ಬಂಗಾಳದಲ್ಲಿ ಎದುರುಬದಿರಾಗಿರುವ ಬೆಂಕಿ ಬಿರುಗಾಳಿ; ದೆಹಲಿ ಧ್ಯಾನ

ಎಡರಂಗ ಕೆಡವಿದ ದೀದಿಗೆ ಹೊಸ ವೈರಿ ಬಿಜೆಪಿ ವಿರುದ್ಧ ಅಳಿವು ಉಳಿವಿನ ಹೋರಾಟ

ಮೋದಿ ಮತ್ತು ಮಮತಾ ದೀದಿ ನಡುವೆ ಬಂಗಾಳದಲ್ಲಿ ಜರುಗಿರುವ ಜಿದ್ದಾಜಿದ್ದಿನ ಕದನ ತೀವ್ರ ಬಲಪಂಥ ಮತ್ತು ನಡುಪಂಥದ ನಡುವಣ ಸಂಘರ್ಷದಂತೆ ಕಾಣಬಹುದು. ಆದರೆ ಈ ಪರದೆ ಹರಿದರೆ ಕಾಣುವುದು ಅಧಿಕಾರ ಮತ್ತು ಪ್ರತಿಷ್ಠೆಗಳ ಹಣಾಹಣಿಯೇ. ಮೋದಿ ಮತ್ತು ದೀದಿ ಇಬ್ಬರೂ ಸರ್ವಾಧಿಕಾರಿಗಳೇ. ವಿಡಂಬನೆ, ಟೀಕೆ ಮತ್ತು ಪ್ರಶ್ನೆಗಳನ್ನು ಇಬ್ಬರೂ ಸಹಿಸುವವರಲ್ಲ. ಪ್ರತಿಪಕ್ಷಗಳನ್ನು ಸಂಹರಿಸಬೇಕಾದ ಶತ್ರುಗಳೆಂದೇ ಪರಿಗಣಿಸುವವರು.

ಮಮತಾ ದೀದಿ ಮೋದಿ ಸರ್ಕಾರದ ಕೋಮುವಾದದ ಕುರಿತು ದೊಡ್ಡ ಪ್ರವಚನಗಳನ್ನು ಬಿಗಿದಿದ್ದಾರೆ. ಆದರೆ ಬಂಗಾಳದಲ್ಲಿ ಈ ಹಿಂದೆ ಎಡರಂಗ ಸರ್ಕಾರದ ವಿರುದ್ಧ ಸೆಣೆಸುವಾಗ ಅವರು ಬಿಜೆಪಿಯ ಜೊತೆ ಕೈ ಜೋಡಿಸಿದ್ದರಲ್ಲ. ಕೇಂದ್ರದಲ್ಲಿ ಅಧಿಕಾರ ಹಂಚಿಕೊಂಡದ್ದೂ ನಿಜ. ಎಡರಂಗದ ಕೋಟೆಯೇನೋ ನುಚ್ಚು ನೂರಾಯಿತು. ಆದರೆ ತಾವು ಈ ಹಿಂದೆ ಕೈ ಕಲೆಸಿ ಬೆಳೆಸಿದ್ದ ಅದೇ ಬಿಜೆಪಿ ತಮ್ಮನ್ನು ನುಂಗಲು ಬಾಯಿ ತೆರೆದಿರುವ ಅರಿವು ದೀದಿಗೆ ಮೂಡಿದ್ದು ಬಹು ತಡವಾಗಿ. ಬಂಗಾಳದಲ್ಲಿ ಬಿಜೆಪಿ ಬೆಳೆಯಲು ಅದರ ದುರ್ಬಲ ಬೇರುಗಳಿಗೆ ಮುಸಲ್ಮಾನರ ಅತಿ ತುಷ್ಟೀಕರಣದ ನೀರು ಗೊಬ್ಬರ ಉಣಿಸಿದ ದೀದಿಯೂ ಅಪರಾಧಿ. ಬಾಂಗ್ಲಾ ದೇಶದ ವಲಸಿಗರೂ ಸೇರಿದಂತೆ ಬಂಗಾಳದಲ್ಲಿನ ಮುಸಲ್ಮಾನರ ಪ್ರಮಾಣದ ಅನಧಿಕೃತ ಅಂದಾಜು ಶೇ.೩೦. ನ್ಯಾಯಮೂರ್ತಿ ಸಚ್ಚರ್ ವರದಿಯ ಪ್ರಕಾರ ಅತಿ ಬಡ ಮುಸಲ್ಮಾನರಿರುವ ರಾಜ್ಯಗಳಲ್ಲಿ ಬಂಗಾಳವೂ ಒಂದು. ಈ ಸಮುದಾಯದ ದೈನಂದಿನ ಬದುಕನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಡಿದೆತ್ತುವ ದಾರಿಯನ್ನು ಬಿಟ್ಟು ತುಷ್ಟೀಕರಣದ ಸುಲಭದ ಹಾದಿ ಹಿಡಿಯಿತು ಮಮತಾ ಸರ್ಕಾರ. ಕಾಳಿ ಮಾತೆಯ ಬಂಗಾಳಿ ಉಪರಾಷ್ಟ್ರೀಯತೆಯ ವಿರುದ್ಧ ಶ್ರೀರಾಮನ ರಾಷ್ಟ್ರೀಯತೆಯನ್ನು ಎತ್ತಿ ಕಟ್ಟಿತು ಬಿಜೆಪಿ.

ಎಡಪಂಥೀಯರು ಮತ್ತು ಜಾತ್ಯತೀತವಾದಿಗಳ ಗಢವೆನಿಸಿದ್ದ ಪಶ್ಚಿಮ ಬಂಗಾಳವನ್ನು ಗೆಲ್ಲುವುದು ಮೋ-ಶಾ ಜೋಡಿ ಮತ್ತು ಸಂಘಪರಿವಾರಕ್ಕೆ ಪ್ರತಿಷ್ಠೆಯ ಸವಾಲು. ತನ್ನದೇ ಆದ ಅಸ್ಮಿತೆ, ಹೆಮ್ಮೆ, ವಿಶಿಷ್ಟ ಸಾಂಸ್ಕೃತಿಕ ಬೌದ್ಧಿಕ ಪರಂಪರೆ ಹೊಂದಿರುವ ರಾಜ್ಯವಿದು. ಪೂರ್ವ ಭಾರತದ ಬಹುದೊಡ್ಡ ಭೌಗೋಳಿಕ ಪ್ರದೇಶ.

ಮುಸಲ್ಮಾನರು, ಕ್ರೈಸ್ತರು ಹಾಗೂ ಎಡಪಂಥ ಈ ದೇಶದ ಮೂರು ಬಹುದೊಡ್ಡ ಆಂತರಿಕ ಶತ್ರುಗಳೆಂದು ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಲ್ವಲ್ಕರ್ ಬಹು ಹಿಂದೆಯೇ ಘೋಷಿಸಿದ್ದರು. ಅವರ ಭಾಷಣಗಳು- ಲೇಖನಗಳನ್ನು ಹೊಂದಿರುವ ‘ಬಂಚ್ ಅಫ್ ಥಾಟ್ಸ್’ ತನ್ನ ಪಾಲಿನ ಸೈದ್ಧಾಂತಿಕ ಭಗವದ್ಗೀತೆ ಎಂದು ಆರೆಸ್ಸೆಸ್ ಖುದ್ದು ಸಾರಿ ಹೇಳಿದೆ. ಈ ಕೋನದ ಆಚೆಗೂ ೪೨ ಲೋಕಸಭಾ ಸ್ಥಾನಗಳನ್ನು ಹೊಂದಿರುವ  ದೊಡ್ಡ ರಾಜ್ಯದ ಮೇಲೆ ತಾನು ಗೆಲುವಿನ ಬಾವುಟ ಹಾರಿಸುವುದು ಕೇಂದ್ರದ ಅಧಿಕಾರ ಸೂತ್ರಗಳ ಹಿಡಿಯಲು ನಿರ್ಣಾಯಕ. ಇಲ್ಲಿನ ಗೆಲುವು ಮೋಶಾ ಜೋಡಿಗೆ ಅಜೇಯದ ಪ್ರಭಾವಳಿಯನ್ನು ಕಟ್ಟಲಿದೆ.

೨೦೨೪ರಲ್ಲಿ ಮೂರನೆಯ ಅವಧಿಗೂ ದೆಹಲಿ ಗದ್ದುಗೆ ವಶಪಡಿಸಿಕೊಳ್ಳಲು ನೆರವಾಗಲಿದೆ. ಇಲ್ಲಿ ಗೆಲುವು ಬೃಹತ್ ರಾಜ್ಯ ಉತ್ತರಪ್ರದೇಶದ ೨೦೨೨ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಮೇಲೆ ದಟ್ಟ ಪ್ರಭಾವ ಬೀರುವುದು ನಿಶ್ಚಿತ. ೨೦೧೪ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶವನ್ನು ಮೋಶಾ ಜೋಡಿ ಗುಡಿಸಿ ಹಾಕಿ ಕೇಂದ್ರ ಸರ್ಕಾರವನ್ನು ತನ್ನ ಉಡಿಗೆ ಹಾಕಿಕೊಂಡಿತ್ತು. ಆದರೆ ಈ ಜೋಡಿಯ ಪ್ರಚಂಡ ಸಾಮರ್ಥ್ಯ ಮತ್ತೊಮ್ಮೆ ಸಂಶಯಾತೀತವಾಗಿ ಸಾಬೀತಾಗಿದ್ದು ೨೦೧೭ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸಿದ ಅಸಾಧಾರಣ ಗೆಲುವಿನಿಂದ. ಈ ಗೆಲುವೇ ೨೦೧೯ರ ಲೋಕಸಭಾ ಚುನಾವಣೆಗಳ ಗೆಲುವಿಗೆ ಸೋಪಾನವಾಯಿತು.

ಇದೇ ರೀತಿ ೨೦೨೨ರಲ್ಲಿ ಜರುಗಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಗೆಲುವು ೨೦೨೪ರಲ್ಲಿ ಮೋದಿಯವರ ಸತತ ಮೂರನೆಯ ಗೆಲುವಿನ ಸಾಧ್ಯತೆಯನ್ನು ಹೊಳಪಾಗಿಸಲಿದೆ. ಮುಂದಿನ ವರ್ಷ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಅನಾಯಾಸವಾಗಿ ಗೆಲ್ಲಬೇಕಿದ್ದರೆ ಈಗಿನ ಪಶ್ಚಿಮ ಬಂಗಾಳದ ರಣಾಂಗಣದಲ್ಲಿ ಗೆಲ್ಲುವುದು ಬಲು ಮುಖ್ಯ. ಈವರೆಗೆ ತನ್ನ ಅಂಕೆಗೆ ಸಿಕ್ಕಿರದ ಬಂಗಾಳದಲ್ಲಿ ಕೇಸರಿ ಪಟಪಟಿಸುವುದು ಬಿಜೆಪಿ-ಸಂಘಪರಿವಾರದ ಪಾಲಿಗೆ ಭಾರೀ ದೊಡ್ಡ ಸೈದ್ಧಾಂತಿಕ ಗೆಲುವು. ನೈತಿಕ ಸ್ಥೈರ್ಯವನ್ನು ನೂರು ಪಟ್ಟು ಹಿಗ್ಗಿಸುವ ವಿಜಯ.

ಹತ್ತು ವರ್ಷಗಳ ಹಿಂದೆ ಏಕಾಂಗಿಯಾಗಿ ಎಡಪಕ್ಷಗಳನ್ನು ಧೂಳೀಪಟ ಮಾಡಿದ್ದರು ಮಮತಾ. ಆದರೆ ತಮ್ಮ ಹಳೆಯ ಮಿತ್ರಪಕ್ಷವೇ ಹೊಸ ಪ್ರತಿಸ್ಪರ್ಧಿ ಆಯಿತು. ಕಾಲ ಕೆಳಗಿನ ನೆಲ ಕುಸಿಯತೊಡಗಿತು. ಬಿಜೆಪಿಯ ಕಡು ಧೃವೀಕರಣದ ರಾಜನೀತಿ ದೀದಿಯನ್ನು ಅಧೀರ ಆಗಿಸಿರುವುದು ಹೌದು. ಹೀಗಾಗಿ ಮಾಡು ಇಲ್ಲವೇ ಮಡಿ ಸ್ವರೂಪದ ಹೋರಾಟ ನಡೆಸಿದ್ದಾರೆ ಅವರು. ಕಳೆದ ಲೋಕಸಭಾ ಚುನಾವಣೆಗಳ ಹಂಗಾಮಿನಲ್ಲೇ ಮೊದಲಾದ ಈ ಮದ್ದಾನೆಗಳ ಹಿಂಸ್ರ  ಕಾಳಗ ಬಂಗಾಳವನ್ನು ನುಗ್ಗಾಗಿಸಿದೆ. ಜನತಂತ್ರ ಮತ್ತು ಒಕ್ಕೂಟ ವ್ಯವಸ್ಥೆಯನ್ನು ನವೆಸಿದೆ.

ಹಿಂಸಾಚಾರ ದಬ್ಬಾಳಿಕೆ ಬಳಸಿ ಬಿಜೆಪಿಯನ್ನು ಹಿಮ್ಮೆಟ್ಟಿಸುವ ತೃಣಮೂಲದ ತಂತ್ರ ಫಲ ನೀಡಲಿಲ್ಲ. ಇನ್ನು ಕೋಮುವಾದಿ ಹಿಂಸಾಚಾರದ ‘ಆಟ’ ಬಿಜೆಪಿಗೆ ಹೊಸದಲ್ಲ. ನಾಜೂಕಿನ ಈ  ಆಟದಲ್ಲಿ ಅದನ್ನು ಸೋಲಿಸುವುದು ಸುಲಭವಲ್ಲ… ದೀದಿಯ ಮುಸ್ಲಿಂ ತುಷ್ಟೀಕರಣದ ವಿರುದ್ಧ ಅದು ಹಿಂದೂಗಳನ್ನು ಎತ್ತಿ ಕಟ್ಟುವ ತನ್ನ ಆಟ ಆರಂಭಿಸಿ ವರ್ಷಗಳೇ ಉರುಳಿವೆ. ರಾಮನವಮಿ ಮತ್ತು ಹನುಮ ಜಯಂತಿಗಳಲ್ಲಿ ಶಸ್ತ್ರಾಸ್ತ್ರಗಳ ಹಿಡಿದ ಸಾವಿರಾರು ಮೆರವಣಿಗೆಗಳನ್ನು ಸಂಘಟಿಸಿತ್ತು. ಸರಸ್ವತೀಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಿತು.

ಇನ್ನು ಅಧಿಕಾರಕ್ಕೆ ಬಂದ ನಂತರ ದೀದಿ ಎಡಪಕ್ಷಗಳ ಮೇಲೆ ನಡೆಸಿದ ನಿರ್ದಯಿ ದಾಳಿ ಆಕೆಯ ಬುಡವನ್ನೇ ಅಲುಗಿಸತೊಡಗಿದೆ. ತೃಣಮೂಲದ ರಕ್ತದಾಹಿ ಸೇಡಿನ ಬೆಂಕಿಯ ಝಳದಲ್ಲಿ ತತ್ತರಿಸಿದ ಎಡಪಕ್ಷಗಳ ಬೆಂಬಲಿಗ ಮತ್ತು ಕಾರ್ಯಕರ್ತರ ಪಡೆ ಸಾವಿರ ಸಾವಿರ ಸಂಖ್ಯೆಯಲ್ಲಿ ಪಲಾಯನ ಮಾಡಿ ಬಿಜೆಪಿಯಲ್ಲಿ ಆಶ್ರಯ ಪಡೆಯಿತು. ನೆಲಕಚ್ಚಿರುವ ಎಡಪಕ್ಷ ಮತ್ತು ಕಾಂಗ್ರೆಸ್ ರಾಜಕೀಯ ಆವರಣವನ್ನು ಬಿಜೆಪಿ ತುಂಬಿತು. ಹಿಂದುತ್ವದ ರಾಜಕಾರಣಕ್ಕೆ ಅಪರಿಚಿತ ಎನಿಸಿದ್ದ ಸೀಮೆಯಲ್ಲಿ ತನ್ನ ಬೇರುಗಳನ್ನು ಇಳಿಸಲಾರಂಭಿಸಿತ್ತು.

೨೦೧೯ರ ಲೋಕಸಭೆ ಚುನಾವಣೆಗಳಲ್ಲಿ ಬಂಗಾಳದ ರಾಜಕಾರಣ ರಕ್ತದೋಕುಳಿಯಲ್ಲಿ ತೋಯಿತು. ೨೦೧೪ರಲ್ಲಿ ಎರಡು ಸೀಟು ಗೆದ್ದಿತ್ತು ಬಿಜೆಪಿ. ೨೦೧೯ರಲ್ಲಿ ೧೮ ಗೆದ್ದಿತು. ತೃಣಮೂಲದ ಸಾಧನೆ ೩೪ರಿಂದ ೨೨ಕ್ಕೆ ಮತ್ತು ಎಡರಂಗದ ಗೆಲುವು ೧೫ ಸೀಟುಗಳಿಂದ ಎರಡಕ್ಕೆ ಕುಸಿದಿತ್ತು. ಕಾಂಗ್ರೆಸ್‌ಗೆ ನಾಲ್ಕು ಸೀಟುಗಳು ದಕ್ಕಿದ್ದವು. ಕಾಂಗ್ರೆಸ್‌ಗೆ ದಕ್ಕಿದ್ದು ಎರಡೇ ಸೀಟು. ೨೦೧೧ರ ತನಕ ಸತತ ೩೪ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಡರಂಗ ನಿರೀಕ್ಷೆ ಮೀರಿ ಕುಸಿದಿತ್ತು. ಒಂದೇ ಒಂದು ಸೀಟನ್ನೂ ಗೆಲ್ಲದೇ ಹೋಯಿತು.

ಒಂದೊಮ್ಮೆ ದೈತ್ಯ ರಾಜಕೀಯ ಶಕ್ತಿಯೆನಿಸಿದ್ದ ಎಡಪಕ್ಷಗಳ ಕಾರ್ಯಕರ್ತರನ್ನು ತೃಣಮೂಲ ೨೦೧೧ರಿಂದಲೇ  ಬೇಟೆಯಾಡತೊಡಗಿತ್ತು. ಸಾವಿರಾರು ದೈಹಿಕ ಹಲ್ಲೆಗಳು, ನೂರಾರು ಹತ್ಯೆಗಳು. ದೀದಿಯ ಪಕ್ಷ ಅವರ ಮೇಲೆ ಪೊಲೀಸ್ ಬಲವನ್ನು ಬಳಸಿ ಸುಳ್ಳು ಕೇಸುಗಳ ಜಡಿದು ಭಯೋತ್ಪಾದನೆಯನ್ನೇ ಹರಿಯಬಿಟ್ಟಿತು. ಎಡಪಕ್ಷಗಳ ೧,೬೦೦ ಕಚೇರಿಗಳನ್ನು ನೆಲಸಮಗೊಳಿಸಿ ಆಕ್ರಮಿಸಿಕೊಂಡ ಆಪಾದನೆ ತೃಣಮೂಲದ ಮೇಲಿತ್ತು. ತನ್ನ ಎದುರಾಳಿಗಳ ಉಸಿರು ಅಡಗಿಸಲು ಹಿಂಜರಿಯದ ಹಿಂಸಾಚಾರ ತೃಣಮೂಲದ್ದು. ರಕ್ಷಣೆ ಪಡೆಯಲು ಆರಂಭದಲ್ಲಿ ತೃಣಮೂಲ ಸೇರಿದ ಎಡಪಕ್ಷಗಳ ಬಹುತೇಕ ಕಾರ್ಯಕರ್ತರು ಆನಂತರ ಬಿಜೆಪಿಗೆ ಶರಣಾದರು. ನಿರ್ದಯಿ ದೈತ್ಯ ತೃಣಮೂಲದ ಮುಂದೆ ಬಿಜೆಪಿ ನಿರಪಾಯಕಾರಿ ಎಂಬುದು ಅವರ ಆರಂಭಿಕ ಭಾವನೆಯಾಗಿತ್ತು.

ಬಿಜೆಪಿ ಜೊತೆಗೂಡಿ ತೃಣಮೂಲವನ್ನು ಅಳಿಸಿ ಹಾಕುವ ಗುಪ್ತ ಯೋಜನೆಯ ಮಾತುಗಳು ಕೇಳಿ ಬಂದವು. ‘ಉನೀಶೇ ಹಾಫ್, ಎಕೂಶೇ ಸಾಫ್’ (೨೦೧೯ರಲ್ಲಿ ಅರ್ಧನಾಶ, ೨೦೨೧ರಲ್ಲಿ ಸರ್ವನಾಶ) ಎಂಬ ಘೋಷಣೆ ಎಡಪಕ್ಷಗಳ ಕಾರ್ಯಕರ್ತ ಶ್ರೇಣಿಯಲ್ಲಿ ಹರಿದಾಡಿತು. ಎಡರಂಗದ ಸುದೀರ್ಘ ಸರ್ಕಾರ ಚುನಾವಣಾ ರಾಜಕಾರಣದಲ್ಲಿ ಸ್ಥಾಪಿಸಿದ್ದ ಮಿತವ್ಯಯದ ಸಂಸ್ಕೃತಿ ಇದೀಗ ಮರೆಯಾಗಿದೆ. ಬಿಜೆಪಿ ಹಣದ ಹುಚ್ಚುಹೊಳೆಯನ್ನು ಹರಿಸತೊಡಗಿತು. ಜೊತೆಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು ಕೂಡ. ಹೇರಳ ಸಂಪನ್ಮೂಲ ಮತ್ತು ಪ್ರಭಾವ ಉಳ್ಳ ಬಿಜೆಪಿ ತನಗೆ ಶರಣು ಬಂದವರ ರಕ್ಷಣೆಗೆಂದು ಗ್ರಾಮ ಸುರಕ್ಷಾ ವಾಹಿನಿ ಹೆಸರಿನ ಖಾಸಗಿ ರಕ್ಷಣಾ ಪಡೆಗಳನ್ನು ರಚಿಸಿತು.

ಸಂಘಟನೆ ಇಲ್ಲದಿದ್ದರೂ ಶಕ್ತಿವಂತ ಪಕ್ಷವಾಗಿ ಹೊರಹೊಮ್ಮಿತು. ಸಂಘಟನೆ ಇದ್ದ ಎಡಪಕ್ಷಗಳು ಶಕ್ತಿಹೀನವಾದವು. ಝಾರ್ಖಂಡ್‌ಗೆ ಅಂಟಿಕೊಂಡಿರುವ ಗಡಿ ಭಾಗದ ಆದಿವಾಸಿ ಜಿಲ್ಲೆಗಳಾದ ಪುರುಲಿಯಾ, ಝಾರಗ್ರಾಮ, ಬಾಂಕುರದಲ್ಲಿ ಎಡಪಕ್ಷಗಳನ್ನು ಅಳಿಸಿ ಹಾಕಿರುವ ಬಿಜೆಪಿ, ತೃಣಮೂಲಕ್ಕೆ ಹೆಗಲೆಣೆಯಾಗಿ ತಲೆಯೆತ್ತಿತು. ಕಮ್ಯುನಿಸ್ಟರು ಹಿಂದುತ್ವವಾದಿ ಪಕ್ಷದ ನೆರಳಿಗೆ ನಡೆಯುವ ಸೈದ್ಧಾಂತಿಕ ವಿಡಂಬನೆಗೆ ಬಂಗಾಳದ ಭೂಮಿ ಸಾಕ್ಷಿಯಾಯಿತು. ‘ತೃಣಮೂಲದ ಬಾಣಲೆಯಿಂದ ಬಿಜೆಪಿಯ ಬೆಂಕಿಗೆ ಹಾರುವುದು ಅವಿವೇಕ’ ಎಂದು ಮಾಜಿ ಮುಖ್ಯಮಂತ್ರಿ ಬುದ್ಧದೇವ ದಾಸ್ ಗುಪ್ತ ಪ್ರತಿಕ್ರಿಯಿಸಿದ್ದರು.

೨೦೧೯ರ ಫಲಿತಾಂಶಗಳು ಮತ್ತು ಕೇಂದ್ರದಲ್ಲಿ ಹಿಡಿದಿರುವ ಅಧಿಕಾರ ಎರಡೂ ಕಲೆತು ತನಗೆ ಎದುರೇ ಇಲ್ಲವೆಂದು ಬಿಜೆಪಿ ಬಗೆದಿದೆ. ಎಡರಂಗವನ್ನು ದೀದಿಯೇ ಹಣಿದಿದ್ದರು. ದೀದಿಯನ್ನು ಹಣಿಯಲು ಬಡಿಗೆ ಹಿಡಿದ ಬಿಜೆಪಿ ತೃಣಮೂಲದ ಪಾಳೆಯಕ್ಕೇ ದಾಳಿಯಿಡುತ್ತ ಬಂದಿದೆ. ದೊಡ್ಡಪ್ರಮಾಣದಲ್ಲಿ ಪಕ್ಷಾಂತರಗಳನ್ನು ಉಂಟು ಮಾಡಿದೆ. ಎದುರಾಳಿಗಳ ಶಿಬಿರಗಳಿಂದ ನಾಯಕರನ್ನು ಅಪಹರಿಸಿದೆ. ಸೇರಿಗೆ ಸವ್ವಾಸೇರೆಂದು ನಿಂತಿದೆ.

ಕಳೆದ ಲೋಕಸಭಾ ಚುನಾವಣೆಗಳಲ್ಲಿ ದೀದಿ ಮತ್ತು ಮೋದಿ ನಡುವಣ ಹಿಂಸಾಚಾರದಲ್ಲಿ ನೆಲಕ್ಕೆ ಬಿದ್ದ ಹನಿ ಹನಿ ನೆತ್ತರೂ ರಕ್ತ ಬೀಜಗಳಾಗಿ ಬಿಜೆಪಿಯ ಬಾಹುಗಳಿಗೆ ಬಲ ತುಂಬಿತು. ಹೀಗಾಗಿಯೇ ಹಾಲಿ ವಿಧಾನಸಭಾ ಚುನಾವಣೆಗಳು ಭೀಭತ್ಸ ರೂಪ ತಳೆದಿವೆ.
ಆದರೂ ಮಮತಾ ಬ್ಯಾನರ್ಜಿ ನೆಲಕ್ಕಂಟಿ ಜಿದ್ದಿನಿಂದ ಕಾದಾಡುವ ಜಿಗುಟು ಹೆಣ್ಣುಮಗಳು. ಆಕೆಯನ್ನು ಸೋಲಿಸುವುದು ಅಷ್ಟು ಸಲೀಸಲ್ಲ. ಈ ಮಾತು ಇದೀಗ ಮೋಶಾ ಜೋಡಿಗೆ ಚೆನ್ನಾಗಿ ಅರ್ಥವಾಗತೊಡಗಿದೆ.

× Chat with us