ಅಂಕಣಗಳು

ಕಾಲು ಕಳೆದುಕೊಂಡರೂ ಬದುಕು ಕಟ್ಟಿಕೊಂಡ ಅರ್ಪಿತಾ`

ನ್ಯೂನತೆಯನ್ನೆ ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಯೋಗ ಶಿಕ್ಷಕಿಯಾದ ಸಾಧಕಿ

೨೦೦೬ರ ಏಪ್ರಿಲ್ ೨೨ ಅರ್ಪಿತಾ ರಾಯ್‌ಗೆ ತನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ದಿನ. ಅಂದು ಸಂಜೆ ಹೊತ್ತು ಅವರು ಕೊಲ್ಕತ್ತಾ ನಗರದಿಂದ ೩೦ ಕಿ.ಮೀ. ದೂರದಲ್ಲಿ ತಮ್ಮ ಮನೆಯಿರುವ ಬರ್ರಕ್‌ಪೋರೆ ಎಂಬಲ್ಲಿಂದ ಸ್ನೇಹಿತರೊಬ್ಬರ ಬೈಕಿಕಲ್ಲಿ ಕುಳಿತು ಕೊಲ್ಕತ್ತಾದ ಮಾರುಕಟ್ಟೆಗೆ ಹೋಗುತ್ತಿದ್ದರು. ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಅವರು ತಾನು ಏನೇನು ಖರೀದಿಸಬೇಕೆಂಬುದನ್ನು ಮನಸ್ಸಿನಲ್ಲೇ ಪಟ್ಟಿ ಮಾಡಿಕೊಳ್ಳುತ್ತಿದ್ದರು. ಹೀಗೆ ಹೋಗುತ್ತಿರಬೇಕಾದರೆ ಅವರ ಬೈಕ್ ಲಾರಿಯೊಂದಕ್ಕೆ ಡಿಕ್ಕಿಯಾಯಿತು. ಅರ್ಪಿತಾ ಬೈಕಿನಿಂದ ಕೆಳಕ್ಕೆ ಬಿದ್ದರು. ಲಾರಿ ಅವರ ಕಾಲುಗಳ ಮೇಲೆ ಹರಿದು ಹೋಯಿತು.

ಒಂದು ಆಸ್ಪತ್ರೆಯ ಎದುರುಗಡೆ ಆ ಅಪಘಾತ ನಡೆದಿತ್ತು. ನೆರೆದವರು ಅರ್ಪಿತಾರನ್ನು ಎತ್ತಿಕೊಂಡು ಹೋಗಿ ಅಲ್ಲಿ ಸೇರಿಸಿದರು. ಅಲ್ಲಿ ಅವರಿಗೆ ನೋವು ನಿವಾರಕ ಇಂಜೆಕ್ಷನ್ ಕೊಡಲಾಯಿತು. ಅದೊಂದು ಹೆಚ್ಚು ಸವಲತ್ತುಗಳಿಲ್ಲದ ಚಿಕ್ಕ ಆಸ್ಪತ್ರೆಯಾದುದರಿಂದ ಅರ್ಪಿತಾರನ್ನು ಕೊಲ್ಕತ್ತಾದ ಬೇರೊಂದು ದೊಡ್ಡ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ವೈದ್ಯರು ತಕ್ಷಣ ಸರ್ಜರಿ ಮಾಡಿದರೆ ಅವರ ಕಾಲುಗಳನ್ನು ಉಳಿಸಬಹುದು ಎಂದು ಹೇಳಿದರು.

ಆ ಸರ್ಜರಿಗೆ ಕೆಲವು ಲಕ್ಷ ರೂಪಾಯಿಗಳ ಖರ್ಚಿತ್ತು. ಅಷ್ಟು ಹಣವನ್ನು ಹೊಂದಿಸಲು ಅರ್ಪಿತಾರ ಕುಟುಂಬಕ್ಕೆ ೧೨ ದಿನಗಳು ಬೇಕಾದವು. ಅಷ್ಟರಲ್ಲಿ ಗ್ಯಾಂಗ್ರಿನ್ ಅವರ ೮೦% ರಷ್ಟು ದೇಹಕ್ಕೆ ಹರಡಿದ್ದ ಕಾರಣ ಬೇರೆ ದಾರಿಯಿಲ್ಲದೆ ಅವರ ಎರಡೂ ಕಾಲುಗಳನ್ನು ಕತ್ತರಿಸಿ ತೆಗೆಯಬೇಕಾಗಿ ಬಂದಿತು. ಅರ್ಪಿತಾ ರಾಯ್ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಮನೆಗೆ ಬಂದರು.

ಎರಡೂ ಕಾಲುಗಳನ್ನು ಕಳೆದುಕೊಳ್ಳುವುದು ಎಂತಹ ಧೈರ್ಯಸ್ಥರನ್ನೂ ಕೆಂಗೆಡಿಸುವಂತಹ ಒಂದು ದುರ್ಘಟನೆ. ಆದರೆ, ಆಗ ಕಾಲೇಜಿಗೆ ಹೋಗುತ್ತಿದ್ದ ೨೦ ವರ್ಷ ಪ್ರಾಯದ ಅರ್ಪಿತಾ ರಾಯ್ ಆ ಘಟನೆಯಿಂದ ಕೆಂಗೆಡಲಿಲ್ಲ. ತನ್ನೆಲ್ಲ ಆತ್ಮಶಕ್ತಿಯನ್ನು ಒಗ್ಗೂಡಿಸಿಕೊಂಡು ಯಾವುದೇ ಕಾರಣಕ್ಕೂ ತಾನು ಮನೆಯವರಿಗೆ ಹೊರೆಯಾಗಬಾರದೆಂದು ನಿಶ್ಚಯ ಮಾಡಿದರು. ಆ ಘಟನೆ ನಡೆದು ಈಗ ೧೯ ವರ್ಷಗಳಾಗಿವೆ. ಅರ್ಪಿತಾ ರಾಯ್ ತಾನು ನಿಶ್ಚಯಮಾಡಿದಂತೆಯೇ ಈಗ ತನ್ನ ಕಾಲ ಮೇಲೆ ತಾನು ನಿಂತಿದ್ದಾರೆ. ಅವರು ಕೃತಕ ಕಾಲುಗಳನ್ನು ಜೋಡಿಸಿಕೊಂಡು ನಡೆಯುತ್ತಾರೆ ಹಾಗೂ ಯೋಗಾಸನವನ್ನೂ ಮಾಡುತ್ತಾರೆ. ಅಷ್ಟೇ ಅಲ್ಲ, ಯೋಗಾಸನ ಕಲಿಸುವ ಒಂದು ಶಾಲೆಯನ್ನೂ ತೆರೆದಿದ್ದಾರೆ. ಆದರೆ, ಅರ್ಪಿತಾ ಸಾಗಿ ಬಂದ ಆ ದಾರಿ ಅಷ್ಟು ಸುಲಭದಾಗಿರಲಿಲ್ಲ.

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಅರ್ಪಿತಾರ ಕಾಲಿನ ಇತರ ಭಾಗಗಳಿಂದ ಮಾಂಸವನ್ನು ಕತ್ತರಿಸಿ ತೆಗೆದು ತುಂಡಾದ ಭಾಗಗಳಿಗೆ ಕಸಿ ಮಾಡಬೇಕಿತ್ತು. ಆದನ್ನು ಮಾಡುವ ಸಲುವಾಗಿ ಅರ್ಪಿತಾ ಪ್ರತಿದಿನ ಒಂದು ಗಂಟೆ ಹೊತ್ತು ಕೃತಕ ಕಾಲುಗಳ ಮೇಲೆ ನಿಂತಿರಬೇಕಾಗಿರುತ್ತಿತ್ತು.

ಕೃತಕ ಕಾಲುಗಳ ಮೇಲೆ ಇಡೀ ದೇಹದ ಭಾರವನ್ನು ಹಾಕಿ ನಿಲ್ಲುವುದು ತೀರಾ ಶ್ರಮದಾಯಕವಾದುದು. ಏಕೆಂದರೆ, ಅಂಗಾಂಗ ಕಳೆದು ಹೋದ ದೇಹದ ಭಾಗದಲ್ಲಿ ‘ಫ್ಯಾಂಟಮ್ ನೋವು’ ಎಂದು ಹೆಸರಿಸಲಾದ ಸಹಿಸಲಸಾಧ್ಯವಾದ ನೋವು ಬರುತ್ತದೆ. ಆ ನೋವು ಪ್ರಜ್ಞಾವಸ್ಥೆಯಲ್ಲಿ ದೇಹದ ಭಾಗವನ್ನು ಕತ್ತರಿಸಿದ ಅಥವಾ ಸುಟ್ಟ ನೋವಿಗಿಂತಲೂ ಹೆಚ್ಚು ತೀವ್ರವಾದುದು. ಅದನ್ನೆಲ್ಲ ಸಹಿಸಿಕೊಂಡ ಅರ್ಪಿತಾ ಕೆಲವು ತಿಂಗಳ ಅಭ್ಯಾಸದ ನಂತರ ಕೃತಕ ಕಾಲುಗಳ ಸಹಾಯದಿಂದ ನಡೆಯಲು ಶಕ್ತರಾದರು.

ನಮ್ಮ ಭಾರತೀಯ ಸಮಾಜ ಅಂಗಾಂಗಗಳನ್ನು ಕಳೆದುಕೊಂಡವರನ್ನು ಹೇಗೆ ನೋಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಎಲ್ಲರೂ ಅರ್ಪಿತಾರತ್ತ ಕನಿಕರದಿಂದ ನೋಡುವವರೇ. ಇನ್ನು ಕೆಲವರು ಅವರು ತನ್ನ ಕುಟುಂಬದವರಿಗೆ ಭಾರ ಎಂಬಂತೆ ನೋಡಿದರು. ಎಷ್ಟೋ ಜನ ಅವರ ಕಾಲುಗಳನ್ನು ನೋಡಿ ಪೋಲಿಯೋ ಪೀಡಿತಳೆಂಬಂತೆ ಭಾವಿಸಿದರು. ಅರ್ಪಿತಾ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಸುತ್ತಲಿನ ಜನರ ಋಣಾತ್ಮಕ ನಡವಳಿಕೆಗಳಿಂದ ಭಾವನಾತ್ಮಕವಾಗಿ ಕುಂದಿ ಹೋಗುವುದನ್ನು ತಡೆಯಲಾಗುತ್ತಿರಲಿಲ್ಲ. ಆದರೆ ತನ್ನ ಅಣ್ಣನ ನಿರಂತರ ಸ್ಛೂರ್ತಿ ಪ್ರೋತ್ಸಾಹದ ಕಾರಣ ಅದನ್ನೆಲ್ಲ ಮೀರಿ ನಿಲ್ಲಲು ಶಕ್ತರಾದರು. ಕುಟುಂಬದ ಏಕಮಾತ್ರ ದುಡಿಯುವ ವ್ಯಕ್ತಿಯಾಗಿದ್ದ ಅವರು ತಂಗಿಯ ವೈದ್ಯಕೀಯ ಚಿಕಿತ್ಸೆಗಾಗಿ ತನ್ನೆಲ್ಲ ಹಣವನ್ನು ಖರ್ಚು ಮಾಡಿದ್ದರು.

ಯಾವುದೇ ಕಾರಣಕ್ಕೂ ತಾನು ಮನೆಯವರಿಗೆ ಹೊರೆಯಾಗಬಾರದೆಂದು ನಿಶ್ಚಯ ಮಾಡಿದ್ದ ಅರ್ಪಿತಾ ರಾಯ್ ಬಹಳಷ್ಟು ಹುಡುಕಾಡಿ ೨೦೦೭ರ ಜುಲೈಯಲ್ಲಿ ಒಂದು ಕಾಲ್ ಸೆಂಟರಿನಲ್ಲಿ ಕೆಲಸ ಪಡೆದರು. ತನ್ನ ದೇಹಾರೋಗ್ಯದ ಜೊತೆ ದೈಹಿಕ ಕ್ಷಮತೆಯನ್ನೂ ಉಳಿಸಿಕೊಳ್ಳುವುದು ಬಹುಮುಖ್ಯವಾಗಿತ್ತು. ಅವರ ಕಾಲುಗಳು ಕೃತಕ ಕಾಲುಗಳಲ್ಲಿ ಸರಿಯಾಗಿ ಜೋಡಣೆಯಾಗಲು ತಮ್ಮ ದೇಹ ತೂಕ ಹಾಗೂ ಆಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಅವರು ವ್ಯಾಯಾಮ ಮಾಡುವುದು ಅಗತ್ಯವಾಗಿತ್ತು. ಆದರೆ, ಕಾಲುಗಳಿಲ್ಲದೆ ವ್ಯಾಯಾಮ ಮಾಡುವುದು ಅವರಿಗೆ ಹಾಗೂ ಅವರಿಗೆ ವ್ಯಾಯಾಮ ಕಲಿಸುವ ಫಿಟ್‌ನೆಸ್ ತಜ್ಞರಿಗೂ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ಹಾಗಾಗಿ ಅರ್ಪಿತಾ ಬೇರೆ ಬೇರೆ ವಿಧದ ವ್ಯಾಯಾಮಗಳನ್ನು ಮಾಡುತ್ತ, ಕೊನೆಗೆ ಯೋಗಾಸನಗಳನ್ನು ಮಾಡಲು ಪ್ರಾರಂಭಿಸಿದರು. ಯೋಗಾಸನದ ಅಭ್ಯಾಸ ಅವರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಂತ್ವನ ನೀಡಿತು. ಆದರೂ, ಆರೋಗ್ಯಕರ ಮಂಡಿಯಿಲ್ಲದೆ ಕೃತಕ ಕಾಲುಗಳನ್ನು ಜೋಡಿಸಿಕೊಂಡು ಯೋಗಾಸನ ಮಾಡುವುದೂ ಸವಾಲಿನದ್ದೇ. ಅರ್ಪಿತಾ ಮೊದಲಿಗೆ ತೀರಾ ಸರಳವಾದ ಆಸನಗಳನ್ನು ಮಾಡುತ್ತ, ನಂತರ ಕ್ಲಿಷ್ಟಕರ ಆಸನಗಳನ್ನು ಮಾಡತೊಡಗಿದರು. ೨೦೧೫ರಲ್ಲಿ ಯೋಗಾಭ್ಯಾಸ ಶುರು ಮಾಡಿದ ಅವರು ೨೦೧೯ರಲ್ಲಿ ನೂರಾರು ಆಸನಗಳನ್ನು ಮಾಡುವಲ್ಲಿ ಯಶಸ್ವಿಯಾದರು.

ಒಮ್ಮೆ ಅವರು ತಾನು ಯೋಗಾಸನ ಮಾಡುವ ಚಿತ್ರವೊಂದನ್ನು ಇನ್ ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗ ಅವರ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸಾಮಾನ್ಯರಲ್ಲದೆ ಹಲವಾರು ಹೆಸರಾಂತ ಕ್ರೀಡಾಪಟುಗಳಿಂದಲೂ ಮೆಚ್ಚುಗೆಗಳು ಬಂದವು. ಅದರಿಂದ ಸ್ಛೂರ್ತಿ ಪಡೆದ ಅವರು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿ, ‘ಪ್ಯೂಮಾ ಇಂಡಿಯಾ’ ಸ್ಪರ್ಧೆಯಲ್ಲಿ ಎರಡು ಬಾರಿ ಗೆದ್ದರು. ಯೋಗ ಜರ್ನಲ್, ಆಂಪುಟಿ ಕೋಅಲಿಷನ್ ಹಾಗೂ ಇನ್ನು ಕೆಲವು ಇನ್‌ಸ್ಟಾಗ್ರಾಮ್ ಪುಟಗಳು ಅವರನ್ನು ಪರಿಚಯಿಸಿದವು. ಇದೆಲ್ಲದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಅರ್ಪಿತಾ ಯೋಗಾ ಶಿಕ್ಷಕಿಯಾಗಲು ಬೇಕಾದ ತರಬೇತಿಯನ್ನು ಪಡೆದು, ಒಂದು ಫಿಟ್‌ನೆಸ್ ಸೆಂಟರನ್ನು ತೆರೆದು, ವ್ಯಾಯಾಮ ಮತ್ತು ಯೋಗ ಕಲಿಸಲು ಶುರು ಮಾಡಿದರು. ಕೋವಿಡ್ ದಾಳಿಯಾಗುವ ಮೊದಲು ಅವರ ಫಿಟ್‌ನೆಸ್ ಸೆಂಟರಲ್ಲಿ ೨೫ ಜನ ವಿದ್ಯಾರ್ಥಿಗಳಿದ್ದರು.

ಈಗ ೩೫ ವರ್ಷ ಪ್ರಾಯದವರಾಗಿರುವ ಅರ್ಪಿತಾ ರಾಯ್ ಆನ್ ಲೈನ್ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಮದುವೆಯೂ ಆಗಿದೆ. ತನ್ನ ಕೃತಕ ಕಾಲುಗಳು ಕಾಣದಂತೆ ಫೋಟೋಗಳನ್ನು ಕ್ರಾಪ್ ಮಾಡುವುದಾಗಲಿ , ಉದ್ದ ಸ್ಕರ್ಟ್ ಧರಿಸಿ ಅವುಗಳನ್ನು ಮುಚ್ಚಿಕೊಳ್ಳುವುದಾಗಲಿ ಮಾಡದೆ ತಾನು ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳುತ್ತಾರೆ. ಅವರ ಕಾಲುಗಳಿಲ್ಲದ ಪರಿಸ್ಥಿತಿ ಬಗ್ಗೆ ಅನೇಕ ಹೃದಯಹೀನರು ಟ್ರೋಲ್ ಮಾಡಿದರೂ ಆ ಬಗ್ಗೆ ಯಾವುದೇ ಕೀಳರಿಮೆಯಾಗಲಿ ಭವಿಷ್ಯದ ತನ್ನ ಬದುಕಿನ ಬಗ್ಗೆ ಯಾವುದೇ ಭಯವಾಗಲಿ ಅವರಿಗಿಲ್ಲ. ಬದಲಿಗೆ, ಕಾಲುಗಳನ್ನು ಕಳೆದುಕೊಂಡರೂ ತಾನು ಈವರೆಗೆ ಸಾಧಿಸಿದರ ಬಗ್ಗೆ ಅವರಿಗೆ ಹೆಮ್ಮೆ ಇದೆ.

‘ಯಾವುದಾದರೂ ಒಂದು ಪರಿಸ್ಥಿತಿ ನನ್ನನ್ನು ಬದಲಾಯಿಸಬಹುದು. ಆದರೆ ಆ ಪರಿಸ್ಥಿತಿ ನನ್ನನ್ನು ನಾಶ ಮಾಡಲು ಎಂದಿಗೂ ಬಿಡಲಾರೆ ಎಂಬ ಲೇಖಕಿ ಮಾಯ್ ಅಂಜೆಲು ಮಾತುಗಳಿಗೆ ಅರ್ಪಿತಾ ರಾಯ್ ಬದುಕು ಒಂದು ಜೀವಂತ ನಿದರ್ಶನ

” ಈಗ ೩೫ ವರ್ಷ ಪ್ರಾಯದವರಾಗಿರುವ ಅರ್ಪಿತಾ ರಾಯ್ ಆನ್ ಲೈನ್ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಮದುವೆಯೂ ಆಗಿದೆ. ತನ್ನ ಕೃತಕ ಕಾಲುಗಳು ಕಾಣದಂತೆ ಫೋಟೋಗಳನ್ನು ಕ್ರಾಪ್ ಮಾಡುವುದಾಗಲಿ, ಉದ್ದ ಸ್ಕರ್ಟ್ ಧರಿಸಿ ಅವುಗಳನ್ನು ಮುಚ್ಚಿಕೊಳ್ಳುವುದಾಗಲಿ ಮಾಡದೆ ತಾನು ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳುತ್ತಾರೆ.”

-ಪಂಜು ಗಂಗೊಳ್ಳಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

15 mins ago

ಓದುಗರ ಪತ್ರ:  RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…

25 mins ago

ಓದುಗರ ಪತ್ರ:  ಮೈಸೂರಿನಲ್ಲಿ ಡಾಗ್ ಪಾರ್ಕ್ ಸ್ಥಾಪಿಸಿ

ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…

1 hour ago

ಚಲನಚಿತ್ರ: ಗಲ್ಲಾ ಪೆಟ್ಟಿಗೆ ಗಳಿಕೆ, ಬಾಡಿಗೆ, ಬಡ್ಡಿ, ಉಳಿಕೆ ಇತ್ಯಾದಿ

ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…

1 hour ago

ಇತಿಹಾಸದ ಪುಟ ಸೇರಿದ ಐತಿಹಾಸಿಕ ಸೇತುವೆ

ಲಕ್ಷ್ಮಿಕಾಂತ್ ಕೊಮಾರಪ್ಪ ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆ ತೆರವು; ನೂತನ ಸೇತುವೆ ನಿರ್ಮಾಣ ಕಾರ್ಯ ಶುರು ಸೋಮವಾರಪೇಟೆ: ಮಡಿಕೇರಿ- ಹಾಸನ…

4 hours ago

ಶ್ರೀರಂಗಪಟ್ಟಣದಲ್ಲಿ ರಾಜಕಾಲುವೆಗೆ ಹರಿಯುತ್ತಿದೆ ತ್ಯಾಜ್ಯ ನೀರು

ಕಾಲುವೆಗೆ ಸೇರುತ್ತಿದೆ ಕಲ್ಯಾಣ ಮಂಟಪಗಳ ತ್ಯಾಜ್ಯ ರಾಸಾಯನಿಕ ನೀರಿನಿಂದ ಬೆಳೆ ಹಾಳು, ಜಾನುವಾರು ಸಾವು ಈಗಲಾದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು…

4 hours ago