ನವ ಶತಮಾನದ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಗುರುತಿಸಬಹುದಾದ ಒಂದು ವೈರುಧ್ಯ ಎಂದರೆ ಕಳೆದ ೨೫ ವರ್ಷಗಳಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಲೇ ಹೋಗುತ್ತಿರುವುದು ಮತ್ತು ಇದಕ್ಕೆ ಪ್ರತಿಯಾಗಿ ನ್ಯಾಯಿಕ ವ್ಯವಸ್ಥೆಯಲ್ಲಿ ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಿರುವ ಪ್ರಮಾಣ ಕಡಿಮೆಯಾಗುತ್ತಿರುವುದು.
೨೦೧೧ರಿಂದ ೨೦೨೧ರವರೆಗಿನ ಒಂದು ದಶಕದಲ್ಲಿ ದೇಶದಲ್ಲಿ ಮಹಿಳಾ ದೌರ್ಜನ್ಯಗಳು ಶೇಕಡಾ ೮೭ರಷ್ಟು ಹೆಚ್ಚಾಗಿವೆ. ೨೦೨೧ರ ಮಾಹಿತಿಗಳ ಅನುಸಾರ ತನಿಖೆಯ ಪ್ರಮಾಣ ಕೇವಲ ಶೇ. ೬೪.೯ರಷ್ಟಿದೆ. ಇವುಗಳ ಪೈಕಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ಶೇಕಡಾ ೭೨.೩ರಷ್ಟು ಪ್ರಕರಣಗಳಲ್ಲಿ . ಇನ್ನು ಶಿಕ್ಷೆಯಾಗಿರುವ ಪ್ರಮಾಣ ೨೦೨೧ರಲ್ಲಿ ಶೇಕಡಾ ೫೭ರಷ್ಟಿತ್ತು. ೨೦೨೧ರ ಮತ್ತೊಂದು ಮಾಹಿತಿಯ ಅನುಸಾರ ಮಹಿಳೆಯರ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಶೇಕಡಾ ೪೨.೪ರಷ್ಟು, ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ ೨೮.೬ರಷ್ಟು.
ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಈ ಪ್ರಕರಣಗಳು ಪರಸ್ಪರ ದೋಷಾರೋಪಣೆಯ ಭೂಮಿಕೆಯಾದರೆ ಮತ್ತೊಂದೆಡೆ ಜಾತಿ-ಮತ-ಧರ್ಮಗಳ ನೆಲೆಯಲ್ಲಿ ಪಕ್ಷಗಳ ರಾಜಕೀಯ ಸಿದ್ಧಾಂತಗಳ ಅನುಸಾರ ನೋಡಬಹುದಾದ ವಿದ್ಯಮಾನಗಳಾಗಿ ಕಾಣುತ್ತವೆ.
ಈ ದೌರ್ಜನ್ಯಗಳು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು, ಸಾಂಸ್ಕೃತಿಕ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿದ್ದರೂ ಕೂಡ ಇವೆಲ್ಲವೂ ಸಹಜವಾದ ಘಟನೆಗಳು ಎಂದು ಭಾವಿಸುವ ಸಮಾಜದ ಒಂದು ವರ್ಗವನ್ನೂ ಇಲ್ಲಿ ಕಾಣಬಹುದು. ಅಥವಾ ಈ ದೌರ್ಜನ್ಯಗಳಿಗೆ ತುತ್ತಾಗುವ ದುರ್ಬಲ ಜನರು ಅದಕ್ಕೆ ಅರ್ಹರು ಎಂದೋ , ದೌರ್ಜನ್ಯ ಎಸಗುವವರಿಗೆ ಆ ಹಕ್ಕು ಇದೆ ಎಂದೋ ಭಾವಿಸುವ ಸಮಾಜವೂ ನಮ್ಮ ನಡುವೆ ಇದೆ. ೧೯೮೪ರ ಪಂಜಾಬ್, ೨೦೦೨ರ ಗುಜರಾತ್ ಸಮಕಾಲೀನ ನಿದರ್ಶನಗಳು. ಈಗ ಅನಾವರಣವಾಗುತ್ತಿರುವ ಧರ್ಮಸ್ಥಳದ ಪ್ರಕರಣಗಳು ಮತ್ತೊಂದು ಉದಾಹರಣೆ.
ಪ್ರಗತಿ ಮತ್ತು ಪ್ರಾಚೀನತೆಯ ದ್ವಂದ್ವ ಆಧುನಿಕತೆ, ನಾಗರಿಕತೆ, ವೈಜ್ಞಾನಿಕ ಮುನ್ನಡೆ ಇತ್ಯಾದಿ ಔದಾತ್ಯಗಳನ್ನು ತನಗೆ ತಾನೇ ಆರೋಪಿಸಿಕೊಳ್ಳುವ ಸಮಾಜವೊಂದು ತನ್ನ ಪ್ರಜ್ಞೆಯನ್ನು ಇತರ ಯಾವುದೇ ಹಿತಾಸಕ್ತಿಗಳಿಗೆ ಒತ್ತೆ ಇಡದೆ ಸ್ವತಂತ್ರವಾಗಿ ಯೋಚಿಸಿದಲ್ಲಿ, ಧರ್ಮ ಅಥವಾ ಧಾರ್ಮಿಕ ಸ್ಥಳದ ಪಾವಿತ್ರ್ಯತೆಯ ರಕ್ಷಣೆಗಾಗಿ, ಅದೇ ಧರ್ಮವನ್ನು ಅನುಸರಿಸುವ, ಪ್ರತಿನಿಧಿಸುವ, ಅದೇ ಧರ್ಮದ ತತ್ವಗಳನ್ನೇ ಉಸಿರಾಡುವ ಮನುಷ್ಯ ಜೀವಗಳು -ಮಹಿಳೆಯಾಗಲಿ, ಪುರುಷರಾಗಲಿ ವ್ಯಕ್ತಿಗತ ಘನತೆ, ಬದುಕುವ ಸಾಂವಿಧಾನಿಕ ಹಕ್ಕು, ಗೌರವದಿಂದ ಜೀವನ ನಡೆಸುವ ಸಾಮಾಜಿಕ ಹಕ್ಕುಗಳನ್ನು ಕಳೆದುಕೊಂಡು, ದೌರ್ಜನ್ಯಗಳಿಗೆ ಈಡಾದಾಗ , ಆತ್ಮವಿಮರ್ಶೆಗೆ ಒಡ್ಡಿಕೊಂಡು, ಇಂತಹ ಸಾಮಾಜಿಕ ಅನಿಷ್ಟಗಳನ್ನು, ಪಿಡುಗುಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕಲ್ಲವೇ ? ಕೆಲವು ವ್ಯಕ್ತಿಗಳ ಅಪರಾಧಿಕ ಕೃತ್ಯಗಳು, ಒಂದು ನಿರ್ದಿಷ್ಟ ಸಮುದಾಯದ ಊಳಿಗಮಾನ್ಯ ಕ್ರೌರ್ಯ ಅಥವಾ ಒಂದು ಇಡೀ ಸಮಾಜದ ಅಮಾನುಷ ನಡವಳಿಕೆಗಳು ಯಾವುದೇ ಸ್ಥಾಪಿತ ಧರ್ಮಕ್ಕೆ ಅಥವಾ ಅದನ್ನು ಪ್ರತಿನಿಧಿಸುವ ಪ್ರದೇಶಗಳ ಗೌರವ-ಘನತೆಗೆ ಧಕ್ಕೆ ಉಂಟುಮಾಡುವುದಿಲ್ಲ.
ಆದರೆ ಯಾವುದೇ ಮತವನ್ನು, ಧಾರ್ಮಿಕ ಸಂಹಿತೆಗಳಿಗೊಳಪಡಿಸಿ ಸಾಂಸ್ಥೀಕರಣಕ್ಕೊಳಪಡಿಸಿದಾಗ, ಈ ಸಾಂಸ್ಥಿಕ ನೆಲೆಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಮಾಜ ಹೊರಬೇಕೇ ಹೊರತು, ಒಂದು ನಿರ್ದಿಷ್ಟ ಸಂಸ್ಥೆ ಅಥವಾ ಸಂಸ್ಥಾನವಲ್ಲ. ಸಾಂವಿಧಾನಿಕ ಆಳ್ವಿಕೆಗೊಳಪಟ್ಟಿರುವ ಪ್ರಜಾಪ್ರಭುತ್ವದಲ್ಲಿ ಈ ಜವಾಬ್ದಾರಿ ಆಯಾ ಧರ್ಮಗಳ ಅನುಯಾಯಿಗಳ ಅಥವಾ ಪೋಷಕರ ಮೇಲಿರುತ್ತದೆ. ಈ ನಿರ್ಣಾಯಕ ಹೊಣೆಗಾರಿಕೆಯನ್ನು ಅಧಿಕಾರ ರಾಜಕಾರಣಕ್ಕೆ ಅಥವಾ ಪ್ರಬಲ ಸಾಮಾಜಿಕ-ಧಾರ್ಮಿಕ ಗುಂಪುಗಳಿಗೆ ವಹಿಸಿದಾಗ ಅಲ್ಲಿ ಪ್ರಾಚೀನ ಸಮಾಜದ ಎಲ್ಲ ಅಪಸವ್ಯಗಳಿಗೂ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗೊಮ್ಮೆ ಯಾವುದೇ ಧರ್ಮ ಅಥವಾ ಮತೀಯ ಅಸ್ಮಿತೆಗಳ ಗೌರವ-ಘನತೆಗೆ ಧಕ್ಕೆ ಉಂಟಾಗುವುದೇ ಆದರೆ, ಅದು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಂದ, ಭೂ ಕಬಳಿಕೆ ಮಾಡುವವರಿಂದ, ಯಜಮಾನಿಕೆಯ ಊಳಿಗಮಾನ್ಯ ಧೋರಣೆಯನ್ನು ಅನುಸರಿಸುವವರಿಂದ, ಅನ್ಯ ಧರ್ಮಗಳ ಬಗ್ಗೆ ದ್ವೇಷ ಸಾರುವವರಿಂದ ಮತ್ತು ಸಾಂಸ್ಥೀಕರಣಗೊಂಡ ಧರ್ಮದ ಹೆಸರಿನಲ್ಲಿ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವವರಿಂದ ಆಗುತ್ತದೆ.
ವಿಶಾಲ ದೃಷ್ಟಿಕೋನವಿಲ್ಲದೆ, ತಮ್ಮ ಮತೀಯ ರಾಜಕಾರಣವನ್ನು ಬಲಪಡಿಸಲು, ಧಾರ್ಮಿಕ ಆಚರಣೆ ಮತ್ತು ಸಂಹಿತೆಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿರುವುದು ಸಾಮಾಜಿಕ ಬೇಜವಾಬ್ದಾರಿತನವಾಗುತ್ತದೆ. ಇದೇ ಪ್ರಮೇಯವನ್ನು ನಾವು ಒಂದು ಗ್ರಾಮ, ನಗರ ಮತ್ತು ಪ್ರಾದೇಶಿಕ ನೆಲೆಗಳಿಗೂ ವಿಸ್ತರಿಸಬಹುದು. ಕರ್ನಾಟಕದಲ್ಲಿ ಅತ್ಯಾಚಾರಗಳು, ಹತ್ಯೆಗಳು, ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವಂತೆಲ್ಲಾ “ಕರ್ನಾಟಕವು ಬಿಹಾರವಾಗುತ್ತಿದೆ, ಉತ್ತರ ಪ್ರದೇಶವಾಗುತ್ತಿದೆ ” ಎಂಬ ಕೂಗು ಕೇಳಿಬರುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ, ಆ ರಾಜ್ಯಗಳಲ್ಲಿ ಸಾಮಾಜಿಕ ಕ್ರೌರ್ಯ, ಸಾಂಸ್ಕ ತಿಕ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಪಳಗಿರುವ ಒಂದು ಸಮಾಜದ ಪ್ರತಿರೂಪವೇ ಕರ್ನಾಟಕದಲ್ಲೂ ಇದೆ ಎನ್ನುವುದನ್ನೂ ಗಮನಿಸಬೇಕಲ್ಲವೇ?
ಲಿಂಗ ಸೂಕ್ಷ್ಮತೆ ಮತ್ತು ಮನುಜ ಸಂವೇದನೆ: ಈ ಚಾರಿತ್ರಿಕ ಹಿನ್ನೋಟದೊಂದಿಗೆ ನಾವು ಭಾರತೀಯ ಸಮಾಜದಲ್ಲಿ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯಗಳನ್ನು, ಅತ್ಯಾಚಾರ, ಹತ್ಯೆಗಳನ್ನು ಮತ್ತು ಲೈಂಗಿಕ ದೌರ್ಜನ್ಯಗಳನ್ನು ನಿಕಷಕ್ಕೊಡ್ಡುವುದು ಅತ್ಯವಶ್ಯವಾಗಿದೆ. ಭವಾರಿದೇವಿ-ಬಿಲ್ಕಿಸ್ ಬಾನು ಅವರಿಂದ ನಿರ್ಭಯ-ಕಥುವಾ-ಸೌಜನ್ಯವರೆಗೂ ವಿಸ್ತರಿಸುವ ಈ ದೌರ್ಜನ್ಯಗಳ ಚರಿತ್ರೆಯನ್ನು, ತಮ್ಮ ಹೆಣ್ತನದ ಘನತೆಯೇ ನಿರಾಕರಿಸಲ್ಪಡುತ್ತಿರುವುದನ್ನು ನೋಡುತ್ತಲೇ, ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಸಂಕುಲದ ನಡುವೆ ನಿಂತು ನೋಡಬೇಕಾಗುತ್ತದೆ. ಸೂಕ್ಷ್ಮತೆಗಳನ್ನು ಕಳೆದುಕೊಂಡಿರುವ, ಸಂವೇದನಾಶೀಲತೆಯನ್ನು ಮರೆತಿರುವ ಸಮಾಜವೊಂದರಲ್ಲಿ ಮಹಿಳಾ ದೌರ್ಜನ್ಯಗಳಿಗೆ ಕಾರಣರಾದ ವ್ಯಕ್ತಿಗಳು ಶಿಕ್ಷೆಗೊಳಗಾಗುವುದು ಸಹಜವಾಗಿಯೇ ಸಂಭ್ರಮಿಸುವ ಕ್ಷಣವಾಗುತ್ತದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಾಮೂಹಿಕ ಲೈಂಗಿಕ ದೌರ್ಜನ್ಯ, ನಿರಂತರ ಅತ್ಯಾಚಾರ ಮತ್ತು ಇನ್ನಿತರ ಲೈಂಗಿಕ ಕಿರುಕುಳಗಳ ಪ್ರಕರಣದಲ್ಲಿ ಜನಪ್ರತಿನಿಽಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸ್ವಾಗತಿಸಬೇಕಿದೆ.
ಇದು ಅಂತಿಮ ನ್ಯಾಯ ಎಂದೇನೂ ಭಾವಿಸಲಾಗುವುದಿಲ್ಲ. ಏಕೆಂದರೆ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆಗೊಳಗಾದ ಅಪರಾಧಿಗೂ ಕೂಡ ಸುಪ್ರೀಂ ಕೋರ್ಟ್‌ವರೆಗೂ ರಕ್ಷಣೆಗಾಗಿ ಪ್ರಯತ್ನಿಸುವ ಅವಕಾಶಗಳಿವೆ. ಆದಾಗ್ಯೂ ಇಂತಹ ಒಂದು ಪ್ರಸಂಗವೇ ಸಮಾಜದಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿಸುತ್ತದೆ. ಆದರೆ ವ್ಯಕ್ತಿಗತ ನೆಲೆಯಲ್ಲಿ ಅಪರಾಧ ಎಸಗಿದ ವ್ಯಕ್ತಿಯಲ್ಲಿ ಕನಿಷ್ಠ ಪ್ರಮಾಣದ ಪಾಪಪ್ರಜ್ಞೆ ಇದ್ದಲ್ಲಿ, ನ್ಯಾಯ ವ್ಯವಸ್ಥೆಯನ್ನು ಅವಲಂಬಿಸುವ ಅವಶ್ಯಕತೆಯೇ ಇರುವುದಿಲ್ಲ.
ಈ ಪಾಪಪ್ರಜ್ಞೆಯನ್ನು ಕಳೆದುಕೊಂಡಿರುವುದೇ ಭಾರತೀಯ ಸಮಾಜದ ಅತಿದೊಡ್ಡ ಬೇನೆಯಾಗಿದೆ. ಪ್ರಜಲ್ ರೇವಣ್ಣ ಜೈಲು ವಾಸಿಯಾಗುವುದು ಅತ್ಯಾಚಾರಕ್ಕೊಳಗಾದ ಅಮಾಯಕ ಮಹಿಳೆಗೆ ಸಂದ ನ್ಯಾಯ ಎನ್ನುವುದಕ್ಕಿಂತಲೂ, ನೈಜ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಎಲ್ಲ ಅಂಗಗಳೂ ಮಾನವೀಯ ನೆಲೆಯಲ್ಲಿ ಕ್ರಿಯಾಶೀಲವಾಗಿದ್ದರೆ, ಎಂತಹ ಬಲಾಢ್ಯ ವ್ಯಕ್ತಿಗಳೂ ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಸಂದೇಶವನ್ನು ನೀಡುವ ಒಂದು ಬೆಳವಣಿಗೆ ಎನ್ನಬಹುದು.
” ಯಾವುದೇ ಮತವನ್ನು, ಧಾರ್ಮಿಕ ಸಂಹಿತೆಗಳಿಗೊಳಪಡಿಸಿ ಸಾಂಸ್ಥೀಕರಣಕ್ಕೊಳಪಡಿಸಿದಾಗ, ಈ ಸಾಂಸ್ಥಿಕ ನೆಲೆಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸಮಾಜ ಹೊರಬೇಕೇ ಹೊರತು, ಒಂದು ನಿರ್ದಿಷ್ಟ ಸಂಸ್ಥೆ ಅಥವಾ ಸಂಸ್ಥಾನವಲ್ಲ.”
-ನಾ ದಿವಾಕರ
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…