girl feel alone
ಒಂದು ದಿನ ನಮ್ಮ ನ್ಯಾಯಿಕ ಪೀಠದ ಮುಂದೆ ಒಬ್ಬ ಬಾಲಕಿ, ಮತ್ತೊಬ್ಬ ಮಹಿಳೆ ಬಂದು ಕುಳಿತಿದ್ದಾರೆ. ಅವರ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಮುಂದಿಟ್ಟುಕೊಂಡಿದ್ದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ, ನಿಲಯದ ಅಧಿಕ್ಷಕರು, ಈ ಬಾಲಕಿಗೆ ಇನ್ನೆರಡು ತಿಂಗಳುಗಳಲ್ಲಿ ೧೮ ವರ್ಷಗಳು ಪೂರ್ಣವಾಗಲಿದೆ. ಮುಂದೆ ಆಕೆಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆಸಬೇಕು. ಪೋಷಕರಿದ್ದರೆ ಅವರ ಸುಪರ್ದಿಗೆ ವಹಿಸಬಹುದು. ಅಲ್ಲಿದ್ದ ಮಹಿಳೆಯ ಹೆಸರು ಮೇರಿ, ಅವರು ಆ ಬಾಲಕಿಯ ವಾರಸು ದಾರರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸಮಿತಿಗೆ ಹಾಜರುಪಡಿಸಲಾಗಿದೆ ಎಂದು ವಿವರಿಸಿದರು.
ಕಾವ್ಯ ಹೆಸರಿನ ಈ ಬಾಲಕಿಯ ಅಪ್ಪ ಅಮ್ಮ ನಿಧನರಾಗಿದ್ದರು. ಹಾಗಾಗಿ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊಂದರ ಮಹಿಳಾ ಸಂಘದ ಪ್ರತಿನಿಧಿಗಳಿಬ್ಬರು ಇವಳನ್ನು ಬಾಲಮಂದಿರಕ್ಕೆ ತಂದು ಬಿಟ್ಟಿದ್ದರು. ಮೇರಿ ಅವರು, ಇವಳ ತಾಯಿಯ ಗೆಳತಿಯಾಗಿದ್ದು, ಒಂದೆರಡು ಬಾರಿ ಬಾಲಮಂದಿರಕ್ಕೆ ಬಂದು ಈ ಬಾಲಕಿಯನ್ನು ನೋಡಿಕೊಂಡು ಹೋಗಿದ್ದಲ್ಲದೆ, ರಜೆಯ ಅವಧಿಯಲ್ಲಿ ಅವರ ಮನೆಗೂ ಕರೆದುಕೊಂಡು ಹೋಗಿದ್ದರು ಎಂಬುದು ಕಡತದಲ್ಲಿ ದಾಖಲಾಗಿದೆ. ಈ ಆಧಾರದಲ್ಲಿ ಮೇರಿ ಅವರೇ ಬಾಲಕಿಯ ವಾರಸುದಾರರು ಆಗಿರಬಹುದು ಎಂಬ ಭಾವನೆಯಿಂದ ಇವರನ್ನು ಪೀಠದ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕ್ಷಕರು ತಿಳಿಸಿದರು.
ಕಾವ್ಯ, ಮೇರಿ ಅವರೇ ನನ್ನ ನಿಜವಾದ ತಾಯಿ ಎಂದಳು. ಮೇರಿ ಬೆಚ್ಚಿಬಿದ್ದು, ನಾನು ಇವಳ ತಾಯಿ ಅಲ್ಲ. ಇವಳು ಸುಳ್ಳು ಹೇಳುತ್ತಿದ್ದಾಳೆ ಸರ್. ನಾನು ಇವಳ ತಾಯಿಗೆ ಪರಿಚಯ. ಆ ಕಾರಣಕ್ಕೆ ಇವಳನ್ನು ಆಗೊಮ್ಮೆ, ಈಗೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದೆ. ಅಲ್ಲದೆ, ರಜೆಯಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದೂ ಉಂಟು ಎಂದರು. ಆದರೆ ಕಾವ್ಯ, ಇವರು ಸುಳ್ಳು ಹೇಳುತ್ತಿದ್ದಾರೆ ಸರ್. ಇವರೇ ನನಗೆ ಜನ ಕೊಟ್ಟ ತಾಯಿ ಎಂದು ಖಚಿತ ಧ್ವನಿಯಲ್ಲಿ ನುಡಿದಳು. ಅದು ನಮ್ಮನ್ನು ಗೊಂದಲಕ್ಕೆ ಸಿಲುಕಿಸಿಬಿಟ್ಟಿತು.
ಹಾಗೇ ಕಡತವನ್ನು ಸೂಕ್ಷ ವಾಗಿ ಗಮನಿಸಿದಾಗ, ಹತ್ತು ವರ್ಷಗಳ ಹಿಂದೆ ಈ ಬಾಲಕಿಯು ಬಾಲಮಂದಿರಕ್ಕೆ ದಾಖಲಾಗಿದ್ದಾಳೆ. ಈಕೆ ಅನಾಥೆ, ಯಾರೂ ಇಲ್ಲ. ತಂದೆ ತಾಯಿ ಇಬ್ಬರೂ ನಿಧನರಾಗಿದ್ದಾರೆ. ಇವಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಹೇಳಿ ಬಾಲಮಂದಿರಕ್ಕೆ ತಂದು ಬಿಡಲಾಗಿರುತ್ತದೆ.
ಬಾಲಮಂದಿರಕ್ಕೆ ದಾಖಲಾದಾಗ ಪ್ರಾರಂಭದಲ್ಲಿ ಇವಳ ಪೂರ್ವ ಹಿನ್ನೆಲೆ ಏನೂ ಲಭ್ಯವಿಲ್ಲದ್ದರಿಂದ ಇವಳಿಗೆ ಕಾವ್ಯ ಎಂಬ ಹೆಸರನ್ನಿಟ್ಟು ಅವಳ ವಯಸ್ಸಿನ ಅಂದಾಜಿನ ಪ್ರಕಾರ ಒಂದು ಜನ್ಮದಿನಾಂಕವನ್ನು ಸೂಚಿಸಿ ಶಾಲೆಗೆ ದಾಖಲಿಸಲಾಗಿತ್ತು. ಕೆಲವು ವರ್ಷಗಳ ನಂತರ ಕಾವ್ಯಳ ಹಿನ್ನೆಲೆಯನ್ನು ತಿಳಿದು, ಕಾವ್ಯ ಕಲ್ಯಾಣ ಸಮಿತಿಗೆ ಸೇರುವ ಮೊದಲೇ ಶಾಲೆಗೆ ದಾಖಲಾಗಿದ್ದ ಮಾಹಿತಿಯನ್ನು ತರಿಸಿಕೊಂಡು ಕಡತದಲ್ಲಿ ಇಡಲಾಗಿತ್ತು. ಆ ಶಾಲಾ ದಾಖಲಾತಿ ಪ್ರಕಾರ ಕಾವ್ಯಳ ಪೂರ್ವ ಹೆಸರು ಫಾತಿಮಾ ಬಾನು.
ಈಕೆ ಎರಡನೇ ತರಗತಿಯನ್ನು ಅಲ್ಲಿನ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾಳೆ ಎಂಬ ಮಾಹಿತಿ ಇದೆ. ಇವಳ ತಂದೆ ಹೆಸರು ಮಹಮ್ಮದ್ ಇಮ್ರಾನ್, ತಾಯಿ ಮುಮ್ತಾಜ್ ಎಂದಿದೆ. ಈ ದಾಖಲೆ ಪ್ರಕಾರ ಇವಳಿಗೆ ೧೮ ವರ್ಷ ಪೂರ್ಣಗೊಳ್ಳಲು ಇನ್ನು ಎರಡು ತಿಂಗಳುಗಳು ಬಾಕಿ ಇದ್ದು, ಇವಳ ಮುಂದಿನ ಪುನರ್ವಸತಿ ಮಾಡಬೇಕಿರುತ್ತದೆ. ಆದರೆ ಇವಳು ಬಾಲಮಂದಿರಕ್ಕೆ ದಾಖಲಾದಾಗ ಹೊಸದಾಗಿ ಹೆಸರನ್ನಿಟ್ಟು ಶಾಲೆಗೆ ದಾಖಲು ಮಾಡಿ ೧೦ನೇ ತರಗತಿ ವಿದ್ಯಾಭ್ಯಾಸ ಮಾಡಿ ಅನುತ್ತೀರ್ಣಳಾಗಿದ್ದಳು. ಇದರ ಪ್ರಕಾರ ೧೮ ವರ್ಷ ಪೂರ್ಣಗೊಳ್ಳಲು ಇನ್ನೂ ೮ ತಿಂಗಳು ಬಾಕಿ ಇರುತ್ತದೆ.
ಈ ಬಾಲಕಿ ನನಗೆ ನನ್ನ ಹಿಂದಿನ ಶಾಲೆಯ ದಾಖಲಾತಿ ಪ್ರಕಾರ ೧೮ ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ನನ್ನನ್ನು ಪುನರ್ವಸತಿಗೊಳಿಸಿ ಎಂದು ಕೋರುತ್ತಿದ್ದಳು. ಒಟ್ಟಾರೆ ಬಾಲಮಂದಿರದಿಂದ ಆಕೆಗೆ ಬಿಡುಗಡೆ ಬೇಕಾಗಿತ್ತು ಅಷ್ಟೆ. ಈ ತಾಯಿ ನನ್ನನ್ನು ಮಗಳೆಂದು ಒಪ್ಪಿಕೊಂಡು ಮನೆಗೆ ಕರೆದುಕೊಂಡು ಹೋಗಲು ಸಿದ್ಧಳಿಲ್ಲ. ಹಾಗಾಗಿ ನನ್ನನ್ನು ಮುಂದಿನಪುನರ್ವಸತಿಗೆ ಸರ್ಕಾರದ ನಿಯಮಾನುಸಾರ ೧೮ ವರ್ಷಗಳು ತುಂಬಿದ ಬಳಿಕ ಮಹಿಳಾ ನಿಲಯ ಸ್ತ್ರೀ ಸೇವಾ ನಿಕೇತನಕ್ಕೆ ವರ್ಗಾಯಿಸಿಕೊಡಿ ಎಂಬುದು ಆಕೆಯ ಮನವಿಯಾಗಿತ್ತು. ಆದರೆ ಮೇರಿ, ಬಾಲಕಿಗೆ ಜನ್ಮಕೊಟ್ಟ ತಾಯಿಯೇ ಅಥವಾ ಇಲ್ಲವೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಮೇರಿ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ, ಇವಳ ತಾಯಿ ಮುಮ್ತಾಜ್ ಸಾಯುವಾಗ ಈ ಮಗುವನ್ನು ನೀನು ಜೋಪಾನ ಮಾಡು ಎಂದು ಹೇಳಿ, ನನಗೆ ಒಪ್ಪಿಸಿ ಪ್ರಾಣಬಿಟ್ಟಳು. ಆದರೆ ನಾನು ಸಾಕಲು ಸಾಧ್ಯವಾಗಲಿಲ್ಲ. ಇವಳು ಬಾಲಮಂದಿರಕ್ಕೆ ದಾಖಲಾಗಿರುವುದು ತಿಳಿಯಿತು. ಅದಕ್ಕಾಗಿ ನಾನು ಕೆಲವೊಮ್ಮೆ ಬಾಲಮಂದಿರಕ್ಕೆ ಬಂದು ಇವಳನ್ನು ನೋಡಿಕೊಂಡು ಹೋಗುತ್ತಿದ್ದೆ. ನನಗೆ ಮದುವೆಯಾಗಿ ದೊಡ್ಡ ಮಗನಿದ್ದಾನೆ. ಪತಿ ಇದ್ದಾರೆ. ಇವಳು ನನ್ನನ್ನು ತಾಯಿ ಎಂದು ಹೇಳಿದರೆ ಹೇಗೆ? ಎಂದು ಮೇರಿ ಅಲವತ್ತುಕೊಂಡರು.
ಬಾಲಕಿಯ ಮಾತಿನಲ್ಲಿ ಸತ್ಯ ಇರಬಹುದು ಎಂದು ನನಗೆ ಅನಿಸಿತು. ಮೇರಿ ಅವರ ಅನುಪಸ್ಥಿತಿಯಲ್ಲಿ ಬಾಲಕಿಯನ್ನು ಪ್ರಶ್ನಿಸಿದಾಗ, ಸರ್ ನಾನು ಇವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕೆಲ ಸ್ಥಳೀಯರು, ಇವಳೇ ನಿನ್ನ ಸ್ವಂತ ತಾಯಿ ಎಂದು ನನಗೆ ಗುಟ್ಟಾಗಿ ತಿಳಿಸಿದ್ದಾರೆ ಎಂದಳು. ಆದರೆ, ನಿನ್ನ ತಂದೆ ತಾಯಿ ನಿಧನರಾಗಿದ್ದಾರೆ ಅಲ್ಲವೇ? ಎಂದು ನಾವು ಪ್ರಶ್ನಿಸಿದಾಗ, ಅವರು ಸಾಕು ತಂದೆ ತಾಯಿ ಎಂದಳು. ಕಾವ್ಯಳ ಮಾತು ಕೇಳಿದ ನಂತರ, ಮೇರಿಯ ಬಗ್ಗೆ ಅನುಮಾನ ಮೂಡತೊಡಗಿತು. ವಿಚಾರಣೆಯನ್ನು ಮುಂದಕ್ಕೆ ಹಾಕಲಾಯಿತು. ಈ ಮಧ್ಯೆ ಬಾಲಕಿಯನ್ನು ನಿಲಯಕ್ಕೆ ದಾಖಲಿಸಿದ್ದ ಮಹಿಳಾ ಸಂಘದ ರಂಗಮ್ಮ ಮತ್ತು ದಾನಮ್ಮ ಅವರನ್ನು ಸಮಿತಿ ಎದುರಿಗೆ ಕರೆಸಿ, ವಿಚಾರಣೆ ಮಾಡಲಾಯಿತು.
ಅವರ ಪ್ರಕಾರ, ಹುಡುಗಿಯನ್ನು ಸಾಕಿದವರು ಮುಮ್ತಾಜ್ ಮತ್ತು ಮಹಮ್ಮದ್ ಇಮ್ರಾನ್ ಎಂಬ ದಂಪತಿ. ಮಹಮ್ಮದ್ ಇಮ್ರಾನ್ ನಿಧನರಾದ ಮೇಲೆ ಮುಮ್ತಾಜ್ ಮಗುವನ್ನು ನೋಡಿಕೊಳ್ಳುತ್ತಿರುತ್ತಾರೆ. ಮುಮ್ತಾಜ್‌ಗೆ ಮಾರಣಾಂತಿಕ ಕಾಯಿಲೆ ಬಂದು, ತನ್ನ ಅಂತಿಮ ದಿನಗಳಲ್ಲಿ ಗೆಳತಿ ಮೇರಿಗೆ ಈ ಮಗುವನ್ನು ನೋಡಿಕೊಳ್ಳುವಂತೆ ಕೋರಿಕೊಳ್ಳುತ್ತಾಳೆ. ಮೇರಿಗೆ ಈ ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ, ಅವರ ಪರಿಚಿತರಾದ ಇವರಿಬ್ಬರು, ಮಗುವನ್ನು ಬಾಲಮಂದಿರಕ್ಕೆ ಕರೆತಂದು ಬಿಟ್ಟಿದ್ದರು.
ಈ ಬಾಲಕಿಗೂ, ಮೇರಿಗೂ ಏನು ಸಂಬಂಧ ಎಂಬುದು ನಮಗೆ ಎದುರಾದ ಪ್ರಶ್ನೆಯಾಗಿತ್ತು. ಅದಕ್ಕೆ ಖಚಿತ ಉತ್ತರ ನೀಡಿದವರೂ ರಂಗಮ್ಮ ಮತ್ತು ದಾನಮ್ಮ. ಮಗುವನ್ನು ಸಾಕಿದ ಮುಮ್ತಾಜ್ ಹಿಂದಿನ ಹೆಸರು ಭಾಗ್ಯಮ್ಮ. ಆಕೆ ಪೌರಕಾರ್ಮಿಕ ಮಹಿಳೆ. ಅವರ ಪತಿ ಮಾದಯ್ಯ, ಮದುವೆಯಾದ ಕೆಲವು ತಿಂಗಳಲ್ಲೇ ಮೃತಪಟ್ಟಿರುತ್ತಾರೆ. ಕೆಲ ವರ್ಷಗಳಲ್ಲೇ ಭಾಗ್ಯಮ್ಮ ಮುಸ್ಲಿಂ ವ್ಯಕ್ತಿ ಮಹಮ್ಮದ್ ಇಮ್ರಾನ್ ಎಂಬಾತನನ್ನು ಎರಡನೇ ಮದುವೆಯಾಗುತ್ತಾರೆ.
ಹೆಸರನ್ನೂ ಮುಮ್ತಾಜ್ ಎಂದು ಬದಲಿಸಿಕೊಳ್ಳುತ್ತಾರೆ. ಈ ಭಾಗ್ಯಮ್ಮ ಅಲಿಯಾಸ್ ಮುಮ್ತಾಜ್‌ರಿಗೆ ಒಬ್ಬ ತಮ್ಮನಿದ್ದು, ಹೆಸರು ಸಂಜಯ. ಈ ಭಾಗ್ಯಮ್ಮ ಅಲಿಯಾಸ್ ಮುಮ್ತಾಜ್ ಮನೆ ಹತ್ತಿರ ಇದ್ದ ಮೇರಿಯೊಡನೆ ಸಂಜಯನಿಗೆ ಸ್ನೇಹ ಬೆಳೆದು, ದೈಹಿಕ ಸಂಬಂಧ ಏರ್ಪಡುತ್ತದೆ. ಪರಿಣಾಮವಾಗಿ ಒಂದು ಹೆಣ್ಣು ಮಗು ಜನಿಸುತ್ತದೆ.
ಮೇರಿ ಅವಿವಾಹಿತೆಯಾಗಿದ್ದರಿಂದ ತನ್ನ ಅಸಹಾಯಕತೆಯನ್ನು ಗುಟ್ಟಾಗಿ ಗೆಳತಿ ಮುಮ್ತಾಜ್‌ರಿಗೆ ಹೇಳಿಕೊಂಡು, ನೀನೆ ಇದರ ಉಸ್ತುವಾರಿಯಾಗಿ ನೋಡಿಕೊಳ್ಳಬೇಕು ಎಂದು ಮಗುವನ್ನು ಕೊಟ್ಟುಬಿಡುತ್ತಾರೆ. ಮುಮ್ತಾಜ್, ತನ್ನ ತಮ್ಮನಿಗೆ ಹುಟ್ಟಿದ ಮಗು ಎಂಬ ಮಮಕಾರದಿಂದಲೇ ಸಾಕುತ್ತಾರೆ. ಹುಟ್ಟಿದ ದಿನದಿಂದಲೇ ಮುಮ್ತಾಜ್ ಈ ಮಗುವಿನ ಸಾಕುತಾಯಿಯಾಗುತ್ತಾರೆ.
ಮುಮ್ತಾಜ್‌ಗೆ ಮಾರಣಾಂತಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಬದುಕುವುದಿಲ್ಲ ಎಂದು ಅರಿವಾದಾಗ, ನಿನ್ನ ಮಗು ತಾನೆ, ಮುಂದೆ ನೀನೇ ನೋಡಿಕೊ ಎಂದು ವಾಪಸ್ ಮಾಡುತ್ತಾರೆ. ಆದರೆ, ಮೇರಿಯಿಂದ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಮಗುವಿನ ಅನಾಥ ಪರಿಸ್ಥಿತಿಯನ್ನು ಅರಿತು ಬಾಲಮಂದಿರಕ್ಕೆ ದಾಖಲಿಸಲಾಯಿತು ಎಂಬ ಸತ್ಯವನ್ನು ಅವರಿಬ್ಬರೂ ಬಿಚ್ಚಿಟ್ಟರು.
ಮುಂದಿನ ವಿಚಾರಣೆಗಾಗಿ ಕಾವ್ಯ ಅಲಿಯಾಸ್ ಫಾತಿಮಾ ಬಾನು ಮತ್ತು ಮೇರಿ ಇವರನ್ನು ಸಮಿತಿಯ ಮುಂದೆ ಹಾಜರುಪಡಿಸಲಾಗುತ್ತದೆ. ಮೇರಿ ಈಗಲೂ ಕೂಡ ಇವಳು ನನ್ನ ಮಗಳಲ್ಲ ಎಂದೇ ಪ್ರತಿಪಾದಿಸುತ್ತಾರೆ. ಈ ಬಾಲಕಿ ಇವರೇ ನಮ್ಮಮ್ಮ. ಆದರೂ ಒಪ್ಪಿಕೊಳ್ಳುತ್ತಿಲ್ಲ ಎಂದು ಕಣ್ಣೀರಾಗುತ್ತಾಳೆ. ಬಾಲಕಿಯ ಈ ಸ್ಥಿತಿಯನ್ನು ನೋಡಿ ನನಗೆ ಸಂಕಟವಾಗುತ್ತಿತ್ತು. ಮೇರಿಯನ್ನು ಪ್ರತ್ಯೇಕವಾಗಿ ಮಾತನಾಡಿಸಿ, ರಂಗಮ್ಮ ಮತ್ತು ದಾನಮ್ಮ ಅವರಿಂದ ಗೊತ್ತಾಗಿದ್ದ ಸತ್ಯವನ್ನು ತಿಳಿಸಲಾಯಿತು.
ಕ್ಷಣಕಾಲ ಮೌನವಾದ ಆಕೆ, ನಂತರ ಕಣ್ಣೀರು ಸುರಿಸುತ್ತಾ, ನನಗೆ ಈಗ ಒಬ್ಬ ವಯಸ್ಸಿಗೆ ಬಂದ ಮಗನಿದ್ದಾನೆ. ಕಟ್ಟಿಕೊಂಡ ಗಂಡ ಇದ್ದಾರೆ. ಈಗ ಇವಳನ್ನು ಮಗಳೆಂದು ಮನೆಗೆ ಕರೆದುಕೊಂಡು ಹೋದರೆ ನನಗೆ ತೊಂದರೆಯಾಗುತ್ತದೆ. ದಯವಿಟ್ಟು ಇದನ್ನು ಯಾರಿಗೂ ಹೇಳಬೇಡಿ ಎಂದು ಗೋಗರೆದರು. ನನಗೆ ಅಯ್ಯೋ ಅನಿಸಿತು.
ನಾನು, ಆಕೆಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಾ, ಆಯ್ತು, ಆಕೆಗೆ ಬೇರೆ ಪುನರ್ವಸತಿ ಮಾಡಲಾಗುವುದು ಎಂದು ತಿಳಿಸಿದೆ. ಮೇರಿ ಒಪ್ಪಿಕೊಂಡು, ಮಗಳಿಗೆ ಏನು ಸಹಾಯ ಬೇಕೋ ನಾನು ಪರೋಕ್ಷವಾಗಿ ಮಾಡುತ್ತೇನೆ. ಅವಳು ಎಲ್ಲಿರುತ್ತಾಳೋ ಅಲ್ಲಿಗೆ ಹೋಗಿ ನೋಡಿಕೊಂಡು ಬರುತ್ತೇನೆ ಎಂದರು. ಬಾಲಕಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಮುಂದಿನ ಪುನರ್ವಸತಿ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಲಾಯಿತು. ಇನ್ನು ಈ ಬಾಲಕಿಯ ಜನ್ಮಕ್ಕೆ ಕಾರಣವಾದ ಸಂಜಯನನ್ನು ವಿಚಾರಣೆಗೆ ಕರೆಸಲಾಯಿತು.
ಈ ಎಲ್ಲಾ ಹಿನ್ನೆಲೆಯನ್ನು ತಿಳಿಸಿದಾಗ ಆತ ಆತಂಕದಿಂದಲೇ ಎಲ್ಲವನ್ನೂ ಒಪ್ಪಿಕೊಂಡ. ಈ ಬಾಲಕಿಗೆ ಜನ್ಮಕೊಟ್ಟ ತಾಯಿ ಮೇರಿ ಅವರ ಅಸಹಾಯಕತೆಯನ್ನು ಆತನಿಗೆ ತಿಳಿಸಿ, ತಂದೆಯಾಗಿ ಈ ಬಾಲಕಿಯ ಮುಂದಿನ ಜವಾಬ್ದಾರಿ ನಿನ್ನದು ಎಂದು ವಿವರಿಸಲಾಯಿತು. ಆತ ನಾನು ಹರಯದಲ್ಲಿ ಮೇರಿಯೊಡನೆ ಅಕ್ರಮ ಸಂಬಂಧದಿಂದ ಆ ಮಗುವಿನ ಜನ್ಮಕ್ಕೆ ಕಾರಣನಾಗಿರುವುದು ಸತ್ಯ. ನಾನು ಈಗ ನಗರಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಮೂರು ಜನ ದೊಡ್ಡ ಮಕ್ಕಳಿದ್ದಾರೆ, ಹೆಂಡತಿಯಿದ್ದಾಳೆ. ಅವರಿಗೆ ಈ ವಿಚಾರ ಗೊತ್ತಾದರೆ ನನ್ನ ಸಂಸಾರ ಒಡೆದುಹೋಗುತ್ತದೆ. ೧೮ ವರ್ಷಗಳ ಹಿಂದಿನ ಕತೆ ಇದು. ನಾನು ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅಳಲು ತೋಡಿಕೊಂಡ. ಈ ವಿಷಯದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತ ಎಂದು ಅನಿಸಿತು.
ಈ ಬಾಲಕಿಯ ಹಿನ್ನೆಲೆಯನ್ನು ಗಮನಿಸಿದಾಗ ಪೌರಕಾರ್ಮಿಕ ಕುಟುಂಬದ ಭಾಗ್ಯಮ್ಮ ಹಿಂದೂ ಧರ್ಮದ ಮಹಿಳೆಯಾಗಿದ್ದು ಇಸ್ಲಾಂ ಧರ್ಮದ ಮಹಮ್ಮದ್ ಇಮ್ರಾನ್‌ನನ್ನು ವಿವಾಹವಾಗಿ ಮತಾಂತರಗೊಂಡು ಮುಮ್ತಾಜ್‌ಳಾಗಿ ಈ ಬಾಲಕಿಯ ಸಾಕುತಾಯಿಯಾಗುತ್ತಾಳೆ. ಒಂದು ಕಡೆಸೋದರತ್ತೆಯೂ ಹೌದು. ಇನ್ನು ಕ್ರೈಸ್ತ ಧರ್ಮದ ಮೇರಿ ಜನ್ಮಕೊಟ್ಟ ತಾಯಿಯಾಗಿದ್ದಾಳೆ, ಹಿಂದೂ ಧರ್ಮದ ಸಂಜಯ ಜನ್ಮಕೊಟ್ಟ ತಂದೆಯಾಗಿದ್ದಾನೆ. ಅಂತೂ ಈ ಬಾಲಕಿ ಜಾತ್ಯತೀತ ಭಾರತ ದೇಶದ ನಾಗರಿಕಳಾಗಿ ಧರ್ಮದ ಕಾಲಂನಲ್ಲಿ ಭಾರತೀಯಳು ಎಂದು ನಮೂದಿಸ ಬಹುದಾದ ಹೆಸರು ಇವಳದು ಎಂದು ನನಗೆ ಭಾಸವಾಗತೊಡಗಿತು. ಬಾಲಕಿ ಕಾವ್ಯ ಅಲಿಯಾಸ್ ಫಾತಿಮಾಬಾನು ನಮ್ಮ ಸಮಿತಿಯ ನ್ಯಾಯಾಂಗ ಪೀಠದ ಮುಂದೆ ಕುಳಿತಿದ್ದಾಳೆ. ಇವಳಿಗೆ ಜನ್ಮ ನೀಡಿದ ತಂದೆ ತಾಯಿ ಇಬ್ಬರೂ ಬದುಕಿದ್ದಾರೆ. ಆದರೆ ಇವಳನ್ನು ತಮ್ಮ ವಶಕ್ಕೆ ಪಡೆಯುವ ಸ್ಥಿತಿಯಲ್ಲಿ ಇಬ್ಬರೂಇಲ್ಲ.
ಪೋಷಕರು ಯಾರೂ ಇಲ್ಲದಿದ್ದಾಗ ನಿಯಮಾನುಸಾರ ಮುಂದಿನ ಪುನರ್ವಸತಿಯನ್ನು ಕಲ್ಪಿಸುವ ಸಲುವಾಗಿ ಸರ್ಕಾರದ ರಾಜ್ಯ ಮಹಿಳಾ ನಿಲಯ ಸ್ತ್ರೀ ಸೇವಾನಿಕೇತನಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಂಡು, ಈ ಪ್ರಕರಣದ ತೀರ್ಪಿನ ಆದೇಶ ಬರೆಯುವಾಗ ಪೆನ್ನಿನ ಮೇಲೆ ನನ್ನ ಕಣ್ಣೀರಿನ ಹನಿಗಳು ತೊಟ್ಟಿಕ್ಕತೊಡಗಿದವು.
” ಮಕ್ಕಳ ಕಲ್ಯಾಣ ಸಮಿತಿ ಅದೊಂದು ಅರೆ ನ್ಯಾಯಾಂಗ ವ್ಯವಸ್ಥೆ. ಬಾಲನ್ಯಾಯ ಕಾಯಿದೆ ಅಡಿಯಲ್ಲಿ ದೇಶದ ಪ್ರತೀ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಐದು ಸದಸ್ಯರನ್ನೊಳಗೊಂಡ ಮಕ್ಕಳ ನ್ಯಾಯಾಂಗ ಪೀಠವಾಗಿದೆ. ಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗೊಳಿಸುವ ಸರ್ಕಾರದ ಒಂದು ವ್ಯವಸ್ಥೆಯಾಗಿದೆ. ನಾನು ಈ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿ ಕೆಲಸ ಮಾಡುತ್ತಿದ್ದಾಗ ಎದುರಾದ ಒಂದು ವಿಶಿಷ್ಟ ಪ್ರಕರಣವನ್ನು ದಾಖಲಿಸುತ್ತಿದ್ದೇನೆ. ಗೌಪ್ಯತೆ ಕಾಪಾಡಬೇಕಾದ ಕಾರಣಕ್ಕೆ ಇಲ್ಲಿ ಬರುವ ನೈಜ ಹೆಸರುಗಳನ್ನು ಬದಲಾಯಿಸಲಾಗಿದೆ.”
-ಈ.ಧನಂಜಯ ಎಲಿಯೂರು
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…