ಅಂಕಣಗಳು

ಸಹಕಾರ ವಲಯದಲ್ಲಿ ಹೊಸ ಗಾಳಿ ಬೀಸಬೇಕು

ಸರ್ಕಾರ ಇತ್ತೀಚೆಗೆ ‘ರಾಷ್ಟ್ರೀಯ ಸಹಕಾರ ನೀತಿ ೨೦೨೫ ’ ನ್ನು ಪ್ರಕಟಿಸಿದೆ. ಇದು ಮುಂದಿನ ೨೦ ವರ್ಷಗಳವರೆಗೆ ಜಾರಿಯಲ್ಲಿ ಇರುತ್ತದೆ ಎಂದೂ ಹೇಳಲಾಗಿದೆ. ಇದರ ಉದ್ದೇಶವೇ ಈ ರಂಗದಲ್ಲಿ ನಾವೀನ್ಯತೆಯನ್ನು (Innovation)ತುಂಬುವುದಾಗಿದೆ ಎಂದೂ ಸ್ಪಷ್ಟಪಡಿಸಲಾಗಿದೆ. ೨೦೦೨ರ ಸಹಕಾರ ನೀತಿಯ ನಂತರ ಪ್ರಕಟವಾದ ಹೊಸ ನೀತಿ ಇದಾಗಿದೆ. ಇದರಿಂದ ಬಹಳ ನಿರೀಕ್ಷೆಗಳೂ ಇರುತ್ತವೆ.

ಇಂದು ನಮ್ಮ ದೇಶದಲ್ಲಿ ೮,೪೪,೦೦೦ಕ್ಕೂ ಹೆಚ್ಚು ನೋಂದಾಯಿತ ಸಹಕಾರ ಸಂಘಗಳು ೩೦ಕ್ಕೂ ಹೆಚ್ಚು ಆರ್ಥಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೊದಲು ಕೃಷಿಕರಿಗೆ ಸಾಲ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಕೆಲಸಗಳಲ್ಲಿ ತೊಡಗಿರುತ್ತಿದ್ದ ಸೊಸೈಟಿಗಳು ಈಗ ಇತರ ವಲಯಗಳಲ್ಲಿ ವಿವಿಧ ಕಾರ್ಯಗಳಲ್ಲಿ ತೊಡಗಿರುವುದನ್ನು ಗಮನಿಸಬಹುದು. ಅಲ್ಲದೆ ಹಲವು ಸಹಕಾರ ಸಂಘಗಳು ತಾವೇ ವೇಗವಾಗಿ ದೊಡ್ಡ ಗಾತ್ರದಲ್ಲಿ ಬೆಳೆದೋ ಅಥವಾ ಸೊಸೈಟಿಗಳ ಒಕ್ಕೂಟಗಳನ್ನು ಕಟ್ಟಿಕೊಂಡು ಬೆಳೆಸಿಯೋ ರಾಜ್ಯ ಮತ್ತು ಅಂತರ ರಾಜ್ಯ ಮಟ್ಟಗಳಲ್ಲಿ ತಮ್ಮ ಅಸ್ತಿತ್ವ ಬೆಳೆಸಿಕೊಂಡಿರುವುದನ್ನು ಕಾಣಬಹುದು. ಹೈನುಗಾರಿಕೆ ಉತ್ಪನ್ನಗಳ ವಿಷಯದಲ್ಲಿ (ಹಾಲು ಮತ್ತು ಹಾಲಿನ ಉತ್ಪನ್ನಗಳ ಕುರಿತಂತೆ ) ಗುಜರಾತಿನ ‘ಅಮೂಲ್’ ಮತ್ತು ಕರ್ನಾಟಕದ ‘ನಂದಿನಿ’ ಬ್ರ್ಯಾಂಡುಗಳನ್ನು ಇಲ್ಲಿ ಉದಾಹರಿಸಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಹಕಾರ ಸಂಘಗಳೇ ( ಸಾಲ ಮತ್ತು ಇತರೆ ಸೇವೆಗಳಿಗಾಗಿ ) ಜಾಸ್ತಿ ಇದ್ದು ನಗರಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳಲ್ಲಿ ಸಹಕಾರ ಚಳವಳಿ ಸಾಕಷ್ಟು ಬೆಳವಣಿಗೆ ಕಂಡಿದೆ. ವಿವಿಧೋದ್ದೇಶ ಸಹಕಾರ ಸಂಘಗಳೂ ಬೆಳೆದಿವೆ. ಉತ್ಪಾದಕ ಮತ್ತು ಹೆಚ್ಚು ತಂತ್ರಜ್ಞಾನ ಆಧಾರಿತ ಸೇವಾ ಉದ್ದಿಮೆಗಳಲ್ಲಿಯೂ ಅಸ್ತಿತ್ವ ಇದ್ದರೂ ಕಾರ್ಪೊರೇಟ್ ವಲಯದಷ್ಟು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿಲ್ಲ. ಇಲ್ಲೆಲ್ಲ ಸಹಕಾರ ಸಂಸ್ಥೆಗಳಿಗೆ ಸಾಕಷ್ಟು ಅವಕಾಶಗಳಿರುವುದು ಸ್ಪಷ್ಟವಾಗಿದೆ. ಕೆಲವು ವಲಯಗಳಲ್ಲಿ ಸರ್ಕಾರದ ಬೆಂಬಲವನ್ನು ಅವಲಂಬಿಸಿರುವುದು , ರಾಜಕೀಯ ಹಸ್ತಕ್ಷೇಪ ಮತ್ತು ಮಾನವ ಸಂಪನ್ಮೂಲ (ಬಂಡವಾಳ)ದಲ್ಲಿ ವಿವಿಧ ಕೌಶಲಗಳ ಕೊರತೆ ಮುಂತಾದವುಗಳೂ ಬೆಳವಣಿಗೆಗೆ ಅಡ್ಡಿಯಾಗಿರುವುದು ಕಂಡು ಬಂದಿದೆ.

ನಮ್ಮ ಸಂವಿಧಾನದ ವಿಧಿಗಳಂತೆ ‘ಸಹಕಾರ ’ ವು ರಾಜ್ಯಗಳ ವಿಷಯ ಪಟ್ಟಿಯಲ್ಲಿದೆ. ಆದ್ದರಿಂದ ಕಾಯ್ದೆಗಳನ್ನು ಅಂಗೀಕರಿಸುವುದು, ಜಾರಿಗೊಳಿ ಸುವುದು ಮತ್ತು ಸಹಕಾರ ಸಂಘಗಳ ಅಭಿವೃದ್ಧಿ ರಾಜ್ಯ ಸರ್ಕಾರಗಳ ಹೊಣೆ. ಆದ್ದರಿಂದ ಕೇಂದ್ರದ ನೀತಿ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಯಾಗಬಹುದು ಮತ್ತು ಅದರ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳ ಸಕ್ರಿಯ ಸಹಕಾರ, ಆಸಕ್ತಿ, ಪಾಲ್ಗೊಳ್ಳುವಿಕೆ ಅತ್ಯವಶ್ಯ. ಒಂದು ಅರ್ಥದಲ್ಲಿ ಈ ನೀತಿಯನ್ನು ಪ್ರತ್ಯಕ್ಷ ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದೇ.

ಹೊಸ ನೀತಿಯ ಆಶಯಗಳು : ಮೊದಲನೆಯದಾಗಿ ದೇಶದಲ್ಲಿಯ ಸಹಕಾರ ಸಂಸ್ಥೆಗಳ ಸಂಖ್ಯೆಯನ್ನು ಶೇ.೩೦ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರತಿ ಹಳ್ಳಿಗೊಂದು ಸಹಕಾರ ಸಂಘ ಇರುವುದಲ್ಲದೆ ಈ ವರೆಗೆ ಹೊರಗುಳಿದಿರುವ ಅಥವಾ ಸಕ್ರಿಯರಲ್ಲದ ೫೦ ಕೋಟಿ ನಾಗರಿಕರನ್ನು ಸಂಘಗಳ ಸಕ್ರಿಯ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದೇನೋ ಒಪ್ಪಲೇ ಬೇಕಾದ ಮಹತ್ವದ ಒಳಗೊಳ್ಳುವಿಕೆಯ  ನೀತಿಯ (Inclusive Policy) ಉದ್ದೇಶವೆ. ಆದರೆ ಅಧಿಕೃತ ವರದಿಗಳಂತೆ ಈಗಾಗಲೇ ಇರುವ ಸೊಸೈಟಿಗಳಲ್ಲಿ ಶೇ.೩೦ರಷ್ಟು ಕೇವಲಹೆಸರಿಗೆ ಮಾತ್ರ ಅಸ್ತಿತ್ವದಲ್ಲಿವೆ ಅಥವಾ ಕೆಲಸ ಮಾಡುತ್ತಿವೆ ಅಥವಾ ಬಾಗಿಲು ಮುಚ್ಚಿವೆ. ಇವುಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬುದನ್ನೂ ಚಿಂತಿಸಬೇಕು.

ಹೊಸ ಸೊಸೈಟಿಗಳನ್ನು ಆರಂಭಿಸುವುದು ಸುಲಭ, ಆದರೆ ಅವುಗಳನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಮುನ್ನಡೆಸುವ ಕೆಲಸದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಆಡಳಿತದಲ್ಲಿ ಸಾಮರ್ಥ್ಯ ಮತ್ತು ಕೌಶಲಗಳ ಕೊರತೆ ಒಂದು ಸಮಸ್ಯೆಯಾದರೆ ರಾಜಕೀಯ ಹಸ್ತಕ್ಷೇಪ ಇನ್ನೊಂದು ದೊಡ್ಡ ತೊಡಕು. ಕೆಲಸ ಮಾಡುತ್ತಿರುವ ಸೊಸೈಟಿಗಳಲ್ಲಿಯೂ ಇಂಥ ಹಲವು ತೊಂದರೆಗಳು ಬೆಳವಣಿಗೆಗೆ ಅಡ್ಡ ಬಂದಿರುತ್ತವೆ. ಇವುಗಳನ್ನೆಲ್ಲ ಸರಿಪಡಿಸದ ಹೊರತು ಸಹಕಾರ ಸಂಸ್ಥೆಗಳ ಸುಧಾರಣೆಗೆ ಅರ್ಥವಿಲ್ಲ ದಂತಾಗುತ್ತದೆ. ಹೊಸ ಸಂಘಗಳನ್ನು ಆರಂಭಿಸುವಾಗ ಈ ಎಲ್ಲ ಲೋಪದೋಷಗಳಿಗೂ ಅವಕಾಶವಿಲ್ಲದಂತೆ ರಾಜಕೀಯ ಹಸ್ತಕ್ಷೇಪ ಮುಕ್ತ ವ್ಯವಸ್ಥೆಗಳನ್ನು ರೂಪಿಸಬೇಕಾದದ್ದು ಅವಶ್ಯ , ಆದರೆ ಇಂದಿನ ಸ್ಥಿತಿಯಲ್ಲಿ  ಇದೆಲ್ಲವೂ ಸಾಧ್ಯವಾದೀತೆ ಎಂಬ ಪ್ರಶ್ನೆ ಉದ್ಭವಿಸುವುದು ಸ್ವಾಭಾವಿಕ. ಪ್ರಯತ್ನಗಳನ್ನು ಮಾಡುತ್ತಿರಬೇಕು.

ನೀತಿ ಒತ್ತುಕೊಟ್ಟಿರುವ ಎರಡನೇ ಉದ್ದೇಶವೆಂದರೆ ಮಾರಾಟ ವ್ಯವಸ್ಥೆ ಮತ್ತು ಉತ್ಪನ್ನಗಳ ಮತ್ತು ಸೇವೆಗಳ ರ-ಗಳು, ವಿಶೇಷವಾಗಿ ಉತ್ತಮ ಗುಣಮಟ್ಟದ ಸಹಕಾರ ಸಂಸ್ಥೆಗಳಲ್ಲಿ ತಯಾರಿಸಲ್ಪಡುವ ಮತ್ತು ಮಾರಾಟ ಮಾಡಲ್ಪಡುವ ಹೈನುಗಾರಿಕೆ ಉತ್ಪನ್ನಗಳು, ಸಾಂಬಾರ ಪದಾರ್ಥಗಳು, ಕರಕುಶಲ ಉತ್ಪನ್ನಗಳು, ಕೈಮಗ್ಗದ ಬಟ್ಟೆಗಳು ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚು ಅವಕಾಶಗಳಿವೆ ಎಂದು ಗುರುತಿಸಲ್ಪಟ್ಟಿದ್ದು ಸಹಕಾರ ಸಂಸ್ಥೆಗಳನ್ನು ಅದಕ್ಕಾಗಿ ಸಜ್ಜುಗೊಳಿಸಬೇಕೆಂದು ನೀತಿ ಹೇಳುತ್ತದೆ.

ಉದ್ದೇಶ ಮೆಚ್ಚುವಂಥದ್ದೇ , ಆದರೆ ನಮ್ಮ ಇಂದಿನ ಸಂಘಗಳನ್ನು ಆ ಮಟ್ಟಕ್ಕೆ ತರಲು ಸಾಕಷ್ಟು ಬೆವರು ಹರಿಸಬೇಕಾಗುತ್ತದೆ. ಅಮೂಲ್, ನಂದಿನಿಯಂತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಎಷ್ಟು ಸಂಘಗಳು ತಯಾರಿಸುತ್ತವೆ? ಎಷ್ಟು ಉತ್ಪನ್ನಗಳಿಗೆ ಗುಣಮಟ್ಟದ ಬಗ್ಗೆ ಐಎಸ್‌ಐ ((Indian Standard Institute ಈಗ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣ ಪತ್ರವಿದೆ? ಎಷ್ಟು ಉತ್ಪನ್ನಗಳಿಗೆ ವೈಜ್ಞಾನಿಕ ರ- ಮಾಡಲು ಅರ್ಹ ಪ್ಯಾಕೇಜಿಂಗ್ ಇರುತ್ತದೆ? ದೊಡ್ಡ ಪ್ರಮಾಣದಲ್ಲಿ ಮಾರಾಟ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಗಾತ್ರವಾಗಲಿ ಸಾಮರ್ಥ್ಯವಾಗಲೀ ಎಷ್ಟು ಸಂಘಗಳಿಗಿದೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಸರ್ಕಾರಕ್ಕೆ ಇವೆಲ್ಲದರ ಅರಿವಿದ್ದು, ಸಹಕಾರ ಸಂಸ್ಥೆಗಳನ್ನು ಹೊಸ ಗುರಿ ಸಾಧಿಸಲು ತಯಾರು ಮಾಡಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ ಎಂದರೂ ಅದಕ್ಕೆ ಸಾಕಷ್ಟು ಸಮಯ ಬೇಕು. ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರತಿನಿಧಿಗಳೆಂದು ಘೋಷಿಸುತ್ತದೆ ಎಂದೂ ನೀತಿಯಲ್ಲಿ ಹೇಳಲಾಗಿದೆ.

ಇದೂ ಒಳ್ಳೆಯ ಬೆಳವಣಿಗೆ ಆದರೆ ಸರ್ಕಾರದ ಬೆಂಬಲವೂ ಒಂದು ಅಡ್ಡಿಯಾಗಬಾರದು. ಮೂಲಭೂತವಾಗಿ ನಮ್ಮ ಸಹಕಾರ ವ್ಯವಸ್ಥೆಯಲ್ಲಿರುವವರ ಮನಸ್ಥಿತಿ ಬದಲಾಗಬೇಕು. ಹೊಸದನ್ನು ಕಲಿಯುವ ಮತ್ತು ಅಳವಡಿಸಿಕೊಳ್ಳುವ ಮುಕ್ತ ಮನೋಭಾವನೆ ಬೆಳೆಯಬೇಕು. ಮೊದಲು ಸಹಕಾರ ವ್ಯವಸ್ಥೆ ಉತ್ಪಾದಕ ಉದ್ದಿಮೆಗಳತ್ತ ದೊಡ್ಡ ಪ್ರಮಾಣದಲ್ಲಿ ನುಗ್ಗಬೇಕು. ರಾಷ್ಟ್ರ ಮಟ್ಟದಲ್ಲಿ ೨೦೨೩ ರಲ್ಲಿ ನ್ಯಾಷನಲ್ ಕೋ ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿ. ಸ್ಥಾಪನೆಯಾಗಿರುವುದು ಉತ್ತಮ ಹೆಜ್ಜೆಯಾಗಿದೆ. ವಿದೇಶ ವ್ಯಾಪಾರ ವಿಧಿ ವಿಧಾನಗಳನ್ನು ಹಳ್ಳಿಗಳ ಸಂಘಗಳ ನೌಕರರಿಗೂ ತರಬೇತಿ  ಮೂಲಕ ತಿಳಿಸಿಕೊಡಬೇಕು. ಸಹಕಾರ ಸಂಘಗಳು ಅಭಿವೃದ್ಧಿ ಕ್ರಮಗಳಿಗೆ ತೆರೆದುಕೊಳ್ಳಬೇಕು.

” ಕೆಲವು ವಲಯಗಳಲ್ಲಿ ಸರ್ಕಾರದ ಬೆಂಬಲವನ್ನು ಅವಲಂಬಿಸಿರುವುದು , ರಾಜಕೀಯ ಹಸ್ತಕ್ಷೇಪ ಮತ್ತು ಮಾನವ ಸಂಪನ್ಮೂಲ (ಬಂಡವಾಳ)ದಲ್ಲಿ ವಿವಿಧ ಕೌಶಲಗಳ ಕೊರತೆ ಮುಂತಾದವುಗಳೂ ಬೆಳವಣಿಗೆಗೆ ಅಡ್ಡಿಯಾಗಿರುವುದು ಕಂಡು ಬಂದಿದೆ.”

-ಪ್ರೊ.ಆರ್.ಎಂ. ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ಮೈಸೂರು ಪಾಲಿಕೆಯಲ್ಲಿ ಅಕ್ರಮಗಳ ಸಂಖ್ಯೆ ಏರಿಕೆ: ಸಂಸದ ಯದುವೀರ್‌ ಆರೋಪ

ಮೈಸೂರು: ಮೈಸೂರು ನಗರ ಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ…

28 seconds ago

ನಮ್ಮ ಪಕ್ಷವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ರೈತರಿಂದ ಬೆಳೆದ ಪಕ್ಷ, ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾಸನ…

38 mins ago

ಗಣರಾಜ್ಯೋತ್ಸವ ಭಾಷಣ ಓದಲೂ ರಾಜ್ಯಪಾಲರ ತಗಾದೆ

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ…

60 mins ago

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ 2025-26ನೇ ಸಾಲಿನ ರಾಜ್ಯಮಟ್ಟದ ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ-2ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಜ.27…

1 hour ago

ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆ: ಹೊಸ ಸುತ್ತೋಲೆ

ಬೆಂಗಳೂರು: ಕರ್ನಾಟಕ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ಸರ್ಕಾರಿ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಜನರ ಹಾಗೂ ಮಕ್ಕಳ ಸುರಕ್ಷತೆಗೆ…

2 hours ago

ಲಕ್ಕುಂಡಿ ಬೆನ್ನಲ್ಲೇ ಯಾದಗಿರಿಯಲ್ಲೂ ಉತ್ಖನನ ನಡೆಸಲು ಸಿದ್ಧತೆ

ಯಾದಗಿರಿ: ದೇವರದಾಸಿಮಯ್ಯ ಪುಣ್ಯಕ್ಷೇತ್ರ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿಯೂ ಉತ್ಖನನ ನಡೆಸಲು ಸಿದ್ಧತೆ ನಡೆದಿದೆ. ಮುದನೂರು ಗ್ರಾಮ ರಾಜ-ಮಹಾರಾಜರ ಕಾಲದಲ್ಲಿ…

3 hours ago