ಸೇನಾ ಉದ್ಯೋಗದ ಭವಿಷ್ಯಕ್ಕೆ ‘ಅಗ್ನಿಪಥ’ದ ಅಡೆತಡೆ

ಸೇನೆಯಲ್ಲಿ ಉದ್ಯೋಗ ಪಡೆಯುವ ಲಕ್ಷಾಂತರ ಆಕಾಂಕ್ಷಿಗಳ ಕನಸಿಗೆ ಕೊಳ್ಳಿ ಇಡುತ್ತಿರುವ ಅಗ್ನಿಪಥ ಯೋಜನೆಗೆ ರಾಷ್ಟ್ರ ವ್ಯಾಪಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಆರ್ಥಿಕ ಅನುಕಲಸ್ಥರು, ಸ್ಥಿತಿವಂತರೂ ಮಾತ್ರವೇ ಬೆಂಬಲಿಸುತ್ತಿರುವ ಅಗ್ನಿಪಥ ಯೋಜನೆ ಇತ್ತ ತರಬೇತಿಯೂ ಅಲ್ಲ, ಅತ್ತ ಉದ್ಯೋಗವೂ ಅಲ್ಲದ ಅತಂತ್ರಯೋಜನೆಯೆಂಬುದು ಉದ್ಯೋಗಾಕಾಂಕ್ಷಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಗ್ನಿಪಥ ಯೋಜನೆ ಕುರಿತಂತೆ ಇಬ್ಬರು ಪ್ರಾಜ್ಞರ ನಿಲುವು ಇಲ್ಲಿದೆ.

 

ಸರ್ವಾಧಿಕಾರಿ ಮನೋಭಾವ ಸಲ್ಲದು!

– ಜಿ ಟಿ ನರೇಂದ್ರ ಕುಮಾರ್

ದೇಶದ ರಕ್ಷಣೆ ಮತ್ತು ಅದರ ಉಸ್ತುವಾರಿ ಒಕ್ಕೂಟ ಸರ್ಕಾರದ ಜವಾಬ್ದಾರಿ. ರಕ್ಷಣಾ ವಲಯದ ಅಗತ್ಯಗಳಾದ ಮದ್ದುಗುಂಡು ವಿಮಾನ ಹಡಗು ಬಂದೂಕು ವಾಹನ ಸೈನಿಕರ ವೇತನ ಪಿಂಚಣಿ ಎಲ್ಲವನ್ನು ಸಾರ್ವಜನಿಕರ ತೆರಿಗೆ ಯಿಂದಲೇ ಭರಿಸಲಾಗುತ್ತದೆ.

ಇತ್ತೀಚೆಗೆ ಒಕ್ಕೂಟ ಸರಕಾರದ ಚುಕ್ಕಾಣಿಯನ್ನು ಹಿಡಿದಿರುವ ಬಿಜೆಪಿ ನಾಯಕರು ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಅಪಾಯಕಾರಿಯಾದ ನೀತಿಯನ್ನು ಪ್ರಕಟಿಸಿದ್ದಾರೆ.

ನೂತನ ನೀತಿಯ ಪ್ರಕಾರ ಭಾರತೀಯ ಯುವಜನರನ್ನು ಕೇವಲ ನಾಲ್ಕು ವರ್ಷಗಳಿಗೆ ನೇಮಕಾತಿ ನೀಡಿ ನಂತರ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುವುದಂತೆ. ಮತ್ತೆ ನೂತನ ನೇಮಕಾತಿ.

ಇದು ಒಂದು ರೀತಿಯ ಅರೆಕಾಲಿಕ ಗುತ್ತಿಗೆ ಕಾರ್ಮಿಕ ಪದ್ಧತಿ. ಇದನ್ನು ಅಗ್ನಿಪತ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ.

ಇದು ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕ.ಸೈನಿಕರಿಗೆ ಕಾಯಂ ಉದ್ಯೋಗ ಮತ್ತು ಪಿಂಚಣಿಯನ್ನು ನೀಡಲಾಗದ ದುಸ್ಥಿತಿಗೆ ಭಾರತೀಯ ಸರ್ಕಾರ ತಲುಪಿದೆ.

ಸಾರ್ವಜನಿಕ ಉತ್ಪಾದನೆ,ಉದ್ದಿಮೆ, ಸೇವಾ ವಲಯವನ್ನು ಈಗಾಗಲೇ ಮನಮೋಹನ್ ಸಿಂಗ್ ತೋರಿದ ಖಾಸಗೀಕರಣದ ಹಾದಿಯಲ್ಲಿ ಅತ್ಯಂತ ವೇಗವಾಗಿ ಮುಕ್ತಗೊಳಿಸಿ ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡಲು ತೆರಿಗೆ ಕದಿಯಲು ನಿರುದ್ಯೋಗ ಸೃಷ್ಟಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗಿದೆ.

ಮುಂದಿನ ದಿನಗಳಲ್ಲಿ ಪೋಲಿಸು, ಜೈಲು ಸಹ ಖಾಸಗಿಯವರಿಗೆ ವಹಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.

ಶಿಕ್ಷಣ ಉದ್ಯೋಗ ಆರೋಗ್ಯ ಮುಂತಾದ ಪ್ರಮುಖ ವಿಚಾರಗಳಿಂದ ವಿದ್ಯಾರ್ಥಿ ಮತ್ತು ಯುವಜನರ ಗಮನವನ್ನು ಹಿಜಬ್, ಅಜಾನ್, ಗೋ ರಕ್ಷಣೆ, ಮಸೀದಿಗಳಲ್ಲಿ ಲಿಂಗ ಉದ್ಭವ, ಏಕರೂಪದ ನಾಗರಿಕ ಕಾಯ್ದೆಗಳೆಂಬ ವಿಚಾರಗಳ ಕಡೆಗೆ ತಿರುಗಿಸಲು ಯಶಸ್ವಿಯಾಗಿದ್ದಾರೆ.

ಈಗಾಗಲೇ ಜನರ ಗಮನ ಬೇರೆಡೆ ಸೆಳೆದು ಕೃಷಿ ಕೃಷಿ ಮಾರುಕಟ್ಟೆ ಮತ್ತು ಕೃಷಿಭೂಮಿಯನ್ನು ಬೆಳ್ಳಿತಟ್ಟೆಯಲ್ಲಿಟ್ಟು ಖಾಸಗಿಯವರಿಗೆ ಒಪ್ಪಿಸುವ ಕಾಯ್ದೆಗಳನ್ನು ಹಿಮ್ಮೆಟ್ಟಿಸುವಲ್ಲಿ ಪಂಜಾಬ್ ಹರಿಯಾಣ ಉತ್ತರ ಪ್ರದೇಶಗಳ ಮುಂತಾದ ರಾಜ್ಯಗಳ ರೈತರು ತಮ್ಮ ಸಮರಧೀರ ಹೋರಾಟವನ್ನು ಮಹಾತ್ಮ ಗಾಂಧಿ ಅವರ ಮಾರ್ಗದಲ್ಲಿ ನಡೆಸಿ ಯಶಸ್ವಿಯಾಗಿರುವುದು ಆಶಾಕಿರಣವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಖಾಸಗಿ ಬಂಡವಾಳದಾರರಿಗೆ ನೆರವಾಗುವ ಕಾರ್ಮಿಕ ಮತ್ತು ಕೈಗಾರಿಕಾ ಮಸೂದೆಗಳು ತಿದ್ದುಪಡಿಯಾಗಿ ಇದೇ ವರ್ಷದ ಜುಲೈ ಒಂದನೇ ತಾರೀಕಿನಿಂದ ಜಾರಿಯಾಗಲಿರುವುದು ದುರಂತ.

ಈ ರಾಷ್ಟ್ರೀಯ ಮಹತ್ವದ ವಿಚಾರಗಳನ್ನು ಒಕ್ಕೂಟ ಸರ್ಕಾರವು ತನ್ನಿಚ್ಛೆಯಂತೆ ನಿರ್ಧರಿಸುವ ಸರ್ವಾಧಿಕಾರಿ ಮನೋಭಾವ ಸಲ್ಲದು. ಈ ರೀತಿಯ ವಿಚಾರಗಳಲ್ಲಿ ಸಾರ್ವಜನಿಕ ಚರ್ಚೆ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯಕ.

ಒಕ್ಕೂಟ ಸರಕಾರದಲ್ಲಿ ಅಧಿಕಾರ ನಡೆಸುವವರು ನಡೆಸುವವರು ಸಂಪೂರ್ಣವಾಗಿ ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳಾಗಿರಲೇಬೇಕು.

ದೇಶಕ್ಕೆ ಅಗತ್ಯವಾಗಿ ಬೇಕಾಗಿರುವುದು ಮೋದಿಯವರ ಅಗ್ನಿಪಥವಲ್ಲ, ರಾಷ್ಟ್ರಕವಿ ಕುವೆಂಪು ಅವರ ಮನುಜಮತ, ವಿಶ್ವಪಥ ಸರ್ವೋದಯ ಸಮನ್ವಯ ಮತ್ತು ಪೂರ್ಣದೃಷ್ಟಿ ಎಂಬ ಪಂಚ ಮಂತ್ರಗಳು.

 

ನಮಗೆ ಸೈನ್ಯವೇ ಬೇಡ!

ಡಾ.ಹಿ.ಶಿ.ರಾಮಚಂದ್ರೇಗೌಡ

ನಾನು ೧೯೮೯ರಲ್ಲಿ ಪ್ರಕಟಿಸಿದ ‘ಭೂಮಿ ಮತ್ತು ಹಿಂಸೆ’ ಕೃತಿಯ ಮೊದಲ ಲೇಖನ ಇದು. ‘ಈ ಮಾತನ್ನು ಕೇಳಿಯೇ ಹಲವರು ಬೆಚ್ಚಿ ಬೀಳಬಹುದು. ಸೈನ್ಯ ಶತ್ರುತ್ವ, ಅಣ್ವಸ್ತ್ರ ಒಟ್ಟೊಟ್ಟಿಗೆ ಬೆಳೆಯುತ್ತಿರುವುದನ್ನು ಕಣ್ಣಾರೆ ಕಾಣುತ್ತಿರುವ ವಿಜ್ಞಾನಿಗಳು, ಮನುಷ್ಯರನ್ನು ಪ್ರೀತಿಸುತ್ತಿರುವವರು ಕೂಡಲೇ ಒಪ್ಪಿಕೊಳ್ಳಬಹುದು. ಇವತ್ತಿನ ಪ್ರಪಂಚದ ಪರಿಸ್ಥಿತಿಯನ್ನು ನೋಡಿದರೆ ಯಾರಿಗಾದರೂ ಈ ನಿಲುವನ್ನು ಒಪ್ಪಿಕೊಳ್ಳದೆ ಅನ್ಯ ಮಾರ್ಗವೇ ಇಲ್ಲ. ಹೆತ್ತ ಕೈ ಕತ್ತು ಹಿಸುಗುವ ಪರಿಸ್ಥಿತಿಗೆ ನಮ್ಮ ರಕ್ಷಣಾ ವ್ಯವಸ್ಥೆ ಬಂದಿದೆ. ಮನುಷ್ಯನ ಹಸಿವಿಗಾಗಿ ಖರ್ಚು ಮಾಡುವ ಹಣ ಅವನ ಪ್ರಾಣ ಹಾನಿಗಾಗಿ ವ್ಯಯವಾಗುತ್ತಿದೆ. ಮಾನವೀಯ ಸಂಬಂಧಗಳಾದ ಸ್ನೇಹ, ಭ್ರಾತೃತ್ವ, ದಯೆ ಎಂಬ ಹೊಂದಾಣಿಕೆಗಳು ಅಸೂಯೆ, ದ್ವೇಷ, ಕ್ರೂರತೆ ಮತ್ತು ವೈಮನಸ್ಸಿನಲ್ಲಿ ಪರ್ಯವಸನಗೊಳ್ಳುತ್ತಿವೆ’. ಇದು ಆ ಲೇಖನದ ಮೊದಲ ಪ್ಯಾರಾ.

ಒಮ್ಮೆ ಒಂದು ತಂಡ ಮಹಾಕವಿ ಕುವೆಂಪು ಅವರನ್ನು ಸಂದರ್ಶಿಸಲು ಬಂದಿತ್ತು. ಅದು ಕುವೆಂಪು ಅವರನ್ನು ಮೊದಲು ಕೇಳಿದ ಪ್ರಶ್ನೆ, ‘ಸರ್, ಈ ಪ್ರಪಂಚದ ಸಂಕಟಕ್ಕೆ ಅತ್ಯಂತ ತುರ್ತಾಗಿ ಹಾಕಿಕೊಳ್ಳಬೇಕಾದ ಕಾರ್ಯಕ್ರಮ ಏನು’; ಕುವೆಂಪು ತುಂಬಿದ ಮನಸ್ಸಿನಿಂದ ಹೇಳಿದರು: ‘ಮೊದಲು ಯುದ್ಧಗಳನ್ನು ಬಹಿಷ್ಕರಿಸಬೇಕು, ಅಲ್ಲಿಂದ ಮುಂದೆ ಎಲ್ಲ ಮಾನವ ಕಲ್ಯಾಣವೂ ತನಗೆ ತಾನೇ ಆರಂಭವಾಗುತ್ತದೆ.’

ಅದು ರೈತ ಚಳವಳಿಯ ಉತ್ತುಂಗದ ಕಾಲ. ಸೈನ್ಯದ ಅವಶ್ಯಕತೆಯ ಬಗ್ಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರನ್ನು ಕೇಳಿದೆ. ಅವರು ಹೇಳಿದರು, ಇಡೀ ದೇಶವೇ ಅಹಿಂಸಾ ಸೈನ್ಯವಾಗಬೇಕು. ಇಡೀ ಈ ದೇಶವೇ ಅಹಿಂಸಾ ಸೈನ್ಯವಾಗಿಬಿಟ್ಟರೆ! ಯಾವುದೇ ದೇಶ ನಮ್ಮ ದೇಶದ ಮೇಲೆ ಯುದ್ಧವನ್ನು ಘೋಷಿಸಿದಾಗ ಭಾರತದ ಜನವೆಲ್ಲ ಮನೆ ಮನೆಗಳಿಗೆ ಬೀಗ ಹಾಕಿ ನಿಧಾನವಾಗಿ ವಿರೋಧಿ ಸೈನ್ಯದ ಕಡೆಗೆ ಅಹಿಂಸಾತ್ಮಕವಾಗಿ ಮುಖಾ ಮುಖಿಯಾದರೆ! ಪ್ರಪಂಚ ಏನನ್ನುತ್ತದೆ, ವಿರೋಧಿ ಸೈನ್ಯಕ್ಕೆ ಆಗುವ ಮುಖಭಂಗ ಎಂಥದು! ಅದು ಈ ಜಗತ್ತಿಗೆ ಸಾಧ್ಯವಾಗಿದೆ? ಜಗತ್ತಿನ ಜೀವಿಗಳು ಒಂದು ದೊಡ್ಡ ನಿಟ್ಟುಸಿರು ಬಿಡಬಹುದೆ!

ಈಗ ಪ್ರಧಾನಿ ಮೋದಿಯವರ ಕಡೆಯಿಂದ ರಕ್ಷಣೆ ವೀರರ ಪ್ರಯೋಗ ಕೇಳಿದ ಬಂದಿದೆ. ಭಾರತದಲ್ಲಿ ಭಯಂಕರ ಪ್ರತಿಭಟನೆಯಾಗುತ್ತಿದೆ. ಸೈನಿಕ ಕೆಲಸ ಒಂದು ವೃತ್ತಿಯಾಗುವುದನ್ನು ಇದು ತಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಸೈನ್ಯ ವೃತ್ತಿಪರವಾಗದಿದ್ದರೆ ಅದು ಸೈನ್ಯವಾಗಿರುವುದಿಲ್ಲ. ವ್ಯವಹಾರವಾಗಿರುತ್ತದೆ ಎನ್ನಲಾಗುತ್ತಿದೆ. ಬಾಯಿ ಬಾಯಿ ಚೀನಾ- ಭಾರತ ಬಾಯಿ ಬಡಿದುಕೊಳ್ಳುವಂತೆ ಮಾಡಿದ್ದು, ಪಾಕಿಸ್ತಾನದ ಕಾರ್ಗಿಲ್ ಯುದ್ಧ ಭಾರತಕ್ಕೆ ಒಂದು ಮೊಸವಾಗಿ ಎರಗಿದ್ದು- ಭಾರತದ ಸೈನ್ಯದ ಭದ್ರತೆಯನ್ನು ಮತ್ತೂ ಹೆಚ್ಚಾಗಿ ಸಮರ್ಥಿಸಬಹುದು.

ಆದರೆ, ಜಗತ್ತಿನ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಸೈನ್ಯದ ಅಗತ್ಯವಿಲ್ಲ. ಈ ಹೊತ್ತಿನ ಸಹಜ ಜಾಗತಿಕ ವಿಕಾಸ ಸೈನ್ಯ- ಯುದ್ಧದಿಂದ ಆಚೆಗೆ ಸರಿಯಬೇಕಿತ್ತು. ಆದರೆ, ಒಡೆತನ ಮತ್ತು ಬಂಡವಾಳ ಕೇಂದ್ರಿತ ತಂತ್ರಜ್ಞಾನ ಮನುಷ್ಯನ ಶಕ್ತಿಯನ್ನು ಮೀರಿ ಸ್ವಯಂಭುವಾಗಿ ಬೆಳೆದು ನಿಂತಿದೆ. ಈಗ ಅದನ್ನು ಸೋಲಿಸಲು ವಿಜ್ಞಾನಿ, ಒಡೆಯನಿಂದಲೂ ಸಾಧ್ಯವಿಲ್ಲ. ಅದು ಎಲ್ಲೆ ಮೀರಿ ಬೆಳೆದಿದೆ. ಭ್ರಹ್ಮರಾಕ್ಷಸನಾಗಿದೆ.

ಈ ಮಧ್ಯೆ ಮಾರ್ಗೋಪಾಯವೂ ಇದೆ. ಒಂದು, ಮನುಷ್ಯ ಆಧಾರಿತ ಯುದ್ಧಕ್ಕೆ ಬದಲಾಗಿ ತಾಂತ್ರಿಕವಾದ ಯುದ್ಧವನ್ನು ಉಳಿಸಿಕೊಳ್ಳುವುದು. ಎರಡು, ಗಾಂಧಿಗಿರಿಯನ್ನು ಪ್ರಪಂಚದಾದ್ಯಂತ ಅನುಷ್ಠಾನಕ್ಕೆ ತರುವುದು. ಸುಮ್ಮನೆ ಜಗತ್ತಿನ ದೇಶಗಳು ಯುದ್ಧದ ವೆಚ್ಚಕ್ಕಾಗಿ ಮಂಡಿಸುವ ಬಜೆಟ್ ಅನ್ನು ಗಮನಿಸಿ. ಅದನ್ನೆ ಮಾನವ ಕಲ್ಯಾಣಕ್ಕಾಗಿ ಬಳಸಿಕೊಂಡರೆ ಬಡತನದ ಬಗ್ಗೆ ಸುಮ್ಮನೆ ಬಡಬಡಿಸುವ ಬೋಳೆತನ ನಿಲ್ಲುತ್ತದೆ. ಇನ್ನು ದೇಶದ ಜನರನ್ನೆಲ್ಲ ಸೈನಿಕರನ್ನಾಗಿ ಮಾಡುವ ವಿಷಯ ವಿದ್ಯಾರ್ಥಿ ದೆಸೆಯಲ್ಲೆ ಎಲ್ಲರಿಗೂ ಯುದ್ಧ ಕುರಿತ ಪ್ರಾಥಮಿಕ ಶಿಕ್ಷಣ ನೀಡುವುದು, ಇಂಥ ಯುದ್ಧ ಶಿಕ್ಷಣ ಎಂದರೆ; ಶತ್ರುಗಳ ವಿರುದ್ಧ ಮಾತ್ರವಲ್ಲ, ಅದು ಬಡತನದ ವಿರುದ್ಧವೂ ಹೌದು. ಮತ್ತೆ ಅದು ಉದ್ಯೋಗವೂ ಆಗಿರಬೇಕು.

andolana

Recent Posts

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಪಕ್ಕದ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕದಲ್ಲಿರುವ ಮೋರಿಯೊಳಗೆ ಕಸದ…

30 mins ago

ಓದುಗರ ಪತ್ರ: ಬಸ್ ನಿರ್ವಾಹಕರು ಸೌಜನ್ಯದಿಂದ ವರ್ತಿಸಬೇಕು

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಇತ್ತೀಚೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಪ್ರಯಾಣಿಸುತ್ತಿರುವುದು ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಈ ಕಾರಣದಿಂದ…

31 mins ago

ಓದುಗರ ಪತ್ರ:  ಆಸ್ಪತ್ರೆ: ಭರವಸೆಗಿಂತಲೂ ಭಯವೇ ಜಾಸ್ತಿ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಆಸ್ಪತ್ರೆಗೆ ಹೋಗುವುದೆಂದರೆ ಜೀವ ಉಳಿಸಿಕೊಳ್ಳುವ ಭರವಸೆಗಿಂತ, ‘ಜೇಬಿಗೆಕತ್ತರಿ’ ಬೀಳುವ ಭೀತಿಯೇಹೆಚ್ಚಾಗಿದೆ. ದೇಶದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಲ್ಲಿ…

33 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಜೈಲೇ ಮೊದಲ ಪಾಠ ಶಾಲೆ! ಕೊಲೆ ಆರೋಪಿಯೇ ಪ್ರಥಮ ಗುರು!

ಪಂಜು ಗಂಗೊಳ್ಳಿ ಜೈಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಲು ಮಹತ್ವದ ಯೋಜನೆ ರಾಜೇಶ್ ಕುಮಾರ್ ಯಾವತ್ತೂ ಶಾಲೆಯ ಮಟ್ಟಿಲು ಹತ್ತಿದವನಲ್ಲ. ಹಾಗಾಗಿ,…

54 mins ago

ನಾಳೆ ಶ್ರೀ ಅಯ್ಯಪ್ಪ ಕ್ಷೇತ್ರದ ಮುಖಮಂಟಪ ಲೋಕಾರ್ಪಣೆ

ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…

4 hours ago

‘ದೇಸಿ ಬೀಜಗಳನ್ನು ಉಳಿಸಿದರೆ ವಿಷಮುಕ್ತ ಆಹಾರ ನೀಡಲು ಸಾಧ್ಯ’

ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…

4 hours ago