panjugangilli article atchayam trust naveen kumar andolana
ಡಕಲು ಶರೀರ, ಕೊಳಕಾದ ಹರಿದ ಬಟ್ಟೆ, ನೀರು, ಸಾಬೂನು ಕಾಣದ ಕೆದರಿದ ತಲೆಗೂದಲು. ಸೊಟ್ಟಗಾದ ಕೈಕಾಲು. ಇಂತಹವರ‍್ಯಾರಾದರು ಎದುರು ಬಂದು ತಮ್ಮ ಕೈ ಚಾಚಿದಾಗ ಜನ ಸಾಮಾನ್ಯವಾಗಿ ಅವರ ಕೈ ಮೇಲೆ ಏನಾದರೂ ನಾಣ್ಯವೋ, ತಿಂಡಿಯೋ ಹಾಕುತ್ತಾರೆ. ಮತ್ತೆ ಕೆಲವರು ‘ಆಚೆ ಹೋಗು’ ಅಂತ ಕೈಸನ್ನೆ ಮಾಡಿ ದೂರ ಮಾಡುತ್ತಾರೆ. ಹೀಗೆ ಬೇಡುವವರು ದೈಹಿಕವಾಗಿ ಎಲ್ಲವೂ ಸರಿಯಾಗಿದ್ದುದಕಾಣಿಸಿದರೆ, ‘ನಿನ್ನ ಕೈಕಾಲು ಸರಿಯಾಗಿದೆ, ಭಿಕ್ಷೆ ಏಕೆ ಬೇಡ್ತೀಯಾ? ಏನಾದರೂಕೆಲಸ ಮಾಡಬಾರದೇಕೆ?’ ಎಂದು ಗದರಿಸುತ್ತಾರೆ. ಆದರೆ, ನವೀನ್ ಕುಮಾರ್‌ಗೆ ಇಂತಹ ಯಾರಾದರೂ ಭಿಕ್ಷುಕರು ಕಾಣಿಸಿದರೆ ಅವರು ಆತ/ಆಕೆ ತನ್ನ ಹತ್ತಿರ ಬರುವ ತನಕ ಕಾಯದೆ ತಾನೇ ಆತನ/ಆಕೆಯ ಬಳಿ ಹೋಗುತ್ತಾರೆ. ಆದರೆ, ಹಾಗೆ ಹೋದವರು ಆತನಿಗೆ/ಆಕೆಗೆ ಹಣ, ತಿಂಡಿ ಏನನ್ನೂ ಕೊಡುವುದಿಲ್ಲ. ಬದಲಿಗೆ, ಅವರಿಗೊಂದು ಗೌರವಯುತ ಬದುಕನ್ನು ಕೊಡುತ್ತಾರೆ.
ನವೀನ್ ಕುಮಾರ್ ಇಂತಹವರನ್ನು ‘ಭಿಕ್ಷುಕರು’ ಎಂದು ಕರೆಯದೆ, ‘ನಿರ್ಗತಿಕರು’ ಎಂಬ ಪದವನ್ನು ಬಳಸುತ್ತಾರೆ. ನವೀನ್ ಕುಮಾರ್ ಮತ್ತು ಅವರ ೪೦೦ ಜನರಿರುವ ಸ್ವಯಂಸೇವಕರ ತಂಡ ಕಳೆದ ಹನ್ನೊಂದು ವರ್ಷಗಳಲ್ಲಿ ಇಂತಹ ೧೩,೦೦೦ ಭಿಕ್ಷುಕರಿಗೆ ಕೌನ್ಸಿಲಿಂಗ್ ಮಾಡಿ, ಅವರಲ್ಲಿ ಕನಿಷ್ಠ ವೆಂದರೆ ೧,೫೦೦ಕ್ಕೂ ಹೆಚ್ಚು ಭಿಕ್ಷುಕರಿಗೆ ಸ್ವಾವಲಂಬಿ ಬದುಕನ್ನು ನೀಡಿದ್ದಾರೆ.
ನವೀನ್ ಕುಮಾರ್ ಸ್ವತಃ ಬಡತನವನ್ನು ಅನುಭವಿಸಿದವರು. ಪೋಲಿಯೋ ಪೀಡಿತ ಅಂಗವಿಕಲ ತಂದೆ. ರ‍್ಹಿಮಾಟಾಯ್ಡ್ ಆರ್ಥರೈಟಿಸ್‌ನಿಂದ ಬಳಲುವ ತಾಯಿ. ಕುಟುಂಬ ನಿರ್ವಹಣೆಗೆ ಸರಿಯಾದ ಆದಾಯವಿರಲಿಲ್ಲ. ಹಾಗಾಗಿ ಅವರು ತನ್ನ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸಲು ನೆಲ ಒರೆಸುವುದು, ಕೊಟ್ಟಿಗೆಗಳಲ್ಲಿ ಸೆಗಣಿ ಬಾಚುವುದು ಮೊದಲಾದ ಕೆಲಸಗಳನ್ನು ಮಾಡಿದ್ದರು. ಎಷ್ಟೋ ಬಾರಿ ಹಸಿದ ಹೊಟ್ಟೆಯಲ್ಲಿ ಮಲಗಿದ್ದರು. ಎಷ್ಟೇ ಕಷ್ಟ ಎದುರಾದರೂ ನವೀನ್ ತನ್ನ ವಿದ್ಯಾಭ್ಯಾಸವನ್ನು ಬಹಳ ಜತನದಿಂದ ನಿಭಾಯಿಸಿ, ೨೦೧೪ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿ, ಕಾಲೇಜಿನಿಂದ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿಯನ್ನು ಪಡೆದರು. ತನ್ನ ಬಡತನದ ನಡುವೆಯೂ ಅವರು ಭಿಕ್ಷುಕರ ಬಗ್ಗೆ ಕಾಳಜಿ ಹೊಂದಿದ್ದರು. ೧೯ ವರ್ಷದವರಾಗಿದ್ದಾಗ ಸೇಲಂನಲ್ಲಿ ‘ಗೇಟ್’ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಗ ಚಹ ಬಿಡುವಿನ ಸಮಯದಲ್ಲಿ ಹೊರಗೆ ಬಂದಾಗ ಅಕ್ಕಪಕ್ಕದಲ್ಲಿ ಭಿಕ್ಷುಕರು ಕಂಡು ಬಂದರೆ ತನ್ನ ಆಹಾರವನ್ನೆಲ್ಲ ಅವರಿಗೆ ಕೊಟ್ಟು ತಾನು ಹಸಿದಿರುತ್ತಿದ್ದರು.
ಈ ನಡುವೆ ಅವರಿಗೆ ಸೇಲಂ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಜಶೇಖರ್ ಮತ್ತು ಈರೋಡ್‌ನ ಒಂದು ಶಿವ ಮಂದಿರದ ಬಳಿ ಭಿಕ್ಷೆ ಬೇಡುತ್ತಿದ್ದ ಕಾಳಿಯಪ್ಪನ್ ಎಂಬ ಇಬ್ಬರು ಭಿಕ್ಷುಕರ ಪರಿಚಯವಾಯಿತು. ರಾಜಶೇಖರ್ ಒಂದು ಅಪಘಾತದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದರು. ಅವರ ಬಳಿ ಯಾವುದೇ ಗುರುತಿನ ಕಾರ್ಡ್ ಇರದಿದ್ದ ಕಾರಣ ಅವರಿಗೆ ಎಲ್ಲಿಯೂ ಕೆಲಸ ಪಡೆಯಲು ಸಾಧ್ಯವಾಗದೆ ಜೀವನ ನಿರ್ವಹಣೆಗೆ ಭಿಕ್ಷಾಟನೆಗೆ ಇಳಿದು, ಡ್ರಗ್ ವ್ಯಸನಿಯಾದರು. ನವೀನ್ ಕುಮಾರ್ ರಾಜಶೇಖರ್‌ಗಾಗಿ ಕೆಲಸದ ಹುಡುಕಾಟಕ್ಕೆ ಮುಂದಾದರು. ಆದರೆ, ರಾಜಶೇಖರ್‌ಗೆ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ಎಲ್ಲಿಯೂ ಕೆಲಸ ಸಿಗಲಿಲ್ಲ. ಆದರೂ ನವೀನ್ ತಮ್ಮ ಪ್ರಯತ್ನ ಮುಂದುವರಿಸಿ, ಕೊನೆಗೂ ಆತನಿಗೆ ಒಂದು ವಾಚ್‌ಮ್ಯಾನ್ ಕೆಲಸ ಕೊಡಿಸುವಲ್ಲಿ ಯಶಸ್ವಿಯಾದರು. ಕಾಳಿಯಪ್ಪನ್ ಪರಿಸ್ಥಿತಿ ಕೂಡ ಹೆಚ್ಚೂ ಕಡಿಮೆ ರಾಜಶೇಖರಂತೆಯೇ ಇತ್ತು. ಅವರೂ ನಿರ್ಗತಿಕರಾಗಿ ರಸ್ತೆಗೆ ಹಾಕಲ್ಪಟ್ಟು ಹೊಟ್ಟೆಪಾಡಿಗೆ ಭಿಕ್ಷಾಟನೆಗೆ ಇಳಿದಿದ್ದರು.
ನವೀನ್ ಕುಮಾರ್ ಭಿಕ್ಷುಕರ ಬದುಕನ್ನು ಸ್ವತಃ ಅನುಭವಿಸಿ ತಿಳಿದುಕೊಳ್ಳುವ ಸಲುವಾಗಿ ಮೂರು ದಿನಗಳ ಕಾಲ ಸೇಲಂ ಬಸ್ ನಿಲ್ದಾಣದ ರಸ್ತೆಯಲ್ಲಿ ಬದುಕಿದ್ದರು. ಆ ಅನುಭವ ಅವರಿಗೆ ಭಿಕ್ಷುಕರ ಬದುಕನ್ನು ಚೆನ್ನಾಗಿ ಮನದಟ್ಟು ಮಾಡಿಸಿತು. ಅದರ ನಂತರ ನವೀನ್ ಕುಮಾರ್ ತಮ್ಮ ಕೆಲವು ಸ್ನೇಹಿತರು, ಸಮಾನ ಮನಸ್ಕರನ್ನು ಸೇರಿಸಿಕೊಂಡು ‘ಅಕ್ಷಯ ಪಾತ್ರ’ ಮಾದರಿಯಲ್ಲಿ ‘ಅಚಯಮ್ ಟ್ರಸ್ಟ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದರು. ನವೀನ್ ಮತ್ತು ಅವರ ಸ್ನೇಹಿತರು ರಸ್ತೆಗಳಲ್ಲಿರುವ ಭಿಕ್ಷುಕರು, ಅಂಗವಿಕಲರು, ಬುದ್ಧಿಮಾಂದ್ಯರು, ರೋಗಿಗಳು, ಹಿರಿಯ ನಾಗರಿಕರು, ನಿರಾಶ್ರಿತರು ಮೊದಲಾದವರನ್ನು ಮಾತನಾಡಿಸಿ, ಅವರು ರಸ್ತೆಗೆ ಬೀಳಲು ಕಾರಣವಾದ ಹಿನ್ನೆಲೆಗಳನ್ನು ತಿಳಿದುಕೊಂಡು ಅವರ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ವಿಮರ್ಶಿಸಿ, ಅಗತ್ಯಾನುಸಾರ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದರು. ತಮ್ಮ ಮನೆ, ಕುಟುಂಬಗಳಿಂದ ಹೊರ ಬಿದ್ದವರ ಸಂಬಂಽಕರನ್ನು ಪತ್ತೆ ಹಚ್ಚಿ,ಸಾಧ್ಯವಾದ ಪರಿಸ್ಥಿತಿಗಳಲ್ಲಿ ಅವರವರ ಮನೆಗಳಿಗೆ ವಾಪಸ್ ಆಗುವಂತೆ ಮಾಡಿದರು. ಉಳಿದವರನ್ನು ತಾವು ‘ಅಚಯಮ್ ಟ್ರಸ್ಟ್’ನಡಿ ಶುರು ಮಾಡಿದ ಆಶ್ರಮಕ್ಕೆ ಸೇರಿಸಿದರು.
ಅಚಯಮ್ ಟ್ರಸ್ಟಿನಲ್ಲಿ ಅವರನ್ನು ಸ್ವಚ್ಛಗೊಳಿಸಿ, ಹೊಸ ಬಟ್ಟೆ ಹಾಕಿಸಿ, ವೈದ್ಯಕೀಯ ಉಪಚಾರ ಕೊಟ್ಟು, ಮೂಲಭೂತ ಜೀವನಾವಶ್ಯಕ ಆರೈಕೆಗಳನ್ನು ಒದಗಿಸಿದರು. ಒಮ್ಮೆ ಭಿಕ್ಷುಕರು ಸಾಮಾನ್ಯ ಬದುಕಿನ ಕ್ರಮಕ್ಕೆ ಮರಳಿದ ಮೇಲೆ ಮುಂದಿನ ಸವಾಲಿನ ಕೆಲಸವೆಂದರೆ ಅವರಿಗೆ ಉದ್ಯೋಗ ಕೊಡಿಸುವುದು. ಅದಕ್ಕಾಗಿ ನವೀನ್ ಕುಮಾರ್ ಭಿಕ್ಷುಕರನ್ನು ಕೌಶಲ ಪರೀಕ್ಷೆಗೆ ಒಳಪಡಿಸುತ್ತಾರೆ. ಅವರ ಕೌಶಲಕ್ಕನುಸಾರವಾಗಿ ಊದು ಬತ್ತಿ ತಯಾರಿಕೆ, ಪೇಪರ್ ಪ್ಲೇಟ್ ತಯಾರಿಕೆ, ಗಿಡಗಳ ನರ್ಸರಿ, ಅಡುಗೆ ಸಹಾಯಕರು, ಸೆಕ್ಯುರಿಟಿ ಗಾರ್ಡ್, ಗಾರ್ಡನಿಂಗ್, ಹೋಟೆಲ್ ಸರ್ವೀಸ್ ಮೊದಲಾದಉದ್ಯೋಗಗಳನ್ನು ಕೊಡಿಸುತ್ತಾರೆ. ೯೨ ವರ್ಷ ಪ್ರಾಯದ ರತ್ನಮ್ಮಾಳ್ ವಯಸ್ಸಿನ ಕಾರಣಕ್ಕೆ ಕುರುಡಳಾಗುತ್ತಿದ್ದಂತೆ ಆಕೆಯ ಮಕ್ಕಳು ಮನೆಯಿಂದ ಹೊರ ಹಾಕಿದರು. ಅದರಿಂದ ಮಾನಸಿಕವಾಗಿ ಜರ್ಝರಿತಳಾದ ಆಕೆ ಕೆರೆಗೆ ಹಾರಿ ಸಾಯಲು ಹೊರಟಾಗ, ಪೊಲೀಸರು ಅವರನ್ನು ರಕ್ಷಿಸಿ, ಅಚಯಮ್ ಟ್ರಸ್ಟ್‌ಗೆ ಸೇರಿದರು. ನವೀನ್ ಕುಮಾರ್‌ರ ತಂಡದ ಆರೈಕೆಯಲ್ಲಿ ಅವರು ಹೊಸ ಬದುಕನ್ನು ಪಡೆದರು.
ಭಿಕ್ಷುಕರ ಪುನರ್ವಸತಿ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಸಲುವಾಗಿ ನವೀನ್ ಕುಮಾರ್, ಬೇರೆ ಹಲವು ಉದ್ಯೋಗಗಳ ಕರೆ ಬಂದರೂ ಅವುಗಳನ್ನೆಲ್ಲಾ ನಿರಾಕರಿಸಿ ಒಂದು ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡತೊಡಗಿದರು. ಕಾಲೇಜಿನ ಕೆಲಸ ಮುಗಿಸಿ, ರಾತ್ರಿ ೧೧ ಗಂಟೆಯ ನಂತರ ಟ್ರಸ್ಟಿನ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷಗಳ ಕಾಲ ಯಾರಿಂದಲೂ ದೇಣಿಗೆ ಪಡೆಯದೆ ಕೇವಲ ತಮ್ಮ ಫ್ರೊಫೆಸರ್ ಉದ್ಯೋಗದಲ್ಲಿ ಸಿಗುವ ಸಂಬಳದಲ್ಲಿ ಅಚಯಮ್ ಟ್ರಸ್ಟನ್ನು ನಡೆಸಿದರು. ಆದರೆ, ದಿನ ಕಳೆದಂತೆ ಪುನರ್ವಸತಿಗಾಗಿ ತರುವ ಭಿಕ್ಷುಕರ ಸಂಖ್ಯೆ ಹೆಚ್ಚಿದಂತೆ, ಸಂಸ್ಥೆಯನ್ನು ವಿಸ್ತರಿಸಬೇಕಾಗಿ ಬಂದಿತು. ಆದರೆ, ಆ ಉದ್ದೇಶಕ್ಕೆ ತಮ್ಮ ಪ್ರೊಫೆಸರ್ ಹುದ್ದೆಯ ಸಂಬಳ ಸಾಲದಾದಾಗ ಅವರು ಜನರಲ್ಲಿ ದೇಣಿಗೆ ಕೇಳಲು ಶುರು ಮಾಡಿದರು. ಕೆಲವರು ತಮ್ಮ ಶಕ್ತ್ಯಾನುಸಾರ ಸಹಾಯ ಮಾಡಿದರೂ, ಅವರನ್ನು ‘ವಿದ್ಯಾವಂತ ಭಿಕ್ಷುಕ’ ಎಂದು ಗೇಲಿ ಮಾಡಿದವರೇ ಹೆಚ್ಚು. ಆದರೂ, ಅದರಿಂದ ಧೃತಿಗೆಡದ ನವೀನ್ ಕುಮಾರ್, ಕ್ರೌಡ್ ಫಂಡಿಂಗ್ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿ, ಅದರಲ್ಲಿ ಯಶಸ್ವಿಯಾದರು.
ಭಿಕ್ಷುಕರಿಗೆ ಆಹಾರ, ಬಟ್ಟೆ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಕೊಡಿ, ಆದರೆ ಹಣ ಕೊಡಬೇಡಿ. ಅದರಿಂದ ಅವರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಾರೆ ಎಂದು ಸ್ವತಃ ನವೀನ್ ಕುಮಾರ್ ಹೇಳುತ್ತಾರೆ. ಕೈಕಾಲು ಸರಿಯಿದ್ದರೂ ಅಂಗವಿಕಲ ಭಿಕ್ಷುಕರಂತೆ ನಟಿಸಿ, ಜನರನ್ನು ವಂಚಿಸುವವರ ಬಗ್ಗೆಯೂ ಅವರು ಎಚ್ಚರಿಸುತ್ತಾರೆ. ಸ್ವತಃ ನವೀನ್ ಕುಮಾರ್ ಹಲವು ಬಾರಿ ಅಂತಹ ವಂಚನೆಗೆ ಒಳಗಾಗಿದ್ದರು. ಭಿಕ್ಷುಕರನ್ನು ಬೇಡುವುದರಿಂದ ವಿಮುಖಗೊಳಿಸುವುದು ಸುಲಭದ ಕೆಲಸವೂ ಅಲ್ಲ. ಕೆಲವರು ಮಾತನಾಡಿಸಲು ಅಥವಾ ಸಮೀಪಿಸಲು ಪ್ರಯತ್ನಿಸಿದಾಗ ಸುಲಭದಲ್ಲಿ ಒಪ್ಪುವುದಿಲ್ಲ. ಕೆಲವೊಮ್ಮೆ ವ್ಯಗ್ರರಾಗಿ ದಾಳಿ ಮಾಡುವುದೂ ಇದೆ. ಇಷ್ಟೆಲ್ಲವನ್ನೂ ಮೀರಿ ನವೀನ್ ಮತ್ತು ಅವರ ತಂಡ ಇಷ್ಟು ದೊಡ್ಡ ಸಂಖ್ಯೆಯ ಭಿಕ್ಷುಕರಿಗೆ ಒಂದು ಗೌರವಯುತ ಬದುಕನ್ನು ನೀಡಿರುವುದು ಅವರ ಬದ್ಧತೆ ಏನೆಂಬುದನ್ನು ತಿಳಿಸುತ್ತದೆ. ಹಾಗೆಯೇ, ಬೇಡುವುದು ಬಿಟ್ಟು ಸಾಮಾನ್ಯ ಜೀವನಕ್ಕೆ ಮರಳಿದ ಭಿಕ್ಷುಕರಲ್ಲಿ ಅನೇಕರು ಭಿಕ್ಷಾಟನೆಗೆ ಮರಳುವುದೂ ಇದೆ. ಹಾಗಾಗದಂತೆ ನೋಡಿಕೊಳ್ಳುವುದೂ ಇನ್ನೊಂದು ಸವಾಲಿನ ಕೆಲಸ.
ಅವರು ಮತ್ತು ಅವರ ತಂಡ ಪ್ರತೀ ಭಾನುವಾರ ಭಿಕ್ಷುಕರಿಗಾಗಿ ರಸ್ತೆಗಿಳಿಯುತ್ತದೆ. ಪ್ರತೀ ದಿನ ಅವರಿಗೆ ಸುಮಾರು ೨೦ ಫೋನ್ ಕರೆಗಳು ಬರುತ್ತವೆ. ನವೀನ್ ಕುಮಾರ್ ಈಗ ಪ್ರೊಫೆಸರ್ ಕೆಲಸವನ್ನೂ ಬಿಟ್ಟು ಅಚಯಮ್ ಟ್ರಸ್ಟ್‌ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಅಚಯಮ್ ಈಗ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಐದು ಆಶ್ರಮಗಳನ್ನು ನಡೆಸುತ್ತಿದೆ. ಅದರ ಕಾರ್ಯವ್ಯಾಪ್ತಿ ಈರೋಡ್ ಅಲ್ಲದೆ, ನಮಕ್ಕಳ್, ತಿರುಪ್ಪುರ್, ಕರೂರ್ ಮತ್ತು ಸೇಲಂಗಳಿಗೂ ವ್ಯಾಪಿಸಿದೆ. ಕೇಂದ್ರಸರ್ಕಾರದ ನ್ಯಾಷನಲ್ ಯೂತ್ ಅವಾರ್ಡ್, ತಮಿಳುನಾಡು ಚೀ- ಮಿನಿಸ್ಟರ್ ಯೂತ್ ಅವಾರ್ಡ್ ಮೊದಲಾಗಿ ಎಂಬತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
” ನವೀನ್ ಕುಮಾರ್ ಭಿಕ್ಷುಕರ ಬದುಕನ್ನು ಸ್ವತಃ ಅನುಭವಿಸಿ ತಿಳಿದುಕೊಳ್ಳುವ ಸಲುವಾಗಿ ಮೂರು ದಿನಗಳ ಕಾಲ ಸೇಲಂ ಬಸ್ ನಿಲ್ದಾಣದ ರಸ್ತೆಯಲ್ಲಿ ಬದುಕಿದ್ದರು. ಆ ಅನುಭವ ಅವರಿಗೆ ಭಿಕ್ಷುಕರ ಬದುಕನ್ನು ಚೆನ್ನಾಗಿ ಮನದಟ್ಟು ಮಾಡಿಸಿತು. ಅದರ ನಂತರ ನವೀನ್ ಕುಮಾರ್ ತಮ್ಮ ಕೆಲವು ಸ್ನೇಹಿತರು, ಸಮಾನ ಮನಸ್ಕರನ್ನು ಸೇರಿಸಿಕೊಂಡು ‘ಅಕ್ಷಯ ಪಾತ್ರ’ ಮಾದರಿಯಲ್ಲಿ ‘ಅಚಯಮ್ ಟ್ರಸ್ಟ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದರು.”
– ಪಂಜು ಗಂಗೊಳ್ಳಿ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…