ರಾಷ್ಟ್ರೀಯ ಅಭಿವೃದ್ಧಿಯ ಒಂದು ಕಾರ್ಯಸೂಚಿ

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ನಿರ್ದೇಶಕರು

ನಾವು ಹೆಚ್ಚು ಅಪಾಯಕ್ಕೊಳಗಾಗುತ್ತಿರುವ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಹಳೆಯ ಅಧಿಕಾರ ಸಂರಚನೆಗಳು ಶಿಥಿಲವಾಗುತ್ತಿವೆ. ಹೊಸ ಸಂರಚನೆಗಳು ಉದಯಿಸುತ್ತಿವೆ. ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ದೇಶಗಳು ಮುಗಿಬೀಳುತ್ತಿವೆ. ಈ ಹೊಸ ಜಾಗತಿಕ ಆಟದಲ್ಲಿ ಬೃಹತ್ ಜನಸಂಖ್ಯೆಯನ್ನು ಹೊಂದಿರುವ ಭಾರತ ಅನಿವಾರ್ಯವಾಗಿ ಮಹತ್ತರವಾದ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಕಳೆದ ಹಲವು ದಿನಗಳಿಂದ ದೆಹಲಿ ಭೇಟಿ ನೀಡುತ್ತಿರುವ ವಿದೇಶಿ ಗಣ್ಯರ ಸಂಖ್ಯೆ ಹೆಚ್ಚಾಗುತ್ತಿರುವುದೇ ಸಾಕ್ಷಿ. ಇಂತಹ ಪ್ರಕ್ಷುಬ್ಧ ಬಾಹ್ಯ ವಾತಾವರಣದಲ್ಲಿ ರಾಷ್ಟ್ರೀಯ ಐಕ್ಯತೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಬಾಹ್ಯ ಶಕ್ತಿಗಳು ಅಂತರಿಕವಾಗಿ ವಿಘಟನೆಯನ್ನುಂಟುಮಾಡಲು ಹಾತೊರೆಯುತ್ತಿರುತ್ತವೆ. ದುರದೃಷ್ಟವಶಾತ್, ಭಾರತದಲ್ಲಿ ಇಂದು ಕಾಣುತ್ತಿರುವ ಜಾತಿ, ಧರ್ಮ ಮತ್ತು ಭಾಷೆ ಆಧಾರಿತ ಆಂತರಿಕ ವಿಭಜನೆಗಳು ದಿನೇ ದಿನೇ ಮತ್ತಷ್ಟು ಗಟ್ಟಿಯಾಗುತ್ತಿವೆ.

ಒಂದು ರೀತಿಯಲ್ಲಿ ಈ ಒಡಕುಗಳಿಗೆ ಮತ್ತು ಅನೈಕ್ಯತೆಗಳಿಗೆ ಆರ್ಥಿಕ ಕಾರಣಗಳೇ ಮೂಲ ಎನ್ನಬಹುದು. ಒಟ್ಟಾರೆ ಆರ್ಥಿಕತೆ ನಿರೀಕ್ಷಿತ ವೇಗದಲ್ಲಿ ಬೆಳವಣಿಗೆಯಾಗುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಜೆಪಿ ಮಾರ್ಗನ್ ಸಮೀಕ್ಷೆಯ ಅನುಸಾರ ಭಾರತದ ನೈಜ ಜಿಡಿಪಿ ಇನ್ನೂ ಶೇ ೬-೭ರಷ್ಟಿದ್ದು ಕೋವಿದ್ ಪೂರ್ವದ ಮಟ್ಟದಲ್ಲೇ ಮುಂದುವರೆದಿದೆ. ಉದ್ಯೋಗಾವಕಾಶಗಳ ಕೊರತೆ ಹೆಚ್ಚಾಗಿದೆ. ಮತ್ತೊಂದೆಡೆ ಪ್ರತಿಯೊಬ್ಬ ನಾಯಕನೂ ಸಹ ತನ್ನ ಸಮುದಾಯಕ್ಕೆ ನೆರವಾಗುವ ರೀತಿಯಲ್ಲಿ ಅಭಿವೃದ್ಧಿಯ ಫಲಗಳನ್ನು ಬಾಚಿಕೊಳ್ಳುವ ಧಾವಂತದಲ್ಲಿ ಎಲ್ಲವೂ ಶೂನ್ಯ ಪರಿಣಾಮವನ್ನು ಬೀರುತ್ತಿವೆ. ವಿವಿಧ ರಾಜ್ಯಗಳಲ್ಲಿ ಉದ್ಯೋಗ ಮೀಸಲಾತಿಯು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯರ ಪಾಲಾಗುತ್ತಿರುವುದು ಇದನ್ನೇ ಸೂಚಿಸುತ್ತದೆ. ಆಳುವ ಪಕ್ಷಗಳ ಪ್ರತಿನಿಧಿಗಳು ತಮ್ಮ ಆರ್ಥಿಕ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಅಸ್ಮಿತೆಯ ವಿಚಾರಗಳನ್ನು ಮುನ್ನೆಲೆಗೆ ತಂದು ಜನಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯುವುದರಲ್ಲಿ ನಿಷ್ಣಾತರಾಗಿದ್ದಾರೆ.

ಬಾಹ್ಯ ಸವಾಲುಗಳನ್ನು ಎದುರಿಸಲು ದೇಶವು ಪುನಃ ಐಕ್ಯತೆಯನ್ನು ಸಾಧಿಸುವುದಾದರೂ ಹೇಗೆ ? ವ್ಯಕ್ತಿಗತ ಹಕ್ಕುಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ ಸಂವಿಧಾನದ ಮೂಲಕ ಮತ್ತು ಸರ್ಕಾರಗಳ ಮೇಲೆ ಸಾಂವಿಧಾನಿಕ ಸಾಂಸ್ಥಿಕ ನಿಯಂತ್ರಣಗಳನ್ನು ಹೆಚ್ಚಿಸುವ ಮೂಲಕ ಇದನ್ನು ಸಾಧಿಸಬಹುದು ಎಂದು ಉದಾರವಾದಿ ಚಿಂತಕರು ಅಭಿಪ್ರಾಯಪಡುತ್ತಾರೆ. ಇದು ನಮ್ಮೆದುರಿನ ಸವಾಲಿಗೆ ಭಾಗಶಃ ಉತ್ತರ ನೀಡುತ್ತದೆ. ಆದರೆ ಚಾರಿತ್ರಿಕ ಪ್ರಮಾದಗಳನ್ನು ಸರಿಪಡಿಸುವ ಭಾವನಾತ್ಮಕ ವಿಚಾರಗಳನ್ನು ಬೀದಿಗೆ ತಂದು ಜನರನ್ನು ಕ್ರೋಢೀಕರಿಸುವ ನಾಯಕತ್ವವನ್ನು ಸಮರ್ಪಕವಾಗಿ ಎದುರಿಸಲು ಸಂವಿಧಾನ ನಿಷ್ಠೆಯೊಂದೇ ಸಾಲುವುದಿಲ್ಲ. ನಮಗೆ ಇನ್ನೂ ಬಲವಾದ ರಾಷ್ಟ್ರೀಯ ಮರು ಐಕ್ಯತೆಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಈ ಕಾರ್ಯಕ್ರಮಗಳ ಮೂಲಕ ಜನರನ್ನು ಕಾರ್ಯಪ್ರವೃತ್ತರನ್ನಾಗಿಸಿ, ಸಾಮಾನ್ಯ ಜನರನ್ನು ಅಸ್ಮಿತೆ ಕೇಂದ್ರಿತ ರಾಜಕಾರಣದಿಂದ ದೂರ ಸೆಳೆಯಬೇಕಾಗಿದೆ.

ಭಾರತದಲ್ಲಿ ರಾಷ್ಟ್ರೀಯತೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಸಮನ್ವಯದ ಶಕ್ತಿಗಳಿವೆ. ದುರದೃಷ್ಟವಶಾತ್ ವಿಶಾಲ ಭಾರತದ ಚರಿತ್ರೆಯಲ್ಲಿ ತನ್ನ ಆಧಾರವನ್ನು ಕಂಡುಕೊಳ್ಳಲೆತ್ನಿಸುವ ರಾಷ್ಟ್ರೀಯವಾದವು ಯಾರ ಚರಿತ್ರೆ ಎಂಬ ವಿಭಾಜಕ ಪ್ರಶ್ನೆಗೆ ಸಹಜವಾಗಿಯೇ ಎದುರಾಗಬೇಕಾಗುತ್ತದೆ. ಇದರ ಬದಲು ನಾವು ಆರ್ಥಿಕ ಸಾಧನೆಗಳ ಸುತ್ತ ರಾಷ್ಟ್ರದ ಹೆಮ್ಮೆಯನ್ನು ರೂಪಿಸಬಹುದು. ಪ್ರಸ್ತುತ ಜಾಗತಿಕ ವಾತಾವರಣದಲ್ಲಿ ಆರ್ಥಿಕ ಸಾಮರ್ಥ್ಯ ಮತ್ತು ಬಲ ಹೊಂದಿರುವುದು ಅನುಕೂಲಕರವಷ್ಟೇ ಅಲ್ಲದೆ ಅತ್ಯವಶ್ಯವೂ ಆಗಿದೆ. ನಮ್ಮ ಆರ್ಥಿಕತೆ ಬಲಿಷ್ಟವಾಗಿದ್ದಷ್ಟೂ ಸ್ವಯಂ ರಕ್ಷಣೆಗಾಗಿ ನಾವು ಹೆಚ್ಚು ಖರ್ಚು ಮಾಡಲು ಸಾಧ್ಯ. ಹೆಚ್ಚಿನ ಸಂಖ್ಯೆಯ ದೇಶಗಳು ನಮ್ಮ ಸ್ನೇಹ ಬಯಸುತ್ತವೆ. ಆರ್ಥಿಕ ಪ್ರಗತಿಯ ಮೂಲಕ ನಾವು ನಮ್ಮೊಳಗಿನ ಮೃದು ಶಕ್ತಿ ಮತ್ತು ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸಬಹುದು.

ಅಷ್ಟೇ ಮುಖ್ಯವಾದ ಮತ್ತೊಂದು ಅಂಶವೆಂದರೆ ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಗಾಗಿ ಸಾಮೂಹಿಕ ಶೋಧನೆಯನ್ನು ಪ್ರಚೋದಿಸುವಂತಹ ರಾಷ್ಟ್ರೀಯ ಕಾರ್ಯಸೂಚಿಯು ಜನರೊಳಗಿನ ಉತ್ಸಾಹವನ್ನು ಹೆಚ್ಚಿಸುವುದೇ ಅಲ್ಲದೆ ಅವರನ್ನು ಹೆಚ್ಚು ಕಾರ್ಯಶೀಲರನ್ನಾಗಿ ಮಾಡುತ್ತದೆ. ತಮ್ಮ ದ ‘ಪ್ಯಾಷನ್ ಅಂಡ್ ದ ಇಂಟರೆಸ್ಟ್ಸ್’ ಕೃತಿಯಲ್ಲಿ ಆಲ್ಬರ್ಟ್ ಹರ್ಷ್ಮನ್ ಇದನ್ನೇ ಉಲ್ಲೇಖಿಸುತ್ತಾ, ಹೇಗೆ ಯೂರೋಪ್ ಖಂಡದಲ್ಲಿ ಆರ್ಥಿಕ ಬೆಳವಣಿಗೆಯೇ ಹಿಂಸಾತ್ಮಕ ಭ್ರಾತೃಘಾತುಕ ಭಾವನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು ಮತ್ತು ಶಕ್ತಿಯುತವಾಗಿ ಬೆಳೆಯಲು ನೆರವಾಯಿತು ಎನ್ನುವುದನ್ನು ವಿಶ್ಲೇಷಿಸುತ್ತಾರೆ.

ಭಾರತದಲ್ಲೂ ಸಹ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವ ಸರ್ವವ್ಯಾಪಿಯಾದ ರಾಷ್ಟ್ರೀಯ ದೃಷ್ಟಿಕೋನದ ಅವಶ್ಯಕತೆ ಇದೆ. ಇದರಿಂದ ಭಾರತ ಮತ್ತಷ್ಟು ಶಕ್ತಿಶಾಲಿಯಾಗುತ್ತದೆ.

ಇತರರ ಮೇಲೆ ತನ್ನ ಇಚ್ಚೆಯನ್ನು ಹೇರುವುದಕ್ಕೆ ಬದಲಾಗಿ ಭಾರತದ ಸಾರ್ವಭೌಮತ್ವ, ಪ್ರಜಾಪ್ರಭುತ್ವ, ಸಾಂಸ್ಕೃತಿಕ ಮೌಲ್ಯಗಳು ಮತ್ತು ವೈವಿಧ್ಯತೆಗಳನ್ನು ಆಂತರಿಕ ಹಾಗೂ ಬಾಹ್ಯ ಶಕ್ತಿಗಳ ದಾಳಿಯಿಂದ ಎದುರಿಸಲು ಈ ದೃಷ್ಟಿಕೋನ ಅತ್ಯಗತ್ಯವಾಗಿದೆ. ಕೆಲವರ ದೃಷ್ಟಿಯಲ್ಲಿ ಆರ್ಥಿಕ ಸುಧಾರಣೆ ಅಥವಾ ಉತ್ತಮಗೊಳಿಸುವಿಕೆಯು ಸ್ವಾರ್ಥಪರ ಕೆಳಮಟ್ಟದ ಧ್ಯೇಯವಾಗಿ ಕಾಣುತ್ತದೆ. ಕೆಲವು ಹಾನಿಕಾರಕ ಕಾರಣಗಳಲ್ಲಿ ಯಾವುದೋ ಒಂದು ಉದ್ದಿಶ್ಯವನ್ನು ಕಂಡುಕೊಳ್ಳುವುದಕ್ಕೆ ಬದಲಾಗಿ ನಮ್ಮ ಯುವ ಜನತೆಯ ಮುಂದೆ ಒಂದು ಪರ್ಯಾಯವಾದ ಸ್ವಯಂ ವಾಸ್ತವೀಕರಣ ಪ್ರಕ್ರಿಯೆಯಾಗಿ ಇದು ಕಾಣುತ್ತದೆ.

ಸುಕೇತು ಮೆಹ್ತಾ ಅವರ ‘ಮ್ಯಾಕ್ಸಿಮಮ್ ಸಿಟಿ’ ಕೃತಿಯಲ್ಲಿ, ಆರ್ಥಿಕ ಪ್ರಗತಿಗಾಗಿ ಸಾಮೂಹಿಕ ಪ್ರಯತದಲ್ಲಿರುವ ಐಕ್ಯತೆಯನ್ನು ಸಾಧಿಸುವ ಸಾಮರ್ಥ್ಯದ ಬಗ್ಗೆ ಅದ್ಭುತವಾಗಿ ಹೀಗೆ ವಿಶ್ಲೇಷಣೆ ಮಾಡಲಾಗಿದೆ : ‘ಸಂಪರ್ಕ ಸಾಧಿಸುವ ಆ ಹೊತ್ತಿನಲ್ಲಿ ಅವರಿಗೆ ತಮ್ಮ ಬಳಿ ಚಾಚಲಾಗುತ್ತಿರುವ ಕೈಗಳು ಹಿಂದೂವಿನದೋ, ಮುಸಲ್ಮಾನನದೋ, ಕ್ರೈಸ್ತನದೋ, ಬ್ರಾಹ್ಮಣನದೋ ಅಥವಾ ಅಸ್ಪೃಶ್ಯನದೋ ಎಂಬ ಅರಿವು ಇರುವುದಿಲ್ಲ. ಅಥವಾ ಅವರಿಗೆ ತಾವು ಅದೇ ನಗರದಲ್ಲೇ ಹುಟ್ಟಿರುವವರೋ ಅಥವಾ ಆ ದಿನವೇ ನಗರಕ್ಕೆ ಬಂದಿರುವವರೋ ಎಂಬ ಅರಿವೂ ಇರುವುದಿಲ್ಲ. ಅವರಿಗೆ ತಿಳಿದಿರಬಹುದಾದ ಒಂದೇ ಅಂಶವೆಂದರೆ ಸಂಪದ್ಭರಿತ ನಗರವೊಂದನ್ನು ಸಂಪರ್ಕಿಸುತ್ತಿರುವುದು. ಸಹಜವಾಗಿಯೇ ಅವರು, ಬನ್ನಿ ನಾವು ಹೊಂದಾಣಿಕೆಯೊಂದಿಗೆ ಬದುಕೋಣ ಎಂದು ಹೇಳುತ್ತಾರೆ’.

ಸರ್ಕಾರದ ಘೋಷಣೆ ೨೦೨೪ರ ವೇಳೆಗೆ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತದೆ ಈ ಕಾರ್ಯಸೂಚಿಯ ಸಾಧನೆಯೆಡೆಗಿನ ಒಂದು ಹೆಜ್ಜೆಯಾಗಿತ್ತು. ಇದು ಸರಳವಾಗಿದ್ದಂತೆಯೇ ನಿರ್ದಿಷ್ಟ ವೇಳಾಪಟ್ಟಿಯನ್ನೂ ಹೊಂದಿತ್ತು. ಆದರೆ ಇಲ್ಲಿ ಒಂದು ಗಂಭೀರ ಸಮಸ್ಯೆಯೂ ಇತ್ತು. ಅದೇನೆಂದರೆ ಕೋವಿದ್ ಸಾಂಕ್ರಾಮಿಕ ಇಲ್ಲದೆ ಹೋಗಿದ್ದರೂ ಇದನ್ನು ಸಾಧಿಸುವುದು ಅಸಾಧ್ಯವಾಗಿತ್ತು. ೨೦೨೪ ಬರುತ್ತದೆ ಮತ್ತು ಹೋಗುತ್ತದೆ. ಈ ಘೋಷಣೆಯನ್ನು ನಾವು ಕೆಲವು ತಿದ್ದುಪಡಿಗಳೊಂದಿಗೆ ಮತ್ತೊಮ್ಮೆ ಹೀಗೆ ಪುನರುಚ್ಚರಿಸಬೇಕಾಗುತ್ತದೆ ; ೨೦೩೫ರ ವೇಳೆಗೆ ಎಲ್ಲರನ್ನೂ ಒಳಗೊಳ್ಳುವಂತಹ ಸುಸ್ಥಿರವಾದ ೧೦ ಟ್ರಿಲಿಯನ್ ಡಾಲರ್ ಆರ್ಥಿಕತೆ . ಇದು ಮಹತ್ವಾಕಾಂಕ್ಷೆಯ ಗುರಿಯಾಗಿದ್ದು ವಾಸ್ತವ ನೆಲೆಯಲ್ಲಿ ವಾರ್ಷಿಕ ಶೇ ೮ರ ಜಿಡಿಪಿ ಅಭಿವೃದ್ಧಿ ಅತ್ಯವಶ್ಯವಾಗಿರುತ್ತದೆ. ಆದರೆ ಇದನ್ನು ಸಾಧಿಸಲು ಸಾಧ್ಯ. ಹಾಗೆಯೇ ಈ ಘೋಷವಾಕ್ಯವು, ಉದ್ದೇಶಿತ ಗುರಿ ಸಾಧಿಸಲು ಕೆಲವು ಅವಶ್ಯಕವಾದ ಮಾನದಂಡಗಳನ್ನು ಮುಂದಿಡುತ್ತದೆ.

ಈ ಮಾನದಂಡಗಳು ಸ್ಪಷ್ಟವಾಗಿವೆ. ಎಲ್ಲರನ್ನೂ ಒಳಗೊಳ್ಳಬೇಕು ಏಕೆಂದರೆ ನಾವು ಅಲ್ಪಸಂಖ್ಯಾತರನ್ನು, ಅಂಚಿನಲ್ಲಿರುವವರನ್ನು, ಸಾಮಾಜಿಕವಾಗಿ ಅವಕಾಶವಂಚಿತ ಗುಂಪುಗಳನ್ನು ಹೊರಗಿಡಲಾಗುವುದಿಲ್ಲ. ಇಲ್ಲವಾದರೆ ಈಗಿರುವ ಸಾಮಾಜಿಕ ವಿಭಜನೆ ಮತ್ತು ಆರ್ಥಿಕ ಜಡತ್ವ ಎರಡೂ ನಿರಂತರವಾಗಿಬಿಡುತ್ತವೆ. ಸುಸ್ಥಿರತೆಯನ್ನು ಹೊಂದಿರಬೇಕು ಏಕೆಂದರೆ ನಾವು ಪರಿಸರವನ್ನು ಮತ್ತಷ್ಟು ಹಾನಿಗೊಳಿಸಲಾಗುವುದಿಲ್ಲ. ಹಾಗೊಮ್ಮೆ ಹಾನಿಗೊಳಿಸಿದರೆ ಮುಂದೊಮ್ಮೆ ಪರಿಸರವೇ ನಮ್ಮ ಮೇಲೆ ಪ್ರಳಯಾಂತಕ ಪರಿಣಾಮವನ್ನುಂಟು ಮಾಡುತ್ತದೆ.

ಹಾಗಾಗಿ ನಮ್ಮ ಗುರಿ ಮುಂದಿನ ಒಂದು ದಶಕದ ಕಾಲ ನಮ್ಮನ್ನು ಮುಂದೊಯ್ಯುವ ಬೆಳಕಾಗುತ್ತದೆ. ನಮ್ಮ ರಾಜಕಾರಣಿಗಳು ಇದನ್ನು ಪ್ರತಿಯೊಂದು ಸಂದರ್ಭದಲ್ಲೂ ಹೇಳಬೇಕಾಗುತ್ತದೆ. ತಾವು ರೂಪಿಸುವ ರಾಷ್ಟ್ರೀಯ ಆರ್ಥಿಕ ಯೋಜನೆಯು ಒಂದು ಸಾಂಸ್ಕೃತಿಕ ಮತ್ತು ರಾಜಕೀಯ ಯೋಜನೆಯೂ ಆಗಿದೆ ಎಂಬ ಜನಪ್ರಿಯ ಪ್ರತಿಮೆಯನ್ನು ಜನಸಾಮಾನ್ಯರ ನಡುವೆ ಸ್ಥಾಪಿಸುವ ಅವಶ್ಯಕತೆ ಇದೆ. ಜನಸಾಮಾನ್ಯರು ಇದನ್ನು ಒಪ್ಪಿಕೊಳ್ಳುವಂತೆ ಮಾಡುವುದೇ ಅಲ್ಲದೆ, ಇದು ಒಂದು ರಾಷ್ಟ್ರೀಯ ಭಾವಾಭಿವ್ಯಕ್ತಿಯನ್ನಾಗಿ ಮಾಡಬೇಕಿದೆ. ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದ ದಕ್ಷಿಣ ಕೊರಿಯಾ ಮೂರು ದಶಕಗಳ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಂಡಿದ್ದು ಹೀಗೆಯೇ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರಬೇಕು.

ಉದಾಹರಣೆಗೆ ತಮಿಳುನಾಡು ಸರ್ಕಾರದ ೨೦೩೦ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ. ಈ ಗುರಿಸಾಧನೆಯ ಮಾರ್ಗಗಳನ್ನು ಅನಾವರಣಗೊಳಿಸಲು ವಿಕೇಂದ್ರೀಕರಣ ನೀತಿಗಳು ನೆರವಾಗುತ್ತವೆ. ಪಂಚಾಯತ್ ಮತ್ತು ಪುರಸಭೆಯ ಹಂತದವರೆಗೆ ವಿಸ್ತರಿಸುವ ಈ ಗುರಿಯನ್ನು ಸಾಕಾರಗೊಳಿಸಲು ನಿಧಿ, ಕಾರ್ಯಾಚರಣೆ ಮತ್ತು ಕಾರ್ಯಸಿಬ್ಬಂದಿಯನ್ನು ಒದಗಿಸುವುದು ಅತ್ಯವಶ್ಯವಾಗುತ್ತದೆ.

ನೀತಿ ಆಯೋಗದಂತಹ ಸಂಸ್ಥೆಗಳು ಯೋಜನೆಗಳನ್ನು ಸಮನ್ವಯಗೊಳಿಸಿ, ಅತ್ಯುತ್ತಮ ಎನಿಸಿದ ಕಾರ್ಯಾಚರಣೆಗಳನ್ನು ಹಂಚಿಕೊಳ್ಳಲು ನೆರವಾಗಬಹುದು. ಊದ್ಯಮಶೀಲತೆ , ಸಾಮಾನ್ಯವಾಗಿ ಖಾಸಗಿ ವಲಯ, ಮುಕ್ತ ಅವಕಾಶದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಇದು ಸಬ್ಸಿಡಿಗಳ ಮೂಲಕ ಅಥವಾ ಶುಲ್ಕಗಳ ಮೂಲಕ ಅಲ್ಲ ಬದಲಾಗಿ ನಿಯಂತ್ರಣ, ನಿರ್ಬಂಧ, ಅನ್ವೇಷಣೆ ಮತ್ತು ಸ್ಪರ್ಧಾತ್ಮಕತೆಯ ಮೂಲಕ ಸಾಧಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರವೇ ಅಭಿವೃದ್ಧಿ ಸಾಕಾರಗೊಳ್ಳುತ್ತದೆ.

ಅಂತಿಮವಾಗಿ, ನಾವು ಆರ್ಥಿಕ ಪ್ರತ್ಯೇಕತಾವಾದದ ಬಗ್ಗೆ ಜಾಗ್ರತೆಯಿಂದಿರಬೇಕಾಗುತ್ತದೆ. ತೀವ್ರವಾದ ಆತ್ಮನಿರ್ಭರತೆಯಲ್ಲಿ ಅಡಕಗೊಂಡಿರುವ ಆರ್ಥಿಕ ರಕ್ಷಣಾ ನೀತಿಯಿಂದ ನಾವು ಪ್ರತ್ಯೇಕವಾಗಿಬಿಡುತ್ತೇವೆ. ಇದರಿಂದ ರಾಷ್ಟ್ರೀಯ ಭದ್ರತೆಯೂ ಅಪಾಯಕ್ಕೀಡಾಗುತ್ತದೆ, ಬೆಳವಣಿಗೆಯ ಪ್ರಮಾಣವೂ ನಿಧಾನವಾಗುತ್ತದೆ. ಇದಕ್ಕೆ ಪ್ರತಿಯಾಗಿ ನಾವು ಹಲವು ದೇಶಗಳೊಡನೆ ಆರ್ಥಿಕ ಸಂಬಂಧಗಳನ್ನು ಹೊಂದಿದ್ದರೆ ನಾವು ಹೆಚ್ಚಿನ ಒತ್ತಡಗಳಿಗೆ ಒಳಗಾಗುವುದಿಲ್ಲ ಮತ್ತು ಆ ದೇಶಗಳಿಂದ ಯಾವುದೇ ರೀತಿಯ ಅಡ್ಡಿ ಆತಂಕಗಳಿಗೊಳಗಾಗುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ನಿರಂತರ ಯೋಗಕ್ಷೇಮದಲ್ಲಿ ಹೆಚ್ಚಿನ ದೇಶಗಳು ಆಸಕ್ತಿ ವಹಿಸುವಂತಾಗುತ್ತದೆ. ಆರ್ಥಿಕತೆಯನ್ನೇ ಗುರಿಯಾಗಿರಿಸಿಕೊಂಡ ಏಕದೃಷ್ಟಿಯ ಧ್ಯೇಯದಿಂದ ನಮ್ಮ ಪ್ರಗತಿ ಸಾಧ್ಯವಾಗುವುದೇ ಅಲ್ಲದೆ ದೇಶದ ಭದ್ರತೆಯೂ ಹೆಚ್ಚಾಗುತ್ತದೆ. ಹಾಗೆಯೇ ಇದರಿಂದ ಅಪಾಯಕಾರಿಯಾದ ವಿಭಜಕ ಮತ್ತು ಸ್ವಯಂ ವಿನಾಶದ ಧೋರಣೆಗಳಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ಇದೇ ಯೋಗ್ಯವಾದ ಫಲಿತಾಂಶವೂ ಆಗುತ್ತದೆ.

(ಮೂಲ ಲಿಂಕ್ಡ್ ಇನ್ )
ಅನುವಾದ : ನಾ ದಿವಾಕರ
ಚಿತ್ರಕೃಪೆ- ರೆಡಿಫ್‌ಮೇಲ್

andolana

Recent Posts

ಹವಾಮಾನ ಏರುಪೇರಿನಿಂದಾಗಿ ಕಾಳುಮೆಣಸಿಗೂ ಕಂಟಕ

ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್‌ ಡಿಸೋಜ ಮಡಿಕೇರಿ: ಈ ಬಾರಿಯ…

39 mins ago

ಅವಳಿ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಜೋರು

ಭೇರ್ಯ ಮಹೇಶ್‌ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…

51 mins ago

ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಸಾಂಕ್ರಾಮಿಕ ರೋಗದ ಭೀತಿ

ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…

58 mins ago

ಸರಗೂರಿನಲ್ಲಿ ಬೀದಿ ನಾಯಿಗಳ ಹಾವಳಿ : ತತ್ತರಿಸಿದ ಜನತೆ

ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…

1 hour ago

ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾದಿಂದ ದೋಣಿ ಖರೀದಿ

ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…

1 hour ago

ಓದುಗರ ಪತ್ರ | ಸೂಚನಾ ಫಲಕಗಳನ್ನು ಸರಿಪಡಿಸಿ

ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…

1 hour ago