• ಹನಿ ಉತ್ತಪ್ಪ
ರಾಜೇಶ್ ಮೂವತ್ತೈದು ವರ್ಷದ ನಡುವಯಸ್ಕ ಇನ್ನೂ ಮದುವೆಯಾಗಿಲ್ಲ. ಅಷ್ಟಾಗಿ ವಿದ್ಯಾವಂತರಲ್ಲದ ಕಾರಣ ಸಿಕ್ಕ ಚಿಕ್ಕಪುಟ್ಟ ಕೆಲಸಗಳ ಸಹಾಯದಿಂದಲೇ ಒಂದು ಚಂದದ ಮನೆ ಕಟ್ಟಿ ಇದ್ದ ಎರಡು ಎಕರೆ ಹೊಲದಲ್ಲಿ ಏನೋ ಒಂದಷ್ಟು ಬೆಳೆದು, ಎಲ್ಲವನ್ನೂ ನಿಭಾಯಿಸಿಕೊಂಡು ಈಗ ತನ್ನ ಮದುವೆಗೆ ಯೋಚಿಸುತ್ತಿರುವ ರಾಜೇಶ್‌ಗೆ ಮದುವೆಯ ವಿಚಾರದಲ್ಲಿ ಆಗಿರುವ ಆಘಾತವೆಂದರೆ ಚಂದದ ಬದುಕಿಗೆ ಎಲ್ಲವೂ ಇದೆ ಎನ್ನುವ ನೆಮ್ಮದಿ ಇವರಿಗಾದರೆ, ಹುಡುಗನಿಗೆ ಸರಿಯಾದ ಕೆಲಸವಿಲ್ಲ, ಅವನು ಹಳ್ಳಿಯಲ್ಲಿ ಇರುತ್ತಾನೆ ಎನ್ನುವ ಆರೋಪಗೈವ ಹುಡುಗಿಯರು. ಚಂದದ ಬದುಕೊಂದನ್ನು ಕಟ್ಟಿಕೊಳ್ಳಲು ನನ್ನಲ್ಲಿ ಎಲ್ಲವೂ ಇದೆ ಎಂದುಕೊಂಡ ರಾಜೇಶ್‌ಗೆ ಈಗ ಹುಡುಗಿಯ ಮನೆಯವರು ಬಯಸುವ ಯೋಗ್ಯತೆಗಳಲ್ಲಿ ತನಗೆ ಏನಿಲ್ಲ? ಎಂಬ ಬಗ್ಗೆ ಯೋಚಿಸುವಂತಾಗಿದೆ. ಈಗ ಅವರು ಕೇಳುತ್ತಾರೆ ‘ನೆಮ್ಮದಿಯಾಗಿ ಬದುಕಲು ಬೇಕಾಗಿರುವ ಎಲ್ಲವೂ ನನ್ನಲ್ಲಿವೆ. ಒಳ್ಳೆಯ ಸಂಪಾದನೆ, ಸ್ವಂತ ಮನೆ, ಓಡಾಡಲು ಒಂದು ಗಾಡಿ ಎಲ್ಲವೂ ಇವೆ. ಅದಕ್ಕಿಂತಲೂ ಹೆಚ್ಚಾಗಿ ಕಟ್ಟಿಕೊಂಡವರನ್ನು ನೆಮ್ಮದಿಯಾಗಿ ನೋಡಿಕೊಳ್ಳುವ ಪ್ರೀತಿಯ ಮನಸ್ಸಿದೆ. ನನ್ನ ಹೆಂಡತಿಯೇನೂ ಹೊಲಗದ್ದೆಗೆ ಬಂದು ದುಡಿಯಬೇಕಿಲ್ಲ, ಮಳೆ ಬಿಸಿಲಿನಲ್ಲಿ ಬಾಡಬೇಕಿಲ್ಲ. ಮನೆಯಲ್ಲಿ ಅಡುಗೆ ಮಾಡುತ್ತಾ ಬೇಯುವುದು ಬೇಕಿಲ್ಲ. ಫ್ರಿಡ್ಜ್ ಇದೆ, ವಾಷಿಂಗ್ ಮಷೀನ್ ಇದೆ, ಅಡುಗೆ ಮನೆಯಲ್ಲಿ ಎಲ್ಲಾ ತರಹದ ಹೊಸ ಉಪಕರಣಗಳಿವೆ. ಮುಖ್ಯವಾಗಿ ಅಡುಗೆ ಕೆಲಸ ಮಾಡಲು ಮನೆಯಲ್ಲಿ ಹಿರಿಯರಿದ್ದಾರೆ. ಉಂಡುಟ್ಟು ಖುಷಿಯಾಗಿ ತಿರುಗಾಡಿಕೊಂಡಿರುವ ಹೆಣ್ಣೆಂದು ಮಾತ್ರ ನಮಗೆ ಬೇಕು. ಖುಷಿಯಾಗಿ ಬದುಕಲು ಇದಕ್ಕಿಂತಲೂ ಏನು ಬೇಕು? ಸಿಟಿಗಳಲ್ಲಿ ಸಾಫ್ಟ್ ವೇರ್ ಕೆಲಸವಿದ್ದವನನ್ನು ಹಿಂದುಮುಂದು ಕೇಳದೇ ಮದುವೆಯಾಗುತ್ತಾರೆ. ಎರಡೇ ವರ್ಷಕ್ಕೆ ಅವನ ನಿಜಬಣ್ಣ ತಿಳಿದು ಒಂದೋ ಕಣ್ಣೀರಲ್ಲಿ ಕೈ ತೊಳೆದು ಬದುಕುತ್ತಾರೆ, ಇಲ್ಲವೇ ಡೈವೋರ್ಸ್ ಕೊಟ್ಟು ಮನೆಗೆ ಬಂದು ಕೂರುತ್ತಾರೆ. ಈ ಸಂಪತ್ತಿಗೆ ಕೆಲಸದ ಹುಡುಗನನ್ನು ಕಟ್ಟಿಕೊಳ್ಳಬೇಕೇ? ಕೆಲಸ ಇದ್ದ ಮಾತ್ರಕ್ಕೆ ಅವನು ಹೆಂಡತಿಯನ್ನು ನೆಮ್ಮದಿಯಾಗಿ ನೋಡಿಕೊಳ್ಳುವನು ಎಂಬ ಗ್ಯಾರಂಟಿ ಏನಿದೆ? ‘ಸಾಯೋವರೆಗೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲು ನಾನು ರೆಡಿ ಅಂದ್ರೂ ನಮ್ಮಂತಹವರನ್ನ ಕಡೆಗಣಿಸಿ ಈ ಸಾಫ್ಟ್‌ವೇರು ಬದುಕಿನ ಕಡೆಗೆ ಮುಖ ಮಾಡ್ತಾರಲ್ಲಾ… ರೈತರ ಮಕ್ಕಳು, ರೈತರು ಮನುಷ್ಯರೇ ಅಲ್ವಾ? ನಾವು ಬೆಳೆದ ಅನ್ಸಾನೇ ಅಲ್ವಾ ಸಿಟಿಗಳಲ್ಲಿ ಕೂತು ಅವರು ತಿನ್ನೋದು? ಅನ್ನುವ ಇವರ ಮಾತಿಗೆ ಉತ್ತರ ಹೇಳಬೇಕಾದವರು ಯಾರು ಎಂಬುದು ಮಾತ್ರ ಅಯೋಮಯ! ವಿದೇಶಗಳು ಹಿತ್ತಿಲುಮನೆ ಬಚ್ಚಲು ಮನೆಯಂತಾಗಿ ಹೋಗಿರುವ ಈ ಕಾಲದಲ್ಲೂ ‘ಹುಡುಗ ಅಮೆರಿಕದಲ್ಲಿ ಇರೋದು!’ ಅನ್ನೋ ಮದುವೆ ಮಾತುಗಳಿಗೆ ಈಗಲೂ ಬರವಿಲ್ಲ ನಮ್ಮಲ್ಲಿ.
ಅಣ್ಣ ಅತ್ತಿಗೆ ಹಾಗೂ ಮೈದುನರ ಪುಟ್ಟ ಕುಟುಂಬವಾದ ನವೀನ್‌ರವರ ಮನೆಯದ್ದು ಇನ್ನೊಂದು ಕಥೆ. ಮೂಲತಃ ಬಯಲು ಸೀಮೆಯ ಹಳ್ಳಿಯವರಾದ ಇವರ ಕುಟುಂಬ ಮಳೆ ಇಲ್ಲದ ಕಾರಣ ಬೆಳೆಯಿಲ್ಲದೆ ಹೊಲಗದ್ದೆಗಳಲ್ಲಿ ಕೆಲಸವಿಲ್ಲದೆ ಕೆಲಸ ಹುಡುಕುತ್ತಾ ಬೆಂಗಳೂರು ಮಹಾನಗರಿಯನ್ನು ಸೇರಿದ್ದಾರೆ. ಆದರೆ ಬೇರುಗಳು ಇನ್ನು ಊರಿನಲ್ಲಿಯೇ ಹೂತುಕೊಂಡಿವೆ. ಎಂದಾದರೂ ಒಮ್ಮೆ ವಾಪಸ್ ಹಳ್ಳಿ ಮನೆ ಸೇರುವ ಆಸೆ ಇಟ್ಟುಕೊಂಡಿರುವ ಇವರು ಅಲ್ಲಿಯವರೆಗೂ ನವೀನರ ಮದುವೆಯನ್ನು ಮುಂದೂಡಲಾಗದೆ ಹುಡಗಿ ಹುಡುಕುತ್ತಿದ್ದಾರೆ. ಸುಮಾರು 30 ವಯಸ್ಸಿನ ನವೀನ್ ಕೆಲಕಾಲಗಳಿಗೆ ಬೆಂಗಳೂರಿನಲ್ಲಿ ದುಡಿದುಕೊಂಡು ಮುಂದೆ ತಮ್ಮ ತಾಯಿ ನೆಲವನ್ನು ಸೇರುವ ಆಸೆ ಹೊಂದಿದ್ದಾರೆ. ಪದೇ ಪದೇ ಹುಡುಗಿಯರು ಈ ಸಂಬಂಧವನ್ನು ಬೇಡವೆನ್ನುವ ಕಾರಣ ಈಗ ಬೆಂಗಳೂರಿನಲ್ಲಿರುವ ಹುಡುಗ ಮುಂದೆ ಹಳ್ಳಿಗೆ ಹೋಗುತ್ತಾನೆ. “ನೀವು ಸದಾ ಬೆಂಗಳೂರಿನಲ್ಲಿಯೇ ಇರುವುದಾದರೆ ಹೆಣ್ಣು ಕೊಡಬಹುದಿತ್ತು. ಆದರೆ ಮತ್ತೆ ಹಳ್ಳಿಗೆ ಹೋಗುವುದಾದರೆ ನಮ್ಮ ಹುಡುಗಿಗೆ ಹಳ್ಳಿ ಮನೆ ನಿಭಾಯಿಸುವುದು ಕಷ್ಟ. ಏಕೆಂದರೆ ನಾವು ಬಹಳ ಮುದ್ದಾಗಿ ಬೆಳೆಸಿದ್ದೇವೆ. ಒಂದು ಕೆಲಸ ಮಾಡಿ ನಿಮ್ಮ ಮನೆಯಲ್ಲಿ ಎಲ್ಲರೂ ಹಳ್ಳಿಗೆ ವಾಪಸ್ ಆಗಲಿ, ನೀವು ನಮ್ಮೊಂದಿಗೆ ಇದ್ದುಬಿಡಿ’ ಎನ್ನುವ ಮಾತನ್ನು ಹುಡುಗಿ ಮನೆಯ ಹಿರಿಯರೇ ಆಡಿದರೆ ಇವರಲ್ಲಿ ಉತ್ತರವಿಲ್ಲ. ನವೀನ್ ಕುಟುಂಬದ ವಿಶೇಷತೆ ಎಂದರೆ ಅವರೀಗ ತಮ್ಮ ಜಾತಿಯನ್ನೂ ಸಹ ಮದುವೆಗೆ ಪರಿಗಣಿಸುತ್ತಿಲ್ಲ. ಮನೆಯಲ್ಲಿ ಹೊಂದುವ ಹುಡುಗಿ ಆದರೆ ಸಾಕೆಂಬ ಭಾವ ಎಲ್ಲರಲ್ಲೂ ಇದೆ. ಕಿರಣ್ ಮನೆಯದು ಬೇರೆಯದೇ ಕಥೆ. ಅಲ್ಲಿ ಅಜ್ಜ ಅಜ್ಜಿ ಅಪ್ಪ ಅಮ್ಮ ಮಕ್ಕಳು ಎಲ್ಲರೂ ಒಂದು ಸುಂದರ ಕೂಡು ಕುಟುಂಬವಾಗಿದ್ದಾರೆ. ಹಳ್ಳಿ ಮನೆಯು ಯಾವ ನಾಗರಿಕ ಸೌಲಭ್ಯಗಳಿಗೂ ಕೊರತೆ ಇಲ್ಲದಂತೆ ಸಜ್ಜಾಗಿದೆ. ಮನೆಯಲ್ಲಿ ಕಾರಿದೆ. ಆದರೆ ಕಿರಣೆ ಹೆಚ್ಚಿನ ವಿದ್ಯಾಭ್ಯಾಸವಿಲ್ಲ ಹಾಗೂ ತಮ್ಮ ಎಕರೆಗಟ್ಟಲೆ ಗದ್ದೆ ಮತ್ತು ತೋಟವನ್ನು ಮಾತ್ರ ನೋಡಿಕೊಳ್ಳುತ್ತಾರೆ. ಹುಡುಗಿ ಮನೆಯವರಿಗೆ ಏನೂ ಸಮಸ್ಯೆ ಇಲ್ಲ. ಆದರೆ ಸಮಸ್ಯೆ ಕಿರಣ್ ಮನೆಯ ಕಡೆ ಇದೆ. ಅವರಿಗೆ ತಮ್ಮದೇ ಜಾತಿಯಲ್ಲಿ ತಮ್ಮ ಮನೆತನಕ್ಕೆ ಹೊಂದುವ ಅಂತಸ್ತಿರುವ ಹಳ್ಳಿ ಹುಡುಗಿಯೇ ಬೇಕಿದೆ. ಇವರ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿದೆ. ಇಲ್ಲಿ ಡಿಮ್ಯಾಂಡ್ ಹುಡುಗಿಯರ ಮನೆಯ ಕಡೆಯಿಂದ ಇಲ್ಲ. ಜಾತಿ ಹಾಗೂ ಅಂತಸ್ತು ಬಹು ಮುಖ್ಯ ಪಾತ್ರ ವಹಿಸಿವೆ. ಸುಮಾರು ಮೂವತ್ತು ವರ್ಷ ದಾಟಿರುವ ಕಿರಣ್ ತಂದೆಯನ್ನು ಕೇಳಿದರೆ ಅವರು ಹುಡುಗಿ ಸಿಗದೇ ಇರುವುದುಂಟೆ, ಸಿಕ್ಕೇ ಸಿಗುತ್ತದೆ. ನಾವು ಸ್ವಲ್ಪ ಹುಡುಕಬೇಕಷ್ಟೇ! ಆದರೆ ನಾವು ನಮ್ಮ ಜಾತಿ ಹಾಗೂ ಅಂತಸ್ತಿನ ಬೇಡಿಕೆಯಿಂದ ಒಂದು ಮೆಟ್ಟಿಲೂ ಕೆಳಗಿಳಿದು ಒಪ್ಪಿಕೊಳ್ಳುವುದಿಲ್ಲ. ನಮ್ಮನೆಯಲ್ಲಿ ಹುಡುಗಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವ ಎಲ್ಲಾ ಸವಲತ್ತುಗಳಿವೆ. ರಾಣಿಯಂತೆ ಬದುಕಬಹುದಾದ ಅದೃಷ್ಟವಿರುವ ಹುಡುಗಿ ಸಿಗುತ್ತಾಳೆ ಬಿಡಿ. ಇನ್ನೂ ಎರಡು ವರ್ಷ ಕಳೆದರೂ ನಮಗೇನು ಚಿಂತೆ ಇಲ್ಲ’ ಎನ್ನುತ್ತಾರೆ. ಕಿರಣ್ ಈ ಬಗ್ಗೆ ತಂದೆಯ ಮಾತನ್ನು ಮೀರಿ ಒಂದು ಮಾತನ್ನೂ ಹೇಳಲು ಇಷ್ಟಪಡುವುದಿಲ್ಲ. ಇನ್ನು ಈ ಕಥೆಯಲ್ಲಿ ‘ರಾಣಿ’ಯಂತೆ ಬದುಕಬಹುದಾದ ಹುಡುಗಿ ಬರಲು ಬಾಕಿ ಇದೆಯಷ್ಟೇ!
“ಹಳ್ಳಿಗಳಲ್ಲಿಯೇ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಹಾಗೂ ಹೆಣ್ಣೆಂಬ ಕಾರಣಕ್ಕೇ ಹಸುಳೆಗಳ ಹತ್ಯೆ ಕೂಡ ನಮ್ಮ ನೆಲದಲ್ಲಿಯೇ ನಡೆಯುತ್ತಿದೆಯಲ್ಲ! ಇದಕ್ಕೆ ನಾವು ತಾನೇ ಬಾಧ್ಯಸ್ಥರು? ಹಾಗೆ ಹೆಣ್ಣು ಕುಲವನ್ನು ಉಳಿಸಿದ್ದರೆ ಇಂದು ನಮ್ಮ ಬೇಡಿಕೆಗಳಿಗೆ ಹೊಂದುವ ಹೆಣ್ಣು ಸಿಗಬಹುದಿತ್ತು.” ಎಂದರೆ ಹಿರಿಯರು ಹೇಳುತ್ತಾರೆ “ಎಲ್ಲವೂ ದೈವ ನಿಯಾಮಕ, ಇಲ್ಲಿ ಬದುಕುವ ಋಣವಿದ್ದವರು ಬದುಕುತ್ತಾರೆ, ಇಲ್ಲದವರು ಬದುಕುವುದಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಅವನ ಲೀಲೆ” ಎಂದು ಮೇಲೆ ನೋಡಿ ಕೈ ಮುಗಿಯುತ್ತಾರೆ. ಈ ಮದುವೆಯಾಟದ ಕತೆಗಳು ಎಷ್ಟು ಸ್ವಾರಸ್ಯಕರವೆಂದರೆ ಇಲ್ಲಿ ಒಟ್ಟಿಗೆ ಬಾಳಿ ಬದುಕುವ ಹಣೆಬರಹ ಹೆಣ್ಣು ಗಂಡಿನದಾದರೂ ಅವರಿಬ್ಬರ ಹಣೆಬರಹ ನಿರ್ಧರಿಸುವವರು ಮಾತ್ರ ಇತರರು. ಇಲ್ಲಿ ಅಂತಸ್ತು, ಹಣ, ಜಾತಿ ಇತ್ಯಾದಿಗಳು ಅದೆಷ್ಟು ಮುಖ್ಯವಾಗುತ್ತವೆಂದರೆ ಅತೀ ಮುಖ್ಯವಾದ ಗಂಡು ಹೆಣ್ಣಿನ ಮನಸ್ಸಿಗೆ ಒಪ್ಪಿತವಾದ ಒಲವು ಪರಿಗಣಿಸುವ ಕಡೇ ಸ್ಥಾನದಲ್ಲಿರುತ್ತದೆ. ‘ಅದೇನು ಮಹಾ… ಆದ ಮೇಲೆ ಎಲ್ಲಾ ಸರಿ ಹೋಗುತ್ತೆ ಎಂಬುದೊಂದು ಸೂತ್ರ ಎಲ್ಲವನ್ನೂ ಮರೆಮಾಚಿ ನಾಗಾಲೋಟ ಕೀಳುತ್ತದೆ. ತೀರಾ ಸರ್ವೇಸಾಧಾರಣವಾಗಿ ಚಾಲ್ತಿಯಲ್ಲಿರುವ ‘ಹುಚ್ಚು ಬಿಡದೇ ಮದುವೆಯಾಗಲ್ಲ, ಮದುವೆಯಾಗದೇ ಹುಚ್ಚು ಬಿಡಲ್ಲ’ ಎಂಬ ಗಾದೆಗೆ ಹಲವು ಆಯಾಮಗಳಿವೆ. ಇಲ್ಲಿ ಹುಚ್ಚು ಯಾವುದೋ..? ಅದು ಬಿಡಲು ಮದುವೆಯೇ ಯಾಕೆ ಬೇಕೋ… ಇರಲಿ, ಮದುವೆಯೇ ಒಮ್ಮೊಮ್ಮೆ ಒಂದು ಬಹುದೊಡ್ಡ ಹುಚ್ಚಾಟದಂತೆಯೂ, ಒಮ್ಮೊಮ್ಮೆ ಮಕ್ಕಳಾಟದಂತೆಯೂ ತೋರುವುದರಿಂದ ಈ ಗಾದೆಯಲ್ಲಿ ಮದುವೆ ಹಾಗೂ ಹುಚ್ಚು ದ್ವಿರುಕ್ತಿಗಳೇನಲ್ಲವೆಂದು ನಾವೇ ಸಮಾಧಾನಪಟ್ಟುಕೊಳ್ಳಬೇಕಷ್ಟೇ.. ದೂರದ ಮುಂಬೈಯಲ್ಲಿ ಕೆಲಸ ಮಾಡುವ ರಾಜಶೇಖರ್ ಅವರದು ಇನ್ನೊಂದು ಕಥೆ. ಊರಿನಲ್ಲಿ ಸಂಪಾದನೆ ಇಲ್ಲದ ಇವರು ಇರುವ ನೀರಾವರಿಯಲ್ಲದ ಹೊಲಗದ್ದೆಗಳನ್ನು ಬಿಟ್ಟು ಸಂಪಾದನೆಗಾಗಿಯೇ ದೂರದ ಮುಂಬೈಗೆ ಹೋಗಿದ್ದಾರೆ. ಈ ಅತಿವೃಷ್ಟಿ ಅನಾವೃಷ್ಟಿಗಳ ಕಾಲದಲ್ಲಿ ಪ್ರತಿವರ್ಷ ಏಕ ರೀತಿಯ ವ್ಯವಸಾಯ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗಿ ಊರಿನಲ್ಲಿ ವಯಸ್ಸಾದ ತಾಯಿ ಒಬ್ಬರನ್ನೇ ಬಿಟ್ಟು ನಗರ ಸೇರಿದ್ದಾರೆ. ಈಗ ಇವರು ಮದುವೆಯಾದರೆ ಹೆಂಡತಿ ಅತ್ತೆಯೊಂದಿಗೆ ಹಳ್ಳಿ ಮನೆಯಲ್ಲಿ ಇರಬೇಕು. ಕುಟುಂಬವನ್ನು ಮುಂಬೈಯಲ್ಲಿ ಸಾಕುವುದು ಕಷ್ಟ. ಇನ್ನು ಇರುವ ಒಂದೇ ಮಾರ್ಗವೆಂದರೆ ಎರಡು ಮೂರು ತಿಂಗಳಿಗೊಮ್ಮೆ ಇವರೇ ಹಳ್ಳಿಮನೆಗೆ ಬಂದು ಹೋಗುವುದು. ಈ ವ್ಯವಸ್ಥೆ ಯಾವ ಹೆಣ್ಣಿಗೆ ಬೇಕು? ಅದು ಹೆಣ್ಣಿನ ದೃಷ್ಟಿಕೋನದಲ್ಲಿ! ಆದರೆ ಇದರಲ್ಲಿ ರಾಜಶೇಖರ್ ಅವರ ತಪ್ಪೇನು? ಹಾಗಾಗಿ ರಾಜಶೇಖರ್ 40 ದಾಟಿದರೂ ಇನ್ನು ಮದುವೆಯಾಗಿಲ್ಲ. ಕೆಲವು ಸಣ್ಣಪುಟ್ಟ ಆರೋಗ್ಯದ ಸಮಸ್ಯೆಯಿರುವ ಇವರು ಕಡೆಗಾಲದಲ್ಲಿ ಯಾರನ್ನು ನಂಬಿ ಬದುಕುವುದು?
ಕಟ್ಟಿಕೊಂಡವರಿಗೆ ಬಿಟ್ಟರೆ ಸಾಕೆಂತಲೂ, ಇನ್ನೂ ಇಲ್ಲದವರಿಗೆ ರಂಗುರಂಗಾಗಿ ಕಾಣುತ್ತಾ ಯಾವಾಗ ಆಗುತ್ತದೋ ಎನ್ನುವಂತೆಯೂ ಭಾಸವಾಗುವ ಏಕೈಕ ಮೋಹಜಾಲವೆಂದರೆ ಮದುವೆ! ಮದುವೆ ಎನ್ನುವ ಭ್ರಾಂತು ತೀರಾ ವೈಯಕ್ತಿಕವಾದರೂ ಅದೊಂದು ಸಾಮಾಜಿಕ ಆಚರಣೆಯ ಭಾಗವೂ ಆಗಿರುವುದು ಭಾರತದಂತಹ ದೇಶದಲ್ಲಿ ಅಚ್ಚರಿಯೇನಲ್ಲ. ಇನ್ನೂ ನೂರು ಗಂಡಿಗೆ ತೊಂಬತ್ತು ಮಾತ್ರ ಹೆಣ್ಣಿರುವ ನಮ್ಮಲ್ಲಿ ಇರುವ ಲಿಂಗಾನುಪಾತವನ್ನು ಪರಿಗಣಿಸಿಕೊಂಡು, ಹೆಣ್ಣು-ಗಂಡು ಹುಡುಕುವಲ್ಲಿ, ಮದುವೆ ಕುದುರುವಲ್ಲಿ, ಸಾಂಸಾರಿಕ ಅನುಬಂಧಗಳನ್ನು ಹೆಣೆದುಕೊಳ್ಳುವಲ್ಲಿ ಸಾಕಷ್ಟು ಎಡರು ತೊಡರುಗಳಿವೆ. ಮತ್ತು ಇದರ ಸಂದು ಗೊಂದಿನಲ್ಲಿ ಹಲವು ಕಥೆಗಳು ಹುಟ್ಟಿಕೊಳ್ಳುತ್ತವೆ. ‘ಹೆಣ್ಣು ಮಕ್ಕಳಿಗೆ ಕೊಬ್ಬು, ಹಾಗಾಗಿ ಕೆಲಸವಿಲ್ಲದವರನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದೊಂದು ಸೋ ಕಾಲ್ಡ್ ಸಾರ್ವತ್ರಿಕ ಕಾರಣವಾದರೆ ಎಳೆಎಳೆಯಾಗಿ ಬಿಡಿಸಿ ನೋಡಿದರೆ ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ. ಮೋಹನ್ ಮನೆಯಲ್ಲಿ ಈಗ ಹೆಣ್ಣು ನೋಡುವ ಸಂಭ್ರಮ ಶುರುವಾಗಿದೆ. ಅವರಿಗೆ ಈಗ 30 ವರ್ಷ. 10ನೇ ತರಗತಿಯಲ್ಲಿ ಫೇಲ್ ಆಗಿ ಈಗ ಯಾವುದೋ ಕೆಲಸ ಮಾಡಿಕೊಂಡು ಬದುಕುತ್ತಿರುವ ಮೋಹನ್ ಚೆನ್ನಾಗೇ ದುಡಿಯುತ್ತಿದ್ದಾರೆ. ಮನೆ ಕಡೆಯೂ ತಕ್ಕಷ್ಟು ಸ್ಥಿತಿವಂತರಾಗಿರುವ ಇವರ ಸಮಸ್ಯೆ ತಮಾಷೆಯದು. ಮೋಹನ್‌ರವರ ಅಣ್ಣನಿಗೆ ಮದುವೆಯಾಗುವಾಗಲೂ ಮನೆಯಲ್ಲಿ ಇದೇ ಪರಿಸ್ಥಿತಿ ಇದ್ದರೂ ಅತ್ತಿಗೆಮ್ಮನಾಗಿ ಬಂದ ಹುಡುಗಿ ಏನನ್ನೂ ‘ಡಿಮ್ಯಾಂಡ್’ ಮಾಡಲಿಲ್ಲ. ‘ಕೆಲಸವೇ ಬೇಕು ಸರ್ಟಿಫಿಕೇಟ್ ಬೇಕು’ ಎಂದೇನೂ ಕೇಳಲಿಲ್ಲ. ಈಗ ಅವರಿಬ್ಬರು ಇದ್ದುದರಲ್ಲಿಯೇ ಸಂಸಾರದ ದೋಣಿಯ ಮೇಲೆ ನಗೆ ಕಡಲಿನಲ್ಲಿ ತೇಲುತ್ತಾ ಖುಷಿಯಾಗಿದ್ದಾರೆ. ಮೋಹನ್ ಕೂಡ ಮುಂದೊಂದು ದಿನ ತನಗೂ ಇಂತಹ ಹುಡುಗಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಸಿಗುವ ಹುಡುಗಿಯರೆಲ್ಲ ಕೆಲಸಕ್ಕಿಂತಲೂ ಹೆಚ್ಚಾಗಿ ಲಕ್ಷಣವಂತನೂ, ಗುಣವಂತನೂ ಆದ ಮೋಹನ್‌ರವರನ್ನು ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಅಂದು ಯಾವುದೋ ಕಾಲದಲ್ಲಿ ಶಾಲೆಯಲ್ಲಿ ಕೂತು ನೆಟ್ಟಗೆ ಪಾಠ ಕೇಳದೆ ಶಾಲೆ ಬಿಟ್ಟ ಪರಿಣಾಮವನ್ನು ಮುಂದೊಂದು ದಿನ ಈ ರೀತಿ ಎದುರಿಸಬೇಕಾಗಬಹುದು ಎಂಬ ನಿರೀಕ್ಷೆಯೂ ಆಗ ಬಹುಶಃ ಮೋಹನ್ ರವರಿಗೆ ಇರಲಿಲ್ಲ ಎನಿಸುತ್ತದೆ. ಸರ್ಟಿಫಿಕೇಟ್ ಎಂಬುದು ಯಾರ್ಯಾರ ಬದುಕಿನಲ್ಲಿ ಏನೇನು ಕೋಲಾಹಲ ಎಬ್ಬಿಸಬಹುದೆಂಬ ಮಾತಿಗೆ ಮೋಹನ್ ಒಂದು ಸಣ್ಣ ಉದಾಹರಣೆ.
ಸರಾಸರಿಯ ಸಂಖ್ಯೆಯಲ್ಲಿ ನೋಡಿದರೆ ಈ ಸಮೀಕ್ಷೆ ಬಹು ಚಿಕ್ಕದಿರಬಹುದು. ಆದರೆ ಒಂದು ಸಮಸ್ಯೆಯ ಹಲವು ಮುಖಗಳ ಪರಿಚಯ ಇದರ ಉದ್ದೇಶವಷ್ಟೇ. ಮದುವೆಗೂ ಜೂಜಾಟಕ್ಕೂ ಹೆಚ್ಚು ಅಂತರವಿಲ್ಲ ಎಂಬುದನ್ನು ಬಹುತೇಕ ಮದುವೆಯಾದವರೇ ಸಾರ್ವತ್ರಿಕವಾಗಿ ಒಪ್ಪಿಕೊಳ್ಳುವರು. ಸಿಕ್ಕಿದ್ದನ್ನು ತಿಕ್ಕಿ ತೊಳೆದು ತಿದ್ದಿ ತೀಡಿ ಅಗತ್ಯಕ್ಕೆ ಬೇಕಾದಂತೆ ರೂಪಿಸಿಕೊಳ್ಳುವ ಜವಾಬ್ದಾರಿ ಗಂಡು-ಹೆಣ್ಣು ಇಬ್ಬರಿಗೂ ಸಮನಾಗಿರುತ್ತದೆ. ಆದರೂ ಇವೆಲ್ಲಾ ಮದುವೆಯಾದ ಮೇಲಿನ ಸಿದ್ಧಾಂತಗಳಷ್ಟೇ! ಹಳ್ಳಿಗಳಲ್ಲಿ ಸ್ವಲ್ಪವೂ ಮೈ ಕೈ ನೋಯ್ದೆ ನೆಮ್ಮದಿಯಾಗಿರುವ ಹೆಣ್ಣು ಮಕ್ಕಳೂ, ನಗರ ಪ್ರದೇಶಗಳಲ್ಲಿ ಸಂಸಾರ ನಿಭಾಯಿಸಲಾಗದೆ ತಾವು ದುಡಿದು ಮನೆಯ ಖರ್ಚು ತೂಗಿಸುವ ಹೆಣ್ಣು ಮಕ್ಕಳೂ ಇಕ್ಕೆಲಗಳಲ್ಲಿ ಉಂಟು. ತಮಗೇನು ಬೇಕೆಂಬುದನ್ನು ತಾವೇ ಕಂಡುಕೊಳ್ಳದ ಹೊರತು ಬೇರೆಯವರ ಅಭಿಪ್ರಾಯ ಹಾಗೂ ಅಂತಸ್ತಿನ ಮೇಲೆ ತಾವು ನಡೆದುಹೋದರೆ ಉಂಟಾಗಬಹುದಾದ ಅಪಾಯಗಳನ್ನು ಇಂದಿನ ಪೀಳಿಗೆ ಮನಗಾಣಬೇಕಾಗಿದೆ. ಮುಂದೆ ಅದೇನಾದರಾಗಲಿ, ಇಂದು, ಮದುವೆಯಾಗುವ ಹೊತ್ತು ಗಂಡು ಹೆಣ್ಣು ಇಬ್ಬರೂ ಕೂತು ಆಗುಹೋಗುಗಳನ್ನು ಪರಸ್ಪರ ಮಾತನಾಡಿ ದಡ ಕಾಣುವುದು ಸೂಕ್ತ.
honeyuttappacoorg@gmail.com
ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…
ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…
ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್ ರಿಲೀಫ್…
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…