ಅಂಕಣಗಳು

ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ತೃತೀಯ ಶಕ್ತಿ ಕಣ್ಮರೆ?

ಆರ್.ಟಿ.ವಿಠಲಮೂರ್ತಿ

ಮು೦ಬರುವ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ತೃತೀಯ ಶಕ್ತಿ ಕಣ್ಮರೆಯಾಗಲಿದೆಯೇ? ಹಾಗೆಂಬುದೊಂದು ಪ್ರಶ್ನೆ ರಾಜಕೀಯ ವಲಯಗಳಲ್ಲಿ ಪದೇ ಪದೇ ಕೇಳಿ ಬರತೊಡಗಿದೆ. ಅಂದ ಹಾಗೆ ಇಂತಹ ಪ್ರಶ್ನೆ ಕೇಳಿ ಬರಲೂ ಕಾರಣವಿದೆ. ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮುಖ್ಯ ಕಾರಣ.

ಗಮನಿಸಬೇಕಾದ ಸಂಗತಿ ಎಂದರೆ ಕರ್ನಾಟಕದ ನೆಲೆಯಲ್ಲಿ ತೃತೀಯ ಶಕ್ತಿಯ ಹೆಸರನ್ನು ಉಳಿಸಿಕೊಂಡು ಬಂದಿದ್ದ ಪಕ್ಷವೆಂದರೆ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಗಳಿಸಿದ ಮೇಲೆ ಜಾತ್ಯತೀತ ಜನತಾದಳ ಭ್ರಮನಿರಸನಗೊಂಡಿದೆ.

ವಸ್ತುಸ್ಥಿತಿಯೆಂದರೆ, ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಬಿಂಬಿಸುವ ಕೆಲಸ ಹಳೆ ಮೈಸೂರು ಭಾಗದಲ್ಲಿ ವ್ಯಾಪಕವಾಗಿ ನಡೆದ ಪರಿಣಾಮವಾಗಿ ಗಣನೀಯ ಪ್ರಮಾಣದ ಒಕ್ಕಲಿಗ ಮತದಾರರು ಕಾಂಗ್ರೆಸ್ ಪಕ್ಷದ ಕಡೆ ವಾಲಿಕೊಂಡರು. ಮಾಹಿತಿಗಳ ಪ್ರಕಾರ, ಹಳೆ ಮೈಸೂರು ಭಾಗದಲ್ಲಿ ಪ್ರಭಾವಿಯಾಗಿರುವ ಜಾ.ದಳದ ತೆಕ್ಕೆಯಲ್ಲಿದ್ದ ಗಣನೀಯ ಪ್ರಮಾಣದ ಮತಗಳು ಕಾಂಗ್ರೆಸ್ ಕಡೆ ಪಲ್ಲಟವಾಗಲುಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಬಿಂಬಿಸಿದ್ದೇ ಕಾರಣ.

ಪರಿಣಾಮ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ರೂಪುಗೊಳ್ಳುತ್ತದೆ, ಆ ಮೂಲಕ ಬಿಜೆಪಿ ಜತೆ ಸೇರಿ ತಾವು ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರ ದೇವೇಗೌಡ-ಕುಮಾರಸ್ವಾಮಿ ಅವರಿಗೆ ಇತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿದ್ದಷ್ಟೇ ಅಲ್ಲ, ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಕೇವಲ ಹತ್ತೊಂಬತ್ತು ಸೀಟುಗಳನ್ನು ಗೆಲ್ಲುವಷ್ಟರಲ್ಲಿ ಉಸ್ಸಪ್ಪಾ ಅನ್ನಬೇಕಾಯಿತು. ವಸ್ತುಸ್ಥಿತಿ ಎಂದರೆ ಈ ಬೆಳವಣಿಗೆಯನ್ನು ಸಹಿಸಲಾಗದ ಕುಮಾರಸ್ವಾಮಿ ಶುರುವಿನಿಂದಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದರು.

ಒಂದಲ್ಲ, ಎರಡಲ್ಲ, ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಕಾಂಗ್ರೆಸ್ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಕೆಲಸಕ್ಕೆ ಕೈ ಹಾಕಿದ ಕುಮಾರಸ್ವಾಮಿ ಅವರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೇನೆಂದರೆ, ಕರ್ನಾಟಕದ ನೆಲೆಯಲ್ಲಿ ಜಾ.ದಳ ಸ್ವಯಂ ಆಗಿ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸುವುದು ಕಷ್ಟ ಎಂಬುದು.

ಯಾವಾಗ ಈ ವಿಷಯ ಸ್ಪಷ್ಟವಾಯಿತೋ ಇದಾದ ನಂತರ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಹತ್ತಿರವಾದರು. ಅಷ್ಟೇ ಅಲ್ಲ, ಬಿಜೆಪಿಯನ್ನು ಕೋಮುವಾದಿ ಎಂದು ಹಳಿಯುತ್ತಾ ಅದರಿಂದ ಅಂತರ ಕಾಪಾಡಿಕೊಳ್ಳುತ್ತಾ ಬಂದ ತಮ್ಮ ತಂದೆ ಹೆಚ್.ಡಿ.ದೇವೇಗೌಡರ ಮನ ಒಲಿಸಿದರು.

ರಾಜಕೀಯವಾಗಿ ಇವತ್ತು ತಮ್ಮ ಪಕ್ಷಕ್ಕೆ ಕಾಂಗ್ರೆಸ್ ಮತ್ತು ತೃತೀಯ ಶಕ್ತಿಗಳು ಅಪಾಯ ತಂದೊಡ್ಡಬಲ್ಲವೇ ಹೊರತು, ಬಿಜೆಪಿಯಲ್ಲ. ಹೀಗಾಗಿ ನಮ್ಮ ಉಳಿವಿಗಾಗಿ ನಾವು ಬಿಜೆಪಿ ಜತೆ ಕೈ ಜೋಡಿಸುವುದು ಅನಿವಾರ್ಯ ಎಂದು ಅವರು ಹೇಳಿದ ಮಾತು ದೇವೇಗೌಡರನ್ನು ಕಟ್ಟಿ ಹಾಕಿದ್ದು ನಿಜ. ಇದಾದ ನಂತರ ಹತ್ತಿರವಾಗುತ್ತಾ ಹೋದ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ಸಖ್ಯ ಇವತ್ತು ಯಾವ ಹಂತಕ್ಕೆ ಬಂದಿದೆ ಎಂದರೆ, ಕರ್ನಾಟಕದ ನೆಲೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಮೊದಲು ಚರ್ಚಿಸುವುದು ಕುಮಾರಸ್ವಾಮಿ ಅವರ ಬಳಿ, ಕಳೆದ ಚುನಾ ವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲವೆಂದು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿದ್ದ ಜಗದೀಶ್ ಶೆಟ್ಟರ್ ಅವರು ಕಳೆದ ವಾರ ಬಿಜೆಪಿಗೆ ಮರಳಿದ್ದರ ಹಿಂದೆ ಪ್ರಮುಖವಾಗಿ ಕೆಲಸ ಮಾಡಿದವರು ಕುಮಾರಸ್ವಾಮಿ.

ಜಗದೀಶ್ ಶೆಟ್ಟರ್ ಅವರ ಉಪಸ್ಥಿತಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಮಟ್ಟದ ಲಾಭಕ್ಕೆ ಕಾರಣವಾಯಿತು ಎಂಬುದನ್ನರಿತಿದ್ದ ಕುಮಾರಸ್ವಾಮಿ ಅವರು, ಬಿಜೆಪಿಯ ಕೇಂದ್ರ ನಾಯಕರ ಜತೆ ಚರ್ಚಿಸಿ,
ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿ ಪಾಳೆಯಕ್ಕೆ ಕರೆ ತರುವ ಅನಿವಾರ್ಯತೆಯ ಬಗ್ಗೆ ವಿವರಿಸಿದ್ದಾರೆ.

ಕುಮಾರಸ್ವಾಮಿ ಅವರು ಹೇಳಿದ್ದನ್ನು ಕೇಳಿದ ಬಿಜೆಪಿಯ ವರಿಷ್ಠರು, ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಲು ಏನು ಮಾರ್ಗೋಪಾಯಗಳಿವೆಯೋ ಅದನ್ನು ಮಾಡಿ ಎಂದಿದ್ದಾರೆ. ಅವರು ಹೀಗೆ ಒಪ್ಪಿಗೆ ನೀಡಿದ ನಂತರ ಜಗದೀಶ್ ಶೆಟ್ಟರ್ ಅವರನ್ನು ಸಂಪರ್ಕಿಸಿದ ಕುಮಾರಸ್ವಾಮಿ; ಅವರನ್ನು ಮರಳಿ ಬಿಜೆಪಿಗೆ ಸೇರಿಸುವ ವಿಷಯದಲ್ಲಿ ಯಶಸ್ವಿಯಾಗಿದ್ದಾರೆ.

ಇದು ಜಗದೀಶ್ ಶೆಟ್ಟರ್ ಅವರೊಬ್ಬರ ವಿಷಯದಲ್ಲಷ್ಟೇ ಅಲ್ಲ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೋದ, ಬಿಜೆಪಿಯ ವಿರುದ್ಧ ಹೋರಾಡಿದ ಮತ್ತು ಬಿಜೆಪಿಯಲ್ಲಿದ್ದರೂ ರಾಜ್ಯ ನಾಯಕತ್ವದ ವಿರುದ್ಧ ತಿರುಗಿ ಬಿದ್ದವರ ಮನಸ್ಸನ್ನೂ ಒಲಿಸಿರುವುದು ನಿಜ. ಅರ್ಥಾತ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸೋಲಿಸಲು ಏನು ಮಾಡಬೇಕೋ ಅದನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಹೀಗೆ ಕರ್ನಾಟಕದ ನೆಲೆಯಲ್ಲಿ ಬಿಜೆಪಿಯ ಶಕ್ತಿ ಮರಳಲು ನೆರವು ನೀಡುತ್ತಿರುವ ಕುಮಾರಸ್ವಾಮಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಮೆಚ್ಚಿನ ವ್ಯಕ್ತಿಯಾಗಿರುವುದು ಸ್ಪಷ್ಟ.

ಇದು ಯಾವ ಮಟ್ಟದಲ್ಲಿದೆ ಎಂದರೆ ದಿಲ್ಲಿ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ರಾಜಕೀಯ ಸಂಚಲನವಾಗಿ ಬಿಜೆಪಿ-ಜಾ.ದಳ ಮೈತ್ರಿಕೂಟ ಮರಳಿ ಮೇಲೆದ್ದು ನಿಲ್ಲುವ ಲಕ್ಷಣಗಳು ಕಾಣಿಸಿಕೊಂಡರೆ ಅದರ ಮುಂಚೂಣಿಯಲ್ಲಿ ಕುಮಾರಸ್ವಾಮಿ ನಿಂತಿರುತ್ತಾರೆ. ಇಷ್ಟಾದ ನಂತರ ಕರ್ನಾಟಕದ ನೆಲೆಯಲ್ಲಿ ಜಾ.ದಳ ಪಕ್ಷವನ್ನು ಎಷ್ಟು ದಿನ ಅಂತ ಸ್ವತಂತ್ರವಾಗಿ ಮುಂದುವರಿಸಲು ಸಾಧ್ಯ? ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯ ನಂತರ ಯಾವುದೇ ಸಂದರ್ಭದಲ್ಲಿ ಜಾ.ದಳ ಪಕ್ಷ ಬಿಜೆಪಿಯಲ್ಲಿ ವಿಲೀನವಾಗುವುದು ಖಚಿತ.

ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯ ನಡೆದ ಈ ಸಂದರ್ಭದಲ್ಲಿ ಹಳೆ ಮೈಸೂರು ಭಾಗದ ಹಳ್ಳಿ ಹಳ್ಳಿಗಳಲ್ಲಿ ಭಗವಾಧ್ವಜ ಹಾರಾಡಿತು. ಇದಕ್ಕೆ ಬಿಜೆಪಿ ಎಷ್ಟು ಕಾರಣವೋ ಅದಕ್ಕಿಂತ ಜಾ.ದಳ ಮುಖ್ಯ ಕಾರಣ. ಅರ್ಥಾತ್, ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಶಕ್ತಿ ಹಳೆ ಮೈಸೂರು ಭಾಗದಲ್ಲಿ ರಾರಾಜಿಸತೊಡಗಿದೆ. ಯಾವ ನೆಲೆಯಿಂದ ನೋಡಿದರೂ ಇದು ರಾಜ್ಯ ರಾಜಕಾರಣ ದ್ವಿಕೋನ ನೆಲೆಯ ಮೇಲೆ ನಿಲ್ಲುವ ಸ್ಪಷ್ಟ ಸೂಚನೆ.
ಅಂದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವಣ ನೇರ ಹಣಾಹಣಿಗೆ ವೇದಿಕೆಯಾಗಲಿದೆ. ಅಷ್ಟೇ ಅಲ್ಲ, ಆ ಮೂಲಕ ಸುದೀರ್ಘ ಕಾಲದಿಂದ ರಾಜ್ಯ ರಾಜಕೀಯದಲ್ಲಿ ಮೆರೆದಿದ್ದ ತೃತೀಯ ಶಕ್ತಿ ವಿಧ್ಯುಕ್ತವಾಗಿ ಕಣ್ಮರೆಯಾಗುವ ಸಾಧ್ಯತೆ ಇದೆ. ಒಂದು ದೃಷ್ಟಿಯಿಂದ ಇದು ಖೇದದ ವಿಷಯವಾದರೂ ಸದ್ಯದ ಸ್ಥಿತಿಯಲ್ಲಿ ರಾಜಕಾರಣ ಪಡೆಯುತ್ತಿರುವ ಅನೂಹ್ಯ ತಿರುವುಗಳ ಸಂಕೇತವೂ ಹೌದು. ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಇಷ್ಟಪಡದ ಮತದಾರರು ತೃತೀಯ ಶಕ್ತಿಯ ರೂಪದಲ್ಲಿ ನೆಲೆಯಾಗಿದ್ದ ಜನತಾಪರಿವಾರವನ್ನು ಬೆಂಬಲಿಸುತ್ತಿದ್ದರು. ಆದರೆ ಜನತಾ ಪರಿವಾರದ ಮೂಲ ಶಕ್ತಿ ಅನ್ನಿಸಿಕೊಂಡಿದ್ದ ಒಕ್ಕಲಿಗರು ಮತ್ತು ಲಿಂಗಾಯತರು ರಾಜಕೀಯವಾಗಿ ಬೇರೆ ನೆಲೆಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ ಪರಿಣಾಮವಾಗಿ, ಬಿಜೆಪಿ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿತ್ತು.

ಲಿಂಗಾಯತರನ್ನು ಮೂಲ ಬಲವಾಗಿಸಿಕೊಂಡು ಕರ್ನಾಟಕದ ನೆಲೆಯಲ್ಲಿ ಹಲವು ಬಾರಿ ಅಧಿಕಾರ ಹಿಡಿದ ಬಿಜೆಪಿ, ಮುಂದಿನ ದಿನಗಳಲ್ಲಿ ಲಿಂಗಾಯತರ ಜತೆ ಒಕ್ಕಲಿಗರ ಬೆಂಬಲವನ್ನೂ ಪಡೆದು ಇನ್ನಷ್ಟು ದೊಡ್ಡ ಶಕ್ತಿಯಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಜಾ.ದಳ ನಾಯಕ ಕುಮಾರಸ್ವಾಮಿ ಇದಕ್ಕೆ ಶಕ್ತಿ ತುಂಬುತ್ತಿರುವುದು ಸದ್ಯದ ವಿಶೇಷ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago