ದೀನ್ ಇಲಾಹಿಗೆ ನೈತಿಕತೆ, ಪಾಪಪ್ರಜ್ಞೆ, ಅಹಿಂಸೆ, ವಿನಯದಂತಹ ವಿಷಯಗಳು ಆಸರೆಯ ಕಂಬಗಳಾಗಿದ್ದವು!
ಭಾರತದ ವರ್ತಮಾನವನ್ನು ಮತ್ತದರ ತಲ್ಲಣಗಳನ್ನು ಗಮನಿಸುತ್ತಿರುವವರಿಗೆ ಮೊಘಲ್ ಚಕ್ರವರ್ತಿ ಅಕ್ಬರ್ ನ ನೆನಪು ಬಂದರೆ ಅಚ್ಚರಿಯೇನಲ್ಲ.
ಅಂದ ಹಾಗೆ ದೇಶವನ್ನಾಳಿದ ದೊರೆಗಳ ಹೆಸರುಗಳ ಸಾಲಿನಲ್ಲಿ ಆತನ ಹೆಸರು ಬಂದಾಗ ಅಕ್ಬರ್ ದ ಗ್ರೇಟ್ ಎಂದು ಗುರುತಿಸುವುದು ವಾಡಿಕೆ.
ಇವತ್ತು ಇಂತಹ ವಾಡಿಕೆಯನ್ನು ಉಡಾಫೆಯಾಗಿ ನೋಡುವ ಮನ:ಸ್ಥಿತಿಗಳು ಹೆಚ್ಚಿವೆ.ಇಂತಹ ಮನಸ್ಸುಗಳು ಅಕ್ಬರ್‌ನನ್ನು ಗ್ರೇಟ್ ಎಂದವರು ಯಾರು?ದಾಖಲೆ ಕೊಡಿ ಅಂತ ಕೇಳುವುದೂ ಅಸಂಭವ ಏನಲ್ಲ.
ಆದರೂ ಚರಿತ್ರೆಯ ಪುಟಗಳನ್ನು ಬಲ್ಲವರಿಗೆ ಅಕ್ಬರ್ ಎಂತಹ ಮಹಾನ್ ದೊರೆ ಎಂಬುದು ಗೊತ್ತಿರುತ್ತದೆ. ಇವತ್ತಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳನ್ನು ಒಳಗೊಂಡ ಅಖಂಡ ಭಾರತವನ್ನು ಆತ ಆಳುತ್ತಿದ್ದ ಎಂಬುದೇ ಆತ ಮಹಾನ್ ದೊರೆ ಎಂಬುದಕ್ಕೆ ಮೊದಲ ಸಾಕ್ಷಿ.
ಇಂತಹ ಅಕ್ಬರ್ ೧೫೮೨ ರಲ್ಲಿ ದೀನ್ ಇಲಾಹಿ ಎಂಬ ಪಂಥವನ್ನು ಸ್ಥಾಪಿಸುತ್ತಾನೆ. ದೀನ್ ಇಲಾಹಿ ಎಂದರೆ ದೇವರ ಧರ್ಮ ಎಂದರ್ಥ.
ಅಂದ ಹಾಗೆ ಆತನ ಈ ಕೆಲಸ ಇಸ್ಲಾಂ ಧರ್ಮದ ಬೇರುಗಳನ್ನು ಭಾರತದಾದ್ಯಂತ ಹಬ್ಬಿಸುತ್ತಾ ಬಂದ ಅತನ ಹಿರಿಯರ ಪರಂಪರೆಗೆ ತದ್ವಿರುದ್ಧ.
ಹಾಗಂತ ಆತ ಇಸ್ಲಾಂ ಧರ್ಮದ ವಿಷಯದಲ್ಲಿ ಕಡಿಮೆ ಶ್ರದ್ಧಾಳುವಾಗಿದ್ದ ಅಂತ ಇದರರ್ಥವಲ್ಲ. ಆದರೆ ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳಲ್ಲಿ ಒಂದು ಕೊರತೆ ಇದೆ ಅಂತ ಆತ ಪ್ರಬಲವಾಗಿ ನಂಬಿದ್ದ. ಯಾವ ಧರ್ಮಗಳೂ ಸ್ವಯಂ ಆಗಿ ಅಂತಿಮ ಸತ್ಯವನ್ನು ಕಂಡುಕೊಂಡಿಲ್ಲ ಎಂಬುದು ಅತನ ನಂಬಿಕೆಯಾಗಿತ್ತು.
ಹೀಗಾಗಿ ಒಂದೇ ಧರ್ಮದ ಬದಲು ಎಲ್ಲ ಧರ್ಮಗಳ ಜ್ಞಾನ ಒಂದು ಕೊವೆಯಲ್ಲಿ ಸೇರಿದರೆ ಆ ಅಂತಿಮ ಸತ್ಯವನ್ನು ಅರಿತುಕೊಳ್ಳಬಹುದು ಎಂಬುದು ಅವನ ವಿಶ್ವಾಸವಾಗಿತ್ತು.
ಇದೇ ಕಾರಣಕ್ಕಾಗಿ ಆತ ಹಿಂದೂ ಧರ್ಮ,ಇಸ್ಲಾಂ ಧರ್ಮ ಮಾತ್ರವಲ್ಲದೆ ಕ್ರಿಶ್ಚಿಯನ್, ಜೊರಾಷ್ಟ್ರಿಯನ್, ಜೈನ ಧರ್ಮದ ನಂಬಿಕೆಗಳನ್ನೂ ಕಸಿ ಮಾಡಿ ದೀನ್ ಇಲಾಹಿ ಎಂಬ ಪಂಥವನ್ನು ಸ್ಥಾಪಿಸಿದ.
ಆತ ಸ್ಥಾಪಿಸಿದ ದೀನ್ ಇಲಾಹಿ ಎಂಬ ಮನೆಗೆ, ಆ ಧರ್ಮಗಳ ಮೂಲವಾಗಿದ್ದ ನೈತಿಕತೆ, ಪಾಪಪ್ರಜ್ಞೆ, ಅಹಿಂಸೆ, ವಿನಯದಂತಹ ವಿಷಯಗಳು ಆಸರೆಯ ಕಂಬಗಳಾಗಿದ್ದವು.
ಇಷ್ಟು ಹೇಳುವಷ್ಟರಲ್ಲೇ ಖಚಿತವಾಗುತ್ತಾ ಹೋಗುವ ವಿಷಯವೆಂದರೆ ಧರ್ಮ ಎಂಬುದು ಎಲ್ಲರನ್ನು ಪೊರೆಯುವುದಕ್ಕಿಂತ ಮುಖ್ಯವಾಗಿ ತನ್ನ ಬಿಗಿಮುಷ್ಟಿಯಲ್ಲಿ ಅಮುಕುತ್ತಿದೆ ಎಂಬುದು ಅಕ್ಬರ್‌ಗೆ ಗೊತ್ತಿತ್ತು.
ಭಾರತದಲ್ಲೂ ಈ ಧರ್ಮದಲ್ಲಿ ನಾನು ಸುರಕ್ಷಿತ ಎಂಬ ಭಾವನೆ ಬಹುಸಂಖ್ಯಾತರಲ್ಲಿ ಇಲ್ಲ. ಹಿಂದು ನಾವೆಲ್ಲ ಒಂದು ಅಂತ ಎಷ್ಟೇ ಕೂಗಾಟ ನಡೆಯಲಿ. ಆದರೆ ಪ್ರತಿಯೊಂದು ಜಾತಿ, ವರ್ಗಗಳ ತಳ ಶ್ರೇಣಿಯ ಜನ ತಮಗಿಂತ ಮೇಲಕ್ಕೆ ತಲುಪಿರುವವರನ್ನು ಕಂಡು ಕೊರಗುವ ಸ್ಥಿತಿ ಉಳಿದೇ ಇದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಯ ವಿಷಯದಲ್ಲಿ ಇವರಿಗೆ ನೆಮ್ಮದಿ ಸಿಗುವುದು ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಇದು ಕರ್ನಾಟಕದ ಪರಿಸ್ಥಿತಿಯೂ ಹೌದು.
ಅರ್ಥಾತ್, ಧರ್ಮದ ಮುಂಚೂಣಿಯಲ್ಲಿ ನಿಂತ ಪುರೋಹಿತಶಾಹಿ ಶಕ್ತಿಗಳು ಹೇಗೆ ವರ್ತಿಸುತ್ತವೆ ಎಂಬುದು ಅರ್ಥವಾಗಿತ್ತು.
ಯಾಕೆಂದರೆ ಈ ಪಂಥವನ್ನು ಸ್ಥಾಪಿಸುವ ಹೊತ್ತಿಗಾಗಲೇ ಆತ ಸಿಂಹಾಸನಕ್ಕೇರಿ ಇಪ್ಪತ್ತಾರು ವರ್ಷಗಳಾಗಿದ್ದವು. ಚಿಕ್ಕ ವಯಸ್ಸಿನಲ್ಲೇ ಆತ ಪಟ್ಟಕ್ಕೇರಿದ್ದು ನಿಜ. ಆದರೆ ಆತ ಆಡಳಿತ ನಡೆಸಿದ ಇಪ್ಪತ್ತಾರು ವರ್ಷಗಳ ಅವಧಿ ಸಣ್ಣದಾಗಿರಲಿಲ್ಲ.
ಈ ಅವಧಿಯಲ್ಲಿ ಅತನಿಗೆ ಧರ್ಮಗಳನ್ನು ಕಬ್ಜಾ ಮಾಡಿಕೊಳ್ಳುವವರು ಯಾರು? ಯಾವ ಶಕ್ತಿಗಳು ಅದಕ್ಕೆ ಪ್ರೇರಣೆ ನೀಡುತ್ತವೆ? ಆ ಮೂಲಕ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಮನದಟ್ಟಾಗಿತ್ತು.
ಹಾಗಂತ ಅವುಗಳ ಬೇರನ್ನು ಬಹಿರಂಗವಾಗಿ ಕಡಿದು ಹಾಕುವುದು ಕಷ್ಟ ಎಂಬುದನ್ನು ಅರಿತಿದ್ದ ಅಕ್ಬರ್, ಧರ್ಮಗಳ ಹಿಡಿತದಲ್ಲಿರುವ ಬಹುಸಂಖ್ಯಾತರು ಅದರಿಂದ ಹೊರಬರಬೇಕು ಅಂತ ಮನದಾಳದಿಂದ ಬಯಸಿದ್ದ.
ಹೀಗಾಗಿ ಆತ ಧರ್ಮಗಳ ಹೊಟ್ಟೆಗೆ ಕತ್ತಿಯಿಂದ ಇರಿಯುವ ಬದಲು, ಅವೆಲ್ಲವುಗಳ ಹೃದಯದ ತುಂಡುಗಳನ್ನು ಜೋಡಿಸಿ ಹೊಸ ಪಂಥ ಸ್ಥಾಪಿಸಲು ಮುಂದಾದ.
ಆತ ಸ್ಥಾಪಿಸಿದ ಈ ಧರ್ಮ ವ್ಯವಸ್ಥೆಯು ಬಹುಸಂಖ್ಯಾತರನ್ನು ಸೋ ಕಾಲ್ಡ್ ಧರ್ಮಗಳ ಹಿಡಿತದಿಂದ ಬಿಡಿಸಿ ಅವರಿಗೆ ನೆಮ್ಮದಿ ನೀಡುವಂತಾಗಬೇಕು ಎಂಬುದು ಅವನ ಆಸೆಯಾಗಿತ್ತು.
ಹೀಗಾಗಿ ದೀನ್ ಇಲಾಹಿ ಪಂಥಕ್ಕೆ ಪೂಜಕರು ಇರಲಿಲ್ಲ, ಧರ್ಮಗ್ರಂಥವೂ ಇರಲಿಲ್ಲ. ಅವೆಲ್ಲ ಪುನ: ಅಮಾಯಕರನ್ನು ಬಂಧಿಸುವ ಅಸ್ತ್ರಗಳೆಂಬುದು ಅವನ ಯೋಚನೆಯಾಗಿತ್ತು.
ಅವನ ಈ ಮಹದುದ್ದೇಶದ ದೀನ್ ಇಲಾಹಿ ಪಂಥವನ್ನು ಅವತ್ತು ಜನ ಸ್ವೀಕರಿಸಿದ್ದೇ ಆಗಿದ್ದರೆ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಚರಿತ್ರೆಯೇ ಬದಲಾಗಿ ಹೋಗುತ್ತಿತ್ತು.
ಧರ್ಮ-ಧರ್ಮಗಳ ಹೆಸರಿನಲ್ಲಿ ಇವತ್ತು ಭಾರತ ಸೇರಿದಂತೆ ಜಗತ್ತಿನ ಉದ್ದಗಲ ಮೆರೆಯುತ್ತಿರುವ ಕ್ರೌರ್ಯ ಏನಿದೆ? ಅದರ ತೀವ್ರತೆ ಕಡಿಮೆಯಾಗುತ್ತಿತ್ತು.
ಆದರೆ ದುರಾದೃಷ್ಟವಶಾತ್ ಅಕ್ಬರನ ದೀನ್ ಇಲಾಹಿ ಪಂಥಕ್ಕೆ ಧೀರ್ಘಾಯುಷ್ಯ ಇರಲಿಲ್ಲ. ಯಾಕೆಂದರೆ ಮನುಷ್ಯ ಕುಲವನ್ನು ಒಂದು ಮಾಡಲು ಹೊರಟ ಅಂತಹ ಮಹಾನ್ ಸಾಮ್ರಾಟನಿಗೆ ಇತರರಿರಲಿ, ಆತನ ಅಸ್ಥಾನದಲ್ಲಿದ್ದವರೇ ಬೆಂಬಲ ಕೊಡಲಿಲ್ಲ. ಇಸ್ಲಾಂನ
ಅಲ್ಲಾಹು ಅಕ್ಬರ್ (ದೇವರು ದೊಡ್ಡವನು) ಎಂಬ ಘೋಷವಾಕ್ಯ ಅವರಿಗೆ ಗಾಡ್ ಈಸ್ ಅಕ್ಬರ್ ತರ ಕಾಣತೊಡಗಿದ್ದು, ಅಕ್ಬರ್ ದೇವರಿಗಿಂತ ದೊಡ್ಡವನಾಗಲು ಹೊರಟಿದ್ದಾನೆ ಎಂಬ ಅನುಮಾನ ಶುರುವಾಗಿದ್ದು ಇದಕ್ಕೆ ಕಾರಣ.
ಈ ಮಧ್ಯೆ ಮುಸ್ಲಿಂ ಚಕ್ರವರ್ತಿಯೊಬ್ಬ ಬಹುಸಂಖ್ಯಾತ ಹಿಂದೂಗಳಿಗೆ ಹೇಗೆ ಧಾರ್ಮಿಕ ಪರಿಹಾರ ನೀಡಬಲ್ಲ ಅಂತ ಹಿಂದೂ ಮನಸ್ಸುಗಳು ಯೋಚಿಸಿದವು.
ಪರಿಣಾಮ? ಮನುಷ್ಯ ಜನಾಂಗದ ಶೋಷಣೆಯ ಚರಿತ್ರೆಯನ್ನು ವಿರುದ್ದ ದಿಕ್ಕಿಗೆ ತಿರುಗಿಸಬಹುದಾಗಿದ್ದ ಅಕ್ಬರನ ಮಹಾನ್ ಕನಸೊಂದು ಕಮರಿ ಹೋಯಿತು.
****
ಅಕ್ಬರನ ಈ ಪ್ರಯತ್ನವನ್ನು ಏಕೆ ನೆನಪಿಸಿಕೊಳ್ಳಬೇಕು ಎಂದರೆ ಧರ್ಮಗಳ ಹೊಡೆತಕ್ಕೆ ಸಿಲುಕಿ ಇವತ್ತು ಜಗತ್ತೇ ನಲುಗಿ ಹೋಗಿದೆ.
ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲ ಧರ್ಮಗಳು ಪರಸ್ಪರ ಮೇಲಾಟದಲ್ಲಿ ತೊಡಗಿರುವುದು ಮಾತ್ರವಲ್ಲ, ತಮ್ಮೊಳಗಿನ ನರಳಾಟದಿಂದ ತತ್ತರಿಸುತ್ತಿವೆ. ಭಾರತದಲ್ಲೂ ಈ ಧರ್ಮದಲ್ಲಿ ನಾನು ಸುರಕ್ಷಿತ ಎಂಬ ಭಾವನೆ ಬಹುಸಂಖ್ಯಾತರಲ್ಲಿ ಇಲ್ಲ.
ಹಿಂದು ನಾವೆಲ್ಲ ಒಂದು ಅಂತ ಎಷ್ಟೇ ಕೂಗಾಟ ನಡೆಯಲಿ. ಆದರೆ ಪ್ರತಿಯೊಂದು ಜಾತಿ, ವರ್ಗಗಳ ತಳ ಶ್ರೇಣಿಯ ಜನ ತಮಗಿಂತ ಮೇಲಕ್ಕೆ ತಲುಪಿರುವವರನ್ನು ಕಂಡು ಕೊರಗುವ ಸ್ಥಿತಿ ಉಳಿದೇ ಇದೆ. ಶಿಕ್ಷಣ, ಆರೋಗ್ಯ,ಸಾಮಾಜಿಕ ಭದ್ರತೆಯ ವಿಷಯದಲ್ಲಿ ಇವರಿಗೆ ನೆಮ್ಮದಿ ಸಿಗುವುದು ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಇದು ಕರ್ನಾಟಕದ ಪರಿಸ್ಥಿತಿಯೂ ಹೌದು.
ಹೀಗಿರುವಾಗ ಹಿಂದು ನಾವೆಲ್ಲ ಒಂದು ಎಂಬುದಕ್ಕೆ ಏನಾದರೂ ಅರ್ಥ ಇದೆಯೇ ಎಂಬ ಮಾತು ಇವರಿಂದ ಕೇಳುತ್ತಲೇ ಇದೆ. ಉಳಿದ ಧರ್ಮಗಳ ಆಳದಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ.ಅರ್ಥಾತ್, ಧರ್ಮಗಳ ಮಾತು ಬಂದಾಗ ಉದ್ರಿಕ್ತರಾಗುವ ಜನ ಕ್ರಮೇಣ ಜಂಗಲ್ ರಾಜ್ ನ ಹೊಸ್ತಿಲು ತುಳಿದಿದ್ದಾರೆ.
ಪ್ರಭುತ್ವ ರಣಕೇಕೆ ಹಾಕುತ್ತಾ, ತನಗೆ ಅಡ್ಡ ಬಂದವರನ್ನು ನಿರ್ಮೂಲ ಮಾಡುತ್ತಾ ವಿಜೃಂಭಿಸುತ್ತಿರುವುದಕ್ಕೆ ಇದೇ ಮುಖ್ಯಕಾರಣ. ಹೀಗಾಗಿ, ನಾಲ್ಕು ನೂರು ವರ್ಷಗಳಿಗೂ ಹಿಂದೆಯೇ ಜನ ತಲುಪಬಹುದಾದ ಗಮ್ಯವನ್ನು ಊಹಿಸಿದ್ದ ಅಕ್ಬರ್ ಇದಕ್ಕೆ ಪರಿಹಾರ ನೀಡಲು ಕಂಡ ಕನಸಿಗೆ ಎಷ್ಟು ದೊಡ್ಡ ಮೌಲ್ಯವಿದೆ ಎಂಬುದು ಇದರಿಂದ ಅರ್ಥವಾಗುತ್ತದೆ.
ಅಷ್ಟೇ ಅಲ್ಲ, ಇನ್ನು ಅಂತಹ ಕನಸು ಕಾಣಲು ಸಾಧ್ಯವೂ ಇಲ್ಲ ಅಂತನ್ನಿಸಿ ವಿಷಾದವೂ ಮೂಡುತ್ತದೆ.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್ನಾಥ್ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…