ಅಂಕಣಗಳು

ನೆದರ್‌ಲ್ಯಾಂಡ್ಸ್, ಅರ್ಜೆಂಟೈನಾದಲ್ಲಿ ರಾಜಕೀಯ ಭೂಕಂಪ

  • ಡಿ. ವಿ ರಾಜಶೇಖರ

ನೆದರ್‌ಲ್ಯಾಂಡ್ಸ್ (ಡಚ್) ಮತ್ತು ಅರ್ಜೆಂಟೈನಾದ ಚುನಾವಣೆ ಫಲಿತಾಂಶಗಳು ಯುರೋಪ್‌ನಲ್ಲಿ ಆಘಾತದ ಅಲೆಯನ್ನು ಎಬ್ಬಿಸಿವೆ. ಧಾರ್ಮಿಕ ಸಹನಶೀಲತೆಗೆ ಹೆಸರಾದ ನೆದರ್‌ಲ್ಯಾಂಡ್ಸ್ ನಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಬಲಪಂಥೀಯ, ಇಸ್ಲಾಂ ವಿರೋಧಿ ಗೀರ್ಟ್ ವೈಲ್ಡರ‍್ಸ್ ನಾಯಕತ್ವದ ಫ್ರೀಡಮ್ ಪಾರ್ಟಿ ಹೆಚ್ಚು ಸ್ಥಾನಗಳನ್ನು ಗಳಿಸಿ ಆಶ್ಚರ್ಯ ಹುಟ್ಟಿಸಿದ್ದರೆ ಅರ್ಜೆಂಟೈನಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬಲಪಂಥೀಯ ಜೂನಿಯರ್ ಟ್ರಂಪ್ ಎಂದೇ ಹೆಸರಾಗಿರುವ ಜೇವಿಯರ್ ಮಿಲಿ ಅತಿ ಹೆಚ್ಚು ಮತಗಳಿಸುವ ಮೂಲಕ ಸಾಂಪ್ರದಾಯಿಕ ರಾಜಕೀಯಕ್ಕೆ ಆಘಾತವನ್ನೇ ಉಂಟು ಮಾಡಿದ್ದಾರೆ.ನೆದರ್‌ಲ್ಯಾಂಡ್ಸ್‌ನಲ್ಲಿ ಗೀರ್ಟ್ ವೈಲ್ಡರ‍್ಸ್‌ನ ಫ್ರೀಡಮ್ ಪಾರ್ಟಿ ಒಟ್ಟು 150 ಸ್ಥಾನಗಳಲ್ಲಿ ಅತಿಹೆಚ್ಚು ೩೭ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ಬದಲಾವಣೆಗೆ ದಾರಿಮಾಡಿಕೊಟ್ಟಿದೆ. ವಾಸ್ತವವಾಗಿ ತಮ್ಮ ಪಕ್ಷ ಇಷ್ಟೊಂದು ಸ್ಥಾನಗಳನ್ನು ಗೆಲ್ಲುತ್ತದೆಂದು ಸ್ವತಃ ವೈಲ್ಡರ‍್ಸ್ ಕೂಡ ಊಹಿಸಿರಲಿಲ್ಲ. ಫಲಿತಾಂಶ ನೋಡಿ ವೈಲ್ಡರ‍್ಸ್‌ಗೇ ಅಚ್ಚರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಅವರ ಗೆಲುವಿನಿಂದ ಯುರೋಪಿನ ಬಲಪಂಥೀಯ ನಾಯಕರು ರೋಮಾಂಚನಗೊಂಡು ನಾ ಮುಂದು ತಾ ಮುಂದು ಎಂದು ವೈಲ್ಡರ‍್ಸ್‌ಗೆ ಶುಭಾಶಯಗಳನ್ನು ಕೋರಿದ್ದಾರೆ. ಮುಸ್ಲಿಮರ ವಲಸೆಯನ್ನು ಕಟುವಾಗಿ ವಿರೋಧಿಸುತ್ತ ಬಂದವರು ವೈಲ್ಡರ‍್ಸ್. ಕುರಾನನ್ನು ನಿಷೇಧಿಸಬೇಕು, ಎಲ್ಲ ಮಸೀದಿಗಳನ್ನು ಮುಚ್ಚಿಸಬೇಕು, ಮುಸ್ಲಿಮರು ದೇಶಕ್ಕೆ ವಲಸೆ ಬರುವುದನ್ನು ತಪ್ಪಿಸಬೇಕು, ಮುಸ್ಲಿಮರ ವಲಸೆ ಎಂದರೆ ಭಯೋತ್ಪಾದನೆಯ ವಲಸೆ ಎಂದೇ ವರ್ಣಿಸುತ್ತಿದ್ದವರು ವೈಲ್ಡರ‍್ಸ್. ಜನಾಂಗ ಜನಾಂಗಗಳ ನಡುವೆ ದ್ವೇಷ ಬಿತ್ತುವ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಬ್ರಿಟನ್ ಸೇರಿದಂತೆ ಹಲವು ದೇಶಗಳು ಅವರ ಪ್ರವೇಶವನ್ನು ನಿಷೇಽಸಿದ್ದವು.

ಆದರೆ ಅವರೇನೂ ಬದಲಾಗಲಿಲ್ಲ. ತಮ್ಮ ಈ ದ್ವೇಷಪೂರಿತ ಅಭಿಪ್ರಾಯಗಳನ್ನೇ ಪಕ್ಷದ ನೀತಿಗಳೆಂದು ಚುನಾವಣೆಗಳಲ್ಲಿ ಘೋಷಿಸಿದ್ದರು. ತಾವು ಅಽಕಾರಕ್ಕೆ ಬಂದರೆ ಈ ನೀತಿಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಚುನಾವಣೆ ಕಣದಲ್ಲಿ ಅವರನ್ನು ಯಾರೂ ಗೆಲ್ಲುವ ಅಭ್ಯರ್ಥಿಯೆಂದು ಭಾವಿಸಿರಲಿಲ್ಲ. ಆದರೆ ಚುನಾವಣೆ ಪ್ರಚಾರ ಬಿಸಿ ಹೆಚ್ಚಿದಂತೆ ನಡೆದ ಸಮೀಕ್ಷೆಗಳಲ್ಲಿ ಮತದಾರರು ಅವರ ಪಕ್ಷಕ್ಕೆ ಹೆಚ್ಚು ಒಲವು ತೋರುತ್ತಿರುವುದು ಬಹಿರಂಗವಾಯಿತು. ಆದರೆ ಇತರ ರಾಜಕೀಯ ಪಕ್ಷಗಳು ಸಮೀಕ್ಷೆಗಳನ್ನು ತಮಾಷೆ ಮಾಡಿದವು. ಅವರ ಪಕ್ಷದ ನೀತಿಗಳನ್ನು ಒಪ್ಪುವುದಿಲ್ಲ ಎಂದು ಇತರ ರಾಜಕೀಯ ಪಕ್ಷಗಳ ನಾಯಕರು ಘೋಷಿಸಿದರು. ದೇಶದ ಕಾನೂನಿನ ಪ್ರಕಾರ ಮಸೀದಿಗಳನ್ನು ಮುಚ್ಚುವುದು, ಕುರಾನ್ ನಿಷೇಧಿಸುವುದು ಸಾಧ್ಯವಿಲ್ಲ ಎನ್ನುವುದು ಅವರ ನಿಲುವಾಗಿತ್ತು. ದೇಶದ ರಾಜಕೀಯ ವಾತಾವರಣ ಬದಲಾಗುತ್ತಿರುವುದನ್ನು ಗಮನಿಸಿದ ವೈಲ್ಡರ‍್ಸ್ ತಮ್ಮ ಚುನಾವಣಾ ಪ್ರಚಾರದಲ್ಲಿ ಮುಸ್ಲಿಮ್ ವಿರೋಧವನ್ನು ಸ್ವಲ್ಪ ಕಡಿಮೆ ಮಾಡಿದರು. ತಾವು ಏನೇ ಮಾಡಿದರೂ ದೇಶದ ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಹೇಳುತ್ತ ಬಂದರು. ಬಹುಶಃ ಬದಲಾದ ಅವರ ನಿಲುವುಗಳು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದಂತೆ ಕಾಣುತ್ತದೆ. 150 ಸ್ಥಾನಗಳ ಪಾರ್ಲಿಮೆಂಟಿನಲ್ಲಿ ೩೭ ಸ್ಥಾನಗಳನ್ನು ಗೆದ್ದಿರುವ ವೈಲ್ಡರ‍್ಸ್ ಅಧಿಕಾರಕ್ಕೆ ಬರಬೇಕಾದರೆ ಇತರ ಪಕ್ಷಗಳ ನೆರವು ಅನಿವಾರ್ಯ. ಈ ಅನಿವಾರ್ಯತೆಯನ್ನು ಮನಗಂಡು ಈಗಾಗಲೇ ತಮ್ಮ ನಿಲುವುಗಳನ್ನು ಅವರು ಸಡಿಲಗೊಳಿಸುವುದಾಗಿ ಹೇಳಿದ್ದಾರೆ.

ವೈಲ್ಡರ‍್ಸ್ ಮುಸ್ಲಿಮ್ ವಿರೋಧಿ ಎನ್ನುವುದು ಒಂದು ಕಡೆಯಾದರೆ ಅವರು ಮತ್ತೊಂದು ಕಡೆ ಏಕ ಯುರೋಪ್ ವಿರೋಧಿ. ಹಾಗೆ ನೋಡಿದರೆ ನೆದರ್‌ಲ್ಯಾಂಡ್ಸ್ ಏಕ ಯುರೋಪಿನ ಸಂಸ್ಥಾಪಕ ದೇಶಗಳಲ್ಲಿ ಒಂದು. ಏಕ ಯುರೋಪಿ ನಿಂದ ತಮ್ಮ ದೇಶಕ್ಕೆ ಲಾಭವಿಲ್ಲ, ನಷ್ಟವೇ ಜಾಸ್ತಿ ಎಂದು ವಾದಿಸುತ್ತಾರೆ ವೈಲ್ಡರ‍್ಸ್. ಚುನಾವಣೆ ಫಲಿತಾಂಶಗಳ ನಂತರ ಈ ಅಭಿಪ್ರಾಯವೂ ಸ್ವಲ್ಪ ಬದಲಾಗಿದೆ. ಏಕ ಯುರೋಪ್ ಒಕ್ಕೂಟದಿಂದ ಹೊರಬರುವ ವಿಚಾರದಲ್ಲಿ ಜನಮತಗಣನೆ ನಡೆಸುವ ಬಗ್ಗೆ (ನೆಕ್ಸಿಟ್) ಯೋಚಿಸಲಾಗುವುದು ಎಂದು ಹೇಳುತ್ತಿದ್ದಾರೆ. ಸ್ಲಾವಕಿಯಾ ಮತ್ತು ಹಂಗೇರಿ ದೇಶಗಳು ಉಕ್ರೇನ್‌ಗೆ ನೆರವು ನೀಡುವುದನ್ನು ವಿರೋಧಿಸುತ್ತಿದ್ದು ಅದನ್ನು ವೈಲ್ಡರ‍್ಸ್ ಬೆಂಬಲಿಸುತ್ತಿದ್ದಾರೆ. ಬದಲಾದ ರಾಜಕೀಯ ವಾತಾವರಣದಲ್ಲಿ ಇತರ ರಾಜಕೀಯ ಪಕ್ಷಗಳು ವೈಲ್ಡರ‍್ಸ್‌ಗೆ ಬೆಂಬಲ ನೀಡುವ ಸಾಧ್ಯತೆ ಕಾಣುತ್ತಿದೆ. ಇತರ ಪಕ್ಷಗಳ ಜೊತೆ ರಾಜಿ ಮಾಡಿಕೊಂಡು ಸರ್ಕಾರ ರಚಿಸಲು ವೈಲ್ಡರ‍್ಸ್ ಸಿದ್ಧವಿದ್ದಾರೆ.

ಅತ್ಯಂತ ಸಹನಶೀಲ ದೇಶ ಎಂದೇ ಹೆಸರಾಗಿರುವ ನೆದರ್‌ಲ್ಯಾಂಡ್ಸ್ ಪುಟ್ಟ ದೇಶ. ಜನಸಂಖ್ಯೆ ಸುಮಾರು ಎರಡು ಕೋಟಿ. ಯುರೋಪಿನ ಅತಿ ಶ್ರೀಮಂತ ದೇಶಗಳಲ್ಲಿ ನೆದರ್‌ಲ್ಯಾಂಡ್ಸ್ ಕೂಡ ಒಂದು. ಇಡೀ ಯುರೋಪ್ ವಲಸೆ ಸಮಸ್ಯೆಯನ್ನು ಎದುರಿಸುತ್ತಿದೆ.

ನೆದರ್‌ಲ್ಯಾಂಡ್ಸ್‌ನಲ್ಲಿ ಮುಸ್ಲಿಮರ ಸಂಖ್ಯೆ ಎಂಟು ಲಕ್ಷ ಇರಬಹುದು. (ಎರಡು ಲಕ್ಷ ಭಾರತೀಯರೂ ಅಲ್ಲಿದ್ದಾರೆ). ಬಡ ಮುಸ್ಲಿಮ್ ದೇಶಗಳ ಜನರು ಇತ್ತೀಚಿನ ವರ್ಷಗಳಲ್ಲಿ ಈ ದೇಶಕ್ಕೆ ಬರತೊಡಗಿರುವುದು ಸಮಸ್ಯೆಗೆ ಕಾರಣವಾಗಿದೆ. ಸಿರಿಯಾ, ಟರ್ಕಿ, ಯೆಮನ್, ಸುಡಾನ್, ಮೊರಕ್ಕೊ, ಎರಿಟ್ರಯಾ ದೇಶಗಳ ಜನ ಇಲ್ಲಿ ಮೊದಲಿನಿಂದಲೂ ಉದ್ಯೋಗ ಅರಸಿ ಬಂದು ನೆಲೆಸಿದ್ದಾರೆ. ಹಾಗೆ ನೋಡಿದರೆ ಹಿಂದೆ ಉದ್ಯೋಗಳಿಗಾಗಿ ಸರ್ಕಾರವೇ ವಿವಿಧ ದೇಶಗ ಜನರನ್ನು ಆಹ್ವಾನಿಸಿತ್ತು. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ 22 ಸಾವಿರ ಮಂದಿ ವಲಸೆ ಬಂದಿದ್ದಾರೆ. ಈ ಪೈಕಿ ಮುಸ್ಲಿಮ್ ದೇಶಗಳ ಜನರೇ ಹೆಚ್ಚು. ಹೀಗಾಗಿಯೇ ದೇಶದಲ್ಲಿ ಇಸ್ಲಾಮ್‌ವಿರೋಧಿ ಭಾವನೆ ಬೆಳೆದಿದೆ. ಆದರೆ ದೇಶದ ಎಲ್ಲರೂ ಮುಸ್ಲಿಮ್ ವಿರೋಧಿಗಳಾಗಿದ್ದಾರೆ ಎಂದಲ್ಲ. ದೇಶದ ಬಹುಪಾಲು ಜನ ಈಗಲೂ ಧಾರ್ಮಿಕ ಸಹನಶೀಲರಾಗಿದ್ದಾರೆ.ಅರ್ಜೆಂಟೈನಾದಲ್ಲಿ ರಾಜಕೀಯ ಆಘಾತ: ಅರ್ಜೆಂಟೈನಾ ಎಂದರೆ ನೆನಪಿಗೆ ಬರುವುದು ಜನಪ್ರಿಯ ಫುಟ್ಬಾಲ್ ಆಟಗಾರ ಡಿಯಾಗೋ ಮೆರಡೋನಾ, ಲಿಯೊನೆಲ್ ಮೆಸ್ಸಿ. ಈ -ಟ್‌ಬಾಲ್ ಹುಚ್ಚಿನ ದೇಶದಲ್ಲಿ ಈಗ ರಾಜಕೀಯ ಭೂಕಂಪವೇ ಆಗಿದೆ. ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಉಗ್ರಬಲಪಂಥೀಯ ಜೇವಿಯರ್ ಮಿಲಿ ತಮ್ಮ ಸಮೀಪದ ಸ್ಪಽ ಎಡಪಂಥೀಯ ಸೆರ್ಜಿಯೋ ಮಸ್ಸಾ ಅವರನ್ನು ಹಿಂದೆ ತಳ್ಳಿ ಗೆಲುವು ಸಾಧಿಸಿದ್ದಾರೆ. ಮಿಲಿ ಅವರ ಗೆಲುವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬಲ್ಸನಾರೋ ಅವರು ಸ್ವಾಗತಿಸಿದ್ದಾರೆ. ಮಿಲಿ ಅವರು ಅರ್ಜೆಂಟೈನಾವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸುತ್ತಾರೆ ಎನ್ನುವ ಆಶಾಭಾವನೆಯನ್ನು ಟ್ರಂಪ್ ವ್ಯಕ್ತ ಮಾಡಿದ್ದಾರೆ.

ಆರ್ಥಿಕ ತಜ್ಞರಾಗಿರುವ ಮಿಲಿ ಅವರನ್ನು ಅವರ ವಿರೋಧಿಗಳು ‘ಹುಚ್ಚ’ ಎಂದೇ ತಮಾಷೆ ಮಾಡುತ್ತಿದ್ದರು. ದೇಶದ ಅರ್ಥವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಅವರು ಚುನಾವಣೆ ಪ್ರಚಾರ ಕಾಲದಲ್ಲಿ ಹೇಳುತ್ತ ಬಂದರು. ದೇಶದ ಕರೆನ್ಸಿ ಪೆಸ್ಸೋ ಅನ್ನು ರದ್ದು ಮಾಡಿ ಅದರ ಬದಲಾಗಿ ಅಮೆರಿಕ ಡಾಲರ್ ಅನ್ನು ದೇಶದ ಕರೆನ್ಸಿ ಮಾಡುವುದಾಗಿ ಹೇಳುತ್ತ ಬಂದಿದ್ದಾರೆ. ದೇಶದ ಸೆಂಟ್ರಲ್ ಬ್ಯಾಂಕ್ ಅನಗತ್ಯವಾಗಿ ಪೆಸ್ಸೋ ಪ್ರಿಂಟ್ ಮಾಡುತ್ತಿದ್ದು ಅದನ್ನು ತಡೆದು ಹಣದುಬ್ಬರವನ್ನು ಹಿಡಿತಕ್ಕೆ ತರುವುದಾಗಿ ಹೇಳಿದ್ದಾರೆ. ಸರ್ಕಾರಿ ನೌಕರರ ಸಂಖ್ಯೆ ಕಡಿಮೆ ಮಾಡಲಾಗುವುದು.

ಸಂಸ್ಕೃತಿ, ಮಹಿಳಾ ಕಲ್ಯಾಣ, ಆರೋಗ್ಯ, ಶಿಕ್ಷಣ ಮುಂತಾದ ಖಾತೆಗಳನ್ನು ಮುಚ್ಚುವುದಾಗಿ ಹೇಳಿರುವ ಅವರು ದೇಶದ ಕೈಗಾರಿಕಾ ವಲಯವನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದಾರೆ. ವಿಚಿತ್ರ ಎಂದರೆ ಗರ್ಭಪಾತ ನಿಷೇಽಸುವುದಾಗಿ ಮತ್ತು ಮನುಷ್ಯನ ಅಂಗಾಂಗ ಮಾರಾಟ ಕಾನೂನನ್ನು ಸಡಿಲಗೊಳಿಸುವುದಾಗಿ ಅವರು ಹೇಳಿರುವುದು. ಎಲ್ಲ ದೇಶಗಳಲ್ಲಿ ಗನ್ ಲೈಸೆನ್ಸ್ ನಿಯಮಗಳನ್ನು ಬಿಗಿಗೊಳಿಸುತ್ತಿದ್ದರೆ ಆ ನಿಯಮಗಳನ್ನು ಸಡಿಲಗೊಳಿಸುವುದಾಗಿ ಹೇಳಿರುವುದು ಅಚ್ಚರಿ ಹುಟ್ಟಿಸಿದೆ. ಗೆಲುವಿನಿಂದ ಬೀಗುತ್ತಿರುವ ಮಿಲಿ ತಮ್ಮ ಉದ್ದೇಶಿತ ನೀತಿಗಳನ್ನು ಯಾವುದೇ ತಡೆ ಇಲ್ಲದೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಇದೇನೇ ಇದ್ದರೂ ಅವರ ಪಕ್ಷಕ್ಕೆ ಪಾರ್ಲಿಮೆಂಟಿನಲ್ಲಿ ಬಹುಮತ ಸಿಕ್ಕಿಲ್ಲ. ಹೀಗಾಗಿ ಅವರು ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬೇಕಾಗುತ್ತದೆ. ಅದಕ್ಕೆ ಮಿಲಿ ಸಿದ್ಧವಿರುವಂತೆ ಕಾಣುತ್ತದೆ.

ಒಂದು ಕಾಲದಲ್ಲಿ ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದಾಗಿದ್ದ ಅರ್ಜೆಂಟೈನಾ ಈಗ ಬಡ ದೇಶ. ದೇಶದ ಅರ್ಧಕ್ಕಿಂತ ಹೆಚ್ಚು ಜನ ಬಡವರು. ಹಣದುಬ್ಬರದ ಪ್ರಮಾಣ ಶೇ.140 ದೇಶ ಆಹಾರ, ಔಷಧಗಳ ಅಭಾವವನ್ನು ಎದುರಿಸುತ್ತಿದೆ. ಮಿಲಿ ಆರ್ಥಿಕ ತಜ್ಞರೇ ಆದರೂ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ದೇಶ 22 ಬಾರಿ ಐಎಂಎಫ್‌ನಿಂದ ಸಾಲ ಪಡೆದಿದೆ. ಕೆಲವು ವರ್ಷಗಳ ಹಿಂದೆಯಷ್ಟೇ 34 ಬಿಲಿಯನ್ ಡಾಲರ್ ಸಾಲ ಪಡೆದಿದೆ. ದೇಶವನ್ನು ಆರ್ಥಿಕವಾಗಿ ಸುಸ್ಥಿತಿಗೆ ತರಲು ಸಾಧ್ಯವಾಗಿಲ್ಲ. ಮಿಲಿ ಅವರಿಂದ ಸಾಧ್ಯವೇ ಎಂಬುದನ್ನು ಕಾದು ನೋಡಬೇಕು.

lokesh

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

33 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago