ ತೊರೆಯುವ ಲೆಕ್ಕಾಚಾರಕ್ಕೆ ಬರುವುದಿಲ್ಲ. ಹೀಗಾಗಿ ಇಂತಹ ಶಾಸಕರನ್ನು ಸೆಳೆಯಲು ಬಿಜೆಪಿ ವರಿಷ್ಠರು ಪರ್ಯಾಯ ಸರ್ಕಾರದ ಕನಸು ತೋರಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ರಾಜ್ಯ ಕಾಂಗ್ರೆಸ್ಸಿನ ಯಾವುದಾದರೂ ಒಂದು ಬಣದಿಂದ ನಲವತ್ತರಷ್ಟು ಶಾಸಕರು ಸಿಡಿದು ಬಂದರೆ ಮತ್ತು ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪಾಗಿ ಕುಳಿತುಕೊಂಡರೆ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಹೊಡೆತಕ್ಕೆ ಸಿಲುಕುವುದಿಲ್ಲ. ಹೀಗಾಗಿ ಇಂತಹ ಪ್ರತ್ಯೇಕ ಗುಂಪಿಗೆ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಸದಸ್ಯರು ಬೆಂಬಲ ನೀಡಿದರೆ ಪರ್ಯಾಯ ಸರ್ಕಾರ ರಚಿಸಬಹುದು ಎಂಬುದು ಬಿಜೆಪಿ ವರಿಷ್ಠರು ರವಾನಿಸಿರುವ ಸಂದೇಶ.

ಆದರೆ ಅವರ ಸಂದೇಶಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷದಿಂದ ಹೊರಬರುವವರು ಯಾರು? ಮತ್ತು ಪ್ರತ್ಯೇಕ ಗುಂಪನ್ನು ರಚಿಸಿಕೊಳ್ಳುವವರು ಯಾರು? ಬಿಜೆಪಿ ವರಿಷ್ಠರು ಈಗ ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ಮಾಡುತ್ತಿದ್ದಾರೆ. ಅವರ ಪ್ರಕಾರ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಆಗಿರುವ ಅಧಿಕಾರ ಹಂಚಿಕೆ ಒಪ್ಪಂದವೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಉರುಳುವಂತೆ ಮಾಡಲಿದೆ.

ಏಕೆಂದರೆ, ಮೊದಲನೆಯದಾಗಿ ಅಧಿಕಾರ ಹಂಚಿಕೆ ಎಂಬುದೇ ನಡೆದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಅವರ ಬಣ ವಾದಿಸುತ್ತಿದೆ. ಅದರ ಪ್ರಕಾರ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಕಾಲದಲ್ಲಿ ವರಿಷ್ಠರು ಅಧಿಕೃತವಾಗಿ ಇಂತಹ ಒಪ್ಪಂದವನ್ನೇನೂ ಮಾಡಿಸಿಲ್ಲ. ಹೆಚ್ಚೆಂದರೆ, ಸಿಎಂ ಹುದ್ದೆ ಯಾರಿಗೆ? ಎಂಬ ವಿಷಯ ಇತ್ಯರ್ಥವಾಗದೆ ಇದ್ದಾಗ ಸೂಕ್ತ ಕಾಲದಲ್ಲಿ ನಿಮ್ಮ ಹಿತ ಕಾಯುತ್ತೇವೆ. ನಿಮಗೆ ಅಧಿಕಾರ ದಕ್ಕಲಿದೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸೋನಿಯಾ ಗಾಂಧಿ  ಅವರು ಹೇಳಿರಬಹುದು ಎಂಬುದು ಸಿದ್ದರಾಮಯ್ಯ ಬಣದ ವಾದ. ಆದರೆ ಡಿ.ಕೆ.ಶಿವಕುಮಾರ್ ಅವರ ಬಣ ಇದನ್ನು ಒಪ್ಪುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ದೊಡ್ಡ ಮಟ್ಟದ ಬಂಡ ವಾಳ ಹೂಡಿದವರು ಡಿಕೆಶಿ. ಅದೇ ರೀತಿ ಚುನಾವಣಾ ರಣತಂತ್ರಗಳನ್ನು ಹೆಣೆಯುವ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದವರೂ ಅವರೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೇಡಂ ಸೋನಿಯಾ ಗಾಂಧಿ ಅವರು ಸಿಎಂ ಹುದ್ದೆ ಕೊಡುವ ಭರವಸೆ ನೀಡಿದ್ದಾರೆ. ಅಧಿಕಾರ ಒಪ್ಪಂದದ ಮೂಲ ಇದು ಎನ್ನುತ್ತಾರೆ.

ಹೀಗೆ ಉಭಯ ಬಣಗಳ ವಾದದ ನಡುವೆಯೇ ತಮಗೆ ಅನುಕೂಲ ಕರವಾದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಬಿಜೆಪಿ ವರಿಷ್ಠರು ನಂಬಿದ್ದಾರೆ. ಅಂದರೆ? ತಮ್ಮ ತಮ್ಮ ವಾದಗಳಿಗೆ ಅಂಟಿಕೊಂಡ ಡಿಕೆಶಿ ಮತ್ತು ಸಿದ್ದರಾಮಯ್ಯ ಸರ್ಕಾರ ಅಲುಗಾಡಲು ಅವಕಾಶ ನೀಡುತ್ತಾರೆ ಎಂಬುದು ಅವರ ಲೆಕ್ಕಾಚಾರ.

ಒಂದು ವೇಳೆ ಕಾಂಗ್ರೆಸ್ ಪಕ್ಷದ ವರಿಷ್ಠರು, ಅಧಿಕಾರ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರು ತಿರುಗಿ ಬೀಳುತ್ತಾರೆ. ಅಷ್ಟೇ ಅಲ್ಲ, ಅವರ ಬೆಂಬಲಿಗರು ಕೂಡ ದೊಡ್ಡ ಮಟ್ಟದಲ್ಲಿ ಡಿಕೆಶಿಗೆ ಅಧಿಕಾರ ವಹಿಸಿಕೊಡುವುದನ್ನು ವಿರೋಧಿಸುತ್ತಾರೆ.

ಒಂದು ವೇಳೆ ತಮ್ಮ ವಿರೋಧವನ್ನು ಹೈಕಮಾಂಡ್ ವರಿಷ್ಠರು ಲೆಕ್ಕಿಸದೆ ಹೋದರೆ ಅರವತ್ತರಷ್ಟು ಸಚಿವರು, ಶಾಸಕರು ಕೈ ಪಾಳೆಯ ತೊರೆಯುತ್ತಾರೆ ಎಂಬುದು ಬಿಜೆಪಿ ವರಿಷ್ಟರ ಲೆಕ್ಕಾಚಾರ. ಅವರಿಗೆ ಸ್ಪಷ್ಟವಾಗಿರುವಂತೆ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬುದೇ ಆದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ನ ದೊಡ್ಡ ಗುಂಪೊಂದು ಪಕ್ಷ ತೊರೆಯಲು ಸಜ್ಜಾಗುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡದೆ ಹೋದರೆ ಡಿಕೆಶಿ ಕನಲುತ್ತಾರೆ. ಅರ್ಥಾತ್ ಶಾಸಕರ ಒಂದು ಗುಂಪಿನೊಂದಿಗೆ ಅವರು ಕೈ ಪಾಳೆಯ ತೊರೆಯುತ್ತಾರೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.

ಅಂದ ಹಾಗೆ ಡಿಕೆಶಿ ಜತೆ ಪಕ್ಷ ತೊರೆಯುವವರ ಸಂಖ್ಯೆ ಎಷ್ಟು? ಎಂಬ ಬಗ್ಗೆ ನಿಖರ ಅಂದಾಜು ಇಲ್ಲದೆ ಇದ್ದರೂ ಇತ್ತೀಚಿನ ದಿನಗಳಲ್ಲಿ ಅವರುತಮ್ಮ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವುದರಿಂದ ಕನಿಷ್ಠ ಪಕ್ಷ ನಲವತ್ತರಷ್ಟು ಮಂದಿ ಶಾಸಕರು ಕಾಂಗ್ರೆಸ್ ತೊರೆಯಲು ಸಜ್ಜಾಗಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.

ಅಂದ ಹಾಗೆ ಈ ಪೈಕಿ ಯಾವುದೇ ಗುಂಪು ಹೊರಬಂದರೂ ಪರ್ಯಾಯ ಸರ್ಕಾರ ರಚಿಸಲು ಯತ್ನಿಸಬಹುದು. ಇಲ್ಲವೇ ಕನಿಷ್ಠ ಪಕ್ಷ ಸರ್ಕಾರವನ್ನಾದರೂ ಉರುಳಿಸಬಹುದು ಎಂಬುದು ಅವರ ಯೋಚನೆ. ಇಂತಹ ಯೋಚನೆ ಇರುವುದರಿಂದಲೇ ಅವರು ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯ ಭಿನ್ನರೂ ಮೌನವಾಗಿದ್ದಾರೆ. ಅಧ್ಯಕ್ಷರಾದ ವಿಜಯೇಂದ್ರ ಅವರ ಬಣವೂ ತಣ್ಣಗಿದೆ. ಮುಂದೇನು ಕತೆಯೋ? ಕಾದು ನೋಡಬೇಕು

” ಒಂದು ವೇಳೆ ತಮ್ಮ ವಿರೋಧವನ್ನು ಹೈಕಮಾಂಡ್ ವರಿಷ್ಠರು ಲೆಕ್ಕಿಸದೆ ಹೋದರೆ ಅರವತ್ತರಷ್ಟು ಸಚಿವರು, ಶಾಸಕರು ಕೈ ಪಾಳೆಯ ತೊರೆಯುತ್ತಾರೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಅವರಿಗೆ ಸ್ಪಷ್ಟವಾಗಿರುವಂತೆ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬುದೇ ಆದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ನ ದೊಡ್ಡ ಗುಂಪೊಂದು ಪಕ್ಷ ತೊರೆಯಲು ಸಜ್ಜಾಗುತ್ತದೆ.”

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

9 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

9 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

10 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

10 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

11 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

11 hours ago